ಸುಮಲತಾ ಎನ್.
14 Dec, 2017
ಸೌಜನ್ಯ: ಕಾಮನಬಿಲ್ಲು ಪುರವಣಿ, ಪ್ರಜಾವಾಣಿ.
ಹಸಿರ ರಾಶಿಯ ನಡುವೆ ಸುಖ ನಿದ್ದೆಯಲ್ಲಿದ್ದಂತೆ ಕಾಣುವ ಹೆಸರಘಟ್ಟದ ಬಳಿಯೇ ಇರುವುದು ಈ ನಿಸರ್ಗ ಗ್ರಾಮ. ಹೆಸರಿಗೆ ತಕ್ಕಂತೆ, ಪ್ರಕೃತಿ ತನ್ನ ಇನ್ನೊಂದು ರೂಪವನ್ನು ಇಲ್ಲಿಯೇ ಬಿಟ್ಟು ಹೋಗಿದೆಯೇನೋ ಎನಿಸುವಂತೆ ಹಸಿರು ರಾಚುವ ನೆಲ. ಸಾಲು ಸಾಲು ಬಾಳೆ, ತೆಂಗಿನ ತೋಟಗಳು, ಸರದಿಯಂತೆ ನಿಂತ ಗದ್ದೆಗಳು, ಮಣ್ಣು ಹಾದಿ... ಹಳ್ಳಿಯ ನೆನಕೆಯ ಈ ಜಾಗದಲ್ಲಿ ಡೊಳ್ಳಿನ ಶಬ್ದವೂ ಆಗಾಗ್ಗೆ ಕೇಳಿಸುತ್ತದೆ.
ಅರೆ, ಈ ಶಬ್ದ ಎಲ್ಲಿಂದ ಬರುತ್ತಿದೆ? – ಪ್ರಶ್ನೆ ಹೊತ್ತು ಡೊಳ್ಳಿನ ನಾದವನ್ನೇ ಹಿಂಬಾಲಿಸಿ ಹೊರಟರೆ ಅಲ್ಲಿ ಮತ್ತೂ ಒಂದು ವಿಶೇಷ ಕಂಡಿತ್ತು.
ಭಾರದ ಡೊಳ್ಳನ್ನು ಸೊಂಟಕ್ಕೆ ಇಳಿಬಿಟ್ಟು ಗುಣಿಯಿಂದ ಗಿರಿ ಗಿರ ಎಂದು ಡೊಳ್ಳಿನ ಮೈ ಸವರುತ್ತಾ ತಾಲೀಮಿಗೆ ಶುರುವಿಟ್ಟುಕೊಳ್ಳುತ್ತಿದ್ದ ಪುಟ್ಟ ಹುಡುಗಿಯರ ತಂಡವೊಂದು ಎದುರುಗೊಂಡಿತ್ತು. ಸಮವಸ್ತ್ರ ತೊಟ್ಟು ಡೊಳ್ಳನ್ನು ಹೊತ್ತುಕೊಂಡು ಕುಣಿತಕ್ಕೆ ಸಜ್ಜಾಗುತ್ತಿದ್ದ ಅವರನ್ನು ನೋಡುವುದೇ ಸೋಜಿಗ. ಶಾಲೆ, ಕಾಲೇಜಿನಿಂದ ಆಗಷ್ಟೇ ಬಂದಿದ್ದ ಅವರಲ್ಲಿ ಸುಸ್ತು ಕಾಣುತ್ತಿದ್ದರೂ ಹುಮ್ಮಸ್ಸು ಕಡಿಮೆಯಿರಲಿಲ್ಲ. ಸುಸ್ತನ್ನೆಲ್ಲಾ ಜಾಡಿಸಿ ಹೊರ ಹಾಕಿದಂತೆ ಕುಣಿಯಲು ಶುರು ಮಾಡಿದ ಅವರನ್ನು ನೋಡುತ್ತಲೇ ಕಣ್ಣುಗಳೂ ಅಗಲಗೊಳ್ಳುತ್ತವೆ.
ಸೊಂಟಕ್ಕೆ ಕಟ್ಟಿದ ಡೊಳ್ಳು, ಬಲಗೈಯಲ್ಲಿ ಗುಣಿ, ಅದಕ್ಕೆ ತಕ್ಕಂತೆ ಸ್ಪಂದಿಸುವ ಎಡಗೈ. ಡೊಳ್ಳಿನಿಂದ ಹೊಮ್ಮುವ ನಾದಕ್ಕೆ ತಕ್ಕಂತೆ ದಾಪುಗಾಲೂ ಹಾಕಬೇಕು. ನೋಡನೋಡುತ್ತಲೇ ಬದಲಾಗುವ ಹೆಜ್ಜೆಗಳು. ಡೊಳ್ಳಿಗೆ ತಕ್ಕಂತೆ ತಾಳ, ಗೆಜ್ಜೆಗಳು ಜೊತೆಯಾಗಬೇಕು.
ಮಂದಗತಿಯಲ್ಲಿ ಶುರುವಾದ ಡೊಳ್ಳಿನ ನಾದ ತಾರಕಕ್ಕೇರಿತ್ತು. ಸದ್ದು ಮೇಲೇರಿದಂತೆ ಹುಡುಗಿಯರ ಕುಣಿಯುವ ಉತ್ಸಾಹವೂ ಮುಗಿಲು ಮುಟ್ಟಿತ್ತು. ಡೊಳ್ಳಿನ ಮೇಲೇ ನಡೆಯುತ್ತ ತಾಳ ಹಾಕುವ ಹುಡುಗಿಯ ಚಮತ್ಕಾರ! ಕಣ್ಣು ಕದಲದಂತೆ ಮಾಡುವ ಈ ನೃತ್ಯ ಕಲೆಯನ್ನು ಲೀಲಾಜಾಲವಾಗಿ ಸುಮಾರು 20 ನಿಮಿಷಗಳ ಕಾಲ ಮಾಡಿ ತಣ್ಣಗೆ ಕುಳಿತ ಅವರನ್ನು ಕಂಡರೆ ಎಂಥವರಲ್ಲೂ ಅಚ್ಚರಿ ಕಾಣುತ್ತದೆ.
ನಿಸರ್ಗ ಗ್ರಾಮದಲ್ಲಿರುವ ಸ್ಪರ್ಶ ಟ್ರಸ್ಟ್‌ನ ಹೆಣ್ಣು ಮಕ್ಕಳು ಡೊಳ್ಳು ಕುಣಿತಕ್ಕೆ ಹೆಜ್ಜೆ ಹಾಕಲು ಆರಂಭಿಸಿ ಮೂರು ವರ್ಷಗಳೇ ಸಂದಿವೆ. ಟ್ರಸ್ಟ್‌ನ ಬೇರೆ ಬೇರೆ ಶಾಖೆಗಳಲ್ಲಿದ್ದಾಗಲೇ ಡೊಳ್ಳು ಕುಣಿತ ಕಲಿಯಲು ಆರಂಭಿಸಿದ್ದರು. ಗಂಡುಕಲೆ ಎಂದೇ ಹೆಸರಾಗಿರುವ ಡೊಳ್ಳುಕುಣಿತ ಈಗ ಈ ಪುಟ್ಟ ಹುಡುಗಿಯರಿಗೂ ಒಲಿದಿದೆ. ಹೆಚ್ಚಾಗಿ ದೈಹಿಕ ಶ್ರಮ ಬೇಡುವ ಈ ಕಲೆಗೆ ಹೆಣ್ಣುಮಕ್ಕಳು ಹೇಗೆ ಒಗ್ಗಿಕೊಂಡರು ಎಂದು ಆಶ್ಚರ್ಯ ಎನಿಸಿದರೂ ಅವರ ಆತ್ಮವಿಶ್ವಾಸ ಅದಕ್ಕೆ ಉತ್ತರ ಕೊಟ್ಟಿತ್ತು.
ದಿಕ್ಕಿಲ್ಲದ ಅಥವಾ ಆರ್ಥಿಕವಾಗಿ ಕಡುಬಡತನದಲ್ಲಿ ಬೆಂದ ಮಕ್ಕಳಿಗೆ ಆಶ್ರಯ ನೀಡಿರುವ ಸ್ವಯಂ ಸೇವಾ ಸಂಸ್ಥೆ ಸ್ಪರ್ಶ ಟ್ರಸ್ಟ್‌ನಲ್ಲಿ ಬೆಳೆಯುತ್ತಿರುವ ಈ ಹೆಣ್ಣುಮಕ್ಕಳಿಗೆ ತಮ್ಮದೇ ಅಸ್ಮಿತೆ ಕಂಡುಕೊಳ್ಳುವ ತವಕ. ಅದಕ್ಕೆ ಒಂದು ಉದಾಹರಣೆಯಂತಿದೆ ಇವರ ಡೊಳ್ಳು ಕುಣಿತ.
ಹೀಗೆ ಒಂದು ತಂಡ ರೂಪುಗೊಳ್ಳುವುದರ ಹಿಂದೆ ಹೆಣ್ಣುಮಕ್ಕಳ ದೈಹಿಕ ಶ್ರಮ ಮಾತ್ರವಲ್ಲ ಮಾನಸಿಕ ಸ್ಥೈರ್ಯವೂ ಕೆಲಸ ಮಾಡಿದೆ. ಒಂದೊಂದು ಹುಡುಗಿಯರ ಹಿಂದೆಯೂ ಅವರಿಗೆ ಕಸುವು ತುಂಬಿದ ಕಥೆಗಳಿವೆ...
‘ನನಗೆ ಬರೀ ಓದುವುದು ಅಂದರೆ ಇಷ್ಟ ಇಲ್ಲ. ಡಾನ್ಸ್ ಮತ್ತು ಆಟ ಎಂದರೆ ಬಹಳ ಪ್ರೀತಿ. ಆದ್ದರಿಂದ ಡೊಳ್ಳು ಕುಣಿತ ಕಲಿತೆ’ ಎಂದು ಹೇಳಿಕೊಂಡ ಕವಿತಾ ಓದುತ್ತಿರುವುದು 2ನೇ ಪಿಯುಸಿ. ಸಂಸ್ಥೆ ಸೇರಿ ಏಳು ವರ್ಷಗಳು ಕಳೆದಿವೆ. ಕಲಬುರಗಿ ಮೂಲದ ಕವಿತಾಗೆ ಓದುವ ಹಂಬಲ. ಶಾಲೆಗೆ ಸೇರಿದ್ದರೂ ಅನಿವಾರ್ಯ ಕಾರಣಕ್ಕೆ ಬಿಡಬೇಕಾಯಿತು. ಅಮ್ಮ, ಅಕ್ಕನೊಂದಿಗೆ ಮನೆ ಕೆಲಸಕ್ಕೆ ತಾನೂ ಜೊತೆಯಾದಳು. ಮತ್ತೆ ಶಾಲೆಯೆಡೆಗೆ ಮುಖ ಮಾಡಿದಳು. ಮನೆಕೆಲಸ, ಶಾಲೆ ಎರಡರ ನಡುವೆ ಜೀವನದ ತಕ್ಕಡಿ ಹೇಗೇಗೋ ವಾಲುತ್ತಿತ್ತು. ನಂತರ ಬಂದು ಸೇರಿದ್ದು ಇಲ್ಲಿಗೆ.
‘ನಾನು ಹತ್ತನೇ ತರಗತಿಯಲ್ಲಿ ಒಳ್ಳೆ ಅಂಕ ಪಡೆದುಕೊಂಡೆ’ ಎಂದು ನಗುತ್ತಾ ಹೇಳುವ ಕವಿತಾ, ಸಪೂರ ಇದ್ದರೂ ಡೊಳ್ಳನ್ನು ಚೆನ್ನಾಗಿ ನಿಭಾಯಿಸಬಲ್ಲಳು. ಮುಂದೆ ಫ್ಯಾಷನ್ ಡಿಸೈನರ್ ಆಗುವ ಕನಸು ಈಕೆಯದ್ದು. ಇನ್ನು ಮೊನ್ನೆ ಮೊನ್ನೆ ಮಕ್ಕಳ ದಿನಾಚರಣೆ ಅಂಗವಾಗಿ ಯುನಿಸೆಫ್ ಸಂಸತ್‌ನಲ್ಲಿ ಕೊಳೆಗೇರಿ ಮಕ್ಕಳ ಸ್ಥಿತಿಗತಿ, ಮಕ್ಕಳ ಹಕ್ಕಿನ ಕುರಿತು ಕರ್ನಾಟಕವನ್ನು ಪ್ರತಿನಿಧಿಸಿದ ಕನಕಾ ಕೂಡ ತಂಡದಲ್ಲಿದ್ದಾಳೆ. ಬಾಲ ಕಾರ್ಮಿಕಳಾಗಿ ದುಡಿದು ನೋವುಂಡಿರುವ ಆಕೆಗೆ ಆ ಅನುಭವಗಳೇ ಬಲ ಕೊಟ್ಟಿವೆ.
ತಮಿಳುನಾಡಿನ ಕನಕಾಗೆ ನೃತ್ಯದಲ್ಲಿ ವಿಶೇಷ ಆಸ್ಥೆಯಿಲ್ಲದೇ ಇದ್ದರೂ ಆಸಕ್ತಿ ಮೂಡಿದ್ದು ಬೇಸಿಗೆ ಶಿಬಿರದಲ್ಲಿ ಆರಂಭಗೊಂಡ ನೃತ್ಯ ತರಬೇತಿಯಿಂದ. ‘ಡೊಳ್ಳು ಕುಣಿತದ ಬಗ್ಗೆ ನನಗೆ ತಿಳಿದಿದ್ದು ಇಲ್ಲೇ. ನಮಗೆ ಡೊಳ್ಳನ್ನು ಕೊಡುಗೆಯಾಗಿ ನೀಡಿದ್ದರು. ಅವರ ಗುರುತಿಗಾಗಿ ಈ ಕಲೆಯನ್ನು ಮುಂದುವರೆಸುತ್ತಿದ್ದೇವೆ’ ಎಂದು ಹೇಳಿಕೊಂಡ ಕನಕಾ ಮನದಲ್ಲಿ ವಿಜ್ಞಾನಿಯಾಗುವ ಆಸೆ.
2013ರಲ್ಲಿ ಬೇಸಿಗೆ ಶಿಬಿರದ ಅಂಗವಾಗಿ ಡೊಳ್ಳು ಕುಣಿತ ತರಬೇತಿ ಆರಂಭಗೊಂಡಿದ್ದು. ಸ್ಪರ್ಶ ಟ್ರಸ್ಟ್‌ನ ಮ್ಯಾನೇಜಿಂಗ್ ಟ್ರಸ್ಟಿ ಗೋಪಿನಾಥ್ ಅವರು ಕ್ರಿಯಾತ್ಮಕವಾಗಿ ಮಕ್ಕಳಿಗೆ ಏನಾದರೂ ಕಲಿಸಬೇಕು ಎಂದುಕೊಂಡಾಗ ಹೊಳೆದಿದ್ದೇ ಈ ಆಲೋಚನೆ. ಹಿದಾಯತ್ ಎಂಬುವರು ಗಂಡು ಮಕ್ಕಳೊಂದಿಗೆ ಹೆಣ್ಣುಮಕ್ಕಳಿಗೂ ಮಾರ್ಗದರ್ಶನ ನೀಡಿ ಕುಣಿತಕ್ಕೆ ಹೆಜ್ಜೆ ಹಾಕುವಂತೆ ಮಾಡಿದವರು.
ಎಂಟು ಮಂದಿಯ ತಂಡವಿದು. ಸದ್ಯಕ್ಕೆ ವಿಜಯಲಕ್ಷ್ಮಿ, ಕವಿತಾ, ಕೃಷ್ಣವೇಣಿ, ಕನಕ, ನರಸಮ್ಮ, ನಾಗರತ್ನಾ, ಗೌತಮಿ ಹಾಗೂ ಅರುಣಾ ಇದ್ದಾರೆ. ಮೊದಮೊದಲು ಡೊಳ್ಳು ಕಷ್ಟ ಎನ್ನುತ್ತಿದ್ದ ಕೈಗಳು ಈಗ ಪಳಗಿವೆ. ಮಾರ್ಗದರ್ಶನವೇ ಇಲ್ಲದೇ ಅವಶ್ಯಕತೆಗೆ ತಕ್ಕಂತೆ ತಮ್ಮ ತಂಡವನ್ನು ನಿರ್ವಹಿಸಬಲ್ಲ ಚಾಕಚಕ್ಯತೆ ಕಲಿತುಕೊಂಡಿದ್ದಾರೆ. ಅನಿವಾರ್ಯ ಕಾರಣವಾಗಿ ತಂಡದಲ್ಲಿ ಯಾರಾದರೂ ಬರದೇ ಇದ್ದರೂ ನಿಭಾಯಿಸಬಲ್ಲ ಬುದ್ಧಿವಂತಿಕೆಯೂ ಎಲ್ಲರಲ್ಲಿದೆ.
ತಂಡದ ಪುಟ್ಟ ಹುಡುಗಿ ವಿಜಯಲಕ್ಷ್ಮಿ ಓದುತ್ತಿರುವುದು 7ನೇ ತರಗತಿಯಲ್ಲಿ. ಬಳ್ಳಾರಿಯಿಂದ ಬಂದ ಈಕೆಗೆ ನೃತ್ಯ ಎಂದರೆ ಹುಚ್ಚು. ಅದಕ್ಕೆ ಜೊತೆಯಾಗಿರುವುದು ತುಂಟತನ. ಬಡತನದಲ್ಲೇ ಹುಟ್ಟಿ ಬೆಳೆದ ಈಕೆಗೆ ಶಾಲೆಗೆ ಹೋಗಬೇಕೆಂಬ ಬಯಕೆ. ಓದಲು ಸೌಕರ್ಯದ ಕೊರತೆ. ತರಕಾರಿ ಮಾರ್ಕೆಟ್‌ನಲ್ಲಿ ಬಾಲ್ಯದ ಬಣ್ಣವೂ ಕರಗಿಹೋಗುತ್ತಿತ್ತು. ಬೇರೆ ಮಕ್ಕಳು ಬ್ಯಾಗ್ ಹೇರಿಕೊಂಡು ಶಾಲೆಗೆ ಹೋಗುವುದನ್ನು ನೋಡುತ್ತಾ ಮರುಗುತ್ತಿದ್ದ ವಿಜಯಲಕ್ಷ್ಮಿ ಜೀವನ ಬದಲಾಗಿದ್ದು ಇಲ್ಲಿ.
‘ಜೀವನದಲ್ಲಿ ಏನಾದರೂ ಸಾಧಿಸುತ್ತೇನೆ. ನನಗೆ ಸಹಾಯ ಮಾಡಿದವರಿಗೆಲ್ಲಾ ಮುಂದೆ ಉಡುಗೊರೆ ಕೊಡುತ್ತೇನೆ’ ಎಂದು ಉತ್ತರಿಸಿದ ವಿಜಯಲಕ್ಷ್ಮಿ ನಗುವಿನೊಂದಿಗೆ ಅವಳ ತಮ್ಮನೂ ಜೊತೆಯಾಗಿದ್ದಾನೆ.
ಹತ್ತನೇ ತರಗತಿ ಓದುತ್ತಿರುವ ರಾಯಚೂರಿನ ನಾಗರತ್ನಾ ಅರಳು ಹುರಿದಂತೆ ಮಾತನಾಡುತ್ತಾಳೆ. 2 ವರ್ಷ ಶಾಲೆಯಿಂದ ಹೊರಗುಳಿದು ದಿನಗೂಲಿ ಕೆಲಸ ಮಾಡುತ್ತಿದ್ದ ಈಕೆಯ ಹಿಂದೆ ಹುಟ್ಟಿದವರು ಇಬ್ಬರು. ಅಕ್ಕನೊಂದಿಗೆ ದುಡಿದರು ಬಿಡಿಗಾಸೂ ಕೈಯಲ್ಲಿ ಕಾಣಲಿಲ್ಲ. ಶಿಕ್ಷಣದ ಮಹತ್ವ, ಮಕ್ಕಳ ಹಕ್ಕಿನ ಕುರಿತು ತಿಳಿದುಕೊಂಡು ಇಲ್ಲಿಗೆ ಬಂದು ಸೇರಿದ್ದಳು. ‘ಹುಡುಗರು ಮಾತ್ರವಲ್ಲ, ನಾವೂ ಡೊಳ್ಳನ್ನು ಅವರಿಗಿಂತ ಸೊಗಸಾಗಿ ಬಾರಿಸಬಲ್ಲೆವು’ ಎಂದು ಗುಣಿ ಹಿಡಿಯುತ್ತಾಳೆ.
ಖುಷಿ ಕೊಟ್ಟ ಡೊಳ್ಳಿನ ಸಾಂಗತ್ಯ: ಆಂಧ್ರದಲ್ಲಿ ಚಿಂದಿ ಆಯುತ್ತಾ ಕುರಿ ವ್ಯಾಪಾರ ಮಾಡುತ್ತಿದ್ದ ನರಸಮ್ಮ ಕುಟುಂಬಕ್ಕೆ ಓದು ದೂರದ ಮಾತಾಗಿತ್ತು. ಬಡತನವನ್ನೇ ಮೈದುಂಬಿಕೊಂಡ ಕುಟುಂಬ. ಬೀದಿಯ ಆ ಅನುಭವಗಳೇ ಆಕೆಗೆ ಧೈರ್ಯ ತುಂಬಿದ್ದು. ಯಾರದೋ ಸಹಾಯದಿಂದ ತಂಗಿಯೊಟ್ಟಿಗೆ ಸ್ಪರ್ಶ ಸೇರಿದ ನರಸಮ್ಮ ಸಂಸ್ಥೆಗೆ ಬಂದು 9 ವರ್ಷಗಳು ಕಳೆದಿವೆ. ಈಗ ಪಿಯುಸಿ ಓದುತ್ತಿದ್ದಾಳೆ. ಕುಣಿತದೊಂದಿಗೆ ಕಣ್ಣುಗಳಲ್ಲಿ ಸಾಕಷ್ಟು ಕನಸುಗಳೂ ತುಂಬಿಕೊಂಡಿವೆ.
ತಮಿಳುನಾಡಿನಿಂದ ಇಲ್ಲಿಗೆ ಬಂದು ಸೇರಿರುವ ಕೃಷ್ಣವೇಣಿಗೂ ಕಷ್ಟ ರೂಢಿಯಾಗಿತ್ತು. ಒಂಬತ್ತನೇ ತರಗತಿ ಓದುತ್ತಿರುವ ಈಕೆಯನ್ನು ಇಲ್ಲಿಯವರೆಗೂ ಕರೆತಂದಿರುವುದು ಅಜ್ಜಿಯ ಒತ್ತಾಸೆ. ‘ಓದುವುದು, ಕುಣಿಯುವುದು ಎಲ್ಲವೂ ನನಗಿಷ್ಟ. ಮುಂದೆ ಡಾಕ್ಟರ್ ಆಗ್ತೀನಿ’ ಎಂದು ಆತ್ಮವಿಶ್ವಾಸದಿಂದ ಹೇಳುತ್ತಾಳೆ.
ಇವರೆಲ್ಲರ ಈ ಹೆಜ್ಜೆಯ ಬಗ್ಗೆ ಇವರಿಗೆ ಡೊಳ್ಳು ಕುಣಿತ ಕಲಿಸಿಕೊಟ್ಟ ಹಿದಾಯತ್ ಅವರಿಗೆ ಹೆಮ್ಮೆಯಿದೆ. ‘ನನ್ನ ಗುರುಗಳು ಕರ್ನಾಟಕದಲ್ಲಿ ಮೊದಲ ಮಹಿಳಾ ತಂಡ ಕಟ್ಟಿದ್ದರು. ಬೆಂಗಳೂರಿನಲ್ಲಿ ಹೆಣ್ಣು ಮಕ್ಕಳ ಡೊಳ್ಳು ಕುಣಿತದ ತಂಡ ಸಿದ್ಧಪಡಿಸಬೇಕೆಂದು ನನಗೂ ಅನ್ನಿಸಿತ್ತು. ಒಂದು ತಿಂಗಳು ಮಕ್ಕಳಿಗೆ ನೃತ್ಯದ ಪಟ್ಟುಗಳನ್ನು ಕಲಿಸಿಕೊಟ್ಟೆ.
ಗಂಡುಮಕ್ಕಳನ್ನು ಮೀರಿಸುವಂತೆ ಡೊಳ್ಳು ಕುಣಿತ ಮಾಡುತ್ತಾರೆ. ನಾನು ಕಲಿಸಿದ್ದನ್ನಷ್ಟೇ ಮಾಡಿ ಸುಮ್ಮನೆ ಕೂರುವುದು ಇವರ ಜಾಯಮಾನವಲ್ಲ. ಅವರೂ ವಿಡಿಯೊಗಳನ್ನು ನೋಡಿ ಕೆಲವು ಪಟ್ಟುಗಳನ್ನು ಕಲಿತುಕೊಂಡಿದ್ದಾರೆ’ ಎಂದು ವಿವರಣೆ ನೀಡುತ್ತಾರೆ. ಶಾಲೆ, ಕಾಲೇಜು ಇಲ್ಲದ ಬಿಡುವಿನ ವೇಳೆ ಇವರ ಕೈಯಲ್ಲಿ ಡೊಳ್ಳುಗಳು ಸಜ್ಜಾಗುತ್ತವೆ. ಈ ತಂಡ ಇದುವರೆಗೂ ಸಾಕಷ್ಟು ಕಡೆ ಪ್ರದರ್ಶನಗಳನ್ನು ನೀಡಿದೆ. ದೊಡ್ಡ ದೊಡ್ಡ ಕಂಪನಿಗಳಲ್ಲಿ, ಹಲವು ವಿಶೇಷ ಸಂದರ್ಭಗಳಲ್ಲಿ ಹೆಣ್ಣುಮಕ್ಕಳ ಈ ಕಲೆಗೆ ಪ್ರೋತ್ಸಾಹ ಕೊಟ್ಟು ಮೆಚ್ಚಿಕೊಂಡವರು ನೂರಾರು ಮಂದಿ.
ಸ್ತ್ರೀವಾದ, ಸ್ವಾತಂತ್ರ್ಯದ ಪರಿಕಲ್ಪನೆಗಳು ಈ ಹೆಣ್ಣು ಮಕ್ಕಳನ್ನು ಸೋಕಿಲ್ಲ. ಸಮಾಜ ಪರಿಗಣಿಸುವ ‘ಸಾಧನೆ’ಯ ಸಿದ್ಧಸೂತ್ರಗಳ ಬಗೆಗೂ ತಲೆಕೆಡಿಸಿಕೊಂಡವರಲ್ಲ. ತಮ್ಮ ಮಿತಿಗಳ ನಡುವೆಯೇ, ಅವನ್ನು ಮೀರುತ್ತಲೇ ಅಸ್ಮಿತೆ ರೂಪಿಸಿಕೊಳ್ಳುತ್ತಿರುವ ಈ ಹೆಣ್ಣು ಮಕ್ಕಳು ಗಟ್ಟಿಗಿತ್ತಿಯರೇ ಹೌದಲ್ಲವೇ?
***
ಹುಡುಗಿಯರ ಹುರುಪನ್ನು ಮೆಚ್ಚಬೇಕು
ನನ್ನ ಗುರುಗಳು ಕರ್ನಾಟಕದಲ್ಲಿ ಮೊದಲ ಮಹಿಳಾ ತಂಡ ಕಟ್ಟಿದ್ದರು. ನನಗೂ ಆ ಪ್ರಭಾವ ಆಗಿತ್ತೇನೋ. ನನಗೂ ಹೆಣ್ಣುಮಕ್ಕಳಿಗೆ ಡೊಳ್ಳು ಕುಣಿತ ಕಲಿಸಿ ಬೆಂಗಳೂರಿನಲ್ಲಿ ಒಂದು ತಂಡ ಸಿದ್ಧಪಡಿಸಬೇಕು ಎಂದು ಅನ್ನಿಸಿತ್ತು. ಸ್ಪರ್ಶ ಸಂಸ್ಥೆಯ ಗೋಪಿನಾಥ್ ಅವರಿಗೂ ತಮ್ಮ ಸಂಸ್ಥೆಯ ಹೆಣ್ಣು ಮಕ್ಕಳಿಗೆ ಡೊಳ್ಳು ಕುಣಿತ ಕಲಿಸುವ ಆಸೆ ಇತ್ತು. ಈ ಎರಡೂ ಸಂದರ್ಭ ಸೇರಿ ತಂಡ ಸಿದ್ಧಪಡಿಸಲು ಆರಂಭಿಸಿದೆವು. ಒಂದು ತಿಂಗಳು ಮಕ್ಕಳಿಗೆ ಈ ನೃತ್ಯದ ಪಟ್ಟುಗಳನ್ನು ಕಲಿಸಿಕೊಟ್ಟೆ. ಗಂಡುಮಕ್ಕಳೊಂದಿಗೆ ಇವರನ್ನೂ ಕರೆದುಕೊಂಡು ಹೋಗಿದ್ದಾಗ ಅವರನ್ನು ಮೀರಿಸುವಂತೆ ಡೊಳ್ಳು ಕುಣಿತ ಮಾಡುತ್ತಾರೆ. ಯಕ್ಷಗಾನವನ್ನೂ ಕಲಿಯುತ್ತಿದ್ದಾರೆ.
ನಾನು ಕಲಿಸಿದ್ದನ್ನಷ್ಟೇ ಮಾಡಿ ಸುಮ್ಮನೆ ಕೂರುವುದು ಈ ಹುಡುಗಿಯರ ಜಾಯಮಾನವಲ್ಲ. ಅವರೂ ವಿಡಿಯೊಗಳನ್ನು ನೋಡಿ ಕೆಲವು ಪಟ್ಟುಗಳನ್ನು ಕಲಿತುಕೊಂಡಿದ್ದಾರೆ. ಅವರೇ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳುತ್ತಾರೆ. ಯಾವ ಪಿರಮಿಡ್ ಮಾಡಬೇಕು, ಯಾವ ತಾಳ ಇರಬೇಕು ಈ ಎಲ್ಲಾ ಲೆಕ್ಕಾಚಾರವನ್ನೂ ಅವರೇ ಹಾಕಿಕೊಳ್ಳುತ್ತಾರೆ...
-ಹಿದಯತ್, ನೃತ್ಯಗುರು
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ