-ಅರುಣ್ ಜೋಳದಕೂಡ್ಲಿಗಿ
ಏಪ್ರಿಲ್ ೧೪ ರಂದು ಅಂಬೇಡ್ಕರ್ ಜಯಂತಿ ಆಚರಿಸುತ್ತಾ ದಲಿತ ಲೋಕದ ಶೋಷಣೆ ಮುಕ್ತ ಸಮಾಜದ ಕನಸುಗಳನ್ನು ಹಂಚಿಕೊಂಡಿದ್ದೇವೆ. ಈಗಲೂ ತಿಂಗಳು ಪೂರ್ತಿ ಅಲ್ಲಲ್ಲಿ ಅಂಬೇಡ್ಕರ್ ಜಯಂತಿಯ ಆಚರಣೆ ನಡೆಯುತ್ತಲೇ ಇದೆ. ಇದೇ ಹೊತ್ತಲ್ಲಿ ಕೂಡ್ಲಿಗಿ ತಾಲೂಕಿನ ಹುರುಳಿಹಾಳ್ ಸಮೀಪದ ಓಬಳಾಪುರ ಗ್ರಾಮದ ದಲಿತ ಯುವಕ ರೇವಣ್ಣನು ಮೇಲು ಜಾತಿಯವರಿಂದ ಬರ್ಭರ ಹತ್ಯೆಗೆ ಒಳಗಾಗಿದ್ದಾನೆ. ಆತನ ಶವ ದಾವಣಗೆರೆ ಜಿಲ್ಲೆ ಜಗಲೂರು ತಾಲೂಕಿನ ಹಿರೇಮಲ್ಲೂರು ಗ್ರಾಮದ ಕ್ರಾಸ್ ಬಳಿ ಸಿಕ್ಕಿದೆ. ಜಗಲೂರು ಪೋಲಿಸ್ ಸ್ಟೇಷನ್ನಿನಲ್ಲಿ ಪ್ರಕರಣ ದಾಖಲಾಗಿದೆ. ಪತ್ರಿಕೆಗಳ ಸ್ಥಳೀಯ ಪುಟದ ಮೂಲೆಯೊಂದರಲ್ಲಿ ಒಂದು ಕಾಲಮ್ಮಿನ ಸುದ್ದಿಯಲ್ಲಿ ಶವ ಪತ್ತೆ ಎನ್ನುವಲ್ಲಿಗೆ ಮುಕ್ತಾಯವಾಗಿದೆ.
ರೇವಣ್ಣನ ಹತ್ಯೆಯಾದ ಸುದ್ದಿ ತಿಳಿದು ವಿಚಲಿತನಾದ ನಾನು ಗೆಳೆಯ ಸೂರಮ್ಮನಹಳ್ಳಿ ಉಮೇಶ್ ಜತೆಗೂಡಿ (ಏಪ್ರಿಲ್ ೨೭) ಓಬಳಾಪುರ ತಲುಪಿದಾದ ಸಂಜೆ ೪ ರ ಸಮಯ. ದುಃಖ ಮಡುಗಟ್ಟಿದ ಮನೆಯ ಮುಂದೆ ಹೋದಾಗ ರೇವಣ್ಣನ ಅಣ್ಣ ತಿಪ್ಪೇಸ್ವಾಮಿ ಮತ್ತಿತರರು ಸೇರಿದರು. ನೋಡು ನೋಡುತ್ತಿದ್ದಂತೆಯೇ ಇಡೀ ಕೇರಿಯ ಜನರು ನಮ್ಮನ್ನು ಮುತ್ತಿದರು. ಅವರ ಮುಖದಲ್ಲಿ ದುಃಖವಿತ್ತು ಅದಕ್ಕಿಂತ ಹೆಚ್ಚಾಗಿ ಆತಂಕ ಮನೆ ಮಾಡಿತ್ತು. ರೇವಣ್ಣನ ತಾಯಿ ಭರಮಮ್ಮ ದುಃಖಿಸಿದ್ದು ಕರುಳು ಹಿಂಡುವಂತಿತ್ತು. ಮನೆಯ ಆಧಾರ ಸ್ತಂಭವೇ ಕುಸಿದಂತೆ ಮನೆ ಬಿಕೋ ಎನ್ನುತ್ತುತ್ತು. ಇಡೀ ಕೇರಿಯೇ ರೇವಣ್ಣನ ಬರ್ಭರ ಹತ್ಯೆಗೆ ಕಣ್ಣೀರಾಗಿತ್ತು.
ಹತ್ಯೆಗೆ ಒಳಗಾದ ರೇವಣ್ಣ
ಓಬಳಾಪುರ ಕೂಡ್ಲಿಗಿ ತಾಲೂಕಿನ ಕೊನೆ ಅಂಚಿನ ಹಳ್ಳಿ. ಚಿಕ್ಕ ಜೋಗಿಹಳ್ಳಿಯಿಂದ ಮುಂದೆ ಸಾಗಿದರೆ ಹುರುಳಿಹಾಳ್ ಸಿಗುತ್ತದೆ. ಹುರುಳಿಹಾಳಿಗೆ ಅಂಟಿಕೊಂಡಂತಿರುವ ಓಬಳಾಪುರದ ೧೧೦ ರಷ್ಟು ಮನೆಗಳಿರುವ ಚಿಕ್ಕ ಗ್ರಾಮ. ದಲಿತರ ೫೨, ಲಿಂಗಾಯತ ಒಕ್ಕಲಿಗ ೪೫, ನಾಯಕ ಸಮುದಾಯದ ೪, ಮುಸ್ಲೀಮರ ೫ ಮನೆಗಳಿರುವ ಹಳ್ಳಿ. ಈ ಊರಿನ ದಲಿತರಲ್ಲಿ ಶಿಕ್ಷಣ ಪಡೆದವರು ಹೆಚ್ಚಿದ್ದಾರೆ. ಎಂಟರಿಂದ ಹತ್ತರಷ್ಟು ಬೇರೆ ಬೇರೆ ವಲಯಗಳಲ್ಲಿ ಉದ್ಯೋಗಸ್ತರೂ ಇದ್ದಾರೆ. ಹೀಗೆ ಶಿಕ್ಷಣ ಪಡೆದು ಸ್ವಾಭಿಮಾನದಿಂದ ಬದುಕುವ ದಲಿತರ ಬಗ್ಗೆ ಮೇಲುಜಾತಿಯವರ ಅಸಹನೆ ಸಹಜವಾಗಿಯೆ ಇತ್ತು.
ರೇವಣ್ಣ ಬಿಎ ಬಿಎಡ್ ಮಾಡಿಕೊಂಡು ಜಗಲೂರಿನ ಚೈತನ್ಯ ಫೈನಾನ್ಸ್ ನಲ್ಲಿ ಫೀಲ್ಡ್ ಆಫೀಸರ್ ಆಗಿ ಕೆಲಸ ನಿರ್ವಹಿಸುತ್ತಿದ್ದ. ಉತ್ತಮ ಕೆಲಸಗಾರನೆಂಬ ಹೆಗ್ಗಳಿಕೆಯನ್ನೂ ಸಂಸ್ಥೆಯಲ್ಲಿ ಗಳಿಸಿದ್ದ. ಜೀವನ ನಿರ್ವಹಣೆಗೆ ಸಾಕಾಗುವಷ್ಟು ಸಂಬಳವೂ ಇತ್ತು. ತನ್ನ ಜತೆಯೇ ಕೆಲಸ ಮಾಡುತ್ತಿದ್ದ ಮೇಲುಜಾತಿ ಹುಡುಗಿಯೊಂದಿಗೆ ಪ್ರೇಮ ಅಂಕುರಿಸಿತ್ತು. ಇಬ್ಬರೂ ಪರಸ್ಪರ ಪ್ರೀತಿಸುತ್ತಿದ್ದರು. ಮದುವೆಯಾಗುವ ಬಗ್ಗೆಯೂ ಇಬ್ಬರೂ ನಿರ್ಧರಿಸಿದ್ದರು. ಮನೆಯಲ್ಲಿಯೂ ರೇವಣ್ಣ ಈ ಹುಡುಗಿಯ ಜತೆಗಿನ ಪ್ರೇಮದ ಬಗ್ಗೆ ಹೇಳಿಕೊಂಡಿದ್ದನು. ಹುಡುಗಿಯ ಫೋಟೋವನ್ನು ತೋರಿಸಿದ್ದನು. ಮನೆಯಲ್ಲಿ ಸಹಜವಾಗಿ ತಾಯಿ ಭರಮಮ್ಮ ‘ದೊಡ್ಡ ಜಾತಿ ಹುಡುಗಿ ಬ್ಯಾಡಪ್ಪ ನಿಮ್ಮ ಅಕ್ಕನ ಮಗಳು ಇದಾಳ ಆಕೀನ ಮದ್ವಿ ಆಗು’ ಎಂದು ಬುದ್ಧಿವಾದ ಹೇಳಿದ್ದಳು. ಈ ಪ್ರೇಮವೇ ರೇವಣ್ಣನ ಜೀವಕ್ಕೆ ಮುಳುವಾಯಿತು ಎನ್ನುವುದು ರೇವಣ್ಣನ ಅಣ್ಣ ತಿಪ್ಪೇಸ್ವಾಮಿಯ ಅಳಲು.
ಏಪ್ರಿಲ್ ೨೦ ಸೋಮವಾರ ರಾತ್ರಿ ರೇವಣ್ಣ ತನ್ನ ದೊಡ್ಡಪ್ಪನ ಮಗನಾದ ಹಿರಿಯಣ್ಣ ತಿಪ್ಪಣ್ಣನ ಬಳಿ ತಾನು ಒಂದು ಹುಡುಗಿಯನ್ನು ಪ್ರೀತಿಸುವುದಾಗಿಯೂ, ಲಿಂಗಾಯತರ ಹುಡುಗಿಯೆಂತಲೂ, ಆಕೆಯೂ ಮದುವೆಯಾಗಲು ಒತ್ತಾಯಿಸುತ್ತಿದ್ದಾಳೆ, ಮದುವೆಯಾಗದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳುತ್ತಿದ್ದಾಳೆ ಎಂತಲೂ, ಆಕೆಗೆ ಮದುವೆ ಖಾಯಂ ಆಗಿದೆ ಏನು ಮಾಡುವುದು ಎಂದು ವಿಚಿತ್ರ ಗಲಿಬಿಲಿಯಲ್ಲಿ ಏನೊಂದು ತೋಚದಂತೆ ಹೇಳಿಕೊಂಡಿದ್ದನು. ಇದರ ಆಪಾಯವನ್ನರಿತ ತಿಪ್ಪಣ್ಣ ಆ ಹುಡುಗಿಯನ್ನು ಮದುವೆಯಾಗುವುದು ಬೇಡವೇ ಬೇಡ ಎಂತಲೂ, ಈ ಸಂಬಂಧ ಬೇಕಾದರೆ ಪೋಲಿಸ್ ಕಂಪ್ಲೇಂಟ್ ಬೇಕಾದರೆ ಕೊಡೋಣ ಎಂತಲೂ, ಮುಂದೆ ಕಷ್ಟವೆಂತಲೂ ಬುದ್ದಿವಾದ ಹೇಳಿದ್ದಾರೆ. ತಡ ರಾತ್ರಿಯವರೆಗೂ ಈ ಚರ್ಚೆ ನಡೆದಿದೆ. ಏಪ್ರಿಲ್ ೨೧ ರ ಬೆಳಗ್ಗೆ ತಿಪ್ಪಣ್ಣ ಹೊಲಗೆಲಸಕ್ಕೆ ಹೋಗಿದ್ದಾರೆ, ಇತ್ತ ಕಡೆ ಇದೇ ಗೊಂದಲದಲ್ಲಿ ರೇವಣ್ಣ ಜಗಲೂರಿಗೆ ಡ್ಯೂಟಿಗೆಂದು ಹೋಗಿದ್ದಾನೆ.
ರೇವಣ್ಣನ ಅವ್ವ, ಅಣ್ಣಂದಿರು ಅತ್ತಿಗೆಯರು ಮಕ್ಕಳು-ಓಬಳಾಪುರದ ಮನೆ ಮುಂದಿನ ಚಿತ್ರ
ಏಪ್ರಿಲ್ ೨೧ ರ ಬೆಳಗ್ಗೆ ೮.೩೦ ಕ್ಕೆ ಓಬಳಾಪುರದ ಮನೆ ಬಿಟ್ಟ ರೇವಣ್ಣ ಮತ್ತೆ ಮನೆಯೊಂದಿಗೆ ಸಂಪರ್ಕಕ್ಕೆ ಸಿಕ್ಕಿಲ್ಲ. ಏಪ್ರಿಲ್ ೨೫ ರ ಶನಿವಾರ ಬೆಳಗ್ಗೆ ೯.೩೦ ಸುಮಾರಿಗೆ ಜಗಲೂರು ಪೋಲಿಸ್ ಸ್ಟೇಷನ್ನಿನಿಂದ ರೇವಣ್ಣನ ಅಣ್ಣ ತಿಪ್ಪೇಸ್ವಾಮಿಗೆ ಫೋನ್ ಬಂದಿದೆ. ತೀರಿಹೋದ ರೇವಣ್ಣನ ಸುದ್ದಿ ತಿಳಿಯುತ್ತಲೂ ಮನೆಯಲ್ಲಿ ದುಃಖ ಮುಗಿಲು ಮುಟ್ಟಿದೆ. ನಂತರ ತಿಪ್ಪೇಸ್ವಾಮಿ ಮೊದಲಾದವರು ದಿಢೀರನೆ ಜಗಲೂರಿಗೆ ದಾವಿಸಿದ್ದಾರೆ. ಜಗಲೂರು ಸಮೀಪದ ಹಿರೆಮಲ್ಲೂರು ಕ್ರಾಸಿನ ಹೊಲವೊಂದರ ಬದುವಿನಲ್ಲಿ ದೇಹವಿತ್ತು. ರೇವಣ್ಣನ ದೇಹ ಊದಿಕೊಂಡು ನೋಡುವಂತಿರಲಿಲ್ಲವಂತೆ. ಆತ ತೊಟ್ಟ ಷರ್ಟು ಪ್ಯಾಂಟಿನ ಮೇಲೆ ರೇವಣ್ಣ ಎಂದು ಅಣ್ಣ ತಿಪ್ಪೇಸ್ವಾಮಿ ಗುರುತಿಸಿದ್ದಾರೆ. ಕಾಲುಗಳನ್ನು ಕತ್ತರಿಸಿದ್ದರು, ಮುಖವನ್ನು ಖಜಂ ಆಗುವಂತೆ ಹೊಡೆಯಲಾಗಿತ್ತು, ದೇಹದ ಮೇಲೆ ಅಸ್ತ್ರಗಳಿಂದ ಕೊಯ್ದ ಗುರುತುಗಳಿದ್ದವು. ರಕ್ತಮಯವಾದ ದೇಹ ವಾಸನೆ ಬರತೊಡಗಿತ್ತು ಎಂದು ತಿಪ್ಪೇಸ್ವಾಮಿ ಹೇಳುತ್ತಾರೆ. ಅಂತೆಯೇ ಡೆಡ್ ಬಾಡಿಯ ಹತ್ತಿರ ಪೆನ್ನು ಪೇಪರು ಮೊಬೈಲು ವಿಷಯ ಬಾಟಲಿ ಇತ್ತೆಂದು ಪೋಲಿಸರು ತೋರಿಸಿದ್ದಾಗಿ ತಿಪ್ಪೇಸ್ವಾಮಿ ಹೇಳಿದರು. ಜಗಲೂರು ಸರಕಾರಿ ಆಸ್ಪತ್ರೆಯಲ್ಲಿ ಪೋಷ್ಟ್ ಮಾರ್ಟಮ್ ಆಗಿದೆ. ನಂತರ ಅದೇ ದಿನ ಏಪ್ರಿಲ್ ೨೫ ರ ಶನಿವಾರ ರಾತ್ರಿ ೧ ಗಂಟೆಯ ಸುಮಾರಿಗೆ ದೇಹವನ್ನು ಓಬಳಾಪುರದಲ್ಲಿ ಮಣ್ಣು ಮಾಡಿದ್ದಾರೆ. ಪೋಷ್ಟ್ ಮಾರ್ಟಮ್ ರಿಪೋರ್ಟ ಇನ್ನೂ ಬಂದಿಲ್ಲ ಎನ್ನುವುದು ಮನೆಯವರು ನೀಡಿದ ಮಾಹಿತಿ.
ಈ ಮಧ್ಯೆ ರೇವಣ್ಣನ ಸಂಬಂಧಿ ತಿಪ್ಪಣ್ಣನಿಗೆ (೯೯೬೪೬೦೦೯೨೯ ನಂಬರಿಗೆ) ಪ್ರಿಯತಮೆಯ ಮಾವ ಎಂದು ಹೇಳಿಕೊಂಡವರೊಬ್ಬರು ಏಪ್ರಿಲ್ ೨೧ ರ ಮಂಗಳವಾರ ರಾತ್ರಿ ೮ ಗಂಟೆಯ ಸುಮಾರಿಗೆ ಫೋನ್ ಮಾಡಿ ‘ನಮ್ಮ ಹುಡುಗಿಗೆ ಏಪ್ರಿಲ್ ೨೩ ರಂದು ಮದುವೆ ಇದೆ, ನಿಮ್ಮ ಹುಡುಗನನ್ನು ಒಂದೆರಡು ದಿನಗಳ ಕಾಲ ಈ ಕಡೆ (ಜಗಲೂರು) ಬಿಡಬೇಡಿ, ಹಿಂದೆ ಏನೋ ನಡೆದಿದೆ ಆದದ್ದನ್ನು ಮರೆಯಲು ನಿಮ್ಮ ಹುಡುಗನಿಗೆ ಹೇಳಿ’ ಎಂದು ಎಚ್ಚರಿಕೆ ನೀಡಿದ್ದಾರೆ. ಇದರಿಂದ ಭಯಗೊಂಡ ತಿಪ್ಪಣ್ಣ ರೇವಣ್ಣನಿಗೆ ಬುದ್ದಿ ಮಾತು ಹೇಳುವುದಾಗಿಯೂ, ಆ ತರಹದ ಯಾವುದೇ ತೊಂದರೆಯಾಗದಂತೆ ನಮ್ಮ ಹುಡುಗನಿಗೆ ತಿಳಿ ಹೇಳುತ್ತೇವೆ, ನಮ್ಮ ಹುಡುಗನನ್ನು ನಮ್ಮ ಹದ್ದುಬಸ್ತಿನಲ್ಲಿಟ್ಟುಕೊಳ್ಳುತ್ತೇವೆ ಎಂದು ತಿಪ್ಪಣ್ಣ ಹೇಳಿದ್ದಾರೆ.
ಇದನ್ನೆಲ್ಲಾ ನೋಡಿದರೆ ಹುಡುಗಿಯ ಕಡೆಯವರೆ ರೇವಣ್ಣನನ್ನು ಕೊಲೆ ಮಾಡಿದ್ದಾರೆ ಅಥವಾ ಮಾಡಿಸಿದ್ದಾರೆ ಎನ್ನುವ ಅನುಮಾನ ಓಬಳಾಪುರ ಕೇರಿಯ ಜನರಲ್ಲಿ ದಟ್ಟವಾಗಿದೆ. ರೇವಣ್ಣನ ಸಾವಿನ ಆಚೀಚಿನ ಘಟನೆಗಳನ್ನು ನೋಡಿದರೂ ಈ ಅನುಮಾನ ಸಹಜವಾಗಿ ಬರುತ್ತದೆ. ಹಾಗಾಗಿ ರೇವಣ್ಣನ ಕೊಲೆಯ ಬಗ್ಗೆ ತನಿಕೆಯಾಗಬೇಕು, ಕೊಲೆಗಾರರು ಯಾರೆಂದು ತಿಳಿಯಬೇಕು, ಅವರಿಗೆ ಶಿಕ್ಷೆಯಾಗಬೇಕು ಎನ್ನುವುದು ರೇವಣ್ಣನ ಮನೆಯವರ ಒಕ್ಕೊರಲ ಧ್ವನಿ. ‘ನನ್ನ ಮಗ ಬಾಳ ನೋವುಂಡು ಸತ್ತಾನ್ರಿ, ಆ ಮಗ ಸಾಯೋ ಮುಂದೆ ಎಷ್ಟು ನೋವುಂಡುತ್ತೋ..’ ಎಂದು ರೇವಣ್ಣನ ತಾಯಿ ನೋಯುತ್ತಾ ಹೇಳುತ್ತಾರೆ.
ರೇವಣ್ಣ ಬಿಎ ಬಿಎಡ್ ಮಾಡಿದ ಪದವೀದರ. ಆತನ ದಾಖಲಾತಿಗಳನ್ನು ಗಮನಿಸಿದರೆ ಬುದ್ದಿವಂತ ಕೂಡ. ರೇವಣ್ಣನ ಅಣ್ಣ ತಿಪ್ಪೇಸ್ವಾಮಿಯೂ ಬಿ.ಎ ಅರ್ಧಕ್ಕೆ ನಿಲ್ಲಿಸಿದ ಶಿಕ್ಷಿತ. ಇನ್ನೊಬ್ಬ ಅಣ್ಣ ಮಲಿಯಪ್ಪ ಅನಕ್ಷರಸ್ತ. ಇಬ್ಬರು ಅಣ್ಣಂದಿರಿಗೂ ಮದುವೆಯಾಗಿ ಮಕ್ಕಳಿವೆ. ಈ ಕುಟುಂಬಕ್ಕೆ ಆರ್ಥಿಕ ಭದ್ರತೆಯೇ ರೇವಣ್ಣನಾಗಿದ್ದ. ಅಣ್ಣಂದಿರು ತುಂಡು ಭೂಮಿಯನ್ನು ಉಳುಮೆ ಮಾಡಿಕೊಂಡು ಕೃಷಿ ಕೂಲಿ ಮಾಡಿಕೊಂಡಿದ್ದಾರೆ. ರೇವಣ್ಣನು ವಾರಕ್ಕೊಮ್ಮೆ ಹದಿನೈದು ದಿನಕ್ಕೊಮ್ಮೆ ಓಬಳಾಪುರಕ್ಕೆ ಬಂದು ಹೋಗುತ್ತಿದ್ದ. ಹೀಗೆ ಮನೆಗೆ ಆಧಾರವಾಗಿದ್ದ ಜೋತಿಯೇ ಆರಿದಂತೆ ಮನೆಯಲ್ಲಿ ಕತ್ತಲು ಆವರಿಸಿದೆ. ಈ ಕೊಲೆಯನ್ನು ನೋಡಿದರೆ ಮೇಲುಜಾತಿಯ ಅಟ್ಟಹಾಸ ಎದ್ದು ಕಾಣುತ್ತದೆ. ಇವರ ಪ್ರಭಾವಕ್ಕೆ ಒಳಗಾಗಿ ರೇವಣ್ಣನ ಕೊಲೆ ಮುಚ್ಚಿ ಹೋಗುವ ಮುಂಚೆ ದಲಿತ ಸಂಘಟನೆಗಳು ಹೋರಾಟಕ್ಕೆ ಇಳಿಯಬೇಕಿದೆ. ಈ ಕೇಸಿನ ತನಿಕೆಯಾಗಬೇಕು. ತಪ್ಪಿತಸ್ತರಿಗೆ ಶಿಕ್ಷೆಯಾಗಬೇಕು.
-ಅರುಣ್
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ