ಮಂಗಳವಾರ, ಜನವರಿ 23, 2018

ಸಮಸ್ಯೆ ಇರುವುದು ಸುಪ್ರೀಂ ಕೋರ್ಟಿನಲ್ಲಿ ಮಾತ್ರವಲ್ಲ

Image result for suprim court delhi
 ಅನುಶಿವಸುಂದರ್ 
ಸುಪ್ರೀಂಕೋರ್ಟನ್ನು ಒಳಗೊಂಡಂತೆ ಪ್ರಜಾತಂತ್ರದ ಹಲವಾರು ಸಂಸ್ಥೆಗಳು ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿವೆ.

ಸುಪ್ರೀಂ ಕೋರ್ಟಿನಲ್ಲಿ ಕಳೆದ ವಾರ ನಡೆದ ಘಟನೆಗಳು ಖಂಡಿತಾ ಸಣ್ಣ ಸಂಗತಿಯಲ್ಲ. ಅಥವಾ ಒಂದು ಕುಟುಂಬದೊಳಗಿನ ತಕರಾರೂ ಅಲ್ಲ. ೨೦೧೮ರ ಜನವರಿ ೧೨ರಂದು ಸುಪ್ರೀಂಕೋರ್ಟಿನ ನಾಲ್ವರು ಅತಿ ಹಿರಿಯ ನ್ಯಾಯಾಧೀಶರು ನವ ದೆಹಲಿಯಲ್ಲಿ ನಡೆಸಿದ ಪತ್ರಿಕಾ ಗೋಷ್ಟಿಯು ಹುಟ್ಟುಹಾಕಿದ ಚರ್ಚೆಗಳು ಯಾವ ಸಂಸ್ಥೆಯು ಪ್ರಶ್ನಾತೀತವೂ ಅಲ್ಲ ಅಥವಾ ಸುಧಾರಣೆಗೆ ಹೊರತಾದದ್ದೂ ಅಲ್ಲ ಎಂಬುದನ್ನು ಸ್ಪಷ್ಟಪಡಿಸಿದೆ. ಸುಪ್ರೀಂ ಕೋರ್ಟಿನ ನಾಲ್ವರು ಹಿರಿಯ ನ್ಯಾಯಾಧೀಶರುಗಳಾದ ನ್ಯಾಯಮೂರ್ತಿ ಜೆ. ಚಲಮೇಶ್ವರ್, ರಂಜನ್ ಗೋಗೋಯ್, ಮದನ್ ಲೋಕೂರ್ ಮತ್ತು ಕುರಿಯನ್ ಜೋಸೆಫ್ ಅವರುಗಳು ೨೦೧೭ರ ನವಂಬರ್ನಲ್ಲಿ ಮುಖ್ಯ ನ್ಯಾಯಾಧೀಶರಾದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರಿಗೆ ಬರೆದ ಪತ್ರವು ಅವರುಗಳ ನಡುವೆ ಇದ್ದ ಭಿನ್ನಾಭಿಪ್ರಾಯಗಳ ಸ್ವರೂಪದ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡುವುದಿಲ್ಲವಾದರೂ, ಭಿನ್ನಾಭಿಪ್ರಾಯಗಳು ಯಾವುದೋ ಒಂದು ವಿಷಯದ ಸುತ್ತ ಇಲ್ಲದೆ ಸರಣಿಯೋಪಾದಿಯಲ್ಲಿ ಘಟಿಸಿಸಿರುವ ಹಲವು ಸಂಗತಿಗಳ ಬಗೆಗೆ ಇದೆಯೆಂಬುದು ಈಗ ಸ್ಪಷ್ಟವಾಗಿದೆ. ಆದರೆ ಕಾರಣ-ಪರಿಣಾಮಗಳ ಬಗ್ಗೆ ಸಂಕುಚಿತ ಮತ್ತು ರೋಚಕ ಸಂಗತಿಗಳನ್ನು ವರದಿ ಮಾಡಲು ತುದಿಗಾಲಲ್ಲಿ ನಿಂತಿದ್ದ ಮಾಧ್ಯಮಗಳು ಮಾತ್ರ ವಿವಾದಕ್ಕೆ ಸಿಬಿಐ ನ್ಯಾಯಾಧೀಶರಾಗಿದ್ದ ಲೋಯಾ ಅವರ ಕೊಲೆಯ ವಿಚಾರಣೆಯನ್ನು ನಡೆಸಲು ನೇಮಿಸಲಾದ ಪೀಠದ ಬಗ್ಗೆ ಮುಖ್ಯ ನ್ಯಾಯಾಧೀಶರಿಗೂ ಮತ್ತು ನಾಲ್ವರು ಹಿರಿಯ ನ್ಯಾಯಾಧೀಶರಿಗೂ ನಡುವೆ ಏರ್ಪಟ್ಟ ಭಿನ್ನಭಿಪ್ರಾಯಗಳೇ ಕಾರಣವೆಂದು ಬಿತ್ತರಿಸಿದವು.

ಸುಪ್ರೀಂ ಕೋರ್ಟಿನ ಹಿರಿಯ ನ್ಯಾಯಾಧೀಶರುಗಳು ಹೀಗೆ ಪತ್ರಿಕಾಗೋಷ್ಟಿಯನ್ನು ನಡೆಸಿರುವುದರ ಔಚಿತ್ಯದ ಬಗ್ಗೆ ಕೆಲವರು ಪ್ರಶ್ನೆಗಳನ್ನು ಎತ್ತಿದ್ದಾರಾದರೂ, ಭಾರತದ ನಾಗರಿಕರ ಪಾಲಿನ ಅಂತಿಮ ಆಸರೆಯಾಗಿರುವ ಸಂಸ್ಥೆಯ ನಡಾವಳಿಗಳಲ್ಲಿ ಉತ್ತರದಾಯಿತ್ವ ಮತ್ತು ಪಾರದರ್ಶಕತೆ ಬರಬೇಕಿರುವುದು ಮಾತ್ರ ಅತ್ಯಂತ ಅಗತ್ಯವಾಗಿದೆ. ನಾಲ್ವರು ನ್ಯಾಯಾಧೀಶರು ಮುಖ್ಯ ನ್ಯಾಯಾಧೀಶರಿಗೆ ಬರೆದಿರುವ ಪತ್ರದಲ್ಲಿ ಎಳ್ಳು ಕಾಳಿನಷ್ಟು ಸತ್ಯಾಂಶವಿದ್ದರೂ ಸಹ ಅದು ಅತ್ಯಂತ ಗಂಭೀರವಾದ ಸಂಗತಿಯೇ ಆಗಿದೆ. ಇತ್ತೀಚಿನ ದಿನಗಳಲ್ಲಿ ಮುಖ್ಯ ನ್ಯಾಯಾಧೀಶರು ರಾಜಕೀಯವಾಗಿ ಅತ್ಯಂತ ಸೂಕ್ಷವಾಗಿರುವ ಹಲವಾರು ಪ್ರಕರಣಗಳನ್ನು, ಪ್ರಾಯಶಃ ಒಂದು ನಿರ್ದಿಷ್ಟ ಆದೇಶವನ್ನು ಅಪೇಕ್ಷಿಸುತ್ತಾ, ಉದ್ದೇಶಪೂರ್ವಕವಾಗಿ ಕೆಲವು ನಿರ್ದಿಷ್ಟ ಪೀಠಗಳಿಗೆ ವಹಿಸುತ್ತಿದ್ದಾರೆ ಎಂಬುದು ನಾಲ್ವರು ಹಿರಿಯ ನ್ಯಾಯಾಧೀಶರು ತಮ್ಮ ಪತ್ರದಲ್ಲಿ ಎತ್ತಿರುವ ಅತ್ಯಂತ ಗಂಭೀರವಾದ ವಿಷಯವಾಗಿದೆ. ಮುಖ್ಯ ನ್ಯಾಯಾಧೀಶರು ಪೀಠಗಳ ಹಂಚಿಕೆಯನ್ನು ನಿರ್ವಹಣೆ ಮಾಡುವಾಗ (ರೋಸ್ಟರ್)ಒಂದು ಸರಿಯಾದ ನೀತಿ ಮತ್ತು ನಿಯಮಗಳನ್ನು ಅನುಸರಿಸುವ ಅಗತ್ಯವನ್ನು ನಾಲ್ವರು ಹಿರಿಯರು ಒತ್ತಿಹೇಳಿದ್ದಾರೆನ್ಯಾಯಾಧೀಶರುಗಳು ಹಾಗೆ ನಿಯಮವನ್ನು ಪಾಲಿಸದಿದ್ದಲ್ಲಿ  ಸಂಸ್ಥೆಯ ವಿಶ್ವಾಸಾರ್ಹತೆಯ ಬಗ್ಗೆ ಜನತೆಯಲ್ಲಿ ಸಂದೇಹಗಳು ಹುಟ್ಟುಕೊಂಡು ಅನಗತ್ಯವಾದ ಮತ್ತು ಅನಪೇಕ್ಷಿತ ಹಾಗೂ ಅಹಿತವಾದ ಪರಿಣಾಮಗಳಿಗೆ ದಾರಿಮಾಡಕೊಡಬಹುದೆಂದು ಆತಂಕ ವ್ಯಕ್ತಪಡಿಸಿದ್ದಾರೆ. ಅಷ್ಟುಮಾತ್ರವಲ್ಲ ಪೀಠ ಹಂಚಿಕೆಯಲ್ಲಿ ಯಾವುದೇ ನಿಯಮವನ್ನು ಪಾಲಿಸದ ಕಾರಣ ಮತ್ತು ಈವರೆಗೆ ಅನುಸರಿಸಿಕೊಂಡು ಬಂದ ಪದ್ಧತಿಯನ್ನು ಪಾಲಿಸದ ಕಾರಣ ಈಗಾಗಲೇ ಸಂಸ್ಥೆಯ ಘನತೆಗೆ ಒಂದಷ್ಟು ಹಾನಿಯಾಗಿದೆ ಎಂದೂ ಅವರು ಅಭಿಪ್ರಾಯ ಪಟ್ಟಿದ್ದಾರೆ. ಮುಖ್ಯನ್ಯಾಯಾಧೀಶರು ಮತ್ತು ನಂತರದ ಹಿರಿಯ ನಾಲ್ವರು ನ್ಯಾಯಾಧೀಶರುಗಳ ನಡುವೆ ಮುರಿದು ಬಿದ್ದಿರುವ ವಿಶ್ವಾಸವು ಹೇಗೆ ಮತ್ತೆ ಸರಿಯಾಗಬಲ್ಲದು ಎಂಬುದನ್ನು ಕಾದುನೋಡಬೇಕಿದೆ. ಎಲ್ಲಾ ವಿವರಗಳಿಗಿಂತ ಅತ್ಯಂತ ಮುಖ್ಯವಾದ ಸಂಗತಿಯೆಂದರೆ ವಿವಾದವು ಬಗೆಹರಿಯುವುದು ಸಾರ್ವಜನಿಕ ಹಿತಾಸಕ್ತಿಯ ದೃಷ್ಟಿಯಿಂದ ಮತ್ತು ಸಂಸ್ಥೆಯ ವಿಶ್ವಾಸಾರ್ಹತೆಯ ದೃಷ್ಟಿಯಿಂದ ಅತ್ಯಂತ ಮುಖ್ಯವಾದದ್ದಾಗಿದೆ. ಸಂಸ್ಥೆಯ ವಿಶ್ವಾಸಾರ್ಹತೆಗೆ ಕುಂದು ಉಂಟಾದರೆ ಅದು ನೆಲದಲ್ಲಿ ಪ್ರಜಾಸತ್ತೆಗೆ ಒಂದು ದೊಡ್ಡ ಹೊಡೆತವನ್ನು ಕೊಟ್ಟಂತಾಗುತ್ತದೆ ಎಂದು ನ್ಯಾಯಮೂರ್ತಿ ಚಲಮೇಶ್ವರ್ ಅವರು ಪತ್ರಿಕಾಗೊಷ್ಟಿಯಲ್ಲಿ ಅಭಿಪ್ರಾಯ ಪಟ್ಟಿದ್ದಾರೆ.

ಆದರೂ ಈಗ ವಿಶ್ವಾಸಾರ್ಹತೆಯ ಪ್ರಶ್ನೆಯನ್ನು ಎದುರಿಸುತ್ತಿರುವುದು ಕೇವಲ ಸುಪ್ರೀಂ ಕೋರ್ಟು ಮಾತ್ರವಲ್ಲ. ಬದಲಿಗೆ ಪ್ರಜಾಸತ್ತೆಯ ಎಲ್ಲಾ ಸಂಸ್ಥೆಗಳು ವಿಶ್ವಾಸಾರ್ಹತೆಯ ಬಿಕ್ಕಟ್ಟನ್ನು ಎದುರಿಸುತ್ತಿವೆ

ಉದಾಹರಣೆಗೆ ಶಾಸಕಾಂಗವನ್ನು ತೆಗೆದುಕೊಳ್ಳಿ. ಕಾಲಕಳೆದಂತೆ ಶಾಸನಗಳನ್ನು ಚರ್ಚೆ ಮಾಡಬೇಕಾದ ವೇದಿಕೆಯಾದ ಸಂಸತ್ತಿನಲ್ಲಿ ಅಂಥದ್ದೇನೂ ನಡೆಯುತ್ತಿಲ್ಲ. ಇತ್ತೀಚೆಗೆ ಕೇವಲ ೧೫ ದಿನಗಳ ಕಾಲ ನಡೆದು ಮುಕ್ತಾಯವಾದ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಯಾವ ಮುಖ್ಯ ಶಾಸನಗಳ ಬಗ್ಗೆಯೂ ಗಂಭೀರವಾದ ಚರ್ಚೆಯೇ ನಡೆಯಲಿಲ್ಲ. ಮುಸ್ಲಿಂ ಮಹಿಳೆಯರ ಹಕ್ಕುಗಳ ರಕ್ಷಣಾ ಮಸೂದೆ-೨೦೧೭ರ ಬಗ್ಗೆಯೂ ಲೋಕಸಭೆಯಲ್ಲಿ ತರಾತುರಿ ಚರ್ಚೆಗಳು ನಡೆದು ಈಗ ಮಸೂದೆಯು ರಾಜ್ಯಸಭೆಯಲ್ಲಿದೆ. ಸಂಸತ್ತಿನಲ್ಲಿ  ಈಗ ಇದೊಂದು ರೂಢಿಗತವಾದ ಪದ್ಧತಿಯೇ ಆಗಿಬಿಟ್ಟಿದೆ. ದೇಶದ ತೆರಿಗೆದಾರರ ಹಣದಲ್ಲಿ ಪಗಾರ ಪಡೆಯುವ ಇಂಥಾ ಸಂಸತ್ತಿನಲ್ಲಿ ಜನತೆಯ ಬದುಕನ್ನು ಪ್ರಭಾವಿಸುವ ವಿಷಯಗಳ ಬಗ್ಗೆ ಚರ್ಚೆಯೇ ನಡೆಯದೇ ಹೋದರೆ ಇಂಥಾ ಸಂಸ್ಥೆಗಳು ಜನರಿಗೆ ಎಷ್ಟರ ಮಟ್ಟಿಗೆ ಪ್ರಯೋಜನಕಾರಿಯಾಗುತ್ತವೆ?

ಒಂದು ಸಂಸದೀಯ ಪ್ರಜಾತಂತ್ರದಲ್ಲಿ ನ್ಯಾಯಾಂಗ ಮತ್ತು ಶಾಸಕಾಂಗವನ್ನು ಹೊರತುಪಡಿಸಿದರೆ ಕಾರ್ಯಾಂಗವು ಶಾಸಕಾಂಗಕ್ಕೆ ಉತ್ತರದಾಯಿತ್ವವನ್ನು ಹೊಂದಿರಬೇಕೆಂದು ನಿರೀಕ್ಷಿಸಲಾಗಿದೆ. ಆದರೆ ಹಾಲೀ ಸರ್ಕಾರವು ಅಡ್ಡಿಯನ್ನು ನಿವಾರಿಸಿಕೊಳ್ಳಲು ಅಡ್ಡದಾರಿಯನ್ನು ಹುಡುಕಿಕೊಂಡಿದೆ. ತನಗೆ ಒಂದು ಕಾನೂನನ್ನು ಜಾರಿಗೆ ತರಬೇಕೆಂದಾಗ ಅದು ಹಣಕಾಸೇತರ ವಿಷಯವಾದರೂ ಅದನ್ನು ಹಣಕಾಸು ಮಸೂದೆಯೊಳಗೆ ಸೇರಿಸುವ ಮೂಲಕ  ರಾಜ್ಯಸಭೆಯ ಅನುಮೋದನೆಯ ಅಗತ್ಯವಿಲ್ಲದಂತೆ ಮಾಡಿಕೊಂಡು ಜಾರಿಗೆ ತಂದುಬಿಡುವ ಹುನ್ನಾರವನ್ನು ಮಾಡುತ್ತಿದೆ. ಒಂದು ಮಸೂದೆಯನ್ನು ಅನುಮೋದಿಸುವ ಅಥವಾ ತಿರಸ್ಕರಿಸುವ ಚುನಾಯಿತ ಪ್ರತಿನಿಧಿಗಳ ಹಕ್ಕನ್ನೇ ಕಸಿದುಬಿಡುವ ಇಂಥಾ ಬೇಜವಾಬ್ದಾರಿ ವರ್ತನೆಗಳನ್ನು ಹಿಂದಿನ ಸರ್ಕಾರಗಳು ಅದನ್ನೇ ಮಾಡುತ್ತಿದ್ದವು ಎನ್ನುತ್ತಾ ಸಮರ್ಥಿಸಿಕೊಳ್ಳಲು ಸಾಧ್ಯವಿಲ್ಲ. ಆದರೂ ಕೋರ್ಟಿನ ಹಿಂದಿನ ಆದೇಶಗಳು ಮತ್ತು ಅದೇ ಕಾನೂನಿನ ಕೆಲವು ಅಂಶಗಳು ಬಲಾತ್ಕಾರವಾಗಿ ಆಧಾರ್ ಅನ್ನು ಹೇರುವುದನ್ನು ನಿಷೇಧಿಸಿದ್ದರೂ ಸರ್ಕಾರವು ಆಧಾರ್ ಅನ್ನು ಜನರ ಮೇಲೆ ಹೇರುತ್ತಾ ಹೋದದ್ದನ್ನು ಸಂಸತ್ತಾಗಲೀ ಸುಪ್ರೀಂ ಕೋರ್ಟಾಗಲೀ ಪರಿಗಣಿಸಲಿಲ್ಲ ಎಂಬುದನ್ನು ಇಲ್ಲಿ ಮರೆಯಲಾಗದು.

ಇನ್ನು ಪ್ರಜಾಸತ್ತೆಯ ನಾಲ್ಕನೆಯ ಸ್ತಂಭವೆಂದು ಪರಿಗಣಿಸಲ್ಪಡುವ ನಮ್ಮ ತಥಾಕಥಿತ ಮುಕ್ತ ಮಾಧ್ಯಮ. ಪ್ರಾಯಶಃ ಇಂದು ಭಾರತದ ರಾಜಕೀಯ ವಾಗ್ವಾದಗಳ ಘನತೆಯು ಪಾತಾಳಕ್ಕೆ ಕುಸಿದಿದ್ದರೆ ಅದಕ್ಕೆ ಅತಿಮುಖ್ಯ ಕಾರಣ ಮಾಧ್ಯಮಗಳೇ. ಪ್ರತಿಯೊಂದು ಸಂಕೀರ್ಣ ವಿಷಯವನ್ನು ಮಾಧ್ಯಮಗಳು ಅತ್ಯಂತ ಸರಳೀಕೃತಗೊಳಿಸಿ ತಪ್ಪು-ಒಪ್ಪೆಂಬ ರೀತಿಯಲ್ಲಿ ಮುಖಾಮುಖಿಗೊಳಿಸುತ್ತವೆ. ಅವೆರಡರ ಮಧ್ಯೆ ನಡುವೆ ಯಾವ ಸಮ್ವಾದಕ್ಕೂ ಜಾಗವೇ ಇರುವುದಿಲ್ಲ. ಮತ್ತು ತಾನೇ ಕಲ್ಪಿಸಿ ಹುಟ್ಟಿಹಾಕುವ ವಿವಾದಗಳನ್ನು ತಾನೇ ಬಗೆಹರಿಸುವ ಅಂತಿಮ ನ್ಯಾಯಾಧೀಶರ ಸ್ಥಾನವನ್ನೂ ಸಹ ಮಾಧ್ಯಮವು ತನಗೇ ತಾನೇ ಆರೋಪಿಸಿಕೊಂಡಿದೆ. ಇಂಥಾ ಮಾದರಿಗಳಿಗೆ ಭಿನ್ನವಾದ ಒಂದೆರೆಡು ಅಪವಾದಗಳಿರುವುದರಿಂದಲೇ ಅಧಿಕಾರಸ್ಥರೂ ಕೂಡಾ ಆಗೀಗ ಉತ್ತರದಾಯಿಗಳಾಗಲೇ ಬೇಕಾದ ಅನಿವಾರ್ಯತೆ ಹುಟ್ಟುತ್ತಿದೆ. ಆದರೆ ಅಂಥ ಪ್ರಕರಣಗಳು ತೀರಾ ಅಪರೂಪವೇ ಆಗಿಬಿಡುತ್ತಿದೆ

ಇತ್ತೀಚಿನವರೆಗೆ ತನ್ನ ಸ್ವತಂತ್ರ ತೀರ್ಮಾನಗಳಿಂದ ಜನರ ವಿಶ್ವಾಸಗಳಿಸಿಕೊಂಡಿದ್ದ ಚುನಾವಣಾ ಅಯೋಗವೂ ಸಹ ಗುಜರಾತಿನಲ್ಲಿ ಚುನಾವಣೆಯನ್ನು ನಡೆಸಲು ತಡಮಾಡಲು ಒಪ್ಪಿಕೊಂಡಂಥ ತನ್ನ ಇತ್ತೀಚಿನ ಹಲವು ನಿರ್ಣಯಗಳ ಮೂಲಕ ವಿಶ್ವಾಸಾರ್ಹತೆಯನ್ನು ಕಳೆದುಕೊಳ್ಳುತ್ತಿದೆ. ಚುನಾವಣ ಆಯೋಗದ ಕ್ರಮವು ಸರಕು ಮತ್ತು ಸೇವಾ ತೆರಿಗೆಯಲ್ಲಿ ಕೆಲವು ಬದಲಾವಣೆಗಳನ್ನು ತರುವ ಮೂಲಕ ತನ್ನ ಸಾಂಪ್ರದಾಯಿಕ ಬೆಂಬಲಿಗರಾದ ವರ್ತಕರ ಬೆಂಬಲವನ್ನು ಮರುಗಳಿಸಿಕೊಳ್ಳಲು ಆಳುವ ಸರ್ಕಾರಕ್ಕೆ ಅನುಕೂಲ ಮಾಡಿಕೊಟ್ಟಿತು.

ಸುಪ್ರೀಂ ಕೋರ್ಟು ಈಗ ಎದುರಿಸುತ್ತಿರುವ ಬಿಕ್ಕಟ್ಟು ದೇಶದ ಪ್ರಜಾಸತ್ತೆಯ ಉಳಿವಿಗೇ ಆತಂಕವನ್ನು ಉಂಟುಮಾಡಿರುವುದು ಖಂಡಿತಾ ನಿಜಆದರೂ ಪ್ರಜಾಸತ್ತೆಂi ಇತರ ಸಂಸ್ಥೆಗಳಲ್ಲಿ ನಿಧಾನವಾಗಿ ಸಂಭವಿಸುತ್ತಿರುವ  ವಿಶ್ವಾಸಾರ್ಹತೆಯ ಅಧಃಪತನಗಳು ಸಹ ಪ್ರಜಾಸತ್ತೆಗೆ ಉಳಿವಿಗೆ ಗಂಭೀರವಾದ ಸವಾಲನ್ನು ಒಡ್ಡಿವೆಯೆಂಬುದೂ ಸಹ ಅಷ್ಟೇ ನಿಜ

 ಕೃಪೆ: Economic and Political Weekly,Jan 20,  2018. Vol. 53. No. 3
 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )






ಕಾಮೆಂಟ್‌ಗಳಿಲ್ಲ: