ಸೋಮವಾರ, ಫೆಬ್ರವರಿ 5, 2018

ಹೆಚ್ಚುತ್ತಿರುವ ಪತ್ರಿಕಾಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳು


  ಅನುಶಿವಸುಂದರ್ 
ಆಳುವವರ್ಗದ ಉದ್ದೇಶಪೂರ್ವಕ ಮೌನವೂ ಸಹ ಒಂದು ಬಗೆಯ ಮಾಧ್ಯಮ ನಿಯಂತ್ರಣವೇ ಆಗಿದೆ.
Image result for media freedom in india

 ದಿ ಹೂಟ್ ಎಂಬ ಸ್ವತಂತ್ರ ಮಾಧ್ಯಮ ಸಂಸ್ಥೆಯು ಹೊರತಂದಿರುವ ಭಾರತ ಸ್ವಾತಂತ್ರ್ಯ ವರದಿ-೨೦೧೭ರ ಪ್ರಕಾರ ಭಾರತದಲ್ಲಿ ಪತ್ರಿಕಾ ವೃತ್ತಿಯನ್ನು ನಡೆಸುವ ವಾತಾವರಣ ಕಳೆದ ವರ್ಷ ಮತ್ತಷ್ಟು ಹದಗೆಟ್ಟಿದೆ. ಗೌರಿ ಲಂಕೇಶರನ್ನೂ ಒಳಗೊಂಡಂತೆ ಇಬ್ಬರು ಪತ್ರಕರ್ತರನ್ನು ಗುಂಡಿಟ್ಟು ಕೊಲ್ಲಲಾಗಿದೆ ಮತ್ತೊಬ್ಬರನ್ನು ಕೊಚ್ಚಿ ಕೊಲ್ಲಲಾಗಿದೆ. ಕಳೆದ ವರ್ಷ ಒಟ್ಟಾರೆಯಾಗಿ ೧೧ ಪತ್ರಕರ್ತರನ್ನು ಕೊಲೆಮಾಡಲಾಗಿದೆಯಾದರೂ ಅದರಲ್ಲಿ ಮೂರು ಕೊಲೆಗಳು ಮಾತ್ರ ನೇರವಾಗಿ ಅವರ ವೃತ್ತಿಸಂಬಂಧಿತ ಕಾರಣಗಳಿಗಾಗಿ ನಡೆದಿದೆಯೆಂದು ಪರಿಗಣಿಸಬಹುದು. ಕಳೆದ ವರ್ಷ ೪೬ ಕರ್ತವ್ಯ ನಿರತ ಪತ್ರಕರ್ತರ ಮೇಲೆ ದಾಳಿ ನಡೆಸಲಾಗಿದೆ. ೨೭ ಪ್ರಕರಣಗಳಲ್ಲಿ ಪತ್ರಕರ್ತರನ್ನು ವಶಕ್ಕೆ ತೆಗೆದುಕೊಂಡು, ಬಂಧಿಸಲಾಗಿದೆ. ಅಥವಾ ಕೇಸುಗಳನ್ನು ಜಡಿಯಲಾಗಿದೆ.

ವರದಿಯು ಪತ್ರಕರ್ತರ ಮೇಲೆ ಹೇರಲಾಗುತ್ತಿರುವ ಹಲವು ಬಗೆಯ ನಿರ್ಬಂಧಗಳನ್ನೂ ಹಾಗೂ ಮಾಹಿತಿ ನಿಷೇಧಗಳ ಪರಿಯನೂ ಸಹ ದಾಖಲಿಸಿದೆ. ನಿರ್ಬಂಧಗಳ ಹೇರುವಿಕೆಯು ಯಾವುದಾದರೂ ಒಂದು ಪಕ್ಷಕ್ಕೆ ಮಾತ್ರ ಸೀಮಿತವಾಗಿಲ್ಲವೆಂಬುದು ಕೂಡಾ ಕುತೂಹಲಕಾರಿಯಾದ ಅಂಶವಾಗಿದೆ. ಒಂದೆಡೆ ಗೋವಾದಲ್ಲಿನ ಬಿಜೆಪಿ ನೇತೃತ್ವದ ಸರ್ಕಾರ ತನ್ನ ಆಯ್ಕೆಯ ಪತ್ರಕರ್ತರಿಗೆ ಮಾತ್ರ ಮಾಹಿತಿಗಳನ್ನು ಹರಿಯಬಿಟ್ಟು ಉಳಿದವರ ಮೇಲೆ ನಿಷೇಧ ಹೇರಿದರೆ, ಕೇರಳದಲ್ಲಿ ಸಿಪಿಎಂ ಪಕ್ಷದ ಮುಖ್ಯಮಂತ್ರಿಯು ತನ್ನ ಹಾಗೂ ಬಿಜೆಪಿ ಪ್ರತಿನಿಧಿಗಳ ನಡುವಿನ ಮಾತುಕತೆಯ ಸಂದರ್ಭದಲ್ಲಿ ಇಡೀ ಮಾಧ್ಯಮವನ್ನು ಹೊರದಬ್ಬಿದ್ದರು. ಇನ್ನು ರಾಜಸ್ಥಾನದಲ್ಲಂತೂ ನ್ಯಾಯಾಧೀಶರ ಮತ್ತು ಇತರ ಸಾರ್ವಜನಿಕ ಸೇವಕರ ಮೇಲಿನ ಭ್ರಷ್ಟಾಚಾರ ಆರೋಪಗಳ ಬಗ್ಗೆ ಮಾಧ್ಯಮಗಳು ವರದಿ ಮಾಡಬಾರದೆಂಬ ಕಾನೂನನ್ನೇ ತಂದಿದ್ದರೆ ಡಾರ್ಜಲಿಂಗಿನಲ್ಲಿ ದೃಶ್ಯ ಮಾಧ್ಯಮಗಳು ಗೋರ್ಖಾಲ್ಯಾಂಡ್ ಹೋರಾಟವನ್ನು ವರದಿ ಮಾಡಬಾರದೆಂದು ಹೇಳಲಾಗಿತ್ತು.
Image result for media freedom in india
 ಕಾಂಗ್ರೆಸ್ ಸರ್ಕಾರಗಳೂ ಸಹ ತಮಗೆ ವಿರುದ್ಧವಾಗಿರುವ ವಾಹಿನಿಗಳನ್ನು ಹೊರಗಿಡುವ ಮೂಲಕ ಮಾಧ್ಯಮ ನಿಯಂತ್ರಣದಲ್ಲಿ ತಮ್ಮ ಪಾಲು ಹಂಚಿಕೊಂಡಿದ್ದಾರೆ. ಇನೂ ಜಮ್ಮು-ಕಾಶ್ಮೀರದಲ್ಲಂತೂ ಮಾಧ್ಯಮ ನಿಯಂತ್ರಣವೂ ಸರ್ವೇ ಸಾಮಾನ್ಯವಾಗಿಬಿಟ್ಟಿದೆ. ಭಾರತ ಸರ್ಕಾರದಿಂದ ನೇಮಕವಾಗಲ್ಪಟ್ಟ ಸಮಾಲೋಚಕರಾದ ದಿನೇಶ್ವರ್ ಶರ್ಮಾ ಅವರು ಕುಪ್ವಾರಕ್ಕೆ ನೀಡಿದ ಭೇಟಿಯ ವರದಿಗೆ ಪತ್ರಕರ್ತರಿಗೂ ಅನುಮತಿ ಇರಲಿಲ್ಲ. ಜೊತೆಗೆ ಯಾವುದೇ ಪ್ರತಿಭಟನೆಗಳು ನಡೆದ ಕೂಡಲೇ ಇಂಟರ್ನೆಟ್ ಸೌಲಭ್ಯವನ್ನು ಕಡಿತಮಾಡುವ ಸನ್ನಿವೇಶದಲ್ಲಿ ಅಲ್ಲಿ ಪತ್ರಿಕಾವೃತ್ತಿ ನಡೆಯುತ್ತಿದೆ. ವಾಸ್ತವವಾಗಿ ಭಾರತದ ಇತರ ಎಲ್ಲಾ ರಾಜ್ಯಗಳಿಗೆ ಹೋಲಿಸಿದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಮುಕ್ತ ಅಭಿವ್ಯಕ್ತಿ ಮತ್ತು ಮಾಧ್ಯಮ ಸ್ವಾತಂತ್ಯ್ರವು ೨೦೧೭ರಲ್ಲಿ ಅತ್ಯಂತ ಕೆಳಮಟ್ಟದಲ್ಲಿತ್ತು. ಭಾರತದಲ್ಲಿ ಕಳೆದ ವರ್ಷ ಒಟ್ಟಾರೆ ೭೭ ಬಾರಿ ಇಂಟರ್ನೆಟ್ ಸೌಲಭ್ಯ ಸ್ಥಗಿತವಾಗಿತ್ತು. ಅದರಲ್ಲಿ ಜಮ್ಮು-ಕಾಶ್ಮೀರ ಒಂದರಲ್ಲೇ ೪೦ ದಿನಗಳ ಕಾಲ ಇಂಟರ್ನೆಟ್ ಬಂದಾಗಿತ್ತು. ಇದರೊಡನೆ ಪತ್ರಕರ್ತರನ್ನು ಬಂಧಿಸುವುದು ಮತ್ತು ಬೆದರಿಸುವುದರಲ್ಲೂ ರಾಜ್ಯಕ್ಕೆ ಮುಂಚೂಣಿಯಲ್ಲಿದೆ. ಹೀಗಾಗಿ ಮಾಧ್ಯಮ ಸ್ವಾತಂತ್ರ್ಯದ ನಿರ್ವಹಣೆಯಲ್ಲಿ ಭಾರತವು ಹೆಮ್ಮೆ ಪಡುವಂಥ ಪರಿಸ್ಥಿಯಲ್ಲೇನೂ ಇಲ್ಲ.

ಪತ್ರಕರ್ತರ ಕೊಲೆಗಳು, ದಾಳಿಗಳು, ಬಂಧನಗಳು, ಕೇಸುಗಳು ಹಾಗೂ ಪ್ರತ್ಯಕ್ಷ ಮತ್ತು ಪರೋಕ್ಷ ರೂಪದ ನಿರ್ಬಂಧಗಳು ಪತ್ರಿಕಾ ಸ್ವಾತಂತ್ರ್ಯದ ಮೇಲೆ ನಡೆಯುತ್ತಿರುವ ಕಣ್ಣಿಗೆ ಕಾಣುವಂಥ ದಾಳಿಗಳಾಗಿದ್ದರೆ ಒಂದು ಪ್ರಜಾತಾಂತ್ರಿಕ ದೇಶದಲ್ಲಿ ಮಾಹಿತಿಗಳಿಗೆ ಮತ್ತು ಅಧಿಕಾರಸ್ಥರನ್ನು ಪ್ರಶ್ನಿಸುವುದಕ್ಕೆ ಅವಕಾಶ ನಿರಾಕರಿಸುವುದೂ ಸಹ ಮತ್ತೊಂದು ರೀತಿಯಲ್ಲಿ ಪತ್ರಿಕಾ ಸ್ವಾತಂತ್ರ್ಯವನ್ನು ಸೀಮಿತಗೊಳಿಸುವ ಬಗೆಯೆಂದು ಪರಿಗಣಿಸಬೇಕು. ಭಾರತದ ಮಾಧ್ಯಮಗಳು ಪ್ರಜಾತಂತ್ರದ ನಾಲ್ಕನೇ ಸ್ಥಂಭವಾಗಿರಬೇಕೆಂದು ನಿರೀಕ್ಷಿಸಲಾಗಿದೆಯಾದರೂ ಇತಿಹಾಸದಲ್ಲಿ ಅವು ಅಂಥ ನಿರೀಕ್ಷೆಯ ಮಟ್ಟಕ್ಕೇನೂ ತಲುಪಿಲ್ಲ. ಇತ್ತೀಚಿ ದಿನಗಳಲ್ಲಿ ನಡೆಯುತ್ತಿರುವ ಬೆಳವಣಿಗೆಯೆಂದರೆ ಮಾಧ್ಯಮವು ಆಧಿಕಾರದಲ್ಲಿರುವವರನ್ನು ಪ್ರಶ್ನಿಸುವುದನ್ನು ಬಿಟ್ಟಿರುವುದು ಮತ್ತು ಒಂದು ನಿರ್ದಿಷ್ಟ ದೃಷ್ಟಿಕೋನಕ್ಕೆ ಮಾತ್ರ ಉಳಿದೆಲ್ಲಾ ದೃಷ್ಟಿಕೋನಗಳಿಗಿಂತ ಹೆಚ್ಚಿನ ಸಮರ್ಥನೆ ನೀಡುವುದು. ಇದರ ಪರಿಣಾಮವಾಗಿ ಕಳೆದ ಮೂರು ವರ್ಷಗಳಲ್ಲಿ ಮೇಲೆ ಹೇಳಲಾದ ಹಲವು ಬಗೆಯ ಮಾಧ್ಯಮ ನಿರ್ಬಂಧಗಳು ಯಾರ ಗಮನಕ್ಕೂ ಬರದಂತೆ ಜಾರಿಮಾಡಲಾಗಿದೆ

ಎಲ್ಲ ಬಣ್ಣದ ಸರ್ಕಾರಗಳು ಮಾಧ್ಯಮವನ್ನು ಮಾಹಿತಿಗಳಿಂದ ದೂರವಿಡಲು ಅಥವಾ ಅದನ್ನು ತಿರುಚಲು ಪ್ರಯತ್ನಿಸುತ್ತಿರುತ್ತವೆ ಎಂಬುದು ಸರ್ವವಿದಿತ. ಆದರೆ ಕಳೆದ ಮೂರುವರ್ಷಗಳಲ್ಲಿ ಮಾಹಿತಿಗಳನ್ನು ಎಷ್ಟು ಬಿಗಿಯಾಗಿ ನಿಯಂತ್ರಿಸಲಾಗುತ್ತಿದೆಯೆಂದರೆ ಕೇಂದ್ರದ ಅಧಿಕಾರಿಗಳು ಪತ್ರಕರ್ತರೊಂದಿಗೆ ಮಾತಾಡಲು ಅಥವಾ ಬೆರೆಯಲು ಸಹ ಹೆದರುತ್ತಿದ್ದಾರೆ. ಅವರು ಪ್ರಧಾನಿಗಳ ಚಿಂತನೆಯನ್ನು ಸಾರ್ವಜನಿಕವಾಗಿ ಮತ್ತು ಸಾರಾಸಗಟಾಗಿ ಅನುಮೋದಿಸುವುದನ್ನು ಬಿಟ್ಟು ಬೇರೇನನ್ನು ಮಾಡುತ್ತಿಲ್ಲ. ಸರ್ಕಾರದೊಳಗೆ ಮುಕ್ತವಾದ ಚರ್ಚೆಯೂ ಆಗುತ್ತಿಲ್ಲ ಮತ್ತು ಸರ್ಕಾರದಲ್ಲಿರುವ ಸ್ವತಂತ್ರ ಧ್ವನಿಗಳು ಬಾಯಿಬಿಚ್ಚಲು ಹೆದರುತ್ತಾರೆ. ಇದರಿಂದಾಗಿ ಸ್ವತಂತ್ರ ಪತ್ರಕರ್ತರು ಪ್ರಮುಖ ವಿಷಯಗಳ ಬಗ್ಗೆ ಸ್ವತಂತ್ರ ಪರಿಶೋಧನೆ ನಡೆಸುವ ಸಾಧ್ಯತೆಯೇ ಗೌಣವಾಗುತ್ತಿದೆ. ಹಾಗೇನಾದರು ಸ್ವತಂತ್ರ ಧ್ವನಿಯೊಂದು ಹೊರಬಂದರೆ ಅವರಿಗೆ ಒಂದಲ್ಲ ಒಂದು ವಿರೋಧಪಕ್ಷಗಳೊಂದಿಗೆ ಶಾಮೀಲಾಗಿದ್ದಾರೆಂಬ ಪಟ್ಟವನ್ನು ನೀಡಿಬಿಡಲಾಗುತ್ತಿದೆ.

ಅಧಿಕಾರಕ್ಕೇರಿದ ನಂತರದ ಮೂರೂವರೆ ವರ್ಷಗಳಲ್ಲಿ ಪ್ರಧಾನಿ ನರೇಂದ್ರಮೋದಿಯವರು ಈವರೆಗೆ ಒಂದೂ ಪತ್ರಿಕಾಗೋಷ್ಟಿಯನ್ನು ನಡೆಸಿಲ್ಲ. ಅದರ ಬದಲಿಗೆ ಅವರು ಒಂದೋ ಮನ್ಕಿ ಬಾತ್ ಹೆಸರಿನ ಸ್ವಗತ ಭಾಷಣ ಮಾಡುತ್ತಿದ್ದಾರೆ ಅಥವಾ ತನ್ನ ಜೊತೆ ಸ್ನೇಹದಿಂದಿರಿರುವ ಆಯ್ದ ಸುದ್ದಿ ವಾಹಿನಿಗಳಿಗೆ ಪೂರ್ವನಿರ್ಧರಿತ ಪ್ರಶ್ನೋತ್ತರಗಳಸಂದರ್ಶನನೀಡುತ್ತಿದ್ದಾರೆ. ವಾಸ್ತವಗಳ ಬಗ್ಗೆ ತನ್ನ ಸರ್ಕಾರದ ಅಭಿಪ್ರಾಯಗಳೊಂದಿಗೆ ಸಹಮತವಿರುವ ಪತ್ರಕರ್ತರಿಗೆ ಮತ್ತು ಸುದ್ದಿಸಂಸ್ಥೆಗಳಿಗೆ ಮಾತ್ರ ಅವರು ಸಂದರ್ಶನವನ್ನು ಕೊಡುತ್ತಾರೆ. ಇದೇ ೨೦ ಮತ್ತು ೨೧ರಂದು ಜೀ ನ್ಯೂಸ್ ಮತ್ತು ಟೈಮ್ಸ್ ನೌ ಸಂಸ್ಥೆಗಳಿಗೆ ಕೊಟ್ಟ ಸಂದರ್ಶನ ಅದಕ್ಕೆ ತಾಜಾ ಉದಾಹರಣೆ. ಸರ್ಕಾರದ ಮುಖ್ಯಸ್ಥರೊಬ್ಬರು ಪತ್ರಿಕಾಗೊಷ್ಟಿ ನಡೆಸುವುದು ಮತ್ತು ಅವರ ಪ್ರಶ್ನೆಗಳಿಗೆ ಉತ್ತರಕೊಡುವುದು ಕಡ್ಡಾಯವೇನಲ್ಲ ಎಂದು ಯಾರಾದರೂ ವಾದಿಸಬಹುದು. ಆದರೆ ನೇರ ಮುಖಾಮುಖಿಯ ಸಾಧ್ಯತೆ ಇಲ್ಲದಾಗ ಅಮೆರಿಕದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಅಧ್ಯಕ್ಷ ಟ್ರಂಪ್ ಬರಹವನ್ನು ಆಧರಿಸುವಂತೆ ಪತ್ರಕರ್ತರು ಪ್ರಧಾನಿ ಮತ್ತು ಅಧ್ಯಕ್ಷರು ನೀಡುವ ಸಾರ್ವಜನಿಕ ಹೇಳಿಕೆಗಳನ್ನು ಆಧರಿಸಿಯೇ ಉಳಿದದ್ದನ್ನೆಲ್ಲಾ ಊಹಿಸಬೇಕಾಗುತ್ತದೆ. ಅಲ್ಲಿ ಅಧ್ಯಕ್ಷ ಟ್ರಂಪ್ ಅತನ ವಿರುದ್ಧ ಬರೆಯಲಾಗುವ ಎಲಾ ಸುದ್ದಿಗಳನ್ನು ಸುಳ್ಳು ಸುದ್ದಿ ಎಂದು ತಳ್ಳಿಹಾಕುತ್ತಿದ್ದರೂ ಅಮೆರಿಕ ಅಧ್ಯಕ್ಷರ ಕಾರ್ಯಾಲಯದಲ್ಲಿ ಈಗಲೂ ಅಧಿಕೃತ ಮತ್ತು ನಿಯಮಿತವಾದ ಪತ್ರಿಕಾ ಗೋಷ್ಟಿಗಳು ಮುಂದುವರೆದಿವೆ ಮತ್ತು ಅಲ್ಲಿ ನಡೆಯುವ ಪ್ರಶ್ನೋತ್ತರಗಳನ್ನು ಸಾರ್ವಜನಿಕರು ಸಹ ನೋಡಬಹುದಾಗಿದೆ. ಭಾರತದಲ್ಲಂತೂ ಸಾರ್ವಜನಿಕರೊಂದಿಗೆ ಅಂಥಾ ಸಂವಹವನ ನಿಂತುಹೋಗಿ ಬಹಳದಿನಗಳಾಗಿವೆ. ಅವುಗಳು ಹೆಚ್ಚೆಂದರೆ ಬಜೆಟ್ ಮಂಡನೆಯ  ನಂತರ ಅಥವಾ ಯಾವುದಾದರೂ ಪ್ರಮುಖ ನೀತಿಯ ಘೋಷಣೆಯ ನಂತರದಲ್ಲಿ ನಡೆಯುತ್ತದಷ್ಟೆ.

ಭಾರತದ ಪತ್ರಿಕಾ ಸ್ವಾತಂತ್ರ್ಯದ ಸ್ಥಿತಿಗತಿಯು ಅಧಿಕೃತ ಪತ್ರಿಕಾ ಗೊಷ್ಟಿಗಳು ಮತ್ತು ಅಧಿಕೃತ ಸುದ್ದಿ ಘೋಷಣೆಗಳು ನಿಂತುಹೋಗಿರುವುದರೊಂದಿಗೆ ನೇರವಾದ ಸಂಬಂಧವನ್ನು ಹೊಂದಿದೆ. ಒಂದು ಮುಕ್ತ ಮಾಧ್ಯಮದ ಕರ್ತವ್ಯವೇ ಜಟಿಲವಾದ ಪ್ರಶ್ನೆಗಳನ್ನು ಕೇಳುವುದು ಮತ್ತು ನೀತಿಗಳ ಅನೂಷ್ಠಾನದಲ್ಲಿ ಕಾಣಬಂದಿರುವ ಹುಳುಕುಗಳನ್ನು ಎತ್ತಿತೋರುವುದು ಎಂಬುದನ್ನು ಸರ್ಕಾರವು ಒಪ್ಪಿಕೊಳ್ಳಲು ಸಿದ್ಧವಿಲ್ಲದಾಗ ಇಂಥಾ ಸಂದರ್ಭಗಳು ಉದ್ಭವವಾಗುತ್ತದೆ. ಒಂದು ಮುಕ್ತ ಮಾಧ್ಯಮ ಮಾತ್ರವೇ ಅದನ್ನು ಮಾಡಲು ಸಾಧ್ಯ. ಇಂದು ಜಟಿಲವಾದ ಪ್ರಶ್ನೆಗಳನ್ನು ಕೇಳುವುದು ಪ್ರತಿಕೂಲಕಾರಿ ಮತ್ತು ಅನಗತ್ಯ ಎಂದು ಭಾವಿಸಲ್ಪಡುವುದು ಮಾತ್ರವಲ್ಲದೆ ದೇಶ ವಿರೋಧಿ ಎಂದೂ ಸಹ ಪರಿಗಣಿಸಲಾಗುತ್ತದೆ. ಅದಕ್ಕೆ ತದ್ವಿರುದ್ದವಾಗಿ ಇತ್ತೀಚಿನ ಸಂದರ್ಶನಗಳಲ್ಲಿ ನೋಡಿದಂತೆ ಒಂದು ಸುದ್ದಿ ಸಂಸ್ಥೆಯು ಸಾಕುನಾಯಿಯಂತಾಗಿಬಿಟ್ಟರೆ ಅದು ವ್ಯಕ್ತಿಯೊಬ್ಬನ ಆರಾಧಯನ್ನಷ್ಟೇ ಮಾದುತ್ತಿರುತ್ತದೆ.
 ಕೃಪೆ: Economic and Political Weekly,Jan 27,  2018. Vol. 53. No. 4
                                                                                                              
(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )






ಕಾಮೆಂಟ್‌ಗಳಿಲ್ಲ: