ಶನಿವಾರ, ಏಪ್ರಿಲ್ 4, 2015

ಜೋಗತಿಯ ಜೊತೆಗೊಂದು ಆತ್ಮೀಯ ಸಂವಾದ

-ಬೇಲೂರು ರಘುನಂದನ್
ಕಾಜಾಣ ಕಾವ್ಯ ಕಮ್ಮಟದ ಸಲುವಾಗಿ ನನ್ನನ್ನೂ ಒಳಗೊಂಡಂತೆ ಸುಮಾರು ಐವತ್ತು ಜನ ಯುವಕವಿಗಳು ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ಸತ್ಯಕಾಮ ಪ್ರತಿಷ್ಠಾನದ ಕಲ್ಹಳ್ಳಿಗೆ ಸೇರಿದ್ವಿ. ಈ ಸಂದರ್ಭದಲ್ಲಿ ಟಿ.ಕೆ.ದಯಾನಂದ್ ಅವರಿಗೆ 2015 ರ ಸಾಲಿನ ಕಾಜಾಣ ಯುವ ಪುರಸ್ಕಾರ ಕೊಡುವುದಿತ್ತು. ಯುವ ಪುರಸ್ಕಾರ ಪ್ರದಾನ ಮಾಡುವ ಸಲುವಾಗಿ ಅಮ್ಮನನ್ನು ಕರೆದಿದ್ದೆವು.
ಅಂದು ಅಮ್ಮ, ತನ್ನ ಕ್ಷೇತ್ರದ ರಬಕವಿಯ ಮನೆಯಲ್ಲಿ ಜನರ ಸಮಸ್ಯೆಗಳ ಅಹವಾಲು ಕೇಳುತ್ತಾ ಕುಳಿತಿದ್ದರು. ನಾನು ಕಮ್ಮಟದ ಸಲುವಾಗಿ ಒಂದು ದಿನ ಮುಂಚಿತವಾಗಿ ತೇರದಾಳಕ್ಕೆ ಹೋಗಿದ್ದೆ. ನೇರವಾಗಿ ಒಮ್ಮೆ ಕರೆದು ಬರೋಣ ಅಂತ ವೀಣಾ ಬನ್ನಂಜೆಯವರು ಹೇಳುತ್ತಲೇ ಇದ್ದರು. ಸರಿ ಸಮಯ ಕೂಡಿತೆಂದು ಅಮ್ಮನನ್ನು ಕರೆಯಲು ರಬಕವಿಯ ಮನೆಗೆ ಹೋದೆ. ಅಲ್ಲಿಗೆ ವೀಣಾ ಮೇಡಂ ಕೂಡ ಬರೋದಿತ್ತು.
ನಾ ಹೋಗುವ ವೇಳೆಗೆ ಒಂದೈದಾರು ಮಂದಿ ಜೋಗತಿಯರು ಅಮ್ಮನ್ನನ್ನು ಭೇಟಿ ಮಾಡಲು ಕುಳಿತಿದ್ದರು. ಅಷ್ಟೇ ಅಲ್ಲಾ ತನ್ನ ಕ್ಷೇತ್ರದ ಅನೇಕ ಜನರು ಕೂಡ ಅಲ್ಲಿ ನೆರದಿದ್ದರು. ಸರಿ ಅಮ್ಮ ಬಂದು ಎಲ್ಲರನ್ನು ಮಾತಾಡಿಸಿ ಅಲ್ಲಿದ್ದ ಮಂಗಳಮುಖಿಯರನ್ನು ಕುರಿತು ತನ್ನನ್ನು ಭೇಟಿ ಮಾಡಲು ಬಂದಿದ್ದ ಇತರರಿಗೆ ಅವರ ಬಗ್ಗೆ ಹೇಳೋಕೆ ಶುರು ಮಾಡಿದರು. ‘ನೋಡ್ರಪ್ಪ, ಇವರನ್ನು ಮಂಗಳಮುಖಿ, ಚಕ್ಕ, ನಂ 9, ಜೋಗತೇರು, ತೃತೀಯಲಿಂಗಿಗಳು, ಕೋಜ ಹೀಗೆ ಬೇರೆ ಬೇರೆ ಕಡೆ ಬೇರೆ ಬೇರೆ ಹೆಸರುಗಳಿಂದ ಕರೆಯುತ್ತಾರೆ’ ಅಂತ ಹೇಳೋವಾಗ ಅಲ್ಲಿದ್ದ ಜೋಗತಿಯರಿಗೆ ಅವ್ವಾರು ಎನ್ ಹೇಳುತ್ತಿದ್ದಾರೆ ಇದೆಲ್ಲಾ ಇದೆಯಾ ಅಂತೆಲ್ಲಾ ಕುತೂಹಲದಿಂದ ಕಣ್ಣರಳಿಸಿ ನೋಡುತ್ತಿದ್ದರು. ಅಲ್ಲಿ ನರೆದಿದ್ದವರಿಗೆ ನೋಡ್ರೀ ಇವರೆಲ್ಲಾ ನಮ್ಮವರೇ ಶೋಭಾ, ಬಸಮ್ಮ, ಪರಷಮ್ಮ, ಸಂಪತ್ತವ್ವ ಅಂತ’ ಎಲ್ಲರಿಗೂ ಪರಿಚಯಿಸಿದರು. ಅಮ್ಮ ಆ ಮಂಗಳಮುಖಿಯರನ್ನು ಹೆಸರು ಹೇಳಿ ಕೈ ಕುಲುಕಿ ಇತರರಿಗೆ ಕೈ ಕುಲುಕಿ ಪರಿಚಯ ಮಾಡಿಕೊಳ್ಳಿ’ ಅಂದ ಕೂಡಲೇ ಶೋಭಾ ಮತ್ತು ಸಂಪತ್ತವ್ವನ ಕಣ್ಣುಗಳು ತೇವವಾಗಿದ್ದವು. ಅಲ್ಲೇ ಇದ್ದ ನನಗೆ, ಆಸಿಡ್ ದಾಳಿಗೆ ಒಳಗಾದ ಹೆಣ್ಣು ಮಗಳೊಬ್ಬಳಿಗೆ ಮಹಿಳಾ ಸಾಧಕಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಅಮ್ಮ ಮುತ್ತಿಟ್ಟು ಪ್ರೀತಿ ತೋರಿದ ಘಳಿಗೆ ನೆನಪಾಗಿ ಮನ ತುಂಬಿ ಬಂದಿತು.
ಅಮ್ಮನನ್ನು ಕಾಣಲು ಬಂದಿದ್ದ ಮಂಗಳಮುಖಿಯರನ್ನು ಬಿಟ್ಟು ಉಳಿದವರನ್ನೆಲ್ಲಾ ಬೇಗ ಬೇಗ ಮಾತಾಡಿಸಿ ಕಳಿಸಿ ಶೋಭಾ, ಪರ್ಶವ್ವ ಹಾಗೂ ಇನ್ನಿತತರ ಜೊತೆ ಅಮ್ಮ ಮಾತಿಗಿಳಿದ ಕ್ಷಣಗಳನ್ನು ಇಲ್ಲಿ ನೆನಪಿಸಿಕೊಳ್ಳೋದು ಸೂಕ್ತ. ವರದಿ ತರ ಅನ್ನಿಸಿದರೂ ಸರಿಯೇ ಬರೆದುಬಿಡೋಣ ಅಂತ ಆ ಸಭಾಷಣೆಯನ್ನು ಇಲ್ಲಿ ನಮೂದಿಸುತ್ತಿದ್ದೇನೆ
ಅಮ್ಮ : ‘ ಬರ್ರವ್ವ , ಹೇಳ್ರವ್ವ’ ಅಂತ ಕೇಳಿದ್ರು.
ಶೋಭಾ : ‘ಎನಿಲ್ರೀ ಅವ್ವಾರೇ ನಮ್ಮ ಆಯಿಗೇ ಒಂದೀಟು ಏನಾರು ಮಾಡ್ರಿ’
ಅಮ್ಮ : ‘ಅಲ್ಲೇ ಅವ್ವ ಮೊದ್ಲು ನಿಂಗೇನಾರೂ ಮಾಡೋಣು ಆಮೇಲೆ ನಿನ್ನ ಆಯಿಗೇ, ಗುಡಿಗೆ ನೋಡೋಣು’.
ಶೋಭಾ ಮತ್ತು ಸಂಪತ್ತವ್ವ : ‘ಇಲ್ರಿ ಅವ್ವಾರೇ, ಹಂಗ ಆಗಂಗಿಲ್ಲ ಆಯಿಗೇ ಏನಾರು ಮಾಡಾಕಬೇಕು’
ಅಮ್ಮ : ನಿನ್ನ ಆಯಿಗೇ ಮಾಡಿದ್ರೆ ನೀನು, ನಿನ್ನ ಗುಡಿ, ನಿನಗ ನಿನ್ನ ಆಯಿಗೆ ಮಾತ್ರ ಛಲೋ ಆಗ್ತದ ಉಳಿಕಿ ಮಂದಿ ಎಲ್ ಹೋಗ್ಬೇಕು ಯವ್ವಾ ?
ಪರ್ಶವ್ವ : ಮತ್ತೇನ್ರಿ ಮಾಡೋಣು ಅವ್ವಾರೇ ರಸ್ತೆಯಾಗ ನಿಂತ್ರೆ ಪೋಲಿಸ್ನವರು ಬಡಿತಾರಾ, ದಗದಾ ಯಾರೂ ಕೊಡಂಗಿಲ್ಲ, ಆಯಿನಾ ಬಿಟ್ಟು ಮತ್ತ್ಯಾರ್ರೀ ಅವ್ವಾರೇ ನಮಗಾ ?
ಅಮ್ಮ : ಅದು ಖರೇನಾ, ರಸ್ತೆ ಮ್ಯಾಗ ನಿಂತ್ರ, ವೇಶ್ಯಾವಾಟಿಕೆ ಮಾಡಿದ್ರ ಹೆಂಗವ್ವ ? ನಿಮ್ಮ ಸಮುದಾಯದ ಮಂದಿ ಬೇಕಾದಂಗ ಕೆಲಸ ಮಾಡ್ಲಿಕ್ಕೆ ಹತ್ಯಾರ. ದುಡಿತಾರ ರೊಕ್ಕ ಸಂಪಾದಿಸ್ತಾರ.
ಶೋಭಾ : ಅವ್ವಾರೇ ಇಲ್ರೀ ಇಲ್ಲಿ ಅದೆಲ್ಲಾ ಆಗಂಗಿಲ್ಲ. ಮತ್ತೇನ್ರಿ ಮಾಡೋಣು
ಅಮ್ಮ : ಅದ್ಯಾಕವ್ವ ಎಲ್ಲಾ ಆಗ್ತದ. ಮನಸು ಬೇಕು ಅಷ್ಟೇ. ನೋಡ್ರಿ ಚಿಕ್ಕಬಳ್ಳಾಪುರದ ಡಿ,ಸಿ. ಆಫೀಸಿನಾಗ ನಿಮ್ಮ ಸಮುದಾಯದ ಇಪ್ಪತ್ತೈದು ಮಂದಿ ಇಡೀ ಡಿ.ಸಿ. ಆಫೀಸಿನಲ್ಲಿ ಸ್ವಚ್ಛ ಮಾಡೋ ಕೆಲಸ ಎಲ್ಲಾ ಅವರೇ ಮಾಡ್ತಾ. ಒಂದೇ ತರದ ಸೀರೆ ಕಟಗೊಂಡು ದಗದಾ ಮಾಡ್ತಾರೆ. ಅವರನ್ನ ನೋಡೋಕೆ ಒಂದು ಖುಷಿ ನೋಡ್ರಿ ಮತ್ತಾ.
ಪರ್ಶವ್ವ : ಹೂನ್ರಿ, ನಮಗೂ ಹಂಗಾ ಮಾಡ್ರಿ. ನಾವೂ ಓದಿಲ್ಲಾ ಬರ್ದಿಲ್ಲಾ, ತೊಳಿತೀವಿ ಬಳಿತೀವಿ ಎಲ್ಲಾ ಮಾಡ್ತೀವ್ರಿ ಅವ್ವಾರೇ.
ಅಮ್ಮ : ತಡಿಯವ್ವ ಪರ್ಶವ್ವ. ಅದು ಜಿಲ್ಲಾ ಮಟ್ಟದಾಗ ಆಗ್ಯಾದ. ನಮ್ಮ ಮಂದಿ ಎಷ್ಟಿದಾರ್ರೀ ಒಟ್ಟ ತೇರದಾಳ, ಬನಹಟ್ಟಿ, ರಬಕವಿ ಸುತ್ತಮುತ್ತ. ಅದನ್ನೆಲ್ಲಾ ಲೆಖ್ಖ ತಗೊಂಡು ಬರ್ರೀ ಏನಾರು ಯೋಚ್ನೆ ಮಾಡೋಣು.
ಶೋಭಾ : ಒಟ್ಟು ಎಷ್ಟು ಮಂದಿ ಇದಾರ್ರಿ ಅಂತ ಗೊತ್ತಿಲ್ರಿಯವ್ವಾ. ನಾವು ಇಲ್ಲಿ ಒಟ್ಟು ಒಂದು ಐದಾರು ಮಂದಿ ಇದ್ದೀವಿ ನೋಡ್ರಿ.
ಅಮ್ಮ : ಐದಾರು ಮಂದಿಗೆ ಉಪಯೋಗ ಮಾಡಿದ್ರ ಉಳಿಕಿ ಮಂದಿ ಎನ್ ಮಾಡಬೇಕು. ಅವರೂ ನಿಮ್ಮಂಗೆ ಕಷ್ಟ ಪಡ್ತಿರ್ತಾರೋ ಅಲ್ಲೋ. ಮತ್ತೆ ಐದಾರು ಮಂದಿ ಮಾತ್ರ ಛಲೋ ಹೆಂಗೆ ಮಾಡೋದು ಹೇಳ್ರವ್ವ. ಅದೆಲ್ಲಾ ಅಗಲ್ಲವ್ವ. ನೀವು ಮೊದ್ಲು ಹಿಂಗ್ ಮಾಡ್ರಿ. ಎಷ್ಟು ಮಂದಿ ನಿಮ್ಮ ಸಮುದಾಯದವರು ಇದ್ದಾರೆ ನೋಡ್ರಿ. ನಾವೂ ಎಲ್ ಎಲ್ಲೆಲ್ಲಿ ಇದ್ದಾರೆ ನೋಡ್ತೀವಿ. ಆಮೇಲೆ ಏನಾರು ಯೋಜನೆ ಹಾಕೋಕೆ ಬರತೈತಿ. ಸರ್ಕಾರದಾಗೂ ನಲವತ್ತು ವರ್ಷ ಆದೋರಿಗೆ ಪೆನ್ಶನ್ ಸ್ಕೀಮ್ ಐತಿ. ಅದಕ್ಕೆ ಅರ್ಜಿ ಹಾಕ್ರಿ. ಪ್ರಯೋಜನ ಪಡ್ಕೋರಿ ಮತ್ತ.
ಎಲ್ಲರೂ : ಹೌದೇನ್ರಿ ಅವ್ವಾರೇ. ಹಂಗಾ ಮಾಡ್ತೀವಿ ಬಿಡ್ರಿ ಮತ್ತ.
ಅಮ್ಮ : ನೋಡ್ರಿ ಅಯೀನೂ ಪೂಜಿ ಮಾಡ್ರಿ, ಬೇಕಾದಂಗ ಕೆಲಸ ಐತಿ ಅದನೂ ಮಾಡ್ರೀ. ಒಂದು ಗಾಡಿ ಹಾಕ್ಕೋರಿ ಅದ್ರ ಮ್ಯಾಗಾ ಐರನ್ ಬಾಕ್ಸ್ ಇಟ್ಗೋರಿ. ಬೀದಿ ಬೀದಿಗೆ ಹೋಗ್ರಿ. ಇಸ್ತ್ರಿ ಹಾಕ್ರಿ. ಅಷ್ಟೇ ಅಲ್ಲ ಒಂದು ತಳ್ಳೋ ಗಾಡಿ ಮ್ಯಾಗ ಟೈಲರಿಂಗ್ ಗಾಡಿ ಕೂಡ ಹಾಕ್ಕೊಬೋದು. ಬಾಳೆಹಣ್ಣು, ಪಲ್ಲೆ ಮಾರಬಹುದು. ಏನೆಲ್ಲಾ ಮಾಡಬಹುದು. ರಸ್ತೆ ಮ್ಯಾಗ ನಿಲ್ಲೋ ಬದ್ಲು ಅದೇ ರಸ್ತೆ ಮ್ಯಾಗ ದಗದಾ ಮಾಡ್ರಿ. ಬಂಡವಾಳ ಇನ್ನೊಂದು ವಗೈರೆಗೆ ಅನೇಕೆ ಸ್ಕೀಮ್ಗಳು ಅದಾವ ಅದನ್ನೆಲ್ಲಾ ತಿಳಿಸ್ತೀನಿ ಅಂದ್ರು. ಸದ್ಯದಲ್ಲೇ ಇನ್ನೂ ಒಂದಷ್ಟು ಯೋಜನೆ ನಿಮಗಾಗಿ ತರುತ್ತೇವೆ ಅಂದ್ರು.
ಶೋಭಾ : ಹೌದೇನ್ರಿ ಯವ್ವ.
ಅಮ್ಮ : ಎಲ್ಲಾ ಆಗ್ತದ ಮೊದ್ಲು ಮುಂದ ಬನ್ರೀ. ಈಗ ಒಂದು ಯೋಜನೆ ಮಾಡ್ತಾ ಇದ್ದೀವಿ. ನಿಮಗೆಲ್ಲಾ ದುಡಿಮೆಗೆ ಅನಕೂಲ ಹಾಕ್ಕೆತಿ. ಈಗ ನಡ್ರೀ
ಶೋಭಾ : ಆಯ್ತು ಅಮ್ಮಾರೇ ನಿಮ್ಮಿಂದ ಒಂದೀಟು ಏನಾರ ಆಗಲಿ.
ಅಮ್ಮ : ಅಯ್ತ್ರವ
ಶೋಭಾ : ಬತ್ತೀವ್ರಿ. ಆದ್ರೂ, ಆಯೀಗೆ ಏನಾದ್ರೂ ಒಂದೀಟು ಮಾಡ್ರಿ.
ಅಮ್ಮ : ಆಯೀನೆ ಎಲ್ಲಾ ಮಾಡ್ತಾಳ. ನಾ ಎನ್ ಮಾಡಾಕ ಬರ್ತದ. ನಡ್ರೀ ಒಮ್ಮೆ ನಿಮ್ಮ ಗುಡೀಗೆ ಬರ್ತೀನಿ.
ಎಲ್ಲರೂ : ಹ್ಞೂ ಅಯ್ತವ್ವಾರೆ.
ಹೀಗೆ ಹೇಳಿ ಎಲ್ಲರೂ ಹೊರಟರು. ಅಷ್ಟೊತ್ತಿಗೆ ಕಾಜಾಣದ ಕಾರ್ಯಕ್ರಮಕ್ಕೆ ಅಮ್ಮನನ್ನು ಕರೆಯಲು ವೀಣಾ ಬನ್ನಂಜೆಯವರು ಬಂದರು. ಅವ್ರಿಗೆ ಇವರನ್ನು ನೋಡ್ರವ್ವ ಇವರು ವೀಣಾ ಬನ್ನಂಜೆ ಅಂತ ಲೇಖಕಿ. ಗೊತ್ತೋ ಇಲ್ಲೋ ಆದ್ರೂ ತಲೆ ಹೂ ಅಂತ ಆಡಿಸಿದ್ರು. ವೀಣಾ ಬನ್ನಂಜೆಯವರಿಗೆ “ತಾಯಂದಿರು ಬಂದಿದ್ರು ಮಾತಾಡಿಸುತ್ತಿದ್ದೆ’ ಅಂದ್ರು ಅಮ್ಮ. ಅದಕ್ಕವರು ‘ಅಕ್ಕಾ’ ಎಂದು ನಮಸ್ಕಾರ ಅಂತ ವೀಣಾ ಮೇಡಂ ಹೇಳಿದರು.
ಇಡೀ ಘಟನೆಯಿಂದ ಅಲ್ಲಿ ಅಮ್ಮನ ಅನುಭವ ಮತ್ತು ಕಾಳಜಿಯನ್ನು ವ್ಯಕ್ತ ಪಡಿಸುವಂತೆ ತೋರುತ್ತಿತ್ತು. ಅವರೆಲ್ಲಾ ಹೋದ ಮೇಲೆ ಅವರ ಮನಸು ತೀವ್ರವಾಗಿ ಈ ಸಮುದಾಯದವರ ಬಗೆಗಿನ ಕಾಳಜಿಯನ್ನು ಮತ್ತೆ ಮತ್ತೆ ವ್ಯಕ್ತಪಡಿಸುವಂತೆ ಮನೆಯಲ್ಲಿ ಯಾರು ಯಾರು ಇದ್ದರೋ ಅವರಿಗೆಲ್ಲಾ ಇವರ ಬಗ್ಗೆ ಹೇಳುತ್ತಲೇ ಇದ್ದರು. ಆ ವೇಳೆಗೆ ಅಂಗವಿಕಲರ ಸಂಘಟನೆ ಮಾಡುತ್ತಿದ್ದೇನೆ ಅಂತ ಒಬ್ಬರು ಬಂದರು. ಅವರು, ಅದು ಮಾಡಿದ್ದೀನಿ ಇದು ಮಾಡಿದ್ದೀನಿ ಅವ್ವಾರೇ ಅಂತ ಹೇಳೋಕೆ ಶುರು ಮಾಡಿ ಇನ್ನೇನೇನೋ ಮಾಡಿಕೊಡಬೇಕು ಅಂತ ಬೇಡಿಕೆ ಇಟ್ಟರು. ಅವರ ಮಾತನ್ನು ಕೇಳಿಸಿಕೊಳ್ಳದೇ ಅವರಿಗೂ ಅಷ್ಟು ಹೊತ್ತಿಗೆ ಬಂದು ಹೋಗಿದ್ದ ತೃತೀಯಲಿಂಗಿಗಳ ಬಗ್ಗೆ ಮತ್ತೆ ಮತ್ತೆ ಹೇಳೋಕೆ ಶುರು ಮಾಡಿದ್ರು. ಹೇಳ್ತಾ ಹೇಳ್ತಾ ನೋಡ್ರಿ ನಿಮಗೆ ರೇವತಿ ಗೊತ್ತೇನ್ರಿ ? ಇಲ್ಲ ಅಂದ್ರು. ಹೋಗ್ಲಿ ‘ನಿಮಗ ನಮ್ಮ ಕ್ಷೇತ್ರದಾಗ ಒಟ್ಟು ಎಸ್ ಮಂದಿ ಜೋಗ್ತೆರು ಅದಾರೆ ಅಂತ ಗೊತ್ತೇನ್ರಿ’ ? ಅಂತ ಕೇಳಿದ್ದಕ್ಕೆ ‘ಇಲ್ರಿ ಅಮ್ಮಾರೇ’ ಅಂತ ತಲೆಯಾಡಿಸಿದ. ‘ಅಯ್ಯೋ ದೈವ’ ಅಂದು, ರೇವತಿ ಅಂದ್ರೆ ಒಬ್ಬ ಮಂಗಳಮುಖಿ ಹೆಣಮಗಳು. ಆಕೆ ಒಂದು ನಾಟಕದಾಗ ಪಾರ್ಟ್ ಮಾಡ್ಯಾಳ. ಪುಸ್ತಕ ಬರದಾಳ. ಅಷ್ಟೇ ಅಲ್ಲ ಅವರ ಸಮುದಾಯವನ್ನು ಸಂಘಟನೆ ಕೂಡ ಮಾಡ್ತಾಳ. ಅಷ್ಟೇ ಅಲ್ಲಪ್ಪ ಈ ತರದ ತೃತೀಯ ಲಿಂಗಿಗಳ ಬಹುದೊಡ್ಡ ಸಂಘಟನೆ ಇದೆ. ದೇಶ, ವಿದೇಶ ಎಲ್ಲಾ ಕಡೆ ಅಂದ್ರು. ಇವರೆಲ್ಲಾ ಒಬ್ಬ ಗುರು ಇರುತ್ತಾರೆ. ಆಪರೇಶನ್ ಕೂಡಾ ಮಾಡಿಸಿಕೊಳ್ಳುತ್ತಾರೆ ಅಂತ ಅವರ ಬಗ್ಗೆ ತಮಗೆ ತಿಳಿದಿರುವ ಎಲ್ಲಾ ಮಾಹಿತಿಗಳನ್ನು ಹೇಳುತ್ತಿದ್ದರು. ಇವರು ಮಾತನಾಡುತ್ತಿರುವಾಗ ಇನ್ನಷ್ಟು ಜನ ಅಲ್ಲಿ ಸೇರಿಕೊಂಡರು. ಅವರ ಮಾತುಗಳನ್ನು ಪ್ರೀತಿಯಿಂದ, ಕಾಳಜಿಯಿಂದ ಮತ್ತು ಕುತೂಹಲದಿಂದ ಎಲ್ಲರೂ ಕೇಳುತ್ತಿದ್ದರು. ಒಬ್ಬರೂ ತುಟುಕ್ ಪಿಟಕ್ ಅನ್ನಲಿಲ್ಲ. ಅಮ್ಮ ಹೇಳುವ ಮತ್ತು ಅಲ್ಲಿದ್ದವರೆಲ್ಲಾ ಕೇಳುವ ಮನಸುಗಳು ಆರ್ದಗೊಂಡಿದ್ದು ಇಡೀ ತೃತೀಯ ಲಿಂಗಿಗಳ ಬಗೆಗೆ ಅದಮ್ಯ ಪ್ರೀತಿಯನ್ನು ತೋರುವಂತಿತ್ತು. ನಿರ್ಲಕ್ಷ್ಯಕ್ಕೆ ನವಿರು ಪ್ರೇಮವನ್ನು ತೋರುವಂತಿತ್ತು. ಕೊನೆಯದ್ದಾಗಿ ನನ್ನ ಭೂಮಿ ನಾಟಕದ ಬಗೆಗೂ ಹೇಳಿ, ನಾನೂ ಅವಕಾಶ ಬಂದರೆ ಒಮ್ಮೆ ತೃತೀಯಲಿಂಗಿ ಪಾತ್ರವನ್ನು ನಾಟಕದಲ್ಲಿ ಮಾಡಬೇಕು ಅಂದ್ರು. ಅಲ್ಲಿದ್ದವರೆಲ್ಲಾ ಒಕ್ಕೊರಲಿನಿಂದ ‘ಮಾಡ್ರಿ ಅವ್ವಾರೇ’ ಅಂದ್ರು.
ಇದೆಲ್ಲಾ ಆದ ಮೇಲೆ ಅಂಗವಿಕಲರ ಸಂಘಟನೆ ಅಂತ ಬಂದಿದ್ದವರು ಮೇಡಮ್ಮೊರೆ ಬುದ್ಧಿ ಮಾಂದ್ಯರಿಗಾಗಿ ಒಂದು ಕಾರ್ಯಕ್ರಮ ಮಾಡಬೇಕು ಅಂದ್ರು. ಎನ್ ಕಾರ್ಯಕ್ರಮ ? ಎನಿಲ್ರಿ ‘ಬುದ್ಧಿಮಾಂದ್ಯರನ್ನೆಲ್ಲಾ ಸೇರಿಸಿ ಒಂದು ಕಾರ್ಯಕ್ರಮ ಮಾಡೋಣು ಅಂತ’ . ಸರಿ ಎಲ್ಲಿ ಸಿಗ್ತಾರ ಅವರು. ‘ಮೇಡಂಮ್ಮೊರೆ ಬುದ್ಧಿ ಮಾಂದ್ಯರ ಶಾಲೀಲಿ ಇರತಾರ್ರೀ ಅವರನ್ನ ಕರ್ಕೊಂಡು ಬರ್ತೀವಿ ಇಲ್ಲ ಅವರಿಗೆಲ್ಲಾ ಬರೋಕೆ ಹೇಳ್ತೇವೆ’ ಅಂದ್ರು ಸಂಘಟಕರು. ಅದಕ್ಕೆ ಅಮ್ಮ ಸಿಟ್ಟು ಮಾಡಿಕೊಂಡು ‘ಅಲ್ರೀ ಶಾಲಿಯಾಗಿ ಇರೋರನ್ನೋ ಕರ್ಕೊಂಡು ಬಂದು ಕಾರ್ಯಕ್ರಮ ಮಾಡಾಕ ನೀವೇ ಆಗಬೇಕೆನ್ರಿ. ಅವರಿಗೆ ಬರಾಕ ಹೇಳ್ತೀನಿ ಅಂದ್ರ ಅವರಿಗೆ ಒಟ್ಟುಗೂಡೋ, ಸಂಘಟನೆ ಆಗೋ ಶಕ್ತಿ ಐತೆನ್ರಿ. ಮೊದ್ಲು ಎಲ್ಲೆಲ್ಲಿ ಇದಾರೋ ಅವರನ್ನ ಮೊದಲು ನೀವು ಸಂಘಟನೆ ಮಾಡ್ರಿ. ಮನ್ಯಾಗ ಹುಚ್ಚ ಅಂತ ಕೂಡಿ ಹಾಕಿರೋ ಮಂದೀನ ಹುಡುಕಿ ಅವರಿಗೆ ಔಷದ ಕೊಡಿಸ್ರಿ. ಡಾಕ್ಟ್ರು ಭೇಟಿ ಮಾಡಿಸಿ. ಅವರ ತಂದೆ ತಾಯಿಗೆ ತಿಳಿಹೇಳಿ. ಎಲ್ಲೆಲ್ಲಿ ಆ ತರ ಜಗತ್ತೇ ಗೊತ್ತಿಲ್ಲದ ಮಂದಿ ಅವರನ್ನೆಲ್ಲಾ ಸೇರಿಸಿ. ಅವರಿಗೆ ಬೇಕಾಗೋ ಮೂಲಭೂತ ವ್ಯವಸ್ಥೆಗೆ ಏನಾದ್ರೂ ಒಂದೀಟು ಸಹಕಾರ ಕೊಡ್ರಿ. ಕಾರ್ಯಕ್ರಮಗಳನ್ನು ಮಾಡಿ ಏನೇನು ಹೆಚ್ಚ್ಹು ಉಪಯೋಗ ಇಲ್ಲ. ಸರ್ಕಾರದಿಂದ ಏನೇನೂ ಅಂಗವಿಕಲರಿಗಾಗಿ ಅನುಕೂಲ ಐತೋ ಅವನ್ನೆಲ್ಲಾ ಮುಂದೆ ನಿಂತು ಬ್ರಷ್ಟರಾಗದೇ ಕೊಡಿಸ್ರಿ ’ ಅಂದು ಅವರನ್ನೆಲ್ಲಾ ಕಳಿಸಿದರು. ಬಂದವರು ಕಾರ್ಯಕ್ರಮದ ಸುದ್ಧಿ ಬಿಟ್ಟು ಬರ್ತೀವಿರ್ರೀ ಅವ್ವಾರೇ ಅಂತ ಹೊರಟರು. ಹೊರಗಡೆ ಬಂದಿದ್ದ ಇಬ್ಬರಲ್ಲಿ ಒಬ್ಬ ನಮ್ಮೂರಿನಾಗ ಹುಚ್ಚ ಅಂತ ಕೂಡಿ ಹಾಕಿರೋ ಬಸಣ್ಣನಿಗೆ ಆಸ್ಪತ್ರೆಗೆ ಸೇರಿಸಬೇಕು. ಈ ವಿಷಯವಾಗಿ ಅವರ ಮನೆಯವರ ಜತೆ ಮಾತಾಡಬೇಕು ಅಂತ ಮಾಡಿಕೊಂಡು ಹೊರಟರು.

ಕಾಮೆಂಟ್‌ಗಳಿಲ್ಲ: