ಗುರುವಾರ, ಮಾರ್ಚ್ 10, 2011

ಗಾಣಗಟ್ಟೆ ಮಾಯಮ್ಮ: ಗ್ರಾಮ ದೇವತೆಯ ಆಧುನಿಕ ರೂಪಾಂತರ.



-ಅರುಣ್

ಕನ್ನಡ ಜಾನಪದ ಅಧ್ಯಯನಗಳಲ್ಲಿ ಗ್ರಾಮ ದೈವಗಳ ಅಧ್ಯಯನ ವ್ಯಾಪಕವಾಗಿ ನಡೆದಿದೆ. ಹಿ.ಚಿ. ಬೋರಲಿಂಗಯ್ಯ ಅವರ ಉಜ್ಜನಿ ಚೌಡಮ್ಮ, ಸಿದ್ದಲಿಂಗಯ್ಯ ಅವರ ಕರ್ನಾಟಕದ ಗ್ರಾಮದೇವತೆಗಳು, ಪುರುಷೋತ್ತಮ ಬಿಳಿಮಲೆ ಅವರ ಹುಲಿಗೆಮ್ಮ, ಎಸ್‍. ಎಸ್‍. ಹಿರೇಮಠ್‍ ಅವರ ಗ್ರಾಮದೇವತೆಗಳ ಅಧ್ಯಯನಗಳು ಚಕ್ಕನೆ ನೆನಪಾಗುತ್ತವೆ. ಆನಂತರ ಪಿಹೆಚ್.ಡಿ ಮತ್ತು ಎಂಫಿಲ್‍ ಅಧ್ಯಯನಗಳಿಗಾಗಿ ಕರ್ನಾಟಕದ ಬಹುತೇಕ ಗ್ರಾಮದೇವತೆಗಳ ಅಧ್ಯಯನಗಳು ನಡೆದಿವೆ ಮತ್ತು ನಡೆಯುತ್ತಿವೆ.

ಇಂದು ಗ್ರಾಮ ದೇವತೆಗಳ ಬಗ್ಗೆ ಅಧ್ಯಯನ ನಡೆಸುವವರು ಈ ಕಾಲದಲ್ಲಿ ಆ ದೇವತೆಯ ನಂಬಿಕೆ ಮತ್ತು ಆಚರಣೆಗಳು ಆಧುನಿಕವಾಗಿ ಹೇಗೆ ರೂಪಾಂತರಗೊಂಡಿವೆ, ಮತ್ತು ಮೂಲ ಆರಾಧಕರಿಂದ ವಂಚಿತವಾಗಿ ಹೇಗೆ ಮೇಲ್ವರ್ಗದವರ ಕಪಿಮುಷ್ಟಿಯಲ್ಲಿ ಗ್ರಾಮದೈವಗಳು ಸಿಲುಕಿವೆ, ಒಂದು ಕಾಲದಲ್ಲಿ ತಳ ಸಮುದಾಯಗಳಿಗೆ ಚೈತನ್ಯ ನೀಡುವ ದೇವತೆಗಳು ಅದೇ ಸಮುದಾಯದಿಂದ ಹೇಗೆ ಪರಕೀಯವಾಗಿವೆ? ಮುಂತಾದವುಗಳ ಬಗ್ಗೆ ಅಧ್ಯಯನ ಮಾಡಬೇಕಿದೆ. ಅನೇಕ ಗ್ರಾಮದೇವತೆಗಳು ಕೇಸರೀಕರಣಕ್ಕೆ ಒಳಗಾಗಿವೆ. ಬಳ್ಳಾರಿಯ ಜನಪ್ರಿಯ ಗ್ರಾಮ ದೇವತೆ ಬಳ್ಳಾರಿ ದುರ್ಗಮ್ಮ ಇಂದು ದುರ್ಗಾಪರಮೇಶ್ವರಿ ಎಂಬ ಹೆಸರಲ್ಲಿ ಪುರೋಹಿತರ ಹಿಡಿತದಲ್ಲಿದೆ. ಇಂತಹ ಅನೇಕ ಉದಾಹರಣೆಗಳನ್ನು ಜೋಡಿಸಬಹುದು. ಈ ಕುರಿತು ಗಂಭೀರ ಅಧ್ಯಯನಗಳನ್ನು ಮಾಡುವ ಅಗತ್ಯವಿದೆ.



ಈಚೆಗೆ ನಮ್ಮ ಭಾಗದಲ್ಲಿ ಅಂದರೆ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಗಾಣಗಟ್ಟೆಯ ಗ್ರಾಮದೇವತೆ ಮಾಯಮ್ಮ ಹೆಚ್ಚು ಜನಪ್ರಿಯವಾಗುತ್ತಿದೆ. ಮಾಯಮ್ಮ ಮಾಡಿದ ಪವಾಡಗಳ ಕತೆಗಳು ಹಳ್ಳಿಗಳಲ್ಲಿ ನಾನಾ ಬಗೆಯಲ್ಲಿ ಹಬ್ಬಿಕೊಳ್ಳುತ್ತಿವೆ. ಮಾಯಮ್ಮನನ್ನು ಜನರು ದುಡ್ಡಿನ ದೇವತೆ ಎಂದು ಕರೆಯುತ್ತಾರೆ. ಕಾರಣ ಈ ದೇವತೆಗೆ ಯಾವುದೇ ಹರಕೆಯನ್ನು ಹೊತ್ತರೂ ಅದು ಹಣದ ರೂಪದಲ್ಲೇ ಇರಬೇಕು . ಅದರಲ್ಲೂ ಯಾರು ಹೆಚ್ಚು ಹಣವನ್ನು ಹರಕೆಯ ರೂಪದಲ್ಲಿ ಕೊಡುತ್ತಾರೋ ಅವರ ಕೆಲಸ ಬಹು ಬೇಗ ಆಗುತ್ತದೆ ಎನ್ನುವುದು ಇಲ್ಲಿನ ಜನರ ನಂಬಿಕೆ. ಮೂಲತಃ ಗ್ರಾಮದೇವತೆಯ ಬಹಳ ಮುಖ್ಯ ಹರಕೆಯೆಂದರೆ ಪ್ರಾಣಿ ಬಲಿ ಎಂದು ತಿಳಿದ ಜನರು ಈ ದೇವತೆಯ ಹಣದ ಮಹಿಮೆ ಕಂಡು ದಂಗಾಗಿದ್ದಾರೆ.



ಯಾಕೆ ಈ ದೇವಿ ಕೇವಲ ಹಣವನ್ನು ಹರಕೆಯನ್ನಾಗಿ ಸ್ವೀಕರಿಸುತ್ತಾಳೆ? ಇದಕ್ಕೆ ಉತ್ತರವಿಲ್ಲ. ಇಲ್ಲಿ ಪೂಜೆ ಮಾಡುವವರು ಪುರೋಹಿತರಲ್ಲ. ಮೊದಲಿನಿಂದಲೂ ಪೂಜಿಸಿಕೊಂಡುಬಂದ ನಾಯಕ ಬುಡಕಟ್ಟು ಸಮುದಾಯ. ಈ ಪೂಜಾರಿಯ ಪ್ರಕಾರ ಈ ದೇವಾಲಯಕ್ಕೆ ಪ್ರತಿ ತಿಂಗಳು ಕನಿಷ್ಟ 4 ಲಕ್ಷ ರೂ ಆದಾಯವಿದೆ. ಈ ಎಲ್ಲಾ ಆದಾಯವನ್ನು ದೇವಸ್ಥಾನದ ಅಭಿವೃದ್ದಿಗಾಗಿ ಬಳಸಲಾಗುತ್ತಿದೆ. ಸ್ಥಳೀಯರ ಪ್ರಕಾರ ಹಣ ಯಾವುದೇ ಕಾರಣಕ್ಕೂ ದುರುಪಯೋಗವಾಗುವುದಿಲ್ಲ ಎಂದು ಹೇಳುತ್ತಾರೆ.
ಅದೇನೆ ಇರಲಿ, ಈ ದೇವಿ ಮೂಲತಃ ತಳಸಮುದಾಯಗಳ ಚೈತನ್ನವನ್ನು ಹೆಚ್ಚಿಸಬೇಕಿತ್ತು, ಆದರೆ ಇಂದು ಅದೇ ದೇವಿ ಅದೇ ಭಕ್ತರಿಂದ ಕೇವಲ ಹಣ ಬೇಡುವ ಹಣದಾಹಿಯಾಗಿ ಪರಿವರ್ತನೆಯಾಗಿರುವುದು ಈ ಕಾಲದ ಮಹಿಮೆಯೇ ಸರಿ.



ಈ ದೇವಿಯ ಪವಾಡದ ಕಥೆಗಳು ಮಾತ್ರ ಬಳ್ಳಾರಿ ಜಿಲ್ಲೆಯಾದ್ಯಾಂತ, ಅದರಲ್ಲೂ ಕೂಡ್ಲಿಗಿ ತಾಲೂಕಿನಾದ್ಯಾಂತ ವಿಚಿತ್ರ ರೀತಿಯಲ್ಲಿ ಜನಪದ ಕಥೆಗಳಂತೆ ಹರಡಿಕೊಂಡಿವೆ. ಅಂತೆಯೇ ಅದರ ಹಲವಾರು ಪಾಠಾಂತರಗಳೂ ಸಿಗುತ್ತವೆ. ಇವುಗಳನ್ನು ಇಂದಿನ ಜನಪದ ಅಧ್ಯಯನಕಾರರು ಸಮುದಾಯದ ಗ್ರಹಿಕೆ ಮತ್ತು ವರ್ತಮಾನದ ಜತೆ ಮುಖಾಮುಖಿ ಮಾಡುವ ಅಗತ್ಯವಿದೆ. ಗಾಣಗಟ್ಟೆಯಂತಹ ಕುಗ್ರಾಮದಲ್ಲಿ ಇಂತಹ ಬೃಹತ್ ದೇವಾಲಯದ ನಿರ್ಮಾಣ ಎಂತವರನ್ನೂ ಅಚ್ಚರಿಯನ್ನುಟ್ಟಿಸುತ್ತದೆ. ಈ ದೇವಿಯನ್ನು ಕುರಿತು ಹಂಪಿ ವಿಶ್ವವಿದ್ಯಾಲಯದ ಇತಿಹಾಸ ವಿಭಾಗದ ಪ್ರೊ.ವಿರೂಪಾಕ್ಷಿ ಪೂಜಾರಹಳ್ಳಿಯವರು ಅಧ್ಯಯನ ಮಾಡಿ ಕಿರು ಹೊತ್ತಿಗೆಯನ್ನು ಬರೆದಿದ್ದಾರೆ. ಇದೊಂದು ಒಳ್ಳೆಯ ಪ್ರಯತ್ನ. ಆದರೆ ಇವರು ಇದನ್ನು ಕೇವಲ ಇತಿಹಾಸಕಾರನ ದೃಷ್ಟಿಯಿಂದ ನೋಡಿದ್ದಾರೆ. ಆದರೆ ಇಲ್ಲಿ ಸಂಶೋಧಕರೊಬ್ಬರು ಎತ್ತಲೇಬೇಕಾದ ಯಾವ ಪ್ರಶ್ನೆಯನ್ನು ಇವರಿಗೆ ಎತ್ತಲು ಸಾಧ್ಯವಾಗಿಲ್ಲ. ಇದು ಒಬ್ಬ ಸಂಶೋಧನಾ ವಿಧ್ಯಾರ್ಥಿ ಬರೆಯಬಹುದಾದ ಒಂದು ಪ್ರಾಥಮಿಕ ತಿಳುವಳಿಕೆಯ ಪ್ರಬಂಧವಿದ್ದಂತಿದೆ. ಇಂದು ಗ್ರಾಮದೇವತೆಗಳು ಪಡೆಯುತ್ತಿರುವ ಹೊಸ ಬಗೆಯ ಸ್ಥಿತ್ಯಂತರಗಳ ಕುರಿತು ಅಧ್ಯನ ಮಾಡುವ ಅಗತ್ಯವಿದೆ. ಇವುಗಳು ಪಡೆಯುತ್ತಿರುವ ಹೊಸ ರೂಪಾಂತರಗಳ ಬಗ್ಗೆ, ಇದಕ್ಕೆ ಜನ ಸಮುದಾಯ ಪ್ರತಿಕ್ರಿಯಿಸುತ್ತಿರುವ ಬಗ್ಗೆ ಸಾಂಸ್ಕೃತಿಕ ಅಧ್ಯಯನಗಳನ್ನು ಮಾಡುವ ಅಗತ್ಯವಿದೆ.

1 ಕಾಮೆಂಟ್‌:

siddha ಹೇಳಿದರು...

ಅರುಣ್, ಗಾಣಗಟ್ಟೆ ಮಾಯಮ್ಮನ ಬಗ್ಗೆ ನೀವು ಗುರುತಿಸಿರುವ ರೀತಿ ಸೂಕ್ತವಾದದ್ದೇ. ನನಗನ್ನಿಸಿದಂತೆ ತಳಸಮುದಾಯದ ದೇವತೆಗಳನ್ನು ಪ್ರಸಿದ್ಧಿಗೊಳಿಸಲು ಅಥವಾ ವಿಶೇಷತೆಯೊಂದನ್ನು ಆರೋಪಿಸಲು ಮಾಯಮ್ಮನನ್ನು ಹಣದಾಹಿ ದೇವತೆಯನ್ನಾಗಿ ಪರಿವರ್ತಿಸಿರಬಹುದೇ ಎಂಬ ಅನುಮಾನ. ಕೂಡ್ಲಿಗಿ ಭಾಗದಲ್ಲಿ ಪ್ರಚಲಿತವಿರುವ ಗುಳೆ ಲಕ್ಕವ್ವನ ಜಾತ್ರೆಯೂ ಅಂತಹದೇ ಇರಬಹುದು. ಇಡೀ ಊರೇ ಖಾಲಿಯಾಗುವ ಪ್ರಕ್ರಿಯೆ ಜಾತ್ರೆಗೆ ವಿಶೇಷ ಅರ್ಥವನ್ನೇ ಕೊಡುತ್ತದೆ. ೧೨ ವರ್ಷಗಳಿಗೊಮ್ಮೆ ನಡೆಯುವ ಗ್ರಾಮ ದೇವತೆಯ ಜಾತ್ರೆಯಲ್ಲಿ ಆ ದೇವತೆ ರಕ್ತದಾಹಿಯಾಗಿರುತ್ತಾಳೆ. ಆ ದೇವತೆಗೆ ವಿಶೇಷತೆಯನ್ನು ಕಲ್ಪಿಸಲೆಂದೇ ಇಂತಹ ಆಚರಣೆಗೆಳು ಹುಟ್ಟಿಕೊಂಡಿರಬಹುದೇನೋ. ಸಂಶೋಧನೆ ನಡೆಸಿದರೆ ಹೊಸ ಬೆಳಕು ಚೆಲ್ಲಬಹುದು. ಕೂಡ್ಲಿಗಿಯಲ್ಲಿರುವ ಕೊತ್ತಲ ಆಂಜನೇಯನ ಬಗ್ಗೆಯೂ ಒಮ್ಮೆ ಗಮನಹರಿಸಬಹುದಲ್ಲವೇ?-ಸಿದ್ಧರಾಮ ಹಿರೇಮಠ.