ಮಕ್ಕಳಾಟ
ಒಂದು
ಆಲದ ಮರ. ಅದರ ತುಂಬ ಚಿಲಿಪಿಲಿ. ಸದ್ದು ಹಕ್ಕಿಗಳದಲ್ಲ. ಅವುಗಳೊಟ್ಟಿಗೆ ಹಾಡುತ್ತಿರುವ
ಮಕ್ಕಳದು. ನೋಡನೋಡುತ್ತಿದ್ದಂತೆ ಆ ಮರದ ಮೇಲೆ ಬಿದಿರು ಬೊಂಬು ಏರುತ್ತವೆ. ಪುಟ್ಟ
ರಂಗಮಂಚ ಮೈದಳೆಯುತ್ತದೆ. ಕಣ್ಣುಮುಚ್ಚಿ ಬಿಡುವುದರೊಳಗೆ ಡ್ರಾಮ ಶುರುವಾಗಿ ಬಿಡುತ್ತದೆ.
ಇತ್ತ `ಮಕ್ಕಳಾಟ' ನೋಡಲು ಜನಜಾತ್ರೆ. ಗೂಡಂಗಡಿಯಿಂದ ಬಜ್ಜಿ ಮೆಲ್ಲುವ ಪ್ರೇಕ್ಷಕರು
`ಒನ್ಸ್‌ಮೋರ್'ಗಳ ಹೊಳೆಯಲ್ಲಿ ತೇಲುತ್ತಿರುತ್ತಾರೆ.
ಬೇಸಿಗೆಯಲ್ಲಿ ಮಳೆ ಹನಿದಂತೆ ಪ್ರತಿ ವರ್ಷ ಮಾರ್ಚ್‌ನಿಂದ ಮೇ ಅವಧಿಯಲ್ಲಿ ಅಲ್ಲಿ ಇಂಥ ದೃಶ್ಯಗಳು ಸಾಮಾನ್ಯ. ಅದು ತುಮಕೂರು ಜಿಲ್ಲೆ ಗುಬ್ಬಿ ತಾಲ್ಲೂಕಿನ ಅಂಕಸಂದ್ರ. ರಂಗಕರ್ಮಿ ನಟರಾಜ ಹೊನ್ನವಳ್ಳಿ, ಆ ಊರಿನವರೇ ಆದ ಎ.ಆರ್. ಪ್ರೇಮಕುಮಾರ್ ಹಾಗೂ ನಟ ಅನಿಲ್ ಕುಮಾರ್ ಅವರಿಂದ ಪ್ರೇರಣೆ ಪಡೆದು ಹುಟ್ಟಿದ್ದು ಕುವೆಂಪು ಸಾಂಸ್ಕೃತಿಕ ಸಂಸ್ಥೆ. ಜೊತೆಗೆ ಮತ್ತೊಬ್ಬ ರಂಗಪ್ರೇಮಿ ಹನಗೊಂಡನಹಳ್ಳಿ ನಿಜಗುಣಯ್ಯನವರ ಸಾಥ್. ಮಕ್ಕಳ ಪ್ರಪಂಚವನ್ನೂ ಬೆಳೆಸುವ ಅದರೊಟ್ಟಿಗೆ ತಾನೂ ಬೆಳೆಯುವ ಹಂಬಲ ಸಂಸ್ಥೆಗೆ. ಆಗ ಹೊಳೆದದ್ದು ಬೇಸಿಗೆ ಶಿಬಿರ. 2004ರ ಬಿಸಿಲಕಾಲ. ಊರಿನ ಬೀದಿ ಬೀದಿಗಳಲ್ಲಿ ತಮಟೆ ಹೊಡೆದು ಸಾರುವುದರೊಂದಿಗೆ ಶಿಬಿರಕ್ಕೆ ಚಾಲನೆ ದೊರೆಯಿತು. ಮೊದಲ ನಾಟಕವಾಗಿ ಕುವೆಂಪು ರಚಿಸಿದ `ಬೊಮ್ಮನಹಳ್ಳಿಯ ಕಿಂದರಿಜೋಗಿ' ಪ್ರದರ್ಶನ ಕಂಡಿತು.
ಈಗ ಶಿಬಿರಕ್ಕೆ ಹತ್ತರ ಹರಯ. ಇಷ್ಟು ವರ್ಷಗಳಲ್ಲಿ ಸಂಸ್ಥೆಯಿಂದ `ಅಲಿಬಾಬಾ ಮತ್ತು ನಲವತ್ತು ಮಂದಿ ಕಳ್ಳರು', `ಅಲ್ಲಾವುದ್ದೀನನ ಅದ್ಭುತದ್ವೀಪ', `ಚೋರ ಚರಣದಾಸ', `ಮೆಕ್ಯಾನಿಕ್ ಗೌರಿ', `ನೀಲಿಕುದುರೆ', `ನಾಯಿ ತಿಪ್ಪ', `ಆ ಮನಿ', `ಧನ್ವಂತರಿ ಚಿಕಿತ್ಸೆ', `ಬುಡಬೆಳ್ಳಿ, ನಡುಪಚ್ಚೆ, ಗೊನೆಮುತ್ತು', ಪೌರಾಣಿಕ ನಗೆನಾಟಕ `ಶ್ರೀಕೃಷ್ಣ ಸಂಧಾನ' ರಂಗಪ್ರಯೋಗಗಳು ನಡೆದಿವೆ.
ಸಂಸ್ಥೆಯನ್ನು ಮುನ್ನಡೆಸುತ್ತಿರುವ ಪ್ರೇಮಕುಮಾರ್ ವೃತ್ತಿಯಲ್ಲಿ ಸಿವಿಲ್ ಎಂಜಿನಿಯರ್. ದೈಹಿಕವಾಗಿ ಬೆಂಗಳೂರಿನಲ್ಲಿದ್ದರೂ ಅವರ ಮನಸ್ಸು ಸಂಪೂರ್ಣ ಬೇರು ಬಿಟ್ಟಿರುವುದು ಅಂಕಸಂದ್ರದಲ್ಲಿ. ವಾರಾಂತ್ಯದಲ್ಲಿ ಊರಿಗೆ ದೌಡಾಯಿಸುವ ಅವರಿಗೆ ಸಾವಯವ ಕೃಷಿಯ ಜೊತೆಗೆ ಮಕ್ಕಳ ರಂಗಭೂಮಿ ಗೆಣೆಕಾರನಾಗಿದೆ. `ಬೇಸಿಗೆ ಶಿಬಿರ ಎನ್ನುವುದು ಕೇವಲ ಮಕ್ಕಳ ಶಿಬಿರವಲ್ಲ. ಅದೊಂದು ಚಿಕಿತ್ಸಾ ಶಿಬಿರ' ಎನ್ನುವ ಕೋಟಿಗಾನಹಳ್ಳಿ ರಾಮಯ್ಯನವರ ಮಾತನ್ನು ಸದಾ ಪ್ರತಿಪಾದಿಸುವ ಪ್ರೇಮಕುಮಾರ್ ರಂಗ ಬೇಸಿಗೆ ಶಿಬಿರಗಳ ಮಹತ್ವವನ್ನು ವರ್ಣಿಸುವುದು ಹೀಗೆ: ಕೃತಕ ಉಷ್ಣತೆಯಲ್ಲಿ ಬೆಳೆದ ಕೋಳಿಮರಿಗಳಿಗಿಂತಲೂ ತಾಯಿಕೋಳಿಯ ಬೆಚ್ಚನೆ ಮಡಿಲಿಂದ ಮೊಟ್ಟೆಯೊಡೆದು ಹೊರಬರುವ ಮರಿಗಳಲ್ಲಿ ಹೆಚ್ಚು ಜೀವಂತಿಕೆ, ಲವಲವಿಕೆ. ಮಕ್ಕಳ ಸಹಜತೆಯನ್ನು ಗೌರವಿಸುವುದು ನನ್ನಂಥ ನೂರಾರು ಶಿಬಿರ ಸಂಯೋಜಕರ ಉದ್ದೇಶ...
ಈ ಜೀವಪರತೆ ಎಷ್ಟರಮಟ್ಟಿಗೆ ಇದೆ ಎಂದರೆ ನಾಡಿನ ಹಲವು ಬೇಸಿಗೆ ರಂಗ ಶಿಬಿರಗಳು ಕ್ಯಾಸೆಟ್ ಸಂಸ್ಕೃತಿಯನ್ನು ಧಿಕ್ಕರಿಸುತ್ತವೆ. ಮಕ್ಕಳೇ ಆಡಲಿ ಮಕ್ಕಳೇ ಹಾಡಲಿ... ಕ್ಯಾಸೆಟ್‌ಗೆ ತುಟಿಯಾಡಿಸುವುದು ತಪ್ಪಲಿ ಎನ್ನುವುದು ಇವುಗಳ ಮೂಲಮಂತ್ರ.
ಮತ್ತೊಂದು ಅಜ್ಜಿಮನೆ...
`ಬೇಸಿಗೆ ರಜೆಯಲ್ಲಿ ಮಕ್ಕಳು ನಿಜಕ್ಕೂ ಶಿಬಿರಕ್ಕೆ ಬರುವರೆ?' ಇದು ಅನೇಕರನ್ನು ಕಾಡುವ ಪ್ರಶ್ನೆ. ಅನುಮಾನವೇ ಬೇಡ ಮಕ್ಕಳ ಸಂಖ್ಯೆ ಕಡಿಮೆ ಆಗುವುದೇ ಇಲ್ಲ ಎನ್ನುತ್ತಾರೆ ಹಂಪೇಶ್ ನಾಗಮಂಗಲ. ಮಂಡ್ಯ ಜಿಲ್ಲೆ ನಾಗಮಂಗಲ ತಾಲ್ಲೂಕಿನ ಮಾರುತಿ ಪ್ರೌಢಶಾಲೆಯಲ್ಲಿ ಮುಖ್ಯಶಿಕ್ಷಕರಾಗಿರುವ ಅವರಿಗೆ ರಂಗ ಶಿಬಿರಗಳು ಹತ್ತಿರವಾದದ್ದು ಹಾರ್ಮೋನಿಯಂ ಹುಚ್ಚಿನಿಂದ. ಮಂಡ್ಯದಲ್ಲಿ ಆಗ ತಾನೇ ಬೆಳೆಯುತ್ತಿದ್ದ ರಂಗ ಪರಿಸರ ಇವರನ್ನೂ ತನ್ನತ್ತ ಸೆಳೆದುಕೊಂಡಿತು. ಪರಿಣಾಮ ಹದಿನೈದು ವರ್ಷಗಳಿಂದ ಕೋಟೆಬೆಟ್ಟದಲ್ಲಿ ಬೇಸಿಗೆ ರಂಗ ಶಿಬಿರ ತಲೆ ಎತ್ತಿತು. ದೇವನೂರರ ಒಡಲಾಳ ಕೃತಿಯನ್ನು ರಂಗರೂಪಕ್ಕೆ ತಂದು ಮಕ್ಕಳ ಮೂಲಕ ಆಡಿಸಿದ್ದು ಅವರ ಸಾಧನೆಗಳಲ್ಲಿ ಒಂದು.
ಹಂಪೇಶ್ ಪ್ರಕಾರ ರಜೆಯಲ್ಲಿ ಒಂದು ಊರಿನ ಮಕ್ಕಳು ಬೇರೆಡೆಗೆ ತೆರಳಬಹುದು ಆದರೆ ಪರ ಊರಿನಿಂದ ರಜೆ ಕಳೆಯಲು ಬಂದ ಮಕ್ಕಳಿಗೆ ಶಿಬಿರಗಳು ಹೊಸ ಪ್ರಪಂಚವನ್ನು ಸೃಷ್ಟಿಸುತ್ತವೆ. ಕೆಲವು ಕಡೆ ಗ್ರಾಮಸ್ಥರೇ ಬಿಸಿಯೂಟದ ವ್ಯವಸ್ಥೆ ಮಾಡಿ ಮಕ್ಕಳಿಗೆ ಸಹಾಯ ಮಾಡುವುದುಂಟು. ಸಾಮಾನ್ಯವಾಗಿ ಒಂದು ವಾರದಿಂದ ಹಿಡಿದು ನಾಲ್ಕು ವಾರದವರೆಗೆ ಬೇಸಿಗೆ ರಂಗ ಶಿಬಿರಗಳ ಅಸ್ತಿತ್ವ. ಆರು ವರ್ಷದಿಂದ ಹದಿನಾಲ್ಕರ ಪ್ರಾಯದ ಮಕ್ಕಳಿಗೆ ಪ್ರವೇಶ. 30 ಮಕ್ಕಳಿಂದ 200 ಮಕ್ಕಳವರೆಗೆ ಶಿಬಿರದಲ್ಲಿ ಮಕ್ಕಳು ಕಾಣಿಸಿಕೊಂಡಿದ್ದಾರೆ. ನಾಟಕಗಳಿಗಷ್ಟೇ ಇಂಥ ಶಿಬಿರಗಳು ಸೀಮಿತವಾಗಿಲ್ಲ. ಚಿತ್ರಕಲೆ, ಕ್ರೀಡೆ, ಗ್ರಾಮಾಧ್ಯಯನ, ಓರಿಗಮಿ, ಮಣ್ಣಿನ ಶಿಲ್ಪಗಳ ತಯಾರಿಕೆ, ಗಾಯನ ಮುಂತಾದ ಹತ್ತಾರು ಸೃಜನಶೀಲ ಹಾದಿಗಳು ಇಲ್ಲುಂಟು.
ಎಲ್ಲೆಲ್ಲಿ ಏನೇನು?
ಎಪ್ಪತ್ತರ ದಶಕದಲ್ಲಿ ಹನಿಯಂತೆ ನಾಡಿನಲ್ಲಿ ಮೂಡಿದ ರಂಗ ಬೇಸಿಗೆ ಶಿಬಿರಗಳು ಈಗ ನದಿಯಾಗಿ ಹರಿಯುತ್ತಿವೆ. ಯಾವುದೇ ಪ್ರಾಯೋಜಕತ್ವ ಬಯಸದ ಸ್ವಾವಲಂಬಿ ಶಿಬಿರಗಳಿಂದ ಹಿಡಿದು ಬಹುರಾಷ್ಟ್ರೀಯ ಕಂಪೆನಿಗಳ ಬೆಂಬಲ ಪಡೆಯುವ ಶಿಬಿರಗಳೂ ನಾಡಿನಲ್ಲಿ ಸೃಜನಶೀಲವಾಗಿ ಕೆಲಸ ಮಾಡುತ್ತಿವೆ. ಮೈಸೂರಿನ `ರಂಗಾಯಣ'ಕ್ಕೆ ಬೇಸಿಗೆ ಶಿಬಿರದ ಪ್ರತ್ಯೇಕ ಪರಂಪರೆಯೇ ಇದೆ. ಧಾರವಾಡದಲ್ಲಿ ರಂಗಾಯಣ ನಡೆಸುವ ಇಂಥ ಶಿಬಿರಕ್ಕೆ `ಚಿಣ್ಣರ ಮೇಳ' ಎಂದು ಹೆಸರು. ಹೆಗ್ಗೋಡಿನ `ನೀನಾಸಂ' ಈಚೆಗೆ ರಂಗ ಬೇಸಿಗೆ ಶಿಬಿರಗಳಿಗೆ ಹೆಚ್ಚಿನ ಮಹತ್ವ ನೀಡಿದೆ.
ಇಂಥ ಶಿಬಿರಗಳನ್ನು ಹಲವು ವರ್ಷಗಳಿಂದ ನಡೆಸುತ್ತಿರುವ ಬೆಂಗಳೂರಿನ `ಬಿಂಬ'ದಿಂದ ಹಲವು ನಟನೆಯ ಕುಡಿಗಳು ಹೊರಬಂದಿವೆ. ಕೋಲಾರದ `ಆದಿಮ ಜೀವಕಲಾ ಶಾಲೆ' ಭಿನ್ನ ರೀತಿಯ ಪ್ರಯೋಗಗಳಲ್ಲಿ ತೊಡಗಿಕೊಳ್ಳುತ್ತ ನಾಡಿನ ಗಮನಸೆಳೆಯುತ್ತಿದೆ. ಎನ್.ಎಸ್. ವೆಂಕಟರಾಂ ಬೆಂಗಳೂರಿನ ಬಾಲಭವನದಲ್ಲಿದಷ್ಟೂ ಕಾಲ ಬೇಸಿಗೆ ಶಿಬಿರಗಳಿಗೆ ಹೊಸ ರೂಪ ತಂದವರು. ಕಿರಣ್ ಭಟ್ ಹಾಗೂ ಶ್ರೀಪಾದ್ ಭಟ್ ನಡೆಸುವ ಚಿಂತನ ರೆಪರ್ಟರಿ ಉತ್ತರ ಕನ್ನಡದಲ್ಲಿ ರಂಗ ಬೇಸಿಗೆಯ ಸಂಸ್ಕೃತಿ ಹರಡುತ್ತಿದೆ. ದಕ್ಷಿಣ ಕನ್ನಡದ ಸುತ್ತಮುತ್ತ ರಂಗಕರ್ಮಿ ಐ.ಕೆ. ಬೊಳವಾರು ಮಕ್ಕಳ ಬೇಸಿಗೆಯನ್ನು ತಂಪಾಗಿಡುತ್ತಿದ್ದಾರೆ.
ತರತಮ ದೂರ
ಮಕ್ಕಳ ಬೆಳವಣಿಗೆಗೆ ನಾಟಕ ಶಿಬಿರಗಳು ಹೇಗೆ ಪೂರಕ ಎಂಬುದನ್ನು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲ್ಲೂಕಿನ ಗುಂಬಳ್ಳಿ ಸರ್ಕಾರಿ ಶಾಲೆಯ ನಾಟಕದ ಮೇಷ್ಟ್ರು ಮಧುಕರ್ ಮಳವಳ್ಳಿ ಸಾಮಾಜಿಕ ಆಯಾಮಗಳ ಹಿನ್ನೆಲೆಯಲ್ಲಿ ಕಂಡುಕೊಂಡಿದ್ದಾರೆ. ಸ್ಪರ್ಶ ನಾಟಕದ ಮೂಲ ಗುಣಗಳಲ್ಲಿ ಒಂದು. ಆದರೆ ಅವರು ಶಾಲೆಗೆ ಬಂದ ಹೊಸತರಲ್ಲಿ ಅಸ್ಪೃಶ್ಯತೆ ಇನ್ನೂ ಹೊಗೆಯಾಡುತ್ತಿತ್ತು. ಸವರ್ಣೀಯ ಮಕ್ಕಳು ದಲಿತ ಮಕ್ಕಳೊಂದಿಗೆ ಬೆರೆಯುತ್ತಿರಲಿಲ್ಲ. ಬಿಸಿಯೂಟಕ್ಕೂ ಮೇಲ್ಜಾತಿಯ ವಿದ್ಯಾರ್ಥಿಗಳು ಬರುತ್ತಿರಲಿಲ್ಲ. ಇಂಥ ಹೊತ್ತಿನಲ್ಲಿ ಹಮ್ಮಿಕೊಂಡ ಶಿಬಿರವೊಂದು ಬದಲಾವಣೆಗೆ ನಾಂದಿ ಹಾಡಿತು. ಮಕ್ಕಳು ಪರಸ್ಪರ ಬೆರೆತರು. ಕೂಡಿ ನಲಿದು ಆಡಿದರು.
ಎರಡನೇ ತರಗತಿ ಓದುವ ಹುಡುಗನೊಬ್ಬ ಅಷ್ಟೇ ವಯಸ್ಸಿನ ಗೆಳತಿಯ ಕೈ ಮುಟ್ಟಲು ಹಿಂಜರಿಯುತ್ತಿದ್ದ. ಅರೆ ಎಳೆಯರಲ್ಲಿ ಹೇಗೆ ಮೂಡಿತು ವಿರುದ್ಧ ಲಿಂಗದ ಕಲ್ಪನೆ ಎಂದು ಶಿಕ್ಷಕರಿಗೆ ಆಶ್ಚರ್ಯ. ಅದರ ಮೂಲ ಹುಡುಕುತ್ತ ಹೊರಟಾಗ ಟಿ.ವಿ ಹಾವಳಿ ಕಣ್ಣೆದುರು ಬಂತು. ಆದರೆ ಶಿಬಿರಗಳು ಜಾತಿ ತಾರತಮ್ಯ ನಿವಾರಣೆಯ ಜೊತೆಗೆ ಲಿಂಗ ತಾರತಮ್ಯವನ್ನೂ ಹೋಗಲಾಡಿಸಿದವು. ಮುಖ್ಯವಾಗಿ ಪುರುಷ ಶ್ರೇಷ್ಠತೆಯನ್ನು ಅಲ್ಲಗಳೆದು ತಮ್ಮದೇ ರೀತಿಯಲ್ಲಿ ಸಮಾನತೆಯನ್ನು ಸೃಷ್ಟಿಸಿದವು.
ನಗರ ಸಂಸ್ಕೃತಿ ಇಂಗ್ಲಿಷ್ ಶಾಲೆಯ ಹಾವಳಿಯಲ್ಲಿ ಬದುಕುವ ಮಕ್ಕಳಿಗೆ ತಾಯ್ನುಡಿಯ ಪ್ರೀತಿಯನ್ನು ಈ ಶಿಬಿರಗಳು ಹಬ್ಬುತ್ತಿವೆ. ಪದಗಳ ಪರಿಚಯ ಉಚ್ಛರಣೆಯ ಜೊತೆಗೆ, ನುಡಿಯ ಮೇಲೆ ಪಾರಮ್ಯ ಹೊಂದಲು ಶಿಬಿರಗಳು ಇನ್ನಿಲ್ಲದಂತೆ ದುಡಿಯುತ್ತಿವೆ.
ಅನೇಕ ಮಕ್ಕಳಲ್ಲಿ ವಿಶ್ವಾಸದ ಕೊರತೆ ಇರುತ್ತದೆ. ಅದು ಭಾಷೆಯ ಉಚ್ಛರಣೆ ಮೇಲೆ ಹಿಡಿತ ಸಾಧಿಸುತ್ತಿರುತ್ತದೆ. ಆದರೆ ಶಿಬಿರಗಳಲ್ಲಿ ಭಾಗವಹಿಸುವ ಮಕ್ಕಳು ಅಂಥ ದೋಷಗಳಿಂದ ಮುಕ್ತ. ಮಕ್ಕಳ ಗುಣದೋಷಗಳನ್ನು ಶಿಬಿರಗಳಲ್ಲಿ ಸುಲಭವಾಗಿ ಪತ್ತೆ ಹಚ್ಚಬಹುದು. ಎಷ್ಟೋ ಶಿಬಿರಗಳು ನಾಟಕ ಆಡಿಸಲಷ್ಟೇ ಸೀಮಿತವಾಗಿಲ್ಲ. ನಾಟಕ ಅವುಗಳ ಕಾರ್ಯಚಟುವಟಿಕೆಯ ಒಂದು ಭಾಗ. ನಾಟಕದೊಳಗೇ ವಿವಿಧ ಕಲೆಗಳು ಬೆರೆತಿರುವುದರಿಂದ ಮಕ್ಕಳ ಬೇರೆ ಬೇರೆ ಪ್ರತಿಭೆಗಳ ಅನಾವರಣಕ್ಕೆ ಇದು ಸುಲಭ ವೇದಿಕೆ. ಉದಾಹರಣೆಗೆ ಒಬ್ಬರಿಗೆ ಚಿತ್ರಕಲೆ ಗೊತ್ತಿದ್ದರೆ ಮತ್ತೊಬ್ಬರಿಗೆ ಹಾಡುಗಾರಿಕೆ ತಿಳಿದಿರುತ್ತದೆ. ನಾಟಕ ರೂಪು ತಳೆಯಲು ಈ ಇಬ್ಬರೂ ಅಗತ್ಯ.
ಅಂದಹಾಗೆ ಮಧುಕರ್ ಶಾಲೆಯಲ್ಲಿ ಇದೇ ಮೊದಲ ಬಾರಿಗೆ ಬೇಸಿಗೆ ಶಿಬಿರ ನಡೆದಿದೆ. ಹಲವು ಶಿಬಿರಗಳಿಗೆ ಮಾನವ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ್ದ ಅವರು ಶಾಲೆಯಲ್ಲಿ ಇಂಗ್ಲಿಷ್ ಕತೆ ಆಧರಿತ `ಆ ಮರ' ನಾಟಕ ಆಡಿಸಿದ್ದಾರೆ. ಅವರ ಸಾಹಸಗಳಿಗೆ ಇಂಡಿಯನ್ ಫೌಂಡೇಷನ್ ಆಫ್ ಆರ್ಟ್ಸ್‌ನ ಪ್ರೋತ್ಸಾಹ ಇದೆ.
ರಂಗಭೂಮಿಗೂ ನೆರವು
ರಂಗಕರ್ಮಿ ದಾಕ್ಷಾಯಣಿ ಭಟ್ ಹೊಸ ರೀತಿಯ ಬೇಸಿಗೆ ಶಿಬಿರಗಳಿಗೆ ಹೆಸರುವಾಸಿ. ಅವರು ಅಂಧ ಮಕ್ಕಳಿಗೆ, ಬಾಲಾಪರಾಧಿಗಳಿಗೆ ನಾಟಕಗಳನ್ನು ಹೇಳಿಕೊಟ್ಟಿದ್ದಾರೆ. ಶಿಕಾರಿಪುರದಲ್ಲಿ ಕಳೆದ ಅರ್ಥಪೂರ್ಣ ಬಾಲ್ಯ ಅವರ ಬದುಕಿನ ದಿಕ್ಕನ್ನೇ ಬದಲಿಸಿತ್ತು. ಐದನೇ ತರಗತಿಯಲ್ಲಿದ್ದಾಗಲೇ ಅಭಿನಯದ ರುಚಿ ಕಂಡುಕೊಂಡ ಅವರು ಈಗ ತಮ್ಮಂಥ ನೂರಾರು ಯುವ ಪ್ರತಿಭೆಗಳನ್ನು ಬೆಳೆಸುತ್ತಿದ್ದಾರೆ. ನಾಡಿನ ಮೂಲೆಮೂಲೆಗಳಲ್ಲಿ ನಡೆಯುವ ಶಿಬಿರಗಳಲ್ಲಿ ಭಾಗವಹಿಸುವತ್ತ ಅವರಿಗೆ ಹೆಚ್ಚು ಒಲವು. `ಕತ್ತೆಬಾಲ ಕುದುರೆ ಜುಟ್ಟು'. `ಪಂಜರ ಶಾಲೆ', `ಪ್ರೀತಿಯ ಕಾಳು', `ಒಳ್ಳೇದು ಒಳ್ಳೇದು' ಮುಂತಾದವು ಇವರು ಶಿಬಿರಕ್ಕಾಗಿ ನಡೆಸಿದ ಯಶಸ್ವಿ ಪ್ರಯೋಗಗಳು.
ನಾಟಕ ಸಂಸ್ಕೃತಿಯ ಬೆಳವಣಿಗೆಗೆ ರಂಗ ಬೇಸಿಗೆ ಶಿಬಿರಗಳು ನೀಡುತ್ತಿರುವ ಕೊಡುಗೆಯನ್ನು ಅವರು ಸೂಕ್ಷ್ಮ ರೀತಿಯಲ್ಲಿ ಗ್ರಹಿಸಿದ್ದಾರೆ. ಅವರ ಪ್ರಕಾರ ಸಹೃದಯರ ಸೃಷ್ಟಿಗೆ ಇಡೀ ಬೇಸಿಗೆ ರಂಗ ಶಿಬಿರಗಳು ಸಕ್ರಿಯವಾಗಿ ದುಡಿಯುತ್ತಿವೆ. ಒಂದೆಡೆ ಮಕ್ಕಳಲ್ಲಿ ನಾಟಕ ನೋಡುವ, ಆಡುವ ಆಸಕ್ತಿಯನ್ನು ಬೆಳೆಸುತ್ತಿರುವ ಶಿಬಿರಗಳು, ಮತ್ತೊಂದೆಡೆ ಪೋಷಕ ವಲಯವನ್ನು ಪ್ರೇಕ್ಷಕ ವಲಯವನ್ನಾಗಿ ರೂಪಿಸುತ್ತಿವೆ. ಹೀಗಾಗಿ ಒಂದೇ ಏಟಿಗೆ ಎರಡು ಫಲ ಪಡೆದ ಖುಷಿ ರಂಗಭೂಮಿಯದು.
ಚಿಕ್ಕಂದಿನಲ್ಲೇ ಮಕ್ಕಳಲ್ಲಿ ನಾಟಕ ಅಭಿರುಚಿಯನ್ನು ಬೆಳಸುವ ರಂಗ ಶಿಬಿರಗಳು ಭಾವಿ ರಂಗಕರ್ಮಿಗಳನ್ನು ಈಗಿನಿಂದಲೇ ಸಜ್ಜುಗೊಳಿಸುತ್ತವೆ. ಎಳವೆಯಲ್ಲೇ ಹೊಸ ಹೊಸ ಕನಸುಗಳನ್ನು ಹುಟ್ಟು ಹಾಕಿ ಮಕ್ಕಳು ಯೌವನದ ಹಾದಿ ಹಿಡಿಯುವ ಹೊತ್ತಿಗೆ ಸ್ಪಷ್ಟವಾದ ಹಾದಿಯನ್ನು ರೂಪಿಸಿಕೊಡುತ್ತವೆ. ಹಾಗಾಗಿ ಅನೇಕರು ಇಂಥ ಶಿಬಿರಗಳನ್ನು ರಂಗಭೂಮಿಯ ಬುನಾದಿ ಎನ್ನುವುದುಂಟು.
ಮಳೆಯ ಮಕ್ಕಳು
ಬೆಂಗಳೂರಿನ ಒಂದು ದೊಡ್ಡ ಸಮುದಾಯ ಭವನ. ಅಲ್ಲೊಂದು ಇಂಗ್ಲಿಷ್ ಭಿತ್ತಿಪತ್ರ ರಾರಾಜಿಸುತ್ತಿದೆ. ಬಿಳಿಗಿರಿ ರಂಗನಬೆಟ್ಟದಲ್ಲಿ ಬೇಸಿಗೆ ಶಿಬಿರ ಎಂಬ ಜಾಹೀರಾತು. ಕಾಡು ಅಲೆದಾಟ, ಪರಿಸರ ಅಧ್ಯಯನ, ದೊಡ್ಡ ದೊಡ್ಡ ಸಂಪನ್ಮೂಲ ವ್ಯಕ್ತಿಗಳ ಪರಿಚಯ ಮುಂತಾದವು ಆ ಭಿತ್ತಿಪತ್ರದಲ್ಲಿ ಅಡಕವಾಗಿದ್ದವು. ಕಡೆಯಲ್ಲಿ ಒಂದು ಒಕ್ಕಣೆ: ಪ್ರವೇಶ ಶುಲ್ಕ ರೂ ಹತ್ತು ಸಾವಿರ ರೂಪಾಯಿ...
ಆದರೆ ಗ್ರಾಮೀಣ ಪ್ರದೇಶದಲ್ಲಿ ಯಾವುದೇ ಫಲಾಪೇಕ್ಷೆ ಇಲ್ಲದೆ ಶಿಬಿರಗಳು ನಡೆಯುತ್ತಿವೆ. ಮಕ್ಕಳಿಂದ, ಪೋಷಕರಿಂದ ಹಣಕ್ಕಾಗಿ ಕೈಚಾಚದೆ ತಮ್ಮ ಜೇಬಿನಿಂದ ಅಥವಾ ಸ್ನೇಹಿತರ ಸಹಾಯದಿಂದ ಶಿಬಿರ ನಡೆಸುವವರು ಇದ್ದಾರೆ. ಕೆಲವು ಕಡೆ ಸಂಪನ್ಮೂಲ ವ್ಯಕ್ತಿಗಳೇ ಉಚಿತವಾಗಿ ದುಡಿಯುತ್ತಾರೆ.
ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿಯಲ್ಲಿ ಸೃಷ್ಟಿಕಲಾ ಬಳಗದ ಮೂಲಕ ಸಕ್ರಿಯರಾಗಿದ್ದಾರೆ ಪ್ರಭು ಹೊಸಪೇಟೆ. ಅವರು ಆರು ವರ್ಷದಿಂದ ಬೇಸಿಗೆ ಶಿಬಿರ ನಡೆಸುತ್ತಿದ್ದಾರೆ. ಪ್ರತಿಬಾರಿಯೂ ಕಲಾವಿದ ಕೇಶವಮೂರ್ತಿ ಅವರೇ ಹಣದ ಹೊಣೆ ಹೊರುತ್ತಾರೆ. ಖರ್ಚಾಗುವ ಒಂದರಿಂದ ಒಂದೂವರೆ ಲಕ್ಷ ರೂಪಾಯಿಗಳನ್ನು ತಾವೊಬ್ಬರೇ ಭರಿಸುತ್ತಾರೆ. ಶಿಬಿರ ನಡೆಸಲೆಂದೇ ಕೆಲವರು ತಮ್ಮ ಖಾಸಗಿ ಬದುಕಿನ ಆಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕಿಕೊಂಡಿದ್ದಾರೆ. ಅದೊಂದು ಸದ್ದಿಲ್ಲದ, ಸದ್ದಾಗಲು ಬಯಸದ ತ್ಯಾಗ.
ಬೇಸಿಗೆ ರಂಗ ಶಿಬಿರ ಆಯೋಜಿಸುವವರೆಗೆ ಶಾಲೆಗಳಲ್ಲಿ ಏನಾಗುತ್ತಿದೆ ಎಂಬ ಬಗ್ಗೆ ಸ್ಪಷ್ಟ ಕಲ್ಪನೆ ಇದೆ. ಅದಕ್ಕೆ ಪ್ರತಿಯಾದ ಹೆಚ್ಚು ಜೀವಂತಿಕೆಯಿಂದ ಕೂಡಿದ ಕಾರ್ಯಕ್ರಮಗಳನ್ನು ಪ್ರಜ್ಞಾಪೂರ್ವಕವಾಗಿ ಹಮ್ಮಿಕೊಳ್ಳುತ್ತಿದ್ದಾರೆ. ಉದಾಹರಣೆಗೆ `ನಲಿ- ಕಲಿ', ಸಮುದಾಯದತ್ತ ಶಾಲೆ ಮುಂತಾದ ಯೋಜನೆಗಳಿಂದ ಮುಟ್ಟಲು ಸಾಧ್ಯವಾಗದ ಕ್ಷೇತ್ರಗಳಲ್ಲಿ ಶಿಬಿರಗಳು ಕೈ ಆಡಿಸುತ್ತಿವೆ. ಶಿಕ್ಷಣದ ಮಹತ್ವವನ್ನು ಪರೋಕ್ಷವಾಗಿ ಹಿಡಿದಿಡುತ್ತ ಮಕ್ಕಳ ಮನಸ್ಸು ಅತ್ತಿತ್ತ ಚಲಿಸದಂತೆ ಕಾವಲು ಕಾಯುತ್ತಿವೆ.
ಈಗೀಗ ಸರ್ಕಾರವೇ ಬೇಸಿಗೆ ಶಿಬಿರಗಳನ್ನು ನಡೆಸಬೇಕು ಎಂಬ ಕೂಗು ಕೇಳಿಬರುತ್ತಿದೆ. ಅದು ಸಾಧ್ಯವಾಗದಿದ್ದರೆ ಕನಿಷ್ಠ ಪಕ್ಷ ಉತ್ಸಾಹಿಗಳ ಬೆಂಬಲಕ್ಕೆ ನಿಲ್ಲುವಂತೆ ಮನವಿ ಸಲ್ಲಿಸಲಾಗಿದೆ. ಆದರೆ ಇದನ್ನು ವಿರೋಧಿಸುವವರೂ ಇದ್ದಾರೆ. ಸರ್ಕಾರ ಅನುದಾನ ಬಿಡುಗಡೆ ಮಾಡಿದರೆ ಉಳಿದ ಯೋಜನೆಗಳಿಗೂ ಶಿಬಿರಕ್ಕೂ ಅಂಥ ವ್ಯತ್ಯಾಸ ಇರುವುದಿಲ್ಲ ಎಂಬ ಮಾತುಗಳು ಕೇಳಿ ಬರುತ್ತಿವೆ.
ಮರಳಿ ಅಂಕಸಂದ್ರಕ್ಕೆ ಹೋಗೋಣ. ಅಲ್ಲಿ ಪ್ರತಿವರ್ಷ ಬೇಸಿಗೆ ಶಿಬಿರ ನಡೆಸಲೆಂದು ತಮಟೆ ಬಡಿದಾಗ ಮಳೆ ಬರುತ್ತದಂತೆ. ಪುಟಾಣಿಗಳು ಕರೆದರೆ ವರುಣ ಇಲ್ಲ ಎನ್ನುವುದಿಲ್ಲವಂತೆ. ಮಳೆ ಎಂಬುದು ಜ್ಞಾನದ ಹನಿಯಾದರೆ, ನಾಡಿನ ಉದ್ದಗಲಕ್ಕೂ ನಡೆಯುವ ಬೇಸಿಗೆ ಶಿಬಿರಗಳು ಮಳೆರಾಯನನ್ನು ಕರೆವ ಚಿಣ್ಣರು ಅಲ್ಲವೆ?

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ