ಬುಧವಾರ, ಮೇ 22, 2013

ಕೇಳುವುದೇ ದೇವದಾಸಿಯರ ಕೂಗು

-ಸಿದ್ದಯ್ಯ ಹಿರೇಮಠ

   ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯ ದೇವದಾಸಿ ಮಹಿಳೆಯರ ವಿಮೋಚನಾ ಸಂಘದ ಜಿಲ್ಲಾ ಘಟಕದ ಸ್ಸಯೆಯರು ಬಳ್ಳಾರಿ ನಗರದಲ್ಲಿ ಮಂಗಳವಾರ  ಉಪವಾಸ ಸತ್ಯಾಗ್ರಹ ನಡೆಸಿದರು.ಅನೇಕ ವರ್ಷಗಳಿಂದ ರಾಜ್ಯದ ಅನೇಕ ಗ್ರಾಮೀಣ ಪ್ರದೇಶಗಳಲ್ಲಿ ರೂಢಿಯಲ್ಲಿದ್ದ ಅನಿಷ್ಟ ದೇವದಾಸಿ ಪದ್ಧತಿಯ ನಿರ್ಮೂಲನೆಗೆ ಸರ್ಕಾರ ಕ್ರಮ ಕೈಗೊಂಡಿದ್ದು, ರಾಜ್ಯದ ಕೆಲವು ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಈ ಪದ್ಧತಿ ಜಾರಿಯಲ್ಲಿದೆ. ಅನೇಕ ಅಮಾಯಕ ಬಾಲಕಿಯರನ್ನು ಈ ಪದ್ಧತಿಯಿಂದ ಸಂರಕ್ಷಿಸಬೇಕು, ಬಾಲ್ಯವಿವಾಹ, ಬಾಲಕಾರ್ಮಿಕ ಹಾಗೂ ಜೀತದಾಳು ಪದ್ಧತಿಯನ್ನು ನಿರ್ಮೂಲನೆ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು. 

    ಈ ಕುರಿತು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ಸಲ್ಲಿಸಿದ ಪ್ರತಿಭಟನಾಕಾರರು,  ಹಲವಾರು ವರ್ಷಗಳಿಂದಲೂ ದೇವದಾಸಿಯರ, ದಲಿತರ, ದುಡಿಯುವ ವರ್ಗಗಳ ಬೇಡಿಕೆ ಈಡೇರಿಕೆಗಾಗಿ ಹಾಗೂ ಸಮುದಾಯದ ಅಭಿವೃದ್ಧಿಯ ನಿಟ್ಟಿನಲ್ಲಿ ಅನೇಕ ಬಾರಿ ಹೋರಾಟ ನಡೆಸಿದರೂ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅವರು ಆರೋಪಿಸಿದರು.

ಬೇಡಿಕೆಗಳು: ದೇವದಾಸಿ ಮಹಿಳೆಯರಿಗೆ ಪ್ರತಿ ತಿಂಗಳೂ ನೀಡುವ ರೂ 400 ಮಾಸಿಕ ಸಹಾಯಧನವನ್ನು ರೂ 1500ಕ್ಕೆ ಹೆಚ್ಚಿಸಬೇಕು. ಬಜೆಟ್ ಮಂಡನೆ ವೇಳೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ದಲಿತ ಸಮುದಾಯಕ್ಕೆ ಮಂಜೂರು ಮಾಡುವ ಅನುದಾನವನ್ನೂ ಹೆಚ್ಚಿಸಬೇಕು.

ದಲಿತ ಸಮುದಾಯದ ಜನಸಂಖ್ಯೆಗೆ ಅನುಗುಣವಾಗಿ ಸಮುದಾಯದ ಅಭಿವೃದ್ಧಿಗೆ ಖರ್ಚು ಮಾಡುವುದನ್ನು ಖಾತರಿ ಪಡಿಸಬೇಕು. ದೇವದಾಸಿಯರಿಗೆ ಪುನರ್ವಸತಿ ಕಲ್ಪಿಸುವಂತೆ ವಸತಿ ಯೋಜನೆಗಳನ್ನು ಪುನರ್ ರೂಪಿಸಬೇಕು. ಈ ಯೋಜನೆಯಂತೆ ಕನಿಷ್ಠ 10 ಸೆಂಟ್ಸ್ ನಿವೇಶನ ನೀಡಿ, ಅದರಲ್ಲಿ 2.5 ಸೆಂಟ್ಸ್ ಸ್ಥಳದಲ್ಲಿ ಕನಿಷ್ಠ ರೂ 2 ಲಕ್ಷ ಬೆಲೆಯಲ್ಲಿ ವಸತಿ ವ್ಯವಸ್ಥೆ ಕಲ್ಪಿಸಿಕೊಡಬೇಕು. ಅರಣ್ಯ ಇಲಾಖೆ ನೆರವಿನೊಂದಿಗೆ ಉಳಿದ ನಿವೇಶನದಲ್ಲಿ ತೆಂಗಿನ ಸಸಿ, ಹಣ್ಣು- ಹಂಪಲು ಸಸಿಗಳನ್ನು ನೆಡುವ ವ್ಯವಸ್ಥೆ ಮಾಡಿಕೊಡಬೇಕು.

ಪಶು ಸಂಗೋಪನೆ ಹಾಗೂ ಮೀನು ಸಾಕಾಣಿಕೆಗೆ ಆಯಾ ಇಲಾಖೆಗಳಿಂದ ಅನುಕೂಲ ಮಾಡಿಕೊಡಬೇಕು. ಈ ವ್ಯವಸ್ಥೆಗಳನ್ನು ಶೇ 75ರ ಸಹಾಯಧನ ಹಾಗೂ 5 ವರ್ಷಗಳ ಬಡ್ಡಿರಹಿತ ಸಾಲ ಯೋಜನೆಯಡಿ ಮಾಡಿಕೊಡಬೇಕು. ಈಗಾಗಲೆ  ದೇವದಾಸಿಯರಿಗೆ ಹಾಗೂ ದಲಿತ ಸಮುದಾಯದವರಿಗೆ ನೀಡಿರುವ ಸಾಲವನ್ನು ಬರಗಾಲದ ಹಿನ್ನೆಲೆಯಲ್ಲಿ ಮನ್ನಾ ಮಾಡಬೇಕು. ಮಹಿಳೆಯರಿಗೆ ನೀಡುವ ಸಹಾಯಧನವನ್ನು ಸಾಲಕ್ಕೆ ಸೇರ್ಪಡೆ ಮಾಡುವುದನ್ನು ಕೂಡಲೇ ನಿಲ್ಲಿಸಬೇಕು.
ಎಲ್ಲ ದೇವದಾಸಿ ಮಹಿಳೆಯರು ಹಾಗೂ ಬಡ ದಲಿತ ಕುಟುಂಬಗಳಿಗೆ ಅಂತ್ಯೋದಯ ಮತ್ತು ಬಿಪಿಎಲ್ ಕಾರ್ಡ್ ವಿತರಿಸಬೇಕು. ಮಾಸಿಕ ಧಾನ್ಯ ವಿತರಣೆಯಲ್ಲಿ 35 ಕೆಜಿ ಅಕ್ಕಿ, 4 ಕೆಜಿ ಸಕ್ಕರೆ, ಬೇಳೆ ಹಾಗೂ ಅಡುಗೆ ಎಣ್ಣೆಯನ್ನು  ಪ್ರತಿ ಕೆಜಿಗೆ ರೂ 10ರಂತೆ ಒದಗಿಸಬೇಕು. ಖಾಸಗಿ ವಲಯದ ಉದ್ಯೋಗಗಳಲ್ಲಿ ಮೀಸಲು ನೀತಿ ಜಾರಿಗೊಳಿಸಬೇಕು.

ದಲಿತ, ನಿರುದ್ಯೋಗಿ ಯುವಕರಿಗೆ ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಸ್ವಯಂ ಉದ್ಯೋಗ ತರಬೇತಿ ಶಿಬಿರ ಆರಂಭಿಸಬೇಕು. ತಾಲ್ಲೂಕು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ವ್ಯಾಪಕವಾಗಿರುವ ಅಸ್ಪೃಶ್ಯತೆ ನೀತಿ ತಡೆಗಟ್ಟಬೇಕು. ಈ ನೀತಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಆಯಾ ಕೆಂದ್ರಗಳಲ್ಲಿ ನಿಯಂತ್ರಣಾ ಘಟಕ ಸ್ಥಾಪಿಸಬೇಕು. ಈ ತಾರತಮ್ಯ ನೀತಿ ಕುರಿತು ಜನತೆಯಲ್ಲಿ ಜಾಗೃತಿ ಮೂಡಿಸಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಲಾಯಿತು.

ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಅಡಿವೆಪ್ಪ, ಉಪಾಧ್ಯಕ್ಷರಾದ ಬಿ.ಮಾಳಮ್ಮ, ಕಾಗೆ ಕಲ್ಲವ್ವ, ಪದ್ಮಾವತಿ ಹರಪನಹಳ್ಳಿ, ಎಚ್.ಪದ್ಮಾ, ನಾಗರಾಜ್ ಕೊಪ್ಪಳ, ಸಂಘಟನಾ ಕಾರ್ಯದರ್ಶಿ ಟಿ.ವಿ. ರೇಣುಕಾ, ನಾಗರತ್ನಮ್ಮ, ಈರಮ್ಮ, ತಾಯಮ್ಮ, ಕರಿಯಮ್ಮ, ಹನುಮಕ್ಕ, ಬಾಬಮ್ಮ, ಗಂಗಮ್ಮ, ಪಕ್ಕೀರಮ್ಮ, ಹೊಳೆಮ್ಮ ಸೇರಿದಂತೆ ಜಿಲ್ಲೆಯ ಸಿರುಗುಪ್ಪ, ಕೂಡ್ಲಿಗಿ ಸೇರಿದಂತೆ ವಿವಿಧ ತಾಲ್ಲೂಕುಗಳಿಂದ ಆಗಮಿಸಿದ್ದ ನೂರಾರು ದೇವದಾಸಿ ಮಹಿಳೆಯರು ಪಾಲ್ಗೊಂಡಿದ್ದರು.

ಕಾಮೆಂಟ್‌ಗಳಿಲ್ಲ: