ಅನು: ಶಿವಸುಂದರ್
ಕಾಶ್ಮೀರದಲ್ಲಿ ಸೈನಿಕ ಸಿಬ್ಬಂದಿಯವರ ಹಕ್ಕುಗಳ ಬಗೆಗೆ ವ್ಯಕ್ತವಾಗುತ್ತಿರುವ ಕಾಳಜಿಗಳು ನಾಗರಿಕರ ಮಾನವಹಕ್ಕುಗಳ ಪ್ರಶ್ನೆಯನ್ನು ಮರೆಮಾಚುತ್ತಿದೆ
ಗೌತಮ್ ನವಲಾಖಾ ಅವರು ಬರೆಯುತ್ತಾರೆ:
ಇದೇ ಜನವರಿ ೨೭ರಂದು ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಗವಾನ್ಪೋರ ಹಳ್ಳಿಯಲ್ಲಿ ಭಾರತದ ಸೇನಾ ತುಕಡಿಯೊಂದು ಗೋಲಿಬಾರ್ ನಡೆಸಿತು. ಅದರಿಂದ ನಿಶ್ಯಸ್ತ್ರ ನಾಗರಿಕರು ಬಲಿಯದ್ದರಿಂದ ಅದಕ್ಕೆ ಕಾರಣನಾದ ಸೇನಾಧಿಕಾರಿಯ ಮೇಲೆ ದೂರನ್ನು ದಾಖಲಿಸುವ ಪ್ರಕ್ರಿಯೆಗೆ ಒತ್ತಾಯಿಸಲಾಯಿತು. ಆದರೆ ಇದೀಗ ಆ ಸೇನಾಧಿಕಾರಿಯ ಪರಿಸ್ಥಿತಿಯ ಕುರಿತು ಎಲ್ಲಿಲ್ಲದ ಕಾಳಜಿಯು ದೇಶಾದ್ಯಂತ ಸದ್ದು ಮಾಡತೊಡಗಿದೆ. ಇದು ಕಾಶ್ಮೀರದಲ್ಲಿ ಬಡಿದೆಬ್ಬಲಾಗಿಸುತ್ತಿರುವ ದೇಶೋನ್ಮಾದವು ನ್ಯಾಯಪ್ರಕ್ರಿಯೆಯ ಮೇಲೆ ಹೇಗೆ ವಿಜಯವನ್ನು ಸಾಧಿಸುತ್ತಲೇ ಬರುತ್ತಿದೆ ಎಂಬುದಕ್ಕೆ ಮತ್ತೊಂದು ವಿಷಾದಕರ ಉದಾಹರಣೆಯಾಗಿದೆ.
ಈ ಪ್ರಕರಣದ ಕುರಿತು ಸೈನಿಕರ ಮನೋಸ್ಥೈರ್ಯವನ್ನು ರಕ್ಷಿಸಬೇಕೆಂದು ಕೋರುತ್ತಾ ದಾಖಲಾದ ಅಹವಾಲೊಂದನ್ನು ಸುಪ್ರೀಂ ಕೋರ್ಟಿನಲ್ಲಿ ಮುಖ್ಯ ನ್ಯಾಯಮೂರ್ತಿಗಳ ನೇತೃತ್ವದ ಮೂರುಜನರ ಪೀಠವೊಂದು ಫೆಬ್ರವರಿ ೧೨ರಂದು ಆಲಿಸಿತು. ನ್ಯಾಯಾಲಯವು ಪ್ರತಿವಾದಿಯ ಅನುಪಸ್ಥಿತಿಯಲ್ಲಿ ಆದೇಶವನ್ನು ನೀಡಿತು. ಆ ಆದೇಶದಲ್ಲಿ ಜಮ್ಮು -ಕಾಶ್ಮೀರ ಪೊಲೀಸಿನ ೧೦ನೇ ಘರ್ವಾಲ್ ರೈಫಲ್ಸ್ ಶಾಖೆಗೆ ಸೇರಿದ ಮೇಜರ್ ಆದಿತ್ಯಕುಮಾರ್ ಅವರ ಮೇಲೆ ಯಾವುದೇ ದಂಡನಾತ್ಮಕ ಕ್ರಮಗಳನ್ನು ತೆಗೆದುಕೊಳ್ಳಬಾರದೆಂದು ನಿರ್ದೇಶನ ನೀಡಿದೆ. ಇದಕ್ಕೆ ಸ್ವಲ್ಪ ಮುನ್ನ ಫೆಬ್ರವರಿ ೯ ರಂದು ರಾಷ್ಟ್ರೀಯ ಮಾನವ ಹಕ್ಕುಗಳ ಅಯೋಗವು ಸೇವೆಯಲ್ಲಿರುವ ಸೇನಾಧಿಕಾರಿಗಳ ಮಕ್ಕಳು ನೀಡಿದ ಅಹವಾಲೊಂದನ್ನು ಅಂಗೀಕರಿಸುತ್ತಾ ಸೈನಿಕರ ರಕ್ಷಣೆಯು ಮುಖ್ಯವಾದ ಕಾಳಜಿಯೆಂದು ಅಭಿಪ್ರಾಯಪಟ್ಟಿದೆ. ಹಾಗೂ ಸೇನಾ ಸಿಬ್ಬಂದಿಯ ಮೇಲೆ ಅರಾಜಕ ಗುಂಪೊಂದು ಕಲ್ಲೂ ತೂರಿ ಹಲ್ಲೆ ಮಾಡಿದ ಪ್ರಕರಣವನ್ನು ತನಿಖೆ ಮಾಡಬೇಕೆಂದು ಆದೇಶಿಸಿದೆ. ಒಂದು ಗಲಭೆಗ್ರಸ್ಥ ಪ್ರದೇಶದಲ್ಲಿ ಕೇವಲ ಅನುಮಾನದ ಮೇಲೆ ಯಾರನ್ನಾದರೂ ಕೊಲ್ಲುವ ಪ್ರಚಂಡ ಅಧಿಕಾರವನ್ನು ಪಡೆದಿರುವ ಸೇನಾ ಸಿಬ್ಬಂದಿಗಳ ಮಾನವ ಹಕ್ಕುಗಳ ಬಗ್ಗೆ ಪ್ರಶ್ನೆಯನ್ನೆಬ್ಬಿಸುತ್ತಾ ಅವರ ದೌರ್ಜನ್ಯಕ್ಕೆ ಬಲಿಯಾಗುತ್ತಿರುವ ನಾಗರಿಕರ ಮಾನವ ಹಕ್ಕುಗಳ ಪ್ರಶ್ನೆಯನ್ನು ಬದಿಗೆ ಸರಿಸಲಾಗುತ್ತಿದೆ. ಇದೀಗ ತನಿಖಾ ಪ್ರಕ್ರಿಯೆಯ ಮೇಲೆಯೇ ತಡೆಯಾಜ್ನೆಯಿರುವುದರಿಂದ ದೂರು ದಾಖಲಿಸುವುದು ಕೂಡಾ ನಿಷಿದ್ದವಾಗಿದೆ.
ಜನವರಿ ೨೮ರಂದು ಭಾರತದ ಸೇನೆಯು ತಾನು ಜನವರಿ ೨೭ರಂದು ಮಾಡಿದ ಗೋಲಿಬಾರ್ ಬಗ್ಗೆ ಒಂದು ಹೇಳಿಕೆಯನ್ನು ನೀಡಿತು. ಅದರಲ್ಲಿ ತಮ್ಮ ಕ್ರಮವನ್ನು ಸಮರ್ಥಿಸಿಕೊಂಡಿರುವುದಲ್ಲದೆ ತಾವು ನಿಗದಿಯಾದ ಕಾರ್ಯಾಚರಣಾ ಕ್ರಮ (ಸ್ಟಾಂಡರ್ಡ್ ಆಪರೇಟಿಂಗ್ ಪ್ರೊಸೀಜರ್)ಗಳನ್ನು ಅನುಸರಿಸಿರುವುದಾಗಿ ಒತ್ತಿ ಹೇಳಿದೆ. ಅಂದು ಸೇನೆಯ ಗುಂಡಿಗೆ ಜಾವೆದ್ ಅಹ್ಮದ್ ಭಟ್, ಸುಹೈಲ್ ಜಾವೆದ್ ಲೋನ್ ಮತ್ತು ರಾಯೀಸ್ ಅಹ್ಮದ್ ಗನಾಯ್ ಎಂಬ ಮೂವರು ಯುವಕರು ಬಲಿಯಾಗಿದ್ದರು. ಅಲ್ಲಿ ಸೇರಿದ್ದ ಗುಂಪು ಸೇನೆಯ ಅಧಿಕಾರಿಯೊಬ್ಬರನ್ನು ಕೊಂದು ವಾಹನಕ್ಕೆ ಬೆಂಕಿ ಹಚ್ಚಲು ಮುಂದಾಗಿದ್ದರಿಂದ ತಮ್ಮ ಸ್ವರಕ್ಷಣೆಗಾಗಿ ಗುಂಡು ಹಾರಿಸಲೇ ಬೇಕಾಯಿತೆಂದು ಸೇನೆಯು ಹೇಳಿಕೊಳ್ಳುತ್ತಿದೆ. ಆದರೆ ಘಟನೆಯ ವಿವರಗಳು ಈ ಯಾವುದೇ ಹೇಳಿಕೆಯನ್ನು ಸಮರ್ಥಿಸುವುದಿಲ್ಲ. ವಾಸ್ತವ ಸಂಗತಿಗಳು ಬೇರೊಂದು ಕಥೆಯನ್ನೇ ಹೇಳುತ್ತಿವೆ. ಜನವರಿ ೨೪ರಂದು ಚಾಯ್ಗುಂದ್ ಪ್ರದೇಶದಲ್ಲಿ ಇಬ್ಬರು ಹಿಜ್ಬುಲ್ ಮುಜಾಹಿದ್ದೀನ್ ಸಂಘಟನೆಗೆ ಸೇರಿದ ಮಿಲಿಟೆಂಟ್ರನ್ನು ಸೇನೆಯು ಕೊಂದುಹಾಕಿತ್ತು. ಆದರಿಂದ ಅಲ್ಲಿನ ಪರಿಸ್ಥಿತಿ ಉದ್ವಿಘ್ನವಾಗಿತ್ತು. ಹೀಗಾಗಿ ಸೇನೆಯು ಗವಾನ್ಪೋರ ಮಾರ್ಗದಿಂದ ಹೋಗದಿರುವುದು ಒಳಿತೆಂದು ಪೊಲೀಸರು ಸೇನೆಗೆ ಮಾಹಿತಿ ರವಾನಿಸಿದ್ದರೆಂದು ಮುಖ್ಯಮಂತ್ರಿ ಮೆಹಬೂಬಾ ಮುಫ್ತಿಯವರು ಜನವರಿ ೨೯ರಂದು ಕಾಶ್ಮೀರದ ಶಾಸನಸಭೆಗೆ ತಿಳಿಸಿದ್ದಾರೆ. ಆ ದಿನ
ಹತರಾದ ಇಬ್ಬರು ಮಿಲಿಟೆಂಟರಲ್ಲಿ ಒಬ್ಬ ವ್ಯಕ್ತಿ ಈ ಗವನ್‌ಪೋರ ಹಳ್ಳಿಗೆ ಸೇರಿದವನಾಗಿದ್ದ. ಚಾಯ್ಗುಂದ್ನಲ್ಲಿ ೪೪-ಆರ್ಆರ್ ತುಕಡಿಗೆ ಸೇರಿದ ಸೈನಿಕರು ಇಬ್ಬರು ಮಿಲಿಟೆಂಟರನ್ನು ಕೊಂದಿದ್ದು ಮಾತ್ರವಲ್ಲದೆ ಇನ್ನೂ ಮೂವರು ನಾಗರಿಕರನ್ನು ಗಾಯಗೊಳಿಸಿದ್ದರು. ಇಬ್ಬರು ಸ್ಥಳೀಯ ಮಿಲಿಟೆಂಟರನ್ನು ಕಳೆದುಕೊಂಡಿದ್ದು ಮಾತ್ರವಲ್ಲದೆ ಸ್ಥಳೀಯವಾಸಿಗಳಿಗೆ ಗಾಯಗಳೂ ಆಗಿದ್ದರ ಪರಿಣಾಮವಾಗಿ ಆ ಪ್ರದೇಶದಲ್ಲಿ ಪರಿಸ್ಥಿತಿ ತುಂಬಾ ಗಂಭೀರವಾಗಿತ್ತು.
ಸೇನೆಯು ಪೊಲೀಸರ ಸಲಹೆಯನ್ನು ನಿರ್ಲಕ್ಷ್ಯ ಮಾಡಿತು. ಅಂದು ಬೆಳಿಗ್ಗೆ ಆ ಹಳ್ಳಿಯನ್ನು ಹಾದುಹೋದ ಮೊದಲ ಸೇನಾ ತುಕಡಿಯು ಕೊಲ್ಲಲ್ಪಟ್ಟ ಸ್ಥಳೀಯ ಯುವಕನಿಗೆ ಶ್ರದ್ಧಾಂಜಲಿ ಅರ್ಪಿಸುತ್ತಾ ಅಂಟಿಸಿದ್ದ ಭಿತ್ತಿಪತ್ರಗಳ ಬಗ್ಗೆ ಸ್ಥಳೀಯರ ಜೊತೆ ಮಾತಿನ ಚಕಮಕಿ ನಡೆಸಿತ್ತು. ಆ ದಿನ ಸುಮಾರು ಮಧ್ಯಾಹ್ನ ೩.೩೦ರ ವೇಳೆಗೆ ಮೇಜರ್ ಆದಿತ್ಯ ಕುಮಾರ್ ನೇತೃತ್ವದ ಮತ್ತೊಂದು ಸೇನಾ ತುಕಡಿಯು ಗವಾನ್ಪೋರ ಹಳ್ಳಿಯ ಮೂಲಕ ಪ್ರಯಾಣ ಮಾಡಲು ನಿರ್ಧರಿಸಿತು. ಈಗಾಗಲೇ ಸ್ಫೋಟಕ ಸನ್ನಿವೇಶದಲ್ಲಿದ್ದ ಗ್ರಾಮವೊಂದರ ಮೂಲಕ ಎರಡೆರದು ಬಾರಿ ಸೇನಾ ತುಕಡಿಯನ್ನು ಕೊಂಡೊಯ್ಯುವುದು ಮತಿಗೇಡಿ ನಿರ್ಧಾರವೇ ಆಗಿತ್ತು. ಸ್ಥಳೀಯ ಪ್ರತ್ಯಕ್ಷದರ್ಷಿಗಳ ಪ್ರಕಾರ ಒಬ್ಬ ಕಿರಿಯ ಸೇನಾಧಿಕಾರಿಯನ್ನು ಗುಂಪೊಂದು ಹತ್ಯೆ ಮಾಡಲು ಪ್ರಯತ್ನಿಸಿತ್ತು ಎಂಬುದು ಕೂಡಾ ಕಟ್ಟುಕಥೆಯೇ ಆಗಿತ್ತು. ಸೇನಾ ವಾಹನದೊಳಗೆ ಕೂತಿದ್ದ ಒಬ್ಬ ಸೇನಾಧಿಕಾರಿಯನ್ನು ಹೇಗೆ ತಾನೇ ಹೊರಗೆಳೆದು ಕೊಲ್ಲಲು ಸಾಧ್ಯ ಎಂದು ಸ್ಥಳೀಯರು ಪ್ರಶ್ನಿಸುತ್ತಾರೆ.
ಕಳೆದ ೨೦೧೭ರ ಮೇ ತಿಂಗಳಿಂದ ಪ್ರಾರಂಭವಾದ ಆಪರೇಷನ್ ಆಲ್ ಔಟ್ ಕಾರ್ಯಾಚರಣೆಯಲ್ಲಿ ಈವರೆಗೆ ೨೧೭ ಮಿಲಿಟೆಂಟುಗಳು, ೧೦೮ ನಾಗರಿಕರೂ ಮತ್ತು ೧೨೫ ಸೇನಾ ಸಿಬ್ಬಂದಿಗಳೂ ಮೃತಪಟ್ಟಿದ್ದಾರೆ. ಮೃತಪಟ್ಟ ೧೦೮ ನಾಗರಿಕರಲ್ಲಿ ೧೯ ಜನ ಸಶಸ್ತ್ರ ಮಿಲಿಟೆಂಟುಗಳ ಜೊತೆ ಸೇನಾ ಸಿಬ್ಬಂದಿಯು ಗುಡಿನ ಚಕಮಕಿ ನಡೆಸುವಾಗ ಬಲಿಯಾಗಿದ್ದಾರೆ. ಚಾಯ್ಗುಂದ್ ಮತ್ತು ಗವಾನ್ಪೊರಾದಲ್ಲಿ ಐವರು ನಾಗರಿಕರು ಬಲಿಯಾಗಿದ್ದಾರೆ.
ಅದೇನೇ ಇರಲ್ಲಿ ಪ್ರಥಮ ವರ್ತಮಾನ ವರದಿ (ಎಫ್ಐಆರ್) ಮೂಲಕ ದೂರನ್ನು ದಾಖಲಿಸುವುದು ಕೇವಲ ಮೊದಲ ಹೆಜ್ಜೆಯಷ್ಟೆ. ಸೇನಾಧಿಕಾರಿಗಳ ವಿರುದ್ಧ ತನಿಖೆಯು ಪೂರ್ಣಗೊಳ್ಳುವುದು ತುಂಬಾ ಅಪರೂಪ. ತನಿಖೆಯು ಪೂರ್ಣಗೊಂಡು ಆರೋಪಪಟ್ಟಿ (ಚಾರ್ಜ್ಶೀಟ್) ತಯಾರಾದರೂ ಅಲ್ಲಿಂದ ಮುಂದೆ ಸೇನಾ ಸಿಬ್ಬಂದಿಯನ್ನು ಕಾನೂನು ಪ್ರಕ್ರಿಯೆಗೆ ಒಳಪಡಿಸಲು ಕೋರ್ಟಿಗಾಗಲೀ ಮತ್ತು ದೂರು ದಾಖಲು ಮಾಡಿರುವ ಸಂತ್ರಸ್ತ ನಾಗರಿಕರಿಗಾಗಲೀ ಕೇಂದ್ರ ಸರ್ಕಾರದ ಅನುಮತಿಯ ಅಗತ್ಯವಿರುತ್ತದೆ. ಹೀಗಾಗಿ ಇಡೀ ಪ್ರಕ್ರಿಯೆ ಆ ಹಂತದಲ್ಲಿ ಸಂಪೂರ್ಣವಾಗಿ ಸ್ಥಗಿತಗೊಂಡುಬಿಡುತ್ತದೆ.
೨೦೧೮ರ ಜನವರಿ ೧ ರಂದು ಕೇಂದ್ರ ಸರ್ಕಾರದ ರಕ್ಷಣಾ ಮಂತ್ರಿಗಳು ರಾಜ್ಯಸಭೆಗೆ ಕೊಟ್ಟಿರುವ ಲಿಖಿತ ಉತ್ತರದ ಪ್ರಕಾರ ಸೇನಾ ಸಿಬ್ಬಂದಿಯ ಮೇಲೆ ಕಾನೂನು ಕ್ರಮಗಳನ್ನು ಜರುಗಿಸಲು ಅನುಮತಿ ಕೋರಿರುವ ೫೦ ಪ್ರಕರಣಗಳಲ್ಲಿ ೪೭ರಲ್ಲಿ ಅನುಮತಿಯನ್ನು ನಿರಾಕರಿಸಲಾಗಿದೆ ಮತ್ತು ಇನ್ನೂ ಮೂರು ಪ್ರಕರಣಗಳು ಪರಿಶೀಲನೆಯಲ್ಲಿದೆ. ಇವುಗಳಲ್ಲಿ ೧೭ ಪ್ರಕರಣಗಳು ನಾಗರಿಕರ ಹತ್ಯೆಗಳಿಗೆ ಸಂಬಂಧಪಟ್ಟವು, ೧೬ ಪ್ರಕರಣಗಳು ಸಿಬ್ಬಂದಿಯ ವಶದಲ್ಲಿರುವಾಗ ಸಾವು ಸಂಭವಿಸಿದ ಪ್ರಕರಣಗಳು, ೮ ಪ್ರಕರಣಗಳು ಸಿಬ್ಬಂದಿಯ ವಶದಲ್ಲಿರುವಾಗ ನಾಪತ್ತೆಯಾಗಿರುವ ಪ್ರಕರಣಗಳು ಮತ್ತು ೪ ಪ್ರಕರಣಗಳು ಅತ್ಯಚಾರದ ಆರೋಪದ ಪ್ರಕರಣಗಳು.
ಕಳೆದ ೨೮ ವರ್ಷಗಳಿಂದ ಜಮ್ಮು ಮತ್ತು ಕಾಶ್ಮೀರ ಪ್ರದೇಶವನ್ನು ಗಲಭೆಗ್ರಸ್ಥ ಪ್ರದೇಶವೆಂದೇ ಪರಿಗಣಿಸಲಾಗಿರುವುದರಿಂದ ತಾವು ಎಸಗುತ್ತಿರುವ ಅಪರಾಧಗಳ ಹೊಣೆಯಿಂದ ಸೇನೆ ಮತ್ತು ಅರೆಸೇನಾ ಪಡೆಗಳು ಪಾರಾಗುತ್ತಾ ಬಂದಿವೆ. ೨೮ ವರ್ಷಗಳಾದ ನಂತರವೂ ಇದೇ ಪರಿಸ್ಥಿತಿ ಮುಂದುವರೆಯುತ್ತಿದೆ ಎಂಬುದು ಭಾರತೀಯ ಜನತಾ ಪಕ್ಷದ ಸರ್ಕಾರದ ಸಂವೇದನಾ ಶೂನ್ಯತೆಯನ್ನೇ ಎತ್ತಿ ತೋರಿಸುತ್ತದೆ. ಕಾಶ್ಮೀರದ ಸಮಸ್ಯೆಗೆ ಸೇನಾತ್ಮಕ ಪರಿಹಾರವೇ ಮದ್ದು ಎಂಬ ಸೂತ್ರವನ್ನು ಮುಂದಿಡುತ್ತಾ ಅಧಿಕಾರರೂಢ ಸರ್ಕಾರಗಳು ಕಾಶ್ಮೀರದಲ್ಲಿ ಹುಟ್ಟುಹಾಕಿರುವ ಸಮಸ್ಯೆಗಳಿಗೆ, ಅದರ ಮುಂದುವರೆಕೆಗೆ ಮತ್ತು ಸಮಸ್ಯೆಯು ಮತ್ತಷ್ಟು ಬಿಗಡಾಯಿಸುತ್ತಿರುವುದಕ್ಕೂ ಈ ಪ್ರಕರಣ ಮತ್ತೊಂದು ಸಾಕ್ಷಿಯಾಗಿದೆ.
ಜನವರಿ ೨೮ರಂದು ಸೇನೆಯ ಗುಂಡಿಗೆ ಬಲಿಯಾದ ಸುಹೈಲ್ ಲೋನ್ ಅವರ ತಂದೆ ಜಾವೀದ್ ಅಹ್ಮದ್ ಲೋನ್ ಅವರು ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಗೆ ತಿಳಿಸಿದಂತೆ ನಮಗೆ ಸರ್ಕಾರದಿಂದ ಏನೂ ಬೇಕಾಗಿಲ್ಲ. ನಮಗೆ ಅವರ ಪರಿಹಾರಗಳೂ ಬೇಡ, ಉದ್ಯೋಗವೂ ಬೇಡ, ಅವರು ಮಾಡುವ ತನಿಖೆಗಳೂ ಬೇಡ. ಇದು ಅವರ ಕೋರ್ಟು, ಅವರ ಸೈನ್ಯ, ಅವರ ಪೊಲೀಸು ಮತ್ತು ಅವರದ್ದೇ ಆಡಳಿತ. ಸಂತ್ರಸ್ತ ಜನರೇ ಹೀಗೆ ಭಾವಿಸುತ್ತಿರುವಾಗ ಸೇನಾಪಡೆಗಳಿಗೆ ರಕ್ಷಣೆ ಬೇಕೆಂಬ ವಾದ ಪರಿಸ್ಥಿತಿಯ ಕ್ರೂರ ಪರಿಹಾಸ್ಯದಂತಿದೆ. ಶೋಪಿಯಾನ್ ಪ್ರಕರಣವು ಕಾಶ್ಮೀರದ ಜನಾಭಿಪ್ರಾಯವು ಸೇನಾ ದಬ್ಬಾಳಿಕೆಯ ವಿರುದ್ಧ ಗಟ್ಟಿಯಾಗಿ ರೂಪುಗೊಂಡಿದೆ ಎಂಬುದನ್ನು ತೋರಿಸುತ್ತದೆ. ವಿಪರ್ಯಾಸವೆಂದರೆ ಯಾವುದೇ ಪ್ರಜಾತಾಂತ್ರಿಕ ರಾಜಕೀಯ ಪರಿಹಾರಗಳು ಕಣ್ಣಳತೆಯಲ್ಲಿ ಕಾಣದಿರುವಾಗ ಮತ್ತು ನಿರಂತರವಾಗಿ ನ್ಯಾಯವನ್ನು ನಿರಾಕರಿಸುತ್ತಿರುವಾಗ ತಮಗೆ ಆಜಾದಿ ಬೇಕೆಂಬ ಕಾಶ್ಮೀರಗಳ ಕೂಗು ಮತ್ತಷ್ಟು ನ್ಯಾಯಸಮ್ಮತಗೊಳ್ಳುತ್ತಿದೆ.
(ಗೌತಮ್ ನವಲಾಖಾ ಅವರು ದೆಹಲಿಯ ’ಪೀಪಲ್ ಯೂನಿಯನ್ ಫಾರ್ ಡೆಮಾಕ್ರಾಟಿಕ್ ರೈಟ್ಸ್’ನ ಸದಸ್ಯರು)
ಕೃಪೆ: Economic and Political Weekly,Feb
17, 2018. Vol. 53. No.7
(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ