ಅನು: ಶಿವಸುಂದರ್
ಲಿಂಗ ಸಮಾನತೆ ಮತ್ತು ನ್ಯಾಯದಂತ ಸಾರಭೂತ ವಿಷಯಗಳು ಸಾರ್ವಜನಿಕ ಚರ್ಚೆಗೆ ಒಳಪಡುವುದೇ ಇಲ್ಲ.
೧೯೮೦ರ ದಶಕದ ರೂಪ ಕನ್ವರ್ ಮತ್ತು ಶಾ ಬಾನೂ ಪ್ರಕರಣಗಳಿಂದ ಹಿಡಿದು, ಮೂರು ದಶಕಗಳ ನಂತರ ನಡೆಯುತ್ತಿರುವ ಇತ್ತೀಚಿನ ಹಾದಿಯ ಪ್ರಕರಣಗಳವರೆಗೆ ದೇಶದಲ್ಲಿ ಒಂದು ವಿಷಯದಲ್ಲಂತೂ ಏನೂ ಬದಲಾವಣೆಯಾದಂತೆ ಕಂಡುಬರುತ್ತಿಲ್ಲ. ಮಹಿಳೆಯರ ಖಾಸಗಿ ಜೀವನದ ಬಗೆಗಿನ ಸಾರ್ವಜನಿಕ ಚರ್ಚೆಗಳು ನಡೆಯುವುದು ಸ್ವತಂತ್ರ ವ್ಯಕ್ತಿಗಳಾಗಿ ಮತ್ತು ನಾಗರಿಕರಾಗಿ ಅವರಿಗಿರುವ ಹಕ್ಕುಗಳ ಬಗ್ಗೆಯಲ್ಲ.. ಬದಲಿಗೆ ಅವರ ಕುಟುಂಬಗಳು ಮತ್ತು ಸಮುದಾಯಗಳು, ಅವರ ಧರ್ಮ, ರಾಜಕೀಯ, ಸಂಪ್ರದಾಯ ಮತ್ತು ಸಂಸ್ಕೃತಿಗಳ ಬಗ್ಗೆಯೇ ಸಾರ್ವಜನಿಕ ವಲಯದಲ್ಲಿ ಹೆಚ್ಚೆಚ್ಚು ಚರ್ಚೆಗಳು ನಡೆಯುತ್ತವೆ.
೧೯೮೫ರಲ್ಲಿ ಒಬ್ಬ ಹಿರಿಯಳಾದ, ಬಡವಳಾದ, ಪರಿತ್ಯಕ್ತಳಾದ ಮತ್ತು ಆ ನಂತರದಲ್ಲಿ ವಿಛ್ಛೇದಿತಳಾದ ಮಹಿಳೆಯೊಬ್ಬಳು ತನ್ನ ವಕೀಲ ಗಂಡನಿಂದ ಬಿಡಿಗಾಸಿನಷ್ಟು ಮೊತ್ತವನ್ನು ಪರಿಹಾರವಾಗಿ ಕೇಳಿದ್ದನ್ನು ಧಾರ್ಮಿಕ ಸ್ವಾತಂತ್ರ್ಯ, ಅನನ್ಯತೆ ಮತ್ತು ನ್ಯಾಯಪರತೆಯ ಬಗೆಗಿನ ದೊಡ್ಡ ರಾಜಕೀಯ ವಿವಾದವನ್ನಾಗಿ ಮಾಡಲಾಯಿತು. ೧೯೮೭ರಲ್ಲಿ ಕೇವಲ ಏಳು ತಿಂಗಳ ಹಿಂದೆಯಷ್ಟೆ ಮದುವೆಯಾದ ೧೮ ವರ್ಷದ ಯುವತಿಯೋರ್ವಳನ್ನು ಮೃತನಾದ ಆಕೆಯ ಗಂಡನ ಚಿತೆಗೆ ಕಟ್ಟಿಹಾಕಿ ಜೀವಂತ ಸುಟ್ಟಿದ್ದನ್ನು ಆಕೆಯ ಸಮುದಾಯವು ತನ್ನ ಕಾಲಬಾಹಿರ ಕಂದಾಚಾರವನ್ನು ಮೆರೆಸುತ್ತಾ ತಮ್ಮ ರಾಜಕೀಯ ಶಕ್ತಿಯನ್ನು ಪ್ರತಿಪಾದಿಸಲು ಒಂದು ಅವಕಾಶವನ್ನಾಗಿ ಬಳಸಿಕೊಂಡಿತು. ಈಗ ೨೦೧೭ರಲ್ಲಿ ಹಾದಿಯಾ ಎಂಬ ವಯಸ್ಕ ಯುವತಿಯ ತನ್ನಿಚ್ಚೆಯ ಶ್ರದ್ಧೆಯನ್ನು ಅನುಸರಿಸುವ ಮತ್ತು ತನ್ನ ಬಾಳಸಂಗಾತಿಯನ್ನು ಆಯ್ಕೆಮಾಡಿಕೊಳ್ಳುವ ಸಾಂವಿಧಾನಿಕ ಸ್ವಾತಂತ್ರ್ಯದ ವಿಷಯವು ಧಾರ್ಮಿಕ ಅತಿರೇಕತೆ, ಭಯೋತ್ಪಾದನೆ ಮತ್ತು ರಾಷ್ಟ್ರೀಯ ಸುರಕ್ಷತೆಯ ಬಗೆಗಿನ ಉದ್ವಿಘ್ನ ರಾಜಕೀಯದ ಸುಳಿಯಲ್ಲಿ ಸಿಲುಕಿಕೊಂಡಿದೆ. ಈ ಎಲ್ಲ ಪ್ರಕರಣಗಳ ಕೇಂದ್ರ ಬಿಂದುವಿನಲ್ಲಿದ್ದದ್ದು ಮಹಿಳೆಯ ಸ್ಥಾನ ಮತ್ತು ನಾಗರಿಕಳಾಗಿ ಆಕೆಯ ಹಕ್ಕಿನ ಪ್ರಶ್ನೆ. ಆದರೆ ಸಾರ್ವಜನಿಕ ಚರ್ಚೆಗಳಲ್ಲಿ ಲಿಂಗ ಸಮಾನತೆ ಮತ್ತು ನ್ಯಾಯದ ಬಗೆಗಿನ ವಿಷಯಗಳು ಚರ್ಚೆಗೇ ಬರುವುದಿಲ್ಲ.
ಹಾದಿಯಾಳ ಪ್ರಕರಣದಲ್ಲಿ ಲಿಂಗ ಸಮಾನತೆಯ ಅಂಶವನ್ನು ವಿಷಯದ ಕೇಂದ್ರಬಿಂದುವಾಗಿ ನೋಡಲು ಮೀನಮೇಷ ನೋಡುವ ಮನಸ್ಸತ್ವವು ನವಂಬರ್ ೨೭ರಂದು ಸುಪ್ರೀಂ ಕೋರ್ಟು ಆಕೆಯ ಪ್ರಕರಣವನ್ನು ಆಲಿಸುವ ಸಂದರ್ಭದಲ್ಲಿ ಸ್ಪಷ್ಟವಾಗಿ ಎದ್ದುಕಂಡಿತು. ಹಾದಿಯಾಳು ಇಸ್ಲಾಮಿಗೆ ಮತಾಂತರಗೊಂಡಿದ್ದು ಮತ್ತು ಆ ನಂತರದಲ್ಲಿ ಶಫೀನ್ ಜಹಾನನನ್ನು ಮದುವೆಯಾಗಿದ್ದು ಬಲವಂತದಿಂದಲೋ ಅಥವಾ ಸ್ವ ಇಚ್ಚೆಯಿಂದಲೋ ಎಂದು ತಿಳಿದುಕೊಳ್ಳಲು ಆಕೆಯನ್ನು ತಮ್ಮ ಮುಂದೆ ಹಾಜರುಪಡಿಸಬೇಕೆಂದು ಸುಪ್ರಿಂ ಕೋರ್ಟಿನ ತ್ರಿಸದಸ್ಯ ಪೀಠ ಅಕ್ಟೊಬರ್ ತಿಂಗಳಲ್ಲಿ ಆದೇಶ ನೀಡಿತ್ತು. ಹಾದಿಯಾಳ ಆಯ್ಕೆ ಮತ್ತು ಬಯಕೆಗಳನ್ನು ಆಕೆಯ ಬಾಯಿಯಿಂದಲೇ ತಿಳಿದುಕೊಳ್ಳುವುದು ಅತ್ಯಗತ್ಯವೆಂದು ಕೋರ್ಟು ಆಗ ಭಾವಿಸಿತ್ತು. ಆದರೆ ಒಂದು ತಿಂಗಳ ನಂತರ ಆಕೆ ಕೋರ್ಟಿನ ಮುಂದೆ ಬಂದು ನಿಂತಾಗ ಕೋರ್ಟು ಆಕೆಯ ಹೇಳಿಕೆಯನ್ನು ಕೇಳಿಸಿಕೊಳ್ಳಬೇಕೋ ಇಲ್ಲವೋ, ಕೇಳಿಸಿಕೊಳ್ಳಬೇಕೆಂದಿದ್ದರೆ ಯಾವಾಗ ಕೇಳಿಸಿಕೊಳ್ಳಬೇಕು ಎಂಬ ಗೊಂದಲಕ್ಕೆ ಬಿದ್ದಿತು ಹಾಗೂ ತನ್ನ ಅಹವಾಲನ್ನು ತಾನೇ ನೇರವಾಗಿ ಹೇಳಿಕೊಳ್ಳಲು ಅವಕಾಶ ಕೊಡಬೇಕೋ ಬೇಡವೋ ಎಂಬ ಬಗ್ಗೆಯೂ ದೀರ್ಘಕಾಲ ಚರ್ಚೆ ನಡೆಸಿತು.
ಕೋರ್ಟಿನ ಈ ಬಗೆಯ ಧೋರಣೆಯನ್ನು ಕಂಡು ಹತಾಷರಾದ ಹಿರಿಯ ವಕೀಲೆ ಹಾಗೂ ಭಾರತ ಸರ್ಕಾರದ ಮಾಜಿ ಸಹಾಯಕ ಸಾಲಿಸಿಟರ್ ಜನರಲ್ ಆಗಿದ್ದ ಇಂದಿರಾ ಜೈಸಿಂಗ್ ಅವರು ಹಾದಿಯಾ ಒಬ್ಬ ಪುರುಷನಾಗಿದ್ದರೆ ಅಹವಾಲು ಕೇಳಲು ಕೋರ್ಟು ಇಷ್ಟು ಹಿಂದೆ ಮುಂದೆ ನೋಡುತ್ತಿತ್ತೇ ಎಂದು ಪ್ರಶ್ನಿಸಿದರು. ಈ ಪ್ರಶ್ನೆಯಿಂದ ನ್ಯಾಯಾಧೀಶರುಗಳು ವಿಚಲಿತಗೊಂಡರು. ಮತ್ತು ಮುಖ್ಯ ನ್ಯಾಯಾಧೀಶರಂತೂ ಇದರೊಳಗೆ ಲಿಂಗ ತಾರತಮ್ಯದ ವಿಷಯ ಎಲ್ಲಿಂದ ಉದ್ಭವವಾಯಿತೆಂದು ಕೇಳಿಬಿಟ್ಟರು.
ಇದೇ ಪ್ರಕರಣದ ಬಗ್ಗೆ ಕೆಲವೇ ತಿಂಗಳ ಹಿಂದೆ ಕೇರಳ ಹೈಕೋರ್ಟು: ೨೪ ವಯಸ್ಸಿನ ಒಬ್ಬ ಹೆಣ್ಣು ಮಗಳು ದುರ್ಬಲಳಾಗಿರುತ್ತಾಳೆ ಮತ್ತು ಹೊರಗಿನ ಪ್ರಭಾವಗಳಿಗೆ ಸುಲಭವಾಗಿ ತುತ್ತಾಗುತ್ತಾಳೆ. ಆಕೆ ಸುಲಭವಾಗಿ ಮೋಸಹೋಗುವ ವ್ಯಕ್ತಿಯಾಗಿರುವುದರಿಂದ ತನ್ನ ಜೀವನಕ್ಕೆ ಯಾವುದು ಸೂಕ್ತವೆಂದು ಆಯ್ಕೆ ಮಾಡಿಕೊಳ್ಳಲು ಬಿಟ್ಟುಬಿಡುವುದು ಆಕೆಯ ಸುರಕ್ಷತೆಯ ದೃಷ್ಟಿಯಿಂದ ಒಳ್ಳಯದಲ್ಲ. ಮತ್ತು ಭಾರತದ ಪರಂಪರೆಯಾನುಸಾರ ಒಬ್ಬ ಅವಿವಾಹಿತ ಮಹಿಳೆಯು ಸೂಕ್ತವಾಗಿ ಮದುವೆಯಾಗುವವರೆಗೂ ಆಕೆಯ ತಂದೆ-ತಾಯಿಗಳ ಸುಫರ್ದಿನಲ್ಲೇ ಇರಬೇಕಾಗಿರುವುದು ಸಹಜವಾಗಿರುವುದರಿಂದ ಆಕೆಯನ್ನು ಪೋಷಕರ ವಶಕ್ಕೆ ನೀಡಬೇಕೆಂದು ಆದೇಶ ನೀಡಿತ್ತು. ಹೀಗಿರುವಾಗ ಈ ಪ್ರಕರಣದಲ್ಲಿ ಲಿಂಗ ತಾರತಮ್ಯದ ವಿಷಯ ಏಕೆ ಬರುವುದಿಲ್ಲ? ಸಂಘಪರಿವಾರಕ್ಕೆ ಸೇರಿದ ಅಂಗಸಂಸ್ಥೆಗಳು ಈ ಪ್ರಕರಣವನ್ನು ತಮ್ಮ ತಥಾಕಥಿತ ಲವ್ ಜಿಹಾದ್ ವಿರುದ್ಧದ ಪ್ರಚಾರಕ್ಕೆ ಬೇಕಾದ ಪ್ರಖ್ಯಾತ ಪ್ರಕರಣವನ್ನಾಗಿ ಬಳಸಿಕೊಂಡರು. ಅದರ ಹಿಂದಿರುವ ತಿಳವಳಿಕೆಯಾದರೂ ಏನು?
ಹೆಂಗಸರಿಗೆ ಸ್ವಂತ ಬುದ್ಧಿ ಇರುವುದಿಲ್ಲ ಮತ್ತು ಅವರು ಕೇವಲ ಮತಾಂತರಕ್ಕೋಸ್ಕರ ಮದುವೆಯಾಸೆ ತೋರಲಾಗುತ್ತಿದೆಯೆಂಬುದನ್ನೂ ಅರಿಯಲಾಗದಷ್ಟು ಮೂಢರೆಂಬ ತಿಳವಳಿಕೆಯೇ ಇದರ ಹಿಂದೆ ಇರುವಾಗ ಈ ಪ್ರಕರಣದಲ್ಲಿ ಲಿಂಗ ತಾರತಮ್ಯದ ವಿಷಯ ಏಕೆ ಬರುವುದಿಲ್ಲ? ಆದರೆ ವಾಸ್ತವವೆಂದರೆ ಈ ವಾದಗಳು ಹಾದಿಯಾ ಪ್ರಕರಣಕ್ಕೆ ಅನ್ವಯವೇ ಆಗುವುದಿಲ್ಲ. ಏಕೆಂದರೆ ಆಕೆ ತಾನು ಮದುವೆಯಾಗುವ ಒಂದು ವರ್ಷಕ್ಕೆ ಮುನ್ನವೇ ಸಾರ್ವಜನಿಕವಾಗಿ ಇಸ್ಲಾಮಿಗೆ ಮತಾಂತರಗೊಳ್ಳುವ ತನ್ನ ಆಸೆಯನ್ನು ಬಹಿರಂಗವಾಗಿ ಘೋಷಿಸಿದ್ದಳು. ಆಕೆ ಮುಸ್ಲಿಂ ವಿವಾಹ ವೇದಿಕೆಯ ಸಾಮಾಜಿಕ ಜಾಲತಾಣದಲ್ಲಿ ಜಹಾನ್ ಅವರ ಪರಿಚಯವಾಗುವ ಒಂದು ತಿಂಗಳ ಮುನ್ನವೇ ಮತಾಂತರದ ಬಗ್ಗೆ ಪ್ರಮಾಣಪತ್ರವನ್ನು ಸಹ ಪಡೆದುಕೊಂಡಿದ್ದಳು.
ಕಳೆದ ಎರಡು ವರ್ಷಗಳಿಂದ ಕೋರ್ಟುಗಳಲ್ಲಿ ಮತ್ತು ಅವಕಾಶ ಸಿಕ್ಕ ಪ್ರತಿ ಕಡೆಗಳಲ್ಲೂ ಹಾದಿಯಾ ತನ್ನ ಅಲೋಚನೆ, ಭಾವನೆಗಳು ಮತ್ತು ಆಶಯಗಳ ಬಗ್ಗೆ ನಿರಂತರವಾಗಿ ಹೇಳುತ್ತಲೇ ಬಂದಿದ್ದರೂ ಆಕೆಯನ್ನು ತನಗೇನು ಬೇಕು ಎಂದು ಸ್ಪಷ್ಟವಾಗಿ ಅರಿತಿರುವ ಒಬ್ಬ ವಯಸ್ಕಳೆಂದು ಗುರುತಿಸಲು ಮತ್ತು ಆಕೆಯ ಜೊತೆ ಹಾಗೆಯೇ ವ್ಯವಹರಿಸಲು ನಿರಾಕರಿಸುತ್ತಿರುವಾಗ ಈ ವಿಷಯದಲ್ಲಿ ಲಿಂಗ ತಾರತಮ್ಯದ ವಿಷಯವು ಹೇಗೆ ಬರದಿರಲು ಸಾಧ್ಯ? ಕಳೆದ ಹಲವಾರು ತಿಂಗಳಿಂದ ತನ್ನ ಹತ್ತಿರ ಕುಟುಂಬದ ಸದಸ್ಯರನ್ನು ಹೊರತುಪಡಿಸಿ ಹೊರ ಜಗತ್ತಿನ ಸಂಪರ್ಕವನ್ನೆ ಕಡಿದಿಕೊಂಡು ಪೊಲೀಸರ ಕಣ್ಗಾವಲಿನಲ್ಲಿ ಹೆಚ್ಚೂ ಕಡಿಮೆ ಏಕಾಂತವಾಸವನ್ನೇ ಅನುಭವಿಸುತ್ತಿದ್ದರೂ, ಆಕೆಯೇ ಹೇಳಿಕೊಂಡಂತೆ ಮಾನಸಿಕ ಕಿರುಕುಳವನ್ನು ಅನುಭವಿಸುತ್ತಿದ್ದರೂ, ಆಕೆ ಶಾಂತವಾಗಿರುವುದು, ಮತ್ತು ಸ್ಥಿಮಿತ ಮನಸ್ಥಿತಿಯನ್ನು ಅತ್ಯಂತ ಗಮನಾರ್ಹವಾದ ಸಂಗತಿಯಾಗಿದೆ. ತನಗೇನು ಬೇಕು ಎಂಬ ಬಗ್ಗೆ ಆಕೆಯ ಗ್ರಹಿಕೆ ಸ್ಪಷ್ಟವಾಗಿದೆ: ಆಕೆ ಬಯಸುತ್ತಿರುವುದು ತನ್ನ ಪ್ರಕಾರ ಯಾವುದು ಸೂಕ್ತ ಎಂದು ಆಕೆ ಭಾವಿಸುತ್ತಿದ್ದಾಳೋ ಆ ರೀತಿ ಬದುಕುವ ಸ್ವಾತಂತ್ರ್ಯ
ಆಕೆ ಈ ಪ್ರಕರಣದುದ್ದಕ್ಕೂ ಬಂಧನದಿಂದ ವಿಮುಕ್ತಿಗೊಂಡು ಸ್ವತಂತ್ರವಾಗಿ ಬದುಕುವ ಆಸೆಯನ್ನು ಅತ್ಯಂತ ಧೃಢವಾಗಿ ಪ್ರತಿಪಾದಿಸಿಕೊಂಡು ಬರುತ್ತಿದ್ದರೂ ಆಕೆಗೆ ಸ್ವಾತಂತ್ರ್ಯವನ್ನು ನಿರಾಕರಿಸುತ್ತಲೇ ಬರುತ್ತಿರುವಾಗ ಈ ಪ್ರಕರಣದಲ್ಲಿ ಲಿಂಗ ತಾರತಮ್ಯದ ವಿಷಯ ಹೇಗೆ ಬರದಿರಲು ಸಾಧ್ಯ? ಆಕೆ ಓದುತ್ತಿದ್ದ ಕಾಲೇಜೇ ನಡೆಸುತ್ತಿರುವ ಹಾಸ್ಟೆಲ್ನಲ್ಲಿ ಅದರ ನಿಯಮಾವಳಿಗಳಿಗನುಸಾರ ನಡೆಯುತ್ತಾ ಅರ್ಧದಲ್ಲೇ ನಿಂತಿದ್ದ ತನ್ನ ಓದನ್ನು ಮುಂದುವರೆಸಿ ಇಂಟರ್ನ್ ಶಿಪ್ ಮುಗಿಸಬೇಕೆಂದು ಸುಪ್ರೀಂ ಕೋರ್ಟು ಆಕೆಗೆ ಭಾಗಶಃ ಸ್ವಾತಂತ್ರ್ಯವನ್ನು ನೀಡಿದೆ. ಆದರೆ ಆ ಆದೇಶವನ್ನು ನೀಡುವಾಗಲೂ ಮಹಿಳೆಯ ವ್ಯಕ್ತಿತ್ವ, ಸ್ವಾತಂತ್ರ್ಯ ಮತ್ತು ಘನತೆಗಳ ಬಗ್ಗೆ ಅನಗತ್ಯ ಹಿರೀಕ ಉಪದೇಶಗಳನ್ನು ಕೋರ್ಟು ನೀಡಿದೆ.
ಸುಪ್ರೀಂ ಕೋರ್ಟಿನ ಒಳಗೆ ನಡೆದ ಚರ್ಚೆಯಲ್ಲಿ ಕಾಲೇಜಿನ ಡೀನರೇ ಆಕೆಯ ಸ್ಥಳಿಯ ಪೋಷಕರಾಗಿರುತ್ತಾರೆಂಬ ವಿಷಯ ಪ್ರಸ್ತಾಪಿತವಾದರೂ ಕೋರ್ಟಿನ ಅಂತಿಮ ಆದೇಶದಲ್ಲಿ ಅದು ಪ್ರತಿಫಲಿತವಾಗಿಲ್ಲ. ಆದರೆ ಆಕೆಯ ಮತ್ತು ಡೀನರ ಹೇಳಿಕೆಗಳು ಕೋರ್ಟಿನೊಳಗೆ ನಡೆದ ಚರ್ಚೆಯನ್ನು ಸ್ಪಷ್ಟಪಡಿಸುತ್ತವೆ. ಹೀಗಾಗಿ ಕಾಲೇಜಿನ ಡೀನರೇ ಆಕೆ ಏನು ಮಾಡಬೇಕು? ಎಲ್ಲಿಗೆ ಹೋಗಬಹುದು? ಯಾರನ್ನು ಯಾವ ಶರತ್ತುಗಳಿಗೊಳಪಟ್ಟು ಭೇಟಿಯಾಗಬಹುದು ಎಂಬುದನ್ನೂ ನಿರ್ಧರಿಸುತ್ತಾರೆ. ಆದರೆ ಹಾದಿಯಾ ಪಡೆದುಕೊಂಡಿರುವ ಈ ಅತ್ಯಂತ ನಿರ್ಭಂಧಿತ ಸ್ವಾತಂತ್ರ್ಯದ ಬಗ್ಗೆಯೂ ಆಕೆಯ ತಂದೆ ಅಸಮಾಧಾನಗೊಂಡಿದ್ದು ಈ ತೀರ್ಮಾನದ ವಿರುದ್ಧ ಮತ್ತೆ ಕೋರ್ಟಿನ ಮೊರೆ ಹೋಗುವುದಾಗಿ ಹೇಳಿದ್ದಾರೆ. ಖಂಡಿತವಾಗಿ ಹಾದಿಯಾ ಪ್ರಕರಣದಲ್ಲಿ ಇರುವುದು ಲಿಂಗ ತಾರತಮ್ಯದ ವಿಷಯ ಮಾತ್ರವಲ್ಲ. ಇದರ ಜೊತೆಜೊತೆಗೆ ಕೋಮುವಾದಿ ರಾಜಕಾರಣ, ಇಸ್ಲಾಮ್ಭೀತಿ, ಮತ್ತು ಭಯೋತ್ಪಾದನೆಯ ಬಗ್ಗೆ ಹುಟ್ಟುಹಾಕಲಾಗಿರುವ ಭೀತಿ ಮತ್ತು ಅದರ ಬಗ್ಗೆ ನ್ಯಾಯಾಂಗದ ಗ್ರಹಿಕೆಗಳ ಸಮಸ್ಯೆಗಳು ಇವೆ. ಇವೆಲ್ಲದರ ನಡುವೆಯೂ ಹಾದಿಯಾ ಒಬ್ಬ ಮಹಿಳೆಯಾಗಿರುವುದರಿಂದಲೇ ಈ ದುರದೃಷ್ಟಕರ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾಳೆಂಬುದನ್ನು ಮರೆಯುವಂತಿಲ್ಲ.
ಕೃಪೆ: Economic
and Political Weekly Dec
2, 2017. Vol. 52. No. 48 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ