ಬುಧವಾರ, ಜನವರಿ 24, 2018

ಕಾದಂಬಿನಿ ನಿರೂಪಿಸಿದ ನಾಟಿ ಕೋಳಿಯ ಆತ್ಮಕತೆ..

- ಕಾದಂಬಿನಿ
Image result for ಕೋಳಿ ಅಂಕ

ಮೊನ್ನೆ ಮುಂಜಾನೆ ಬಯಲುಸೀಮೆಯ ಕಡೆ ಹೊರಟಿದ್ದೆ. ದಾರಿಯಲ್ಲಿ ಒಂದು ಮನೆಯೆದುರು ಕಾಲು ಕಟ್ಟಿ ಬಿಟ್ಟ ಹುಂಜವೊಂದು ರೆಕ್ಕೆ ಫಡಫಡಿಸುತ್ತ ಬೇಲಿ ದಾಟಿಬಿಟ್ಟಿತ್ತೆಂದು ಕಾಣುತ್ತದೆ. ತರುಣಿಯೊಬ್ಬಳು ಅದರ ಹಿಂದಿನಿಂದಲೇ ಬಂದವಳೇ ಹುಂಜದ ರೆಕ್ಕೆಯೊಂದನ್ನು ಹಿಡಿದು ಹುಂಜದ ದೇಹವನ್ನು ಜೋತಾಡಿಸುತ್ತಾ ಅದು ಕೊಯ್ಯೋ ಕೊಯ್ಯೋ ಕೂಗುತ್ತಿದ್ದರೂ ಒಂದಿನಿತೂ ದಯಯಿಲ್ಲದೆ ಬೀಸುತ್ತ ಒಳಗೊಯ್ದ ದೃಶ್ಯ ಸಂಕಟಕ್ಕೀಡುಮಾಡಿತು. ಹೌದು, ಕೋಳಿ ನಮ್ಮ ಆಹಾರವೇ. ಆದರೆ ಅದನ್ನು ಕೊಲ್ಲುವ ಮೊದಲೇ ಹಿಂಸಿಸುವುದು ತರವೇ? ಸಂಜೆ ಅದೇ ಹಾದಿಯಾಗಿ ಹಿಂದಿರುಗುವಾಗ ಹೊನ್ನಾಳಿಯಲ್ಲಿ ಒಂದು ಮನೆಯ ಅಂಗಳಕ್ಕೆ ಹಾರಿದ ಕಾಗೆಯೊಂದು ರೆಕ್ಕೆ ಮೂಡತೊಡಗಿದ್ದ ಕೋಳಿಮರಿಯೊಂದನ್ನು ಕಚ್ಚಿಕೊಂಡು ಮಾಡೇರಿ ಕೂತದ್ದು ಕಂಡಿತು. ಈ ದೃಶ್ಯಗಳು ಕಣ್ಣ ಪರದೆಯ ಮೇಲೆ ಕಾಡುತ್ತಲೇ ಉಳಿದುಬಿಟ್ಟವು.

ಆಗೆಲ್ಲ ಪ್ರತಿಯೊಬ್ಬರ ಮನೆಯಲ್ಲೂ ಕೋಳಿ ಸಾಕುತ್ತಿದ್ದದ್ದು ನನಗೆ ನೆನಪಿದೆ. ನನ್ನ ಅಜ್ಜಿಯ ಮನೆಯಲ್ಲಿ ಜಗುಲಿಯ ಒಂದು ಪಕ್ಕದ ತಳದಲ್ಲಿ ದೊಡ್ಡ ಕೋಳಿಗೂಡಿತ್ತು. ಆ ಕೋಳಿಗೂಡಿನ ಮೇಲ್ಭಾಗವನ್ನೇ ಸೋಫಾದಂತೆ ಕೂರಲು ಎತ್ತರದ ಕಟ್ಟೆ ಮಾಡಿದ್ದರು. ಆಗೆಲ್ಲ ಮಲೆನಾಡಿನ ಹಳ್ಳಿಯ ಎಲ್ಲರ ಮನೆಗಳಲ್ಲೂ ಇಂತಹದ್ದೇ ಕೋಳಿಗೂಡುಗಳಿರುತ್ತಿದ್ದವು. ಕೋಳಿಗೂಡಿನ ಬಾಗಿಲಿಗೆ ಮೇಲೆ ಮತ್ತು ಕೆಳಗೆ ಎರಡೆರಡು ರೀಪಿನ ತುಂಡುಗಳನ್ನು ಇರಿಸಿ ಅದರ ನಡುವಿನ ಹಲಗೆ ಇಳಿಸುವಷ್ಟೇ ಅಗಲದ ಜಾಗದಲ್ಲಿ ಹಲಗೆಯನ್ನು ಇಳಿಸಿ ಕೋಳಿ ಗೂಡನ್ನು ಮುಚ್ಚುವ ಕ್ರಮವಿರುತ್ತಿತ್ತು. ಕೋಳಿಯ ಮಲದಿಂದ ಗೂಡು ಕಿಚಿಪಿಚಿ ಆಗದಿರಲೆಂದು ಗೂಡಿನ ಒಳಗಡೆ ಬೂದಿಯನ್ನು ಹರವಲಾಗುತ್ತಿತ್ತು. ಸಂಜೆಯಾಗುತ್ತಲೇ ಕೋಳಿ, ಹುಂಜ, ಮರಿಗಳೆಲ್ಲ ಗೂಡು ಸೇರಿ ಕುತ್ತಿಗೆಯನ್ನು ಒಂದು ಪಕ್ಕಕ್ಕೆ ಹೊರಳಿಸಿ ತನ್ನದೇ ರೆಕ್ಕೆಯಲ್ಲಿ ಹುದುಗಿಸಿಕೊಂಡು ನಿದ್ದೆಮಾಡುತ್ತಿದ್ದವು. ಮರಿಕೋಳಿಗಳು ತಾಯಿಯ ರೆಕ್ಕೆಗಳಡಿಯಲ್ಲಿ ಬೆಚ್ಚಗೆ ಕೂರುತ್ತಿದ್ದವು.
Image result for ಕೋಳಿ ಅಂಕ

ಆಗೆಲ್ಲ ಅಂಗಳವನ್ನು ಸೆಗಣಿಯಿಂದ ಸಾರಿಸಿ ಇಡುತ್ತಿದ್ದರು. ಆದರೆ ಪ್ರತಿಯೊಬ್ಬರ ಮನೆಯ ಸುತ್ತಮುತ್ತ ಕೋಳಿಯ ಮಲ ಇರುತ್ತ ಎಲ್ಲರೂ ಅದನ್ನು ತುಳಿದುಕೊಂಡೇ ಓಡಾಡುವುದಿತ್ತು. ಕಾಲು ಕೆದರಿಕೊಂಡು ಒಂದು ರೆಕ್ಕೆ ಕೆಳಮುಖ ಇಳಿಸಿ ವೃತ್ತಾಕಾರವಾಗಿ ತಿರುಗುತ್ತಾ ಒಂದಕ್ಕೊಂದು ರಕ್ತ ಬಸಿಯುವ ತನಕ ಕಚ್ಚಾಡಿಕೊಳ್ಳುವ ಹುಂಜ ಹುಂಜಗಳ ನಡುವಿನ ಕಾದಾಟ ತೀರಾ ಸಾಮಾನ್ಯವಾಗಿ ನೋಡಲು ಸಿಕ್ಕುತ್ತಿತ್ತು. ಇದರಿಂದಲೇ ಕಾಲು ಕೆದರಿಕೊಂಡು ಜಗಳಕ್ಕೆ ಬರುವುದು ಎಂಬ ನುಡಿಗಟ್ಟು ರೂಢಿಗೆ ಬಂದಿರಬಹುದು. ಅಂತೆಯೇ ತಾಯಿಕೋಳಿ ಮರಿಗಳನ್ನು ಮೇಯಿಸುವ ನೋಟ ಕೂಡ. ತಾಯಿಕೋಳಿ ಕೀಟವೋ ಹುಳುವೋ ಸಿಕ್ಕಿದ್ದೇ ತಡ ಕುಕುಕ್ ಎನ್ನುತ್ತಿತ್ತು. ಕೂಡಲೇ ಮರಿಗಳು ತಾಯಿಯ ಕೊಕ್ಕಿನ ಬಳಿಗೋಡಿ ಆ ಹುಳುವನ್ನು ತಾಯಿಯ ಕೊಕ್ಕಿನಿಂದ ಕಿತ್ತುಕೊಂಡು ತಿನ್ನುತ್ತಿದ್ದವು. ಗಿಡುಗವೋ ಕಾಗೆಯೋ ಬಂದ ಸಣ್ಣ ಸೂಚನೆ ಸಿಕ್ಕರೂ ಕರರ್ರ್ ಎಂದು ತಾಯಿಕೋಳಿ ಸದ್ದುಮಾಡುತ್ತಿತ್ತು. ಮಿಂಚಿನ ವೇಗದಲ್ಲಿ ಮರಿಗಳು ಗಿಡ, ಪೊದೆಗಳ ಮರೆಯಲ್ಲಿ ಅಡಗಿಬಿಡುತ್ತಿದ್ದವು.

ಯಾರ ಅಂಗಳದಲ್ಲಾದರೂ ಕನ್ನೆ ಕೋಳಿ (ಮೊದಲ ಸಲ ಮೊಟ್ಟೆಗೆ ಬಂದ ಹೆಣ್ಣು ಕೋಳಿ) ಕಾಂ ಕಾಂ ಮಾಡುತ್ತ ತಿರುಗುತ್ತಿದೆಯೆಂದರೆ ಅದು ಪ್ರಾಯಕ್ಕೆ ಬಂದು ಸಂಗಾತಿಯನ್ನು ಅರಸಿ, ಮೊಟ್ಟೆ ಇಡಲು ಜಾಗ ಹುಡುಕುತ್ತಿದೆ ಎಂದು ಅರ್ಥೈಸಲಾಗುತ್ತಿತ್ತು. ಮೊಟ್ಟೆ ಇಡುವ ಕೋಳಿ ಸಾಮಾನ್ಯವಾಗಿ ನಡುಮಧ್ಯಾಹ್ನ ಜಾಗ ಹುಡುಕತೊಡಗುತ್ತಿದ್ದವು. ಕೆಲವು ಗೂಡಲ್ಲಿ ಮೊಟ್ಟೆ ಇಡುತ್ತಿದ್ದವು. ಅಥವಾ ಮನೆಯಲ್ಲಿ ಅವುಗಳನ್ನು ಹಿಡಿದು ಬುಟ್ಟಿ ಕವುಚಿ ಇಟ್ಟು ಅದು ಒಂದರ್ಧ ಗಂಟೆ ಕೂತು ಮೊಟ್ಟೆ ಇಟ್ಟಾದ ಮೇಲೆ ಹೊರಕ್ಕೆ ಬಿಡುತ್ತಿದ್ದರು. ಎಷ್ಟೋ ಸಲ ಈ ಕೋಳಿಗಳು ಅಕ್ಕಪಕ್ಕದವರ ಮನೆಯಲ್ಲಿ ಮೊಟ್ಟೆಯಿಟ್ಟು ಆ ಕಾರಣಕ್ಕೆ ದೊಡ್ಡ ದೊಡ್ಡ ಕಲಹಗಳೇ ನಡೆಯುತ್ತಿದ್ದುದಿತ್ತು. ನನಗೆ ತಿಳಿದಂತೆ ನಲ್ಲಿಕಟ್ಟೆ ಜಗಳಕ್ಕೆ ಸರಿಸಮನಾದ ಇನ್ನೊಂದು ಜಗಳವೆಂದರೆ ಅದು ಕೋಳಿಜಗಳವಾಗಿರುತ್ತಿತ್ತು. ಆದ್ದರಿಂದಲೇ ಇವತ್ತಿಗೂ ಚಿಲ್ಲರೆ ಸಂಗತಿಗಳಿಗಾಗಿ ನಡೆಯುವ ಜಗಳಗಳೆಲ್ಲ ಕೋಳಿಜಗಳಗಳೇ!
Image result for ಕೋಳಿ ಅಂಕ

ಒಂದೊಂದು ಕೋಳಿ ದಿನಕ್ಕೊಂದರಂತೆ ಇಪ್ಪತ್ತು ಮೂವತ್ತು ಮೊಟ್ಟೆ ಇಟ್ಟು ನಂತರ ಕಾವಿಗೆ ಬರುತ್ತಿದ್ದವು. ಈ ಕಾವಿಗೆ ಬಂದ ಕೋಳಿ ಲೊಟ್ ಲೊಟ್ ಸದ್ದು ಮಾಡುತ್ತ ರೆಕ್ಕೆಯರಳಿಸಿ ತಿರುಗುವುದನ್ನು ಅಹಂಕಾರಿ ಹೆಂಗಸು/ಹುಡುಗಿಗೆ ಹೋಲಿಸುವುದೂ ಇತ್ತು. ಹುಂಜಗಳು ಸಾಮಾನ್ಯವಾಗಿ ಪುಟ್ಟ ಪುಟ್ಟ ಗಿಡಮರಗಳ ಮೇಲೆ ಹಾರಿ ಕೂರುತ್ತಿದ್ದವು. ಅದೇ ಹೇಂಟೆಯೊಂದು ಹಾರಿ ಮರವೇರಿದರೆ, ಹುಂಜನಂತೆ ಹೇಂಟೆಯೊಂದು ಕೊಕ್ಕೋಕ್ಕೋ ಎಂದು ಕೂಗಿದರೆ ಏನೋ ಕೇಡುಗಾಲ ವಕ್ಕರಿಸುತ್ತದೆ ಎನ್ನುವ ನಂಬಿಕೆಗಳಿದ್ದವು.

ಕೋಳಿ ಸಾಕಣೆ ಆಕಾಲದ ಹೆಂಗಸರ ಆರ್ಥಿಕತೆಯ ಮೂಲವೆಂದರೆ ತಪ್ಪಲ್ಲ. ಹಣಕೊಟ್ಟು ಕೋಳಿಮರಿಗಳನ್ನು ಕೊಂಡು ಸಾಕಲು ಸಾಧ್ಯವಾಗದ ಹೆಂಗಸರು ಸಮಪಾಲಿಗೆ ಕೋಳಿ ಸಾಕುವ ಪ್ರಕ್ರಿಯೆಯೊಂದು ಆ ವ್ಯವಸ್ಥೆಯಲ್ಲಿ ಬೆರೆತಿತ್ತು. ಇದು ಹೇಗೆಂದರೆ ಒಬ್ಬಾಕೆ ತನ್ನ ಒಂದು ಕನ್ನೆಕೋಳಿಯನ್ನೋ ಮರಿಯನ್ನೋ ಸಮಪಾಲಿಗೆ ಕೊಟ್ಟಳೆಂದರೆ ಆ ಕೋಳಿಯನ್ನು ದೊಡ್ಡದಾಗುವ ತನಕ ಮುಂಗುಸಿಯ ಬಾಯಿಗೋ ಗಿಡುಗ, ಕಾಗೆ, ನಾಯಿಯ ಬಾಯಿಗೋ ಕೋಳಿ ರೋಗಕ್ಕೋ ತುತ್ತಾಗದಂತೆ ಜತನದಿಂದ ಸಾಕಿ ಕಾವಿಗೆ ಕೂರಿಸಿ ಅದು ಮರಿಮಾಡಿದ ಬಳಿಕ ಆ ಮರಿಗಳನ್ನೂ ಜೋಪಾನವಾಗಿ ಸಾಕಿ, ಒಟ್ಟು ಎಂಟು ಮರಿಗಳಾದರೆ ಅದರ ನಾಲ್ಕು ಮರಿಗಳನ್ನು ಸಮಪಾಲಿನ ಲೆಕ್ಕಕ್ಕೆ ಉಳಿಸಿಕೊಂಡು ಉಳಿದ ನಾಲ್ಕು ಮರಿಗಳನ್ನೂ ತಾಯಿಕೋಳಿಯನ್ನೂ ಹಿಂದಿರುಗಿಸುವ ಕ್ರಮವದು.

ಈ ಕಾವಿಗೆ ಕೂರಿಸುವ ಕ್ರಮವನ್ನೂ ಇಲ್ಲಿ ಹೇಳಬೇಕು ನಾನು. ಒಂದು ಕೋಳಿ ಪ್ರತಿದಿನ ಇಡುವ ಮೊಟ್ಟೆಗಳನ್ನು ಅವು ಒಡೆಯದಂತೆ ತೌಡು, ನುಚ್ಚು ಅಥವಾ ಅಕ್ಕಿಯ ಡಬ್ಬಿಯಲ್ಲಿ ಹಾಕಿ ಸಂಗ್ರಹಿಸಿ ಕೋಳಿ ಲೊಟ್ ಲೊಟ್ ಕೂಗುತ್ತ ಕಾವಿಗೆ ಬಂತೆಂದರೆ, ಒಂದು ಬುಟ್ಟಿಯ ತಳದಲ್ಲಿ ‘ಸಿಡಿಲು ಬಡಿದರೆ ಮೊಟ್ಟೆಗಳು ಹಾಳಾಗುತ್ತವೆ’ ಎಂಬ ನಂಬಿಕೆ ಇದ್ದುದರಿಂದ ಹಾಗಾಗದಂತೆ ಇದ್ದಿಲು, ಕಬ್ಬಿಣದ ತುಣುಕನ್ನು ಇರಿಸಿ ಅದರ ಮೇಲ್ಪದರದಲ್ಲಿ ಕೋಳಿಹೇನು ಆಗಬಾರದೆಂದು ಲಕ್ಕಿ ಸೊಪ್ಪನ್ನು ಹರವುತ್ತಿದ್ದರು. ಆದರೂ ಕಾವಿಗೆ ಕೂರಿಸಿದ ಪ್ರತಿ ಮನೆಯಲ್ಲೂ ಕೋಳಿಹೇನಾಗಿ ಪರಪರ ಮೈ ಕೈ ತುರಿಸಿಕೊಳ್ಳುತ್ತ ಇರುವುದು ಅಂದಿನ ಬದುಕಿನ ಸಹಜ ಭಾಗವೇ ಆಗಿಬಿಟ್ಟಿತ್ತು.
Image result for ಕೋಳಿ ಅಂಕ

ಕಾವಿನ ಬುಟ್ಟಿಯಲ್ಲಿ ಹರವಿದ ಲಕ್ಕಿಸೊಪ್ಪಿನ ಮೇಲೆ ಮೆತ್ತನ್ನೆ ಭತ್ತದ ಹುಲ್ಲು ಹರವಿ ಹಳೆಯ ಸೀರೆಯ ತುಂಡು ಹಾಸಿ ಅದರ ಮೇಲೆ ಇಪ್ಪತ್ತೊಂದು, ಮೂವತ್ತೊಂದು ಹೀಗೆ ಬೆಸ ಸಂಖ್ಯೆಯ ಮೊಟ್ಟೆಗಳನ್ನು ಇಟ್ಟು ಕೋಳಿಯನ್ನು ಕಾವಿಗೆ ಕೂರಿಸಲಾಗುತ್ತಿತ್ತು. ಕೋಳಿಗೆ ಇಡೀ ದಿನ ಬುಟ್ಟಿಯಲ್ಲಿ ಅಗಲವಾಗಿ ರೆಕ್ಕೆ ಹರವಿ ಕೂರುವುದೊಂದೇ ಕೆಲಸ. ದಿನಕ್ಕೆ ಒಂದು ಸಲ ಎದ್ದು ಮಲವಿಸರ್ಜಿಸಿ ಹೊಟ್ಟೆತುಂಬ ಕಾಳು ತಿಂದು ಕೂತಿತೆಂದರೆ ಮತ್ತೆ ಅದು ಏಳುವುದು ಮರುದಿನವೇ. ಹೀಗೆ ಮೊಟ್ಟೆಗಳ ಮೇಲೆ ಕೂತ ಕೋಳಿ ತನ್ನ ರೆಕ್ಕೆಗಳಿಂದಲೇ ಮೊಟ್ಟೆಗಳಿಗೆ ಸಮಾನ ಕಾವು ಸಿಗಲೆಂದು ಅವುಗಳನ್ನು ಮಗ್ಗುಲು ಮಗ್ಗುಲಾಗಿ ಹೊರಳಿಸಿಕೊಳ್ಳುತ್ತಿತ್ತು. ಸರಿಯಾಗಿ ಕಾವು ಸಿಗದ ಮೊಟ್ಟೆಗಳು ಮರಿಯಾಗದೆ ಕೆಟ್ಟುಹೋಗುತ್ತಿದ್ದವು. ಹೀಗೆ ಇಪ್ಪತ್ತೊಂದರಿಂದ ಇಪ್ಪತ್ತನಾಲ್ಕು ದಿನಗಳ ಅವಧಿಯಲ್ಲಿ ಮೊಟ್ಟೆಗಳಿಗೆ ಒಂದೊಂದು ಚುಕ್ಕೆ ಮೂಡಿ, ಆ ಚುಕ್ಕೆ ತೂತಾಗಿ, ಆ ತೂತು ಬಿರಿದು ಮೊಟ್ಟೆಯ ಓಡನ್ನು ಸೀಳಿ ಬಣ್ಣ ಬಣ್ಣದ ಹೂಮರಿಗಳು ಚಿಂಯೋಂ ಪೀಂಯೋಂ ಎನ್ನುತ್ತ ಹೊರಬರುತ್ತಿದ್ದವು. ಇದೊಂದು ಅದ್ಭುತ ವಿಸ್ಮಯವೇ ಆಗಿರುತ್ತಿತ್ತು. ಮಹಿಳೆಯರು ಮೊಟ್ಟೆಯಿಡುವ ಪ್ರತಿಯೊಂದು ಕೋಳಿಯನ್ನೂ ಕಾವಿಗೆ ಕೂರಿಸುತ್ತಿರಲಿಲ್ಲ. ಮೊಟ್ಟೆ ಸಾರಿಗೋ ಮಾರಾಟಕ್ಕೋ ಬಳಕೆಯಾಗಬೇಕಲ್ಲ! ಹೀಗಾದಾಗ ಕಾವಿಗೆ ಬಂದ ಕೋಳಿಯ ಕಾವನ್ನು ಇಳಿಸಲು ಅದರದೇ ರೆಕ್ಕೆಯಿಂದ ಒಂದು ಪುಕ್ಕವನ್ನು ಕಿತ್ತು ಕೋಳಿಯ ಮೂಗಿನ ಈ ತೂತಿನಿಂದ ತೂರಿಸಿ ಆ ತೂತಿನಿಂದ ಹೊರಬರುವಂತೆ ಸುರಿದು ಬಿಟ್ಟುಬಿಡುತ್ತಿದ್ದರು. ಮೂಗಿನಲ್ಲಿ ಸುರಿದ ಪುಕ್ಕ ಉಂಟು ಮಾಡುವ ನೋವು, ಕಿರಿಕಿರಿಯಿಂದ ಅದಕ್ಕೆ ಏರಿದ ಕಾವು ಇಳಿಯುತ್ತಿತ್ತು. ಮನುಷ್ಯ ತನ್ನ ಸ್ವಾರ್ಥಕ್ಕಾಗಿ ಇಂಥ ಹಿಂಸೆಗಳನ್ನು ಆರಾಮವಾಗಿ ಮಾಡಿಬಿಡುತ್ತಿದ್ದ!
Image result for ಕೋಳಿ ಅಂಕ

ಆಗೆಲ್ಲ ಪ್ರತಿ ಊರಲ್ಲೂ ತಲೆಯ ಮೇಲೆ ಕುಕ್ಕೆಯನ್ನು ಹೊತ್ತು ಒಣಮೀನು ಮಾರುವ ಹೆಂಗಸರು ತೌಡಿನ ಚೀಲದಲ್ಲಿ ಕಂತ್ರಿ ಕೋಳಿಯ ಮೊಟ್ಟೆಗಳನ್ನೂ ಇಟ್ಟುಕೊಂಡು ಮಾರುತ್ತಿದ್ದರು. ಕೋಳಿ ಸಾಕುವ ಮನೆ ಮನೆಯಲ್ಲೂ ಕೋಳಿ, ಕೋಳಿ ಮೊಟ್ಟೆಗಳ ವ್ಯಾಪಾರ ಇರುತ್ತಿತ್ತು. ಕೋಳಿ, ಮೊಟ್ಟೆಗಳ ಮಾರಾಟದಿಂದ ಹೆಂಗಸರ ಕೈಲಿ ನಾಲ್ಕು ಕಾಸು ಬರುತ್ತಿತ್ತು.

ಕಾಳು ಹಾಕಲು ಗತಿ ಇಲ್ಲದ ಮನೆಗಳಲ್ಲೂ ಕೋಳಿ ಸಾಕಲಾಗುತ್ತಿತ್ತು. ಅವು ಹಿತ್ತಲ ಬಸಳೆ, ತೊಂಡೆ ಬುಡಗಳಲ್ಲಿ, ಬಚ್ಚಲ ನೀರಲ್ಲೆ ಕೆದರಿ ಸಿಕ್ಕ ಹುಳು ಹುಪ್ಪಟೆ ತಿನ್ನುತ್ತ ಹೇಗೋ ಇರುತ್ತಿದ್ದವು. ಆದರೆ ಮುಂಗುಸಿ, ಕಾಗೆ, ಗಿಡುಗ, ನರಿ, ನಾಯಿ, ಕಳ್ಳಕಾಕರುಗಳ ಕಾಟದಿಂದ ಬಚಾವು ಮಾಡುವುದು ದೊಡ್ಡ ಸಮಸ್ಯೆಯೇ ಆಗಿರುತ್ತಿತ್ತು. ಇದೆಲ್ಲದರಿಂದ ಹೇಗೂ ಬದುಕುಳಿದವು ಎಂದರೆ ಕೋಳಿ ಜ್ವರ, ಮಂಡೆ ರೋಗಗಳೆಂಬ ಮಹಾಮಾರಿಗಳಿಂದ ಇಡೀ ಊರಿನ ಕೋಳಿ ಸಂತತಿಯೇ ನಾಶವಾಗಿ ಹೋಗುತ್ತಿದ್ದುದೂ ಇತ್ತು. ಎಷ್ಟೋ ಸಲ ಕೋಳಿಗೆ ಜ್ವರ ಬಂದಾಗ ಪಶುವೈದ್ಯರು ರೆಕ್ಕೆಗಳಿಗೆ ಇಂಜೆಕ್ಷನ್ ಚುಚ್ಚುತ್ತಿದ್ದರಾದರೂ ಕೋಳಿಗಳ ಸಾವನ್ನು ತಪ್ಪಿಸಲಾಗುತ್ತಿರಲಿಲ್ಲ. ಜನ ಕೊಬ್ಬರಿ ಎಣ್ಣೆ ಕುಡಿಸುವುದು ಮುಂತಾದ ನಾಟಿ ಮದ್ದು ಮಾಡಿದರೂ ಪ್ರಯೋಜನ ಕಂಡದ್ದನ್ನು ನಾನು ಕಂಡಿಲ್ಲ. ಹೀಗೆ ಕೋಳಿ ಜ್ವರ ಬಂದಾಗ ಅವು ಕುಗುರುತ್ತ ಅಲ್ಲಲ್ಲೇ ಕೂತು ಸತ್ತುಹೋಗುತ್ತಿದ್ದವು. ಮಂಡೆರೋಗ ಎಂದರೆ ಕೋಳಿಗಳ ಮಂಡೆಗಳಿಗೆ ಕೆಂಪು ಕೆಂಪು ಹುಣ್ಣುಗಳಾಗುತ್ತಿದ್ದವು. ಏನೇ ಹಚ್ಚಿದರೂ ಅವು ವಾಸಿಯಾಗದೆ ಕೋಳಿಗಳು ಸತ್ತುಹೋಗುತ್ತಿದ್ದವು.

ಆಗೆಲ್ಲ ಮನೆಯಲ್ಲೇ ಹಿಂಡು ಹಿಂಡು ಕೋಳಿ ಸಾಕಿದರೂ ಕೋಳಿ ಸಾರು ಮಾಡಬೇಕೆಂದರೆ ನೆಂಟರು ಬರಬೇಕು, ಇಲ್ಲವೇ ಹಬ್ಬಗಳು. ಇಲ್ಲಿ ಒಂದು ತಮಾಷೆಯೂ ಇದೆ. ಆಗೆಲ್ಲ ನೆಂಟರು ಬಂದರೆ ಕೋಳಿ ಸಾರು ಮಾಡದೆ ಅವರು ತಮ್ಮ ಊರಿಗೆ ಮರಳುತ್ತಿರಲಿಲ್ಲ. ಒಂದು ವೇಳೆ ನಾಳೆ ಊರಿಗೆ ವಾಪಸ್ ಹೋಗ್ತೇನೆ ಎಂದರೆ ಬೇಡ ಇರಿ ನಾಳೆ ಕೋಳಿ ಕಡಿಯುವ ಎಂದು ನೆಂಟರನ್ನು ಉಳಿಸಿಕೊಳ್ಳುತ್ತಿದ್ದರು. ‘ಹೋಗ್ತೇನೆ ಹೋಗ್ತೇನೆ ಅಂತ ಹದಿನಾರು ಕೋಳಿ ತಿಂದಿದ್ದನಂತೆ’ ಎಂಬ ಗಾದೆಯೊಂದು ಹುಟ್ಟಿದ್ದೂ ಹೀಗೆಯೇ.

ಬೆಳಿಗ್ಗೆ ಗೂಡಿನಿಂದ ಕತ್ತರಿಸುವ ಕೋಳಿಯೊಂದನ್ನು ಹೊರತುಪಡಿಸಿ ಉಳಿದವನ್ನು ಮಾತ್ರ ಮೇಯಲು ಬಿಡುತ್ತಿದ್ದರು. ಕತ್ತರಿಸಲು ಆಯ್ಕೆ ಮಾಡಿದ ಕೋಳಿಯನ್ನು ಜಲ್ಲೆಯಲ್ಲಿ ಕವುಚಿಟ್ಟು ಸಾರು ಮಾಡುವ ವೇಳೆಗೆ ಬಿಸಿನೀರು ಕಾಯಿಸಿ ನಂತರ ಕೋಳಿಯ ಕತ್ತುಕೊಯ್ದು ಬಿಸಿ ನೀರಿಗೆ ಅದ್ದಿ ಪುಕ್ಕ ಕೀಳುತ್ತಿದ್ದರು. ನಂತರ ಒಲೆಯ ಜ್ವಾಲೆಗೆ ಪುಕ್ಕತರಿದ ಕೋಳಿಯನ್ನು ಹಿಡಿದು ಸಣ್ಣ ಪುಟ್ಟ ಪುಕ್ಕಗಳನ್ನೂ ಸುಟ್ಟು ನಂತರ ಅದರ ಹೊಟ್ಟೆ ಬರೆದು ಪಿತ್ತಕೋಶವನ್ನು ಒಡೆಯದಂತೆ ಜಾಗ್ರತೆಯಾಗಿ ತೆಗೆದು ಕೋಳಿಯ ಲಿವರ್, ಹೃದಯ ಪ್ರತ್ಯೇಕಿಸಿ ಮಾಂಸವನ್ನು ಬೇಕಾದ ಗಾತ್ರಕ್ಕೆ ಕತ್ತರಿಸಿ, ಒಲೆಯ ಮೇಲೆ ತವಾ ಇಟ್ಟು ಹೆಚ್ಚಿದ ಈರುಳ್ಳಿ, ಗಸಗಸೆ, ಒಣಮೆಣಸು, ಮಸಾಲೆ ಪದಾರ್ಥಗಳನ್ನು ಹುರಿದು ತೆಂಗಿನ ತುರಿಯೊಡನೆ ಕಾರಕಡೆದು ಈರುಳ್ಳಿ ಒಗ್ಗರಣೆಯಲ್ಲಿ ಮಾಂಸವನ್ನು ಬೇಯಿಸಿ ಸಾರು ಮಾಡಿದರೆಂದರೆ ಊರಿಡೀ ಕೋಳಿಸಾರಿನಿಂದ ಘಮಗುಡುತ್ತಿತ್ತು. ಅಂಥ ಸಾರಿಗಾದರೋ ಅಮೃತದ ರುಚಿ. ಆ ದಿನವಿಡೀ ಮನೆಯ ಮಕ್ಕಳಿಗೆ ಸಡಗರವೋ ಸಡಗರ. ಕೋಳಿ ಕತ್ತರಿಸುವಾಗ ಬೊಬ್ಬೆ ಹೊಡೆದ ಮಕ್ಕಳ ಅಳು ಸಾರಾದಾಗ ಮಾಯ! ಇಂಥ ಸಾರು ಅಕ್ಕಪಕ್ಕದ ನಾಲ್ಕು ಮನೆಗಳಿಗೂ ತಲುಪಬೇಕು. ಮನೆಯ ಜನರ ಜೊತೆ ಅಕ್ಕಪಕ್ಕದ ಕೆಲವರೂ ಊಟದ ಪಂಕ್ತಿಯಲ್ಲಿ ಕೂರಬೇಕು. ಸಂಭ್ರಮದಿಂದ ಉಂಡು ಡರ್ರನೆ ತೇಗಬೇಕು. ಈಗ ನಿತ್ಯ ಕೋಳಿ ಮಾಂಸ ಉಂಡರೂ ಆ ರುಚಿ ಇಲ್ಲ.
Image result for ಕೋಳಿ ಅಂಕ

ನನ್ನ ಮನೆಯಲ್ಲಿ ನಾನೂ ತಮ್ಮನೂ ಕೋಳಿ ಸಾಕುತ್ತಿದ್ದೆವು. ಅಂದರೆ ಮನೆಯಲ್ಲಿ ಇರುವ ಇಂತಿಷ್ಟು ಕೋಳಿ ನನ್ನವು, ಇಂತಿಷ್ಟು ಅವನವು. ಸಾರಿಗೆ ನಮ್ಮ ಕೋಳಿ ಕತ್ತರಿಸಿದರೋ ಮುಗಿಯಿತು ಕಥೆ. ಚಂಡಿಹಿಡಿದು ಅತ್ತು, ಊಟ ಮಾಡದೆ ಮೊಂಡುಹಿಡಿದು ಕೂತು, ‘ಕೊಂದ ಪಾಪ ತಿಂದು ಪರಿಹಾರ’ ಎಂಬ ಗಾದೆ ಹೇಳಿದ ಮೇಲೆ ರಾಜಿಯಾಗಿ ಊಟ ಮಾಡುವುದಿತ್ತು. ಮನೆಯಲ್ಲೇ ಅಷ್ಟು ಕೋಳಿ ಸಾಕುತ್ತಿದ್ದರೂ ಬೇಕೆನಿಸಿದಾಗೆಲ್ಲ ಕೋಳಿ ಕತ್ತರಿಸದೆ ಕಂಜೂಸು ಮಾಡುವ ಆಗಿನ ಜನ ಕೋಳಿ ರೋಗ ಬಂದು ಎಲ್ಲ ಕೋಳಿ ಸಾಯುವಾಗ ಅಯ್ಯೋ ಕತ್ತರಿಸಿ ತಿಂದಿದ್ದರೂ ಆಗುತ್ತಿತ್ತಲ್ಲ.., ಎಲ್ಲ ಸತ್ತವಲ್ಲ ಎಂದು ಸಂಕಟಪಡುತ್ತಿದ್ದರು. ತಮಾಷೆಯೆಂದರೆ ಪ್ರತಿಸಲವೂ ಇದೇ ಪುನರಾವರ್ತನೆಯಾಗುತ್ತಿತ್ತು.

ಕಳುವಾದಾಗ, ಸುಳ್ಳು ಹೇಳುವಾಗ, ಅಪ್ರಾಮಾಣಿಕವಾಗಿ ಜನ ನಡೆದುಕೊಳ್ಳುವಾಗ ಮೊಟ್ಟೆಯ ಮೇಲುಭಾಗಕ್ಕೆ ಇದ್ದಲಿಂದ ಏನೋ ಗೊಂಬೆಯ ಚಿತ್ರ ಬರೆದು ನೀನು ಇಂಥ ತಪ್ಪನ್ನು ಮಾಡಿಲ್ಲವೆಂದರೆ ಮೊಟ್ಟೆಯನ್ನು ಮುಟ್ಟು. ಸುಳ್ಳು ಹೇಳಿದೆಯಾದರೆ ರಕ್ತಕಾರಿಕೊಂಡು ಸಾಯುತ್ತೀಯಾ ಎಂದು ಮೊಟ್ಟೆ ಮುಟ್ಟಿಸುವ ಪ್ರಕ್ರಿಯೆ ಇತ್ತು. ಮಕ್ಕಳಿಗೆ ಹೊಟ್ಟೆ ಸಂಬಂಧಿ ತೊಂದರೆಗಳಾದಾಗ ಮೊಟ್ಟೆಯಿಂದ ದೃಷ್ಟಿ ನಿವಾಳಿಸುವ ಸಂಪ್ರದಾಯವೂ ಇತ್ತು. ಮುಂಜಾನೆ ಎಬ್ಬಿಸಲು ಅವರವರ ಮನೆಯ ಹುಂಜಗಳೇ ಅಲಾರಾಂನಂತೆ ಕೂಗಬೇಕು. ‘ತನ್ನ ಕೋಳಿಯಿಂದಲೇ ಬೆಳಗಾಗುತ್ತೆ ಅಂದುಕೊಂಡಿದಾರೆ’ ಎಂಬ ಗಾದೆಯೊಂದು ಇದರಿಂದಲೇ ಹುಟ್ಟಿಕೊಂಡದ್ದು. ಕೋಳಿಗಳನ್ನು ದೇವರಿಗೆ ಬಿಡುವುದೂ ರೂಢಿಯಲ್ಲಿ ಇತ್ತು.

ಆಗೆಲ್ಲ ಕಂತ್ರಿಕೋಳಿ ಸಾಕುತ್ತಿದ್ದರು. ಇವುಗಳಲ್ಲಿ ಕೆಲವಕ್ಕೆ ಕತ್ತಿನಲ್ಲಿ ಕೂದಲಿರದೆ ಬೋಳಾಗಿರುತ್ತಿತ್ತು. ನಮ್ಮ ಪಕ್ಕದ ಮನೆಯಾಕೆ ಸಂಜೆ ಸಮಯ ಕೋಳಿಯೊಂದನ್ನು ಹಿಡಿಯಲು ಕೈಹಾಕಿ ಬೋಳು ಕತ್ತಿನ ಕೋಳಿಯೆಂದು ಹಾವನ್ನು ಹಿಡಿದುಬಿಟ್ಟಿದ್ದಳು. ಹಿಂದಿಯ ಬಾಂಬೆ ಟು ಗೋವಾ ಸಿನೆಮಾದಲ್ಲೂ ಇಂಥದ್ದೇ ದೃಶ್ಯವನ್ನು ನೋಡಿದ್ದ ನನಗೆ ಬೋಳು ಕತ್ತಿನ ಕೋಳಿ ಎಂದರೆ ನಗು!

ಆ ದಿನಗಳಲ್ಲಿ ಬಣ್ಣದಲ್ಲಿ ಅದ್ದಿದ ಫಾರಮ್ ಕೋಳಿ ಮರಿಗಳೂ, ಗಿರಿರಾಜ ಕೋಳಿಮರಿಗಳೂ ಮಾರಾಟಕ್ಕೆ ಬರುತ್ತಿದ್ದವು. ಈಗ ಕೋಳಿ ಸಾಕಣೆ ತೀರಾ ಅಪರೂಪ. ಒಮ್ಮೆ ಬೆಂಗಳೂರಿನ ಒಂದು ಕಾರ್ಯಕ್ರಮದಲ್ಲಿ ಬೊಳುವಾರು ಮಹಮದ್ ಕುಂಜ್ಞಿಯವರು, ‘ನನ್ನ ಮೊಮ್ಮಗುವಿಗೆ ಕೋಳಿ ತೋರಿಸಬೇಕು ಎಂದುಕೊಳ್ಳುತ್ತೇನೆ, ಆದರೆ ಸೈಕಲ್ಗೆ ಕಟ್ಟಿ ಅಥವಾ ವಾಹನಗಳಲ್ಲಿ ಕಿಕ್ಕಿರಿದು ತುಂಬಿಕೊಂಡು ಹೋಗುವ ಕೋಳಿಗಳನ್ನು ತೋರಿಸಲಾರೆ’ ಎಂದಿದ್ದು ನನಗೆ ನೆನಪಿದೆ.

ಈಗ ಎಲ್ಲರನ್ನೂ ಎಬ್ಬಿಸಲು ಮೊಬೈಲ್ ಅಲಾರಾಂ ಕೂಗುತ್ತದೆ. ಕೋಳಿ ಕೂಗುವುದಿಲ್ಲವೇ ಎಂದರೆ ಕೂಗುತ್ತದೆ. ನಮ್ಮ ಮನೆಯ ಹತ್ತಿರ ಯಾರೋ ಕೋಳಿ ಸಾಕಿದ್ದಾರೆ. ಬೀದಿ ದೀಪದ ಬುಡದಲ್ಲೇ ಇರುವ ಮನೆಯ ಕೋಳಿಯದು ರಾತ್ರಿ ಹನ್ನೆರಡು, ಒಂದು ಗಂಟೆಗೆಲ್ಲ ಕೊಕ್ಕೊಕ್ಕೋ ಎಂದು ಕೂಗುತ್ತದೆ. ಅಷ್ಟು ಹೊತ್ತಾದರೂ ನಿದ್ದೆಮಾಡದೆ ಏನೋ ಮಾಡುತ್ತಿರುವ ನನ್ನ ಹಣೆಯಲ್ಲಿ ವಿಷಾದದ ಗೆರೆಯೊಂದು ಮೂಡುತ್ತದೆ. ನಿಟ್ಟುಸಿರೊಂದನ್ನು ದಬ್ಬಿ ಮಲಗಲು ಅಣಿಯಾಗುತ್ತೇನೆ.

ಕಾಮೆಂಟ್‌ಗಳಿಲ್ಲ: