ಬುಧವಾರ, ಜನವರಿ 3, 2018

ನರಭಕ್ಷಕ ಖಾಸಗಿ ಆರೋಗ್ಯ ಸೇವಾ ಪೂರೈಕೆದಾರರು


   ಅನುಶಿವಸುಂದರ್ 
Image result for indian medical
ಆರೋಗ್ಯ ಸಂಬಂಧೀ ವೆಚ್ಚಗಳು ಬಡವರನ್ನು ಇನ್ನಷ್ಟು ದೀನರನ್ನಾಗಿಸುತ್ತಿದೆ ಎಂದು ಸಾರಿಹೇಳುತ್ತಿರುವ ಅಂಕಿಅಂಶಗಳನ್ನು ಸರ್ಕಾರ ಪರಿಗಣಿಸಲೇಬೇಕು.

ಇತ್ತೀಚಿನ ದಿನಗಳಲ್ಲಿ ಎರಡು ಖಾಸಗಿ ಆಸ್ಪತ್ರೆಗಳು ರೋಗಿಗಳಿಗೆ ದುಬಾರಿ ಶುಲ್ಕ ವಿಧಿಸಿದ್ದು ದೇಶದ ಗಮನ ಸೆಳೆಯಿತು. ದೇಶದ ಪ್ರಖ್ಯಾತ ಅಸ್ಪತ್ರೆಗಳ ಸರಣಿಗೆ ಸೇರಿದ ಅವುಗಳಲ್ಲಿ ಒಂದು ಅಸ್ಪತ್ರೆಯು ಡೆಂಗ್ಯೂ ಖಾಯಿಲೆಯ ೨೨ ದಿನಗಳ ಆರೈಕೆಗಾಗಿ ೧೬ ಲಕ್ಷ ರೂ.ಗಳಷ್ಟು ಶುಲ್ಕವನ್ನು ವಿಧಿಸಿದರೆ ಅದೇ ಸರಣಿಯ ಮತ್ತೊಂದು ಆಸ್ಪತ್ರೆಯು ೧೫ ದಿನಗಳ ಆರೈಕೆಗೆ ೧೫. ಲಕ್ಷ ರೂ.ಗಳನ್ನು ವಿಧಿಸಿತ್ತು. ಇದು ದೇಶದ ಆರೋಗ್ಯ ಸೇವೆಯು ತಲುಪಿರುವ ಆತಂಕಕಾರಿ ಪರಿಸ್ಥಿತಿಯನ್ನು ಎತ್ತಿತೋರಿಸುತ್ತದೆ. ಒಂದೆಡೆ ಸಾರ್ವಜನಿಕ ಆರೋಗ್ಯ ಸೇವೆಯು ಸಂಪೂರ್ಣ ಕುಸಿತದ ಅಂಚಿನಲ್ಲಿದ್ದರೆ ಮತ್ತೊಂದೆಡೆ ಖಾಸಗಿ ಆರೋಗ್ಯ ಸೇವೆಗಳು ವೇಗವಾಗಿ ಹೆಚ್ಚುತ್ತಿದೆ. ಇವೆರೆಡರ ನಡುವೆ ಸಿಲುಕಿಕೊಂಡಿರುವ ಬಹುಪಾಲು ಭಾರತೀಯರ ಮಟ್ಟಿಗೆ ಆಸ್ಪತ್ರೆ ಸೇರುವುದು ಒಂದು ದೊಡ್ಡ ಆರ್ಥಿಕ ದುರಂತವನ್ನೆದುರಿಸುವುದಕ್ಕೆ ಸಮವಾಗಿಬಿಟ್ಟಿದೆ

  ಇದೇ ೨೦೧೭ರಲ್ಲಿ ಬಿಡುಗಡೆಯಾದ ನ್ಯಾಷನಲ್ ಹೆಲ್ತ್ ಪ್ರೊಫೈಲ್-ಎನ್ಎಚ್ಪಿ-೨೦೧೭ (ರಾಷ್ಟ್ರೀಯ ಆರೋಗ್ಯ ಸೂಚಿ) ವರದಿಯು ಭಾರತದ ಆರೋಗ್ಯ ಕ್ಷೇತ್ರದ ದುರವಸ್ಥೆಯ ಬಗ್ಗೆ ಕಳೆದ ಹಲವಾರು ದಶಕಗಳಿಂದ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಹೇಳಿಕೊಂಡು ಬಂದದ್ದನ್ನೇ ಮತ್ತೊಮ್ಮೆ ಪುನರುಚ್ಚರಿಸಿದೆ. ಸಾರ್ವಜನಿಕ ಆರೋಗ್ಯದ ಮೇಲೆ ಸರ್ಕಾರವು ಮಾಡುವ ನೈಜ ವೆಚ್ಚದ ಮೊತ್ತ ಕಡಿಮೆಯಾಗುತ್ತ ಬರುತ್ತಿದೆಯೆಂಬುದನ್ನೂ, ಖಾಸಗಿ ಆರೋಗ್ಯ ಸೇವಾ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆಯೆಂಬುದನ್ನೂ, ವೈದ್ಯಕೀಯ ಸೇವೆಗಳಿಗಾಗಿ ಕಿಸೆಯಿಂದ ಖರ್ಚು ಮಾಡುವ ಮೊತ್ತವು ಹೆಚ್ಚಾಗುತ್ತಿದ್ದು ಅದು ಬಡವರನ್ನು ಅದರಲ್ಲೂ ಗ್ರಾಮೀಣ ಭಾಗದ ಬಡವರನ್ನು ಮತ್ತಷ್ಟು ಬಡವರನ್ನಾಗಿಸುತ್ತಿದೆಯೆಂಬುದನ್ನು ಅದು ಮತ್ತೊಮ್ಮೆ ಒತ್ತಿ ಹೇಳಿದೆ. ಔಟ್ ಆಫ್ ದಿ ಪಾಕೆಟ್ ಎಕ್ಸ್ಪೆಂಡಿಚರ್-ಒಒಪಿ- ಕಿಸೆಯಿಂದ ಮಾಡುವ ವೆಚ್ಚ ಎಂದರೆ ರೋಗಿಯು ಯಾವುದೇ ಸರ್ಕಾರಿ ರಿಯಾಯತಿಯನ್ನು ಪಡೆಯದೆ ಅಥವಾ ವಿಮೆ ಸೌಲಭ್ಯವಿಲ್ಲದೆ ತನ್ನ ಕಿಸೆಯಿಂದ ನೇರವಾಗಿ ಆರೋಗ್ಯ ಪೂರೈಕೆದಾರರಿಗೆ ತೆತ್ತುವ ಮೊತ್ತ ಎಂದರ್ಥ. ಅಂದ ಹಾಗೆ ಮೇಲೆ ಹೇಳಿದ ಎರಡು ಪ್ರಕರಣಗಳಲ್ಲಿ ಅಷ್ಟೊಂದು ಅಧಿಕ ಮೊತ್ತ ತೆತ್ತ ನಂತರವೂ ಇಬ್ಬರೂ ರೋಗಿಗಗಳು ಸಾವನ್ನಪ್ಪಿದರು.

ಸಾರ್ವಜನಿಕ ಆರೋಗ್ಯ ಸೇವಾ ಪೂರೈಕೆಯು ಸಂಪನ್ಮೂಲಗಳ ಕೊರತೆಯನ್ನು ಅನುಭವಿಸುತ್ತಿರುವುದರಿಂದ ಕಡುಬಡವರೂ ಸಹ ಖಾಸಗಿ ಆಸ್ಪತ್ರೆಗಳ ಮೊರೆ ಹೋಗುವಂತೆ ಮಾಡುತ್ತಿದೆ. ಎನ್ಎಚ್ಪಿ-೨೦೧೭ ವರದಿಯು ಹೇಳುವಂತೆ ಸಾರ್ವಜನಿಕ ವಲಯಕ್ಕಿಂತ ಖಾಸಗಿ ಆರೋಗ್ಯ ಸೇವಾ ಕ್ಷೇತ್ರದಲ್ಲಿ ಸೇವಾ ದರಗಳು ಎರಡರಿಂದ ಒಂಭತ್ತು ಪಟ್ಟು ಜಾಸ್ತಿಯಿದ್ದರೂ ಗ್ರಾಮೀಣ ಭಾಗದ ಶೇ.೬೧ರಷ್ಟು ಜನರು ಮತ್ತು ನಗರ ಭಾಗದ ಶೇ.೬೯ರಷ್ಟು ಜನರು ಖಾಸಗಿ ಆರೋಗ್ಯ ಸೇವೆಯನ್ನು ಹೊಂದಲು ಅಪೇಕ್ಷಿಸುತ್ತಾರೆ. ಅಲ್ಲದೆ ನಗರ ಪ್ರದೇಶದಲ್ಲಿ ಶೇ.೨೦ರಷ್ಟು ಮತ್ತು ಗ್ರಾಮೀಣ ಭಾಗದ ಶೇ.೨೫ರಷ್ಟು ಮಂದಿ ಆಸ್ಪತೆಯ ವೆಚ್ಚಕ್ಕಾಗಿ ಒಂದೋ ತಮ್ಮ ಆಸ್ತಿಪಾಸ್ತಿಯನ್ನು ಮಾರಿರುತ್ತಾರೆ ಅಥವಾ ಸಾಲ ಮಾಡಿಕೊಂಡಿರುತ್ತಾರೆ. ದೇಶದ ಒಟ್ಟಾರೆ ಆರೋಗ್ಯ ಸಂಬಂಧೀ ವೆಚ್ಚಗಳಲ್ಲಿ ಕಿಸೆಯಿಂದ ಮಾಡುವ ವೆಚ್ಚವು (ಒಒಪಿ) ಶೇ.೬೩ರಷ್ಟಿದೆ. ಲೆಕ್ಕಾಚಾರವನ್ನು ನ್ಯಾಷನಲ್ ಹೆಲ್ತ್ ಅಕೌಂಟ್ (ರಾಷ್ಟ್ರೀಯ ಆರೋಗ್ಯ ತಃಖ್ತೆ) ಅನ್ನು ಆಧರಿಸಿ ಮಾಡಲಾಗಿದೆ. ಅದರ ಪ್ರಕಾರ ದೇಶದ ಒಟ್ಟಾರೆ ತಲಾವಾರು ಆರೋಗ್ಯ ವೆಚ್ಚವು ಪ್ರತಿವ್ಯಕ್ತಿಗೆ ೩೮೨೬ ರಷ್ಟಿದ್ದರೆ ಅದರಲ್ಲಿ ೨೩೯೪ರಷ್ಟನ್ನು ರೋಗಿಗಳು ತಮ್ಮ ಕಿಸೆಯಿಂದಲೇ ವೆಚ್ಚ ಮಾಡುತ್ತಾರೆ.

ಪರಿಸ್ಥಿತಿ ಇಷ್ಟು ಸುಸ್ಪಷ್ಟವಾಗಿದ್ದರೂ, ಅದನ್ನು ಪರಿಗಣಿಸಲೊಪ್ಪದ ಸರ್ಕಾರ ಖಾಸಗಿ ಕ್ಷೇತ್ರದಕ್ಕೆ ಅನುಕೂಲವಾಗುವಂತೆ ತನ್ನೆಲ್ಲ ಜವಾಬ್ದಾರಿಗಳಿಂದ ಕೈತೊಳೆದುಕೊಳ್ಳುತ್ತಿದೆ. ಖಾಸಗಿ ಕ್ಷೇತ್ರವನ್ನು ನಿಯಂತ್ರಿಸುವ ಯಾವುದೇ ಕಠಿಣವಾದ ಸಾಂಸ್ಥಿಕ ವ್ಯವಸ್ಥೆ ಇಲ್ಲದಿರುವುದರಿಂದ ಅವು ಯಾವುದೇ ಉತ್ತರದಾಯಿತ್ವವಿಲ್ಲದೆ ಕೆಲಸ ನಿರ್ವಹಿಸುತ್ತಿವೆ. ಇದರ ಘೋರ ಪರಿಣಾಮಗಳು ಈಗಾಗಲೇ ಬೆಳಕಿಗೆ ಬರುತ್ತಿವೆ. ಇತ್ತೀಚಿನ ಮತ್ತೊಂದು ಪ್ರಕರಣದಲ್ಲಿ, ಅವಧಿಗೆ ಮುನ್ನ ಹುಟ್ಟಿದ ಮಗುವೊಂದು ಜೀವಂತವಿದ್ದರೂ ಸಾವನ್ನಪ್ಪಿದೆಯೆಂದು ತಪ್ಪಾಗಿ ಘೋಷಿಸಿದ ಪ್ರಖ್ಯಾತ ಅಸ್ಪತ್ರೆಯೊಂದರ ಪರವಾನಗಿಯನ್ನು ದೆಹಲಿ ಸರ್ಕಾರ ರದ್ದುಪಡಿಸಿತು. ತಪ್ಪು ಗೊತ್ತಾದ ತಕ್ಷಣ ಮಗುವನ್ನು ಶೀಘ್ರವಾಗಿ ಚಿಕಿತ್ಸೆಗೆಂದು ಕೊಂಡೊಯ್ದರೂ ಫಲನೀಡಲಿಲ್ಲ. ನಂತರ ಒಂದು ವಾರದ ಕಾಲ ಮಗುವು  ನರಳಿ ಕಣ್ಣುಮುಚ್ಚಿತು. ಆದರೂ ಪರವಾನಗಿಯನ್ನು ರದ್ದು ಮಾಡಿದ್ದು ಅವಿವೇಕದ ಕ್ರಮವಾಗಿತ್ತು. ಏಕೆಂದರೆ ಅದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇತರ ರೋಗಿಗಗಳಿಗೆ ಸಾಕಷ್ಟು ತೊಂದರೆಯುಂಟು ಮಾಡಿತು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಖಾಸಗಿ ಆಸ್ಪತ್ರೆಗಳು ಕಡ್ಡಾಯವಾಗಿ ಕ್ಲಿನಿಕಲ್ ಎಸ್ಟಾಬ್ಲಿಶ್ಮೆಂಟ್ಸ್ (ರಿಜಿಸ್ಟ್ರೇಷನ್ ಅಂಡ್ ರೆಗುಲೇಷನ್) ಆಕ್ಟ್ ೨೦೧೦ (ಚಿಕಿತ್ಸಾ ಕೇಂದ್ರಗಳು (ನೊಂದಣೆ ಮತ್ತು ನಿಯಂತ್ರಣ) ಕಾಯಿದೆ -೨೦೧೦)ನ್ನು ಅನುಸರಿಸಬೇಕೆಂದು ತಾಕೀತು ಮಾಡಿದ್ದರೆ ಖಾಸಗಿ ಆಸ್ಪತೆಗಳು ನಡೆಸುವ ಹಲವಾರು ಹಣಕಾಸು ಮತ್ತಿತರ ದುರ್ವ್ಯವಹಾರಗಳನ್ನು ನಿಯಂತ್ರಿಸಬಹುದಿತ್ತು. ಕಾಯಿದೆಯು ನೀತಿಬಾಹಿರ ದುರ್ವ್ಯವಹಾರಗಳ ವಿರುದ್ಧ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲು ಅವಕಾಶವನ್ನು ಕಲ್ಪಿಸಿಕೊಡುತ್ತಿದೆ. ಇಂಥಾ ಕಾಯಿದೆ ಈಗ ಹತ್ತು ರಾಜ್ಯಗಳಲ್ಲಿ (ಕೆಲವು ರಾಜ್ಯಗಳು ನಿಟ್ಟಿನಲ್ಲಿ ತಮ್ಮದೇ ಆದ ಕಾಯಿದೆಗಳನ್ನು ರಚಿಸಿಕೊಂಡಿವೆ) ಮತ್ತು ಆರು ಕೇಂದ್ರಾಡಳಿತ ಪ್ರದೇಶಗಳಲ್ಲಿ ಜಾರಿಯಲ್ಲಿವೆ. ಆದರೂ ಬಹುಪಾಲು ರಾಜ್ಯಗಳಲ್ಲಿ ಕಾನೂನು ಕೇವಲ ಕಾಗದದ ಮೇಲಷ್ಟೆ ಅಸ್ಥಿತ್ವದಲ್ಲಿದೆ. ಉದಾಹರಣೆಗೆ ಕೇಂದ್ರ ಸರ್ಕಾರವು ಹೃದಯ ರೋಗಿಗಳಿಗೆ ಬೇಕಾದ ಸ್ಟಂಟಿನ ಗರಿಷ್ಟ ಮೊತ್ತದ ಮೇಲೆ ನಿರ್ಬಂಧ ವಿಧಿಸಿದ ಕೂಡಲೇ ಕಾನೂನಿನಲ್ಲಿರುವ ಲೋಪದೋಷಗಳನ್ನು ಹುಡುಕಿ ದಾರಿ ಮಾಡಿಕೊಳ್ಳುವಲ್ಲಿ ಖಾಸಗಿ ಆರೋಗ್ಯ ಸೇವಾ ಪೂರೈಕೆದಾರರು ನಿಪುಣತೆಯನ್ನು ಮೆರೆದಿದ್ದಾರೆ. ಏಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ಒಳಗಾಗಿರುವ ಹೃದಯ ರೋಗಿಗಳು ಸ್ಟಂಟಿನ ಬೆಲೆಯ ಮೇಲಿನ ನಿರ್ಬಂಧವಿದ್ದಾಗ್ಯೂ ಬೆಲೆಯಲ್ಲಿ ಯಾವುದೇ ಇಳಿತವಾಗಿಲ್ಲವೆಂದು ದೂರುತ್ತಿದ್ದಾರೆ.

ಕರ್ನಾಟಕದ ಉದಾಹರಣೆಯು ಪ್ರಾಯಶಃ ಖಾಸಗಿ ಆಸ್ಪತ್ರೆಗಳ ಶಕ್ತಿಯೇನೆಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ಕರ್ನಾಟಕದ ವೈದ್ಯರು ಮತ್ತು ಖಾಸಗಿ ಆಸ್ಪತ್ರೆಗಳ ಮಾಲೀಕರು ಸತತ ಪ್ರತಿಭಟನೆ ನಡೆಸಿದ್ದರಿಂದ ಅಲ್ಲಿನ  ರಾಜ್ಯ ಸರ್ಕಾರವು ತಾನು ಜಾರಿಗೆ ತರಬೇಕೆಂದಿದ್ದ ಕರ್ನಾಟಕ ಪ್ರೈವೇಟ್ ಮೆಡಿಕಲ್ ಎಸ್ಟಾಬ್ಲಿಶ್ಮೆಂಟ್ಸ್ (ಅಮೆಂಡ್ಮೆಂಟ್) ಬಿಲ್ ೨೦೧೭ (ಕರ್ನಾಟಕ ಖಾಸಗಿ ವೈದ್ಯಕೀಯ ಸಂಸ್ಥೆಗಳ (ತಿದ್ದುಪಡಿ) ಮಸೂದೆ-೨೦೧೭)ರಲ್ಲಿದ್ದ ದಂಡನಾ ವಿಧಿಗಳನ್ನು ದುರ್ಬಲಗೊಳಿಸಬೇಕಾಯಿತು. ರಾಜ್ಯ ವಿಧಾನಸಭೆಯ ನವಂಬರ್ ಅಧಿವೇಶನದಲ್ಲಿ ಅನುಮೋದಿಸಲ್ಪಟ್ಟ ಮಸೂದೆಯು ರೋಗಿಗಳ ಆರೈಕೆಯಮೇಲೆ ಪ್ರಭಾವ ಬೀರುವಂಥ ವೈದ್ಯಕೀಯ ನಿರ್ಲಕ್ಷ್ಯ ಮತ್ತಿತರ ಅಕ್ರಮಗಳನ್ನು ತಡೆಗಟ್ಟುವ ಉದ್ದೇಶಗಳನ್ನು ಹೊಂದಿತ್ತು. ಆರೋಗ್ಯ ಸೇವಾ ಕಾರ್ಯಕರ್ತರು ವಿವರಿಸುವಂತೆ ಖಾಸಗಿ ಆಸ್ಪತ್ರೆ ಮಾಲೀಕರ ಮತ್ತು ವೈದ್ಯರ ಮುಷ್ಕರವನ್ನು ಎದಿರಿಸುವಷ್ಟು ಛಾತಿ ರಾಜ್ಯ ಸರ್ಕಾರಕ್ಕಿರಲಿಲ್ಲ. ಏಕೆಂದರೆ ಸಾರ್ವಜನಿಕ ಆರೋಗ್ಯ ಸೇವ ಹಂದರವು ತುಂಬಾ ಬಲಹೀನವಾಗಿದ್ದು ದಿನಗಳೆದಂತೆ ಸಾರ್ವಜನಿಕರ ಅವಸ್ಥೆ ಮತ್ತು ಆಕ್ರೋಶಗಳೆರಡು ಬೆಳೆಯುತ್ತಿತ್ತು. ಎನ್ಎಚ್ಪಿ-೨೦೧೭ ದಾಖಲಿಸಿರುವಂತೆ ಕರ್ನಾಟಕವು ತನ್ನ ಒಟ್ಟಾರೆ ರಾಜ್ಯ ಅಂತರಿಕ ಉತ್ಪತ್ತಿಯ ಶೇ..೭ರಷ್ಟನ್ನು ಮಾತ್ರ ಆರೋಗ್ಯ ಸೇವೆಯ ಮೇಲೆ ವೆಚ್ಚ ಮಾಡುತ್ತದೆ, ಆದರೆ ಬಾಬತ್ತಿನಲ್ಲಿ ರಾಷ್ಟ್ರೀಯ ಸರಾಸರಿ ಶೇ..೧ರಷ್ಟಿದೆ.

ಎನ್ಎಚ್ಪಿ-೨೦೧೭ರ ವರದಿಯ ಪ್ರಕಾರ ೧೩೦ ಕೋಟಿ ಜನಸಂಖ್ಯೆಯಿರುವ ಭಾರತದಲ್ಲಿ ಕೇವಲ ಹತ್ತುಲಕ್ಷದಷ್ಟು ಆಲೋಪತಿ ವೈದ್ಯರಿದ್ದಾರೆ. ಹತ್ತು ಲಕ್ಷದಲ್ಲಿ ಕೇವಲ ಶೇ.೧೦ರಷ್ಟು ವೈದ್ಯರು ಮಾತ್ರ ಅಂದರೆ ಒಂದು ಲಕ್ಷದಷ್ಟು ವೈದ್ಯರು ಮಾತ್ರ ಸಾರ್ವಜನಿಕ ಆರೋಗ್ಯ ಸೇವಾ ಕ್ಷೇತ್ರದಲ್ಲಿದ್ದಾರೆ. ನರ್ಸ್ಗಳ ಮತ್ತು ಇತರ ವೈದ್ಯಕೀಯ ಕಾರ್ಯಕರ್ತರ ಸಂಖ್ಯೆಯೂ ತುಂಬಾ ಕಡಿಮೆ ಇದೆ. ಅರೋಗ್ಯ ಸೇವೆಯ ಗುಣಮಟ್ಟ ಮತ್ತು ಲಭ್ಯತೆಯಲ್ಲಿ ಇರುವ ಪ್ರಾದೇಶಿಕ ತಾರತಮ್ಯದ ಬಗ್ಗೆಯೂ ವರದಿಯು ಬೆಳಕು ಚೆಲ್ಲುತ್ತದೆ. ಇದರೊಡನೆ ಬಡದೇಶವೊಂದರ ವೈದ್ಯಕೀಯ ಅಗತ್ಯಗಳ ಬಗ್ಗೆ ವೈದ್ಯಕೀಯ ವಿದ್ಯಾರ್ಥಿಗಳಲ್ಲಿ ಸಂವೇದನೆ ಮೂಡಿಸದ ನಮ್ಮ ವೈದ್ಯಕೀಯ ಶಿಕ್ಷಣ ಪದ್ಧತಿ, ಆರೋಗ್ಯ ಸೇವಾ ಲಭ್ಯತೆಯಲ್ಲಿ ಇರುವ ನಗರ-ಗ್ರಾಮೀಣ ತಾರತಮ್ಯ, ಮತ್ತು ದೇಶದುದ್ದಕ್ಕೂ ಬಡವರು ಹೆಚ್ಚೆಚ್ಚಾಗಿ ಎದುರಿಸಬೇಕಾಗಿರುವ ಹಲವಾರು ರೋಗಗಳ ಭಾರಗಳು ಒಟ್ಟಾರೆ ಬಡಜನತೆಗೆ ದಕ್ಕಬೇಕಾದ ಆರೋಗ್ಯ ಸೇವೆಯನ್ನು ಗಗನ ಕುಸುಮವನ್ನಾಗಿಸಿದೆ.

ಎನ್ಎಚ್ಪಿ-೨೦೧೭ರ ವರದಿಯು ೨೦೨೦ರ ವೇಳೆಗೆ ವೈದ್ಯಕೀಯ ಸೇವೆಯ ಮೇಲೆ ಮಾಡುತ್ತಿರುವ ಸಾರ್ವಜನಿಕ ವೆಚ್ಚವನ್ನು ದೇಶದ ಒಟ್ಟಾರೆ ಆಂತರಿಕ ಉತ್ಪನ್ನದ ಶೇ.೧ರಿಂದ ಶೇ..೫ಕ್ಕೇ ಏರಿಸಬೇಕೆಂದು ಪ್ರಸ್ತಾಪಿಸಿದೆ. ಅದೂ ಕೂಡಾ ಜಗತ್ತಿನ ಸರಾಸರಿಯಾದ ಶೇ..೯೯ಕ್ಕಿಂತ ತುಬಾ ಕಡಿಮೆಯೇ ಆಗಿದೆ. ಎನ್ಎಚ್ಪಿ-೨೦೧೭ರ ವರದಿಯ ಘೋಷಿತ ಉದ್ದೇಶವೇ ಸೂಕ್ತವಾದ ನೀತಿಯನ್ನು ರೂಪಿಸಲು ಬೇಕಾದ ವಿಶ್ವಾಸಾರ್ಹ ದತ್ತಾಂಶಗಳನ್ನು ಒದಗಿಸುವುದಾಗಿದೆ. ಸರ್ಕಾರಗಳು ತುರ್ತಾಗಿ ಕ್ರಮತೆಗೆದುಕೊಳ್ಳುವುದನ್ನು ಜರೂರು ಮಾಡುವಷ್ಟು ಅಂಕಿಅಂಶಗಳು ಮತ್ತು ದತ್ತಾಂಶಗಳು ಅಗತ್ಯಕಿಂತ ಹೆಚ್ಚಿನ ಮಟ್ಟಿಗೆ ಲಭ್ಯವಿವೆ. ಆದರೆ ಬೇಕಿರುವುದು ಬಡ ರೋಗಿಗಳು ಮತ್ತು ಅವರ ಕುಟುಂಬದವರನ್ನು ಲಾಭಕೋರ ಖಾಸಗಿ ಆರೋಗ್ಯ ಸೇವಾ ಪೂರೈಕೆದಾರರ ಮರ್ಜಿಗೆ ಬಿಟ್ಟುಬಿಡದೆ ರಕ್ಷಿಸಬೇಕೆಂಬ ರಾಜಕೀಯ ಇಚ್ಚಾಶಕ್ತಿ.

  ಕೃಪೆ: Economic and Political Weekly, Dec 23,  2017. Vol. 52. No. 51
                                                                                                             
 (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )

                                                                                                                               











ಕಾಮೆಂಟ್‌ಗಳಿಲ್ಲ: