ಮಂಗಳವಾರ, ಜನವರಿ 9, 2018

ದುಬಾರಿಯಾಗುತ್ತಿರುವ ನಿರ್ಲಕ್ಷ್ಯ


         ಅನುಶಿವಸುಂದರ್ 
Image result for commercial complex
ಅವಘಡಗಳು ಸಂಭವಿಸಿದಾಗ ಮಾತ್ರ ಕಂಡುಬರುವ ಅಧಿಕಾರಿಗಳ ಪೂರ್ವಾಲೋಚನೆಯಿಲ್ಲದೆ ಪ್ರತಿಕ್ರಿಯೆಗಳನ್ನು ಸಾರ್ವಜನಿಕ ಒತ್ತಡಗಳನ್ನು ಸೃಷ್ಟಿಸುವುದರ ಮೂಲಕ ಸರಿದಾರಿಗೆ ತರಬೇಕಿದೆ.

  ಭಾರತದ ನಗರ ಪ್ರದೇಶಗಳಲ್ಲಿ ಪದೇಪದೇ ಸಂಭವಿಸುತ್ತಿರುವ ಕಟ್ಟಡ ಕುಸಿತ, ಅಗ್ನಿ ಅವಘಡಗಳು ಮತ್ತು ಅಪಘಾತಗಳ ಬಗ್ಗೆ ಸಾರ್ವಜನಿಕ ಪ್ರತಿಕ್ರಿಯೆಗಳು ಸದಾ ಒಂದು ನಿರ್ದಿಷ್ಟ ಮಾದರಿಯನ್ನು ಅನುಸರಿಸುತ್ತವೆ. ತತ್ಕ್ಷಣದ ಆತಂಕ, ಆಕ್ರೋಶ. ಜೊತೆಗೆ ಈಗಾಗಲೇ ಇಂಥವನ್ನು ನೋಡಿಯಾಗಿರುವ ಭಾವ ಮತ್ತು ಬಹುಪಾಲು ನಾಗರಿಕರ ನಿರ್ಲಕ್ಷ್ಯ. ಹಾಗೂ ನಿರ್ದಿಷ್ಟ ಅಪಘಾತದಲ್ಲಿ ಕಂಡುಬಂದಿರುವ ಕಾನೂನು ಮತ್ತು ನಿಯಮಗಳ ಉಲ್ಲಂಘನೆ, ಅದಕ್ಕೆ ಅಧಿಕಾರಿಗಳ ಪರೋಕ್ಷ ಕುಮ್ಮಕ್ಕು, ಮತ್ತು ಅವರ ಮೇಲೆ ಸೂಕ್ತ ಕ್ರಮದ ಭರವಸೆಗಳು ಹಾಗೂ ಒಂದಷ್ಟು ಅನುಕಂಪದ ಮಾತುಗಳು. ಮುಂಬೈ ಮಹಾನಗರದಲ್ಲಿ ೨೦೧೭ರ ಡಿಸೆಂಬರ್ನಲ್ಲಿ ಎರಡು ದೊಡ್ಡ ಅವಘಡಗಳು ಸಂಭವಿಸಿದವು. ೨೯ರಂದು ಸ್ವಾನ್ಕೀ ಪಬ್ನಲ್ಲಿ ಸಂಭವಿಸಿದ ಅವಘಡವು ೧೪ ಜನರನ್ನು ಬಲಿತೆಗೆದುಕೊಂಡರೆ ೧೮ರಂದು  ಮುಂಬೈನ ಹೊರವಲಯದಲ್ಲಿದ್ದ ತಿನಿಸು ತಯಾರಿಕಾ ಘಟಕದಲ್ಲಿ ನಡೆದ ಅವಘಡವು ೧೨ ಕಾರ್ಮಿಕರನ್ನು ಬಲಿತೆಗೆದುಕೊಂಡಿತು. ಪ್ರಕರಣಗಳಲ್ಲೂ ಅಧಿಕಾರಸ್ಥರ ಪ್ರತಿಕ್ರಿಯೆ ಯಥಾಪ್ರಕಾರವಾಗಿತ್ತು. ಅದು ಪೂರ್ವಾಲೋಚನೆಯಿಲ್ಲದೆ ನಗರದೆಲ್ಲೆಡೆ ಎಲ್ಲಾ ಅಕ್ರಮ ಕಟ್ಟಡ ಹಾಗೂ ಅಕ್ರಮ ವಿಸ್ತರಣೆಗಳನ್ನು ಒಡೆದುಹಾಕುವುದಷ್ಟೇ ಆಗಿತ್ತು. ಎರಡು ಪ್ರಕರಣಗಳಲ್ಲಿ ಮಾತ್ರವಲ್ಲದೆ (ಸೆಪ್ಟೆಂಬರ್ನಲ್ಲಿ ಮುಂಬೈನ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತದಿಂದಾಗಿ ೨೨ ಜನರು ಸಾವಿಗೀಡಾದ ಪ್ರಕರಣವನ್ನೂ ಒಳಗೊಂಡಂತೆ ) ದೇಶದಲ್ಲಿ ಸಂಭವಿಸಿದ ಇತರ ಹಲವಾರು ಪ್ರಕರಣಗಳಲ್ಲಿ ಎದ್ದು ಕಾಣುವ ಪ್ರಮುಖ ಅಂಶವೆಂದರೆ ಸರ್ಕಾರದ ಮತ್ತು ಅದಕ್ಕೆ ಸರಿಸಮನಾಗಿ ನಾಗರಿಕ ಸಮಾಜದ ಅಪಾರ ನಿರ್ಲಕ್ಷ್ಯ. ನಗರದ ಯೋಜನಾ ಕ್ರಮದಲ್ಲಿ ಎಷ್ಟು ಅಸ್ತವ್ಯಸ್ತತೆ ಇದೆಯೋ ಅಷ್ಟೇ ಮಟ್ಟಿಗೆ ಪ್ರಕ್ರಿಯೆಗಳಲ್ಲಿ ಸಾರ್ವಜನಿಕ ಭಾಗವಹಿಸುವಿಕೆಯಲ್ಲೂ ಇದೆ. ಯಾವುದೂ ಬದಲಾಗಲು ಸಾಧ್ಯವಿಲ್ಲ ಮತ್ತು ಬದಲಾಗುವುದೂ ಇಲ್ಲ ಎಂಬ ಸಿನಿಕತೆಯು ಉದಾಸೀನತೆಯನ್ನು ಮತ್ತಷ್ಟು ಗಟ್ಟಿಗೊಳಿಸುತ್ತಿದೆ.

ಫೆಡರೇಷನ್ ಆಫ್ ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀ (ಫಿಕ್ಕಿ)ಯು ೨೦೧೭ರಲ್ಲಿ  ನಡೆಸಿದ ಭಾರತದಲ್ಲಿ ಉದ್ಯಮಗಳು ಎದುರಿಸಬೇಕಾದ ಅಪಾಯಗಳ ಸರ್ವೆಯು (ದಿ ಇಂಡಿಯಾ ರಿಸ್ಕ್ ಸರ್ವೆ) ದೇಶದಲ್ಲಿ ಉದ್ಯಮಗಳನ್ನು ನಡೆಸಲು ೧೨ ತರದ ಅಪಾಯಗಳಿವೆ ಎಂದು ವರದಿಮಾಡಿದೆ. ಅದರಲ್ಲಿ ಅಗ್ನಿ ಅವಘಡವು ೫ನೇ ಸ್ಥಾನವನ್ನು ಪಡೆದಿದೆ. ಅದು  ೨೦೧೬ರ ಸರ್ವೆಯಲ್ಲಿ ನೇ ಸ್ಥಾನದಲ್ಲಿತ್ತು. ೨೦೧೫ರ ನ್ಯಾಷನಲ್ ಕ್ರೈಮ್ ರೆಕಾರ್ಡ್ ಬ್ಯೂರೋ (ರಾಷ್ಟ್ರೀಯ ಅಪರಾಧ ದಾಖಲೆ ಸಂಸ್ಥೆ) ವರದಿಯಂತೆ ವರ್ಷ ಒಟ್ಟು ೧೮,೪೫೦ ಅಗ್ನಿ ಅವಘಡಗಳು ಸಂಭವಿಸಿದ್ದು ೧೭,೭೦೦ ಜನರು ಕೊಲ್ಲಲ್ಪಟ್ಟರು. ಅದರಲ್ಲಿ ಶೇ.೪೨.೧ರಷ್ಟು ಅವಘಡಗಳು ವಸತಿ ಪ್ರದೇಶಗಳಲ್ಲಿ ಸಂಭವಿಸಿತ್ತೆಂದು ವರದಿಯು ಹೇಳುತ್ತದೆ. ಅವುಗಳಲ್ಲಿ ಅತಿಹೆಚ್ಚು ಅಂದರೆ ಶೇ.೨೨ರಷ್ಟು ಪ್ರಕರಣಗಳು ಮಹಾರಾಷ್ಟ್ರದಲ್ಲೇ ಸಂಭವಿಸಿದ್ದವು. ಕುತೂಹಲದ ವಿಷಯವೆಂದರೆ ವರದಿಯಲ್ಲಿ ಉದ್ಯಮಗಳಿಗೆ ಅಪಾಯವನ್ನುಂಟು ಮಾಡಬಹುದಾದ ಸಂಗತಿಗಳಲ್ಲಿ ಭ್ರಷ್ಟಾಚಾರ, ಲಂಚಗುಳಿತನ ಮತ್ತು ಕಾರ್ಪೊರೇಟ್ ವಂಚನೆಗಳು ಮೂರನೇ ಸ್ಥಾನವನ್ನು ಪಡೆದಿದ್ದವು. ತೋರಿಕೆಯಲ್ಲಿ ಬಹಳ  ಬದಲಾಗುತ್ತಿದೆಯೆಂದು ಕಂಡುಬಂದರೂ ಆಂತರ್ಯದಲ್ಲಿ ಎಲ್ಲವೂ ಹೇಗಿವೆಯೋ ಹಾಗೇ ಉಳಿದುಕೊಂಡಿವೆ ಎಂಬುದಕ್ಕೆ ಪ್ರಾಯಶಃ ಇದಕ್ಕಿಂತ ಹೆಚ್ಚಿನ ಪುರಾವೆಗಳು ಬೇಕಿಲ್ಲ.

ಆದರೆ ಪೌರಸೇವಾ ಅಧಿಕಾರಿಗಳು ಮತ್ತು ಸರ್ಕಾರಗಳು ಘಟನೆಯಾದ ನಂತರ ತಾವು ತೆಗೆದುಕೊಂಡ ಕ್ರಮಗಳನ್ನು ತೋರಿಸುತ್ತಾ ಘಟನೆಗೆ ಮುಂಚಿನ ತಮ್ಮ ಬೇಜವಾಬ್ದಾರಿತನವನ್ನು ಮುಚ್ಚಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಆದರೆ ಹಿಂದೆ ನಡೆದ ಇದೇ ಬಗೆಯ ಘೋರ ಅನಾಹುತಗಳಿಂದ ಯಾವ ಪಾಠಗಳನ್ನು ಕಲಿಯಲಾಗಿದೆಯೆಂದು ಅವರನ್ನು ಗಟ್ಟಿಸಿ ಕೇಳುವ ಅಗತ್ಯವಿದೆ. ೨೦೧೫ರಲ್ಲಿ ಹೋಟೆಲೊಂದರಲ್ಲಿ ಊಟ ಮಾಡುತ್ತಿದ್ದ ಕಾಲೇಜು ವಿದ್ಯಾರ್ಥಿಗಳು ಬೆಂಕಿ ಅನಾಹುತಕ್ಕೆ ಸಿಕ್ಕಿ ಜೀವಂತ ದಹಿಸಿಹೋದರು. ಏಕೆಂದರೆ ಹೋಟೆಲು ತಮ್ಮ ಅಂತರಿಕ ವಿನ್ಯಾಸವನ್ನು ಕಾನೂನುಬಾಹಿರವಾಗಿ ಬದಲಿಸಿಕೊಂಡಿತ್ತಲ್ಲದೆ ಗ್ಯಾಸ್ ಸಿಲಿಂಡರ್ಗಳನ್ನು ಬೇಕಾಬಿಟ್ಟಿ ಕೂಡಿಟ್ಟಿತ್ತು. ೧೯೯೭ರಲ್ಲಿ ದೆಹಲಿಯಲ್ಲಿ ಉಪಹಾರ್ ಚಿತ್ರಮಂದಿರಕ್ಕೆ ಬೆಂಕಿಹತ್ತಿಕೊಂಡು ೫೯ ಜನರನ್ನು ಬಲಿತೆಗೆದುಕೊಳ್ಳಲು ಕಾರಣವಾದದ್ದು ಅದರ ವಿನ್ಯಾಸದಲ್ಲಿ ಮಾಡಿದ್ದ ಅಕ್ರಮ ಬದಲಾವಣೆಗಳು. ಮತ್ತು ೨೦೧೧ರಲ್ಲಿ ಕೋಲ್ಕತ್ತಾದ ಎಎಂಆರ್ ಆಸ್ಪತ್ರೆಯ ಅಗ್ನಿ ದುರಂತದಲ್ಲಿ ೮೯ ಜನ ಬಲಿಯಾದದ್ದು ಇನ್ನೂ ಸಾರ್ವಜನಿಕ ನೆನಪಿನಲ್ಲಿ ಹಸಿರಾಗಿಯೇ ಇದೆ. ಆದರೆ ಎಲ್ಲದರ ನಂತರವೂ ಸುರಕ್ಷಾ ಕಾನೂನುಗಳನ್ನು ಜಾರಿಗೆ ತರುವಲ್ಲಿ ಮಾತ್ರ ಯಾವುದೇ ಬಲವಾಣೆಯಾಗಿಲ್ಲ. ಭಾರತದ ನಗರಗಳಲ್ಲಿನ ಬಹುಪಾಲು ಹೋಟೆಲ್, ರೆಸ್ಟುರೆಂಟ್, ಬಾರ್, ಪಬ್, ಸಿನಿಮಾ ಮಂದಿರಗಳು, ಆಸ್ಪತ್ರೆ, ಸಣ್ಣ ಕೈಗಾರಿಕಾ ಘಟಕಗಳು, ಶೆಡ್ಗಳು, ಕಾರ್ಖಾನೆಗಳು ಮತ್ತು ವಸತಿ ಸಮುಚ್ಚಯಗಳಲ್ಲಿ ಹೆಚ್ಚೂಕಡಿಮೆ ಇದೇ ಪರಿಸ್ಥಿತಿಗಳೇ ಮುಂದುವರೆದಿವೆ. ಇಂಥ ಕಡೆಗಳಲ್ಲಿ ಯಾವುದೇ ಸುರಕ್ಷತಾ ನಿಯಮಗಳನ್ನು ಜಾರಿಗೆ ತರುವ ಪ್ರಯತ್ನಗಳನ್ನು ಕಟ್ಟಡ ನಿರ್ಮಾತೃಗಳು ಮತ್ತು ಉದ್ಯಮಿಗಳು ಕಿರುಕುಳವೆಂದೇ ಪರಿಗಣಿಸುವ ಹವ್ಯಾಸ ಮುಂದುವರೆದಿದೆ. ಅಗ್ನಿ ಅವಘಡಕ್ಕೆ ತುತ್ತಾದ ಸಣ್ಣ ತಿನಿಸು ತಯಾರಕಾ ಘಟಕದಲ್ಲಿ ಸಿಲಿಂಡರುಗಳನ್ನು ಎರ್ರಾಬಿರ್ರಿ ಪೇರಿಸಲಾಗಿತ್ತಲ್ಲದೆ  ಬಹುಪಾಲು ವಲಸಿಗರಾಗಿದ್ದ ಕಾರ್ಮಿಕರು ಸಣ್ಣ ಜಾಗದಲ್ಲೇ ಮಲಗಿಕೊಳ್ಳುತ್ತಿದ್ದರು.

ತಿನಿಸು ತಯಾರಿಕಾ ಘಟಕದ ಮಾಲೀಕ ಅಗತ್ಯವಿದ್ದ ಯಾವುದೇ ಪರವಾನಗಿಯನ್ನು ತೆಗೆದುಕೊಂಡಿರಲಿಲ್ಲವೆಂದು ಅವಘದ ಸಂಭವಿಸಿದ ನಂತರದಲ್ಲಿ ಮುನಿಸಿಪಲ್ ಅಧಿಕಾರಿಗಳು ದೂರುತ್ತಿದ್ದಾರೆ. ಅದೇರೀತಿ ಹಲವಾರು ದುಬಾರಿ ಹೋಟೆಲ್ ಮತ್ತು ಬಾರುಗಳಿಗೆ ಅವಕಾಶ ನೀಡಿದ್ದ ಕಮಲಾ ಮಿಲ್ ಪ್ರದೇಶದಲ್ಲಿ ಸಾಕಷ್ಟು ಅಕ್ರಮ ಕಟ್ಟಡಗಳ ನಿರ್ಮಾಣವಾಗುತ್ತಿವೆಯೆಂದು ತಾವು ಸಾಕಷ್ಟು ಬಾರಿ ಸರ್ಕಾರಕ್ಕೆ ದೂರುಗಳನ್ನು ನೀಡಿದ್ದೆವೆಂದು ಈಗ ಹಲವಾರು ಸಂಘಟನೆಗಳು ಹೇಳುತ್ತಿವೆ. ಅವಘಡಕ್ಕೆ ತುತ್ತಾದ ಪಬ್ ಹದಿನೈದು ದಿನಗಳ ಕಾಲ ಮುಚ್ಚಿದ್ದರೂ ನಂತರ ಸದ್ದಿಲ್ಲದೆ ವ್ಯವಹಾರ ಮುಂದುವರೆಸಿತ್ತು. ಆದರೂ ಅದರ ಮೇಲೆ ಯಾವುದೇ ಕ್ರಮಗಳನ್ನು ಕೈಗೊಂಡಿರಲಿಲ್ಲ. ಮುಂಬೈನಲ್ಲಿ ಅಕ್ರಮವಾಗಿ ಕಟ್ಟಡಗಳ ನಿರ್ಮಾಣ, ಮಿಲ್ಗಳ ಜಾಗದಲ್ಲಿ ರಾಜಕಾರಣಿಗಳ ಬೆಂಬಲದೊಂದಿಗೆ ಅಕ್ರಮವಾಗಿ ವಸತಿ ಸಂಕೀರ್ಣಗಳ ನಿರ್ಮಾಣವಾಗುವುದು ಎಲ್ಲವೂ ಸಹಜ ವಿದ್ಯಮನವಾಗಿಬಿಟ್ಟಿದೆ. ಇತರ ನಗರ ಅಥವಾ ಪಟ್ಟಣಗಳಲ್ಲೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾಗಿಯೇನೂ ಇಲ್ಲದೇಶದೆಲ್ಲೆಡೆ ಬಗೆಯ ಸಣ್ಣ ಅಥವಾ ದೊಡ್ಡ ಅಕ್ರಮ ಕಟ್ಟಡ ನಿರ್ಮಾಣಗಳ ಹಿಂದೆ ಬಲವಾದ ಪಟ್ಟಭದ್ರ ಹಿತಾಸಕ್ತಿಗಳಿದ್ದೇ ಇವೆ. ಸ್ಪಷ್ಟವಾಗಿರುವ ವಿಷಯವೆಂದರೆ ಸಮಸ್ಯೆ ಇರುವುದು ಕಾನೂನುಗಳ ಕೊರತೆಯಲ್ಲಲ್ಲ. ಯಾವುದೇ ಆಮಿಷ ಅಥವಾ ಭಯಕ್ಕೊಳಗಾಗದೆ ಅದನ್ನು ಅನುಷ್ಠಾನಕ್ಕೆ ತರುವುದರಲ್ಲಿ.

ಇಂಥಾ ಸನ್ನಿವೇಶದಲ್ಲಿಯೇ ಸಮುದಾಯಗಳ ಎಚ್ಚರ ಮತ್ತು ತಿಳಿವುಗಳ ಪಾತ್ರ ದೊಡ್ಡದಾಗಿರುತ್ತದೆ. ಇಂಥಾ ಬಹುಪಾಲು ವಸತಿ ಸಂಕೀರ್ಣಗಳಲ್ಲಿ, ಕೈಗಾರಿಕಾ ವಸಾಹುತುಗಳಲ್ಲಿ ಮತ್ತು ತಥಾಕಥಿತ ಅಕ್ರಮ ಕಾಲೋನಿಗಳಲ್ಲಿ ಆಯಾ ವಸತಿ ನಿವಾಸಿಗಳ ಸಂಸ್ಥೆಗಳು ಅಲ್ಲಿನ ದೈನಂದಿನ ವಿದ್ಯಮಾನಗಳನ್ನು ಗಮನಿಸಿಕೊಳ್ಳುತ್ತವೆ. ಸುರಕ್ಷತಾ ನಿಯಮಗಳ ಅರಿವನ್ನು ಹೆಚ್ಚಿಸಲು ಅವುಗಳ ಸಹಾಯವನ್ನು ತೆಗೆದುಕೊಳ್ಳುವುದು ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಬಹುದು. ಒಂದೆಡೆ ಇಂಥಾ ಸುರಕ್ಷಾ ನಿಯಮಗನ್ನು ಎಲ್ಲರೂ ಗೌರವಿಸಬೇಕು (ದುರದೃಷ್ಟವಶಾತ್ ಎಲ್ಲಾ ವರ್ಗದ ಜನರಿಗೂ ಅದರ ಬಗ್ಗೆ ಅಪಾರ ಅಸಡ್ಡೆಯಿದೆ) ಮತ್ತೊಂದೆಡೆ ಅವುಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಅಧಿಕಾರಸ್ಥ ರಾಜಕಾರಣಿಗಳು ಮತ್ತು ಅಧಿಕಾರಿಗಳ ಮೇಲೆ ನಾಗರಿಕರು ಒತ್ತಡವನ್ನು ಹೇರಬೇಕು. ಇಲ್ಲವಾದರೆ ಅಸಡ್ಡೆ ಮತ್ತು ಉದಾಸೀನತೆಗಳಿಗೆ ಅಪಾರ ಬೆಲೆ ತೆರಬೇಕಾಗಿ ಬರುವುದರಲ್ಲಿ ಸಂಶಯವಿಲ್ಲ.

     ಕೃಪೆ: Economic and Political Weekly  Jan 6,  2018. Vol. 53. No. 1
 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )



                                                                                                               





ಕಾಮೆಂಟ್‌ಗಳಿಲ್ಲ: