ಬುಧವಾರ, ಜನವರಿ 3, 2018

ಜ್ಯೋತಿಸಿಂಗ್ ಜೀವಂತವಾಗಿದ್ದಾಳೆ...


    ಅನುಶಿವಸುಂದರ್ 
ಜ್ಯೋತಿಸಿಂಗ್ ಪ್ರಕರಣ ಸಂಭವಿಸಿ ಐದುವರ್ಷಗಳಾಗಿದ್ದರೂ ಅಲ್ಲಲ್ಲಿ ಅಲ್ಪಸ್ವಲ್ಪ ಬದಲಾಗಿದೆಯೇ ಹೊರತು ಮೂಲಭೂತ ಮನಸ್ಥಿತಿಯಲ್ಲಿ ಯಾವುದೇ ಬದಲಾವಣೆ ಬಂದಿಲ್ಲ.

ಐದು ವರ್ಷದ ಕೆಳಗೆ ೨೦೧೨ರ ಡಿಸೆಂಬರ್ ೧೬ ರಂದು ದೆಹಲಿಯಲ್ಲಿ ಚಲಿಸುತ್ತಿದ್ದ ಬಸ್ಸೊಂದರಲ್ಲಿ ಜ್ಯೋತಿ ಸಿಂಗ್ ಮೇಲೆ ಅತ್ಯಂತ ಭೀಕರವಾಗಿ ಲೈಂಗಿಕ ಆಕ್ರಮಣ ನಡೆಯಿತು. ಲೈಂಗಿಕ ಹಲ್ಲೆಯ ವಿವರಗಳು ಸಾರ್ವಜನಿಕಗೊಳ್ಳುತ್ತಿದ್ದಂತೆ ಆಕೆ ಅನುಭವಿಸಿದ ಭೀಬತ್ಸ ಕ್ರೌರ್ಯವು ಜನರಲ್ಲಿ ಆಕ್ರೋಶವನ್ನು ಕೆರಳಿಸಿತು, ಎಲ್ಲಾ ಕಡೆ ಪ್ರತಿಭಟನೆಗಳು ನಡೆದವು. ಇವೆಲ್ಲ ಕಾರಣದಿಂದ ಅಧಿಕಾರ ರೂಢ ಸರ್ಕಾರವು ತನಿಖೆಯನ್ನು ತೀವ್ರಗೊಳಿಸಿ ಆರೋಪಿಗಳನ್ನು ತ್ವರಿತವಾಗಿ ಬಂಧಿಸಬೇಕಾಯಿತು ಮತ್ತು ವಿಚಾರಣೆಯನ್ನೂ ತ್ವರಿತಗತಿಯಲ್ಲಿ ನಡೆಸಬೇಕಾಯಿತು. ಹೀಗಾಗಿ ಪ್ರಕರಣವು ನಿರ್ಭಯ ಪ್ರಕರಣವೆಂದೇ ಖ್ಯಾತಗೊಂಡಿತು ಮತ್ತು ಅಂತಿಮವಾಗಿ ಮಹಿಳೆಯರ ಮೇಲಿನ ಲೈಂಗಿಕ ಆಕ್ರಮಣವನ್ನು ಇನ್ನಷ್ಟು ಗಂಭೀರವಾಗಿ ತಡೆಗಟ್ಟುವ ಮತ್ತು ತೀವ್ರವಾಗಿ ಶಿಕ್ಷಿಸುವ ಅವಕಾಶಗಳನ್ನು ಹೊಂದಿರುವ ಕ್ರಿಮಿನಲ್ ಲಾ (ಅಮೆಂಡ್ಮೆಂಟ್) ಆಕ್ಟ್ ೨೦೧೩ (ಅಪರಾಧ ಕಾನೂನು (ತಿದ್ದುಪಡಿ) ಕಾಯಿದೆ- ೨೦೧೩) ಜಾರಿಯಾಯಿತು. ಪ್ರಕರಣವು ದೇಶದಲ್ಲಿ ಮಹಿಳೆಯರ ಮೇಲೆ ನಿರಂತರವಾಗಿ ನಡೆಯುತ್ತಿರುವ ಹಿಂಸಾಚಾರಗಳ ಬಗ್ಗೆ ಮತ್ತು ಅದನ್ನು ತಡೆಗಟ್ಟುವ ಮಾರ್ಗಗಳ ಬಗ್ಗೆ ಗಂಭೀರವಾದ ಸಾರ್ವಜನಿಕ ಚರ್ಚೆಗಳನ್ನು ಹುಟ್ಟುಹಾಕಿತು.

ಜ್ಯೋತಿ ಸಿಂಗಳ ಜೀವನದ ಕಥೆಯು ಇಂದಿನ ಯುವಭಾರತದ ಆಶೋತ್ತರಗಳ ಮತ್ತು ಚಲನಶೀಲತೆಯ ಅಭಿವ್ಯಕ್ತಿಯೇ ಆಗಿದೆ. ಪ್ರಾಯಶಃ ಕಾರಣದಿಂದಲೇ ಆಕೆಯ ದುರಂತ ಅಂತ್ಯವು ದೇಶದ ಲಕ್ಷಾಂತರ ಜನರ ಆಕ್ರೋಶವನ್ನು ಕೆರಳಿಸಿರಬೇಕು. ಕಳೆದ ಐದು ವರ್ಷಗಳಲ್ಲಿ ಬೀದಿಗಳಿಂದ ಹಿಡಿದು ವಿಶ್ವವಿದ್ಯಾಲಯಗಳವರೆಗೆ ಲೈಂಗಿಕ ಹಿಂಸಾಚಾರದ ವಿರುದ್ಧ ಹಲವಾರು ಸ್ವತಂತ್ರ ಯುವ ಮಹಿಳೆಯರ ಚಳವಳಿಗಳು ಹುಟ್ಟಿಕೊಂಡಿವೆ. ಶಾಲೆಗೆ ಹೋಗುವ ದಾರಿಯಲ್ಲಿ ಕಾಮುಕರು ಕೊಡುತ್ತಿದ್ದ ಕಿರುಕುಳದ ವಿರುದ್ಧ ಹರ್ಯಾಣದ ರೇವಾರಿ ಶಾಲಾ ವಿದ್ಯಾರ್ಥಿನಿಯರು ನಡೆಸಿದ ಹೋರಾಟ; ವಿಶ್ವವಿದ್ಯಾಲಯದ ಕ್ಯಾಂಪಸ್ಸಿನಲ್ಲಿ ನಡೆಯುತ್ತಿದ್ದ ಕಿರುಳದ ವಿರುದ್ಧ ಉತ್ತರ ಪ್ರದೇಶದ  ಬನಾರಸ್ ಹಿಂದೂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು ನಡೆಸಿದ ಹೋರಾಟ; ದೆಹಲಿ ವಿಶ್ವವಿದ್ಯಾಲಯದಲ್ಲಿ ನಡೆದ ಪಿಂಜರಾ ಥೋಡ್ (ಪಂಜರಗಳನ್ನು ಕಿತ್ತುಹಾಕಿರಿ) ಚಳವಳಿ; ಕೇರಳದ ತಿರುವನಂತಪುರಂನ ಇಂಜನಿಯರಿಂಗ್ ಕಾಲೇಜಿನ ಹಾಸ್ಟೆಲ್ನಲ್ಲಿ ಅನುಸರಿಸಲಾಗುತ್ತಿದ್ದ ತಾರತಮ್ಯಪೂರಿತ ನಿಯಮಗಳ ವಿರುದ್ಧ ನಡೆದ ಕರ್ಫ್ಯೂವನ್ನು ಉಲ್ಲಂಘಿಸಿ ಚಳವಳಿ; ವಿದ್ಯಾರ್ಥಿನಿಯೊಬ್ಬರ ಮೇಲೆ ನಡೆದ ಲೈಂಗಿಕ ಹಲ್ಲೆಯ ವಿಷಯದಲ್ಲಿ ನ್ಯಾಯವನ್ನು ಒತ್ತಾಯಿಸುತ್ತಾ ಪಶ್ಚಿಮ ಬಂಗಾಳದಲ್ಲಿ ನಡೆದ ಹೋಕ್ ಕೋಲೋರೋಬ್ (ಸ್ವಲ್ಪ ಸದ್ದುಮಾಡಿ) ಚಳವಳಿ; ಹಾಗೂ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರತದ ಅಕೆಡೆಮಿಕ್ ಕ್ಷೇತ್ರದಲ್ಲಿ ಲೈಂಗಿಕ ಕಿರುಕುಳ ನೀಡುವ ವ್ಯಕ್ತಿಗಳನ್ನು ಹೆಸರಿಸಿ ಬಯಲುಮಾಡುವ ಮಿ ಟೂ (ನಾನೂ ಕೂಡ) ಚಳವಳಿ- ಅಂಥವುಗಳಲ್ಲಿ ಕೆಲವು.

ಅದೇರೀತಿ ಕುಖ್ಯಾತಿ ಪಡೆದುಕೊಂಡಿದ್ದ ಶಕ್ತಿ ಮಿಲ್ ಅತ್ಯಾಚಾರ ಪ್ರಕರಣ (ಮುಂಬೈ), ಬಡೌನ್ ಸಾಮೂಹಿಕ ಅತ್ಯಾಚಾರ ಪ್ರಕರಣ (ಉತ್ತರ ಪ್ರದೇಶ), ಮೊಹಮ್ಮದ್ ಫರೂಖಿ ಪ್ರಕರಣ, ಜಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ (ಕೇರಳ), ಮತ್ತು ಕೋಪಾರ್ಡಿ ಪ್ರಕರಣಗಳು (ಮಹಾರಾಷ್ಟ್ರ) ಕೂಡಾ ತೀವ್ರವಾದ ಸಾರ್ವಜನಿಕ ಪ್ರತಿರೋಧಗಳಿಗೆ ಗುರಿಯಾದವು. ಹೀಗೆ ಐದು ವರ್ಷದ ನಂತರ ಹಿಂತಿರುಗಿ ನೋಡುವುದಾದಲ್ಲಿ ಲೈಂಗಿಕ ಕಿರುಕುಳ ಮತ್ತು ಅತ್ಯಾಚಾರಗಳ ವಿರುದ್ಧ ಹೋರಾಡುವ ವಿಷಯದಲ್ಲಿ ಭಾರತ ಸ್ವಲ್ಪ ಪ್ರಗತಿ ಸಾಧಿಸಿದೆ ಎನ್ನಬಹುದು. ಎಲ್ಲಕ್ಕಿಂತ ಗಮನಾರ್ಹ ವಿಷಯವೆಂದರೆ ಹಿಂದಿನಂತೆ ಇಂಥಾ ಪ್ರಕರಣಗಳನ್ನು ಮುಚ್ಚಿಹಾಕುತ್ತಿಲ್ಲ. ಬದಲಿಗೆ ಇಂದು ಲೈಂಗಿಕ ಕಿರುಕುಳವೆಂಬ ಪೀಡೆ ಇದೆಯೆಂಬುದನ್ನು ಸಾರ್ವಜನಿಕವಾಗಿ ಗುರುತಿಸಲಾಗುತ್ತಿದೆ ಮಾತ್ರವಲ್ಲದೆ ಅದರ ವಿರುದ್ಧ ಸಾರ್ವಜನಿಕ ಅಸಮ್ಮತಿ ಮತ್ತು ಆಕ್ರೋಶಗಳು ಸಹಜವಾಗಿಯೇ ಹುಟ್ಟಿಕೊಳ್ಳುತ್ತಿದೆ.

ಇಷ್ಟಾಗಿಯೂ ಅತ್ಯಾಚಾರ ನಡೆದಾಗ ಅದನ್ನು ದಾಖಲಿಸುವ ಪ್ರಮಾಣ ಹೆಚ್ಚಿದೆ ಎಂದಾಗಲೀ, ಅಥವಾ ಲೈಂಗಿಕ ಅಪರಾಧಗಳಿಗೆ ತುತ್ತಾಗಿ ಸಂತ್ರಸ್ತರಾದವರನ್ನು ಕಳಂಕಿತರನ್ನಾಗಿ ನೋಡುವ ದೃಷ್ಟಿಕೋನ ಕಡಿಮೆಯಾಗಿದೆ ಎಂದಾಗಲೀ ಖಚಿತವಾಗಿ ಹೇಳಲು ಸಾಧ್ಯವೇ ಇಲ್ಲ. ಮಹಿಳೆಯರ, ಮಕ್ಕಳ ಮತ್ತು ಲೈಂಗಿಕ ಅಲ್ಪಸಂಖ್ಯಾತರ ಸುರಕ್ಷತೆಯ ಪ್ರಶ್ನೆ ಅಷ್ಟೇ ಗಂಭೀರವಾಗಿ ಉಳಿದುಕೊಂಡಿರುವುದು ಮಾತ್ರವಲ್ಲದೆ, ಪೊಲೀಸರ ವೈಷಮ್ಯ, ಅವಮಾನಕಾರಿ ತನಿಖಾ ಪ್ರಕ್ರಿಯೆಗಳು, ಎಟುಕದಿರುವ ನ್ಯಾಯಾಲಯಗಳು, ಮತ್ತು ದೂರು ನೀಡಿದಲ್ಲಿ ದಾಳಿಗೆ ಮತ್ತೆ ದಾಳಿಗೆ ಗುರಿಯಾಗಬಹುದಾದ ಭೀತಿಗಳು ಎಂದಿನಂತೆ ಮುಂದುವರೆದಿವೆ. ಮಾಧ್ಯಮಗಳಂತೂ ತಮ್ಮ ವರದಿಗಳಲ್ಲಿ ಸಂತ್ರಸ್ತರ ಗುರುತನ್ನು ಗೌಪ್ಯವಾಗುಳಿಸಿಕೊಳ್ಳುವುದು ಕಡ್ಡಾಯವಾಗಿದ್ದರೂ ಕೇವಲ ರೋಚಕತೆಯ ಕಾರಣಕ್ಕಾಗಿ ಎಲ್ಲಾ ವೃತ್ತಿಪರ ನೀತಿಗಳನ್ನು ಬದಿಗೆ ತಳ್ಳಿ ಅವನ್ನು ಬಯಲುಮಾಡುವುದನ್ನು ಮುಂದುವರೆಸಿವೆ. ಇಂಥಾ ಪ್ರಕರಣಗಳನ್ನು ಒಟ್ಟಾರೆ ಮಹಿಳೆಯರ ಮೇಲೆ ಮುಂದುವರೆಯುತ್ತಿರುವ ಹಿಂಸಾಚಾರಗಳ ಸಂದರ್ಭದಲ್ಲಿಟ್ಟು ನೋಡದೆ ಕೇವಲ ಕೆಲವೇ ಕೆಲವು ಆಯ್ದ ನಗರ ಕೇಂದ್ರಿತ ಅಥವಾ ದೊಡ್ಡ ಜನರನ್ನೊಳಗೊಂಡ ಅಥವಾ ಅತ್ಯಂತ ಭೀಭತ್ಸದ ಪ್ರಕರಣಗಳಿಗೆ ಮಾತ್ರ ಅವು ಮುನ್ನೆಲೆಗೆ ತರುತ್ತವೆ. ಅಥವಾ ಅದರ ಸುತ್ತಾ ಸತತ ಪ್ರಚಾರವನ್ನೂ ಒಂದು ಆಂದೋಲನದಂತೆ ಕೈಗೊಳ್ಳುತ್ತದೆ. ಅದು ಅಪರಿಚಿತರು ನಡೆಸಿದ ಅತ್ಯಾಚಾರಗಳನ್ನು ಅವು ಇರುವುದಕ್ಕಿಂತ ಹೆಚ್ಚಿನ ಉತ್ಪ್ರೇಕ್ಷೆ ಮಾಡಿ ಬಿಂಬಿಸುತ್ತವೆ. ಆದರೆ ಅದೇ ಸಮಯದಲ್ಲಿ ಕೆಳಜಾತಿ ಮಹಿಳೆಯರ ಮೇಲೆ ವ್ಯವಸ್ಥಿತವಾಗಿ ನಡೆಯುವ ಹಿಂಸಾಚಾರವನ್ನು, ಅಲ್ಪಸಂಖ್ಯಾತ ಮಹಿಳೆಯರ ಮೇಲೆ ನಡೆಯುವ ಕೋಮು ಹಿಂಸಾಚಾರವನ್ನು ಮತ್ತು ಕುಟುಂಬ ಮತ್ತು ಸಮುದಾಯದೊಳಗೆ ನಡೆಯುವ ಲೈಂಗಿಕ ಹಲ್ಲೆಗಳನ್ನು ಕಡೆಗಣಿಸುತ್ತವೆ. ಬಡ, ವಲಸಿಗ, ಕಾರ್ಮಿಕ ವರ್ಗದ ಪುರುಷನನ್ನು ದುಷ್ಟರನ್ನಾಗಿಯೂ, ಲೈಂಗಿಕ ಹಿಂಸಾಚಾರಿಗಳನ್ನಾಗಿಯೂ ಹಾಗೂ ಮಹಿಳೆಯರ ಮುನ್ನಡೆಗೆ ಅಡ್ಡಿಪಡಿಸುವಂಥವರನ್ನಾಗಿಯೂ ಚಿತ್ರಿಸುವಲ್ಲಿ ಮಾಧ್ಯಮಗಳು ತುಂಬಾ ಪ್ರಮುಖ ಪಾತ್ರವಹಿಸಿವೆ.

ಮತ್ತೊಂದು ಕಡೆ, ರಾಜಕೀಯ ನೇತಾರರು ಮತ್ತು ಕೋರ್ಟುಗಳು ವಿಷಯಗಳಲ್ಲಿ ಪ್ರಧಾನವಾಗಿ ಪಿತೃಸ್ವಾಮ್ಯ ಧೋರಣೆಯನ್ನೇ ಅನುಸರಿಸುತ್ತಿವೆ. ಅವರ ಒಟ್ಟಾರೆ ಧೋರಣೆ ಹೆಂಗಸರನ್ನು ರಕ್ಷಣೆ ಮಾಡುವ, ಅವರ ಮೇಲೆ ನಿಗಾ ಇಡುವ ಅಥವಾ ಸಂತ್ರಸ್ತ ಮಹಿಳೆಯ ಪರವಾಗಿ ತಾವೇ ತೀರ್ಮಾನಗಳನ್ನು ತೆಗೆದುಕೊಳ್ಳುವ ಸಿದ್ಧ ಸಾಂಪ್ರದಾಯಿಕ ಮಾದರಿಗಳಾಚೆ ಹೋಗುವುದೇ ಇಲ್ಲ. ಇದು ಹಾದಿಯಾ ಪ್ರಕರಣದಲ್ಲಿ ಆದಂತೆ ಮಹಿಳೆಯ ಮೂಲಭೂತ ಹಕ್ಕುಗಳನ್ನು, ಸ್ವಾತಂತ್ರ್ಯವನ್ನು ಮತ್ತು ತನ್ನನ್ನು ತಾನು ಪ್ರತಿನಿಧಿಸಿಕೊಳ್ಳುವ ಸ್ವ-ವಾಹಕತೆಯನ್ನು(ಏಜೆನ್ಸಿ) ಇಲ್ಲವಾಗಿಸುತ್ತದೆ. ದೂರದರ್ಶನದ ಧಾರಾವಾಹಿಗಳು, ಚಲನಚಿತ್ರಗಳು ಮತ್ತು ಸಾಮಾಜಿಕ ಜಾಲತಾಣಗಳಂಥ ಜನಪ್ರಿಯ ಸಂಸ್ಕೃತಿಗಳೂ ಸಹ ಮಹಿಳೆಯರ ಅತಂತ್ರತೆ, ಶೀಲ-ಗೌರವ, ಸೇಡುಗಳಂಥ ವಿಷಯಗಳನ್ನು ಅತಿರಂಜಿತವಾಗಿ ಉತ್ತೇಜಿಸುತ್ತಾ ಜನರ ಭೀತಿಗಳನ್ನು ದುಪ್ಪಟ್ಟು ಮಾಡಿವೆ.

ಹೀಗಾಗಿಯೇ ಎಲ್ಲಾ ಅತ್ಯಾಚಾರ ಪ್ರಕರಣಗಳಲ್ಲಿ ಜನರು ಬಹಳ ಸಹಜವಾಗಿ ಮರಣದಂಡನೆಯನ್ನು ಆಗ್ರಹಿಸುತ್ತಾರೆ ಮತ್ತು ಅಷ್ಟೇ ಸುಲಭವಾಗಿ ನ್ಯಾಯಾಲಯಗಳು ಮರಣಶಿಕ್ಷೆಯನ್ನು ನೀಡುತ್ತಿವೆ. ಇದು ನಿರ್ಭಯ ಪ್ರಕರಣದಲ್ಲಿ ನ್ಯಾಯಮೂರ್ತಿ ವರ್ಮಾ ಸಮಿತಿ ನೀಡಿದ ಶಿಫಾರಸ್ಸುಗಳಿಗೂ ಮತ್ತು ನಾವು ಸಹಿ ಹಾಕಿರುವ ಮಾನವಹಕ್ಕುಗಳ ಒಡಂಬಡಿಕೆಗಳಿಗೂ ವ್ಯತಿರಿಕ್ತವಾಗಿವೆ. ಇದರ ಜೊತೆಗೆ ೨೦೧೩ರಲ್ಲಿ ಆದ ಕ್ರಿಮಿನಲ್ ಲಾ ತಿದ್ದುಪಡಿಯಲ್ಲಿ ಕೆಲವು ಮುಖ್ಯವಾದ ಅಂಶಗಳು ಬಿಟ್ಟುಹೋಗಿವೆ. ವೈವಾಹಿಕ ಸಂಬಂಧದೊಳಗೆ ನಡೆಯುವ ಬಲಾತ್ಕಾರಗಳು ಕಾನೂನಿನ ಪರಿಹಾರದ ವ್ಯಾಪ್ತಿಯಿಂದ ತಪ್ಪಿಸಿಕೊಂಡಿದೆ. ಅಲ್ಲದೆ ಕಾಯಿದೆಯಲ್ಲಿ ನ್ಯಾಯಮೂರ್ತಿ ವರ್ಮಾ ಸಮಿತಿಯ ಶಿಫಾರಸ್ಸುಗಳಾದ ಲೈಂಗಿಕ ಕ್ರಿಯೆಗೆ ಸಮ್ಮತಿಸುವ ವಯೋಮಿತಿಯನ್ನು ಕಡಿಮೆಗೊಳಿಸುವ ಮತ್ತು ಸಶಸ್ತ್ರ ಬಂಡಾಯಗಳು ನಡೆಯುತ್ತಿರುವ ಪ್ರದೇಶದಲ್ಲಿ ಸಶಸ್ತ್ರಪಡೆಗಳು ನಡೆಸುವ ಲೈಂಗಿಕ ಅಪರಾಧಗಳಿಗೆ ಶಿಕ್ಷೆ ನೀಡಲು ಅನುವಾಗುವಂತೆ ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ ಕಾಯಿದೆ-೧೯೫೮ಕ್ಕೆ ತಿದ್ದುಪಡಿ ತರುವ ಪ್ರಸ್ತಾಪಗಳನ್ನು ಸಾರಾಸಗಟಾಗಿ ಕೈಬಿಡಲಾಗಿದೆ. ಅಷ್ಟು ಮಾತ್ರವಲ್ಲ. ಸುಳ್ಳು ಮೊಕದ್ದಮೆಗಳ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದೆಯೆಂಬ ( ವಾದಕ್ಕೆ ಯಾವ ಪುರಾವೆಗಳೂ ಇಲ್ಲ) ವಾದವನ್ನೂ ಮತ್ತು ಕುಟುಂಬವೆಂಬ ಸಂಸ್ಥೆಯೇ ಮುರಿದುಬೀಳಬಹುದೆಂಬ ಕಾಲ್ಪನಿಕ ಭೀತಿಗಳನ್ನು ಮುಂದೊಡ್ಡಿ ಮಹಿಳೆಯರ ಮೇಲಿನ ಹಿಂಸಾಚಾರವನ್ನು ತಡೆಗಟ್ಟುವ ೪೯೮- ಅನ್ನು ಸಹ ದುರ್ಬಲಗೊಳಿಸಲಾಗುತ್ತಿದೆ.

ಇದಕ್ಕೆ ಪೂರಕವಾಗಿ ಇಂದು ದೇಶದಲ್ಲಿ ಜಾರಿಯಿರುವ ಪ್ರಧಾನಧಾರೆ ರಾಜಕೀಯ ಸಿದ್ಧಾಂತವು ಹೆಂಗಸರನ್ನು ಹಿಂದೂತ್ವದ ಉಜ್ವಲ ಗತ ಇತಿಹಾಸದ ಚೌಕಟ್ಟಿನೊಳಗೆ ಬಂಧಿಯಾಗಿರಿಸುತ್ತಿದೆ (ಪದ್ಮಾವತಿ ಚಲನಚಿತ್ರದ ಸುತ್ತಾ ನಡೆದ ವಾದ ವಿವಾದಗಳು ಮತ್ತು ಲವ್ ಜೆಹಾದ್ ನಂಥ ಪೊಳ್ಳು ಪರಿಕಲ್ಪನೆಗಳು ಪಡೆದುಕೊಂಡಿರುವ ಮಾನ್ಯತೆಗಳಲ್ಲಿ ಇದು ಸ್ಪಷ್ಟವಾಗಿ ವ್ಯಕ್ತಗೊಂಡಿದೆ.) ಮಹಿಳೆಯನ್ನು ಮತ್ತೆ ಸಾಂಪ್ರದಾಯಿಕ ಸಾಂಸ್ಕೃತಿಕ ಅಜೆಂಡಾಗಳಲ್ಲಿ  ಕಟ್ಟಿಹಾಕುತ್ತಾ ಅವರನ್ನು ಲೈಂಗಿಕ ದೌರ್ಜನ್ಯಗಳಿಂದ ಕಾಪಾಡಲು ಕುಟುಂಬ, ಸಮುದಾಯ ಮತ್ತು ಪ್ರಭುತ್ವಗಳ ರಕ್ಷಣೆಯ ಅಗತ್ಯವಿರುವ ಲೈಂಗಿಕ ಶಿಕಾರಿಗಳೆಂಬಂತೆ ಪರಿಭಾವಿಸುವುದು ಮಹಿಳೆಯರ ಮೇಲಿನ ಹಿಂಸಾಚಾರಗಳ ಬಗೆಗಿನ ತಿಳವಳಿಕೆ ಮತ್ತು ಪ್ರತಿರೋಧಗಳ ಮೇಲೆ ಕೆಟ್ಟ ಪ್ರಭಾವವನ್ನು ಬೀರುತ್ತದೆ. ಮಹಿಳೆಯರ ಬಗ್ಗೆ ಪರಂಪರಾನುಗತವಾಗಿ ಬೇರುಬಿಟ್ಟಿರುವ ಪಿತೃಸ್ವಾಮ್ಯ ಮನಸ್ಥಿತಿಗಳು ಬದಲಾಗದೆಸಮಾಜದ ಎಲ್ಲಾ ವರ್ಗಗಳಂತೆ ಮಹಿಳೆಯರ ಸ್ವಾತಂತ್ರ್ಯ ಮತ್ತು ಚಲನಶೀಲತೆಯ ಪರಿಧಿಗಳು ವಿಸ್ತಾರಗೊಳ್ಳದೆ ಅತ್ಯಾಚಾರಗಳಂಥ ಪ್ರಕರಣಗ ವಿರುದ್ಧ ಕೇವಲ ಸಾರ್ವಜನಿಕ ಆಕ್ರೋಶಗಳಿಂದ ಅಥವಾ ಕಾನೂನುಗಳ ಮೂಲಕ ಮಾತ್ರವೇ ಮಹಿಳೆಯರ ಮೇಲಿನ ಹಿಂಸಾಚಾರಗಳ ಭೂಮಿಕೆಯನ್ನು ಬದಲಿಸಲು ಸಾಧ್ಯವಿಲ್ಲ. ಕೇವಲ ಕೆಲವೇ ಕೆಲವರಿಗೆ ಮಾತ್ರವಲ್ಲದೆ ಎಲ್ಲರಿಗೂ ಹೆಚ್ಚಿನ ಸಾಮಾಜಿಕ ಸಮಾನತೆ, ನ್ಯಾಯ ಮತ್ತು ಭ್ರಾತೃತ್ವವನ್ನು ಖಾತರಿಗೊಳಿಸುವ ಮೂಲಕ ಮಾತ್ರ ಮಹಿಳೆಯರ ಸುರಕ್ಷತೆಯನ್ನು ಖಾತರಿಪಡಿಸಲು ಸಾಧ್ಯ.

 ಕೃಪೆ: Economic and Political Weekly  Dec 16,  2017. Vol. 52. No. 50
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )





ಕಾಮೆಂಟ್‌ಗಳಿಲ್ಲ: