ಭಾನುವಾರ, ಮಾರ್ಚ್ 20, 2011

ಅರಣ್ಯವಾಸಿ ಜಾನಪದ: ಒಂದು ವಿಮರ್ಶಾತ್ಮಕ ಟಿಪ್ಪಣಿ
-ಅರುಣ್

ಮಾರ್ಚ ೧೮, ೧೯ ರಂದು ಹಂಪಿ ಕನ್ನಡ ವಿವಿಯಲ್ಲಿ ೩೭ ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನ ನಡೆಯಿತು. ಈ ಸಮ್ಮೇಳನದಲ್ಲಿ ಒಂದು ದಿನ (ಮಾ ೧೯) ನಾನು ಭಾಗವಹಿಸಿದ್ದೆ. ಅದರ ಒಂದು ವಿಮರ್ಶಾತ್ಮಕ ಟಿಪ್ಪಣಿ ಇದು. ಸಮ್ಮೇಳನ ಎನ್ನುವ ಪದದ ಜತೆಗಿನ ನಮ್ಮ ಕಲ್ಪನೆಗಳನ್ನು ಈ ಸಮ್ಮೇಳನದ ಜತೆ ತಾಳೆ ಹಾಕಿದರೆ ನಿರಾಸೆ ಹುಟ್ಟಿಸುವಂತಿತ್ತು. ವಿವಿ ಪ್ರವೇಶಿಸುತ್ತಿದ್ದಂತೆ ಸಮ್ಮೇಳನದ ಬ್ಯಾನರ್ ತುಂಬಾ ಬೇಸರದಿಂದ ಆಹ್ವಾನಿಸುವಂತಿತ್ತು. ವಿವಿಯ ಭುವನ ವಿಜಯದಲ್ಲಿ ಈ ಕಾರ್ಯಕ್ರಮವಿತ್ತು. ೫೦ ರ ಆಸುಪಾಸು ವಿದ್ಯಾರ್ಥಿಗಳು, ೮ ರ ಸಂಖ್ಯೆ ದಾಟದ ಅಧ್ಯಾಪಕರು, ಸಭೆಯಲ್ಲಿ ನಾಲ್ಕು ಜನ ಭಾಷಣ ಮಂಡಿಸುವ ವಿದ್ವಾಂಸರು ಇದ್ದರು. ನಾನು ಭುವನ ವಿಜಯಕ್ಕೆ ಬೇಟಿಕೊಟ್ಟಾಗ ಪನ್ನಂಗಧರ ಅವರು ಬುಡಕಟ್ಟುಗಳ ಸಾಹಿತ್ಯದ ಬಗ್ಗೆ ಮಾತನಾಡುತ್ತಿದ್ದರು. ನಂತರ ಗಂಗಾಧರ ದೈವಜ್ಞ ಬುಡಕಟ್ಟುಗಳ ಆಹಾರ ಪದ್ದತಿ ಕುರಿತಂತೆ ಮಾತನಾಡಿದರು. ಈ ಮಾತುಗಳಲ್ಲಿ ಹೊಸ ನೋಟಗಳು ಇರದೆ, ಕೇವಲ ಮಾಹಿತಿಯ ಮಂಡನೆಯಂತಿದ್ದವು. ದಾರವಾಡ ವಿವಿಯ ವಿದ್ಯಾರ್ಥಿ ಮಿತ್ರರು ತಪ್ಪು ತಪ್ಪು ನಿರೂಪಣೆ ಮಾಡುತ್ತಿದ್ದರು.

ನಂತರ ಶಾಲಿನಿ ರಘುನಾಥ ಅವರ ಅಧ್ಯಕ್ಷತೆಯಲ್ಲಿ ಮೊಗಳ್ಳಿ ಗಣೇಶ್ ಅವರು ಜಾನಪದ ಮತ್ತು ಆಧುನಿಕತೆ ಕುರಿತಂತೆ ಟಿಪ್ಪಣಿ ಮಂಡಿಸಿದರು. ಎಂದಿನಂತೆ ಅವರ ಅಖಂಡ ಭಾಷಣ ರಮ್ಯಲೋಕಗಳನ್ನು ಸ್ಪರ್ಶಿಸುವಂತಿತ್ತು. ಜಾನಪದ ಎಂ.ಎ ಓದುವಾಗ ಅವರು ಮಾಡುತ್ತಿದ್ದ ಪಾಠಗಳು ನನಗೆ ನೆನಪಾದವು. ಆದಿವಾಸಿ ಸಂವೇದನೆಯನ್ನು ಆಧುನಿಕತೆ ಭಗ್ನಗೊಳಿಸಿದೆ, ಈ ಭಗ್ನಗೊಳಿಸುವಿಕೆಯಿಂದಾಗಿ ಅವು ಆನಾಥಪ್ರಜ್ಞೆಯಲ್ಲಿ ಬದುಕು ದೂಡುತ್ತಿವೆ, ಎನ್ನುತ್ತಾ ಜಾನಪದ ಎಂದರೆ ಅದು ಎಲ್ಲಿಯಾದರೂ ಹುಟ್ಟಬಹುದು. ಸಾಪ್ಟವೇರ್ ಉದ್ಯಮದಲ್ಲೂ ಒಂದು ಬಗೆಯ ಜಾನಪದ ಹುಟ್ಟುತ್ತದೆ, ಇಂಟರ್ ನೆಟ್‌ನಲ್ಲೂ ಪೋಕ್‌ಲೋರ್‌ನ ಅಂಶಗಳಿವೆ ಎಂದು ಜಾನಪದದ ವ್ಯಾಖ್ಯಾನವನ್ನು ತುಂಬಾ ವಿಸ್ತರಿಸಿ, ಕೆಲವು ಒಳನೋಟದ ಮಾತುಗಳನ್ನಾಡಿದರು.

ಮೆಗಾ ನರೇಟಿವ್ಸ ಚಿಂತನೆಯನ್ನು ಬಿಟ್ಟು ಬಿಡಿ ಬಿಡಿ ಘಟಕಗಳ ಮೂಲಕ ಅಖಂಡವನ್ನು ವ್ಯಾಖ್ಯಾನಿಸುವತ್ತ ಜಾಗತಿಕ ಚಿಂತನಾ ಮಾದರಿಗಳು ವಿಸ್ತರಿಸಿವೆ. ಕನ್ನಡದಲ್ಲೂ ಈ ಚಿಂತನೆ ಇದೆ. ಆದರೆ ಮೊಗಳ್ಳಿಯವರು ಇನ್ನೂ ಅಖಂಡತೆಯ ಕುರಿತು ಮಾತನಾಡುತ್ತ, ಕೆಲವೊಮ್ಮೆ ಅಪರೂಪದ ಒಳನೋಟಗಳನ್ನೂ, ಮಗದೊಮ್ಮೆ ಬೀಸುಹೇಳಿಕೆಗಳನ್ನೂ ಕೊಡುತ್ತಿದ್ದರು. ಇದನ್ನು ನೋಡಿದರೆ ಸಮಾಜದ ಬಿಡಿಬಿಡಿ ಘಟಕಗಳ ಬದಲಾದ ಸ್ಥಿತಿಯನ್ನು ತುಂಬಾ ಹತ್ತಿರದಿಂದ ನೋಡಲು ಮೊಗಳ್ಳಿಯವರಿಗೆ ಸಾಧ್ಯವಾಗುತ್ತಿಲ್ಲ ಅನ್ನಿಸುತ್ತದೆ. ಅಥವಾ ಅವರ ಬಾಲ್ಯದ ಅನುಭವದ ಕಣ್ಣುಗಳ ಮೂಲಕ ಈ ಕಾಲವನ್ನು ನೋಡುತ್ತಿರಬಹುದು. ಅವರ ಜಾನಪದ ಸಂಶೋಧನಾ ಕೃತಿಗಳೂ ಇದೇ ಕಾರಣಕ್ಕೆ ಕೇವಲ ಥಿಯರಿಯ ಭಾರದಿಂದ ನರಳುತ್ತವೆ. ಬಹುಶಃ ಮೊಗಳ್ಳಿಯವರು ಈ ಮಿತಿಯನ್ನು ಮೀರಲು ಸಾಧ್ಯವಾದರೆ, ಮತ್ತದೇ ಮಾತುಗಳು ಬೇರೆ ಬೇರೆ ವೇಷಗಳಲ್ಲಿ ಮರಳುವುದು ತಪ್ಪಬಹುದು.

ಮೊಗಳ್ಳಿಯವರ ಮಾತಿನ ನಂತರ ಸಂಶೋಧನ ವಿದ್ಯಾರ್ಥಿಗಳಿಂದ ಸಂವಾದ ಶುರುವಾಯಿತು. ಇಲ್ಲಿ ನನ್ನ ಮಾತುಗಳ ಮೂಲಕ ಸಂವಾದ ಆರಂಭವಾಯಿತು. ಕನ್ನಡದ ಜಾನಪದ ಅಧ್ಯಯನ ವಿಧಾನಗಳಲ್ಲಿ ತುಂಬಾ ಹಳೆಯ ಮಾದರಿ ಈಗಲೂ ಮುಂದುವರೆದಿದೆ, ಅರವತ್ತು ಎಪ್ಪತ್ತರ ದಶಕಗಳಲ್ಲಿ ಮಾತನಾಡಿದ ಕ್ಯಸೆಟ್ಟುಗಳನ್ನು ರಿವೈಂಡ್ ಮಾಡಿದಂತೆ ಬಹುಪಾಲು ಜಾನಪದ ವಿದ್ವಾಂಸರು ಮಾತನಾಡುತ್ತಾರೆ, ಮುಂತಾಗಿ ಹೇಳಿದೆ. ಜಾನಪದವನ್ನು ಚಳವಳಿಯ ಸಂಗತಿಯ ಭಾಗವಾಗಿ ಸಾಮಾಜಿಕ ಬದುಕಿನೊಂದಿಗೆ ಲಗತ್ತಿಸಬೇಕಿದೆ, ಜಾನಪದವನ್ನು ರಾಜಕೀಯ ಹಕ್ಕೊತ್ತಾಯದ ಸಂಗತಿಯನ್ನಾಗಿ ಮಾಡುವುದು ಇಂದಿನ ಅಗತ್ಯ ಎಂದು ಹೇಳುತ್ತಾ ಆಧುನಿಕತೆ ಮತ್ತು ಜಾನಪದ ಎಂದು ದಿನಗಟ್ಟಲೇ ಮಾತನಾಡುತ್ತಲೇ ಕೂರುವುದು ಕೇವಲ ಸೆಮಿನಾರಿನ ಸಂಗತಿಗಳಾಗುತ್ತವೆ. ಇಂತಹ ಮಾತುಗಳನ್ನೆ ಹಳಹಳಿಕೆಯಿಂದ ಮಾತನಾಡುತ್ತಲೇ ಇರಬೇಕಾಗುತ್ತದೆ ಎಂದೆಲ್ಲಾ ಕೊಂಕು ನುಡಿದೆ. ಇದು ಆಯೋಜಕರಿಗೆ ಇಷ್ಟವಾದಂತೆ ಕಾಣಲಿಲ್ಲ.ಅದಕ್ಕೆ ಮೊಗಳ್ಳಿಯವರು ಪ್ರತಿಕ್ರಿಯಿಸಿ ಹಿಂದೆ ಕನ್ನಡದಲ್ಲಿ ಜಾನಪದವನ್ನು ಚಳವಳಿಯ ಭಾಗವಾಗಿ ಬಳಸಿಕೊಳ್ಳಲಾಗಿದೆ ಎಂದು ಹೇಳುತ್ತಾ ವರ್ತಮಾನದಲ್ಲಿ ಅದರ ಮುಂದುವರಿಕೆ ಹೇಳದೆ ಮೌನವಾದರು. ನಂತರ ವಿಧ್ಯಾರ್ಥಿಗಳು ಜಾಗತೀಕರಣ ಮತ್ತು ಜಾನಪದದ ಮುಖಾಮುಖಿ ಬಗ್ಗೆ ಪ್ರಶ್ನೆ ಕೇಳುತ್ತಾ ಹೋದರು, ಅದಕ್ಕೆ ಮೊಗಳ್ಳಿಯವರು ಉತ್ತರಿಸುತ್ತಾ ಸಂವಾದ ಒಂದು ಹಂತದಲ್ಲಿ ತಾರಕಕ್ಕೇರಿ ಮುಗಿಯಿತು. ಆದರೆ ಯಾವ ವಿದ್ಯಾರ್ಥಿಗಳು ಅರಣ್ಯವಾಸಿಗಳ ಸಂಕಷ್ಟಗಳ ಬಗ್ಗೆಯಾಗಲಿ, ಅರಣ್ಯವಾಸಿಗಳ ಒಕ್ಕಲೆಬ್ಬಿಸಿ ಅತಂತ್ರ ಸ್ಥಿತಿಯಲ್ಲಿರುವಾಗ ಅವರ ಜಾನಪದದ ಬಗ್ಗೆ ಮಾತನಾಡುವುದರ ಹಿಂದಿರುವ ರಾಜಕೀಯ ಹಿತಾಸಕ್ತಿ ಯಾವುದಾಗಿರಬೇಕು ಎನ್ನುವುದನ್ನಾಗಲಿ ವಿದ್ಯಾರ್ಥಿಗಳು ಮಾತನಾಡಲಿಲ್ಲ. ಅಂದರೆ ಈ ಹೊತ್ತಿನ ವಿದ್ಯಾರ್ಥಿಗಳಿಗೆ ಸದ್ಯದ ರಾಜಕೀಯ ವರ್ತಮಾನದ ಪ್ರಜ್ಞೆಯನ್ನು ಬೆಳೆಸದಿರುವುದು ಇದರಿಂದ ತಿಳಿಯುತ್ತಿತ್ತು. ಇದರಲ್ಲಿ ಹುಡುಗಿಯರು ಸಕ್ರಿಯವಾಗಿ ಭಾಗವಹಿಸಿದ್ದು ಖುಷಿಯ ಸಂಗತಿ.

ನಂತರ ಶಾಲಿನಿ ಮೇಡಂ ಅವರು ಚುಟುಕಾಗಿ ಅಧ್ಯಕ್ಷೀಯ ಮಾತು ಮುಗಿಸಿದರು. ನಂತರ ಪ್ರೊ. ಕಾಳೇಗೌಡ ನಾಗವಾರ ಅವರು ಓತಪ್ರೋತವಾಗಿ ಮಾತಿನ ವಾಗ್ಝರಿಯನ್ನೇ ಹರಿಸಿದರು. ಅವರ ಮಾತಿಗೆ ಒಂದು ಕೇಂದ್ರವೆನ್ನುವುದು ಇರಲಿಲ್ಲ. ಮಾತುಗಳು ಎಲ್ಲೆಲ್ಲಿಗೋ ಹೋಗಿ, ಎಲ್ಲೆಲ್ಲಿಯೂ ಸುತ್ತಿ, ಎಲ್ಲೆಲ್ಲಿಗೋ ಮರಳಿದಂತಹ ಅನುಭವ ಕೇಳುಗರದು. ಜನಪದರು ಒಳುಉಡುಪುಗಳನ್ನು ಹಾಕುತ್ತಿರಲಿಲ್ಲ, ಅದು ಈ ಹೊತ್ತು ಚರ್ಚೆ ಆಗಬೇಕಾದ ವಿಷಯ ಎಂದು ಹೇಳಿ ಕೇಳುಗರಲ್ಲಿ ಮುಜುಗರ ಉಂಟುಮಾಡಿದರು. ಹೆಣ್ಣಿನ ಪಲವಂತಿಕೆಯ ಬಗ್ಗೆ, ಹೆಣ್ಣಿನ ಸೌಂದರ್ಯದ ಬಗ್ಗೆ, ಆಹಾರ ಪಾನೀಯದ ರುಚಿ, ಗಂಡು ಹೆಣ್ಣಿನ ಮಧುರ ಸಂಬಂಧ ಮುಂತಾದವುಗಳ ಬಗ್ಗೆ ಜನಪದ ನುಡಿಗಟ್ಟು ಮತ್ತು ತ್ರಿಪದಿಗಳನ್ನು ಉಲ್ಲೇಖಿಸಿ ಉತ್ಸಾಹಭರಿತರಾಗಿ ಮಾತನಾಡಿದರು. ಆಗ ಮದ್ಹಾನ ಮೂರು ಗಂಟೆ. ವಿದ್ಯಾರ್ಥಿಗಳನ್ನು ಒಳಗೊಂಡಂತೆ ಎಲ್ಲರ ಮುಖ ಹೊಟ್ಟೆ ಹಸಿವಿನಿಂದ ಸಪ್ಪೆಯಾಗಿತ್ತು. ಆದರೆ ನಾಗವಾರರ ಭಾಷಣ ಮಾತ್ರ ಮುಗಿದಂತೆ ಕಾಣಲಿಲ್ಲ.

ಕೊನೆಗೂ ಅರಣ್ಯವಾಸಿಗಳ ಜಾನಪದದ ಬಗ್ಗೆಯಾಗಲಿ ಅವರ ವರ್ತಮಾನದ ತಲ್ಲಣದ ಬಗ್ಗೆಯಾಗಲಿ ನಾಗವಾರರು ಮಾತೆತ್ತಲಿಲ್ಲ. ಅಥವಾ ಅವರ ತಲ್ಲಣಗಳು ತಾಕದಂತಹ ಸೇಪರ್ ಜೋನಲ್ಲಿ ನಿಂತು ಮಾತನಾಡಿದಂತಿತ್ತು. ಕೊನೆಗೆ ಮಾತನಾಡಿದ ಸಮ್ಮೇಳನದ ಸರ್ವಾಧ್ಯಕ್ಷರಾದ ಶಂಕರ ನಾರಾಯಣರ ಮಾತುಗಳದೂ ಇದೇ ಧಾಟಿಯಲ್ಲಿತ್ತು. ಕಾರ್ಯಕ್ರಮ ಮುಗಿಯಿತಲ್ಲ ಎಂದು ಎಲ್.ವಿ ಪಾಟೀಲರು ಎಲ್ಲರಿಗೂ ವಂದನಾರ್ಪಣೆ ಸಲ್ಲಿಸುತ್ತಿದ್ದರು. ಕಾರಣವೇ ಗೊತ್ತಿಲ್ಲದೆ ಅಧ್ಯಾಪಕರುಗಳು ಒಬ್ಬರಿಗೊಬ್ಬರು ಸನ್ಮಾನ ಮಾಡಿಕೊಂಡರು. ಈ ಸನ್ಮಾನ ಯಾವ ಸಾಧನೆಗಾಗಿ ಎಂದರೆ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಕ್ಕಾಗಿ ಎನ್ನುವ ಉತ್ತರ ಬಂತು. ವಿದ್ಯಾರ್ಥಿಗಳು ಕಾರ್ಯಕ್ರಮ ಯಶಸ್ವಿಯಾದ ಬಗ್ಗೆ ನಾನಾ ಬಗೆಯಲ್ಲಿ ವರ್ಣನೆ ಮಾಡಿದರು. ಆಯೋಜಕರಿಗೆ ಕಾರ್ಯಕ್ರಮವೊಂದನ್ನು ಮುಗಿಸಿದ ಸಂತೃಪ್ತಿ. ಅಬ್ಬಾ ಅಂತೂ ಇಂತೂ ಈ ವರ್ಷದ ಕಾರ್ಯಕ್ರಮವನ್ನು ಮುಗಿಸಿದೆವಲ್ಲಾ ಎಂಬ ನಿರಾಳತೆ ಶಾಲಿನಿ ರಘುನಾಥ ಅವರ ಮುಖದಲ್ಲಿ ಕಾಣುತ್ತಿತ್ತು.ಈ ಸೆಮಿನಾರನ್ನು ವಿಮರ್ಶೆ ಮಾಡಿದ್ದಕ್ಕೆ ಕಾರಣವೆಂದರೆ, ಬಹುತೇಕ ವಿಶ್ವವಿದ್ಯಾಲಯಗಳ ಸೆಮಿನಾರುಗಳು ಹೀಗೆಯೇ ಬಣ ಬಣಗುಟ್ಟುತ್ತವೆ. ಒಂದು ವಿಶ್ವವಿದ್ಯಾಲಯದ ಅದ್ಯಾಪಕರು ಮತ್ತೊಂದು ವಿವಿಯ ಅದ್ಯಾಪಕರನ್ನು ಆಹ್ವಾನಿಸುವುದು, ಅವರನ್ನು ಇವರು ಹೊಗಳುವುದು, ಇವರನ್ನು ಅವರು ಹೊಗಳುವ ಆತ್ಮವಂಚನೆಯಲ್ಲೇ ಸೆಮಿನಾರುಗಳು ಮುಗಿಯುತ್ತವೆ. ಆಯಾ ಸೆಮಿನಾರಿಗೆ ಲಕ್ಷಾಂತರ ರೂಪಾಯಿಗಳು ಖರ್ಚಾಗುತ್ತದೆ.

ನೋಡಿ, ಈ ಸಮ್ಮೇಳನ ಅರಣ್ಯವಾಸಿ ಜಾನಪದ ಕುರಿತದ್ದು. ಅದು ಅರಣ್ಯವಾಸಿಗಳ ಬದುಕಿನ ಪ್ರತಿಬಿಂಬವನ್ನು ಕಾಣಿಸುವಂತದ್ದು. ಇಂದು ತಮ್ಮ ಕಲೆಯನ್ನಾಗಲಿ, ಕಾವ್ಯವನ್ನಾಗಲೀ ಸಂಭ್ರಮದಿಂದ ಹೇಳುವ ಸ್ಥಿತಿಯಲ್ಲಿ ಅರಣ್ಯವಾಸಿಗಳಿಲ್ಲ. ಇಂತಹ ಅರಣ್ಯರೋಧನದಲ್ಲಿ ಅವರುಗಳು ಬದುಕುತ್ತಿದ್ದರೆ ಅವರ ಜಾನಪದವನ್ನು ಮಾತ್ರ ಬೇರ್ಪಡಿಸಿ ಮಾತನಾಡುವುದಾದರೂ ಹೇಗೆ? ಆದರೆ ಇಂತಹ ಘನಕಾರ್ಯವನ್ನು ಈ ಸಮ್ಮೇಳನ ಮಾಡಿತು. ಇಲ್ಲಿ ಯಾವುದೇ ಅರಣ್ಯವಾಸಿಗಳ ಸುಳಿವಿರಲಿಲ್ಲ. ಹೋಗಲಿ ಅರಣ್ಯವಾಸಿಗಳ ಬಗ್ಗೆ ಪ್ರಾಮಾಣಿಕವಾಗಿ ದುಡಿಯುವವರನ್ನಾದರೂ ಕರೆಸಿರಲಿಲ್ಲ.

ಇಂದು ಅರಣ್ಯವಾಸಿಗಳನ್ನು ವಕ್ಕಲೆಬ್ಬಿಸುವ ಮರಣಶಾಸನದಂತಹ ಕಾನೂನುಗಳು ಬರುತ್ತಿವೆ, ಅವುಗಳನ್ನು ವಿರೋಧಿಸುವ, ಆ ವಿರೋಧದ ನಿಲುವನ್ನು ಸರಕಾರಕ್ಕೆ ತಿಳಿಸುವ ಯಾವ ತುರ್ತೂ ಈ ಸೆಮಿನಾರಿನಲ್ಲಿ ಕಾಣಿಸಲಿಲ್ಲ. ಅಥವಾ ಅರಣ್ಯವಾಸಿಗಳು ಹೆಚ್ಚಿರುವ ಜಾಗದಲ್ಲಿ ಈ ಸೆಮಿನಾರನ್ನು ಏರ್ಪಡಿಸಿ, ಅರಣ್ಯವಾಸಿಗಳ ಬಗ್ಗೆ ಕೆಲಸ ಮಾಡಿದ ಕೆಲವರನ್ನು ಆಹ್ವಾನಿಸಿ, ಕೆಲವು ಅರಣ್ಯವಾಸಿ ಜನರನ್ನೇ ಕರೆಸಿ ತಮ್ಮ ನಂಬಿಕೆ, ಆಚರಣೆ ಸಂಪ್ರದಾಯದಲ್ಲಿ ಆಗುತ್ತಿರುವ ಬದಲಾವಣೆಗಳಾವುವು? ಈ ಬದಲಾವಣೆಗೆ ಕಾರಣವಾದ ಸಂಗತಿಗಳಾವುವು? ಸದ್ಯದ ತಮ್ಮ ಬದುಕಿನ ತಲ್ಲಣಗಳೇನು ಮುಂತಾಗಿ ಮಾತನಾಡಿಸಿ ಅವುಗಳ ನೆಲೆಯಲ್ಲಿ ಅರಣ್ಯವಾಸಿಗಳ ಜಾನಪದವನ್ನು ಅರ್ಥಮಾಡಿಕೊಳ್ಳುವ ಕೆಲಸವನ್ನು ಮಾಡಬಹುದಿತ್ತು.

ಆದರೆ ಇಂತಹ ಯಾವ ಯೋಚನೆಯೂ ಆಯೋಜಕರಿಗೆ ಹೊಳೆದಂತಿಲ್ಲ. ಹೀಗೆ ವಿಶ್ವವಿದ್ಯಾಲಯಗಳ ಲಕ್ಷಾಂತರ ರೂಗಳು ಕನಿಷ್ಠ ರಾಜಕೀಯ ಪ್ರಜ್ಞೆಯನ್ನು ಬೆಳೆಸದ ಸೆಮಿನಾರುಗಳಿಗೆ ಕರ್ಚಾಗುತ್ತದೆ. ಅದೇ ಸೆಮಿನಾರಿನ ವಿಷಯವಾಗಿದ್ದ ಜನರ ಬದುಕು ಎಂದಿನ ದರಿದ್ರ ಸ್ಥಿತಿಯಲ್ಲಿ ಮುಂದುವರೆಯುತ್ತದೆ. ಹಾಗೆಂದು ಈ ಮಾತನ್ನು ಸಾರಾಸಗಟಾಗಿ ವಿಶ್ವವಿದ್ಯಾಲಯಗಳ ಎಲ್ಲಾ ಸೆಮಿನಾರುಗಳಿಗೆ ಆರೋಪಿಸಲು ಆಗದು. ಅಪರೂಪಕ್ಕೊಮ್ಮೆ ಒಳ್ಳೆಯ ಸೆಮಿನಾರುಗಳೂ ನಡೆಯುತ್ತವೆ. ಆದರೆ ಬಹುಪಾಲು ಸೆಮಿನಾರುಗಳು ಮೇಲಿನ ಮಾತುಗಳಿಗೆ ಪೂರಕವಾಗಿವೆ, ಇದು ವಿಶ್ವವಿದ್ಯಾಲಯಗಳ ಸೆಮಿನಾರುಗಳ ವಾಸ್ತವ. ಬಹುಪಾಲು ವಿಶ್ವವಿದ್ಯಾಲಯಗಳ ಅಧ್ಯಾಪಕರುಗಳು ಇಂತಹ ಜಡತೆಯಿಂದ ಮೈಕೊಡವಿ ಹೊರ ಬರುವುದು ಯಾವಾಗ?

9 ಕಾಮೆಂಟ್‌ಗಳು:

Bilimale ಹೇಳಿದರು...

Interesting and bold report!

rujuvathu ಹೇಳಿದರು...

Relevant, bold and moving.
ur ananthamurthy

ಅನಾಮಧೇಯ ಹೇಳಿದರು...

dear arun
this is a wonderful report
tarikere

Banjagere ಹೇಳಿದರು...

nimma anisikegalalli satyavide.alli aranyavaasigala bagge samakaalina samsye kuritaagi ondu nirnaya tegedukomdiddare sariyiruttittu emba nimma kalakaliyalli arthavide.

ಮುತ್ತಯ್ಯ ಹೇಳಿದರು...

ಗೆಳೆಯ ಅರುಣ್ ,
ಕರ್ನಾಟಕ ವಿ.ವಿ ಆಯೋಜಿಸಿದ ೩೭ ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ವರದಿ ನೋಡಿದೆ.ಚನ್ನಾಗಿದೆ.
ಇಂಥ ಯಾವುದೇ ಸೆಮಿನಾರ್ ನಿಂದ ಹೆಚ್ಚೇನನ್ನು ನಿರೀಕ್ಷಿಸುವ ಕಾಲ ಇದಲ್ಲ
ನಮ್ಮ ಅಧ್ಯಯನಗಳು, ಶುಷ್ಕ ಶೈಕ್ಷಣಿಕ ಒತ್ತಾಸೆ,ಸ್ವಾಥ೵ ಪರ ನಿಲುವು, ಕ್ಷೇತ್ರಾನುಭವದ ಕೊರತೆ,ಅಂತರ್ ದೃಷ್ಠಿಯ ಕೊರತೆ,ನಿದಿಷ್ಟವಾದ ದೃಷ್ಟಿಕೋನದ ಕೊರತೆ ಹೀಗೆ ಹಲವು ಕೊರತೆಗಳ ಕಾರಣದಿಂದಾಗಿ ನಿರುಪಯುಕ್ತ,ನಿಷ್ಪ್ರಯೋಜಕ,ನಿಸ್ಸಾರ ಎನಿಸುತ್ತಿವೆ.ಇದಕ್ಕಾಗಿ ನಾವು ಯಾರನ್ನು ದೂಷಿಸಬೇಕಾಗಿಲ್ಲ. ನಾವೆಲ್ಲರು ಉಪಯುಕ್ತ ಅಧ್ಯಯನಗಳನ್ನು ನಡೆಸುವುದರ ಮೂಲಕ ಕೊರತೆಗಳನ್ನು ನಿವಾರಿಸುವ ಪ್ರಯತ್ನ ನಡೆಸಿದರೆ ಅದು ಎಲ್ಲರಿಗೂ ಅನುಕರಣೀವಾಗಬಲ್ಲದು

ಡಾ.ಎಸ್.ಎಂ.ಮುತ್ತಯ್ಯ ಹೇಳಿದರು...

ಗೆಳೆಯ ಅರುಣ್ ,
ಕರ್ನಾಟಕ ವಿ.ವಿ ಆಯೋಜಿಸಿದ ೩೭ ನೇ ಅಖಿಲ ಕರ್ನಾಟಕ ಜಾನಪದ ಸಮ್ಮೇಳನದ ವರದಿ ನೋಡಿದೆ.ಚನ್ನಾಗಿದೆ.
ಇಂಥ ಯಾವುದೇ ಸೆಮಿನಾರ್ ನಿಂದ ಹೆಚ್ಚೇನನ್ನು ನಿರೀಕ್ಷಿಸುವ ಕಾಲ ಇದಲ್ಲ
ನಮ್ಮ ಅಧ್ಯಯನಗಳು, ಶುಷ್ಕ ಶೈಕ್ಷಣಿಕ ಒತ್ತಾಸೆ,ಸ್ವಾಥ೵ ಪರ ನಿಲುವು, ಕ್ಷೇತ್ರಾನುಭವದ ಕೊರತೆ,ಅಂತರ್ ದೃಷ್ಠಿಯ ಕೊರತೆ,ನಿದಿಷ್ಟವಾದ ದೃಷ್ಟಿಕೋನದ ಕೊರತೆ ಹೀಗೆ ಹಲವು ಕೊರತೆಗಳ ಕಾರಣದಿಂದಾಗಿ ನಿರುಪಯುಕ್ತ,ನಿಷ್ಪ್ರಯೋಜಕ,ನಿಸ್ಸಾರ ಎನಿಸುತ್ತಿವೆ.ಇದಕ್ಕಾಗಿ ನಾವು ಯಾರನ್ನು ದೂಷಿಸಬೇಕಾಗಿಲ್ಲ. ನಾವೆಲ್ಲರು ಉಪಯುಕ್ತ ಅಧ್ಯಯನಗಳನ್ನು ನಡೆಸುವುದರ ಮೂಲಕ ಕೊರತೆಗಳನ್ನು ನಿವಾರಿಸುವ ಪ್ರಯತ್ನ ನಡೆಸಿದರೆ ಅದು ಎಲ್ಲರಿಗೂ ಅನುಕರಣೀವಾಗಬಲ್ಲದು

amita ಹೇಳಿದರು...

ನಿಮ್ಮ ಬರಹ ಸತ್ಯಕ್ಕೆ ಹಿಡಿದ ಕನ್ನಡಿ..ಅಸಲು ಜಾನಪದ ಕಮ್ಮಟಗಳು ,ಸೆಮಿನಾರ್ ಗಳು ನಾಲ್ಕು ಗೋಡೆಯ ನಡುವೆ ಏಕೆ ನಡೆಯುತ್ತವೆ ಅನ್ನುವುದು ನಂಗೆ ಇನ್ನು ತನಕ ಅರ್ಥ ಆಗಿಲ್ಲ...ಅದೊಂದು ಕ್ಷೇತ್ರ ವಿಜ್ಞಾನ ಅನ್ನುವುದು ಮಾತಿನಲ್ಲಿ ಬಿಟ್ಟರೆ ಬೇರೆಲ್ಲೂ ಆಚರಣೆಗೆ ಬಂದಿಲ್ಲ..ವರ್ಷಕ್ಕೊಮ್ಮೆ ಮಾಡಬೇಕು ಅದಕ್ಕೆ ಮಾಡುತ್ತೇವೆ..ಅನ್ನೋ ಧಾಟಿ ಈ ಸೆಮಿನಾರ್ ಗಳಲ್ಲಿದೆ..ಈ ನಿಟ್ಟಿನಲ್ಲಿ ಶಾಲಿನಿ ರಘುನಾಥ್ ಅವರ ಆಲೋಚನೆಗಳು ಭಿನ್ನವಾಗಿವೆ...ಅವರು ಆಯೋಜಿಸಿದ್ದ ಜಾನಪದ ಮತ್ತು ಪ್ರವಾಸೋದ್ಯಮ ,ಪರಂಪರಾಗತ ಆಹಾರ್ ಪದ್ಧತಿ ಗಳ ಕುರಿತಾದ ಕಮ್ಮಟಗಳು ಇದಕ್ಕೆ ಸಾಕ್ಷಿ.ಮಣ್ಣಿನೊಂದಿಗೆ ಬೆಸೆದ ಜಾನಪದವನ್ನು ಅದರ ಮಡಿಲಲ್ಲೇ ಕುಳಿತು ತಿಳಿಯಬೇಕು,ಪಾಲಿಶ್ ಹಾಕಿದ ಬೂಟು ಇಸ್ರ್ತಿ ಹಾಕಿದ ಬಟ್ಟೆಯಲ್ಲಿ ಗಡದ್ದಾಗಿ ತಿಂದುಂಡು ಅರೆಹೊಟ್ಟೆಗಳ,ಕಷ್ಟ ನಷ್ಟಗಳ ಬಗ್ಗೆ ಮಾತಾಡಿದರೆ ಏನು ಪ್ರಯೋಜನ...????ಇಂದಿಗೂ ಜ್ಞಾನಿಗಳು ಜನಪದರೆ ಹೊರತು ಅವರಬಗ್ಗೆ ಮಾತಾಡುವ ನಾವಲ್ಲ ಅನ್ನುವ ಒಂದು ವಿನಯವಂತಿಕೆ ನಮ್ಮಲ್ಲಿ ಇರದಿದ್ದರೆ ಹೇಗೆ???

ಅನಾಮಧೇಯ ಹೇಳಿದರು...

ಆತ್ಮೀಯರೇ,
ಈ ಲೇಖನವೂ ಒಂದು ಸಮ್ಮೇಳನದ ವರದಿಯೂ ಹೌದು. ಇಂದು ಸಮ್ಮೇಳನಗಳು ನಡೆಯುತ್ತಾ ಇರುವ ಕ್ರಮ ಕುರಿತ ಅಭಿಪ್ರಾಯ ಮಂಡನೆಯೂ ಹೌದು.
ನಿಮ್ಮ ಅಭಿಪ್ರಾಯಗಳು ಅತ್ಯಂತ ಸರಿಯಾಗಿದೆ. ನಾನು ಅದನ್ನು ಒಪ್ಪುತ್ತೇನೆ.
ಇಂದು ಬಹುತೇಕ ಸಮ್ಮೇಳನಗಳು ಹೀಗೇ ಇರುತ್ತವೆ. ಸಮ್ಮೇಳನದ ಹಿಂದಿನ ಉದ್ದೇಶವೇನು? ಅದರಿಂದ ಆಗಬೇಕಾದ್ದೇನು? ಆ ಸಮ್ಮೇಳನದ ಪ್ರಯೋಜನವನ್ನು ಮರಳಿ ನಾಡಿಗೆ ಹರಿಸುವುದು ಹೇಗೆ ಎಂಬ ಯೋಚನೆ ಇಲ್ಲದೆ, ಎಲ್ಲಾ ಬುದ್ಧಿವಂತರೂ ಓತಪ್ರೋತವಾಗಿ ಮಾತಾಡುತ್ತಾರೆ. ಆ ಮಾತಿನಿಂದ ಯಾವ ಲಾಭವೂ ಆಗದ ಸ್ಥಿತಿಗೆ ತಲುಪಿದ್ದೇವೆ.
ಇಂತಲ್ಲಿ ಮೋಗಳ್ಳಿ, ರಹಮತ್ ಮುಂತಾದ ಜವಾಬ್ದಾರಿಯುತ ಚಿಂತಕರೂ ಇಲ್ಲದೆ ಹೋದರೆ ಒಟ್ಟು ಸಮ್ಮೇಳನವೂ ಯಾವುದೋ ಇಲಾಖೆ ಅಥವಾ ವಿಭಾಗದವರ ವಾರ್ಷಿಕ ಬಜೆಟ್ಟನ್ನು ಖಾಲಿ ಮಾಡುವ ಅಭ್ಯಾಸವಾಗುತ್ತದೆ. ಅಷ್ಟೆ.
ನಿಮ್ಮಂತಹವರು ಈ ಸಮ್ಮೇಳನಗಳನ್ನು ಕುರಿತಂತೆ ಮತ್ತೆ ಮತ್ತೆ ಮಾತಾಡಿ ಎಲ್ಲರನ್ನೂ ಜಾಗೃತಗೊಳಿಸಬೇಕು.
ಒಳಿತಾಗಲಿ.
- ಬಿ.ಸುರೇಶ

ಅನಾಮಧೇಯ ಹೇಳಿದರು...

vishwavidyalayadalli ndiyuva seminar galu yellau kuda nivu helida rihthiyalliye nadiyuthive,hageye v.v.ya adhyapakaru samajakkagi dudiyade samajavannu hanchi thinnuthiddare.jothege halavaru javabdarigalinda nusulikondu hogothiddare.totally sammelanagalu swarthakkagi,swa prathishtegagi nadiyuthive........BUJJI,Kvv.Hampi.