ಕೃಪೆ: ಕಣಜ
ಮಧ್ಯ ಕರ್ನಾಟಕದ ಚಿತ್ರದುರ್ಗ ಸುತ್ತಿನ ಮಾರಿ ಜಾತ್ರೆಗಳಲ್ಲಿ, ಗ್ರಾಮದೇವತೆ
ಜಾತ್ರೆಗಳಲ್ಲಿ ಪೋತನಾಯಕರು ಕಾಣಿಸಿಕೊಳ್ಳುತ್ತಾರೆ. ಪೋತನಾಯಕರನ್ನು ಮಾರಿಯ ಸೇವೆ ಮಾಡುವ
ಆರಾಧಕರೆಂದು ಕರೆಯಲಾಗುತ್ತದೆ. ‘ಪೋತ’ ಎಂದರೆ ‘ಹೋತ’(ಗಂಡು ಮೇಕೆ) ಎಂಬ ಅರ್ಥವಿದೆ.
‘ಪ’ಕಾರ ‘ಹ’ ಕಾರಗಳಿಗಾಗಿ ಬದಲಾದರೂ ‘ಪೋತ’ದ ವೇಷವನ್ನು ಯಾಕಾದರೂ ಧರಿಸುತ್ತಾರೆ ಎಂಬುದರ
ಒಂದು ಸ್ವಾರಸ್ಯಕರ ಕತೆಯೇ ಇದೆ.
ಬ್ರಾಹ್ಮಣಳಾದ ಮಾರಮ್ಮನನ್ನು ದಲಿತನೊಬ್ಬ ವಂಚಿಸಿ ಮದುವೆಯಾಗುತ್ತಾನೆ. ‘ಕೋಣ’ದ
ರೂಪದಲ್ಲಿ ಮಕ್ಕಳನ್ನು ದೃಷ್ಟಿಮರಿ, ಹೊಳೆಮರಿಗಳ ರೂಪದಲ್ಲಿ (ಅಂದರೆ ದೇವಿ ಮಜ್ಜನಕ್ಕೆ
ಹೊಳೆಗೆ ಹೊರಟಾಗ ‘ಹೊಳೆ ಮರಿ’ಯೆಂದು, ಹಿಂತಿರುಗಿ ಬರುವಾಗ ಜನಗಳ ಕಣ್ಣ ದೃಷ್ಟಿ
ಪರಿಹಾರಕ್ಕೊಂದು ‘ದೃಷ್ಟಿ ಮರಿ’ಯನ್ನು ಬಲಿಕೊಡಲಾಗುತ್ತದೆ) ಬಲಿ ತೆಗೆದುಕೊಳ್ಳುವ
ಪ್ರಕ್ರಿಯೆ ನಡೆಯುತ್ತದೆ (ಗಂಡನನ್ನು ಕಳೆದುಕೊಂಡು ವಿಧವೆಯಾದ ಈಕೆಗೆ ಮುಂದಿನ ವರ್ಷ
ಹಬ್ಬ. ಜಿಲ್ಲೆಯ ಚಳ್ಳಕೆರೆಯಲ್ಲಿ ನಡೆಯುವ ‘ಚಳ್ಳಕೇರಮ್ಮ’ಜಾತ್ರೆಗೆ ಮಾಂಗಲ್ಯ
ಚಳ್ಳಕೆರೆಯಲ್ಲಿ ನೆಲೆಸಿರುವ ಚಿತ್ರದುರ್ಗದ ಪಾಳೆಯಗಾರ ವಂಶಕ್ಕೆ ಸೇರಿದ ಪಿ.ಆರ್.
ವೀರಭದ್ರನಾಯಕ ಮನೆಯಿಂದ ಬರುತ್ತದೆ).
ಗುಡಿದುಂಬುವ ಮುಂಚೆ ಆಕೆಯ ಕೋಪದ ಶಮನಕ್ಕಾಗಿ ‘ಗಾವು ಮರಿ’ ಯನ್ನು ಈ ಪೋತರಾಜರು ಅದರ
ಗಂಟಲಿಗೇ ಬಾಯಿಹಾಕಿ ಕಚ್ಚಿ ಕೊಲ್ಲುವ ಕಾಯಕ ಮಾಡುತ್ತಾರೆ. ಈ ಆಚರಣೆ ನಡೆಯುವಾಗ ಅವರು
‘ಹೋತ’ದ ರೀತಿಯಲ್ಲಿ ಅಲಂಕರಿಸಿಕೊಂಡಿರುತ್ತಾರೆ. ಕೆಲವು ದೇವಿ ಜಾತ್ರೆಗಳಲ್ಲಿ ‘ಗಾವು
ಸಿಗಿಯುವ’ ಆಚರಣೆ ನಡೆಯದಿದ್ದರೂ, ಈ ಪೋತನಾಯಕರು ಚಾವುಟಿ ಬೀಸುತ್ತಾ, ಪೌಳಿಗುಡಿಯ ಸುತ್ತ
ಸುತ್ತುತ್ತಾರೆ. ಇವರ ವೇಷ ಆಕರ್ಷಕವಾಗಿರುತ್ತದೆ.
ಮಾರಮ್ಮ
ಅಲೆಮಾರಿ ಪಶುಪಾಲಕರ ದೇವತೆ ಹನ್ನೆರಡು ಪೆಟ್ಟಿಗೆ ದೇವರುಗಳಲ್ಲೊಂದಾದ ‘ದಡ್ಲಮಾರಮ್ಮ’
ದನಗಳ ದೊಡ್ಡಿಯಲ್ಲಿ, ಅದೂ ದೇವರ ಎತ್ತುಗಳ ಕಾಲ ಗೊರಸಿನಲ್ಲಿ ಹುಟ್ಟಿದವಳು. ಪಶುಪಾಲಕ
ಮಾರಿಯರ ಸಂಬಂಧಗಳನ್ನು ಇದು ಸ್ಪಷ್ಟವಾಗಿ ಹೇಳುತ್ತದೆ. ಅಂದರೆ ಮಾರಿಗೆ ಪಶುಪಾಲಕರು ತವರು
ಮನೆಯವರು ಇದ್ದ ಹಾಗೆ ಎಂದಾಯಿತು. ಇಂಥ ಮಾರಿ ತನ್ನ ಗಂಡನಿಂದ ಅನ್ಯಾಯವಾಯಿತೆಂದು
ಉರಿದೆದ್ದಾಗ ಅವಳ ಸಹಾಯಕ್ಕೆ ನಿಂತವರು ತವರು ಸಂಬಂಧದ ಈ ಮ್ಯಾಸಬೇಡರೇ. ಹೀಗಾಗಿ
ಬೇಡರಲ್ಲಿ ಮಾರಿಗೆ ಬೆಂಗಾವಲ ಪಡೆಯಂತೆ ರೂಪುಗೊಂಡ ಜನವರ್ಗವೇ– ಪೋತನಾಯಕರು.
ಮಾರಿಹಬ್ಬದ ಸಂದರ್ಭದಲ್ಲಿ ಇವರ ಪ್ರಧಾನವಾದ ಕಲಸವೆಂದರೆ ‘ಗಾವು ಸಿಗಿಯುವುದು’. ಈ
ಸಂದರ್ಭದಲ್ಲಿ ಹೋತದ ರೀತಿಯಲ್ಲಿ ಮುಖವನ್ನು ಅಲಂಕರಿಸಿಕೊಂಡು, ಹೋತವನ್ನೇ ಸಿಗಿಯುವುದು?
‘ಗಾವುಮರಿ’ ಅಚ್ಚ ಕಪ್ಪು ಅಥವಾ ಬಿಳಿಯ ಬಣ್ಣದ ‘ಹೋತ ಮರಿ’ (ಗಂಡು ಆಡುಮರಿ). ಇದರ
ಗಂಟಲನ್ನು ಹಲ್ಲುಗಳಿಂದಲೇ ಕಚ್ಚಿ– ಕಚ್ಚಿ ಅದರ ರಕ್ತ– ಮಾಂಸಗಳನ್ನು ಕುಡಿದು– ತಿನ್ನುವ
ಭೀಕರವಾದ ಪ್ರಕ್ರಿಯೆಯೇ– ‘ಗಾವು ಸಿಗಿಯುವುದು’.
ಈ ಸಂದರ್ಭದಲ್ಲಿ ಹೋತದ ರೀತಿಯಲ್ಲಿ ಮುಖವನ್ನು ಅಲಂಕರಿಸಿಕೊಂಡು, ಹೋತವನ್ನೇ
ಸಿಗಿಯುವುದರಿಂದ ಇವರಿಗೆ ಪೋತನಾಯಕರು ಎಂಬ ಹೆಸರು ಬಂದಿರಬೇಕು. ಹಿಂದಿನ ಕಾಲದಲ್ಲಿ ಆನೆ,
ಒಂಟೆ, ಕೋಣ, ಹಂದಿಗಳನ್ನು ‘ಗಾವು ಮರಿ’ಯಾಗಿ ಬಳಸುತ್ತಿದ್ದರಂತೆ. ಮಾರಿ ಹಬ್ಬದ ಉಳಿದ
‘ಬಲಿ’ ಪ್ರಕ್ರಿಯಗಳನ್ನು ಪೂರೈಸುವವನು ಮ್ಯಾಸಬೇಡ ಮೂಲದ ತಳವಾರ ನಾಯಕ. ಆದರೆ ಈ ಬಲಿ
ಪ್ರಕ್ರಿಯೆಗಳಲ್ಲಿ ಕೃಷಿಯ ಫಲವತ್ತತೆಗಾಗಿ, ಪಶುಸಂಪತ್ತಿನ ಅಭಿವೃದ್ಧಿಗಾಗಿ ನಡೆಸುವ
ಆಚರಣೆಗಳಂತೆ ಕಾಣುತ್ತದೆ.
ಬಲಿಯ ನಂತರ ಚೆಲ್ಲುವ ‘ಸರಗ’(ಚರಗ)ದ ರಕ್ತಬೆರೆತ ಅನ್ನ ಕೃಷಿಮಾತೆ ಭೂತಾಯಿಯ ತಣಿವಿಗೇ
ನಡೆಸಿದ ಆಚರಣೆಯಂತೆ ಕಾಣುತ್ತದೆ. ಭೂ ಶಾಂತಿಯ ಈ ಪ್ರಕ್ರಿಯೆ ಬಹುಶಃ ಪಶುಪಾಲಕರು
ಕೃಷಿಯತ್ತ ಹೊರಳಿದಾಗ ರೂಪುಗೊಂಡಿರಬೇಕು. ಈ ಬಗೆಯ ಪೋತನಾಯಕರನ್ನು ಇನ್ನೊಂದು ಪಶುಪಾಲಕ
ಬುಡಕಟ್ಟಾದ ಕಾಡುಗೊಲ್ಲರಲ್ಲೂ ಕಾಣಬಹುದು. ಮಾರಿಯ ಆರಾಧನೆಗೇ ತಮ್ಮನ್ನು ತೆತ್ತುಕೊಂಡ
ಉಪ್ಪಾರ (ಮೇಲುಸಕ್ಕರೆಯವರು)ರಲ್ಲೂ ಇದು ಕಂಡು ಬರುತ್ತದೆ.
ಗಾವುಗಳಲ್ಲಿ ಎರಡು ಬಗೆ; ನೆಲಗಾವು(ಅಂದರೆ ಗಾವು ಮರಿಯನ್ನು ನೆಲದ ಮೇಲೆ ಅಂಗಾತ
ಮಲಗಿಸಿ ಚೂರಿಯಿಂದ ಕತ್ತು ಕೊಯ್ಯುವುದು. ಈ ಬಗೆಯ ಬಲಿ ಅಪರೂಪ. ಇದು ವಾಸೆಯನ್ನು
ಹೋಲುತ್ತದೆ), ಎದ್ದಗಾವು– ಅಂದರೆ ಈ ಬಲಿಕ್ರಿಯೆಯನ್ನು ನಿಂತುಕೊಂಡೇ ತನ್ನ ಹಲ್ಲುಗಳಿಂದ
ಗಾವು ಮರಿಯ ಗಂಟಲು ಸಿಗಿಯಬೇಕು. ಇದನ್ನು ‘ನಿಂತ ಗಾವು’ಎಂದೂ ಕರೆಯುತ್ತಾರೆ.
ಪೋತರಾಜರು ‘ಒಂದೊತ್ತು’(ಕೇವಲ ಹಣ್ಣಿನ ಫಲಹಾರ ಮಾಡಿಕೊಂಡು) ಇದ್ದು, ಹೊಳೆಗೆ ಹೋಗಿ
ಗಂಗಾಪೂಜೆ ಮಾಡಿ ಅಲ್ಲಿಯೇ ಪೋತರಾಜರ ವೇಷ ಧರಿಸಿಕೊಳ್ಳುತ್ತಾರೆ. ಒಂಭತ್ತು
ಸಂಖ್ಯೆಯಲ್ಲಿರುವ ರುದ್ರಾಕ್ಷಿ ಸರ ಕೊರಳನ್ನು ಅಲಂಕರಿಸಿರುತ್ತದೆ. ಬರೀ ಮೈಯಲ್ಲಿರುವ
ಇವರು ಮೊಣಕಾಲಿನವರೆಗೂ ಇರುವ ಬರ್ಮುಡಾ ರೀತಿಯ ನಿಕ್ಕರ್ ಧರಿಸಿರುತ್ತಾರೆ. ಅದನ್ನು
‘ಸೆಳ್ಳ’ ಎಂದು ಕರೆಯುತ್ತಾರೆ. ತಲೆಗೆ ಬಿಳಿಯ ಪೇಟ ಕಟ್ಟಿರುತ್ತಾರೆ. ಕೈಯಲ್ಲಿ ಐದಾರು
ಅಡಿ ಉದ್ದದ ಚಾವಟಿ ಹಿಡಿದಿರುತ್ತಾರೆ. ಆಗಾಗ್ಗೆ ಅದನ್ನು ‘ಛಟೀರ್’ ಎಂದು ಸೆಳೆಯುತ್ತಾ
ಶಬ್ದ ಮಾಡುತ್ತಿರುತ್ತಾರೆ. ಕಾಲಿಗೆ ಸೆಲಿಗೆ ಧರಿಸಿ, ಸೊಂಟಕ್ಕೆ ಗಂಟೆಯ ಸರದ
ಚರ್ಮಪಟ್ಟಿಯನ್ನು ಕಟ್ಟಿ, ಮೈತುಂಬಾ ಅರಿಶಿನವನ್ನು ಪೂಸಿಕೊಂಡು, ಮುಖಕ್ಕೆ ಮಾತ್ರ ಹೋತನ
ಆಕಾರ ಕಾಣುವ ರೀತಿಯಲ್ಲಿ ಅರಿಶಿನ– ಕುಂಕುಮವನ್ನು ಬಳಿದುಕೊಳ್ಳುತ್ತಾರೆ. ‘ಗಿರಿಜಾ
ಮೀಸೆ’ ತಿರುವುತ್ತಿದ್ದರೆ ಪೋತರಾಜನ ಕಳೆ ವಿಜೃಂಭಿಸುತ್ತದೆ.
ಉರುಮೆ(ಅರೆ) ವಾದ್ಯದವರೊಂದಿಗೆ ಅಲ್ಲಿಂದಲೇ ಕುಣಿಯುತ್ತಾ, ಕೇಕೆ ಹಾಕುತ್ತಾ,
ವೀರನಾಟ್ಯ ಮಾಡುತ್ತಾ, ಎರಡೂ ಕೈಯಲ್ಲಿರುವ ಚಾವಟಿಗಳನ್ನು ಝಳಪಿಸುತ್ತಾ, ಮತ್ತೇರಿದಂತೆ
ಆರ್ಭಟಿಸುತ್ತಾ ಮಾರಿಗುಡಿಯ ಮುಂಭಾಗಕ್ಕೆ ಬಂದು ‘ಗಾವು ಸಭೆ’ ನಡೆಸುತ್ತಾರೆ. 20– 30
ಸಂಖ್ಯೆಯಲ್ಲಿರುವ ಪೋತನಾಯಕರ ಮುಖಂಡ ‘ಪೋತರಾಜ’ನಾಗಿ ಕುಳಿತು, ಗಾವು ಸಿಗಿಯಲು ನೆರೆದ
ಜನಗಳ ಅಪ್ಪಣೆ ಕೇಳುತ್ತಾನೆ. ಇವನ ಹಿಂದಿರುವ ಪೋತನಾಯಕರ ಪಡೆ ಬೇಗ ಅನುಮತಿ ಕೊಡುವಂತೆ
ಬೊಬ್ಬೆ ಹಾಕತೊಡಗುತ್ತದೆ.
ಜನ ಒಪ್ಪಿಗೆ ಕೊಟ್ಟ ನಂತರ ಮಾರಿಗುಡಿಯ ಮುಂದೆ ‘ಗಾವಿನ ಗುಂಡಿ’ ತೆಗೆಸಿ, ಅದಕ್ಕೆ
ಶಾಸ್ತ್ರೋಕ್ತವಾದ ರೀತಿಯಲ್ಲಿ ಪೂಜೆ ಮಾಡುತ್ತಾರೆ. ಮರಿ ಹೋತವನ್ನು ಗಾವಿನ ಗುಂಡಿಯ ಬಳಿ
ತಂದು ಮಂತ್ರ ಹಾಕುತ್ತಾರೆ. ಅದು ಸತ್ತ ಹಾಗೆ ನಿಸ್ತೇಜವಾಗುತ್ತಿದ್ದಂತೆ, ಜನರ ಸಿಳ್ಳು–
ಕೇಕೆ ಮುಗಿಲು ಮುಟ್ಟುತ್ತದೆ. ಪೋತರಾಜ ಗಾವಿನ ಮರಿಯನ್ನು ಎದೆಗೆ ಅವುಚಿಕೊಂಡು ಗಾವು
ಸಿಗಿಯಲು ಸಿದ್ಧನಾಗುತ್ತಾನೆ. ಇನ್ನಿಬ್ಬರು ಸಹಾಯಕ ಪೋತನಾಯಕರು ವೀರನಾಟ್ಯ ಮಾಡುತ್ತಾ
ಅಬ್ಬರಿಸುತ್ತಿರುವಂತೆ, ಗಾವು ಸಿಗಿದು ಅದರ ರಕ್ತ– ಮಾಂಸಗಳನ್ನು ಗಾವಿನ ಗುಂಡಿಗೆ
ಉಗಿಯುತ್ತಾನೆ. ರಕ್ತಸಿಕ್ತವಾದ ಪೋತರಾಜನ ಮೋರೆ ಭಯಾನಕವಾಗಿರುತ್ತದೆ.
ಕೊನೆಗೆ ಸತ್ತ ಗಾವಿನ ಮರಿಯ ತಲೆ ಕತ್ತರಿಸಿ ಗಾವಿನ ಗುಂಡಿಗೆ ಹಾಕುತ್ತಾರೆ. ಗಾವು
ಮರಿಯ ದೇಹವನ್ನು ಉರುಮೆ ಬಡಿಯುವವರಿಗೆ ಪೋತರಾಜರೇ ಕೊಟ್ಟು ಬಿಡುತ್ತಾರೆ. ತಮ್ಮ ಮೈಗೆ
ಮೆತ್ತಿಕೊಂಡ ಅರಶಿನ– ಕುಂಕುಮ ತೊಳೆದ ನೀರನ್ನು ಗಾವಿನ ಗುಂಡಿಗೆ ಹರಿಸಿ ಗುಂಡಿ ಮುಚ್ಚಿ
ಅನ್ನ– ಮೊಸರಿನ ಎಡೆ ಹಾಕಿ ಶಾಂತಿ ಮಾಡುತ್ತಾರೆ. ನಂತರ ‘ತಂಬು ಉಡುಗೊರೆ’ ಪಡೆದು
ಹೊರಡುತ್ತಾರೆ.
ಪೋತರಾಜರ ಮೂಲನೆಲೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲ್ಲೂಕಿನ ಆಕನೂರಿನಲ್ಲಿದೆ.
ಇಲ್ಲಿರುವ ಪೋತಲಿಂಗೇಶ್ವರ ದೇವಸ್ಥಾನದಲ್ಲಿ ಪೋತರಾಜರಾಗುವವರಿಗೆ ದೀಕ್ಷೆಯನ್ನು
ನೀಡಲಾಗುತ್ತದೆ. ಇದು ವಂಶಪಾರಂಪರ್ಯವಾಗಿ ಬರುವ ವೃತ್ತಿಯಾಗಿದ್ದು, ಹಿರಿಯರು ವಯಸ್ಸು
ಕಳೆಯುತ್ತಲೇ ತಮ್ಮ ಮಕ್ಕಳನ್ನು ಈ ಕಲೆಯಲ್ಲಿ ತಯಾರು ಮಾಡುತ್ತಾರೆ. ಅವರ ಮದುವೆಗೆ ಮುನ್ನ
ಈ ದೀಕ್ಷೆಯನ್ನು ಕೊಡಿಸುತ್ತಾರೆ. ಮದುವೆಯ ನಂತರ ಈ ದೀಕ್ಷೆಯನ್ನು ಕೊಡುವುದಿಲ್ಲ. ನಂತರ
ಇವರು ಮದುವೆಯೂ ಆಗಬಹುದು. ಈ ದೀಕ್ಷೆಯನ್ನು ನೀಡುವವರು ಆಶ್ಚರ್ಯಕರವೆಂಬಂತೆ– ‘ಐನೋರು’.
ತಲೆಯ ಮೇಲೆ ಉಕ್ಕಿನ ಚಾವಟಿ ಇಟ್ಟು ಅದರಿಂದಲೇ ಬೆನ್ನಿಗೆ ಮೂರು ಏಟು ಮುಟ್ಟಿಸುತ್ತಲೇ
‘ಮುದ್ರೆ’ಯಾಯಿತು ಎನ್ನುತ್ತಾರೆ. ಕೈಗೆ ‘ಮುದ್ರೆ ಸೆಲಿಗೆ’ ತೊಡಿಸುತ್ತಾರೆ, ಇದನ್ನು
ತೆಗೆಯುವಂತಿಲ್ಲ. ಅದು ದೀಕ್ಷೆಯಾದವರಿಗೆ (ಹೆಣ್ಣಿಗೆ) ತಾಳಿ ಇದ್ದಂತೆ. ಈ
ದೀಕ್ಷೆಯಾಗುವಾಗ ಇವರು ಕಾಲಿಗೆ ‘ಸುತ್ತು’ (ಮಿಂಚು) ಧರಿಸುವುದಿಲ್ಲ. ಹೆಣ್ಣು ಮಕ್ಕಳು
ಪೋತರಾಜನ ಪೋಷಾಕನ್ನು ಮುಟ್ಟುವಂತಿಲ್ಲ. ಇವರೇ ಮುಟ್ಟಿದರೂ ಕೈ– ಕಾಲು ಮುಖ ತೊಳೆದೇ
ಮುಟ್ಟಬೇಕು.
ಪೋತರಾಜನ ದೀಕ್ಷೆ ಕೊಟ್ಟ ದಿನವೇ ಇವರಿಗೆ ‘ಜೋಳಿಗೆ’ಯನ್ನು ಹಾಕುತ್ತಾರೆ. ಅದೇ ದಿನ
‘ಪೋತಲಿಂಗೇಶ್ವರನ ಭಿಕ್ಷೆ’ ಎಂದು ಭಿಕ್ಷೆ ಎತ್ತಿ ತಂದು ಗುಂಡಿಯ ಮುಂದೆ ಸುರಿಯಬೇಕು. ಈ
ಜೋಳಿಗೆ ಹಾಕಿ ಭಿಕ್ಷೆ ಎತ್ತಿ ಜೀವನವನ್ನು ಮಾಡಬಹುದು. ಹಾಗೆ ಮಾಡುವವರು ವರ್ಷಕ್ಕೆ
ಒಮ್ಮೆಯಾದರೂ (ಯುಗಾದಿಯ ದಿನ) ಭಿಕ್ಷಾಟನೆ ಮಾಡಲೇಬೇಕು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ