ಗುರುವಾರ, ಮಾರ್ಚ್ 17, 2011

ಮೂರ್ತಿಗಳ ’ಇಂಗ್ಲೀಷ್ ಮನಸ್ಸು’ ಮತ್ತು ರೈಗಳ ’ದೇಸಿ ಮನಸ್ಸು’




(ಉಷಾಕಟ್ಟೆಮನೆ ಅವರು ತಮ್ಮ ಮೌನಕಣಿವೆ ಬ್ಲಾಗ್ ನಲ್ಲಿ ಬರೆದುಕೊಂಡ ಬರಹವಿದು. ಒಂದು ಭಾಷೆ,ಸಂಸ್ಕೃತಿ , ಜಾನಪದ ಹೇಗೆ ಒಂದರೊಳಗೊಂದು ಬೆರೆತಿರುತ್ತವೆ ಎನ್ನುವುದನ್ನು ಅಕಾಡೆಮಿಕ್ ಶೈಲಿಯ ಭಾರವಿಲ್ಲದೆ ಆಪ್ತವಾಗಿ ಬರೆದಿದ್ದಾರೆ. ತುಳು ಭಾಷೆ ಮತ್ತು ಅದರ ದೇಸಿಯ ಅಂತರ್ಗತ ಜಗತ್ತನ್ನುಆಪ್ತ ಮಾತುಕತೆಯಲ್ಲಿ ಕಟ್ಟಿಕೊಟ್ಟಿದ್ದಾರೆ. ಈ ನೆಲೆಯಲ್ಲಿ ಕನ್ನಡದಲ್ಲಿ ಈಗಲೂ ಉಳಿದಿರುವ ಶಿಷ್ಟ ,ಜನಪದ ಎನ್ನುವ ಶ್ರೇಣೀಕೃತ ಮನಸ್ಥಿತಿಯ ಬಗ್ಗೆ ಸಣ್ಣ ತಕರಾರನ್ನೂ ಎತ್ತಿದ್ದಾರೆ. ಈ ಬರಹ ಕನ್ನಡ ಜಾನಪದ ಬ್ಲಾಗ ಓದುಗರ ಗಮನಕ್ಕೆ. –ಅರುಣ್)

-ಉಷಾ ಕಟ್ಟೆಮನೆ

ಇನ್ಫೋಸಿಸ್ ಟೆಕ್ನಲಾಜೀಸ್ ಸಂಸ್ಥೆಯ ಸಂಸ್ಥಾಪಕ ನಾಗವಾರ ರಾಮರಾಯ ನಾರಾಯಣಮೂರ್ತಿಯವರಿಗೆ ಕನ್ನಡ ಬರುತ್ತದೆಯೆಂದು ಕನ್ನಡ ಕುಲಕೋಟಿಗೆ ಕೊನೆಗೂ ಗೊತ್ತಾಯಿತು. ಬೆಳಗಾವಿಯಲ್ಲಿ ನಡೆದ ವಿಶ್ವ ಕನ್ನಡ ಸಮ್ಮೇಳನದಲ್ಲಿ ಅವರು ಅಚ್ಚಕನ್ನಡದಲ್ಲಿ ಮಾತಾಡಿದರು. ಹಾಗೆಯೇ ಕನ್ನಡದ ಕುವರಿಯೆಂದೇ ಬಿಂಬಿಸಲಾಗುತ್ತಿರುವ ಬಾಲಿವುಡ್ ತಾರೆ ಐಶ್ವರ್ಯ ರೈಗೆ ಕನ್ನಡ ಬರುವುದಿಲ್ಲವೆಂದು ಕೂಡಾ ಸಾಬೀತಾಯಿತು.

ಮೂರ್ತಿಗಳ ಮಾತೃಭಾಷೆ ಕನ್ನಡ. ಹಾಗಾಗಿ ಅವರು ಕನ್ನಡದಲ್ಲಿ ತಡವರಿಸದೆ ಮಾತಾಡಿದರು. ಐಶ್ವರ್ಯಳ ಮಾತೃಭಾಷೆ ತುಳು. ಅದರಲ್ಲಾಕೆ ನಿರರ್ಗಳವಾಗಿ ಮಾತಾಡಬಲ್ಲಳು. ಕೆಲವು ವರ್ಷಗಳ ಹಿಂದೆ ಆಕೆ ಮಂಗಳೂರಿಗೆ ಬಂದಿದ್ದಳು. ಆಗ ಆಕೆಗಿನ್ನೂ ಮದುವೆಯಾಗಿರಲಿಲ್ಲ. ತನ್ನ ಹುಟ್ಟೂರಿನಲ್ಲಿ ತುಂಬಾ ಅಭಿಮಾನದಿಂದ ತುಳುವಿನಲ್ಲೇ ಭಾಷಣ ಮಾಡಿದ ಆಕೆ, “ಯಾನ್ ತುಳು ಆಣನೇ ಮದ್ಮೆ ಆಪಿನಿ” ಅಂದರೆ ’ನಾನು ತುಳು ಹುಡುಗನನ್ನೇ ಮದುವೆಯಾಗುತ್ತೇನೆ’ ಎಂದು ಹೇಳಿ ತುಳು ಹುಡುಗರಲ್ಲಿ ಪುಳಕವನ್ನು ತಂದಿದ್ದಳು.

ತುಳುವರು ಪ್ರಪಂಚದ ಯಾವ ಮೂಲೆಯಲ್ಲಿದ್ದರೂ ಅವರ ಮಾತೃಭಾಷೆ ತುಳುವೇ ಆಗಿರುತ್ತದೆ ಮತ್ತು ಅವರು ತಮ್ಮ ಮಕ್ಕಳಿಗೆ ತುಳು ಕಲಿಸುತ್ತಾರೆ, ಹಾಗಾಗಿ ಅವರ ಮಕ್ಕಳ ಮಾತೃಭಾಷೆ ತುಳುವೇ ಆಗಿರುತ್ತದೆ. ಈ ತುಳುನಾಡು ಕರ್ನಾಟಕವೆಂಬ ರಾಜ್ಯದೊಳಗೆ ಇರುವ ಕಾರಣದಿಂದಾಗಿ ಅವರನ್ನು ನಾವು ಕನ್ನಡಿಗರೆಂದೇ ಪರಿಗಣಿಸುತ್ತೇವೆ. ಅದನ್ನವರು ಪ್ರೀತಿಯಿಂದಲೇ ಒಪ್ಪಿಕೊಳ್ಳುತ್ತಾರೆ. ಇದೇ ಅಭಿಮಾನದಿಂದ ಐಶ್ವರ್ಯ ರೈ ವಿಶ್ವ ಕನ್ನಡ ಸಮ್ಮೇಳನದಲ್ಲಿ ಭಾಗವಹಿಸಿರಬಹುದು. ಬಾಳ ಠಾಕ್ರೆಯ ಬೆದರಿಕೆಯನ್ನೂ ಧಿಕ್ಕರಿಸಿ ಆಕೆ ಸಮ್ಮೇಳನದಲ್ಲಿ ಭಾಗವಹಿಸಿದಳೆಂಬುದನ್ನು ನಾವು ಗಮನಿಸಬೇಕು. ಬೇಕಾದರೆ ಹಿಂದಿ ತಾರೆಯರಾದ ಸುನಿಲ್ ಶೆಟ್ಟಿ, ಶಿಲ್ಪಶೆಟ್ಟಿ, ನಿರ್ದೇಶಕ ರೋಹಿತ್ ಶೆಟ್ಟಿ, ಸಂಗೀತ ನಿರ್ದೇಶಕ ಸಂದೀಪ್ ಚೌಟ ಅವರನ್ನು ಮಾತಾಡಿಸಿ ನೋಡಿ ಅವರು ತಾವು ತುಳುವರೆಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾರೆ, ತಮ್ಮ ಎದುರಿನಲ್ಲಿರುವವರು ತುಳುವರೆಂದು ಗೊತ್ತಾದರೆ ತುಳುವಿನಲ್ಲೇ ಮಾತು ಮುಂದುವರೆಸುತ್ತಾರೆ. ಇಂತಹ ನಡವಳಿಕೆಯನ್ನು ಕನ್ನಡದವರಿಂದ ನಿರೀಕ್ಷಿಸಲು ಸಾಧ್ಯವೇ?
ನಾರಾಯಣಮೂರ್ತಿಯವರು ಸಾರ್ವಜನಿಕವಾಗಿ ಕನ್ನಡ ಮಾತಾಡುವುದಿಲ್ಲ. ಎಲ್ಲಿಯೂ ತಾನು ಕನ್ನಡದವನೆಂದು ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ. ಆದರೆ ಐಶ್ವರ್ಯ ರೈ ಸಾರ್ವಜನಿಕವಾಗಿ ತುಳು ಮಾತಾಡುತ್ತಾಳೆ, ತಾನು ತುಳುನಾಡಿನವಳು ಎಂದು ಹೇಳಿಕೊಳ್ಳಲು ಹೆಮ್ಮೆಪಡುತ್ತಾಳೆ. ಇದು ಕನ್ನಡಿಗರಿಗೂ ತುಳುವರಿಗೂ ಇರುವ ವ್ಯತ್ಯಾಸ.

ನನ್ನ ಮಾತೃಭಾಷೆ ತುಳು. ತುಳು ಅಂದ ತಕ್ಷಣ ನನ್ನ ಚಿತ್ತಭಿತ್ತಿಯಲ್ಲಿ ಹಲವು ವಿಚಾರಗಳು ಮೂಡಿಬರುತ್ತವೆ. ಅದು ಯಕ್ಷಗಾನ, ನಾಗಮಂಡಲ, ಭೂತರಾಧನೆ, ಕಂಬಳ, ಕೋಲ, ತಂಬಿಲ, ಡಕ್ಕೆಬಲಿ, ಕೋಳಿ ಅಂಕ, ಖೆಡ್ಡಸ, ಕೋಟಿ-ಚನ್ನಯ್ಯ, ಸಿರಿಜಾತ್ರೆ….ಹೀಗೆ ನಂಬಿಕೆ, ಆಚರಣೆಗಳ ಮೆರವಣಿಗೆ ಸಾಗಿಬರುತ್ತದೆ. ಇದನ್ನೇ ನಾವು ’ತುಳುವ ಮನಸ್ಸು’ ಎಂದು ಕರೆಯುತ್ತೇವೆ. ತುಳು ಕೇವಲ ಒಂದು ಭಾಷೆ ಮಾತ್ರ ಅಲ್ಲ. ಯಕ್ಷಗಾನ, ಕಂಬಳ, ಸಿರಿಜಾತ್ರೆ, ಭೂತರಾದನೆಯ ಹೊರತಾದ ತುಳುನಾಡನ್ನು ಕಲ್ಪಿಸಿಕೊಳ್ಳುವುದಕ್ಕೆ ನನಗೆ ಸಾಧ್ಯವಿಲ್ಲ. ಅದರೆ ಕನ್ನಡ ಎಂದ ತಕ್ಷಣ ಇಷ್ಟು ಶಕ್ತಿಯುತವಾದ ಬಿಂಬಗಳು ನನ್ನ ಚಿತ್ತಭಿತ್ತಿಯಲ್ಲಿ ಮೂಡಿಬರುವುದೇ ಇಲ್ಲ. ನಮ್ಮ ಶಿಷ್ಟ ಸಂಸ್ಕೃತಿ-ಶಿಷ್ಟ ಸಾಹಿತ್ಯವು ಜನಪದ ಸಂಸ್ಕೃತಿ-ಜನಪದ ಸಾಹಿತ್ಯವನ್ನು ಕಡೆಗಣಿಸುತ್ತಿರುವ ಪರಿಣಾಮ ಇದಾಗಿರಬಹುದೇ? ಸಂಸ್ಕೃತ ವಿಶ್ವವಿದ್ಯಾಲಯವನ್ನು ಕಟ್ಟುವಲ್ಲಿನ ಆಸಕ್ತಿ ಜಾನಪದ ವಿಶ್ವವಿದ್ಯಾಲಯವನ್ನು ಕಟ್ಟುವುದರಲ್ಲಿ ಏಕಿಲ್ಲ?

ಕಳೆದ ವರ್ಷ ಧರ್ಮಸ್ಥಳದ ಉಜಿರೆಯಲ್ಲಿ ವಿಶ್ವ ತುಳು ಸಮ್ಮೇಳನ ನಡೆಯಿತು. ಮೂರು ದಿನಗಳ ಕಾಲ ನಡೆದ ಸಮ್ಮೇಳನದಲ್ಲಿ ನಿರೀಕ್ಷೆಗೂ ಮೀರಿ ತುಳುವರು ಭಾಗವಹಿಸಿದ್ದರು. ವೀರೇಂದ್ರ ಹೆಗ್ಗಡೆಯವರನ್ನು ’ಗುರ್ಕಾರ’[ ಯಜಮಾನ] ರನ್ನಾಗಿಸಿ ವೀಳ್ಯಕೊಟ್ಟ ಈ ಸಮ್ಮೇಳನಕ್ಕೆ ೩ಲಕ್ಷ ಜನರು ಬರುವವರೆಂದು ಅಂದಾಜಿಸಲಾಗಿತ್ತು. ಆದರೆ ೬ ಲಕ್ಷಕ್ಕೂ ಅಧಿಕ ತುಳು ಬಂಧುಗಳು ಪ್ರಪಂಚದಾದ್ಯಂತದಿಂದ ಉಜಿರೆಗೆ ಹರಿದು ಬಂದಿದ್ದರು. ಹಿಂದಿನ ಕಾಲದಲ್ಲಿ ಎತ್ತಿನ ಗಾಡಿ ಕಟ್ಟಿಕೊಂಡು ಮನೆ ಮಂದಿಯೆಲ್ಲಾ ಜಾತ್ರೆಗೆ ಬಂದಂತೆ ತುಳು ಬಾಂದವರು ವಾಹನಗಳನ್ನೇರಿ ಉಜಿರೆಗೆ ಬಂದಿದ್ದರು.

ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯ ದಕ್ಷಿಣ ಭಾಗ ಮತ್ತು ಕೇರಳದ ಉತ್ತರ ಭಾಗವಾದ ಕಾಸರಗೋಡು ಜಿಲ್ಲೆಯಲ್ಲಿ ವಾಸಿಸುವ ಬಹುಸಂಖ್ಯಾತರು ಮಾತಾಡುವ ಭಾಷೆ ತುಳು.ಇದರಲ್ಲಿ ಬಹಳಷ್ಟು ಜನ ದೂರದ ಮುಂಬಯಿ, ಮದ್ಯಪ್ರಾಚ್ಯ ದೇಶಗಳಲ್ಲಿ ಉದ್ಯೋಗ ಮಾಡುತ್ತಿದ್ದಾರೆ. ಆದರೂ ಅವರು ತುಳುನಾಡನ್ನು, ತುಳುಭಾಷೆಯನ್ನು ಮರೆತವರಲ್ಲ. ತಾವಿರುವೆಡೆಯಲ್ಲಿಯೇ ತಮ್ಮ ದೈವಗಳಿಗೂ ಒಂದು ’ಸ್ಥಾನ’ ಕಲ್ಪಿಸಿಕೊಳ್ಳುತ್ತಾರೆ. ವರ್ಷಕ್ಕೊಮ್ಮೆಯಾದರೂ ತಾಯ್ನಾಡಿಗೆ ಬಂದು ನೇಮ, ಕೋಲ, ಜಾತ್ರೆಯಲ್ಲಿ ಪಾಲ್ಗೊಳ್ಳುತ್ತಾರೆ.

ಒಂದು ಅಂದಾಜಿನ ಪ್ರಕಾರ ಸುಮಾರು ೫೦ ಲಕ್ಷ ತುಳುವರು ಪ್ರಪಂಚದಾದ್ಯಂತ ಹರಡಿಕೊಂಡಿದ್ದಾರೆ. ಕರ್ನಾಟಕದ ಒಟ್ಟು ಜನಸಂಖ್ಯೆಯ ಶೇ ೪ರಷ್ಟು ಜನರು ತುಳುವರಾಗಿದ್ದಾರೆ. ಪಂಚದ್ರಾವಿಡ ಭಾಷೆಯಲ್ಲಿ ಒಂದಾದ ತುಳುವಿಗೆ ಸ್ವಂತ ಲಿಪಿಯಿಲ್ಲ; ಭವ್ಯ ಸಾಹಿತ್ಯ ಪರಂಪರೆಯಿಲ್ಲ. ಕೇವಲ ಮೌಕಿಕ ಸಾಹಿತ್ಯದ ಮೂಲಕವೇ ಉಳಿದುಕೊಂಡು ಬಂದಿರುವ ಸಂಸ್ಕೃತಿಯಿದು.

ಇಷ್ಟೆಲ್ಲಾ ಹೇಳಿದುದರ ಸ್ಪಷ್ಟ ಉದ್ದೇಶ ಇಷ್ಟೇ; ಜಾನಪದದ ಜೊತೆ ಅನುಸಂಧಾನ ನಡೆಸದ ಯಾವುದೇ ಭಾಷೆ ಜೀವಂತವಾಗಿ ಉಳಿಯುವುದು ಕಷ್ಟ. ಉಳಿದರೂ ದ್ವೀಪವಾಗಿಬಿಡುತ್ತದೆ. ಸಂಸ್ಕೃತ ಭಾಷೆಯೇ ಇದಕ್ಕೆ ಉದಾಹರಣೆಯಾಗಿ ನಮ್ಮ ಕಣ್ಣ ಮುಂದಿದೆ. ಕನ್ನಡದ ಮಟ್ಟಿಗೆ ಹೇಳುವುದಾರೆ ಮಣ್ಣಿನ ಜೊತೆ ನೇರ ಸಂಪರ್ಕ ಹೊಂದಿರುವ ಬಹುಸಂಖ್ಯಾತ ಜನಸಮುದಾಯವಾದ ರೈತರೊಡನೆ, ಶ್ರಮಿಕವರ್ಗದ ಜೊತೆ ಗುರುತಿಸಿಕೊಂಡು, ಪ್ರಭುತ್ವದ ಭಾಷೆಯಾಗಬೇಕು. ಇಲ್ಲದಿದ್ದರೆ ಜಾಗತೀಕರಣದ ಭರಾಟೆಯಲ್ಲಿ ಕನ್ನಡ ಕೊಚ್ಚಿ ಹೋಗುವ ಸಾಧ್ಯತೆಯಿದೆ. ಅಮೇರಿಕದ ಅಭಿವೃದ್ದಿಯನ್ನು ಮಾದರಿಯನ್ನಾಗಿರಿಸಿಕೊಂಡಿರುವ ನಾರಾಯಣಮೂರ್ತಿಯಂಥ ವ್ಯಾಪಾರಸ್ಥರು ಅದಕ್ಕೆ ಕಾರಣರಾಗುತ್ತಾರೆ.

ಸಂಸ್ಕೃತಿಯೆನ್ನುವುದು ಪ್ರಾದೇಶಿಕ ವೈಶಿಷ್ಟತೆಗಳನ್ನು ಒಳಗೊಂಡಿರುತ್ತದೆ. ಆಯಾಯ ಪ್ರದೇಶದ ಪರಿಸರ, ಜನಜೀವನ, ಆಚಾರ-ವಿಚಾರ, ಆಹಾರ ಪದ್ದತಿ, ಉಡುಗೆ-ತೊಡುಗೆಗಳು ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತವೆ. ಪ್ರತಿ ಸಂಸ್ಕೃತಿಯೂ ಅನನ್ಯವಾದುದು. ಇದರ ಅಭಿವ್ಯಕ್ತಿಯೇ ಜನಪದ ಸಾಹಿತ್ಯ, ಜನಪದ ಸಂಸ್ಕೃತಿ. ಇದುವೇ ಕನ್ನಡ ಸಂಸ್ಕೃತಿಯ ಮೂಲದ್ರವ್ಯ. ಈ ಅನನ್ಯತೆಯನ್ನು ನಾಶಪಡಿಸುವ ಹುನ್ನಾರ ಬಹುರಾಷ್ಟ್ರೀಯ ಕಂಪೆನಿಗಳಿಂದ ನಡೆಯುತ್ತಿದೆ.

ಈ ಮೂಲದ್ರವ್ಯ ನಗರ ಕೇಂದ್ರಿತ ಮನಸ್ಸಿನ ಬಹುತೇಕ ಉದ್ದಿಮೆದಾರರಲ್ಲಿ ಇಲ್ಲ. ಪ್ರಜಾಪ್ರಭುತ್ವದ ನಾಲ್ಕನೆಯ ಸ್ತಂಭವಾದ ಮಾಧ್ಯಮದಲ್ಲಿ ಇಲ್ಲ. ರಾಜಕಾರಣಿಗಳಲ್ಲಿ ಇಲ್ಲ. ಪ್ರಭುತ್ವದಲ್ಲಿ ಇಲ್ಲ. ಇದ್ದಿದ್ದರೆ ಇವತ್ತು ವಿಶ್ವಕನ್ನಡ ಸಮ್ಮೇಳನದಲ್ಲಿ ಭಾಗವಹಿಸಲು ಬಂದ ಕಲಾತಂಡಗಳು ವಸತಿ ವ್ಯವಸ್ಥೆಯಿಲ್ಲದೆ ಬೀದಿಯಲ್ಲಿ ಮಲಗುವ ಪ್ರಮೇಯ ಬರುತ್ತಿರಲಿಲ್ಲ. ರೈತ ನಾಯಕನೊಬ್ಬ ಇದೇ ವೇದಿಕೆಯಲ್ಲಿ ಕಣ್ಣೀರು ಹಾಕುವ ದೈನ್ಯತೆ ಉಂಟಾಗುತ್ತಿರಲಿಲ್ಲ. ಕನ್ನಡಿಗರು ಸಂಭ್ರಮಪಡಬೇಕಾಗಿದ್ದ ಸಮ್ಮೇಳನದಲ್ಲಿ ಅಪಸ್ವರದ ಧ್ವನಿ ಏಳುತ್ತಿರಲಿಲ್ಲ.

ನಿಜ. ಇಂಗೀಷ್ ಭಾಷೆಯೆನ್ನುವುದು ಜ್ನಾನದ ಕೀಲಿ ಕೈ. ಅದಕ್ಕಿರುವ ಅಗಾದ ಸಾಧ್ಯತೆಗಳ ಅರಿವು ಪ್ರತಿಯೊಬ್ಬ ಕನ್ನಡಿಗನಿಗೂ ಇದೆ. ಅದರಿಂದಾಗಿಯೇ ಗ್ರಾಮಾಂತರ ಪ್ರದೇಶದ ಸರಕಾರಿ ಶಾಲೆಗಳು ಮುಚ್ಚುವ ಸ್ಥಿತಿ ತಲುಪಿದೆ. ಆದರೆ ನಮ್ಮ ಭಾವ ಪ್ರಪಂಚ ವಿಸ್ತಾರಗೊಳ್ಳುವುದು ಮಾತೃಭಾಷೆಯಿಂದ. ಕನ್ನಡದ ಮನಸ್ಸು ರೂಪುಗೊಳ್ಳುವುದು ಇಲ್ಲಿಯೇ. ಹಾಗಾಇಯೇ ಆಡಳಿತ ಭಾಷೆ ಕನ್ನಡವಾಗಬೇಕು. ನಮ್ಮ ದೈನಂಧಿನ ವ್ಯವಹಾರ ಕನ್ನಡದಲ್ಲಿಯೇ ಸರಾಗವಾಗಿ ಸಾಗುವಂತಾಗಬೇಕು. ಆದರೆ ಹಾಗಾಗಲು ಸಾಧ್ಯವೇ? ನಮ್ಮ ರಾಜಕಾರಣಿಗಳಲ್ಲಿ ಆ ಇಚ್ಛಾಶಕ್ತಿ ಬರಲು ಸಾಧ್ಯವೇ?

ಅಭಿವೃದ್ಧಿಯ ಹೆಸರಲ್ಲಿ ಪ್ರಕೃತಿಯ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದೆ. ಪ್ರಕೃತಿ ಮಾತೆ ಒಮ್ಮೆ ಮೈಕೊಡವಿ ಎದ್ದರೆ ಏನಾಗುತ್ತದೆಯೆಂಬುದು ಈಗ ಸುನಾಮಿಯಿಂದ ನರಳುತ್ತಿರುವ ಜಪಾನ್ ಅನ್ನು ನೋಡಿದರೆ ತಿಳಿಯುತ್ತದೆ. ಜಗತ್ತಿನಲ್ಲಿರುವ ಪರಮಾಣು ಸ್ಥಾವರಗಳಲ್ಲಿ ಕೆಲವೇ ಕೆಲವು ಸ್ಫೋಟಗೊಂಡರೂ ಸಾಮೂಹಿಕ ನರಹತ್ಯೆ ಸಂಭವಿಸಬಹುದಲ್ಲವೆ? ಇದು ಮನುಷ್ಯ ತಾನಾಗೇ ತೋಡಿಕೊಳ್ಳುತ್ತಿರುವ ಮರಣಗುಂಡಿಯಲ್ಲವೇ?

ಈ ಸಂದರ್ಭದಲ್ಲಿ ನಾವು ಮತ್ತೆ ದೇಶಿ ಚಿಂತನೆಯತ್ತ ಹೊರಳಬೇಕಾಗಿದೆ. ಅದಕ್ಕೆ ಕನ್ನಡದ ಮನಸ್ಸು ಬೇಕು; ತುಳು ಮನಸ್ಸು ಬೇಕು. ಅಂಥ ಮನಸ್ಸುಗಳನ್ನು ಕಟ್ಟುವ ಕೆಲಸ ಆಗಬೇಕಾಗಿದೆ. ಅದಕ್ಕೆ ಸಾಹಿತ್ಯ ಸಮ್ಮೇಳನಗಳು, ವಿಶ್ವಕನ್ನಡ ಸಮ್ಮೇಳನಗಳು ನೆರವಾಗಬೇಕು. ಆದರೆ ಈಗ ನಡೆಯುತ್ತಿರುವ ಜಾತ್ರೆಯಂಥ ಸಮ್ಮೇಳನಗಳಿಂದ ಇದು ಸಾಧ್ಯವೇ ಎಂಬುದು ದೊಡ್ಡ ಪ್ರಶ್ನಾರ್ಥಕ ಚಿಹ್ನೆಯಾಗಿದೆ.

1 ಕಾಮೆಂಟ್‌:

ಅನಾಮಧೇಯ ಹೇಳಿದರು...

hhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhhh