ಮಂಗಳವಾರ, ಜನವರಿ 23, 2018

ಸೇನಾತ್ಮಕ ರಾಷ್ಟ್ರವಾದವನ್ನು ವಿರೋಧಿಸಬೇಕು


  ಅನುಶಿವಸುಂದರ್ 
Image result for zionism

ಜಿಯೋನಿಸಂ (ಯೆಹೂದಿಗಳ ಪ್ರತ್ಯೇಕ ರಾಷ್ಟ್ರವಾದ) ಎಂಬುದು ಯೆಹೂದಿ ಧರ್ಮವನ್ನಾಗಲೀ ಹಿಂದೂತ್ವ ಎಂಬುದು ಹಿಂದೂಧರ್ಮವನ್ನಾಗಲೀ ಪ್ರತಿನಿಧಿಸುವುದಿಲ್ಲ ಎಂಬುದನ್ನು ನಾವು ಮರೆಯಬಾರದು.

ಎರಡನೆ ಪ್ರಪಂಚ ಯುದ್ಧದ ನಂತರ ಅಮೆರಿಕ ಮತ್ತು ರಷ್ಯಾಗಳ ನಡುವೆ ದೀರ್ಘಕಾಲ ಶೀತಲ ಸಮರ ನಡೆಯಿತು. ಆದರೆ ೧೯೯೧ರಲ್ಲಿ ಸೋವಿಯತ್ ಒಕ್ಕೂಟದ ಪತನದೊಂದಿಗೆ ಯುದ್ಧದಲ್ಲಿ ಅಮೆರಿಕ ವಿಜಯವನ್ನು ಗಳಿಸಿತು ಮತ್ತು ಅದು ಹಲವಾರು ಅಂತರರಾಷ್ಟ್ರೀಯ ಪರಿಣಾಮಗಳಿಗೆ ದಾರಿ ಮಾಡಿತು. ೧೯೯೨ರಲ್ಲಿ ಭಾರತವು ಇಸ್ರೇಲ್ನೊಂದಿಗೆ ಕಡಿತಗೊಡಿಸಿಕೊಂಡಿದ್ದ ರಾಜತಾಂತ್ರಿಕ ಸಂಬಂಧವು ಮರುಸ್ಥಾಪನೆಗೊಂಡಿತು. ಇಸ್ರೇಲ್ನೊಂದಿಗೆ ರಾಜತಾಂತ್ರಿಕ ಸಂಬಂಧವು ಸ್ಥಾಪನೆಗೊಂಡ  ೨೫ ವರ್ಷಗಳ ನಂತರ ಇಸ್ರೇಲ್ ಪ್ರಧಾನ ಮಂತ್ರಿ ಬೆಂಜಮಿನ್ ನೇತನ್ಯಾಹು ಅವರು ಭಾರತಕ್ಕೆ ಇದೇ ಜನವರಿ ೧೪ರಿಂದ ೧೯ರವರೆಗೆ ವರೆಗೆ ಅಧಿಕೃತ ಭೇಟಿ ನೀಡಿದರು. ಕಳೆದ ವರ್ಷ ಜುಲೈ -೬ರವರೆಗೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಇಸ್ರೇಲ್ಗೆ ಭೇಟಿ ನೀಡಿದ್ದರು. ಬ್ರಿಟಿಷ್ ವಸಾಹತುಶಾಹಿಗಳು ೧೯೧೭ರಲ್ಲಿ ಪ್ಯಾಲೆಸ್ತೇನಿನಲ್ಲಿ ಪ್ರತ್ಯೇಕ ಯೆಹೂದಿ ರಾಷ್ಟ್ರದ ನಿರ್ಮಾಣ ಮಾಡುವುದಾಗಿ ಜಿಯೋನಿಸ್ಟ್ಗಳಿಗೆ (ಯೆಹೂದಿ ಪ್ರತ್ಯೇಕ ರಾಷ್ಟ್ರವಾದಿಗಳು)ಭರವಸೆ ನೀಡುತ್ತ ಮಾಡಿದ ಬೆಲ್ಫೋರ್ ಘೋಷಣೆಗೆ ೨೦೧೭ಕ್ಕೆ ೧೦೦ ವರ್ಷ ತುಂಬಿದ ನೆನಪು ಸಹ ಮೋದಿಯವರ ಇಸ್ರೇಲ್ ಭೇಟಿಗೆ ಹಿನ್ನೆಲೆಯನ್ನು ಒದಗಿಸಿತ್ತು. ೧೯೪೮ರ ಮೇ ೧೪ರಂದು ಜಿಯೋನಿಸ್ಟರ ನಾಯಕತ್ವದಲ್ಲಿ ಮಾಡಲಾದ ಪ್ರತ್ಯೇಕ ಇಸ್ರೇಲ್ ಘೊಷಣೆಗೆ ಈಗ ೭೦ ವರ್ಷವಾಗುತ್ತದೆ. ಆಗ ಜಗತ್ತಿನಲ್ಲಿ ವಸಾಹತುಶಾಹಿ ಆಳ್ವಿಕೆಯ ಸಾಮೂಹಿಕ ಕಹಿ ನೆನಪು ಎಲ್ಲರಲ್ಲೂ ಬಲವಾಗಿತ್ತು. ನೆಹರೂ ಯುಗದಲ್ಲಿ ಇಸ್ರೇಲಿನ ನಿರ್ಮಾಣಕ್ಕಾಗಿ ಸ್ಥಳೀಯ ಪ್ಯಾಲೆಸ್ತೀನಿಯನ್ನರನ್ನು ಬರ್ಬರ ದಮನದ ಮೂಲಕ ತಾಯ್ನೆಲದಿಂದ ಎತ್ತಂಗಡಿ ಮಾಡಿದ ಕ್ರಮವನ್ನು ಭಾರತವು ಅಧಿಕೃತವಾಗಿ ಗಮನಕ್ಕೆ ತೆಗೆದುಕೊಂಡಿತ್ತು.

ಜಿಯೋನಿಸಂ (ಪ್ರತ್ಯೇಕ ಯೆಹೂದಿ ರಾಷ್ಟ್ರವಾದ) ಎಂದರೇನೆಂಬುದನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯವಿದೆ- ಜಿಯೋನಿಸಂ ಎಂಬುದು ಒಂದು ವಸಾಹತುಶಾಹಿ ಮತ್ತು ಜನಾಂಗೀಯವಾದಿ ಸಿದ್ದಾಂತವಾಗಿದ್ದು ಸ್ಥಳೀಯ ಅರಬ್ ಜನರನ್ನು ಬಲಾತ್ಕಾರದಿಂದ ಎತ್ತಂಗಡಿ ಮಾಡುವುದನ್ನೂ ಹಾಗೂ ಅರಬ್ ಜನರ ಮಾನವ ಹಕ್ಕುಗಳ ಹರಣವನ್ನು ಸಮರ್ಥಿಸಿಕೊಳ್ಳುತ್ತದೆ. ಹೀಗಾಗಿ ಜಿಯೋನಿಸಂ ಅನ್ನು ವಿರೋಧಿಸುವುದೆಂದರೆ ಯೆಹೂದಿಗಳನ್ನು ವಿರೋಧಿಸಿದಂತೇನಲ್ಲ; ಅಥವಾ ಯೆಹೂದಿ ವಿರೋಧ ವಾದವೂ (ಆಂಟಿ-ಸೆಮಿಟಿಸಂ) ಅಲ್ಲ. ತಾನು ಪ್ಯಾಲೆಸ್ತೀನಿಯನ್ನರ ವಿರುದ್ಧ ನಡೆಸುತ್ತಿರುವ ಎಲ್ಲಾ ಕ್ರೂರ ಕಾರ್ಯಾಚರಣೆಗಳನ್ನು ವಿಶ್ವದ ಎಲ್ಲಾ ಯೆಹೂದಿಗಳ ಹಿತಾಸಕ್ತಿಯಿಂದಲೇ ನಡೆಸುತ್ತಿದ್ದೇನೆ ಎಂದು ಸಮರ್ಥಿಸಿಕೊಳ್ಳುವ ಮೂಲಕ ಇಸ್ರೇಲ್ ವಿಶ್ವದ ಎಲ್ಲಾ ಯೆಹೂದಿಗಳಿಗೂ ಆತಂಕವನ್ನು ಹುಟ್ಟುಹಾಕಿದೆ. ಜಿಯೋನಿಸ್ಟರ ನೇತ್ರೂತ್ವದ ಇಸ್ರೇಲ್ ಪ್ಯಾಲೇಸ್ತೀನ್ ಅನ್ನು ಬಲಾತ್ಕಾರದಿಂದ ವಶಪಡಿಸಿಕೊಡಿರುವ ದುರಾಕ್ರಮಿಯಾಗಿದೆ. ಇಸ್ರೇಲ್ ಪ್ರಭುತ್ವ ಪ್ಯಾಲೆಸ್ತೀನಿಯರನ್ನು ಸಮಾನ ನಾಗರಿಕರೆಂದು ಪರಿಗಣಿಸಲು ನಿರಾಕರಿಸುತ್ತದೆ. ಹೀಗಾಗಿ ಇಸ್ರೇಲ್ ಉಪ ಸಾಮ್ರಾಜ್ಯಶಾಹಿಯ ವಿರುದ್ಧ ಪ್ಯಾಲೆಸ್ತೀನಿಯರು ನಡೆಸುತ್ತಿರುವ ವಿಮೋಚನಾ ಹೋರಾಟವು ಸಾಮ್ರಾಜ್ಯಶಾಹಿಗಳ ವಿರುದ್ಧ ಮತ್ತು ಅವರೊಡನೆ ಕೈಗೂಡಿಸಿರುವ ಪ್ರತಿಗಾಮಿ ಅರಬ್ ಶಕ್ತಿಗಳ ವಿರುದ್ಧ ನಡೆಯುತ್ತಿರುವ ಹೋರಾಟಗಳ ಭಾಗವೇ ಆಗಿದೆ. ಅಮೆರಿಕದ ಬೆಂಬಲದೊಂದಿಗೆ ೧೯೪೮, ೧೯೬೭ ಮತ್ತು ೧೯೭೩ರಲ್ಲಿ ನಡೆಸಿದ ಯುದ್ಧಗಳ ಮೂಲಕ ಈಗ ಇಸ್ರೇಲ್ ಜೋರ್ಡಾನ್ ನದಿಯ ಪಶ್ಚಿಮ ಭಾಗಕ್ಕಿರುವ ಇಡೀ ಪ್ರದೇಶವನ್ನು ವಶಪಡಿಸಿಕೊಂಡಿದೆ. ಅಷ್ಟು ಮಾತ್ರವಲ್ಲದೆ, ಅದು ಪ್ಯಲೆಸ್ತೀನಿಯರನ್ನು ಅತ್ಯಂತ ಬರ್ಬರವಾಗಿ ನಿಯಂತ್ರಿಸುತ್ತಾ ಅಧೀನರನ್ನಾಗಿಸಿಕೊಂಡಿದೆ. ಪ್ಯಲೆಸ್ತೀನಿಯರು ತಮ್ಮದೇ ಪ್ರದೇಶಗಳಲ್ಲಿ ಓಡಾಡುವುದಕ್ಕೂ ನಿರ್ಬಂಧವನ್ನು ಹೇರಿದೆ.

 ವಾಸ್ತವವಾಗಿ ನೆಹರೂ ನಂತರದ ಭಾರತದ ರಾಜಕಾರಣಿಗಳು ಬಾಯಲ್ಲಿ ಏನೇ ಮಾತನಾಡಿದರೂ ಅವರ ಅಸಲಿ ಚಹರೆಯೇನೆಂಬುದು ೧೯೯೧ರ ನಂತರದಲ್ಲಿ ಸ್ಪಷ್ಟವಾಗಿ ಬಯಲಾಗುತ್ತಾ ಹೋಯಿತು. ವಾಸ್ತವವಾಗಿ ೧೯೯೧ರಲ್ಲಿ ವಿಶ್ವಸಂಸ್ಥೆಯು ಜಿಯೋನಿಸಂ ಅನ್ನು ಜನಾಂಗೀಯವಾದಕ್ಕೆ ಸಮೀಕರಿಸಿ ಒಂದು ನಿರ್ಣಯವನ್ನು ಪ್ರಸ್ತಾಪ ಮಾಡಿತ್ತು. ೧೯೭೦ರ ಮಧ್ಯಭಾಗದಲ್ಲಿ ವಿಶ್ವಸಂಸ್ಥೆಯು ಮಾಡಿದ ಇಂಥದ್ದೇ ನಿರ್ಣಾಯವನ್ನು ಭಾರತ ಬೆಂಬಲಿಸಿತ್ತು. ಆದರೆ ೧೯೯೧ರಲ್ಲಿ ಮಾತ್ರ ನಿರ್ಣಯದ ವಿರುದ್ಧ ತನ್ನ ಮತ ಚಲಾಯಿಸಿತು. ಕಳೆದ ೨೫ ವರ್ಷದಲ್ಲಿ ಭಾರತವು ಇಸ್ರೇಲಿನೊಂದಿಗೆ ಪ್ರಧಾನವಾಗಿ ಸೈನಿಕ ಸಂಬಂಧವನ್ನು ಬೆಳೆಸಿಕೊಂಡಿದೆ. ಇಸ್ರೇಲಿನಿಂದ ಶಸ್ತ್ರಾಸ್ತ್ರಗಳನ್ನು ಕೊಂಡುಕೊಂಡಿರುವುದು ಮಾತ್ರವಲ್ಲದೆ ಅಂತರಿಕ ಬಂಡಾಯವನ್ನು ಹತ್ತಿಕ್ಕುವ ಮತ್ತು ನಾಗರಿಕರ ಮೇಲೆ ಬೇಹುಗಾರಿಕೆ ನಡೆಸುವಂಥ ಅಂತರಿಕ ಭದ್ರತೆಯ ವಿಷಯದಲ್ಲೂ ಇಸ್ರೇಲಿನ ಜೊತೆ ಸಮಾಲೋಚನೆ ಮತ್ತು ಸಹಕಾರಗಳನ್ನು ಪಡೆದುಕೊಂಡಿದೆ. ಇಸ್ರೇಲಿನ ಶಸ್ತ್ರಾಸ್ತ್ರ ಮಾರುಕಟ್ಟೆಗೆ ಭಾರತವು ಈಗ ಅತಿದೊಡ್ಡ ಮಾರುಕಟ್ಟೆಯಾಗಿದೆ. ’ಜೇನ್ಸ್ ಟೆರರರಿಸಂ ಅಂಡ್ ಸೆಕ್ಯುರಿಟಿ ಮಾನಿಟರ್ಎಂಬ ಪತ್ರಿಕೆಯ ಹಲವು ಸಂಚಿಕೆಗಳಲ್ಲಿ ವರದಿಯಾಗಿರುವಂತೆ ಭಾರತದ ಸೇನಾಧಿಕಾರಿಗಳು ಮತ್ತು ಗೂಢಚರ್ಯೆ ಸಿಬ್ಬಂದಿಗಳು ಪ್ಯಾಲೆಸ್ತೀನಿಯರನ್ನು ಹತ್ತಿಕ್ಕುವಲ್ಲಿ ಇಸ್ರೇಲಿ ಸೇನೆ ಮತ್ತು ಅವರ ಗೂಢಚರ್ಯೆ ಸಿಬ್ಬಂದಿ ಯಾವ ಪದ್ಧತಿಗಳನ್ನು ಬಳಸಿದರೋ ಅದೇ ಪದ್ಧತಿಗಳನ್ನು ಕಾಶ್ಮೀರಿ ಬಂಡಾಯವನ್ನು ಹತ್ತಿಕ್ಕುವಲ್ಲಿ ಬಳಸುವಂತೆ ಭಾರತದ ಭದ್ರತಾ ಸಿಬ್ಬಂದಿಗಳು  ತರಬೇತಿ ಪಡೆದಿದ್ದಾರೆ.

ನೇತಾನ್ಯಾಹು ಅವರ ಭೇಟಿಯ ಸಂದರ್ಭದಲ್ಲಿ ಯಾವುದೇ ಹೊಸ ರಕ್ಷಣಾ ಒಪ್ಪಂದ ಅಥವಾ ಯೋಜನೆಗಳು ಘೋಷಿತವಾಗದಿದ್ದರೂ ರಕ್ಷಣಾ ಉತ್ಪಾದನೆಯಲ್ಲಿ ಭಾರತವು ತನ್ನ ಭಾರತದಲ್ಲಿ ಉತ್ಪಾದಿಸಿ ಯೋಜನೆಯ ಭಾಗವಾಗಿ ಇಸ್ರೇಲಿನಿಂದ ತಂತ್ರಜ್ನಾನವನ್ನು ಪಡೆದುಕೊಳ್ಳಲು ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಪಡೆದುಕೊಳ್ಳಲು ಪ್ರಯತ್ನಿಸಿತು (ಭಾರತ-ಇಸ್ರೇಲ್ ಜಂಟಿ ಹೇಳಿಕೆ, ಜನವರಿ ೧೫, ೨೦೧೮). ನಮ್ಮ ಸ್ವಂತ ರಕ್ಷಣಾ ತಂತ್ರಜ್ನಾನ ಮತ್ತು ಸಂಶೋಧನಾ ಕೇಂದ್ರಗಳು ಸ್ವದೇಶೀ ಶಸ್ತ್ರಾಸ್ತ್ರಗಳ ಉತ್ಪಾದನೆ ಮಾಡುವ ತನಕ ಕಾಯದ ಸರ್ಕಾರವು ಈಗಾಗಲೇ ಇಸ್ರೇಲಿನಿಂದ ಉನ್ನತೀಕರಿಸಿದ ರಫೇಲ್ ರಕ್ಷಣಾ ವ್ಯವಸ್ಥೆಯನ್ನು ಮತ್ತು ಟ್ಯಾಂಕ್ ಧಾಳಿ ನಿರೋಧಕ ದೂರ ನಿರ್ದೇಶಿತಸ್ಪೈಕ್ಅಸ್ತ್ರಗಳನ್ನು ಕೊಂಡುಕೊಳ್ಳಲು  ಒಲವನ್ನು ತೋರಿಸಿರುವುದರಿಂದ ನಿಟ್ಟಿನಲ್ಲಿ ಒಂದು ಅಂತರ್ಇಲಾಖಾ ಮಟ್ಟದ ಒಪ್ಪಂದವಾದರೂ ಆಶ್ಚರ್ಯ ಪಡಬೇಕಿಲ್ಲ. ಭಾರತದ ಸೇನೆಗಾಗಿ ಭಾರತ ಮತ್ತು ಇಸ್ರೇಲ್ ಜಂಟಿಯಾಗಿ ಯೋಜಿಸಿರುವ ಮಧ್ಯಮ ದೂರದ ನೆಲದಿಂದ ಆಕಾಶಕ್ಕೆ ಚಿಮ್ಮುವ ಕ್ಷಿಪಣಿಗಳ ಉತ್ಪಾದನೆ, ಕಳೆದ ವರ್ಷ ಇಸ್ರೇಲ್ ವಾಯುಪಡೆ ಆಯೋಜಿಸಿದ ವಾಯುದಾಳಿ ಕವಾಯತಿನಲ್ಲಿ ಭಾರತದ ವಾಯುಪಡೆ ಭಾಗವಹಿಸಿದ್ದು, ಮತ್ತೀಗ  ಸಮಗ್ರ ಭಯೋತ್ಪಾದನಾ ನಿಗ್ರಹ ಸಹಕಾರದ ಒಪ್ಪಂದಗಳು- ಒಟ್ಟಿನಲ್ಲಿ ಪ್ರಖರ ಹಿಂದೂತ್ವವಾದಿಗಳ ಸರ್ಕಾರದ ನಾಯಕತ್ವದಲ್ಲಿ ಭಾರತ ಮತ್ತು ಇಸ್ರೇಲ್ ದೇಶಗಳ ನಡುವಿನ ಸೈನಿಕ ಮತ್ತು ವ್ಯೂಹಾತ್ಮಕ ಮೈತ್ರಿಯು ಹಿಂದೆಂದೂ ಇಲ್ಲದಷ್ಟು ತೀವ್ರಗತಿಯನ್ನು ಪಡೆದುಕೊಂಡಿದೆ. ಭಾರತದ ಹಿಂದೂತ್ವವಾದಿಗಳು ಜಿಯೋನಿಸ್ಟರ ಸೈನಿಕ ರಾಷ್ಟ್ರವಾದವನ್ನು ಬೆರಗಿನಿಂದ ಮೆಚ್ಚಿಕೊಂಡಿದ್ದಾರೆ.

ಆದರೆ ಈಗ ಒಂದು ಸಮಗ್ರ ಭಯೋತ್ಪಾದನಾ ನಿಗ್ರಹ ಸಹಕಾರ ಒಪ್ಪಂದ ವಾಗಿರುವ ಹಿನ್ನೆಲೆಯಲ್ಲಿ ಜಿಯೋನಿಸ್ಟರು ಹೇಗೆ ಪ್ಯಾಲೆಸ್ತೀನೀಯರನ್ನು ದಮನ ಮಾಡುತ್ತಿದ್ದಾರೋ ಅದೇ ರೀತಿಯಲ್ಲಿ ಭಾರತವು ಕಾಶ್ಮೀರಿಗಳ ಬಗ್ಗೆ ತನ್ನ ನೀತಿಯನ್ನು ಬದಲಿಸಿಕೊಳ್ಳುತ್ತದೆಯೇ? ಆದರೆ ಹೇಗೆ ಯೆಹೂದಿತನವನ್ನು ಜಿಯೋನಿಸಂ ಇಂದ ಬೇರ್ಪಡಿಸಿ ನೋಡಬೇಕೋ ಅದೇ ರೀತಿ ಹಿಂದೂಧರ್ಮವನ್ನು ಹಿಂದೂತ್ವದಿಂದ ಬೇರ್ಪಡಿಸಿ ನೋಡಬೇಕು. ಹಿಂದೂಧರ್ಮವು ಆಧ್ಯಾತ್ಮಿಕ ಮೋಕ್ಷವನು ಪಡೆದುಕೊಳ್ಳುವ ಉದ್ದೇಶದಿಂದ ಸಮ್ಮಿಳಿತವಾಗಿರುವ ವಿವಿಧ ಧಾರ್ಮಿಕ ನಂಬಿಕೆ ಮತ್ತು ಶ್ರದ್ಧೆಗಳಾಗಿದ್ದರೆ ಹಿಂದೂತ್ವ ಆನ್ನುವುದು ಒಂದು ಫ್ಯಾಸಿಸ್ಟ್ ಸಿದ್ಧಾಂತವಾಗಿದೆ. ಅದು ನಾಜೀವಾದದ ಭಾರತೀಯ ಮಾದರಿಯಾಗಿದೆ. ಹೇಗೆ ಜಿಯೋನಿಸಂ ಎಂಬುದು ಯೆಹೂದಿತನಕ್ಕೆ ತದ್ವಿರುದ್ಧವಾದ ಸಂಗತಿಯಾಗಿದೆಯೋ ಹಾಗೆ ಹಿಂದೂತ್ವವೂ ಸಹ ಹಿಂದೂಧರ್ಮದ ತದ್ವಿರುದ್ಧವಾದ ಸಂಗತಿಯಾಗಿದೆ. ಹೇಗೆ ಯೆಹೂದಿಗಳು ಜಿಯೋನಿಸ್ಟರು ತಮ್ಮನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳುವ ಅಗತ್ಯವಿದೆಯೋ ಅದೇ ರೀತಿ ಹಿಂದೂಗಳು ಸಹ ಹಿಂದೂತ್ವವಾದಿಗಳು ತಮ್ಮನ್ನು ಪ್ರತಿನಿಧಿಸುವುದಿಲ್ಲ ಎಂದು ಗಟ್ಟಿಯಾಗಿ ಹೇಳುವ ಅಗತ್ಯವಿದೆ. ಹೋರಾಟದಲ್ಲಿ ಹಿಂದೂಗಳು, ಯೆಹೂದಿಗಳು ಮತ್ತು ಮುಸ್ಲಿಮರು ಎಲ್ಲರೂ ಒಂದಾಗಿ ಮಾನವತೆ ಮತ್ತು ಪ್ಯಾಲೆಸ್ತೀನೀಯರ ಪರವಾಗಿ, ಮಾನವತೆ ಮತ್ತು ಕಾಶ್ಮೀರಿಗಳ ಪರವಾಗಿ ನಿಂತು ಯೆಹೂದಿಗಳ ಬಗ್ಗೆ, ಮುಸ್ಲಿಮರ ಬಗ್ಗೆ ಮತ್ತು ಪ್ಯಲೆಸ್ತೀನೀಯರ ಬಗ್ಗೆ ಇರುವ ಎಲ್ಲ ಪೂರ್ವಗ್ರಹಗಳನ್ನು ಮತ್ತು ಪ್ರತಿರೋಧಗಳನ್ನು ಕೊನೆಗಾಣಿಸಬೇಕಿದೆ.

  ಕೃಪೆ: Economic and Political WeeklyJan 20,  2018. Vol. 53. No. 3
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )





                                                               




ಕಾಮೆಂಟ್‌ಗಳಿಲ್ಲ: