ಮಂಗಳವಾರ, ಮೇ 14, 2013

ಜನಪದ ವೈದ್ಯದ 'ದಿಸ್ಟಿ'ಯ ಆಚರಣೆಗಳು


       ಡಾ. ಜಿ.ಶ್ರೀನಿವಾಸಯ್ಯ


         ಆಧುನಿಕತೆಯ ಅಬ್ಬರದಲ್ಲೂ ದೃಷ್ಟಿ ತೆಗೆಯುವ ಆಚರಣೆಯನ್ನು  ಕಾಣುತ್ತೇವೆ. 'ದಿಸಿ'್ಟ ಎನ್ನುವುದು 'ದೃಷಿ'್ಟಯ ಜನಪದ ರೂಪ. ಅಂದರೆ ನೋಟ ಎಂದರ್ಥ. ಹಿರಿ-ಕಿರಿಯರಿಗೆ ಕೆಟ್ಟ ನೋಟಗಳು ಬಿದಿದ್ದರೇ ಅದನ್ನು ನಿವಾರಿಸುವ ಸಲುವಾಗಿ ಮಾಡುವ ಒಂದು ರೀತಿಯ ಶಾಂತಿಯನ್ನು 'ದೃಷ್ಟಿ ತೆಗೆಯುವುದು' ಎಂದು ಕರೆಯುವರು. ಊಟ ಮಾಡಲು ಆಗದಿರುವುದು. ವಿಪರೀತವಾಗಿ ಆಕಲಿಕೆಗಳು ಬರುವುದು. ಸುಸ್ತು ಹೊಟ್ಟೆ ಉಬ್ಬರಿಸಿ ಬರುವುದು. ಹುಳಿತೇಗು ಮುಂತಾದ ಅನಾರೋಗ್ಯಕರ ಲಕ್ಷಣಗಳು ಕಾಣಿಸಿದಾಗ ಮಾಡುವ ದೃಷ್ಟಿಯ ಆಚರಣೆ ವಿಶಿಷ್ಟವಾದುದು.
                                               
 'ಕೂಟಿ ದಿಸ್ಟಿ' (ಅನ್ನ ತೆಗೆದು ಹಾಕುವುದು)  

                                                
                                                                 ಅರಿಶಿನದ ನೀರನ್ನು ತಟ್ಟೆಯಲ್ಲಿ ಮಾಡಿಟ್ಟುಕೊಂಡಿರುತ್ತಾರೆ. ಕಪ್ಪು, ಬಿಳುಪು ಮತ್ತು ಕೆಂಪು ಬಣ್ಣದ ಅನ್ನದ ತುತ್ತುಗಳನ್ನು ಮಾಡುವರು. ಒಂದು ವೀಳ್ಯದೆಲೆ, ಒಂದು ಮೆಣಸಿನ ಕಾಯಿ, ಒಂದಷ್ಟು ಉಪ್ಪು, ಒಂದೆರಡು ಪೊರಕೆಕಡ್ಡಿ ಇವುಗಳನ್ನು ಪ್ರತ್ಯೇಕವಾಗಿ ನೀವಳಿಸಿ ಮೂರು ಸಾರಿ ಉಗಿದು ತಟ್ಟೆಗೆ ಹಾಕುತ್ತಾರೆ. ಕೊನೆಯಲ್ಲಿ ತಟ್ಟೆಯಿಂದ ಒಂದು ಬಾರಿ ನೀವಳಿಸಿ ಉಗಿದು ತಟ್ಟೆಯೊಳಕ್ಕೆ ಹಾಕುತ್ತಾರೆ. ಕೊನೆಯಲ್ಲಿ ಎಡಗೈಯಿಂದ ಅರಿಶಿನ ನೀರನ್ನು ಹಣೆಗೆ ಅಚ್ಚುವರು. ಆ ತಟ್ಟೆಯನ್ನು ತೆಗೆದುಕೊಂಡು ಹೋಗಿ ಮೂರು ದಾರಿ ಕೂಡುವ  ಜಾಗದಲ್ಲಿ ಚೆಲ್ಲಿ ಬರುವರು.

'ಕಡವ ದಿಸ್ಟಿ (ಕೊಡದ ದೃಷ್ಟಿ ತಗೆಯುವುದು)
        ಈ ದೃಷ್ಟಿಯನ್ನು ಮಕ್ಕಳು ಮತ್ತು ಹಿರಿಯರಿಗೂ ತೆಗೆಯುತ್ತಾರೆ. ಮಕ್ಕಳು ಮತ್ತು ಹಿರಿಯರು ಸರಿಯಾಗ ಊಟ ಮಾಡದಿರುವುದು, ನಿತ್ರಾಣವಾಗಿರುವುದು ಪದೇ ಪದೇ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಈ ಕಾರ್ಯವನ್ನು ಮಾಡುತ್ತಾರೆ.
    ಗುರುವಾರ ಮತ್ತು ಆದಿವಾರದ ದಿನಗಳು ಶುಭ ದಿನಗಳೆಂಬ ನಂಬಿಕೆಯಿದೆ. ಆ ದಿನಗಳಲ್ಲಿ ಮನೆಯ ಮುಂದೆ ಒಂದಡಿಯಷ್ಟು ಜಾಗವನ್ನು ಸಾರಿಸಿ ರಂಗೋಲಿಡುವರು. ಆ ಜಾಗದಲ್ಲಿ ವೃತ್ತಾಕಾರವಾಗಿ ಸಗಣಿಯಿಂದ ಕಟ್ಟೆ ಕಟ್ಟುವರು. ಅದರ ಮಧ್ಯದಲ್ಲಿ ಒಂದು ಸಗಣಿಯ ಉಂಡೆಯನ್ನಿಡುವರು. ಅದರಲ್ಲಿ ಸಗಣಿಯ ನೀರನ್ನು ಹಾಕಿರುವರು. ಆ ಸಗಣಿಯ ಮುದ್ದೆಗೆ ಮೂರು ಕಡೆ ಅರಿಶಿನ ಕುಂಕುಮವನ್ನಿಟ್ಟಿರುವರು. ಅದರ ಮುಂದೆ ರೋಗಿಯನ್ನು ಪೂವರ್ಾಭಿಮುಖವಾಗಿ ಕೂರಿಸುವರು.
         ಒಂದು ಕೊಡಕ್ಕೆ ಕೆಮ್ಮಣ್ಣನ್ನು ಬಳಿದಿರುವರು. ಅದಕ್ಕೆ ಮಸಿ ಮತ್ತು ಸುದ್ದೆಯಿಂದ ಚುಕ್ಕೆಗಳನ್ನಿಡುವರು. ಮೂರು ಕಣ್ಣುಗಳಿರುವ ಮೂರು ತೆಂಗಿನ ಚಿಪ್ಪುಗಳಿಗೆ ಬೆಂಕಿ ಹೊತ್ತಿಸುವರು. ಅವನ್ನು ಎತ್ತಿಕೊಂಡು ಬಂದು ರೋಗಿಗೆ ಮತ್ತು ಸೂರ್ಯ-ಚಂದ್ರರರಿಗೆ ಮೂರು ಮೂರು ಸಾರಿ ನಿವಾಳಿಸುವರು. ಅವನೆತ್ತಿ ಆ ಸಗಣಿಯ ಮುದ್ದೆಯ ಮೇಲಿಡುವರು. ಬಣ್ಣದ ಕೊಡವನ್ನು ಮೂರು ಸಾರಿ ರೋಗಿಗೂ ಮತ್ತು ಮೂರು ಸಾರಿ ಸೂರ್ಯ-ಚಂದ್ರರರಿಗೂ ನಿವಾಳಿಸಿ ಸಗಣಿಯ ಮುದ್ದೆಯ ಮೇಲೆ ಬೋರಲಾಗಿ ಹಾಕುವರು. ಆಗ ಭೋರೆಂದು ಶಬ್ದ ಬರುತ್ತದೆ. ಸಗಣಿಯ ನೀರನ್ನೆಲ್ಲಾ ಎಳೆದುಕೊಳ್ಳಲು ಆರಂಭಿಸುತ್ತದೆ.
         ರೋಗಿಯು ಮೂರು ಸಾರಿ ಆ ಕೊಡವನ್ನು ದಾಡಿ ಹಿಂದಿರುಗಿ ನೋಡದಂತೆ ಮತ್ತೇ ಪೂರ್ವದ ಕಡೆಗೆ ಹೊರಟು ಹೋಗುತ್ತಾನೆ. ದಾರಿಯಲ್ಲಿ ಯಾರನ್ನಾದರೂ ಮಾತನಾಡಲೇ ಬೇಕು. ಆಗ ದೃಷ್ಟಿಯೂ ಹೊರಟು ಹೋಗುತ್ತದೆ ಅಥವಾ ವಗರ್ಾವಣೆಯಾಗುತ್ತದೆ ಎಂಬ ನಂಬಿಕೆ ಜನಪದರಲ್ಲಿ ಜನಜನಿತವಾಗಿದೆ.

ಪೊರಕೆ ಕಡ್ಡಿಗಳಿಂದ ದೃಷ್ಟಿ ತೆಗೆಯುವುದು.

         ಈ ಆಚರಣೆಯನ್ನು ವಿಶೇಷವಾಗಿ ಒಳ್ಳೆಯ ಕೈಗುಣವಿರುವ ಹಿರಿಯ ಹೆಂಗಸು ಮಾಡಬೇಕೆಂದು ಹೇಳುವರು. ವಿಪರೀತವಾದ ಆಕಲಿಕೆ, ವಾತೀ ಹೊಟ್ಟೆ ನೋವು ,ಕಣ್ಣುರಿ ಮುಂತಾದ ಲಕ್ಷಣಗಳಿರುವಾಗ ಈ ದೃಷ್ಟಿ ತೆಗೆಯುವ ಶಾಸ್ತ್ರವನ್ನು ಮಾಡುವರು.
         ಹಿರಿಯ ಹೆಂಗಸು ಒಂದು ಹಿಡಿಯಷ್ಟು ಪರಕೆ ಕಡ್ಡಿಗಳನ್ನು ತೆಗೆದುಕೊಳ್ಳುವಳು. ರೋಗಿಯೂ ಪೂವರ್ಾಭಿಮುಖವಾಗಿ ಕುಳಿತುಕೊಳ್ಳುವನು.  ಆ ಹೆಂಗಸು ಪೊರಕೆ ಕಡ್ಡಿಗಳನ್ನು ಮೂರು ಭಾಗ ಮಾಡುವಳು. ಒಂದು ಭಾಗವನ್ನು ಸೂರ್ಯ-ಚಂದ್ರರರಿಗೆ ಮೂರು ದಿಕ್ಕುಗಳಿಗೂ ನೀವಳಿಸಿ ರೋಗಿಗೆ ಒಂದು ಸಾರಿ ನೀವಳಿಸುವಳು. ಅವನ್ನು ತನ್ನ ಎಡಗಾಲಿನ ಕೆಳಗಿಟ್ಟುಕೊಳ್ಳುವಳು. ಹೀಗೆ ಮೂರು ಸಾರಿ ಮಾಡುವಳು. ನಂತರ ಮೂರು ಭಾಗವನ್ನು ಒಟ್ಟು ಮಾಡಿ ಮತ್ತೇ ಮೂರು ಸಾರಿ ನೀವಳಿಸುವಳು.
    ಪೊರಕೆ ಕಡ್ಡಿಗಳಿಗೆ ಬೆಂಕಿ ಕೊಡುವಳು. ಆ ಬೆಂಕಿಯಿಂದ ಉರಿಯುವ ಪೊರಕೆ ಕಟ್ಟನ್ನು ರೋಗಿಗೆ, ಸೂರ್ಯ-ಚಂದ್ರರರಿಗೆ ಮೂರು ಸಾರಿ ನೀವಳಿಸುವಳು.ಇರುಗು ದಿಸ್ಟಿ, ಪೊರುಗು ದಿಸ್ಟಿ ,ಅಂದರು ಕಣ್ಣುಲ ದಿಸ್ಟಿ ಪಾಡೈಪೋನಿ(ಅಕ್ಕ ಪಕ್ಕದವರ ದಿಸ್ಟಿ, ಎಲ್ಲರ ಕಣ್ಣುಗಳ ದೃಷ್ಟಿ ಹಾಳಾಗಿ ಹೋಗಲೀ)ಎಂದು ಹೇಳಿ, ಅದನ್ನು ಮನೆಯ ಯಾವುದಾದರೂ ಒಂದು ಮೂಲೆಗಿಟ್ಟು ತನ್ನೆರಡೂ ಕೈಗಳಿಂದ ನಟಿಕೆ ಮುರಿಯುವಳು. ಆ ಕಡ್ಡಿಗಳು ಮಾಡುವ ಶಬ್ದದ ಮೇಲೆ ದೃಷ್ಟಿಯ ತೀರ್ವತೆಯನ್ನು ನಿರ್ಧರಿಸುವರು.

ಅಡಿಗೆ ಪರಿಕರಗಳಿಂದ ದೃಷ್ಟಿ

   ಮನೆಯಲ್ಲಿರುವ ಹಿರಿಯ ಹೆಂಗಸು ಮನೆಯಲ್ಲಿರುವ ಹಿಟ್ಟುಗೋಲು. ಮಸೆಗೋಲು, ಸೊಟ್ಟಗೋಲು ಮತ್ತು ಮಡಿಕೆಯ ಕೆಳಗಿನ ಸಿಂಬೆಯನ್ನು ಒಟ್ಟಿಗೆ ತೆಗೆದುಕೊಂಡು ಸೂರ್ಯ-ಚಂದ್ರರರಿಗೆ ಮತ್ತು ರೋಗಿಗೆ ನಿವಾಳಿಸಿ ದೃಷ್ಟಿ ತೆಗೆಯುವ ಆಚರಣೆ ಜಾರಿಯಲ್ಲಿದೆ.
     ಆ ಭೂದಿಯನ್ನು ಎಡಗೈಯಲ್ಲಿ ತೆಗೆಕೊಂಡು ಬರುವಳು. ರೋಗಿಯೂ ಹೆಂಗಸಾಗಿದ್ದರೇ ಎಡಗಣ್ಣಿನ ಹುಬ್ಬು, ಎಡಗೈ, ಎಡಗಾಲಿಗೆ ಅಚ್ಚುವರು. ಗಂಡಸಾಗಿದ್ದರೇ ಬಲಗಣ್ಣಿನ ಹುಬ್ಬು, ಬಲಗೈ, ಬಲಗಾಲಿಗೆ ಅಚ್ಚವರು. ಅವರು ಕೂತ ಕಡೆಯೇ ಕೂತರೇ ದೃಷ್ಟಿ ಹೋಗುವುದಿಲ್ಲ. ಎದು ಹೋಗಿ ಯಾರನ್ನಾದರೂ ಮಾತನಾಡಿಸಿದರೇ, ದೃಷ್ಟಿಯೂ ಹೊರಟು ಹೋಗುವುದು ಎಂಬ ನಂಬಿಕೆ ಈ ಜನಪದರಲ್ಲಿದೆ.
                                                
ಕೂದಲು ದೃಷ್ಟಿ.
   ತಾಯಿ ಅಥವಾ ಹಿರಿಯ ಹೆಂಗಸು ಈ ಆಚರಣೆಯನ್ನು ಮಾಡುತ್ತಾಳೆ. ತನ್ನ ತೆಲೆಯ ಕೂದಳನ್ನು ತೆಗೆದು ಎಡಗೈಯಲ್ಲಿಡಿಯುವಳು. ಮಗುವಿಗೆ ಮತ್ತು ಸೂರ್ಯ-ಚಂದ್ರರರಿಗೆ ಮೂರು ಸಾರಿ ನಿವಾಳಿಸುವಳು. ಮಗುವಿಗೆ ಮೇಲಿನಿಂದ ಕೆಳಗೆ ನಿವಾಳಿಸುತ್ತಾ 'ತೂ, ತೂ,ತೂ' ಎಂದು ಶಬ್ದ ಮಾಡುತ್ತಾ ದೃಷ್ಟಿ ತೆಗೆಯುವಳು.
 ಸೀರೆಯ ಸೆರಿಗು
   ತಾಯಿ ಆಥವಾ ಹಿರಿಯ ಹೆಂಗಸು ತನ್ನ ಸೀರೆಯ ಸೆರಗನ್ನು ತೆಗೆಯುವಳು. ಅದನ್ನು ಎಡಗೈಯಲ್ಲಿಡಿದು ಅದನ್ನು ತಿರಿಗಿಸುತ್ತಾ ದೃಷ್ಟಿ ತೆಗೆಯುವಳು. ಇದೂ ಕೂಡಾ ಸೂರ್ಯ ಚಂದ್ರಾದಿಯಾಗಿ ದಿಕ್ಕುಗಳಿಗೆ ನಿವಾಳಿಸಿ ನಂತರ ಮಗುವಿಗೆ ನಿವಾಳಿಸಿ ತೆಗೆಯುವ ದೃಷ್ಟಿಯಾಗಿದೆ.
                                       
 ಉಪ್ಪಿನ ದೃಷ್ಟಿ
   ಕೆಲವರು ಹಿರಿಯರು ದೃಷ್ಟಿ ತೆಗೆಯಲು ಉಪ್ಪನ್ನು ಮಂತ್ರಿಸಿ ಕೊಡುವರು. ಅವರು ಉಪ್ಪನ್ನು ಅಂಗೈಯಲ್ಲಿಟ್ಟುಕೊಂಡು ಮಂತ್ರಗಳನ್ನು ಗುಣುಗುವರು. ಆ ಗುಣುಗುವ ಸಂದರ್ಭದಲ್ಲಿ ವಿಪರೀತವಾದ ಆಕಳಿಕೆಗಳು ಅವರಿಗೆ ಬರುತ್ತವೆ. ನಂತರ ಮಂತ್ರಿಸಿದ ನಂತರ ಉಪ್ಪನ್ನು ರೋಗಿಗೆ ನೀಡುವರು. ರೋಗಿಯು ಆ ಉಪ್ಪಿನ ಎರಡು ಕಲ್ಲುಗಳನ್ನು ಬಾಯಿಗೆ ಹಾಕಿಕೊಳ್ಳುವನು.  ಮಂತ್ರಿಸಿದ ಸಮಯದಲ್ಲೇ ಎಲ್ಲಾ ದೃಷ್ಟಿಯನ್ನು ಆತನು ಆವಾನಿಸಿರುತ್ತಾನೆಂಬ ನಂಬಿಕೆ ಈ ಜನರಲ್ಲಿದೆ.
   ಉಪ್ಪಿನಿಂದ ದೃಷ್ಟಿ ತೆಗೆಯುವುದರಲ್ಲಿ ಬೇರೆ ಬೇರೆ ಪ್ರಕಾರಗಳಿವೆ. ಮತ್ತು ಪ್ರಾದೇಶಿಕ ಭಿನ್ನತೆಯನ್ನು ಪಡೆದಿವೆ. ತಾಯಿ ಅಥವಾ ಹಿರಿಯ ಹೆಂಗಸು ನಾಲ್ಕು ಉಪ್ಪಿನ ಕಲ್ಲುಗಳನ್ನು ತೆಗೆದುಕೊಳ್ಳುವಳು. ಅದನ್ನು ಮಗುವಿಗೆ, ಸೂರ್ಯ-ಚಂದ್ರರಿಗೆ ನಿವಾಳಿಸಿ ಬೆಂಕಿಯ ಒಲೆಗೆ ಹಾಕುವುದುಂಟು. ಅದು ಚಿಟಗುಟ್ಟುವುದರ ಮೇಲೆ ದೃಷ್ಟಿ ತೀವ್ರತೆಯನ್ನು ನಿಧರ್ಾರ ಮಾಡುತ್ತಿದ್ದರು. ನಾಲ್ಕು ಉಪ್ಪಿನ ಕಲ್ಲುಗಳನ್ನು ಮಗುವಿಗೆ, ಸೂರ್ಯ-ಚಂದ್ರರಿಗೆ ನಿವಾಳಿಸಿ ಅದನ್ನು ತುಂಬಿದ ನೀರಿನ ಕೊಡಕ್ಕೆ ಹಾಕುತ್ತಾರೆ. ತಾಯಿ ಅಥವಾ ಮನೆಯ ಹಿರಿಯ ಹೆಂಗಸು ಉಪ್ಪು. ಈರುಳ್ಳಿ ಮೆಣಸಿನಕಾಯಿಯನ್ನು ಕೈಯಲ್ಲಿಡಿದು ಮಗುವಿಗೆ ನಿವಾಳಿಸಿ ಅದನ್ನು ಮೂರು ದಾರಿ ಕೂಡುವ ಜಾಗದಲ್ಲಿ ಬಿಸಾಕಿ ಬರುವುದನ್ನು ಮಾಡುವರು.
                                   

 ಚೆಂಬುದಿಷ್ಟಿ (ತಂಬಿಗೆ ದೃಷ್ಟಿ)
   ಇದನ್ನು 'ಪಾಟದ್ಯಾವರ' ಎಂದು ಕರೆಯುವರು. ಚಿಕ್ಕ ಮಕ್ಕಳಿಗೆ ವಿಪರೀತವಾದ ವಾಂತಿ ಬೇದಿ ಆಗುತ್ತಿದ್ದರೆ, ಮಗುವು ಎಲ್ಲಾದರೂ ಬಿದ್ದಿದ್ದರೇ ಈ ಆಚರಣೆ ಮಾಡುತ್ತಾರೆ. ಗುರುವಾರ ಅಥವಾ ಆದಿವಾರ(ಭಾನುವಾರ) ವಿಶೇಷವಾದ ದಿನಗಳೆಂದು ಭಾವಿಸುತ್ತಾರೆ. ಆ ದಿನಗಳಂದು ಮನೆಯ ಮುಂದೆ ಒಂದು ಅಡಿಯಷ್ಟು ಜಾಗದಲ್ಲಿ ವೃತ್ತಾಕಾರವಾಗಿ ಅಥವಾ ಚೌಕಾಕಾರವಾಗಿ ಸಗಣಿಯಿಂದ ಸಾರಿಸುವರು. ರಂಗೋಲಿ ಹಾಕುವರು. ಎಕ್ಕೆಗಿಡದ(ಜಿಲ್ಲಿಡಾಕು) ಮೂರು ಎಲೆಗಳನ್ನು ತರುವರು. ಅವುಗಳನ್ನು ಸಾರಿಸಿದ ಜಾಗದಲ್ಲಿಟ್ಟು ಅರಿಶಿನ ಕುಂಕುಮವನ್ನು ಮೂರು ಕಡೆಯಿಡುವರು. ಒಂದು ತಂಬಿಗೆಯ ತುಂಬಾ ನೀರನ್ನು ತೆಗೆದುಕೊಳ್ಳುವರು. ಅದಕ್ಕೆ ಅರಿಶಿನ ಮತ್ತು ಕುಂಕುಮವನ್ನು ಹಾಕುವರು. ಮೂರು ಕಡೆ ಅರಿಶಿ ಕುಂಕುಮವನ್ನಿಡುವರು. ಮಗುವಿಗೆ ಆ ತಂಬಿಗೆಯನ್ನು ನಿವಾಳಿಸಿ ಆ ಎಕ್ಕೇ ಎಲೆಯ ಮೇಲೆ ಬೋರಳಾಗಿ ಹಾಕುವರು. ನಂತರ ಮಗುವನ್ನು ಮೂರು ಸಾರಿ ಆ ತಂಬಿಗೆಯ ಮೇಲೆ ದಾಟಿಸಿ ಮನೆಯ ಒಳಗೆ ತೆಗೆದುಕೊಂಡು ಹೋಗುವರು.
  ಮರುದಿವಸದ ತನಕ ಅದನ್ನು ತೆಗೆಯುವುದಿಲ್ಲ. ಈ ಆಚರಣೆಯನ್ನು ಮಾಡಿದರೆ ವಾಂತಿಬೇದಿ ನಿಂತು ಹೋಗುತ್ತದೆ. ಮಗು ಗುಣ ಮುಖವಾಗುತ್ತದೆ ಎಂಬ ನಂಬಿಕೆಯಿದೆ.
                                                 

 ಎರನೀಳ್ಳು ದಿಸ್ಟಿ (ಕೆನ್ನೀರು ದೃಷ್ಟಿ)
   'ಎರನೀಳ್ಳ ದಿಸ್ಟಿ'ಯನ್ನು ವಿಭಿನ್ನ ರೀತಿಯಲ್ಲಿ ತೆಗೆಯುತ್ತಾರೆ. ಅಲ್ಲದೆ ಪ್ರಾದೇಶಿಕ ವೈವಿಧ್ಯತೆಯೂ ಕೂಡಾ ಪಡೆದಿದೆ. ಅವುಳನ್ನು ಮುಂದೆ ನೀಡಿದೆ.
    ಮಗುವಿಗೆ ತಲೆಸ್ನಾನ ಮಾಡಿಸಿದ ದಿವಸ ಈ ಆಚರಣೆ ಮಾಡುತ್ತಾರೆ. ಒಂದು ಸೌಟಿನಲ್ಲಿ ಬೆಂಕಿಯ ಕೆಂಡಗಳನ್ನು ಹಾಕಿ, ಮಗುವಿಗೆ ಸಾಂಬ್ರಾಣಿ ಹೊಗೆಯನ್ನು ಹಾಕುವರು. ಹಾಗೆಯೇ ಒಂದು ತಟ್ಟೆಯಲ್ಲಿ 'ಎರನೀಳ್ಳು'(ಕೆಂಪುನೀರು) ಮಾಡುವರು. ಆ ಬೆಂಕಿಯ ಕೆಂಡಗಳನ್ನು ಆ ಕೆಂಪುನೀರಿಗೆ ಹಾಕುವರು. ಅದನ್ನು ಸೂರ್ಯ-ಚಂದ್ರ ಮತ್ತು ಮಗುವಿಗೆ ನಿವಾಳಿಸುವರು. ಆ ತಟ್ಟೆಯನ್ನೆತ್ತಿ ತೊಟ್ಟಿಲ ಕೆಳಗಡೆಯಿಡುವರು. ಗೋಧೂಳಿ ಹೊತ್ತಿನಲ್ಲಿ ಆ ತಟ್ಟೆಯನ್ನು ತೆಗೆದುಕೊಂಡು ಹೋಗಿ ದಾರಿಗೆ ಅಡ್ಡವಾಗಿ ಸುರಿದು ಬರುವರು. ಅಂದರೆ ಮಗುವಿನ ದೃಷ್ಟಿ ಗೋಧೂಳಿನಲ್ಲಿ ಹೊರಟು ಹೋಗಲಿ ಎಂಬ ಉದ್ದೇಶವಿರಬಹುದು.
  ಮಕ್ಕಳಿಗೆ ಒಂದೊಂದು ದಿವಸ ಒಂದೊಂದು ಬಣ್ಣದ ದಿಸ್ಟಿಯ ನೀರನ್ನು ತೆಗೆದು ಚೆಲ್ಲವರು. ತಲೆಗೆ ಸ್ನಾನ ಮಾಡಿದ ದಿವಸ ಕೆಂಪುನೀರು ತೆಗೆಯುವರು. ಮತ್ತೊಂದು ದಿವಸ ಬೂದಿಯ ನೀರನ್ನು ಮಗುವಿಗೆ ಮತ್ತುಸೂರ್ಯ-ಚಂದ್ರರರಿಗೆ ನಿವಾಳಿಸಿ ಅದನ್ನು ತೊಟ್ಟಿಲ ಕೆಳಗಿಟ್ಟಿರುವರು. ಪ್ರಾಣಿ-ಪಕ್ಷಿಗಳು ಮತ್ತು ಗೋವುಗಳು ವಾಪಸ್ಸಾಗುವ ಸಮಯದಲ್ಲಿ ಅದನ್ನು ಊರು ಬಾಗಿಲಿಗೆ ಅಡ್ಡವಾಗಿ ಸುರಿದು ಬರುವರು.
                                             
  ಮಕ್ಕಳು ಭಯಪಟ್ಟಿದ್ದರೂ ಕೆಂಪುನೀರಿನಲ್ಲಿ ದೃಷ್ಟಿ ತೆಗೆಯುವರು. ನೀರಿಗೆ ಅರಿಶಿನ ಮತ್ತು ಸುಣ್ಣ ಹಾಕಿ ಮಿಶ್ರಣ ಮಾಡುವರು. ಈ ನೀರನ್ನು ಮಗುವಿಗೆ ಮತ್ತು ಸೂರ್ಯ-ಚಂದ್ರರರಿಗೆ ನಿವಾಳಿಸುವರು. ಆ ನೀರನ್ನು ಬೆರಳುಗಳಲ್ಲಿ ತೆಗೆದುಕೊಂಡು ಮಗುವಿನ ಮುಖಕ್ಕೆ ಭಯಪಡುವ ರೀತಿಯಲ್ಲಿ ಮೂರು ಸಾರಿ ಚಿಮುಕಿಸುವರು. ನಂತರ ಅದನ್ನು ತೆಗೆದುಕೊಂಡು ಹೋಗಿ ಮೂರು ದಾರಿ ಕೂಡುವ ಜಾಗದಲ್ಲಿ ಅಡ್ಡವಾಗಿ ಸುರಿದು ಬರುವರು ಅಥವಾ ಹಸಿರು ಗಿಡದ ಮೇಲೆ ಸುರುದು ಬರುವರ.
'ದಾಟು' ತೆಗೆಯುವುದು.

    'ದಾಟು'ತೆಯುವುದು ಕೂಡಾ ವೈವಿಧ್ಯತೆಯಿಂದ ಕೂಡಿದೆ. ಅಲ್ಲದೆ ಪ್ರಾದೇಶಿಕ ಭಿನ್ನತೆಯಿಂದ ಕೂಡಿದೆ. ಅವುಗಳ ಸ್ವರೂಪವೂ ಈ ಕೆಳಗಿನಂತಿವೆ.
ಎಮ್ಕೆ ದಾಟು (ಮೂಳೆ ದಾಟು)
    ವ್ಯಕ್ತಿಗೆ ಕೈಕಾಲು ನೋವು. ಜ್ವರ, ವಾಂತಿ, ಪ್ರಾಣಕ್ಕೆ  ಆಯಾಸ, ಭಯವಾಗುವುದು, ಸುಸ್ತಾಗುವುದು ಮುಂತಾದ ಅಸ್ವಸ್ಥತೆಗಳಿದ್ದಾಗ ನಾಟಿವೈದ್ಯರನ್ನು ಕಾಣುತ್ತಾರೆ. ಅವನು 'ದಾಟ'ನ್ನು ತೆಗೆಯಲು ಹೇಳುತ್ತಾನೆ.
    ಗುರುವಾರ ಅಥವಾ ಆದಿವಾರದ ಸಂಜೆ ಇದನ್ನು ಮಾಡುವರು. ಅಂದು ಊರಲ್ಲಿ ಹುಡುಕಾಡಿ ಮೂರು 'ಗೊಡ್ಡೆಮಕ'(ಹಸು ಅಥವಾ ಎತ್ತಿನ ಮೂಳೆ)ಗಳನ್ನು ತರುವರು. ಅವನ್ನು ಚೆನ್ನಾಗಿ ತೊಳೆದು ಅವುಗಳಿಗೆ 'ಪೋಗುದಾರ'(ಅರಿಶಿನದ ದಾರ)ವನ್ನು ಕಟ್ಟುವರು. ಅವನ್ನು ಬಾಗಿಲಾಚೆಯೇ ಇಟ್ಟಿರುವರು. 'ಅಮದನ'್ನವನ್ನು ಮಾಡಿಸುವರು. ತೆಂಗಿನಕಾಯಿ, ಎಲೆ ಅಡಿಕೆ, ಮೂರು ಪ್ರಕಾರದ 'ಗಿಂಜಲು'(ಬುರುಗಿ,ಕಳ್ಳೆಬೀಜ,ಕಡಲೆಪಪ್ಪು)ಭತ್ತದ ಹುಲ್ಲು ಮತ್ತು ಬೇವಿನ ಸೊಪ್ಪುನ್ನು ತಯಾರಿ ಮಾಡಿಟ್ಟಿರುವರು. 'ಮೂಡು ಸಂದುಲು ಗುಂಕೇ ಸಮಯ'(ಹೊತ್ತು ಮುಳುಗುತ್ತಿರುವ ವೇಳೆ)ದಲ್ಲಿ ವೈದ್ಯರು ಇವುಗಳೆವನ್ನೂ ರೋಗಿಯನ್ನು ಮೂರು ದಾರಿಗಳು ಕೂಡುವ ಜಾಗಕ್ಕೆ ಕರೆ ತರುವರು.
                                                    
    ಎಡೆಯನ್ನು ಹಾಕಿ, ಅದರಲ್ಲಿ ಮೂಳೆಗಳನ್ನಿಟ್ಟು, ಕಾಣಿಕೆಯನ್ನಿಟ್ಟು ಬುರಗಿಯನ್ನು ಅದರ ಮೇಲೆ ಚೆಲ್ಲಿ, ಬೇವಿನ ಸೊಪ್ಪಿನಿಂದ ವೈದ್ಯ ಮಂತ್ರ ಹಾಕುವನು. ಹುಲ್ಲಿಗೆ ಬೆಂಕಿ ತಾಕಿಸಿ ಆ ಎಡೆಯನ್ನು ಮೂರು ಸಾರಿ ದಾಟಿಸುವನು. ನಂತರ ಹಿಂದುರುಗಿ ನೋಡದಂತೆ ರೋಗಿಯೂ ಮನೆಗೆ ಬರುವನು.
   ಕೆಲವು ಸಮಯದಲ್ಲಿ ಈ 'ದಾಟು' ತೆಗೆಯುವುದು ವೈದ್ಯನಿಲ್ಲದೆಯೂ ಹಿರಿಯ ಅನುಭವವುಳ್ಳವರು ಮಾಡಿಸಬಹದೆಂದು ಹೇಳುತ್ತಾರೆ.

'ದಾಟು ಕುರು' ಮತ್ತು 'ಕೈಕಾಲು ನೋವಿನ' ದಾಟು

   ಕೈಕಾಲು ನೋವು, ಜ್ವರ, ವಾಂತಿಯಿಂದ ಅಸ್ವಸ್ಥನಾಗಿ ಕ್ಷಯವಾಗುತ್ತಿದ್ದರೆ 'ದಾಟು' ತೆಗೆಯುವ ಆಚರಣೆಯನ್ನು ಮಾಡುವರು. ಆದರೆ ಇದನ್ನು ಹಿರಿಯ ಅನುಭವವುಳ್ಳವರೇ ಮಾಡಿಸುತ್ತಾರೆ.
   ಆದಿವಾರ ಅಥವಾ ಗುರುವಾರದ ದಿನಗಳಲ್ಲಿ ಮಾಡುವ ಆಚರಣೆಯಾಗಿದೆ. ಆ ದಿನ ಮುಂಜಾನೆ, ಯಾರ ಮುಖವನ್ನೂ ನೋಡದೆ, ಮೂರು ಹಿಡಿಯಷ್ಟು ರಾಗಿ ಹಿಟ್ಟು, ಎಲೆ ಅಡಿಕೆ, ಮೆಣಸಿಕಾಯಿ, ಉಪ್ಪು ಮತ್ತು ರೂಕ(ಕಾಸು)-ಇವೆಲ್ಲವನ್ನೂ ತೆಗೆದುಕೊಂಡು ಮೂರು ದಾರಿ ಕೂಡುವ ಜಾಗಕ್ಕೆ ಹೋಗುತ್ತಾರೆ. ಅಲ್ಲಿ ರಾಗಿ ಹಿಟ್ಟಿಂದ ಮೂರು ಗೆರೆಗಳನ್ನು ಹಾಕುತ್ತಾರೆ. ಅದರ ಮೇಲೆ ಎಲೆ ಅಡಿಕೆ, ಅದರ ಮೇಲೆ ಕಾಸನ್ನಿಡುತ್ತಾರೆ. ಮೂರು ಸಾರಿ ಆ ಗೆರೆಗಳನ್ನು ದಾಟಿಕೊಂಡು ಹಿಂದಿರುಗಿ ನೋಡದಂತೆ ಮನೆಗೆ ಬರುತ್ತಾರೆ.
                                              
                                                                                            ಈ ಗೆರೆಗಳನ್ನು ದಾಟಿದವರಿಗೆ ರೋಗವು ಅಂಟಿಕೊಳ್ಳುವುದು ಎಂದು ನಂಬುತ್ತಾರೆ. ಅದರಿಂದಲೇ ದಾಟು ತೆಗೆದಿರುವ ಗೆರೆಗಳನ್ನು ಯಾರು ದಾಟಿ ಹೋಗುವ ಸಾಹಸವನ್ನು ಮಾಡುವುದಿಲ್ಲ. ಬದಲಿಗೆ ಅಲ್ಲಿ ಉಗಿದು, ನೆಟಿಕೆ ಮುರಿದು ಅದನ್ನು ಸುತ್ತಿಬಳಸಿ ಹೋಗುತ್ತಾರೆ. ಈ ಆಚರಣೆಯೂ ಗ್ರಾಮೀಣ ಪ್ರದೇಶದ ಈ ಜನರಲ್ಲಿ ಜೀವಂತವಾಗಿದೆ.
                                            
 
       ರಾತ್ರಿಯ ವೇಳೆ ರಾಗಿ ಮುದ್ದೆ ತೊಳೆಸುವ ಸಮಯದಲ್ಲಿ ಮತ್ತು ಊಟ ಸಮಯದಲ್ಲಿ ಮಾಡುವ ಆಚರಣೆಯಿದು. ಈ ಆಚರಣೆ ಮಾಡುವ ಸಮಯದಲ್ಲಿ ವ್ಯಕ್ತಿ ಪೂರ್ವ ದಿಕ್ಕಿಗೆ ಮುಖ ಮಾಡಿರಬೇಕು. ಎಡಗಡೆಗೆ ತೊಳೆಸಿದಾಗ ಒಂದು ತುತ್ತು, ಬಲಗಡೆಗೆ ತೊಳೆಸಿದಾಗ ಒಂದು ತುತ್ತು ಮತ್ತು ತಿರಿಗಿಸಿ ಕಳಕಿದಾಗ ಒಂದು ತುತ್ತು- ಹೀಗೆ ಮೂರು ತುತ್ತುಗಳನ್ನು ತೆಗೆದುಕೊಂಡು ಚಿಟ್ಟೆ(ದೀಪಾಂತಿ) ಮಾಡುವರು. ಅದರಲ್ಲಿ ಎಣ್ಣೆಯನ್ನು ಹಾಕಿ ಬತ್ತಿ ಅಂಟಿಸುವರು. ಮಗುವಿಗೆ ಮೂರು ಸಾರಿ ನೀವಳಿಸುವರು. ಈ ಮೂರು ಸಾರಿಯೂ 'ತುಪಕ್ ತುಪಕ್'ಎಂದು ಆ ದೀಪವನ್ನು ಮತ್ತು ಚಿಟ್ಟೆಯನ್ನು ಉಗಿಯುವರು ಅಲ್ಲದೆ ಕೈ ಬೆರಳುಗಳಿಂದ ನೆಟಿಕೆ ಮುರಿದು ಅದನ್ನು ತೆಗೆದುಕೊಂಡು ಹೋಗಿ ಎಕ್ಕೆಗಿಡದ ಕೆಳಗಡೆ ಮಡಗಿ, ಮೂರು ಸಾರಿ ಉಗಿದು ಹಿಂತಿರುಗಿ ನೋಡದೆ ಬರುವರು.
     ಹೀಗೆ ಮಾಡಿದರೆ ಊಟ ಮಾಡುವ ಸಂದರ್ಭದಲ್ಲಿ ಆಗಿರುವ ದೃಷ್ಟಿ ನಿವಾರಣೆಯಾಗುವುದೆಂದು ಪ್ರಬಲವಾಗಿ ನಂಬುತ್ತಾರೆ.
    ಊಟದ ತಟ್ಟೆಯನ್ನು ಮುಂದಿಟ್ಟುಕೊಂಡು ಮುದ್ದೆಯನ್ನೊ ಅಥವಾ ಅನ್ನವನ್ನೋ ನಿವಾಳಿಸಿ ಪಕ್ಕಿಡುವುದು ಈ ಆಚರಣೆಯ ಲಕ್ಷಣ. ಅಂದರೆ ಒಂದು ತುತ್ತನ್ನು ತೆಗೆದುಕೊಂಡು ಮುಖದಿಂದ ಮೂರು ಸಾರಿ ಉಗುಳುತ್ತಾ ನಿವಾಳಿಸಿ ಪಕ್ಕಕ್ಕಿಡುವರು ಅಥವಾ ನಾಯಿಗೆ ಹಾಕುವರು. ಹೀಗೆಯೇ ಮೂರು ಸಾರಿ ಮಾಡಿ ನಂತರ ಊಟ ಮಾಡುವರು. ಇದರಿಂದ ಕೂಟಿದಿಸ್ಟಿ ನಿವಾರಣೆಯಾಗುವುದೆಂದು ನಂಬಿಕೆಯಿದೆ.

ಕಾಮೆಂಟ್‌ಗಳಿಲ್ಲ: