ಶನಿವಾರ, ಜುಲೈ 9, 2016

ಆತ್ಮಹತ್ಯೆ ಯಾವ ಉದ್ದೇಶಗಳನ್ನೂ ಸಾಧಿಸಲಾರದು.

  
ಡಾ.ಎ.ಎಸ್.ಪ್ರಭಾಕರ್.

  ಗಣಪತಿ ಮತ್ತು ಗಣಪತಿಯಂತೆ ಆತ್ಮಹತ್ಯೆ ಮಾಡಿಕೊಂಡ ಕೆಲವು ಸರಕಾರಿ ಅಧಿಕಾರಿಗಳ ಸಾವು ನಿಜಕ್ಕೂ ದುರಾದೃಷ್ಟಕರ. ಯಾರೂ ಈ ಬಗೆಯ ಸಾವಿಗೆ ಶರಣಾಗಬಾರದು. ಯಾರಿಗೂ ಅಕಾಲ ಸಾವು ಸಂಭವಿಸಬಾರದು. ಈ ಕುರಿತು ನನ್ನ ಒಂದೆರಡು ವಿಷಯಗಳನ್ನು ಹಂಚಿಕೊಳ್ಳ ಬಯಸುವೆ.
1. ಆತ್ಮಹತ್ಯೆ ಎಂಬುದು ಒಬ್ಬ ಮನುಷ್ಯನ ಆತ್ಮದ್ವೇಷದ ಉತ್ತುಂಗ ಸ್ಥಿತಿ. ತನ್ನನ್ನ ತಾನೇ ದ್ವೇಷಿಸಿಕೊಳ್ಳುವ ಪರಮಾವಧಿ.
2. ಆತ್ಮಹತ್ಯೆ ಎಂಬುದು ಕೇವಲ ವ್ಯಕ್ತಿಗತ ಹಿಂಸೆ ಮಾತ್ರವಲ್ಲ, ಸಮಾಜದದಲ್ಲಿಯ ಕೇಡುಗಳೂ ಈ ಹಿಂಸೆಯನ್ನು ಪ್ರಚೋದಿಸುತ್ತವೆ.
3. ಒಬ್ಬ ವ್ಯಕ್ತಿಯ ಆತ್ಮಹತ್ಯೆಯ ಹಿಂದೆ ವ್ಯಕ್ತಿಗತ ಸೋಲುಗಳ ಜೊತೆ, ಸಾಮಾಜಿಕ ಅಸಹನೆಗಳೂ ಪ್ರಧಾನ ಪಾತ್ರ ವಹಿಸುತ್ತವೆ.
4. ಹಾಗಾಗಿ ಆತ್ಮಹತ್ಯೆ ಎಂಬುದು ವ್ಯಕ್ತಿಯೊಬ್ಬನ ಕೊನೆಯಲ್ಲ, ನಮ್ಮ ಮೇಲುಕೀಳಿನ ಸಮಾಜದಲ್ಲಿ ಅಂತರ್ಗತವಾದ ಹಿಂಸೆಯ ಅಟ್ಟಹಾಸವೂ ಹೌದು.
5. ಒಬ್ಬ ವ್ಯಕ್ತಿ 'ತನ್ನನ್ನು ತಾನು' ಕೊಂದುಕೊಳ್ಳುವಂತೆ ಮಾಡುವ ಸಮಾಜದಲ್ಲಿ ಅಡಗಿರುವ ಕ್ರೌರ್ಯವನ್ನು ನಾವು ಗುರುತಿಸುವ ಅಗತ್ಯವಿದೆ.
# ಡಿ.ಕೆ.ರವಿ, ಗಣಪತಿ ಇತ್ಯಾದಿ ಅಧಿಕಾರಿಗಳ ಸಾವುಗಳನ್ನು ನಾವು ಹೀಗೆ ನೋಡುವ ಅಗತ್ಯವಿದೆ.
# ಜೊತೆಗೆ ನಮ್ಮಲ್ಲಿ ರೈತರ ಆತ್ಮಹತ್ಯೆಗಳು ಸಾಂಗೋಪಾಂಗವಾಗಿ, ಅತ್ಯಂತ ಸಹಜ ಕ್ರಿಯೆಗಳಂತೆ ನಡೆಯುತ್ತಿವೆ. ಹೆಣ್ಣುಮಕ್ಕಳ ವರದಕ್ಷಿಣೆ ಹತ್ಯೆಗಳು, ಪ್ರೀತಿಸಿ ಮದುವೆಯಾದ ಅಂತರ್ಜಾತಿಯ, ಅಂತರ್ ಧರ್ಮೀಯ ವಿವಾಹಿತರ ಕ್ರೂರ ಹತ್ಯೆಗಳು ನಡೆಯುತ್ತಿವೆ.
# ದಲಿತರ ಮೇಲೆ ಸ್ತ್ರೀಯರ ಮೇಲೆ ಪ್ರತಿ ಸೆಕೆಂಡಿಗೆ ಅದೆಷ್ಟೋ ಹತ್ಯೆಗಳು ಮತ್ತು ದೌರ್ಜನ್ಯಗಳು ನಡೆದು ನಮ್ಮ ಭಾರತ ಮಾತೆಯ ಒಡಲನ್ನು ಸೇರಿ ಅಂತರ್ಧಾನವಾಗುತ್ತವೆ.
# ಒಂದೆಡೆ, ಸೇವಾ ಭದ್ರತೆ, ಅಧಿಕಾರ, ನಿಶ್ಚಿತ ಆದಾಯ, ಸಾಮಾಜಿಕ ಸ್ಥಾನಮಾನಗಳನ್ನ ಹೊಂದಿಯೂ ಯಾವುದೋ ಕಾರಣಗಳಿಗೆ ಆತ್ಮಹತ್ಯೆ ಮಾಡಿಕೊಳ್ಳುವ ಅಧಿಕಾರಿಗಳ ಆತ್ಮಹತ್ಯೆಗಳಿಗೂ, ಈ ಯಾವ ಸವಲತ್ತುಗಳನ್ನು ಹೊಂದದೇ ಇರುವ ಸಾಮಾನ್ಯರ ಆತ್ಮಹತ್ಯೆಗಳಿಗೂ ವ್ಯತ್ಯಾಸಗಳಿವೆ.
# ಅಧಿಕಾರಿಗಳ ಆತ್ಮಹತ್ಯೆಗಳಿಗೆ ವ್ಯಾಪಕ ಪ್ರಚಾರ, ಟಿವಿ ಪ್ಯಾನಲ್ ಗಳ ಅಬ್ಬರದ ಚರ್ಚೆಗಳು, ರಸ್ತೆ ತಡೆಗಳು, ಜಾತಿ, ಧರ್ಮದ ಲೆಕ್ಕಾಚಾರಗಳು, ರಾಜಕೀಯ ಕೆಸರೆರಚಾಟಗಳು ಹೇರಳವಾಗಿ ನಡೆಯುತ್ತವೆ.
# ಇದೇ ಬಗೆಯ ಕೋಲಾಹಲಗಳು ಸಾಮಾನ್ಯರ ಹತ್ಯೆ ಮತ್ತು ಅವರ ಮೇಲೆ ದೌರ್ಜನ್ಯ ನಡೆದಾಗ ಸಂಭವಿಸುವುದಿಲ್ಲ.
# ಈ ಬಗೆಯ ತಾರತಮ್ಯಗಳು ಸಹಜವಾಗಿಯೇ, ಅನೂಚಾನವಾಗಿ ನಡೆಯುತ್ತಲೇ ಬಂದಿವೆ. ಅಧಿಕಾರಿಯ ಜೀವ ಎಷ್ಟು ಮಹತ್ವದ್ದೋ, ಬದುಕಲು ಅನ್ನ ನೀಡುವ ರೈತನ, ಜೀವವೊಂದನ್ನು ಇಹಲೋಕಕ್ಕೆ ನೀಡುವ ಹೆಣ್ಣಿನ ಜೀವಗಳೂ ಅಷ್ಟೇ ಮಹತ್ವದವು.
# ಆದರೆ ಈ ಸಾವುಗಳನ್ನು ಸಮಾಜ ಮತ್ತು ರಾಜಕಾರಣ ನೋಡುವ ರೀತಿಯಲ್ಲಿಯೇ ತಾರತಮ್ಯಗಳಿವೆ.
@ ಸಾರ್ವಜನಿಕ ಬದುಕಿಗೆ ನೇರ ಮುಖಾಮುಖಿಯಾಗುವ ಸೇವಾ ವಲಯಕ್ಕೆ ಸೇರಿದ ಅಧಿಕಾರಿಗಳು ಜನ ಮತ್ತು ಸರಕಾರದ ನಡುವಿನ ಕೊಂಡಿಗಳಂತೆ ಕೆಲಸ ನಿರ್ವಹಿಸಬೇಕಾಗುತ್ತದೆ. ಒಂದೆಡೆ ಸಮಾಜ, ಇನ್ನೊಂದೆಡೆ ಸರಕಾರ. ಈ ಎರಡೂ 'ಒತ್ತಡ ಗುಂಪುಗಳ' ನಡುವೆ ಕೆಲಸ ಮಾಡುವ ನೌಕರರು ವಿಚಿತ್ರ ಒತ್ತಡಗಳನ್ನು ಸದಾ ಅನುಭವಿಸುತ್ತಿರುತ್ತಾರೆ. ಈ ಒತ್ತಡಗಳನ್ನು ನಿಭಾಯಿಸುವ ಕೌಶಲ್ಯಗಳು ತರಬೇತಿಗಳ ಮೂಲಕ, ಇಲ್ಲವೇ ಸೇವಾನುಭವದ ಮೂಲಕ ಲಭ್ಯವಾಗುತ್ತಿರುತ್ತವೆ.
@ ಆದರೆ ಕೆಲವು ಸಲ ವಿಲಕ್ಷಣ ಒತ್ತಡಗಳು, ದಬಾವಣೆ, ರಾಜಕಾರಣಗಳು ಅಧಿಕಾರಿಗಳನ್ನು ದಿಕ್ಕೆಡಿಸುತ್ತವೆ. ಹಿಂಸಿಸುತ್ತವೆ.
@ ನಮ್ಮ ಸಮಾಜದಲ್ಲಿ ಈ ತರಹದ ಹಿಂಸೆ ಸಹಜ ಆಚರಣೆಯಂತೆ ರೂಢಿಯಲ್ಲಿದೆ.
@ ಸರಕಾರಿ ನೌಕರರೇ ಆಗಲಿ, ಸಾಮಾನ್ಯ ನಾಗರಿಕರೇ ಆಗಲಿ. ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಈ ಕೇಡು ಮತ್ತು ಹಿಂಸೆಗಳನ್ನು ಮೊದಲು ಅರ್ಥ ಮಾಡಿಕೊಳ್ಳುವ ಅಥವಾ ಅರ್ಥೈಸುವ ಪ್ರಯತ್ನಗಳನ್ನು ಮಾಡುವುದೊಳಿತು.
@ ಅಸಮಾನ ಸಮಾಜ, ದಿಕ್ಕೆಟ್ಟ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಸಾಮಾನ್ಯರ ಶತ್ರುಗಳು ಕೆಲವು ಸಲ ಕಣ್ಣಿಗೆ ಗೋಚರಿಸುವಂತಿದ್ದರೆ, ಹಲವು ಸಲ ಶತ್ರುವಿನ ಇರುವಿಕೆ ಗೊತ್ತೇ ಆಗುವುದಿಲ್ಲ. ಈ ಶತ್ರು ಸ್ವರೂಪವನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ.
@ ಇದಕ್ಕಾಗಿ ನಾವು ಬಹುಸಂಖ್ಯಾತ ದುಡಿವ ಸಮುದಾಯಗಳ ವಿಶಾಲ ಸಾಂಘಿಕ ರಾಜಕಾರಣವನ್ನು ರೂಪಿಸುವ ಅಗತ್ಯವಿದೆ. ಈ ಸಾಂಘಿಕ ರಾಜಕಾರಣ ವಿಶಾಲ ಜನಸಮುದಾಯಗಳಿಗೆ ಆತ್ಮಸ್ಥೈರ್ಯ ಮತ್ತು ಆತ್ಮ ಪ್ರತ್ಯಯಗಳನ್ನು ನೀಡಬಲ್ಲದು.
@ ವೈಯಕ್ತಿಕ ಪ್ರಾಮಾಣಿಕತೆ, ದಕ್ಷತೆ, ನೈತಿಕತೆ ಈ ವ್ಯವಸ್ಥೆಯಲ್ಲಿ ಎಷ್ಟು ಅಗತ್ಯವೋ, ಸಾಂಘಿಕ ಹೋರಾಟ ಅಷ್ಟೇ ಅಗತ್ಯ.
@ ಗಣಪತಿ. .... ಸತ್ತು ಹೋಗಿರುವಾಗ ಈ ಭಾಷಣ ಯಾಕೆ ಎಂಬ ಪ್ರಶ್ನೆ ಬರುತ್ತದೆ.
@ ವ್ಯವಸ್ಥೆಯ ಭಾಗವಾಗಿ ಕಾರ್ಯನಿರ್ವಹಿಸುವಾಗ, ವ್ಯವಸ್ಥೆಯೊಳಗಣ ಹಿಂಸೆ ಮತ್ತು ಬಹುಸಂಖ್ಯಾತ ಹತಾಶ ಜನರ ಬದುಕನ್ನ ಅರ್ಥ ಮಾಡಿಕೊಂಡು ಹೋರಾಡುವ ಅಗತ್ಯವಿದೆ.
@ ಏಕೆಂದರೆ ಆತ್ಮಹತ್ಯೆ ಮಾಡಿಕೊಳ್ಳುವ ರೈತನಿಗೆ ಇರದೇ ಇರುವ ಸವಲತ್ತು ಸರಕಾರಿ ನೌಕರನಿಗೆ ಇರುತ್ತದೆ. ವರದಕ್ಷಿಣೆ ಪಿಡುಗಿಗೆ ಸುಟ್ಟು ಕರಕಲಾಗುವ ಅಸಹಾಯಕ ಹೆಣ್ಣಿಗೆ ಇರದ ಆತ್ಮ ವಿಶ್ವಾಸ ಸರಕಾರಿ ನೌಕರರಿಗಿರುತ್ತದೆ.
ಆತ್ಮಹತ್ಯೆ ಯಾವ ಉದ್ದೇಶಗಳನ್ನೂ ಸಾಧಿಸಲಾರದು.

ಕಾಮೆಂಟ್‌ಗಳಿಲ್ಲ: