ಶುಕ್ರವಾರ, ಮೇ 17, 2013

ವೈವಿಧ್ಯಮಯ ಜನಪದ ಶಿಲ್ಪಕಲೆ



 -

ಸೌಜನ್ಯ: ಕಣಜ


 ಲೋಹದ ಕುದುರೆ

ಆದಿಮ ಸ್ಥಿತಿಯಲ್ಲಿ ಕಾಡಿನಲ್ಲಿಯೇ ವಾಸವಾಗಿದ್ದ ಮಾನವ ತನ್ನ ಉದರ ಪೋಷಣೆಗೆ ಹಣ್ಣು- ಹಂಪಲು, ಗಡ್ಡೆ- ಗೆಣಸು ಮತ್ತು ಬೇಟೆಗೆ ದೊರೆತ ಪ್ರಾಣಿಗಳನ್ನು ಅವಲಂಬಿಸಿಕೊಂಡಿದ್ದಾಗ, ಕಲ್ಲು ಅವನ ಪ್ರಮುಖ ಆಯುಧವಾಗಿತ್ತು. ಪೃಕೃತಿಯ ಶಿಶುವಾಗಿ ಅದರ ಮಡಿಲಲ್ಲಿಯೇ ಬೆಳೆದರೂ ಮಿಂಚು, ಗುಡುಗು, ಸಿಡಿಲು, ಕಾಡ್ಗಿಚ್ಚು, ಭೂಕಂಪ, ನೆರೆ- ಪ್ರವಾಹ ಮುಂತಾದ ಪ್ರಾಕೃತಿಕ ವಿಕೋಪಗಳು ಅವನನ್ನು ತಲ್ಲಣಗೊಳಿಸುತ್ತಿದ್ದವು. ಇದರಿಂದ ನಿಸರ್ಗವನ್ನು ಕುರಿತಂತೆ ಭಯ- ಭಕ್ತಿ ಎರಡೂ ಅವನಲ್ಲಿ ಬೆಳೆದುಬಂದವು. ಅಂತೆಯೇ ಪ್ರಕೃತಿಯನ್ನು ನಾನಾ ರೀತಿಯಲ್ಲಿ ಆರಾಧಿಸತೊಡಗಿದನು.

ಅಲೆಮಾರಿಯಾಗಿದ್ದ ಮಾನವ, ಒಂದೆಡೆ ನೆಲೆ ನಿಂತು ಕೃಷಿ ಜೀವನವನ್ನು ಪ್ರಾರಂಭಿಸಿದಾಗ ಆಹಾರ ನೀಡುವ ಭೂಮಿ ತಾಯಿ ಅವನಿಗೆ ದೈವವಾಯಿತು; ಅದರಂತೆ ಕೃಷಿ ಕೆಲಸಕ್ಕೆ ಸಹಾಯಕವಾದ ಎತ್ತು ದೈವವಾಯಿತು. ಇಷ್ಟೇ ಅಲ್ಲ; ಹಿರಿಯರು ಸತ್ತಾಗ ಭಯದಿಂದ ಸಾಂಕೇತಿಕ ರೂಪದಲ್ಲಿ ಆ ಹಿರಿಯರ ಪೂಜೆ ಮಾಡತೊಡಗಿದನು. ಮೊದಲು ಒರಟುಕಲ್ಲು, ಮರದ ತುಂಡು, ಮಣ್ಣಿನ ಗುಪ್ಪೆ, ಹುತ್ತ, ಸಗಣಿಯ ಮುದ್ದೆಗಳನ್ನು ಪೂಜಿಸಿದ ಮಾನವ ಕ್ರಮೇಣ ಅವಕ್ಕೆಲ್ಲ ಒಂದು ಕಲಾತ್ಮಕ ರೂಪ ಕೊಡತೊಡಗಿದ. ಇದೇ ಜನಪದ ಮೂರ್ತಿಶಿಲ್ಪ ಕಲೆಗೆ ತಳಹದಿಯಾಯಿತು. ಈ ಕಲಾ ಪ್ರೇರಣೆಯೇ ಜೀವನದಲ್ಲಿ ಬಳಸುವ ಅಗತ್ಯ ವಸ್ತು ವಿಶೇಷಗಳಲ್ಲಿಯೂ ಕಲಾತ್ಮಕತೆಯನ್ನು ರೂಪಿಸುವ ಪ್ರಯತ್ನವನ್ನು ಮಾಡಿತು.

ಚಂದನದ ಗೊಂಬೆ

ಜನಪದ ಶಿಲ್ಪಕಲೆಯ ಉಗಮ- ಸ್ವರೂಪ- ವಿಕಾಸಗಳು ಶಿಷ್ಟ ಕಲೆಗಿಂತ ಭಿನ್ನವೇ. `ಕಲೆಗಾಗಿ ಕಲೆ’ ಎಂಬ ಮಾತನ್ನು ಜನಪದ ಕಲೆಗಳ ಸಂದರ್ಭದಲ್ಲಿ ಅನ್ವಯಿಸಲು ಸಾಧ್ಯವಿಲ್ಲ. ಜನಪದ ಜೀವನದ ಒಂದು ಅವಿಭಾಜ್ಯ ಅಂಗವಾಗಿಯೇ ಜನಪದ ಕಲೆ ಬೆಳೆದುಬಂದಿದೆ. ಮೊಗಳ್ಳಿಯವರು ಹೇಳಿರುವಂತೆ `ಜನಪದದಲ್ಲಿ ಕಲೆ ಎಂದರೆ ಜೀವನದ ಆಚರಣೆ, ಬದುಕಿನ ದಾಖಲೆ ಮತ್ತು ಆ ಮೂಲಕ ಮನುಷ್ಯ ಸಂವೇದನೆಗಳನ್ನು ವಿಸ್ತರಿಸಿಕೊಂಡು ಸುಖೀಸ್ಥಿತಿಗಾಗಿ ತವಕಿಸುವುದು’. (ಗಿರಿಜನ ಸಂಸ್ಕೃತಿ, 2002 ಪು.125)

ಜನಪದ ಶಿಲ್ಪಕಲೆಯನ್ನು ಕುರಿತಂತೆ ಜಾನಪದ ವಿಶ್ವಕೋಶದಲ್ಲಿ ಕೆಲವು ಲಕ್ಷಣಗಳನ್ನು ಗುರುತಿಸಲಾಗಿದೆ. ಅವುಗಳೆಂದರೆ;
1. ಜನಪದ ಸರಳ ಮನೋಭೂಮಿಕೆಗೆ, ಆರ್ಥಿಕ ಸ್ಥಿತಿಗೆ ಒಗ್ಗುವ ಸರಳತೆ ಜನಪದ ಶಿಲ್ಪಗಳ ಮುಖ್ಯ ಅಂಶ. ಸಾಮಗ್ರಿ, ತಂತ್ರ ಮತ್ತು ನಿರೂಪಣೆಯಲ್ಲಿ ಈ ಸರಳತೆ ಸ್ಪಷ್ಟವಾಗಿ ಕಾಣಿಸಿಕೊಳ್ಳುತ್ತದೆ. ಮಣ್ಣು, ಕಲ್ಲು, ಮರ, ಮರದ ಹೊಟ್ಟು, ಹಿತ್ತಾಳೆ ಮುಂತಾಗಿ ಆಯಾ ಪ್ರದೇಶಗಳಲ್ಲಿ ದೊರಕುವ ಸಾಮಗ್ರಿಗಳನ್ನಷ್ಟೇ ಶಿಲ್ಪಗಳ ತಯಾರಿಯಲ್ಲಿ ಬಳಸಲಾಗಿರುತ್ತದೆ. ಅತ್ಯಲಂಕರಣ ವಿಧಾನ, ಕ್ಲಿಷ್ಟ ತಂತ್ರಗಳು ಇದರಲ್ಲಿ ಇಲ್ಲ. ನಿರೂಪಣೆಯಲ್ಲಿ ಆಯಾ ಶಿಲ್ಪಗಳಿಗೆ ಸಂಬಂಧಿಸಿದ ಮುಖ್ಯ ಭಾವನೆಗಳ ಅಭಿವ್ಯಕ್ತಿ ಶಿಲ್ಪದ ಗುರಿಯಾಗುತ್ತದೆಯೇ ಹೊರತು ಯಥಾಸ್ಥಿತಿಯ ಸಮಗ್ರ ಪ್ರತಿ ರೂಪೀಕರಣ ಅಥವಾ ಅತಿಚತುರ ನಿರೂಪಣಾ ವಿಧಾನಗಳು ಇವುಗಳಲ್ಲಿ ಇರುವುದಿಲ್ಲ.
2. ಕಲೆಗಾಗಿ ಕಲೆ ಸೃಷ್ಟಿ ಮಾಡಬೇಕೆಂಬ ಉದ್ದೇಶ ಜನಪದ ಶಿಲ್ಪ ಸೃಷ್ಟಿಯಲ್ಲಿ ಇರುವುದಿಲ್ಲ. ಇಲ್ಲಿ ಶಿಲ್ಪಿಗಿಂತಲೂ ಶಿಲ್ಪವನ್ನು ಉಪಯೋಗಿಸುವವರ ದೃಷ್ಟಿ, ಅವಶ್ಯಕತೆಗಳೇ ಮುಖ್ಯವಾಗಿ ಪರಿಗಣಿಸಬೇಕಾದ ಅಂಶ. ಯಾರಿಗಾಗಿ ಕಲೆ ನಿರ್ಮಾಣವಾಗುತ್ತದೆಯೋ ಆ ಜನಪದವೇ ಜನಪದ ಶಿಲ್ಪದ ಜೀವಾಳ.
3. ಜನಪದ ಶಿಲ್ಪಗಳು ಕೇವಲ ಕಲಾಕೃತಿಗಳಾಗಿರದೆ ಯಾವುದೋ ಸಾಮಾಜಿಕ ಉದ್ದೇಶಗಳಿಗಾಗಿ (ಉದಾ: ಧರ್ಮ, ಮಾಟ, ವಿನೋದ) ರೂಪಿಸಲ್ಪಟ್ಟಿರುತ್ತದೆ. ಇಲ್ಲಿ ಕಲೆ ಪ್ರಯೋಜನಮೂಲವಾಗಿರುತ್ತದೆ.
4. ಜನಪದ ಶಿಲ್ಪಗಳಲ್ಲದಿದ್ದರೂ ಶಿಲ್ಪಸ್ವರೂಪಗಳೂ ಬಹುಕಾಲ ಮುಂದುವರಿಯುತ್ತಿರುತ್ತವೆ. ಸಂಪ್ರದಾಯಾತ್ಮಕ ಸಮೂಹಪ್ರಜ್ಞೆ ಇವುಗಳ ರಕ್ಷೆ. ನವಸೃಷ್ಟ್ಯಾತ್ಮಕ ವ್ಯಕ್ತಿ ಪ್ರಜ್ಞೆಗೆ ಇಲ್ಲಿ ಸಾಕಷ್ಟು ಸ್ಥಳವಿಲ್ಲ.
ಶಿಷ್ಟ ಕಲೆಗೆ ಹೋಲಿಸಿದರೆ, ಜನಪದ ಕಲೆ ಹೆಚ್ಚು ಸರಳವಾದುದು ಮತ್ತು ಮುಕ್ತವಾದುದು. ಸಹಜತೆ ಮತ್ತು ಮುಗ್ಧತೆಗಳೇ ಅದರ ಲಕ್ಷಣಗಳಾಗಿರುತ್ತವೆ. ಪ್ರಯೋಜನ ಮೂಲವಾಗಿರುವ ಈ ಕಲೆಯಲ್ಲಿ ಕ್ರಮೇಣ ಸೌಂದರ್ಯ ದೃಷ್ಟಿ ಮಿಳಿತಗೊಂಡಿದೆ. ಜನಪದ ಶಿಲ್ಪ ಕಲೆಯ ವಿನ್ಯಾಸದಲ್ಲಿ ಅದನ್ನು ಬಳಸುವವರ ಉದ್ದೇಶ ಮತ್ತು ಪ್ರಯೋಜನ ಮುಖ್ಯವಾಗುತ್ತದೆ.
ಜನಪದ ಕಲೆಗಳನ್ನು ಕುರಿತು ಆಳವಾಗಿ ಅಭ್ಯಾಸ ಮಾಡಿರುವ ಜೀ.ಶಂ. ಪರಮಶಿವಯ್ಯನವರು ಅವುಗಳನ್ನು ವಸ್ತು, ವರ್ಣ, ಪ್ರದರ್ಶನ, ನೃತ್ಯ, ಅಭಿನಯ ಹಾಗೂ ಗಾನಗಳ ಆಧಾರದ ಮೇಲೆ ಆರು ರೂಪಗಳಲ್ಲಿ ವಿಂಗಡಿಸಬಹುದೆಂದು ಅಭಿಪ್ರಾಯಪಟ್ಟಿರುತ್ತಾರೆ. ಇದರಲ್ಲಿ ವಸ್ತುರೂದ ಕಲೆ, ಜನಪದ ಶಿಲ್ಪ ಕಲೆಗೆ ಸಂಬಂಧಪಡುತ್ತದೆ. ಈ ಜನಪದ ಶಿಲ್ಪಕಲೆಯನ್ನು ವಾಸ್ತು ಶಿಲ್ಪ, ಮೂರ್ತಿ ಶಿಲ್ಪ ಮತ್ತು ಸಾಮಾನ್ಯ ಶಿಲ್ಪಗಳೆಂದು ಮತ್ತೆ ಮೂರು ವಿಧದಲ್ಲಿ ವರ್ಗೀಕರಿಸಬಹುದು.

ನಾಗರ ಕಲ್ಲು


`ಜನಪದ ವಾಸ್ತು ಶಿಲ್ಪ’ದಲ್ಲಿ ಊರು- ಕೇರಿ, ಹಟ್ಟಿ- ಗುಡಿಸಲುಗಳ ವೈವಿಧ್ಯ, ಮನೆ- ಮಠಗಳ ಸ್ವರೂಪ, ಕೋಟೆ-ಕೊತ್ತಲಗಳ, ಕೆರೆ- ಕೊಳಗಳ ನಿರ್ಮಾಣಗಳು, ಗುಡಿ- ದೇವಾಲಯಗಳ, ಹಿರಿಯರ ಗುತ್ತು (ಕೈಮಡ)ಗಳ, ದನಗಳ ಕೊಟ್ಟಿಗೆ, ಕಟ್ಟೆ- ಮಂಟಪಗಳ ನಿರ್ಮಾಣಗಳು ಇತ್ಯಾದಿ ಸೇರಿಕೊಳ್ಳುತ್ತವೆ. ಇವೆಲ್ಲವುಗಳ ಹಿಂದಿರುವ ಜನಪದ ತಂತ್ರಜ್ಞಾನ, ಪರಿಸರಸ್ನೇಹಿ ಕಟ್ಟಡ ನಿರ್ಮಾಣ, ಜನಪದರ ಸೌಂದರ್ಯ ಪ್ರಜ್ಞೆ ಮುಂತಾದವು ಸಾಕಷ್ಟು ಕುತೂಹಲಕಾರಿಯಾಗಿವೆ.
`ಜನಪದ ಮೂರ್ತಿಶಿಲ್ಪ’ ಭಾಗದಲ್ಲಿ ದೇವತಾಶಿಲ್ಪಗಳೊಂದಿಗೆ ಇತರ ಶಿಲ್ಪಗಳು, ಮುಖವಾಡಗಳು, ಸೋಮಗಳು, ಸಿಡಿಗಳು, ತೇರುಗಳು ಮುಂತಾದವು ಸೇರಿಕೊಳ್ಳುತ್ತವೆ. ಜನಪದ ನಂಬಿಕೆ ಮತ್ತು ಆಚರಣೆಗಳ ಒಂದು ಭಾಗವಾಗಿ ದೇವತೆಗಳ ಪೂಜೆ ಮತ್ತು ಉಳಿದ ವಸ್ತುಗಳು ಬಳಕೆಗೊಳ್ಳುತ್ತವೆ.

ಸಾಮಾನ್ಯ ಶಿಲ್ಪದಲ್ಲಿ ಮೂರ್ತಿಶಿಲ್ಪಗಳನ್ನು ಬಿಟ್ಟು, ಜನಪದ ಜೀವನದಲ್ಲಿ ಬಳಸುವ ಎಲ್ಲ ವಸ್ತು ವಿಶೇಷಗಳೂ ಸೇರ್ಪಡೆಯಾಗುತ್ತವೆ. ಇದರಲ್ಲಿ ಮುಖ್ಯವಾಗಿ ಪೂಜಾ ಸಾಮಗ್ರಿಗಳು, ಅಡುಗೆ ಮನೆಯ ಸಾಮಗ್ರಿಗಳು, ಮನೆ ಬಳಕೆಯ ವಸ್ತುಗಳು, ಆಟದ ಸಾಮಾನುಗಳು, ವ್ಯವಸಾಯ ಸಾಧನಗಳು, ಹೆಣಿಗೆಯ ಸಾಧನಗಳು ಹೀಗೆ ಜನಪದ ಭೌತಿಕ ಸಂಸ್ಕೃತಿಯ ಅನೇಕ ಕಲಾತ್ಮಕ ವಸ್ತುಗಳನ್ನು ಸೇರಿಸಬಹುದಾಗಿದೆ.

ಜನಪದ ಶಿಲ್ಪಗಳನ್ನು ಅವುಗಳ ರಚನೆಗಾಗಿ ಬಳಸುವ ಕಲ್ಲು, ಮರ, ಮಣ್ಣು, ಲೋಹ, ಸಗಣಿ, ಗಾದೆ ಮುಂತಾದ ಮಾಧ್ಯಮ ವಸ್ತುಗಳ ಮೇಲಿಂದಲೂ ವರ್ಗೀಕರಿಸಿ ಅಧ್ಯಯನ ಮಾಡಲು ಸಾಧ್ಯವಿದೆ.

ಜನಪದ ಶಿಲ್ಪ ಪ್ರಪಂಚ ವಿಸ್ತಾರವಾದುದು. ಜನಪದ ಮೂರ್ತಿ ಶಿಲ್ಪಗಳನ್ನು ಸಾಮಾನ್ಯವಾಗಿ ಕಲ್ಲು, ಮಣ್ಣು, ಮರ, ಲೋಹ, ಗಾರೆ, ಸಗಣಿಗಳಲ್ಲಿ ನಿರ್ಮಿಸಲಾಗುತ್ತದೆ. ಈ ಮೂರ್ತಿಶಿಲ್ಪಗಳು ಬಿಡಿ- ಬಿಡಿಯಾಗಿಯೂ ಇರುತ್ತವೆ; ಕೆಲವೊಮ್ಮೆ ದೇವಾಲಯ, ಮತ್ತಿತರ ಕಟ್ಟಡಗಳ ಭಿತ್ತಿಶಿಲ್ಪವಾಗಿಯೂ ರಚನೆಗೊಂಡಿರುತ್ತವೆ. ಜನಪದ ದೈವಗಳಿಗೆ ಆರಂಭದಲ್ಲಿ ಒಂದು ನಿರ್ದಿಷ್ಟ ಆಕಾರವಿರಲಿಲ್ಲ. ಆಯಾ ದೈವದ ಬಗೆಗಿನ ಕಲ್ಪನೆ ಬೆಳೆಯುತ್ತ ಬಂದಂತೆ ಅವು ಸ್ಪಷ್ಟರೂಪವನ್ನು ಪಡೆಯತೊಡಗಿದವು.
ಒಂದೊಂದು ಫಲಾಪೇಕ್ಷೆಗೆ ಒಂದೊಂದು ದೈವವನ್ನು ಜನಪದರು ಸೃಷ್ಟಿಸಿಕೊಂಡಂತೆ ತೋರುತ್ತದೆ. ಸಂತಾನಫಲಕ್ಕಾಗಿ ಎಲ್ಲಮ್ಮನನ್ನು, ಮಳೆ- ಬೆಳೆಗಾಗಿ ದ್ಯಾಮವ್ವನನ್ನು, ರೋಗ-ರುಜಿನಗಳ ನಿವಾರಣೆಗೆ ಮಾರೆಮ್ಮನನ್ನು, ಊರಿನ ರಕ್ಷಣೆಗಾಗಿ ಚೌಡಮ್ಮನನ್ನು, ಸುಖ- ಸಂಪತ್ತಿಗಾಗಿ ದುರ್ಗಮ್ಮನನ್ನು, ಕಷ್ಟಗಳ ನಿವಾರಣೆಗಾಗಿ ಕಾಳಮ್ಮನನ್ನು, ಮಕ್ಕಳ ಪಾಲನೆಗಾಗಿ ಪಾಲಕಮ್ಮನನ್ನು, ಸಕಲಪೀಡೆಗಳಿಂದ ಪಾರಾಗಲು ಹನುಮಂತನನ್ನು ಸ್ಥಾಪಿಸಿ ಪೂಜಿಸುವ ಸಂಪ್ರದಾಯ ಜನಪದರಲ್ಲಿ ಬೆಳೆದುಬಂದಿದೆ.

ಜೊತೆಗೆ ಕಲ್ಲು, ಮರ ಅಥವಾ ಮತ್ತಾವುದೇ ಮಾಧ್ಯಮದ ಆಯ್ಕೆಯಿಂದ ಹಿಡಿದು ಅವುಗಳ ಮೂರ್ತಿಯನ್ನು ರೂಪಿಸಿ ಪೂಜಿಸುವವರೆಗೂ ಜೊತೆ ಜೊತೆಯಲ್ಲಿ ನಡೆಯುವ ಆಚರಣೆಗಳು ಜನಪದ ಶಿಲ್ಪ ಕುರಿತ ಅಧ್ಯಯನಕ್ಕೆ ಪೂರಕ ಮಾಹಿತಿಯನ್ನು ಒದಗಿಸುತ್ತವೆ. ಇಲ್ಲಿ ಈ ಕುರಿತ ಜನಪದರ ನಂಬಿಕೆಯ ಪಾತ್ರವೂ ಅದರ ಹಿಂದಿರುವ ಜನಪದ ಮನಸ್ಸೂ  ಮುಖ್ಯವಾಗುತ್ತದೆ.

ಕಲ್ಲು, ಮಣ್ಣು, ಮರದ ಮೂರ್ತಿಗಳು

ಸಾಮಾನ್ಯವಾಗಿ ಕಲ್ಲಿನಲ್ಲಿ ಹನುಮಂತ, ಬಸವಣ್ಣ, ಉಡಚಮ್ಮ, ದುರ್ಗಮ್ಮ, ಹುಲಿಗಮ್ಮ, ವೀರಭದ್ರರನ್ನಲ್ಲದೆ, ಆಯಾ ಊರಿನ `ಅಮ್ಮ’ನ ಹೆಸರಿನಲ್ಲಿ ಅಸಂಖ್ಯಾತ ಸ್ತ್ರೀ ಗ್ರಾಮದೇವತೆಗಳನ್ನು ನಿರ್ಮಿಸಲಾಗುತ್ತದೆ. ಕಲ್ಲು, ಶಾಶ್ವತತೆಯ ಸಂಕೇತವಾಗಿದ್ದು, ಬಹುಕಾಲ ಉಳಿಯಬೇಕೆಂಬ ಆಶಯ ಇಂಥ ಮೂರ್ತಿ ಶಿಲ್ಪಗಳ ನಿರ್ಮಿತಿಯ ಹಿಂದಿದೆ. ಪ್ರಾದೇಶಿಕ ಶೈಲಿಯನ್ನು ಒಳಗೊಂಡ ಈ ಶಿಲ್ಪಗಳು ಜನಪ್ರಿಯವೂ ಆಗಿದ್ದು, ಸುತ್ತ-ಮುತ್ತಲಿನ ಊರಿನವರೂ ನಡೆದುಕೊಳ್ಳುತ್ತಾರೆ. ಹನುಮನಾಳದ ಉಡಚಮ್ಮ, ಬಳ್ಳಾರಿ ದುರ್ಗಮ್ಮ, ಕುಕನೂರ ಮಹಾತಾಯಿ, ಉಚ್ಚಂಗಿ ಎಲ್ಲಮ್ಮ, ಶಿರಸಂಗಿ ಕಾಳಮ್ಮ ಮುಂತಾದ ಜನಪದ ದೇವತೆಗಳನ್ನು ಇಲ್ಲಿ ಹೆಸರಿಸಬಹುದು. ಕಲ್ಲಿನಲ್ಲಿ ದೇವರ ಮೂರ್ತಿಗಳಲ್ಲದೆ ತೇರು ಮತ್ತು ಮಂಟಪಗಳನ್ನೂ ನಿರ್ಮಿಸಲಾಗುತ್ತದೆ.

ಮರದಿಂದ ಎಲ್ಲಮ್ಮ, ಮಾರಮ್ಮ, ಕಾಳಮ್ಮ, ಪಾಲಕಮ್ಮ, ದ್ಯಾಮವ್ವ, ದುರ್ಗವ್ವ, ಚೌಡವ್ವ ಮತ್ತಿತರ ಜನಪದ ದೈವಗಳನ್ನು ರೂಪಿಸಲಾಗುತ್ತದೆ. ದೇವಿ, ಮರದ ಬೊಡ್ಡೆಯ ರೂಪದಲ್ಲಿರಬಹುದು ಅಥವಾ ಸ್ತ್ರೀ ರೂಪವನ್ನು ಹೊಂದಿರಬಹುದು. ಮರದ ವಿಗ್ರಹಗಳಿಗೆ ಅವು ಕೆಡದಂತೆ ದೇಶಿ ತಂತ್ರಜ್ಞಾನದಿಂದ ತಯಾರಿಸಿದ ಬಣ್ಣವನ್ನು ಹಚ್ಚಲಾಗುತ್ತದೆ. ದೈವಗಳಲ್ಲಿ ಸೌಮ್ಯ ಮತ್ತು ಉಗ್ರ ಸ್ವಭಾವದ ದೈವಗಳು ಇರುವುದರಿಂದ ಉಗ್ರ ಸ್ವಭಾವದ ದೈವಗಳಿಗೆ ಕಪ್ಪು, ಕೆಂಪು ಮತ್ತು ಹಳದಿ ಮುಂತಾಗಿ ಕಡುಬಣ್ಣಗಳ ಬಳಕೆ ಸಾಮಾನ್ಯ.

ಕಟ್ಟಿಗೆಯ ಮೂರ್ತಿಗಳನ್ನು ಸಾಮಾನ್ಯವಾಗಿ ಬಡಿಗೇರರು ತಯಾರು ಮಾಡುತ್ತಾರೆ. ಯಾವ ದೇವರ ಮೂರ್ತಿ ನಿರ್ಮಾಣಕ್ಕೆ ಯಾವ ಮರವನ್ನು ಯಾವಾಗ ಕಡಿದು ತರಬೇಕೆನ್ನುವುದು ಅವರಿಗೆ ಅನುಭವದಿಂದ ತಿಳಿದಿರುತ್ತದೆ. ಅಮವಾಸ್ಯೆ ಆದಿತ್ಯವಾರ ಬಂದಿದ್ದರೆ ಯಾವ ವಿಗ್ರಹಕ್ಕಾದರೂ ಮರ ಕಡಿದು ತರಲು ಅಡ್ಡಿಯಿಲ್ಲ. ಅದಿಲ್ಲವಾದರೆ ದೇವಿಯ ಶಿಲ್ಪ ನಿರ್ಮಾಣಕ್ಕೆ ಮಂಗಳವಾರ ಅಥವಾ ಶುಕ್ರವಾರ, ಹನುಮಂತನಿಗಾದರೆ ಶನಿವಾರ, ವೀರಭದ್ರನಿಗಾದರೆ ಸೋಮವಾರ.

ದೇವರ ಪ್ರಭಾವಳಿ

ಅಂದು ಸ್ನಾನ ಮಾಡಿ, ಶುಚಿರ್ಭೂತರಾಗಿ ಮಡಿಯುಟ್ಟು ಮರದ ಭಾಗ ಕಡಿದು ತಂದು ನೆರಳಿನಲ್ಲಿ ಒಣಗಿಸುವರು. ಗ್ರಾಮದೇವತೆಗಳ ಮೂರ್ತಿ ನಿರ್ಮಾಣಕ್ಕೆ ಬಸರಿ, ಆಲಗೌರಿ, ಮಡ್ಡಿ, ಮಳಗಿ, ಶ್ರೀಗಂಧ ಮುಂತಾದ ಮರಗಳ ಕಟ್ಟಿಗೆಗಳನ್ನು ವಿಶೇಷವಾಗಿ ಬಳಸುವರು. ಕೆಲವೊಮ್ಮೆ ಮಾವು, ಜಾಲಿ, ಹುಣಿಸೆ, ಬೇವಿನ ಮರಗಳನ್ನೂ ಬಳಸಿಕೊಳ್ಳುವುದುಂಟು. ಮೊದಲು ಬಾಚಿಯಿಂದ ಕೆತ್ತಿ ವಿಗ್ರಹದ ಅಸ್ಪಷ್ಟ ರಚನೆ ಮಾಡಿಕೊಂಡು, ನಂತರ ಸ್ಪಷ್ಟಗೊಳಿಸುತ್ತ ಶಿಲ್ಪವನ್ನು ನುಣುಪು ಮಾಡುತ್ತ ಹೋಗುವರು. ಶಿಲ್ಪಕ್ಕೆ ಯಾವುದೇ ಊನ ಒದಗದಂತೆ ಕುಲದೇವತೆ ಕಾಳಮ್ಮನನ್ನು ಬೇಡಿಕೊಳ್ಳುವರು.

ಜನಪದ ಮೂರ್ತಿ ಶಿಲ್ಪಗಳ ರಚನೆಗೆ ಹೆಚ್ಚಿನ ವೆಚ್ಚ ತಗಲದಿದ್ದರೂ ಸಾಂಪ್ರದಾಯಿಕವಾಗಿ ಕೆಲವು ದೇವತೆಗಳನ್ನು ಹೊಣೆಗಾರಿಕೆಯ ವ್ಯಕ್ತಿಗಳು ಮಾತ್ರ ಮಾಡಿಸಬಹುದಾಗಿದೆ. ಜನಪದದ ಪ್ರಮುಖ ಲಕ್ಷಣವಾದ ಸಮೂಹಪ್ರಜ್ಞೆ ಮತ್ತು ಸಮಷ್ಟಿ ಒಳಿತು ಇಂಥಲ್ಲಿ ಅಪ್ರಜ್ಞಾಪೂರ್ವಕವಾಗಿ ಕೆಲಸ ಮಾಡುತ್ತದೆ. ಈ ಹಿನ್ನೆಲೆಯಲ್ಲಿ ಮರಗಮ್ಮನನ್ನು ಊರಿನ ಕುಲಕರ್ಣಿ, ದ್ಯಾಮವ್ವನನ್ನು ಮಾಲಗೌಡರು, ಪಾಲಕಮ್ಮ, ಎಲ್ಲಮ್ಮ ದೇವತೆಗಳನ್ನು ತಳವಾರರು ಇಲ್ಲವೆ ಹರಕೆ ಹೊತ್ತವರು ಮಾಡಿಸಿಕೊಡುತ್ತಾರೆ.

ಕಟ್ಟಿಗೆಯಲ್ಲಿ ದೇವತೆಗಳ ಮೂರ್ತಿಶಿಲ್ಪಗಳ ರಚನೆಯಲ್ಲದೆ, ದೇವಾಲಯಕ್ಕೆ ಸಂಬಂಧಿಸಿದ ತೇರು, ಪಲ್ಲಕ್ಕಿ, ದೇವರ ವಾಹನಗಳು, ಪೀಠೋಕರಣಗಳು ಮುಂತಾದವನ್ನು ರಚಿಸುತ್ತಿದ್ದು, ಪ್ರತಿಯೊಂದು ವಸ್ತುವಿನ ಪಾವಿತ್ರ್ಯ, ಅದರ ಮಾಟ ಮತ್ತು ಆ ಕುರಿತು ಇರುವ ಆಚರಣೆಗಳು, ಪ್ರತ್ಯೇಕ ಅಧ್ಯಯನದ ವಸ್ತುಗಳಾಗುತ್ತವೆ. ಭಾರದ ಕಾರಣದಿಂದ, ಎಳೆಯಲು ಹಗುರವಾಗಲೆಂದು, ತೇರುಗಳನ್ನು ಕಲ್ಲಿಗಿಂತ ಹೆಚ್ಚಾಗಿ ಮರದಲ್ಲಿಯೇ ನಿರ್ಮಿಸಲಾಗುತ್ತಿದ್ದು, ಅದರ ಸ್ವರೂಪ ಹಾಗೂ ಕೆತ್ತನೆ ಜನಪದರ ಕಾಲ್ಪನಿಕ ಶಕ್ತಿಗೆ ಹಾಗೂ ಕಲಾಪ್ರಜ್ಞೆಗೆ ಒಂದು ದೊಡ್ಡ ನಿದರ್ಶನವೆನಿಸುತ್ತದೆ. ಕೊಡಗಿನಲ್ಲಿ ಹಿರಿಯರ ಸ್ಮಾರಕಗಳಾಗಿರುವ ಕೈಮಡಗಳನ್ನು ಮರದಿಂದ ಮಾಡಲಾಗುತ್ತದೆ.

ಕೆಲವು ಗ್ರಾಮದೇವತೆಗಳ ಗುಡಿಯಲ್ಲಿ ಮೂಲದೇವರಲ್ಲದೆ ಹಜಾರದಲ್ಲಿ ಬೃಹತ್ ಗಾತ್ರದ ಕಟ್ಟಿಗೆಯ ಅಥವಾ ಗಾರೆಯಿಂದ ಮಾಡಿದ ರಕ್ಷಕ ಮೂರ್ತಿಗಳು ಇರುತ್ತವೆ. ಅಳೀಸಂದ್ರದ ಕೋಡಿಯಮ್ಮ, ಬೆಳ್ಳೂರಿನ ದೊಡ್ಡಮ್ಮ ಮುಂತಾದ ದೇವಾಲಯಗಳಲ್ಲಿ ಇಟ್ಟಿರುವ, ಗಾರೆಯಿಂದ ಮಾಡಿದ ರಾಕ್ಷಸ ವಿಗ್ರಹಗಳು ಇಲ್ಲಿ ಉಲ್ಲೇಖಯೋಗ್ಯ. ದೇವತೆಗಳ ದೃಷ್ಟಿ ಪರಿಹಾರಾರ್ಥವಾಗಿ ಇವು ಅಸ್ತಿತ್ವಕ್ಕೆ ಬಂದಂತೆ ಊಹಿಸಲಾಗಿದೆ.

ಜನಪದರಿಗೆ ಮಣ್ಣೇ ಸರ್ವಸ್ವ. ಉದರಂಭರಣೆಗೆ ಅವಶ್ಯವಿರುವ ಆಹಾರ, ಭೂಮಿಯಿಂದಲೇ ಉತ್ಪತ್ತಿಯಾಗಬೇಕು. ಈ ಸತ್ಯವನ್ನು ಕಂಡುಕೊಂಡಿರುವ ಅವರು ಅವಕಾಶ ದೊರೆತಾಗಲೆಲ್ಲ ಮಣ್ಣು ಪೂಜೆಯನ್ನು ಮಾಡುತ್ತ ಬಂದಿದ್ದಾರೆ. ಜನಪದರ ವಾರ್ಷಿಕಾವರ್ತನ ಆಚರಣೆಯಲ್ಲಿ ಬರುವ ಹಬ್ಬಗಳನ್ನು ಅವಲೋಕಿಸಿದಾಗ ಎಲ್ಲದರಲ್ಲಿಯೂ ಒಂದಲ್ಲ ಒಂದು ಬಗೆಯಲ್ಲಿ, ಮಣ್ಣು ಪೂಜೆಗೆ ಪ್ರಾಮುಖ್ಯತೆ ನೀಡಿರುವುದು ತಿಳಿದುಬರುತ್ತದೆ. ಗೌರಮ್ಮ, ಸೀಗಮ್ಮ, ಜೋಕುಮಾರ, ಗಣಪತಿ, ಮಣ್ಣೆತ್ತು, ನಾಗಪ್ಪ, ಗುಳ್ಳವ್ವ, ಕಾಮಣ್ಣ ಮುಂತಾಗಿ ಅಂಥ ಮಣ್ಣಿನ ಮೂರ್ತಿಗಳ ಪಟ್ಟಿ ಮಾಡಬಹುದು.

ಗಣೇಶನ ಹಬ್ಬದಲ್ಲಿ ಪ್ರದರ್ಶನಕ್ಕೆ ಬಣ್ಣದ ದೊಡ್ಡ ಗಣಪತಿಯನ್ನು ಇಟ್ಟರೂ ಮುಖ್ಯ ಪೂಜೆ ಸಲ್ಲಿಸುವುದು ಬಣ್ಣವಿಲ್ಲದ ಮಣ್ಣಿನ ಸಣ್ಣ ಗಣಪನಿಗೇ. ಹೀಗಾಗಿ ಮಣ್ಣೇ ಜನಪದರ ಪ್ರಮುಖ ದೈವವೆನ್ನಬಹುದು. ಒಂದು ವರ್ಷದಲ್ಲಿ ಬರುವ ಎಲ್ಲ ಹಬ್ಬಗಳಲ್ಲಿ ಪೂಜಿಸುವ ಮೂರ್ತಿಗಳ ಮಣ್ಣನ್ನು ಪುನಃ ಹೊಲಕ್ಕೆ ಒಯ್ದು ಸೇರಿಸುವುದು ಸಂಪ್ರದಾಯ.

ಕೋಣನ ತಲೆ

ಸಾಮಾನ್ಯವಾಗಿ ಕಲ್ಲು, ಮಣ್ಣು, ಮರಗಳಿಂದ ಮೂರ್ತಿಗಳನ್ನು ಮಾಡಲಾಗುತ್ತಿದ್ದರೂ ಕೆಲವೊಮ್ಮೆ ಕಲ್ಲು ಅಥವಾ ಮರದ ದೇವರ ಮುಖಕ್ಕೆ ಲೋಹದ ಮುಖವಾಡ ಮಾಡಿಸುವುದುಂಟು. ಘತ್ತರಗಿ ಭಾಗಮ್ಮ, ಶಿರಸಿ ಮಾರಿಕಾಂಬಾ, ಚಂದ್ರಗುತ್ತಿ ಗುತ್ಯಮ್ಮರಿಗೆ ಬೆಳ್ಳಿಯ ಮುಖವಾಡ ಇರುವುದನ್ನು ಇಲ್ಲಿ ಸ್ಮರಿಸಬಹುದು. ಕೆಲವಡೆ ಮಾರೆಮ್ಮನನ್ನು ಹಿತ್ತಾಳೆಯ ಲೋಹದಿಂದ ಮಾಡಿರುತ್ತಾರೆ. ಕುದುರೆಯ ಮೇಲೆ ಕುಳಿತ ಲೋಹದ ಗಂಡುದೇವರನ್ನು ಬೀರೇದೇವರೆಂದು ತಿಳಿದು ಪೂಜಿಸಲಾಗುತ್ತದೆ.
ಈ ಮೇಲಿನ ಕಲ್ಲು, ಮರ, ಲೋಹ ಮುಂತಾದವುಗಳಲ್ಲಿ ರಚಿಸಿದ ವಿಗ್ರಹಗಳೊಂದಿಗೆ, ಸಗಣಿಯಿಂದಲೂ ದೇವರನ್ನು ಮಾಡಿ ಪೂಜಿಸುವುದನ್ನು ಇಲ್ಲಿ ಉಲ್ಲೇಖಿಸಬಹುದು. ದೀಪಾವಳಿ, ಹಟ್ಟಿಹಬ್ಬದಲ್ಲಿ ಸಗಣಿ ಉಂಡೆಗಳಿಗೆ ಕರ್ಕಿಪತ್ರಿ ಸಿಕ್ಕಿಸಿ, `ಹಟ್ಟೆವ್ವ’, `ಪಾಂಡವರು’ ಎಂದು ಮುಂತಾಗಿ ಹೆಸರಿಸಿ ಪೂಜಿಸಲಾಗುತ್ತದೆ. ಕಣದಲ್ಲಿ ಧಾನ್ಯದ ರಾಶಿ ಮಾಡಿದಾಗ, ರಾಶಿಯ ಮೇಲೆ ಸಗಣಿ ಉಂಡೆಯನ್ನಿಟ್ಟು ಅದಕ್ಕೆ ಎತ್ತಿನ ಬಾಲದ ಕೂದಲು ಮತ್ತು ಕರ್ಕಿ ಪತ್ರಿ ಸಿಕ್ಕಿಸಿ `ಬೂದಗ’ನೆಂದು ಪೂಜಿಸಲಾಗುತ್ತದೆ. ಗುರ್ಚಿ ಆಚರಣೆಯಲ್ಲಿಯೂ ಬೋರಲಾಗಿಟ್ಟ ಹಂಚಿನ ಮೇಲೆ ಸಗಣಿ ಮುದ್ದೆ, ಅದರ ಮೇಲೆ ಕರ್ಕಿ ಪತ್ರಿ ಸಿಕ್ಕಿಸಿ, ತಲೆಯ ಮೇಲೆ ಹಂಚನ್ನಿಟ್ಟುಕೊಂಡು ಹಾಡುತ್ತಾ, ಕುಣಿಯುತ್ತಾ ಊರ ತುಂಬ ತಿರುಗುತ್ತಾರೆ. `ಇಟ್ಟರೆ ಸಗಣಿಯಾದೆ, ತಟ್ಟಿದರೆ ಕುರುಳಾದೆ’ ಎಂಬ ಹಾಡಿನಂತೆ ಸಗಣಿ ಜನಪದರಿಗೆ ಬಹೂಪಯೋಗಿ ವಸ್ತುವಾಗಿದ್ದು, ಪೂಜನೀಯವೆನ್ನಿಸಿದೆ
.
ನಾಗಪ್ಪನನ್ನು ಹುತ್ತದ ರೂಪದಲ್ಲಿಯೂ ಪೂಜಿಸುತ್ತಾರೆ. ನಾಗರಪಂಚಮಿಯಂದು ಹುತ್ತಕ್ಕೆ ಹಾಲೆರೆದು ಹಂಗನೂಲು ತೊಡಿಸುತ್ತಾರೆ. ಹುತ್ತದ ಮಣ್ಣು ಚರ್ಮರೋಗಗಳಿಗೆ ಮದ್ದು ಎನ್ನಲಾಗುತ್ತದೆ.
ಮಾಂತ್ರಿಕ ವಿಧಿ ಕ್ರಿಯೆಗಳಲ್ಲಿ ಮಣ್ಣು, ಲೋಹ, ಮರ, ಕಲ್ಲುಗಳಿಂದಲ್ಲದೆ, ಪ್ರಾಣಿಗಳ ಎಲುಬುಗಳನ್ನು ಬಳಸಿ, ಗೊಂಬೆ, ಶಿಲ್ಪಗಳನ್ನು ತಯಾರಿಸುತ್ತಾರೆ.

ಹೀಗೆ ಜನಪದ ಆರಾಧ್ಯ ಮೂರ್ತಿಗಳ ಶಿಲ್ಪರಚನೆ ಸರಳವಾದುದು ಎಂದು ಅನ್ನಿಸಿದರೂ ಅವುಗಳೊಂದಿಗೆ ತಳುಕು ಹಾಕಿಕೊಂಡಿರುವ ನಂಬಿಕೆ ಮತ್ತು ಆಚರಣೆಗಳಿಂದ ಅವು ವಿಶಿಷ್ಟ ಮಹತ್ವ ಪಡೆದುಕೊಳ್ಳುತ್ತವೆ.
ಕಲೆಯನ್ನು ಜೀವನದ ಅವಿಭಾಜ್ಯ ಅಂಗವಾಗಿ ಸ್ವೀಕರಿಸಿರುವ ಜನಪದರು ತಮ್ಮ ದಿನನಿತ್ಯದ ಬಳಕೆಯ ವಸ್ತುಗಳಲ್ಲಿ ದೇಶಿ ತಂತ್ರಜ್ಞಾನದ ಗರಿಷ್ಠ ಪ್ರಯೋಜನದೊಂದಿಗೆ ತಮ್ಮ ಕಲಾವಂತಿಕೆಯನ್ನು ಪ್ರಕಟಪಡಿಸಿದ್ದಾರೆ. ಈ ಕಾರಣಕ್ಕಾಗಿಯೇ ಅಂಥ ವಸ್ತುಗಳನ್ನು ಶಿಲ್ಪಕಲೆಯ ವ್ಯಾಪ್ತಿಯಲ್ಲಿ ಸೇರಿಸಲಾಗುತ್ತಿದೆ. ಪೂಜಾ ಸಲಕರಣೆಗಳು, ವಿವಿಧ ವಿನ್ಯಾಸಗಳಲ್ಲಿ ಚಲನಶೀಲವಾಗಿ ಗೋಚರಿಸುವ ಕಲ್ಲಿನ ಮತ್ತು ಲೋಹದ ವಿಭೂತಿ ಕರಂಡಕಗಳು, ಲೋಭಾನೆ ತಟ್ಟೆಗಳು, ದೀಪಗಳು, ತೀರ್ಥದಗಿಂಡಿ, ಜಲಾರ್ಣಿಗಳು, ಪಂಚಾರತಿಗಳು ಮುಂತಾಗಿ ಹೆಸರಿಸಬಹುದು. ಹಿತ್ತಾಳೆಯ ಪಂಚಲೋಹದ ವಿವಿಧ ಬಗೆಯ ಕಾಲು (ಕಂಬ) ದೀಪಗಳು, ತೂಗು ದೀಪಗಳು, ಗಿಣಲುಗಳು, ಮಣ್ಣಿನ ಹಣತೆಗಳು- ಇವುಗಳ ಅಧ್ಯಯನವೇ ಒಂದು ಮಹಾಪ್ರಬಂಧವಾದೀತು.
ಆಯಾ ವಸ್ತುಗಳ ರಚನೆಯಲ್ಲಿರುವ ಪ್ರಯೋಜನ ದೃಷ್ಟಿಯ ತಂತ್ರಜ್ಞಾನ ಹಾಗೂ ಕಣ್ಣು ಮತ್ತು ಮನಸ್ಸಿಗೆ ಮುದ ನೀಡುವ ಸೌಂದರ್ಯದೃಷ್ಟಿ ಜನಪದರ ಬುದ್ಧಿ ಮತ್ತು ಭಾವನೆಗಳಿಗೆ ಹಿಡಿದ ಕನ್ನಡಿ ಎನ್ನಬಹುದು. ಜನಪದರು ಮನೆಯಲ್ಲಿ ಬಳಸುವ ಮಣ್ಣಿನ, ಕಲ್ಲಿನ, ಲೋಹದ ವಸ್ತುಗಳಲ್ಲಿಯೂ ಸಾಕಷ್ಟು ಕಲಾತ್ಮಕತೆಯನ್ನು ಗುರುತಿಸಬಹುದು.

ಮರದ ಗೃಹೋಪಯೋಗಿ ವಸ್ತುಗಳು

ಅಗಲಬಾಯಿಯ ಹರವಿಗಳು, ಪಚೇಲಿಗಳು, ಸಣ್ಣ ಮಡಕೆಗಳಾದ ಚಿಟಕಿಗಳು, ಅಡಕಲು ಗಡಿಗೆಗಳು, ಬಿಂದಿಗೆ, ಕೊಡಗಳು, ಹೂಜೆ, ಅಳಗ, ವಾಡೆಗಳು ಮುಂತಾದವು ಮಣ್ಣಿನ ವಸ್ತುಗಳ ಮೇಲಿನ ಕಚ್ಚು, ಮುದ್ರೆ, ಕುಂದಣಗಳು, ಚಿತ್ತಾಕರ್ಷಕವಾಗಿದ್ದು, ಕಸಬುಗಾರರ ಕಲಾವಂತಿಕೆಯನ್ನು ಮೆರೆಯುತ್ತವೆ.

ರೈತರು ಹೊಲಕ್ಕೆ ಒಯ್ಯುವ ತತ್ರಾಣಿಗಳಂತೂ ವಿಶಿಷ್ಟ ತಂತ್ರಾಂಶಗಳಿಂದ ರಚಿತವಾಗಿದ್ದು, ಹೆಗಲಲ್ಲಿ ಸಿಕ್ಕಿಸಿಕೊಂಡು ತಿರುಗಾಡುವ, ಬಳಕೆಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡೇ, ಚಪ್ಪಟೆಯಾಕಾರ ಹೊಂದಿವೆ. ಮಣ್ಣಿನ ಮಡಕೆ-ಕುಡಿಕೆ ಮತ್ತಿತರ ವಸ್ತುಗಳಲ್ಲಿ ಕಂಡುಬರುವ ವೈವಿಧ್ಯತೆಗೆ ಪ್ರಾದೇಶಿಕತೆಯೂ ಒಂದು ಕಾರಣವಾಗಿದ್ದು, ಆಯಾ ಪ್ರದೇಶಲ್ಲಿ ಜರುಗುತ್ತಿದ್ದ ಜಾತ್ರೆ- ಉತ್ಸವಗಳು ಇವುಗಳ ಪ್ರೋತ್ಸಾಹಕ್ಕೆ ಕಾರಣವಾಗಿದ್ದುವು. `ಗಡಿಗೆಗಳಲ್ಲಿ ಕುದಿಸಿದ ಆಹಾರ- ಪದಾರ್ಥ ಕೆಡದೆ ಉಳಿಯುತ್ತದೆ’. ಮತ್ತು `ಚಿಟಗಿಯಲ್ಲಿ ಹೆಪ್ಪು ಹಾಕಿದ ಮೊಸರು ಬಹಳ ರುಚಿ’ ಮುಂತಾದ ಅನುಭವದ ಮಾತುಗಳು ಜನತೆಯ ಗಡಿಗೆಗಳ ಬಳಕೆಗೆ ಪೋಷಕವಾಗಿದ್ದವು. ಲೋಹದ ಪಾ್ರ್ರಗಳು ಮಾರುಕಟ್ಟೆಗೆ ಬಂದ ಮೇಲೆ ಇವುಗಳ ಬಳಕೆ ಕಡಿಮೆಯಾಗಿದ್ದರೂ ಕುಂಭಕಲೆ ಈಗ ಅಲಂಕರಣ ಸಾಧನವಾಗಿ ಮತ್ತಷ್ಟು ಕಲಾತ್ಮಕಗೊಂಡು ಜನತೆಯನ್ನು ಆಕರ್ಷಿಸುತ್ತಿದೆ.

ಬಣ್ಣ- ಬಣ್ಣದ ಆಟಿಕೆಗಳ ನಿರ್ಮಾಣಕ್ಕೂ ಮೊದಲು ಮಣ್ಣನ್ನು ಬಳಸುತ್ತಿದ್ದರು. ಈಗ ಮರದ ಆಟಿಗೆಗಳು ಬಳಕೆಯಲ್ಲಿದ್ದು, ಚನ್ನಪಟ್ಟಣ ಮತ್ತು ಕಿನ್ಯಾಳದ ಗೊಂಬೆಗಳು ಪ್ರಸಿದ್ಧಿಯನ್ನು ಪಡೆದಿರುವುದನ್ನು ಇಲ್ಲಿ ಉಲ್ಲೇಖಿಸಬಹುದು. ಅದರಂತೆ ಮರದ ತೊಟ್ಟಿಲುಗಳಿಗಾಗಿ ಕಲಟಗಿ ಪ್ರಸಿದ್ಧವಾಗಿದೆ. ಜನಪದ ಶಿಲ್ಪಕಲೆಯ ದೇಶಿ ತಂತ್ರಜ್ಞಾನ, ಮಕ್ಕಳ ಬಳಕೆಯನ್ನು ಗಮನದಲ್ಲಿಟ್ಟುಕೊಂಡೇ ಇವುಗಳ ರಚನೆ, ಬಣ್ಣಗಾರಿಕೆ, ಮೊಳೆ ಇಲ್ಲದೆ ಜೋಡಿಸುವಿಕೆ ಮುಂತಾದವುಗಳಲ್ಲಿ ಹೊರಹೊಮ್ಮಿದೆ.
ಕಡಗೋಲು, ಸಟ್ಟುಗ, 
ಸಟ್ಟುಗದ ಎಸೆ(ಸ್ಟ್ಯಾಂಡ್)

ಮನೆ ಬಳಕೆಯ ವಸ್ತುಗಳಲ್ಲಿ ವಿಶಿಷ್ಟವೆನಿಸುವ ಕಾಲು ಮಣೆ, ತಾವಟಿಗೆ, ಕಡಗೋಲು, ಶಾವಿಗೆ ಒಳ್ಳು, ಚಕ್ಕುಲಿ ಮುಟ್ಟು, ಸಂಬಾರ ಬಟ್ಟಲು ಮುಂತಾದವುಗಳಲ್ಲಿ ತಂತ್ರಜ್ಞಾನ ಹಾಗೂ ಶಿಲ್ಪಕಲೆಯ ಸೊಬಗನ್ನು ಕೂಡಿಯೇ ಸವಿಯಬಹುದು.
ಕೃಷಿ ಉಪಕರಣಗಳಲ್ಲಿ ನೇಗಿಲು, ನೊಗ, ಕೂರಿಗೆ, ಕುಂಟೆ, ಸಡ್ಡೆ ಬಟ್ಟಲುಗಳಲ್ಲಿ ಕೃಷಿ ಕಾರ್ಯಕ್ಕೆ ಗರಿಷ್ಠ ಅನುಕೂಲತೆಯನ್ನು ಕಲ್ಪಿಸಿಕೊಂಡಿರುವುದರ ಜೊತೆಗೆ ಸಾಧ್ಯವಾದಷ್ಟು ಕಲಾತ್ಮಕತೆಯನ್ನೂ ರೂಢಿಸಿಕೊಳ್ಳಲಾಗಿದೆ. ಇದಕ್ಕೆ ಎತ್ತಿನ ಬಂಡಿಯೂ ಹೊರತಲ್ಲ. ಈ ವಸ್ತುಗಳು ರೈತನಿಗೆ ಪೂಜನೀಯವೂ ಆಗಿವೆ ಎಂಬುದು ಗಮನಾರ್ಹ. ಕೃಷಿ ಹಬ್ಬಗಳಲ್ಲಿ ಅವನು ಕೃಷಿಯ ಎಲ್ಲ ಉಪಕರಣಗಳನ್ನು ತೊಳೆದು ಪೂಜಿಸುತ್ತಾನೆ. ಆದುದರಿಂದ ಕೃಷಿ ಉಪಕರಣಗಳ ನಿರ್ಮಾಣದಲ್ಲಿ ಪ್ರಯೋಜನ ದೃಷ್ಟಿಯೊಂದಿಗೆ ಭಕ್ತಿ ಮತ್ತು ಸೌಂದರ್ಯದ ಅಂಶಗಳೂ ಮಿಳಿತವಾಗಿವೆ ಎಂಬುದನ್ನು ಲಕ್ಷಿಸಬೇಕು.

ಬಂಡಿಯ ಕಡಾಣಿ, ಕಡೆಗೂಟಗಳಂತಹ ಚಿಕ್ಕ ವಸ್ತುಗಳಲ್ಲಿಯೂ ಕಲಾ ಸೌಂದರ್ಯವನ್ನು ನಾವು ಗುರುತಿಸಬಹುದು. ಹಗ್ಗ, ಬಳ್ಳಿಗಳಿಂದ ಮಾಡಿದ ಅದೆಷ್ಟೋ ಕೃಷಿ ಉಪಯೋಗಿ ವಸ್ತುಗಳು ಸೂತ್ರಶಿಲ್ಪಕಲಾ ಪ್ರತಿಭೆಗೆ ದ್ಯೋತಕವಾಗಿವೆ. ಬೆತ್ತ, ಬಿದಿರುಗಳಿಂದ ಮಾಡಿದ ಗೃಹೋಪಯೋಗಿ ಹಾಗೂ ಕೃಷಿ ಸಲಕರಣೆಗಳೂ ಇಲ್ಲಿ ಉಲ್ಲೇಖಯೋಗ್ಯ. ಬೆತ್ತದ ಪೆಟ್ಟಿಗೆಗಳು, ತೊಟ್ಟಿಲುಗಳು, ಕುಕ್ಕೆ, ಬುಟ್ಟಿ, ಗೂಡೆ, ಮೊರ, ಸಾಣಿಗೆ ಮುಂತಾದವು ತಮ್ಮ ವಿಶಿಷ್ಟ ವಿನ್ಯಾಸಗಳಿಂದ ಹಾಗೂ ಹೆಣಿಕೆಗಳಿಂದ ನಮ್ಮ ಗಮನ ಸೆಳೆಯುತ್ತವೆ.

ಜೊತೆಗೆ ಮಗುವಿನ ಜನನದಿಂದ ಹಿಡಿದು, ಬಾಗಿನ ಮತ್ತಿತರ ಆಚರಣೆ- ಸಂಪ್ರದಾಯಗಳ ಸಂದರ್ಭದಲ್ಲಿ ಬೆತ್ತದ ವಸ್ತುಗಳಿಗೆ ವಿಶೇಷ ಮಹತ್ವ ಪ್ರಾಪ್ತವಾಗುತ್ತವೆ. ಆಟದ ಸಾಧನಗಳಲ್ಲಿ ಪಗಡೆಕಾಯಿಗಳು, ಚೆನ್ನೆಮಣೆ, ಬುಗುರಿ ಮುಂತಾದವು ಕೂಡ ತಮ್ಮ ಆಕಾರ- ಗಾತ್ರ, ವೈವಿಧ್ಯತೆಗಳಿಂದ ಬೆರಗುಗೊಳಿಸುತ್ತವೆ. ಅವುಗಳನ್ನು ಬಳಸುವ ಸೌಲಭ್ಯಗಳಿಂದ ವಂಚಿತಗೊಳಿಸದೇ ವೈವಿಧ್ಯಮಯ ವಿನ್ಯಾಸವನ್ನು ರೂಪಿಸಿರುವುದು ಮೆಚ್ಚುಗೆಯ ಅಂಶವಾಗುತ್ತದೆ.

ಜನಪದರಿಗೆ ತಾಂಬೂಲ ಒಂದು ಮುಖ್ಯ ವಸ್ತು. ನಿತ್ಯ ಬಳಕೆಯಾದಂತೆ, ಶುಭಸಂದರ್ಭದಲ್ಲಿಯೂ ಅದು ಬೇಕೇ ಬೇಕು. ಅಂತೆಯೇ ತಾಂಬೂಲ ವಸ್ತುಗಳನ್ನಿಡಲು ವಿವಿಧ ಬಗೆಯ ಹರಿವಾಣಗಳನ್ನು, ಪೆಟ್ಟಿಗೆಗಳನ್ನು  ವಿನ್ಯಾಸಗೊಳಿಸಿಕೊಂಡಿದ್ದಾರೆ. ಮರ, ಬೆತ್ತಗಳಿಂದ ಹಿಡಿದು, ಹಿತ್ತಾಳೆ, ತಾಮ್ರ ಮುಂತಾದ ಲೋಹಗಳಲ್ಲಿಯೂ ಕುಸುರಿ ಕೆತ್ತನೆಯೊಂದಿಗೆ ತಾಂಬೂಲ ಪೆಟ್ಟಿಗೆಗಳು ಕಣ್ಮನ ಸೆಳೆಯುತ್ತವೆ. ಸುಣ್ಣದಕಾಯಿ, ಡಬ್ಬಿಗಳ ರಚನೆಯಲ್ಲಿಯೂ ಕಲಾತ್ಮಕತೆ ಮೆರೆದಿದೆ. ಸುಣ್ಣದ ತೇವಾಂಶ ಹಾಳಾಗದಂತೆ ಸಣ್ಣ ಬಾಯಿಯ ಗುಂಡು ಡಬ್ಬಿಗಳ ತಂತ್ರಾಂಶ ನಮ್ಮನ್ನು ಬೆರಗುಗೊಳಿಸುವಂತಿದೆ.

ಅಡಕತ್ತರಿಗಳ ವಿಷಯಕ್ಕೂ ಇದೇ ಮಾತನ್ನು ಹೇಳಬಹುದು. ಅಡಕತ್ತರಿಗಳ ಮೇಲಿನ ಕುಸುರಿ ಕೆಲಸಗಳ ಕಲಾತ್ಮಕತೆಯನ್ನು ಉಲ್ಲೇಖಿಸದೇ ಇರಲು ಸಾಧ್ಯವಿಲ್ಲ. ಕುದುರೆ ಸವಾರರ, ಕತ್ತರಿಸಿದಾಗ ಗಂಡು- ಹೆಣ್ಣು ಪ್ರೇಮಿಗಳು ಪರಸ್ಪರ ಅಪ್ಪಿಕೊಳ್ಳುವ ತಂತ್ರ ವಿನ್ಯಾಸವನ್ನೊಳಗೊಂಡ ಅಡಕತ್ತರಿಗಳ ಪ್ರಯೋಗ ಬಳಕೆದಾರರಿಗೆ ವಿಶಿಷ್ಟ ಅನುಭವ ನೀಡುತ್ತದೆ.
ಕೆತ್ತನೆಯ ನೊಗ

ಅಡಿಯಿಂದ ಮುಡಿಯವರೆಗಿನ ಬಂಗಾರ, ಬೆಳ್ಳಿ ಲೋಹಗಳಲ್ಲಿ ಸಿದ್ಧಪಡಿಸಿದ ಜನಪದ ಆಭರಣಗಳ ವಿನ್ಯಾಸ, ವೈವಿಧ್ಯಗಳು ನಮ್ಮನ್ನು ಮುಗ್ಧಗೊಳಿಸುತ್ತವೆ. ಪಿಲ್ಲಿ, ಮೀನ, ಮುಂತಾದ ಕಾಲುಂಗುರಗಳಿಂದ ಹಿಡಿದು, ಕಾಲಂದುಗೆ, ಕಡಗ, ಸೊಂಟದ ಡಾಬು, ಗೆಜ್ಜೆ ಡಾಬು, ಕೈಬಳೆ, ಪಾಟಲಿ, ವಂಕಿ, ತೋಳಬಂದಿ, ಗುಂಡಿನಸರ, ಗೆಜ್ಜೆಟೀಕೆ, ಕಾಸಿನ ಸರ ಮುಂತಾದ ನಾನಾ ಬಗೆಯ ಸರಗಳೂ. ಓಲೆ, ಮೂಗುತಿಗಳೂ, ನಾಗರ, ಕೇದಿಗೆ ಇತ್ಯಾದಿ ತಲೆಯ ಆಭರಣಗಳೂ ಸೂಕ್ಷ್ಮ ಕಲಾಕುಸುರಿ ಕೆಲಸಗಳಿಂದ ನಮ್ಮ ಮನ ಸೆಳೆಯುತ್ತವೆ.

ಕಸದಿಂದ ರಸ ಎನ್ನುವಂತೆ ನಿರುಪಯುಕ್ತ ವಸ್ತುಗಳಿಂದ ತಯಾರಿಸಿದ ಕರಕೌಶಲ ವಸ್ತುಗಳು ಜನಪದರ ಕಲಾಭಿಜ್ಞತೆಗೆ ಸಾಕ್ಷಿಯಾಗುತ್ತವೆ. ಬೆತ್ತ, ಬಿದಿರು, ಹುಲ್ಲುಕಡ್ಡಿ, ಕಾಳುಗಳು, ಕಾಳಿನ ತೆನೆಗಳು, ಬೀಜಗಳು, ನಾರು- ಬೇರುಗಳು ಮುಂತಾದವನ್ನು ಬಳಸಿಕೊಂಡು ಜನಪದರು ತಯಾರಿಸುವ ವಸ್ತುಗಳು ನಿಜವಾಗಿಯೂ ಕಲಾದೃಷ್ಟಿಯಿಂದ ಬೆಲೆಯುಳ್ಳವಾಗಿವೆ.

ಗುಡಿ ಕೈಗಾರಿಕೆಗಳಲ್ಲಿ ಸಿದ್ಧಪಡಿಸುವ ಪ್ರತಿಯೊಂದು ವಸ್ತುವೂ ಒಂದು ಉತ್ತಮ ಕಲಾಕೃತಿಯಾಗಿದ್ದು, ಶಿಲ್ಪಕಲಾ ಸೌಂದರ್ಯದ ದೃಷ್ಟಿಯಿಂದ ಗಮನಿಸಲೇಬೇಕಾದವು. ಆಧುನಿಕ ಶಿಲ್ಪಕಲೆಯಲ್ಲಿ ತಂತ್ರಜ್ಞಾನದ ಮೂಲಕ ಒಂದೇ ವಸ್ತುವಿನ ಅಸಂಖ್ಯಾತ (ಇಚ್ಛಿಸಿದಷ್ಟು) ಪ್ರತಿರೂಪವನ್ನು ಸೃಷ್ಟಿಸಲು ಸಾಧ್ಯವಿದ್ದರೆ, ಜನಪದ ಶಿಲ್ಪಕಲೆಯಲ್ಲಿ ಪ್ರತಿಯೊಂದು ವಸ್ತುವೂ ಕರಕುಶಲತೆಯಿಂದ ನಿರ್ಮಿಸಿದ್ದು ಅನನ್ಯವಾಗಿರುತ್ತದೆ.
ಬಿದಿರಿನ ಘಂಟೆ (ಲೊಟ್ಟೆ)

ಜನಪದ ಶಿಲ್ಪಕಲೆಯ ಮಹತ್ವ ಅಡಗಿರುವುದೂ ಕೂಡ ಈ ಅಂಶದಲ್ಲಿಯೇ. ತೋರಿಕೆಗೆ ಒಂದೇ ರೀತಿ ಎಂಬಂತೆ ಕಾಣುವ ಮಡಕೆಗಳ ಸಾಲಿನಲ್ಲಿಯೂ ಪ್ರತಿಯೊಂದರಲ್ಲಿಯೂ ಸೂಕ್ಷ್ಮವಾಗಿರುವ ವ್ಯತ್ಯಾಸ ಅದರ ಅನನ್ಯತೆಯಾಗುತ್ತದೆ. ಈ ವೈವಿಧ್ಯತೆ ಜನಪದ ಕಲೆಯನ್ನು ಏಕತಾನತೆಯಿಂದ ಕಾಪಾಡಿ ಯಾವಾಗಲೂ ಜೀವಂತವಾಗಿ ಉಳಿಸುತ್ತದೆ. ಈ ಕಾರಣಕ್ಕಾಗಿ ಜನಪದ ಕಲಾಕಾರರ ಸಾಮಾಜಿಕ, ಆರ್ಥಿಕ ಸ್ಥಿತಿಯನ್ನು ಸುಧಾರಿಸಿ, ಅವರಲ್ಲಿರುವ ವಿಶಿಷ್ಟ ಕಲೆಗಳು ಅಳಿಯದಂತೆ ಉಳಿಸಿಕೊಳ್ಳಬೇಕೆನ್ನುವ ಅಭಿಪ್ರಾಯ ಕಲಾಪ್ರೇಮಿಗಳದ್ದು.

ಕಾಮೆಂಟ್‌ಗಳಿಲ್ಲ: