ಸೋಮವಾರ, ಜುಲೈ 11, 2016

ಆದಿವಾಸಿಗಳ ಅಭಿವೃದ್ಧಿ ಪ್ರಶ್ನೆಗಳು.


-ಡಾ.ಎ,ಎಸ್. ಪ್ರಭಾಕರ್


1. ಆಧುನಿಕತೆ, ಆಧುನಿಕ ಶಿಕ್ಷಣ, ಮುಖ್ಯವಾಹಿನಿ, ಇವು ನಾವು ಕೇಳಿ ಪಡೆದ ಸವಲತ್ತುಗಳಲ್ಲ. ಇವು ಬಂಡಾವಾಳಶಾಹಿ ಉತ್ಪಾದನೆಯ ಭಾಗವಾಗಿ ನಮಗೆ ದೊರಕಿದ ಉಪ ಉತ್ಪನ್ನಗಳು ಮಾತ್ರ.

2. ಮಾರುಕಟ್ಟೆ ಆಧಾರಿತ ಮಿಶ್ರ ಆರ್ಥಿಕತೆಯ ಭಾಗವಾಗಿ ನಮ್ಮ ದೇಶದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ. ಜನಕಲ್ಯಾಣದ ನೈಜ ಆಶಯಗಳು ನಮ್ಮ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿಲ್ಲ. ನಮ್ಮಲ್ಲಿ ಸ್ಪಷ್ಟ 'ಅಭಿವೃದ್ಧಿ ನೀತಿ' ಇನ್ನೂ ರೂಪಗೊಳ್ಳಬೇಕಿದೆ.

3. ಜೊತೆಗೆ 'ಅಭಿವೃದ್ಧಿ' ಎಂಬುದನ್ನು 'ನಮ್ಮ' ಆಡಳಿತ ಅಖಂಡವಾಗಿ ಪರಿಭಾವಿಸುತ್ತದೆ. ಆದರೆ ನಮ್ಮ ಸಮಾಜ ಅಖಂಡವಾಗಿಲ್ಲ. ಬಹುರೂಪಿಯಾಗಿದೆ. ಶೋಷಿತ ಸಮುದಾಯಗಳ ವಸ್ತುನಿಷ್ಟ ಕಲ್ಯಾಣಕ್ಕೆ ಇಂದಿಗೂ ಇಂಡಿಯಾದಲ್ಲಿ 'ಅಭಿವೃದ್ಧಿ ನೀತಿ' ರೂಪುಗೊಂಡಿಲ್ಲ.

4. ಇನ್ನು ಸಂಸ್ಕೃತಿ ಪರಂಪರೆಗಳು ಉಳಿಯಬೇಕು. ಸ್ಥಳೀಯ ಕೌಶಲಗಳು ಆಯಾ ಸಮುದಾಯಗಳ ಲೌಕಿಕದ ಬದುಕನ್ನ ಹಸನು ಮಾಡಬೇಕು ಎಂಬ ಆಶಯಗಳು ಮಧುರವಾಗಿ ಕೇಳುತ್ತವೆ. ಸಂಸ್ಕೃತಿ ಮತ್ತು ಪರಂಪರೆಗಳು ಆಯಾ ಸಮುದಾಯಗಳ ತಲಾಂತರದ ದುಡಿಮೆಯ ಫಲವಾಗಿ ಅಸ್ತಿತ್ವದಲ್ಲಿರುತ್ತವೆ. ಒಂದು ಅರ್ಥದಲ್ಲಿ, ಸಂಸ್ಕೃತಿ ಮತ್ತು ಪರಂಪರೆಗಳು ಸಮುದಾಯಗಳ ಬದುಕಿನ ಮೇಲ್ಪದರಗಳು ಮಾತ್ರ. ಕೆನೆಯನ್ನೇ ಹಾಲೆಂದು ಭ್ರಮಿಸಿದಂತೆ, ಮೇಲ್ಪದರನ್ನೇ ಕೇಂದ್ರವೆಂದು ಭಾವಿಸಿಕೊಂಡು ಬರಲಾಗಿದೆ. ಕೇಂದ್ರ ಬದಲಾದಂತೆ ಮೇಲ್ಪದರು ಬದಲಾಗುತ್ತದೆ. ಸಂಸ್ಕೃತಿ ಮತ್ತು ಪರಂಪರೆಗಳು ಆಯಾ ಸಮುದಾಯಗಳ ಲೌಕಿಕದ ಬದುಕು ಬದಲಾದಂತೆ ಬದಲಾಗುತ್ತಲೇ ಇರುತ್ತವೆ. ಸಂಸ್ಕೃತಿ ಮತ್ತು ಪರಂಪರೆಗಳನ್ನು 'ಉಳಿಸಬೇಕೆಂದರೆ' ಕೇಂದ್ರವನ್ನು ಅದರ ಮೂಲ ರೂಪದಲ್ಲಿಯೇ ಉಳಿಸಬೇಕಾಗುತ್ತದೆ.

5. ಆದಿವಾಸಿಗಳು ಮೂಲ ನೆಲೆಗಳಲ್ಲಿ ಉಳಿಯಬೇಕೋ ಅಥವಾ ಕಾಡಿಂದ ಹೊರಬರಬೇಕೋ ಎಂದು ತೀರ್ಮಾನಿಸುವ ಅಧಿಕಾರ 'ಸ್ವತಂತ್ರ, ಸಾರ್ವಭೌಮ' ಭಾರತದ ಸರಕಾರಗಳ ಕೈಯಲ್ಲಿಲ್ಲ. ಪೋಸ್ಕೋ, ವೇದಾಂತ್ ದಂತಹ ಬಹುರಾಷ್ಟ್ರೀಯ ಕಂಪನಿಗಳ ಕೈಯಲ್ಲಿದೆ.

6. ಆದಿವಾಸಿಗಳು ಶಿಕ್ಷಣ ಪಡೆದು ಆಧುನಿಕರಾಗಬೇಕು. ವರ್ತಮಾನದ ವಿರಾಟ್ ಅವಕಾಶಗಳಲ್ಲಿ ಪಾಲು ಪಡೆಯಬೇಕು ಎಂಬುದು ಆಶಯದ ಮಟ್ಟದಲ್ಲಿ ಸರಿಯಾಗಿದೆ. ಆದರೆ ಆಚರಣೆಯಲ್ಲಿ ಇದು ಸಾಧ್ಯವಾ? ಯೋಚಿಸಬೇಕು. ಯಾವ ಡಿಗ್ರಿ? ಯಾವ ಬಗೆಯ ಶಿಕ್ಷಣ? ನಿರ್ಧಾರವಾಗಬೇಕು. 

6. ತಮ್ಮ ಬದುಕಿನ ಸ್ವರೂಪವನ್ನು ನಿರ್ಧರಿಸಿಕೊಳ್ಳುವ ಹಕ್ಕನ್ನು ಆದಿವಾಸಿಗಳಿಗೆ ಬಿಡಬೇಕು. ದೇಶ, ದೇಶದ ಜನ, ಕಾಡು, ನದಿ, ಹಳ್ಳ  ಕಾಡಿನ ಉತ್ಪನ್ನಗಳೆಲ್ಲ 'ಸ್ವತಂತ್ರ ಸಾರ್ವಭೌಮ' ಭಾರತದ ಕೈಯಲ್ಲಿಯೇ ಇವೆ ಎಂದು ನಾವು ಭಾವಿಸಿದರೆ, ಆದಿವಾಸಿಗಳು ಅವರ ಬದುಕನ್ನು ಅವರು ರೂಪಿಸಿಕೊಳ್ಳುತ್ತಾರೆ ಎಂದು ನಂಬಬಹುದು.

7. 'ನಾವು' ಉತ್ತಮ ಸ್ಥಿತಿಯಲ್ಲಿದ್ದೇವೆ. ನಮ್ಮ ಮುಖ್ಯವಾಹಿನಿಯಲ್ಲಿ ಆದಿವಾಸಿಗಳು ಬಂದು ಸೇರಬೇಕು. ಆಗ ಅವರ ಸಬಲೀಕರಣ ಸಾಧ್ಯ. 'ನಾವು' ಯಾವ ಬಗೆಯ ಉತ್ತಮ ಸ್ಥಿತಿಯಲ್ಲಿದ್ದೇವೆ? ತಿಂಗಳಿಗೆ ಸಾವಿರಾರು ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವಾಗ, ಮೀಸಲಾತಿಯ ಅವಕಾಶಗಳೇ ಸಂಕುಚಿತಗೊಂಡು ಶೋಷಿತರ ಬದುಕು ನಿತ್ಯ ನರಕವಾಗುತ್ತಿರುವಾಗ 'ನಾವು' ಯಾವ ಬಗೆಯ ಉತ್ತಮ ಸ್ಥಿತಿಯಲ್ಲಿ ಬದುಕುತ್ತಿದ್ದೇವೆ? 

8. ಮುಖ್ಯವಾಹಿನಿ ಎಂದರೆ ಏನು? ಆಧುನಿಕತೆ ಎಂದರೇನು? ಯಾವ ಮುಖ್ಯವಾಹಿನಿಯಲ್ಲಿ ರಾಜೇಶನಂತಹ ಆದಿವಾಸಿಗೆ ಬದುಕಲು ಅವಕಾಶಗಳಿವೆ? ಮುಖ್ಯವಾಹಿನಿಯಲ್ಲಿರುವ 'ನಾವು' ಕೇವಲ ಮನುಷ್ಯ ಮಾತ್ರದವರಾಗಿ ಬದುಕುತ್ತಿದ್ದೇವಾ? ಅಥವಾ ಸಾಮ್ರಾಜ್ಯಶಾಹಿ ಮಾರುಕಟ್ಟೆಯ 'ಗ್ರಾಹಕರಾಗಿ' ರೂಪಾಂತರವಾಗಿದ್ದೇವಾ? ಮುಖ್ಯವಾಹಿನಿ ಎಂದರೆ ಏನು?

ಕಾಮೆಂಟ್‌ಗಳಿಲ್ಲ: