ಉತ್ತರಪ್ರದೇಶ ರಾಜ್ಯದ ಆಗ್ರಾ ಜಿಲ್ಲೆಯಲ್ಲಿ ಹರಿಯುವ ಯಮುನೆಯ ತಡದಲ್ಲಿ ಸುಮಾರು 17 ಹೆಕ್ಟೇರ್ ಪ್ರದೇಶದಲ್ಲಿ ಮೊಘಲ್ ಗಾರ್ಡನ್ ಪ್ರದೇಶದಲ್ಲಿ ನಿರ್ಮಿಸಲಾದ ತಾಜಮಹಲ್ ವಿಶ್ವ ಪರಂಪರೆ ಪಟ್ಟಿಯಲ್ಲಿ ಸ್ಥಾನವನ್ನು ಪಡೆದಿದೆ. ಮೊಘಲ್ ದೊರೆ ಷಹಜಹಾನ್ ತಮ್ಮ ಪತ್ನಿ ಮುಮ್ತಾಜ್ ಮಹಲ್ ನೆನಪಿಗೆ ಕಟ್ಟಿಸಿದ ಈ ಪ್ರೇಮಸೌಧದ ನಿರ್ಮಾಣವನ್ನು 1632ರಲ್ಲಿ ಆರಂಭಿಸಿ 1648ರಲ್ಲಿ ಪೂರ್ಣಗೊಳಿಸಲಾಯಿತು.
ತಾಜ್ ಮಹಲ್ ಕಟ್ಟಡದ ದಕ್ಷಿಣಾಪಥ, ಹೊರಾಂಗಣ, ಮತ್ತು ಪ್ರಾರ್ಥನಾ ಗೃಹಗಳನ್ನು 1653ರಲ್ಲಿ ಸೇರ್ಪಡೆಗೊಳಿಸಲಾಯಿತು. ಪವಿತ್ರ ಕುರಾನ್ ಗ್ರಂಥದ ಹಲವಾರು ಉಲ್ಲೇಖಗಳನ್ನು ಶಿಲಾಲೇಖದಲ್ಲಿ ಮೂಡಿಸಲಾಗಿದ್ದು, ಈ ಸ್ಮಾರಕಭವನಕ್ಕೆ ಧಾರ್ಮಿಕ ಆಯಾಮವನ್ನು ನೀಡಿದೆ. ಈ ಭವನ ನಿರ್ಮಾಣಕ್ಕೆ ಇಡಿಯ ಮೊಘಲ್ ಪ್ರಾಂತ್ಯದ ಖ್ಯಾತ ಶಿಲ್ಪಿಗಳು ಮತ್ತು ಕೆಲಸಗಾರರನ್ನು ಕರೆಸಲಾಗಿತ್ತು. ಅಷ್ಟೇ ಅಲ್ಲದೆ, ಮಧ್ಯ ಏಷಿಯಾ ಮತ್ತು ಇರಾನ್ ದೇಶಗಳಿಂದಲೂ ತಜ್ಞ ನಿರ್ಮಾಣ ತಜ್ಞರು ಆಗಮಿಸಿದ್ದರು ಎಂದು ತಿಳಿದು ಬಂದಿದೆ. ಉಸ್ತಾದ್ ಅಹ್ಮದ್ ಲಾಹೋರಿ ಎಂಬ ವಿನ್ಯಾಸಕಾರ ನೇತೃತ್ವದಲ್ಲಿ ತಾಜ್ ಮಹಲ್ ಕಟ್ಟಡವನ್ನು ನಿರ್ಮಿಸಲಾಯಿತು.
ತಾಜ್ಮಹಲ್ ಕಟ್ಟಡದ ವಿನ್ಯಾಸ ನೈಸರ್ಗಿಕ ಸೊಬಗಿಗೆ ಇನ್ನಷ್ಟು ಇಂಬು ನೀಡುವಂತೆ ರೂಪಿಸಲಾಗಿದ್ದು, ಹಸಿರು ಹುಲ್ಲಿನ ಹಾಸು, ಕೆಂಪು ಪಾದಚಾರಿ ಮಾರ್ಗಗಳು, ಸುತ್ತ ನಿಂತ ಮಿನಾರು ಮತ್ತು ಕಮಾನುಗಳು, ಕಟ್ಟಡದ ಸುತ್ತಲೂ ಆವರಿಸಿ ನಿಂತ ನೀಲಾಗಸ, ವಿವಿಧ ಕಾಲಮಾನಗಳಲ್ಲಿ ಬದಲಾಗುವ ವಾತಾವರಣಕ್ಕೆ ತಕ್ಕಂತೆ ತನ್ನ ವಿಶಿಷ್ಟತೆಯನ್ನು ಮೆರೆಯುತ್ತದೆ. ಅಮೃತ ಶಿಲೆಗಳ ಮೇಲೆ ಮೂಡಿಸಿರುವ ಚಿತ್ತಾರಗಳು ಕಟ್ಟಢದ ಹೊರಾಂಗಣವನ್ನು ಇನ್ನಷ್ಟು ಸುಂದರವಾಗಿಸಿದೆ. ಇಂಡೋ ಇಸ್ಲಾಮಿಕ್ ಶೈಲಿಯ ಅನೇಕ ಸಾಧ್ಯತೆಗಳನ್ನು ಒಳಗೊಂಡಿರುವ ಈ ಸ್ಮಾರಕವು ತನ್ನ ವಿನ್ಯಾಸದಲ್ಲಿ ಮೂಡಿಸಿರುವ ಗೋಡೆಗಳು ಮತ್ತು ವಿನ್ಯಾಸಗಳು ನೆರಳು ಬೆಳಕಿನ ಒಟ್ಟಂದದ ಅಮೂರ್ತ ನಿರ್ಮಾಣವಾಗಿದೆ.
ತಾಜಮಹಲ್ ಕಟ್ಟಡದ ಗುಮ್ಮಟವನ್ನು ಕಟ್ಟಡದ ಕೇಂಧ್ರವಾಗಿರಿಸದೆ ಹಿನ್ನೆಲೆಯಲ್ಲಿ ರೂಪಿಸಿರುವುದು ಕಟ್ಟಡವನ್ನು ಹೊರಾಂಗಣದಿಂದ ವೀಕ್ಷಿಸುವವರಿಗೆ ಹೆಚ್ಚಿನ ದೃಶ್ಯ ವಿಸ್ತಾರವನ್ನು ಒದಗಿಸಿಕೊಡುತ್ತದೆ. ಕಟ್ಟಡದ ಸುತ್ತಲೂ ಅಷ್ಟ ಭುಜಾಕೃತಿಯ ಮಿನಾರುಗಳು ಈ ಕಟ್ಟಡದ ಒಟ್ಟಾರೆ ಸೊಬಗನ್ನು ಚೌಕಟ್ಟಿನಲ್ಲಿ ಕಟ್ಟಿಕೊಡುತ್ತವೆ. ಈ ಕಟ್ಟಡವು ಮೊಘಲ್ ದೊರೆ ಷಹಾಜಹಾನ್ ಮತ್ತು ಆತನ ಪತ್ನಿ ಮುಮ್ತಾಜ್ ಮಹಲ್ ಅವರ ಸಮಾಧಿಗಳನ್ನು ಒಳಗೊಂಡಿದ್ದು, ಕುಶಲ ಕರ್ಮಿಗಳಿಂದ ಚಂದವಾದ ವಿನ್ಯಾಸಗಳಿಂದ ಹೂವಿನ ಅಲಂಕಾರಗಳ ಕುಸುರಿ ಕೆಲಸಗಳಿಂದಾಗಿ ಮನ ಸೆಳೆಯುತ್ತವೆ. ಸಮಾಧಿಯ ಮೇಲೆ ಅಲಂಕರಿಸಲಾದ ಹೂವಿನ ಮತ್ತು ಎಲೆಗಳ ವಿನ್ಯಾಸವು ಸಹಜವಾದುದೇನೋ ಎಂಬಷ್ಟು ಸುಂದರವಾಗಿ ಮೂಡಿದ್ದು, ನೋಡುಗರ ಮನಸೆಳೆಯುತ್ತವೆ. ಮುಮ್ತಾಜ್ ಮಹಲ್ ಅವರ ಸಮಾಧಿಯ ಪಶ್ಚಿಮಕ್ಕೆ ಷಹಜಹಾನ್ ಅವರ ಸಮಾಧಿಯನ್ನು 30 ವರ್ಷಗಳ ನಂತರ ನಿರ್ಮಿಸಲಾಗಿದ್ದು, ಈ ಕಟ್ಟಡಗಳ ಸುತ್ತ ನಿರ್ಮಿಸಲಾಗಿರುವ ನಾಲ್ಕು ಮಿನಾರುಗಳು ಕಟ್ಟಡಕ್ಕೆ ವಿಸ್ತಾರವಷ್ಟೇ ಅಲ್ಲದೆ ದೃಶ್ಯ ಸೊಬಗಿಗೆ ಚೌಕಟ್ಟನ್ನು ರೂಪಿಸಿದೆ.
ತಾಜಮಹಲ್ ಕಟ್ಟಡವು ವಾಸ್ತುಶಿಲ್ಪ ಅಧ್ಯಯನಕಾರರಿಗೆ ಒಂದು ಅಧ್ಯಯನಶೀಲ ನಿರ್ಮಾಣವಾಗಿದ್ದು, ಕಟ್ಟಡದ ಕೇಂದ್ರಕ್ಕೆ ಪೂರಕವಾಗಿ ವಿನ್ಯಾಸಗಳನ್ನು ರೂಪಿಸಲಾಗಿರುತ್ತದೆ. ಕಟ್ಟಡವನ್ನು ಸುಣ್ಣ- ಕೆಂಪು ಮರಳುಗಲ್ಲು, ಇಟ್ಟಿಗೆ ಅಚ್ಚುಗಾರೆಯಿಂದ ನಿರ್ಮಾಣ ಮಾಡಲಾಗಿದ್ದು, ಕಟ್ಟಡದ ಹೊರಮೈಯ್ಯನ್ನು ಅಮೃತಶಿಲೆಯಿಂದ ಆವರಿಸಲಾಗಿದ್ದು, ಅಮೂಲ್ಯ ಹರಳುಗಳಿಂದ ಅಲಂಕರಿಸಲಾಗಿದೆ.
ತಾಜಮಹಲ್ ಇಂದಿಗೂ ಪ್ರೇಮಿಗಳ ಕನಸಿನ ಸೌಧವಾಗಿದೆ, ಮತ್ತು ಪ್ರೇಮದ ಆದರ್ಶಕ್ಕೆ ರೂಪಕವಾಗಿದೆ. ತಾಜಮಹಲ್ ಬಗ್ಗೆ ಕವಿ ರವೀಂದ್ರನಾಥ ಟ್ಯಾಗೋರರು ‘ಕಾಲಘಟ್ಟದ ಕೆನ್ನೆಯ ಮೇಲೆ ಸರಿದ ಸಮಯದ ಅಶ್ರುಬಿಂದು’ (The Tear Drop on the Cheek of Time) ಎಂದು ವರ್ಣಿಸಿದ್ದಾರೆ.
ಈ ಕಟ್ಟಡವನ್ನು ವಿಶ್ವ ಸಂಸ್ಥೆಯ ಅಂಗವಾದ ಯುನೆಸ್ಕೋ 1983ರಲ್ಲಿ ವಿಶ್ವ ಪರಂಪರೆಯಲ್ಲಿ ಸೇರಿಸಿ ಜಗತ್ತಿನ ಮಾನ್ಯತೆಯನ್ನು ಒದಗಿಸಿ ಕೊಟ್ಟಿದೆ. ಈ ಪ್ರೇಮಸೌಧವು ಕಳೆದ ಐದು ಶತಮಾನಗಳಿಂದಲೂ ದೇಶಕಾಲದ ಜನರ ಕುಶಲತೆ, ಆಡಳಿತಗಾರರ ಕಲಾಪ್ರೇಮ, ಮತ್ತು ನಿರ್ಮಾಣ ಕೌಶಲ್ಯಗಳಿಗೆ ಸಾಕ್ಷಿಯಾಗಿ ನಿಂತಿದೆ.
ಸೌಜನ್ಯ: http://kanaja.in/?p=128002
ಸೌಜನ್ಯ: http://kanaja.in/?p=128002
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ