ಸೋಮವಾರ, ಫೆಬ್ರವರಿ 5, 2018

ಫ್ಯಾಸಿಸಂನ ಸಾಧ್ಯತೆಗಳು


     ಅನುಶಿವಸುಂದರ್ 

ಫ್ಯಾಸಿಸಂನ ವಿರೋಧಿಸುವವರ ಹೆಗಲ ಮೇಲೆ ದೊಡ್ಡ ಜವಾಬ್ದಾರಿಯಿದೆ.
Image result for fascism



ಭಾರತ ಕಮ್ಯುನಿಸ್ಟ್ ಪಕ್ಷ (ಮಾರ್ಕ್ಸ್ವಾದಿ)-ಸಿಪಿಎಂ- ಜನವರಿ ೧೯-೨೧ರವರೆಗೆ ಕೋಲ್ಕತ್ತಾದದಲ್ಲಿ ತನ್ನ ಕರಡು ರಾಜಕೀಯ ನಿರ್ಣಯದ ಬಗ್ಗೆ ಬಂದಿರುವ ತಿದ್ದುಪಡಿಗಳನ್ನು ಚರ್ಚಿಸಿ ಕರಡನ್ನು ಅಂತಿಮಗೊಳಿಸಲು ನಡೆಸಿದ ಪಕ್ಷದ ಕೇಂದ್ರ ಸಮಿತಿಯ ಸಭೆಯು ಎಡ ಮತ್ತು ಪ್ರಗತಿಪರ ವಲಯಗಳಲ್ಲಿ ಗಣನೀಯವಾದ ಆಸಕ್ತಿಯನ್ನು ಹುಟ್ಟುಹಾಕಿದ್ದು ಸಹಜವಾಗಿಯೇ ಇತ್ತು. ಭಾರತವು ಫ್ಯಾಸೀವಾದಿಗಳ ಅಥವಾ ಅರೆಫ್ಯಾಸೀ ವಾದಿಗಳ ಕಪಿಮುಷ್ಟಿಯಲ್ಲಿದೆಯೆಂಬ ಕೆಲವರ ಸಂದೇಹಗಳೇನೇ ಇದ್ದರೂ  ಒಂದೊಮ್ಮೆ ನರೇಂದ್ರ ಮೋದಿಯ ನೇತೃತ್ವದಲ್ಲಿ ಬಿಜೆಪಿ ಸರ್ಕಾರವು ಮತ್ತೊಮ್ಮೆ ೨೦೧೯ರ ಲೋಕ್ಸಭಾ ಚುನಾವಣೆಯಲ್ಲಿ ಅಧಿಕಾರವನ್ನು ಪಡೆದದ್ದೇ ಆದಲ್ಲಿ ಎಡಪಕ್ಷಗಳು ಮತ್ತೊಮ್ಮೆ ಜೀವನ್ಮರಣದ ಹೋರಾಟವನ್ನು ನಡೆಬೇಕಾದ ಚಾರಿತ್ರಿಕ ಕರ್ತವ್ಯಕ್ಕೆ ಸಿದ್ಧರಾಗಬೇಕಾಗುತ್ತದೆ. ಹೀಗಾಗಿಯೇ ಕಳೆದ ೨೦೧೬ರ ಸೆಪ್ಟೆಂಬರ್ನಿಂದ ಸಿಪಿಎಂ ಪಕ್ಷದೊಳಗೆ  ಒಂದು ಫ್ಯಾಸಿಸ್ಟ್ ಆಳ್ವಿಕೆಯು ಸ್ಥಾಪನೆಗೊಳ್ಳಲು ಬೇಕಾದ ರಾಜಕಿಯ, ಆರ್ಥಿಕ ಮತ್ತು ವರ್ಗ ಪರಿಸ್ಥಿತಿಗಳು ಭಾರತದಲ್ಲಿ ಅಸ್ಥಿತ್ವದಲ್ಲಿದೆಯೇ? ಇದ್ದಲ್ಲಿ ಅದನ್ನು ಎದುರಿಸಲು ಯಾವ ಬಗೆಯ ರಾಜಕೀಯ ರಂಗಗಳ ಮತ್ತು ಮೈತ್ರಿಗಳ ಅಗತ್ಯವಿದೆ ಎಂಬುದರ ಕುರಿತು ನಡೆಯುತ್ತಿರುವ ಅಂತರಿಕ ಚರ್ಚೆಯು ಸಾರ್ವಜನಿಕರ ಮತ್ತು ಮಾಧ್ಯಮಗಳ ಆಸಕ್ತಿಯನ್ನು ಕೆರಳಿಸಿತ್ತು.

ಸಿಪಿಎಂ ಪಕ್ಷದಲ್ಲಿ ಮಾಜಿ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ಅವರು ಪ್ರತಿನಿಧಿಸುವ ಅಭಿಪ್ರಾಯವು ಚಾಲ್ತಿಯಲ್ಲಿರುವ ಬಹುಸಂಖ್ಯಾತ ಅಭಿಪ್ರಾಯವಾಗಿದ್ದು ಅದು ಫ್ಯಾಸಿಸಂ ಸ್ಥಾಪನೆಗೊಳ್ಳಲು ಬೇಕಾದ ಸನ್ನಿವೇಶ ಭಾರತದಲ್ಲಿ ಅಸ್ಥಿತ್ವದಲ್ಲಿ ಇಲ್ಲವೆಂದೂ, ಒಂದುವೇಳೆ ಇದ್ದರೂ  ಅದು ಬಲಹೀನವಾಗಿದೆ ಎಂದು ಭಾವಿಸುತ್ತದೆ. ಆದರೆ ಮೇಲಿನಿಂದ ಪ್ರಭುತ್ವದ ಸಂಸ್ಥೆಗಳ ಮೂಲಕ ಮತ್ತು ಹಿಂದೂತ್ವ ಬ್ರಿಗೇಡುಗಳ ಮೂಲಕ ಕೆಳಗಿನಿಂದ ದೇಶದ ರಾಜಕೀಯ ಮತ್ತು ಸಮಾಜವನ್ನು ಹಿಂದೂತ್ವದ ಆಧಾರದ ಮೇಲೆ ಪುನರ್ರಚಿಸಲು ನಿರಂತರವಾಗಿ ಪ್ರಯತ್ನಿಸುತ್ತಾ ಪ್ರಜಾಸತ್ತೆ ಮತ್ತು ಜಾತ್ಯತೀತತೆಗೆ ಗಂಭೀರವಾದ ಅಪಾಯವನ್ನು ಒಡ್ಡುತ್ತಿದೆ. ಹಾಗಿದ್ದಲ್ಲಿ ಇದನ್ನು ಎದುರಿಸಲು ಏನು ಮಾಡಬೇಕು ಎಂಬ ಪ್ರಶ್ನೆಗೆ ಸಿಪಿಎಂ ಪಕ್ಷದ ಕೇಂದ್ರ ಸಮಿತಿಯ ಬಹುಸಂಖ್ಯಾತರ ಅಭಿಪ್ರಾಯವು ಹೀಗಿದೆ- ನವ ಉದಾರವಾದ ಮತ್ತು ಕ್ಕೋಮುವಾದವನ್ನು ಒಂದು ಜಂಟಿ ಹೋರಾಟವಾಗಿಯೇ ನಡೆಸಬೇಕು. ಆಳುವವರ್ಗಗಳ ನವ ಉದಾರವಾದಿ ವ್ಯವಸ್ಥೆಯನ್ನು ಬಿಜೆಪಿಯಂತೆ ಕಾಂಗ್ರೆಸ್ಸೂ ಸಹ ಜತನದಿಂದ ನಿರ್ವಹಿಸುತ್ತಿದ್ದು ಹೋರಾಟದಲ್ಲಿ ಅದರೊಂದಿಗೆ ಮೈತ್ರಿ ಸಾಧ್ಯವಾಗುವುದಿಲ್ಲ.
Related image

ಇದಕ್ಕೆ ವ್ಯತಿರಿಕ್ತವಾಗಿ ಸಿಪಿಎಂನ ಹಾಲೀ ಪ್ರಧಾನ ಕಾರ್ಯದರ್ಶಿಗಳಾದ ಸೀತಾರಾಂ ಯೆಚೂರಿಯವರು ಪ್ರತಿನಿಧಿಸುವ ಅಭಿಪ್ರಾಯವು ಕಾಂಗ್ರೆಸ್ ಜೊತೆಗೆ ಯಾವ ಮೈತ್ರಿಯೂ ಸಲ್ಲದು. ಯಾವ ಒಪ್ಪಂದವೂ ಸಲ್ಲದು ಎಂಬ ನಿಲುವು ಅಸಂಬದ್ಧವಾದದ್ದು ಎಂದು ಪ್ರತಿಪಾದಿಸುತ್ತದೆ. ಆದರೆ ಅಭಿಪ್ರಾಯಕ್ಕೆ ಕೇಂದ್ರಸಮಿತಿಯ ಸಭೆಯಲ್ಲಿ ಬಹುಮತ ದೊರೆಯದೆ ಸೋಲನ್ನಪ್ಪಿದೆ. ಹೀಗಾಗಿ ತಿದ್ದುಪಡಿಯಾದ ರಾಜಕೀಯ ನಿರ್ಣಯವು ಕಾಂಗ್ರೆಸ್ಸಿನ ಜೊತೆಗೆ ಯಾವುದೇ ರಾಜಕೀಯ ಮೈತ್ರಿ ಅಥವಾ ಒಪ್ಪಂದಗಳನ್ನು ಸಂಪೂರ್ಣವಾಗಿ ನಿರಾಕರಿಸುತ್ತದೆ. ಇನ್ನು ಇದರಲ್ಲಿ ಏನಾದರೂ ಬದಲಾವಣೆಯಾಗಬೇಕಿದ್ದರೆ ಏಪ್ರಿಲ್ನಲ್ಲಿ ನಡೆಯಲಿರುವ ಪಕ್ಷದ ಮಹಾಧಿವೇಶನದಲ್ಲಿ ಮಾತ್ರ ಸಾಧ್ಯ.

ಸಿಪಿಎಂನ ನಿಲುವನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳದೆ ಒಟ್ಟಾರೆ ಇಂದು ಎಡಪಂಥವು ಎದುರಿಸುತ್ತಿರುವ ಸವಾಲನ್ನು ಹಾಗೂ ೧೯೨೦ ಮತ್ತು ೧೯೩೦ರ ದಶಕದಲ್ಲಿ ಜರ್ಮನಿಯ ಎಡಪಂಥೀಯರು ಎಸಗಿದ ತಪ್ಪುಗಳನ್ನು ಗಮನದಲ್ಲಿಟ್ಟುಕೊಂಡು ಹೇಳುವುದಾದರೆ ಭಾರತದ ಎಡಪಂಥೀಯರು ಮೊದಲು ಎಲ್ಲಾ ಭಾರತೀಯ ಎಡಪಂಥೀಯರ ಐಕ್ಯರಂಗವನ್ನು ರೂಪಿಸಬೇಕಿದೆ. ಸಂಸದೀಯ ಎಡಪಕ್ಷಗಳನ್ನು ಮಾತ್ರವಲ್ಲದೆ ಕ್ರಾಂತಿಕಾರಿ ಎಡಪಕ್ಷಗಳನ್ನೂ ಮತ್ತು ಸಮಾಜವಾದಿಗಳನ್ನೂ ಸಹ ಅದರೊಳಗೆ ತಂದುಕೊಳ್ಳಬೇಕಿದೆ. ಕಮ್ಯುನಿಸ್ಟ್ ಎಡಪಂಥವು ತನ್ನ ಹೆಡ್ಡ ಸಂಕುಚಿತವಾದದಿಂದ ಹೊರಬಂದು ಸಮಾಜವಾದಿ ಧಾರೆಯಲ್ಲಿರುವ ಬಹುತ್ವವನ್ನು ಗೌರವಿಸಬೇಕಾದ ಅಗತ್ಯವಿದೆ. ಎಲ್ಲಕ್ಕಿಂತ ಹೆಚ್ಚಾಗಿ ಐಕ್ಯರಂಗವು ತನ್ನ ಕಾರ್ಯಕ್ರಮಗಳಲ್ಲಿ ನವ ಉದಾರವಾದದ ವಿರೋಧಿ ಕಾರ್ಯಸೂಚಿಯನ್ನೂ ಹೊಂದಿರುವ ಅಗತ್ಯವಿದೆ. ನವ ಉದಾರವಾದಿ ಯುಗದಲ್ಲಿ ನಡೆಯುತ್ತಿರುವ ಬಂಡವಾಳ ಕ್ರೂಢೀಕರಣದ ಪ್ರಕ್ರಿಯೆಯಲ್ಲಿ ಸಂಭವಿಸುತ್ತಿರುವ ದೈತ್ಯ ಸ್ವರೂಪಿ ವರ್ಗ ಧೃವೀಕರಣದ ವಿರುದ್ಧ ಮತ್ತು ಅದರ ಪರಿಣಾಮವಾಗಿ ಹಣ ಮತ್ತು ಸಂಪತ್ತನ್ನು ಉಳ್ಳವರು ಇಡೀ ಚುನಾವಣಾ ಪ್ರಕ್ರಿಯೆಯನ್ನೇ ಅಪಹರಿಸುತ್ತಿರುವುದರ ವಿರುದ್ಧ ಇಂಥಾ ಒಂದು ನೈಜ ಐಕ್ಯರಂಗವು ಸೆಣಸಬೇಕಾಗುತ್ತದೆ.

ಅಂಥ ಒಂದು ಎಡ ಐಕ್ಯರಂಗವು ಎಂದು, ಯಾವ ಸಂದರ್ಭದಲ್ಲಿ ಮತ್ತು ಯಾವ ಶರತ್ತಿನ ಆಧಾರದಲ್ಲಿ ಉದಾರವಾದಿ ಬಂಡಾವಾಳಶಾಹಿ ಪಕ್ಷಗಳ ಜೊತೆ ಸೇರಿ ಒಂದು ಜನಪ್ರಿಯ ರಂಗ (ಪಾಪ್ಯುಲರ್ ಫ್ರಂಟ್) ಅನ್ನು ರಚಿಸಬಹುದು ಎಂದು ತೀರ್ಮಾನ ತೆಗೆದುಕೊಳ್ಳಬಹುದು. ಅಂಥಾ ಐಕ್ಯರಂಗವೇ ಮುಂದೆ ಯಾವ ಶರತ್ತಿನಮೇಲೆ ಬಲಪಂಥೀಯ ಪಕ್ಷಗಳ ಜೊತೆ ಒಂದು ಫ್ಯಾಸಿಸ್ಟ್ ವಿರೋಧಿ ಶಕ್ತಿಗಳ ರಾಷ್ಟ್ರೀಯ ರಂಗದಲ್ಲಿ ಸೇರಬೇಕು ಅಥವಾ ಸೇರಬಾರದು ಎಂಬುದರ ಬಗ್ಗೆ ತೀರ್ಮಾನ ತೆಗೆದುಕೊಳ್ಳಬೇಕು. ಐಕ್ಯರಂಗವು ತಾರತಮ್ಯ ಮತ್ತು ದ್ವೇಷಗಳು ಅದರಲ್ಲೂ ಮುಸ್ಲಿಮರ ವಿರುದ್ಧದ ದ್ವೇಷದ ಮೂಲವು  ಕೇವಲ ಅವರ ಧಾರ್ಮಿಕ ಹಿನ್ನೆಲೆಯಲ್ಲಿ ಮಾತ್ರ ಇಲ್ಲವೆಂಬುದನ್ನು ಬದಲಿಗೆ ವ್ಯವಸ್ಥೆಯಲ್ಲಿ ಅಂತರ್ಗತವಾಗಿರುವ ಅಸಮಾನತೆಯಲ್ಲಿದೆಯೆಂಬುದನ್ನೂ ಮತ್ತು ಐತಿಹಾಸಿಕವಾಗಿ  ಮುಸ್ಲಿಮರಲ್ಲಿ ಬಹುಪಾಲು ಜನ ತುಳಿತಕ್ಕೊಳಗಾದ ಜಾತಿ ಮತ್ತು ವರ್ಗಗಳಿಂದ ಮತಾಂತರವಾದವರೆಂಬುದನ್ನು ಮನಗಾಣಬೇಕು. ಮತ್ತು ವಿಷಯಗಳನ್ನು ಜನಪ್ರಿಯರಂಗದಲ್ಲೂ ಮತ್ತು ರಾಷ್ಟ್ರೀಯ ರಂಗದಲ್ಲೂ ಪ್ರಸ್ತಾಪಿಸಬೇಕು.

ಇಂದು ಬಹಳಷ್ಟು ಮುಸ್ಲಿಮ್ ಯುವಕರು ಪೊಲೀಸರ ಕೈಯಲ್ಲಿ ಮತ್ತು ನ್ಯಾಯಾಂಗ ವ್ಯವಸ್ಥೆಯ ಕೈಯಲ್ಲಿ ತುಂಬಾ ನರಳಿದ್ದಾರೆ. ಅಲ್ಲದೆ ಹಿಂದೂತ್ವವಾದಿ ರಾಷ್ಟ್ರೀಯತೆಯು ಪ್ರಭುತ್ವದ ಸಕ್ರಿಯ ಸಹಕಾರದೊಂದಿಗೆ ಮುಸ್ಲಿಮರನ್ನು ಅವಮಾನಿಸುತ್ತಿದೆ ಮತ್ತು ದಮನಿಸುತ್ತಿದೆ. ಪೊಲೀಸ್ ಮತ್ತು ನ್ಯಾಯಾಂಗ ವ್ಯವಸ್ಥೆಯು ಮುಸ್ಲೀಮ್ ಸಮುದಾಯಕ್ಕೆ ನ್ಯಾಯವನ್ನು ಒದಗಿಸುವಲ್ಲಿ ವಿಫಲವಾಗಿರುವುದರಿಂದ ಸಮುದಾಯದ ಬಹುಪಾಲು ಜನ ವ್ಯವಸ್ಥೆಯ ಅಂಗಸಂಸ್ಥೆಗಳಲ್ಲಿ ನಿಧಾನಕ್ಕೆ ನಂಬಿಕೆ ಕಳೆದುಕೊಳ್ಳುತ್ತಿರುವಂತೆ ಕಾಣುತ್ತಿದೆ. ಯಾವುದೇ ಐಕ್ಯರಂಗ ಅಥವಾ ಜನಪ್ರಿಯ ರಂಗವು ಎಲ್ಲಾ ದಮನಿತ ಮುಸ್ಲಿಮರನ್ನೂ ಮತ್ತು ಹಿಂದೂತ್ವವಾದಿ ಬ್ರಾಹ್ಮಣೀಯ ವ್ಯವಸ್ಥೆಯ ಬಲಿಪಶುಗಳಾಗಿರುವ ಎಲ್ಲರನ್ನೂ ಅದರಲ್ಲೂ ಆರ್ಥಿಕವಾಗಿ ಶೋಷಣೆಗೊಳಗಾಗಿರುವ ಮತ್ತು ಸಾಮಾಜಿಕವಾಗಿ ದಮನಕ್ಕೊಳಗಾಗಿರುವ ಎಲ್ಲರನ್ನೂ ತನ್ನ ತೆಕ್ಕೆಗೆ ತೆಗೆದುಕೊಳ್ಳುವಂತಿರಬೇಕು.

ಫ್ಯಾಸಿಸಂ/ಅರೆಫ್ಯಾಸಿಸಂನ ಹುಟ್ಟಿಗೆ ಕಾರಣವಾಗುವ ಸಮಾಜೋ-ಆರ್ಥಿಕ ಮತ್ತು ಮಾನಸಿಕ ಪರಿಸ್ಥಿತಿಗಳ ಬೇರುಗಳು ಎಲ್ಲಿವೆ ಎಂದು ಅರ್ಥಮಾಡಿಕೊಳ್ಳುವುದರಿಂದ ಮಾತ್ರ ಒಂದು ಐಕ್ಯರಂಗವು ಅದನ್ನು ಹೊಡೆದೋಡಿಸುವ ಬಗೆಗಗಳನ್ನು ಅನ್ವೇಷಿಸಲು ಸಾಧ್ಯವಾಗುತ್ತದೆ. ಆಗ ಮಾತ್ರ ಫ್ಯಾಸಿಸ್ಟ್/ಅರೆಫ್ಯಾಸಿಸ್ಟ್ ಧೋರಣೆಗಳ ವಿರುದ್ಧ ಬಹುಸಂಖ್ಯಾತ ಜನಸ್ತೋಮವನ್ನು ಅಣಿನೆರೆಸಲು ಅಗತ್ಯವಿರುವಂಥ ಒಂದು ಜನಪ್ರಿಯರಂಗವನ್ನೋ ಅಥವಾ ಒಂದು ರಾಷ್ಟ್ರೀಯ ರಂಗವನ್ನೋ ಅತ್ಯಂತ ಜಾಣ್ಮೆಯಿಂದ ಕಟ್ಟಬಹುದಾಗಿದೆ. ಅದೇ ವೇಳೆಯಲ್ಲಿ ೨೦೧೯ರ ಚುನಾವಣೆಯಲ್ಲಿ ಹಿಂದೂತ್ವವಾದಿ ರಾಷ್ಟ್ರೀಯತ ಚಳವಳಿಯಿಂದ ಬೆಂಬಲಿಸಲ್ಪಟ್ಟ ಸಂಘಪರಿವಾರದ ರಾಜಕೀಯ ಪಕ್ಷವೇ ಅಧಿಕಾರಕ್ಕೆ ಬಂದುಬಿಟ್ಟರೆ ತನ್ನ ಅಂತಿಮ ಗುರಿಯಾದ ಹಿಂದೂ ರಾಷ್ಟ್ರವನ್ನು ನಿರ್ಮಿಸಲು ಉದಾರವಾದಿ-ಪ್ರಜಾತಂತ್ರವನ್ನೇ ಕಿತ್ತುಹಾಕುವ ಸಾಧ್ಯತೆಯೂ ಇದೆ ಎಂಬುದನ್ನೂ ಸಹ ಮರೆಯಬಾರದು.

  ಕೃಪೆ: Economic and Political Weekly,Jan 27,  2018. Vol. 53. No. 4
  (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )






ಕಾಮೆಂಟ್‌ಗಳಿಲ್ಲ: