ಅನು: ಶಿವಸುಂದರ್
ಕಾಂಗ್ರೆಸ್ಸಾಗಲೀ ಅಥವಾ ಇತರ ವಿರೋಧ ಪಕ್ಷಗಳಾಗಲೀ ಬಿಜೆಪಿಯ ಬಹುಸಂಖ್ಯಾತ ದುರಭಿಮಾನಿ ರಾಜಕೀಯವನ್ನು ಅನುಕರಿಸಲಾಗದು.
ಗುಜರಾತ್ ವಿಧಾನಸಭಾ ಚುನಾವಣೆಯ ಫಲಿತಾಂಶಗಳನ್ನು ರಾಜಕೀಯ ಪಂಡಿತರು ಹೆಕ್ಕಿಸೀಳುವ ವಿಶ್ಲೇಷಣೆಗಳನ್ನು ಮಾಡುವುದನ್ನು ನಿಲ್ಲಿಸಿದ ನಂತರವೂ ತುಂಬಾ ಕಾಲ ಅದರ ಪ್ರಭಾವಂತೂ ಮುಂದುವರೆಯಲಿದೆ. ಅದರರ್ಥ ಗುಜರಾತ್ ಚುನಾವಣಾ ಫಲಿತಾಂಶಗಳು ಅನಿರೀಕ್ಷಿತವಾಗಿತ್ತು ಎಂದೇನಲ್ಲ. ವಾಸ್ತವವಾಗಿ ಬಂದ ಫಲಿತಾಂಶ ನಿರೀಕ್ಷಿತವೇ ಆಗಿತ್ತು. ಭಾರತೀಯ ಜನತಾ ಪಕ್ಷ ಗೆಲ್ಲಲೇ ಬೇಕಿತ್ತು. ಹಾಗೂ ಅದು ಗೆದ್ದಿತು. ಆದರೆ ಅದರ ಜಯ ನಿರ್ಣಾಯಕವಾದ ಜಯವಾಗಿರಲಿಲ್ಲ; ಅದು ಕಾಂಗ್ರೆಸ್ಸನ್ನು ಸೋಲಿಸಿತು, ಆದರೆ ಮಣ್ಣುಗೂಡಿಸಲಿಲ್ಲ; ಅದು ಊನಗೊಂಡಿದೆ, ಆದರೆ ಪ್ರಯಾಣ ನಿಂತಿಲ್ಲ.
ಗುಜರಾತ್ ಚುನಾವಣೆಯಲ್ಲಿ ಗೆಲ್ಲುವ ಮೂಲಕ ಇದೀಗ ಬಿಜೆಪಿ ಭಾರತದ ೨೯ ರಾಜ್ಯಗಳಲ್ಲಿ ೧೯ ರಾಜ್ಯಗಳನ್ನು ನಿಯಂತ್ರಿಸುತ್ತಿದೆ. ಇದರೊಂದಿಗೆ ಲೋಕಸಭೆಯಲ್ಲೂ ಅದಕ್ಕೆ ಬಹುಮತವಿದೆ. ಎರಡು ದಶಕಗಳ ಹಿಂದೆ ಕಾಂಗ್ರೆಸ್ ಪಕ್ಷವು ಆಗಿದ್ದ ೨೬ ರಾಜ್ಯಗಳಲ್ಲಿ ೧೬ರಲ್ಲಿ ರಾಜ್ಯಭಾರ ಮಾಡುತ್ತಿತ್ತು. ಹಾಗಿದ್ದಲ್ಲಿ ಈ ದೇಶದಲ್ಲಿ ಒಂದು ಪ್ರಮುಖ ವಿರೋಧ ಪಕ್ಷವೇ ಇಲ್ಲದ ರೀತಿ ಕಾಂಗ್ರೆಸ್ ಮುಕ್ತ ಭಾರತವನ್ನು ಮಾಡುವ ಅದರ ಕನಸು ಯೋಜಿಸಿದ ರೀತಿಯಲ್ಲೇ ನಡೆಯುತ್ತಿದೆಯೇ? ಗುಜರಾತ್ ಫಲಿತಾಂಶವು ಒಂದು ಅನಿರೀಕ್ಷಿತ ಹಿನ್ನೆಡೆಯಷ್ಟೇ ಆಗಿದ್ದು, ಚುನಾವಣೆಯನ್ನು ಎದುರಿಸಲು ಬಿಜೆಪಿಯೊಳಗಿರುವ ಸುಸಜ್ಜಿತ ವ್ಯವಸ್ಥೆಯನ್ನು ನೋಡಿದರೆ ಈ ಸಿಕ್ಕನ್ನು ನಿವಾರಿಸಿಕೊಳ್ಳುವುದು ಕಷ್ಟವೇನೂ ಅಲ್ಲ. ಗುಜರಾತ್ ವಿಧಾನಸಭೆಯಲ್ಲಿ ಮೂರನೇ ಎರಡು ಭಾಗದಷ್ಟು ಬಹುಮತವನ್ನು ಪಡೆಯುವುದಾಗಿ ಬಿಜೆಪಿ ಕೊಚ್ಚಿಕೊಂಡಿದ್ದರೂ ಸರಳ ಬಹುಮತಕ್ಕಿಂತೆ ಕೇವಲ ಏಳು ಸ್ಥಾನಗಳನ್ನು ಮಾತ್ರ ಜಾಸ್ತಿ ಪಡೆದು ೯೯ ಸ್ಥಾನಗಳಿಗೆ ತೃಪ್ತಿ ಪಡೆಯವಂತಾಗಿದೆ. ಇದು ವಿಸರ್ಜಿತ ವಿಧಾನಸಭೆಯಲ್ಲಿ ಅದಕ್ಕಿದ್ದ ಸ್ಥಾನಬಲಕ್ಕಿಂತ ಕಡಿಮೆ ಎನ್ನುವುದೂ ನಿಜ. ಆದರೆ ಅದೇ ಸಮಯದಲ್ಲಿ ಅದು ಕಳೆದ ವಿಧಾನಸಭಾ ಚುನಾವಣೆಗಳಿಗೆ ಹೋಲಿಸಿದಲ್ಲಿ ಸ್ವಲ್ಪ ಹೆಚ್ಚಿನ ಓಟುಗಳನ್ನೇ ಪಡೆದುಕೊಂಡಿದೆ. ಅದರ ಬೆಂಬಲದ ನೆಲೆಯು ಇನ್ನೂ ಬಲಿಷ್ಟವಾಗಿದ್ದು, ಆಳುವ ಸರ್ಕಾರ ವಿರೋಧಿ ಮನೋಭಾವವಾಗಲೀ, ಪುನಶ್ಚೇತನ ಪಡೆದುಕೊಂಡ ಕಾಂಗ್ರೆಸ್ಸಾಗಲೀ ಅದನ್ನು ಕಿತ್ತುಕೊಳ್ಳಲು ಸಾಧ್ಯವಾಗಿಲ್ಲ.
ಗುಜರಾತಿನ ಚುನಾವಣಾ ಫಲಿತಾಂಶದಿಂದ ಭವಿಷ್ಯದ ಬೆಳವಣಿಗೆಗಳ ಬಗ್ಗೆ ಹಲವಾರು ಮಹತ್ವದ ಸೂಚನೆಗಳು ಲಭ್ಯವಾಗುತ್ತವೆ. ಮೊದಲನೆಯದಾಗಿ ೨೦೧೪ರ ಚುನಾವಣೆಯಲ್ಲಿ ಇಡೀ ಭಾರತವನ್ನು ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿಗೊಳಿಸುವುದಾಗಿ ನರೇಂದ್ರಮೋದಿಯವರು ಭರವಸೆ ನೀಡಿದ್ದರು. ಆ ಗುಜರಾತ್ ಅಭಿವೃದ್ಧಿ ಮಾದರಿ ಹುಸಿಯೆಂಬುದನ್ನು ಈ ಚುನಾವಣೆ ಸಾಬೀತುಮಾಡಿದೆ. ಗುಜರಾತ್ ಅಭಿವೃದ್ಧಿ ಮಾದರಿಯೆಂದರೆ ರಾಜ್ಯದ ನಗರ ಭಾಗಗಳನ್ನು ಮತ್ತು ಕೆಲವು ಆಯ್ದ ಪ್ರದೇಶಗಳನ್ನು ಮಾತ್ರ ಅಭಿವೃದ್ಧಿಗೊಳಿಸಿ ಮಿಕ್ಕವನ್ನು ಕಡೆಗಣಿಸಿ ಯಾರ ದೃಷ್ಟಿಗೂ ಬೀಳದಂತೆ ಮಾಡುವುದೆಂದರ್ಥ. ಈ ಬಾರಿಯ ಗುಜರಾತ್ ಚುನಾವಣೆಯ ಫಲಿತಾಂಶದಲ್ಲಿ ಅತ್ಯತ ಸ್ಪಷ್ಟವಾದ ನಗರ-ಗ್ರಾಮೀಣವೆಂಬ ವಿಭೇಧವಿರುವುದೂ ಮತ್ತು ಬಿಜೆಪಿಯ ಬಹುಪಾಲು ಓಟುಗಳೂ ಮತ್ತು ಸೀಟುಗಳೂ ನಗರ ಭಾಗಗಳಿಂದಲೇ ಬಂದಿರುವುದು ಇದನ್ನು ರುಜುವಾತು ಮಾಡುತ್ತದೆ. ಈ ತಥಾಕಥಿತ ಗುಜರಾತ್ ಅಭಿವೃದ್ಧಿ ಮಾದರಿಯಿಂದ ಕಡೆಗಣಿಸಲ್ಪಟ್ಟೂ ಭ್ರಮನಿರಸನಗೊಂಡ ಗ್ರಾಮೀಣ ಮತದಾರರು ತಮ್ಮ ರಾಜ್ಯದ ಸಾಮಾಜಿಕ ಹಂದರದ ಭಾಗವೇ ಆಗಿಬಿಟ್ಟಿರುವ ಬಿಜೆಪಿ ಪಕ್ಷವನ್ನು ತ್ಯಜಿಸಿ ಜಾತಿಗಳ ಎಲ್ಲೆಗಳನ್ನು ಮೀರಿ ಅಷ್ಟೊಂದು ಸುಸಂಘಟಿತವಲ್ಲದ ವಿರೋಧಪಕ್ಷಕ್ಕೆ ಮತಹಾಕುವ ಮೂಲಕ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ. ಇಂಥಾ ಭ್ರಮನಿರಸನದ ಪ್ರತಿಧ್ವನಿಗಳು ಈಗ ರಾಜಸ್ಥಾನದಲ್ಲೂ ಕೇಳಿಬರುತ್ತಿದ್ದು, ಇತ್ತೀಚೆಗೆ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಕಾಂಗ್ರೆಸ್ ಪಕ್ಷವು ಅಲ್ಲಿ ಬಿಜೆಪಿಗಿಂತ ಉತ್ತಮವಾದ ಫಲಿತಾಂಶವನ್ನು ಪಡೆದುಕೊಂಡಿದೆ.
ಎರಡನೆಯದಾಗಿ, ಬಿಜೆಪಿಯು ಒಂದು ಸೋಲಿಸಲು ಸಾಧ್ಯವೇ ಇಲ್ಲದ ಪಕ್ಷವೇನಲ್ಲವೆಂಬುದು ಸಾಬೀತಾಗಿದ್ದರೂ ಅದು ಎದುರಾಳಿಯಲ್ಲಿ ನಡುಕ ಹುಟ್ಟಿಸಬಲ್ಲ ಸ್ಪರ್ದಿಯೆಂಬುದಂತೂ ಮತ್ತೊಮ್ಮೆ ಈ ಫಲಿತಾಂಶವು ನೆನಪಿಸಿದೆ. ನರೇಂದ್ರಮೋದಿ-ಅಮಿತ್ ಶಾ ಗಳು ಪ್ರತಿಯೊಂದು ವಿಷಯದಲ್ಲೂ ಎಚ್ಚರಿಕೆಯನ್ನು ಪ್ರದರ್ಶಿಸುತ್ತಿದ್ದಾರೆ. ಬಿಜೆಪಿಯ ರಾಜಕೀಯ ನೀತಿಗಳಿಂದ ಉಂಟಾಗುತ್ತಿದ್ದ ಅಸಮಾಧಾನವನ್ನು ಅದರ ವಿರುದ್ಧ ಓಟಾಗಿ ಪರಿವರ್ತಿಸುವ ಅವಕಾಶವನ್ನು ಕಾಂಗ್ರೆಸ್ ಮನಗಂಡು ಎಚ್ಚರವಾಗುವ ಸಾಕಷ್ಟು ಮುಂಚಿತವಾಗಿಯೇ ಅವರು ಬುಡಮಟ್ಟದಲ್ಲಿ ತಯಾರಿಯನ್ನು ಪ್ರಾರಂಭಿಸಿದ್ದರು. ಒಂದು ಸೈದ್ಧಾಂತಿಕವಾಗಿ ಗಟ್ಟಿಯಾಗಿರುವ ಪಕ್ಷವನ್ನು ಸರಿಸಮವಾಗಿ ಎದುರಿಸಲು ತಳಮಟ್ಟದಲ್ಲಿ ಪ್ರಬಲವಾದ ಸಂಘಟನೆ ಇರಬೇಕು. ಕೇವಲ ಚುನಾವಣಾ ಪೂರ್ವದ ಜನಾಕರ್ಷಕ ರ್ಯಾಲಿಗಳು ಮಾತ್ರ ಸಾಕಾಗುವುದಿಲ್ಲ. ಕಾಂಗ್ರೆಸ್ಸು ಗೆಲ್ಲಲು ಬೇಕಾದಷ್ಟು ಸ್ಥಾನಗಳು ಸಿಗುವುದು ಕಷ್ಟವೇ ಇತ್ತು. ಏಕೆಂದರೆ ಸತತ ಚುನಾವಣಾ ಸೋಲುಗಳಿಂz ಕಂಗಾಲಾಗಿದ್ದ ಕಾಂಗ್ರೆಸ್ಸಿಗೆ ಗೆಲ್ಲಲು ಬೇಕಿರುವಷ್ಟು ರಾಜ್ಯಮಟ್ಟದ ಸಂಘಟನೆಯೇ ಗುಜರಾತಿನಲ್ಲಿ ಇರಲಿಲ್ಲ. ಹಾಗೆ ನೋಡಿದರೆ ಕಾಂಗ್ರೆಸ್ಸು ೧೯೮೫ರಲ್ಲಿ ೭೭ ಸ್ಥಾನಗಳನ್ನು ಪಡೆದ ನಂತರದಲ್ಲಿ ಈ ಚುನಾವಣೆಯಲ್ಲೇ ಒಳ್ಳೆಯ ಫಲಿತಾಂಶವನ್ನು ಪಡೆದಿದೆ. ಆದರೆ ಈ ಚುನಾವಣೆ ಮತ್ತು ಫಲಿತಾಂಶಗಳು ನೀಡಿರುವ ಸಕಾರಾತ್ಮಕ ಹುಮ್ಮಸ್ಸನ್ನು ಕ್ರೂಢೀಕರಿಸಿ ಮುಂದಕ್ಕೆ ತೆಗೆದುಕೊಂಡು ಹೋಗಬಹುದಾದ ರಾಜ್ಯ ನಾಯಕತ್ವ ಈಗಲೂ ಕಾಂಗ್ರೆಸ್ಸಿಗಿಲ್ಲ. ಹೀಗಾಗಿ ಈ ಬಾರಿ ಅತ್ಯಂತ ನಿಕಟ ಸ್ಪರ್ಧೆಯನ್ನು ಒಡ್ಡಿದ ಅಲ್ಪತೃಪ್ತಿಯಲ್ಲಿ ಕಾಂಗ್ರೆಸ್ಸು ಮುಳುಗಿಹೋಗಬಾರದು. ಇದು ಮೂವತ್ತಕ್ಕೂ ಹೆಚ್ಚಿನ ಸ್ಥಾನಗಳಲ್ಲಿ ಅದರ ಗೆಲುವಿನ ಅಂತರ ತೀರಾ ಅಲ್ಪವೆಂಬುದರಲ್ಲೂ ಸ್ಪಷ್ಟವಾಗುತ್ತದೆ.
ಮೂರನೆಯದಾಗಿ ಆ ವಿವಿಧ ಜನಗುಂಪುಗಳಿಗೆ ಸೇರಿದ ಆ ಮೂವರು ಯುವಕರು ದೊಡ್ಡ ಸಂಖ್ಯೆಯಲ್ಲಿ ಜನರನ್ನು ಮತ್ತು ಮಾಧ್ಯಮಗಳನ್ನು ಸೆಳೆದು ಮೋದಿ ಸರ್ಕಾರದ ವಿರುದ್ಧ ಜನರ ಅತೃಪ್ತಿಯನ್ನು ಕಾಂಗ್ರೆಸ್ ಪರವಾಗಿ ಹರಿಯುವಂತೆ ಮಾಡಿದ್ದಾರೆ. ಆದರೆ ಅಷ್ಟೆ ಸಾಲುವುದಿಲ್ಲ. ಊನಾದಲ್ಲಿ ದಲಿತ ಯುವಕರ ಮೇಲೆ ಬಹಿರಂಗವಾಗಿ ನಡೆದ ದೌರ್ಜನ್ಯದ ವಿರುದ್ಧ ನಡೆದ ಹೋರಾಟದ ಮೂಲಕ ಪ್ರಾಮುಖ್ಯತೆ ಗಳಿಸಿಕೊಂಡ ದಲಿತ ವಕೀಲ ಜಿಗ್ನೇಶ್ ಮೇವಾನಿ, ಪಾತಿದಾರ್ ಸಮುದಾಯವನ್ನು ಬಿಜೆಪಿ ವಿರುದ್ಧ ಮತ ಚಲಾಯಿಸುವಂತೆ ಪ್ರೇರೇಪಿಸಿದ ಹಾರ್ದಿಕ್ ಪಟೇಲ್, ಮತ್ತು ಹಿಂದುಳಿದ ಜಾತಿಗಳಲ್ಲಿ ಒಂದು ಜಾತಿಯ ಆಕ್ರೋಶವನ್ನು ಪ್ರತಿಧ್ವನಿಸಿದ ಅಲ್ಪೇಶ್ ಠಾಕೂರ್ ಅವರುಗಳು ಗುಜರಾತಿನ ಚುನಾವಣೆಗೆ ಸಾಕಷ್ಟು ರಂಗನ್ನು ಹಾಗೂ ಕುತೂಹಲವನ್ನು ತುಂಬಿದರು. ಆದರೆ ಆಗಲೂ ಮತ್ತು ಈಗಲೂ ಸ್ಪಷ್ಟವಾಗಿರುವ ಅಂಶವೇನೆಂದರೆ ಬಿಡಿಬಿಡಿಯಾಗಿಯಾಗಲೀ, ಒಟ್ಟಾಗಿಯಾಗಲೀ ಅವರು ಒಂದು ಸುಸ್ಥಿರ ಪರ್ಯಾಯವಾದ ಭಾಗವೇನಲ್ಲ. ಅದು ಮುಂದೊಮ್ಮೆ ಸಾಧ್ಯವಾಗಲೂಬಹುದು. ಆದರೆ, ಅವರಲ್ಲಿ ಇತರ ದಮನಿತ ವಿಭಾಗಗಳನ್ನೆಲ್ಲವನ್ನೂ ಒಂದುಗೂಡಿಸಬೇಕೆಂಬ ದೃಷ್ಟಿಕೋನವನ್ನು ಜಿಗ್ನೇಶ್ ಮೇವಾನಿಯವರು ಮಾತ್ರ ಹೊಂದಿದ್ದಾರೆ. ಅವರನ್ನು ಬಿಟ್ಟರೆ, ಬಿಜೆಪಿ ವಿರೋಧವನ್ನು ಹೊರತುಪಡಿಸಿ ಈ ಮೂವರನ್ನು ಒಂದಾಗಿಡಬಲ್ಲ ಬೇರೆ ಯಾವುದೇ ವಿಷಯವಿಲ್ಲ.
ನಾಲ್ಕನೆಯದಾಗಿ, ಮೋದಿಯವರು ಫಲಿತಾಂಶ ಹೊರಬಂದ ನಂತರ ಪಕ್ಷದಲ್ಲಿ ಮಾಡಿದ ಭಾಷಣವನ್ನು ಗಮನಿಸಿದರೆ, ಗುಜರಾತ್ ಚುನಾವಣೆಯನ್ನು ಗೆದ್ದರೂ ಬಿಜೆಪಿ ಗೆಲುವಿನ ಸಂಭ್ರಮದಲ್ಲಿ ವಿರಮಿಸುತ್ತಿಲ್ಲ. ಚುನಾವಣೆಯಲ್ಲಿ ಸೋತ ಸ್ಥಾನಗಳ ಬಗ್ಗೆಯೂ ವಿಶ್ಲೇಷಣೆಗಳನ್ನು ನಡೆಸಿ ಭವಿಷ್ಯದ ದೃಷ್ಟಿಯಿಂದ ಪಾಠಗಳನ್ನು ಕಲಿತು ತಿದ್ದುಪಡಿಗಳನ್ನು ಮಾಡಿಕೊಳ್ಳುವ ತಯಾರಿ ನಡೆದಿದೆ. ಈಗಾಗಲೇ ಕೃಷಿ ಬಿಕ್ಕಟ್ಟಿನ ಬಗ್ಗೆ ಕ್ರಮಗಳನ್ನು ತೆಗೆದುಕೊಳ್ಳುವುದರ ಮಹತ್ವವನ್ನು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಲಾಗಿದೆ. ಹೀಗಾಗಿ ಕೇಂದ್ರ ಸರ್ಕಾರವು ಹಲವು ನೀತಿ ನಿರ್ಧಾರಗಳನ್ನು ಪ್ರಕಟಿಸಿದರೂ ಆಶ್ಚರ್ಯಪಡಬೇಕಿಲ್ಲ. ಬಿಜೆಪಿಯನ್ನು ಎದುರಿಸಬೇಕೆಂಬ ಯಾರೇ ಆದರೂ ಇದಕ್ಕೆ ಸರಿಸಮನಾದ ನಿರಂತರ ಬದ್ಧತೆಯನ್ನೂ ಮತ್ತು ವ್ಯೂಹಾತ್ಮಕ ಜಾಣ್ಮೆಯನ್ನು ಹೊಂದಿರಬೇಕಿರುತ್ತದೆ. ಏಕೆಂದರೆ ಗುಜರಾತ್ ಚುನಾವಣೆಯು ಸಾರುತ್ತಿರುವ ಮತ್ತೊಂದು ಪಾಠವೆಂದರೆ ಆಳುವ ಸರ್ಕಾರದ ನೀತಿಗಳ ವಿರುದ್ಧದ ಅಸಹನೆಯು ಎಷ್ಟೇ ತೀವ್ರವಾಗಿದ್ದರೂ, ಎಷ್ಟೇ ವ್ಯಾಪಕವಾಗಿದ್ದರೂ ಒಂದು ವಿಶ್ವಾಸಾರ್ಹ ಪರ್ಯಾಯವಿಲ್ಲದಾಗ ಆಳುವ ಸರ್ಕಾರದ ವಿರುದ್ಧದ ಓಟಾಗಿ ಪರಿವರ್ತನೆಯಾಗುವುದಿಲ್ಲ.
ಆಚೇ ದಿನ, ಸಭ್ ಕಾ ಸಾಥ್ , ಸಬ್ ಕಾ ವಿಕಾಸ್ ನ ಭರವಸೆಗಳು ಸ್ಪಷ್ಟವಾಗಿ ಕ್ಷೀಣಗೊಳ್ಳುತ್ತಿದೆ. ಆದರೆ ಅದೇ ಸಮಯದಲ್ಲಿ ಮತಪೆಟ್ಟಿಗೆಯ ಮೂಲಕ ಹಿಂದೂಗಳು ಸೇಡು ತೀರಿಸಿಕೊಳ್ಳಬೇಕೆಂದು ಕೆಲವು ಕಡೆ ತಣ್ಣಗೆ, ಕೆಲವು ಕಡೆ ಆಬ್ಬರದಲ್ಲಿ ಬಿಜೆಪಿ ಮಾಡುವ ಪ್ರಚಾರಗಳೂ ಸಹ ಇನ್ನೂ ಪರಿಣಾಮ ಬೀರುತ್ತಿರುವುದು ಸತ್ಯ. ಮುಸ್ಲಿಮರನ್ನು, ದಲಿತರನ್ನು ಮತ್ತಿತರ ವಂಚಿತ ಸಮುದಾಯಗಳನ್ನು ಒಂದು ರಾಜಕೀಯ ಭೂಮಿಕೆಯ ಮೇಲೆ ಒಟ್ಟಿಗೆ ತರುವುದೇ ಇಂದು ಪ್ರಗತಿಪರರ ಮುಂದಿರುವ ನಿಜವಾದ ಸವಾಲಾಗಿದೆ. ಗುಜರಾತಿನಲ್ಲಿ ಕಾಂಗ್ರೆಸ್ ಅನುಸರಿಸುತ್ತಿರುವ ನೀತಿಯು ರಾಜಕೀಯ ದಿವಾಳಿಕೋರತನದಿಂದ ಕೂಡಿದೆ. ಅದು ಬಿಜೆಪಿಯ ಅಬ್ಬರದ ಹಿಂದೂತ್ವ ರಾಜಕೀಯವನ್ನು ಮುಖಾಮುಖಿ ಎದುರಿಸಲು ವಿಫಲವಾಗಿದೆ. ಮಾತ್ರವಲ್ಲದೆ ತಾನೂ ಕೂಡ ಅದರ ಕೆಟ್ಟ ನಕಲು ಮಾಡುತ್ತಿದೆ. ಇದೇ ಭವಿಷ್ಯದ ಮಾದರಿಯು ಅಗಿಬಿಟ್ಟರೆ ಅದಕ್ಕಿಂತ ದೊಡ್ಡ ದುರಂತ ಬೇರೊಂದಿರುವುದಿಲ್ಲ. ಏಕೆಂದರೆ ಬಹುಸಂಖ್ಯಾತರ ದುರಭಿಮಾನಿ ರಾಜಕಾರಣವನ್ನು ಮಾಡುವ ಸ್ಪರ್ದೆಯಲ್ಲಿ ಬಿಜೆಪಿ ಈಗಾಗಲೇ ಮೇಲುಗೈ ಸಾಧಿಸಿದೆ.
ಕೃಪೆ: Economic and Political Weekly Dec
23, 2017. Vol. 52. No. 51
(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ