ಸೋಮವಾರ, ಮೇ 27, 2013

ಹಾವುಗಳೇ ಕಚ್ಚದಿರಿ

ರಹಮತ್ ತರೀಕೆರೆ

ರಾಜ್ಯಮಟ್ಟದ ಪತ್ರಿಕೆಗಳ ಜಿಲ್ಲಾ ಎಡಿಶನ್‌ನಲ್ಲಿ ಕಾಣಸಿಗುವ ಒಂದು ಸುದ್ದಿ ನನ್ನನ್ನು ಸದಾ ಕಾಡುತ್ತದೆ. ಅದೆಂದರೆ ಅಪರಾಧ ಸುದ್ದಿ. ಕೆಲವು ಪತ್ರಿಕೆಗಳು ಈ ಶೀರ್ಷಿಕೆಯನ್ನು ಕೆಂಪಕ್ಷರಗಳಲ್ಲಿ ಮುದ್ರಿಸಿ, ಅದರ ಕೆಳಗೆ ವರದಿ ಪ್ರಕಟಿಸುತ್ತವೆ. ಅಲ್ಲಿ ಅನೇಕ ನಮೂನೆಯ ಸುದ್ದಿಗಳು ಇರುತ್ತವೆ: ಬೈಕುಗಳ್ಳರ ಬಂಧನ, ಸರಗಳ್ಳನ ಸೆರೆ, ಕದವೊಡೆದು ಮನೆ ದರೋಡೆ, ದಂಪತಿಗಳ ಭೀಕರಕೊಲೆ, ಪ್ರಿಯಕರನೊಂದಿಗೆ ವಿವಾಹಿತ ಸ್ತ್ರೀ ಪರಾರಿ, ಮಣ್ಣುಗುಡ್ಡೆ ಕುಸಿದು ಕೆಲಸಗಾರನ ಜೀವಸಮಾಧಿ, ಎರಡು ಗುಂಪುಗಳ ನಡುವೆ ಮಾರಾಮಾರಿ, ಬಣವೆಗೆ ಬೆಂಕಿಯಿಟ್ಟಿದ್ದು, ಮಾರುತಿ ಕಾರು ರಾಜಹಂಸಕ್ಕೆ ಡಿಕ್ಕಿಹೊಡೆದು ನುಜ್ಜುಗುಜ್ಜು- ಇವು ಒಂದು ಮಾದರಿಯ ಸುದ್ದಿಗಳು. ಕುರಿಗಳಿಗೆ ಸಿಡಿಲು ಬಡಿದಿದ್ದು, ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿ ಸತ್ತಿದ್ದು, ಉಳುವ ರೈತನಿಗೆ ಕಾಡುಹಂದಿ ತಿವಿದಿದ್ದು, ಸೌದೆ ತರಲು ಹೋಗಿದ್ದವರ ಮೇಲೆ ಕರಡಿ ಹಲ್ಲೆ-ಇವು ಇನ್ನೊಂದು ಮಾದರಿಯ ಸುದ್ದಿಗಳು.
ಮೊದಲನೆಯವು ಮಾನನಿರ್ಮಿತ ಅಪರಾಧಗಳು. ಎರಡನೆಯವು ನಿಸರ್ಗ ಸೃಷ್ಟಿಸಿದ ದುರಂತಗಳು. ಪ್ರಶ್ನೆಯೆಂದರೆ ಎರಡನೇ ಮಾದರಿಯವು ‘ಅಪರಾಧ ಹೇಗಾಗುತ್ತವೆ? ಸಾವು ನೋವಿನ ಅಂಶವಿರುವುದರಿಂದಲೂ, ಪೋಲಿಸರು ಮಹಜರು ನಡೆಸುವ ಜರೂರಿ ಇರುವುದರಿಂದಲೂ ಇವು ‘ಅಪರಾಧ ಬಾತ್ಮಿಗಳಾಗಿರಬಹುದು. ಸಿಡಿಲಿನ ಮಳೆಯ ಘಟನೆಗಳಂತೂ ಮಾನವರ ಕೈಮೀರಿದ ದುರಂತಗಳು. ಆದರೆ ಉಳಿದವು ನೂರಕ್ಕೆ ನೂರರಷ್ಟು ಮನುಷ್ಯರ ನಿಯಂತ್ರಣದಾಚೆಗಿನ ದುರಂತಗಳೇನಲ್ಲ. ಅದರಲ್ಲೂ ಹಾವು ಕಚ್ಚಿ ಸಾಯುವ ಸುದ್ದಿಗಳು. ವ್ಯಂಗ್ಯವೆಂದರೆ, ಜನ ಹಾವನ್ನು ಚಚ್ಚಿ ಹಾಕಿದ್ದು ಸುದ್ದಿಯಾಗುವುದಿಲ್ಲ, ಅದು ಅಪರಾಧವೆಂದೂ ಅನಿಸುವುದಿಲ್ಲ. ಆದರೆ ಹಾವು ಜನರನ್ನು ಕಚ್ಚಿದ್ದು ಸುದ್ದಿಯಾಗುತ್ತದೆ ಮತ್ತು ಅಪರಾಧ ಸುದ್ದಿಯಾಗಿ ವರದಿಯಾಗುತ್ತದೆ.

ರಾಜ್ಯಸುದ್ದಿಯ ಮಟ್ಟಕ್ಕೇರದೆ ಎರಡನೇ ಪುಟದ ಸ್ಥಳಿಯ ಸುದ್ದಿಗಳಾಗಿಯೆ ಪ್ರಕಟವಾಗುವ ಇವನ್ನು, ಸಾಮಾನ್ಯವಾಗಿ ಬೆಳಗಿನ ಗಡಿಬಿಡಿಯಲ್ಲಿ ನಾವು ಓದಿ ಅಥವಾ ಬೈಪಾಸು ಮಾಡಿ, ರಾಜ್ಯ ಮತ್ತು ರಾಷ್ಟ್ರದ ಸುದ್ದಿಗಳಿಗೆ ಹೋಗಲು ತವಕಿಸುತ್ತಿರುತ್ತೇವೆ. ಹೀಗಾಗಿ ಇವು ನಿರ್ಲಕ್ಷಿತ ಸುದ್ದಿಗಳಾಗಿಯೇ ಉಳಿದುಬಿಡುತ್ತವೆ. ಆದರೆ ಪ್ರತಿ ಜಿಲ್ಲೆಯಲ್ಲಿ ಇಷ್ಟೊಂದು ಜನ ಹಾವು ಕಡಿದು ಸಾಯುತ್ತಾರೆಂದ ಮೇಲೆ, ಒಟ್ಟು ಕರ್ನಾಟಕದಲ್ಲಿ ಎಷ್ಟು ಜನ ಹೀಗೆ ಸತ್ತಿರಬಹುದು? ಪ್ರತಿ ವರ್ಷಕ್ಕೆ ಭಾರತದಲ್ಲಿ ಹಾವುಕಚ್ಚಿ ಸಾಯುವ ಜನರ ಸಂಖ್ಯೆ ೫೦ ಸಾವಿರವಂತೆ.

ಬಳ್ಳಾರಿ ಜಿಲ್ಲೆಯಲ್ಲಿ ಹಾವು ಕಚ್ಚಿ ಜನ ಸತ್ತ ಸುದ್ದಿಯ ಒಂದು ನಮೂನೆ ಹೀಗಿದೆ:
"ಹಾವುಕಚ್ಚಿ ಇಬ್ಬರ ಸಾವು: ಬುಧವಾರ ರಾತ್ರಿ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವಕರು ಹಾವಿನ ಕಡಿತಕ್ಕೆ ತುತ್ತಾಗಿ ಸಾವನ್ನಪ್ಪಿದ್ದಾರೆ. ಕಂಪ್ಲಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ...ಹಳ್ಳಿಯಲ್ಲಿ ಮಲಗಿದ್ದ ಮಿನಗಿನಾಗ (೧೫) ಮತ್ತು ವೀರೇಶ (೧೯) ಎಂಬುವರು ಸಾವನ್ನಪ್ಪಿದರು. ಮಿನಗಿನಾಗನಿಗೆ ಗುಡಿಸಲಿನಲ್ಲಿ ಇದ್ದಾಗ ಹಾವು ಕಚ್ಚಿದರೆ, ವೀರೇಶನಿಗೆ ಹೊಲದಲ್ಲಿ ಕೆಲಸ ಮಾಡುವಾಗ ಹಾವು ಕಚ್ಚಿತ್ತು. ಮಿನಗಿನಾಗ ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ ಸಾವನ್ನಪ್ಪಿದರೆ, ವೀರೇಶ ಸ್ಥಳದಲ್ಲಿಯೇ ಸಾವನಪ್ಪಿದ ಎಂದು ಪೋಲಿಸ್ ಮೂಲಗಳು ತಿಳಿಸಿವೆ.

ಇದೊಂದು ಮಾಮೂಲಿ ಎಂಬಂತೆ ಬರೆಹದಲ್ಲಿ ನಿರ್ಲಿಪ್ತತೆಯಿದೆ. ದಿನಾ ಕೊಲ್ಲುವ ಮತ್ತು ಸಾಯುವ ಈ ಸುದ್ದಿಯನ್ನು ಬರೆಬರೆದು ಬಹುಶಃ ಸ್ಥಳೀಯ ಪತ್ರಕರ್ತರೂ ದಣಿದಿರಬೇಕು. ಯಾಕೆಂದರೆ, ಈ ಹಾವುಗಳು ಸ್ಕೂಲಿಗೆ ಹೋಗಿದ್ದ ಮಗುವಿಗೆ, ಮನೆಯಲ್ಲಿ ಮಲಗಿದ್ದವರಿಗೆ, (ಕೆಲವೊಮ್ಮೆ ಒಂದೇ ಮನೆಯಲ್ಲಿದ್ದ ಐದಾರು ಜನರಿಗೆ), ಕೋಳಿ ಇಟ್ಟಿರಬಹುದಾದ ಮೊಟ್ಟೆಯನ್ನು ತೆಗೆಯಲು ಬುಟ್ಟಿಯೊಳಗೆ ಕೈಹಾಕಿದ ಮುದುಕಿಗೆ, ಹುಲ್ಲುಕೊಯ್ಯಲು ಹೋದವರಿಗೆ, ರಾತ್ರಿ ಗದ್ದೆಗೆ ನೀರು ಕಟ್ಟಲು ಹೋದವರಿಗೆ, ಬೆಳೆ ಕೊಯ್ಯುವವರಿಗೆ ಕಚ್ಚುತ್ತಿರುತ್ತವೆ. ಹೀಗೆ ಕಚ್ಚಿಸಾಯಿಸುವಲ್ಲಿ ಅದು ಒಂದೊ ನಾಗರ ಇಲ್ಲವೇ ಕನ್ನಡಿ (ವೈಪರ್) ಹಾವಾಗಿರುತ್ತದೆ. ಬಳ್ಳಾರಿ ಜಿಲ್ಲೆಯ ಸ್ಥಳೀಯ ಸುದ್ದಿಗಳ ಪ್ರಕಾರ, ಅತಿಹೆಚ್ಚು ಜನರು ಹಾವಿನಿಂದ ಸತ್ತಿರುವುದು ಗದ್ದೆಯಲ್ಲಿ ಕೆಲಸ ಮಾಡುವಾಗ- ಅದೂ ರಾತ್ರಿಯಲ್ಲಿ. ಮೇಲ್ಕಾಣಿಸಿದ ಸುದ್ದಿಯ ವ್ಯಂಗ್ಯವೆಂದರೆ, ಹಾವಿನಿಂದ ಕಚ್ಚಿಸಿಕೊಂಡು ಮಡಿದ ಒಬ್ಬ ತರುಣ ಹೆಸರು ಮಿನಗಿನಾಗ ಎಂತಿರುವುದು.

ಈ ಸರ್ಪಕಚ್ಚಿ ಸಂಭವಿಸಿದ ಸಾವುಗಳಿಗೆ ನಿಜವಾದ ಕಾರಣವೇನು? ಹಾವುಗಳ ಜಾಗದಲ್ಲಿ ಜನರು ಹೋಗಿ ವಾಸವಾಗಿರುವುದೊ ಅಥವಾ ಹಾವುಗಳೇ ಜನರಿರುವ ಜಾಗಕ್ಕೆ ಹರಿದು ಬರುತ್ತಿರುವುದೊ? ಹಾವಿನಿಂದ ಕಚ್ಚಿಸಿಕೊಳ್ಳದಂತೆ ಎಚ್ಚರಿಕೆಯಿಂದ ಕೆಲಸ ಮಾಡಲು ಜನರಿಗೆ ಸಾಧ್ಯವಿಲ್ಲವೇ ಅಥವಾ ಕಚ್ಚಿದರೆ ಕೂಡಲೇ ಅವರನ್ನು ಬದುಕಿ ಉಳಿಸುವ ಆರೋಗ್ಯದ ಸೌಲಭ್ಯ ನಮ್ಮಲ್ಲಿಲ್ಲವೊ? ಮೊದಲನೆಯ ಎರಡು ಪರಿಸರಕ್ಕೆ ಸಂಬಂಧಪಟ್ಟ ಸವಾಲುಗಳು. ಮೂರನೆಯದರಲ್ಲಿ ಕೆಲಸ ಮಾಡುವ ಜನರ ಎಚ್ಚರಗೇಡಿತನದ ಆಯಾಮವೂ ಇದೆ. ಕೊನೆಯದು ಮಾತ್ರ ನಮ್ಮ ವ್ಯವಸ್ಥೆ ಕುರಿತ ಗಂಭೀರ ಪ್ರಶ್ನೆ.
ಗಂಭೀರ ಯಾಕೆಂದರೆ, ಹೆಚ್ಚಿನ ಪ್ರಸಂಗಗಳಲ್ಲಿ ಹಾವು ಕಡಿತಕ್ಕೆ ಒಳಗಾದವರು ಆಸ್ಪತ್ರೆ ತಲುಪುವ ಮುನ್ನ ದಾರಿಯಲ್ಲಿಯೇ ಕೊನೆಯುಸಿರು ಬಿಡುತ್ತಾರೆ; ಕೆಲವೊಮ್ಮೆ ಆಸ್ಪತ್ರೆಗೆ ಹೋದಾಗ ತುರ್ತು ಚಿಕಿತ್ಸೆ ಸಿಗದೆ ಸಾಯುತ್ತಾರೆ. ಆದ್ದರಿಂದ ‘ಅಪರಾಧ ಕಚ್ಚಿದ ಹಾವಿನದ್ದು ಹಾಗೂ ಕಚ್ಚಿಸಿಕೊಂಡ ಮನುಷ್ಯರದ್ದು ಮಾತ್ರಅಲ್ಲ; ಸರ್ಪದ ಹೊಡೆತಕ್ಕೆ ಸಿಕ್ಕವರನ್ನು ಉಳಿಸಿಕೊಳ್ಳಲಾಗದ್ದು. ಸಾವು ನೈಸರ್ಗಿಕವಾಗಿ ಬರುವುದು ಅಪರಾಧವಲ್ಲ. ಆಕಸ್ಮಿಕವಾಗಿ ಮತ್ತು ನಡುವಂತರ ಬಂದಾಗ, ಅದನ್ನು ತಡೆಯುವ ಸಿದ್ಧತೆ ನಾಗರಿಕ ಸಮಾಜದಲ್ಲಿ ಇರದಿದ್ದರೆ ಅದು ಅಪರಾಧ. ಪಶ್ಚಿಮ ದೇಶಗಳಲ್ಲೂ ಜನರಿಗೆ ಹಾವು ಕಚ್ಚುತ್ತವೆ. ಆದರೆ ಅಲ್ಲಿ ಸಾಯುವವರ ಸಂಖ್ಯೆ ಕಡಿಮೆ. ಕಚ್ಚಿದರೂ ಉಳಿಸಿಕೊಳ್ಳುವ ವ್ಯವಸ್ಥೆ ನಮಗಿಂತ ಅಲ್ಲಿ ಚೆನ್ನಾಗಿದೆ. ಭೂಕಂಪವಾಗಲಿ, ನೆರೆಯಾಗಲಿ, ಸುನಾಮಿಯಾಗಲಿ, ಚಂಡಮಾರುತ ವಾಗಲಿ ಅಪ್ಪಳಿಸಿದಾಗಲೂ ಅಲ್ಲೂ ಸಾವುನೋವು ಸಂಭವಿಸುತ್ತವೆ. ಆದರೆ ಪ್ರಮಾಣ ಕಡಿಮೆ. ಲಾತೂರಿನಲ್ಲಿ ಹೆಚ್ಚು ಜನ ಸತ್ತಿದ್ದು ಭೂಕಂಪದಿಂದಲ್ಲ. ಅಲ್ಲಿನ ಮಣ್ಣಿನ ಮನೆಗಳ ರಚನೆಯಿಂದ. ಬಂಗಾಳ ಕೊಲ್ಲಿಯ ಚಂಡಮಾರುತಗಳು ಒರಿಸ್ಸಾ ಆಂಧ್ರಗಳಲ್ಲಿ ತಾಂಡವನೃತ್ಯ ಮಾಡಿದಾಗಲೂ ಹೀಗೇ ಆಗಿದೆ. ನಾಗರಿಕ ವ್ಯವಸ್ಥೆಯಿಂದ ಸಕಾಲಕ್ಕೆ ಜನರಿಗೆ ನೆರವು ಸಿಗದ ಕಾರಣದಿಂದ ಹೆಚ್ಚು ಜನ ಮರಣಿಸುತ್ತಾರೆ. ಕಣಿವೆಗೆ ಬಿದ್ದ ದನವಿರಲಿ, ನೆರೆಯಲ್ಲಿ ಕೊಚ್ಚಿಹೋಗುವ ವ್ಯಕ್ತಿಯಿರಲಿ, ಮನೆಗೆ ಬೆಂಕಿಬಿದ್ದಾಗ ಸಿಕ್ಕಿಕೊಂಡ ಮಗುವಿರಲಿ, ಯೂರೋಪು ಜಪಾನು ಅಮೆರಿಕ ದೇಶಗಳ ವ್ಯವಸ್ಥೆ ಒಂದು ಜೀವವುಳಿಸಲು ಎಷ್ಟು ಮುತುವರ್ಜಿ ವಹಿಸುತ್ತದೆ? ಇದು ಅಲ್ಲಿನ ವ್ಯವಸ್ಥೆ ತನ್ನ ಪ್ರಜೆಗಳಿಗೆ ಬದ್ಧವಾಗಿರುವುದರ ಸಂಕೇತ ಮಾತ್ರವಲ್ಲ. ಎಚ್ಚೆತ್ತ ನಾಗರಿಕ ಪ್ರಜ್ಞೆಯ ಸಮಾಜ ತನ್ನನ್ನು ಆಳುವ ವ್ಯವಸ್ಥೆಗಳನ್ನು ದಕ್ಷವಾಗಿ ಇಟ್ಟುಕೊಂಡಿರುವುದರ ಸಂಕೇತ ಕೂಡ.

ಆದರೆ, ಜನರು ಪಡುವ ಅನೇಕ ಸಂಕಟಗಳು ಅಪರಾಧದ ವರ್ತುಲದಲ್ಲಿ ಬರುವುದೇ ಇಲ್ಲ. ನಿದರ್ಶನಕ್ಕೆ ಉತ್ತರ ಕರ್ನಾಟಕದಲ್ಲಿ ಪ್ರವಾಹಕ್ಕೆ ಸಿಕ್ಕ ಜನರು ಈಗಲೂ ಶೆಡ್ಡುಜೀವಿಗಳಾಗಿ ಬದುಕುತ್ತಿರುವುದು; ಕ್ರಿಮಿನಾಶಕ ಕುಡಿದು ಸಾಯುವ ರೈತರು ಸಾಯುವುದು; ಭೂಪಾಲ ಅನಿಲದುರಂತದಲ್ಲಿ ೩೦ ವರ್ಷ ಕಳೆದರೂ ಪರಿಹಾರ ಸಿಗದಿರುವುದು; ನಮ್ಮ ಕರಾವಳಿ ಭಾಗದಲ್ಲಿ ಎಂಡೋಸಲ್ಫಾನ್ ಪೀಡಿತರು ತಮ್ಮದಲ್ಲದ ತಪ್ಪಿಗೆ ನರಳುತ್ತಲೇ ಇರುವುದು. ಭಾರತದ ನಂಜಿನ ಉದ್ಯಮಗಳು ಮಾಡಿರುವ ಅನಾಹುತಕ್ಕೆ ಹೋಲಿಸಿದರೆ, ಹೊಲ ಗದ್ದೆಗಳಲ್ಲಿರುವ ಹಾವುಗಳ ವಿಷ ಕೊಂದಿರುವುದು ಬಹಳ ಕಡಿಮೆ ಅನಿಸುತ್ತದೆ.

ಕನ್ನಡದಲ್ಲಿ ‘ಹಾವುಗಳೇ ಕಚ್ಚದಿರಿ ಎಂಬ ಕವನವೊಂದುಂಟು. ಬಹುಶಃ ಈ ಮಾತು ಹೇಳಬೇಕಾದುದು ಹಾವುಗಳಿಗಲ್ಲ; ವ್ಯವಸ್ಥೆಗೆ ಅಥವಾ ಅದನ್ನು ಹಾಗೆ ಹೊಣೆಗೇಡಿಯಾಗಿ ಇಟ್ಟಿರುವ ನಮಗೆ. ‘ಕೊಂದಹರೆಂಬದನರಿಯದೆ ಸರ್ಪ ತನ್ನನ್ನು ತುಳಿದ ಜನರನ್ನಷ್ಟೆ ಕಚ್ಚಿತು. ಅದರ ವಾಸಸ್ಥಾನ ಆಕ್ರಮಿಸಿಕೊಂಡು ಅದರ ಆಹಾರ ಸರಪಣಿಯನ್ನು ಭಗ್ನಪಡಿಸಿರುವ ನಾವು ಬದಲಾಗಿ ದಿಟದ ನಾಗರ ಕಂಡೊಡನೆ ಚಚ್ಚಿಕೊಲ್ಲುತ್ತಲೂ ಇದ್ದೇವೆ. ಈ ನಡುವೆ ಈ ಅಧಿಕಾರಸ್ಥರು, ಜನರಿಂದ ಆಯ್ಕೆಯಾದವರು, ರೈತರ ಹೊಲಗದ್ದೆಗಳನ್ನು, ಎಲ್ಲರಿಗೂ ಸೇರಬೇಕಾದ ನೀರು ಬೆಟ್ಟಗಳನ್ನು ಉದ್ಯಮಿಗಳಿಗೆ ಮಾರುವವರು, ಮಾಡುವ ಅಪರಾಧ ಸುದ್ದಿಯಾಗುವುದೇ ಇಲ್ಲ.

 ಹೈದರಾಬಾದ್ ಕರ್ನಾಟಕದಲ್ಲಿ ಈಗ ಜನರನ್ನು ಕೊಲ್ಲಲು ಹಾವುಗಳೇ ಬೇಕಿಲ್ಲ. ಡೆಂಗಿ ಸೊಳ್ಳೆಗಳೇ ಸಾಕು. ಕಳೆದ ಐದು ವರ್ಷಗಳಲ್ಲಿ ಈ ಭಾಗದಲ್ಲಿ ಡೆಂಗಿಜ್ವರದಿಂದ ಬಹಳ ಜನ ಸತ್ತರು. (ತಾವು ಬದುಕುವ ಪರಿಸರವನ್ನು ಚೊಕ್ಕವಾಗಿ ಇಟ್ಟುಕೊಳ್ಳಲಾಗದ ಜನರೂ ಇದಕ್ಕೆ ಕಾರಣ.) ಇದೆಲ್ಲ ಅಪರಾಧಗಳೆಂದು ದಾಖಲಾಗುವುದೇ ಇಲ್ಲ.
ನಮ್ಮ ದೇಶದಲ್ಲಿ ಜನರ ಜೀವದಷ್ಟು ಅಗ್ಗವಾದ ವಸ್ತು ಬಹುಶಃ ಬೇರೆ ಇರಲಿಕ್ಕಿಲ್ಲ. ಇಂತಹ ವಿಷಮ ವ್ಯವಸ್ಥೆಯಲ್ಲಿ, ಆತ್ಮರಕ್ಷಣೆಗಾಗಿ ಕಚ್ಚುವ ಹಾವುಗಳು ಘೋರ ಅಪರಾಧಿಗಳಾಗಿ ಬಿಂಬಿತವಾಗುವುದು ಸಹಜವೇ ಆಗಿದೆ.

ಕಾಮೆಂಟ್‌ಗಳಿಲ್ಲ: