ಸೋಮವಾರ, ಫೆಬ್ರವರಿ 5, 2018

ಸರಿಯಾದ ಕ್ರಮಗಳಿಂದ ಮಾತ್ರ ಉದ್ಯೋಗಗಳು ಸೃಷ್ಟಿಯಾಗುತ್ತವೆ


    ಅನುಶಿವಸುಂದರ್ 
ದೊಡ್ಡಮಟ್ಟದಲ್ಲಿ ಮತ್ತು ನಿಯಮಿತವಾಗಿ ನಡೆಸುವ ಸಮೀಕ್ಷೆಗಳಿಂದ ಮಾತ್ರ ಉದ್ಯೋಗಗಳ ಬಗ್ಗೆ ಸರಿಯಾದ ವಾಸ್ತವಾಂಶಗಳು ದೊರೆಯುತ್ತದೆಯೇ ವಿನಃ ದಾರಿತಪ್ಪಿಸುವ ಅಕಿಅಂಶಗಳಿಂದಲ್ಲ.
 Image result for unemployment in india
ದೃಶ್ಯಮಾಧ್ಯಮಗಳಲ್ಲಿ ಇತ್ತೀಚೆಗೆ ಪ್ರಕಟವಾದ ಸಂದರ್ಶನವೊಂದರಲ್ಲಿ ಪ್ರಧಾನಿ ಮೋದಿಯವರು ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್) ನಲ್ಲಿ ೧೮ ರಿಂದ ೨೫ ವಯೋಮಾನದ ೭೦ ಲಕ್ಷ ಖಾತೆಗಳು ಪ್ರಾರಂಭವಾಗಿವೆ ಎಂದು ಇತ್ತೀಚೆಗೆ ಒಂದು ಸ್ವತಂತ್ರ ಸಂಶೋಧನಾ ಏಜೆನ್ಸಿಯೊಂದು ಹೇಳಿದೆ ಎಂದು ಕೊಚ್ಚಿಕೊಂಡರು. ಆದರೆ ಯಾವ ಅವಧಿಯಲ್ಲಿ ಹೆಚ್ಚುವರಿ ಉದ್ಯೋಗಗಳು ಸೃಷ್ಟಿಯಾದವೆಂದು ಹೇಳುವ ಗೋಜಿಗೆ ಪ್ರಧಾನಿಗಳು ಹೋಗಲಿಲ್ಲ. ಬದಲಿಗೆ ಇದು ಹೊಸ ಉದ್ಯೋಗ ಸೃಷ್ಟಿಯಾಗಿರುವುದನ್ನು ತೋರಿಸುವುದಿಲ್ಲವೇ? ಎಂದು ಮರುಪ್ರಶ್ನೆ ಮಾಡಿದರು. ಅಂಕಿಅಂಶಗಳನ್ನು ಅವರು ನೀತಿ ಅಯೋಗಕ್ಕೆ ಸಲ್ಲಿಸಲಾದ ಒಂದು ವರದಿಯನ್ನು ಆಧರಿಸಿ ಉಲ್ಲೇಖಿಸುತ್ತಿದ್ದದ್ದು ಸ್ಪಷ್ಟ. ವರದಿಯಾದರೋ ೨೦೧೮ರ ಮಾರ್ಚ್ ೩೧ರವರೆಗೆ ಸೃಷ್ಟಿಯಾಗಬಹುದಾದ ಉದ್ಯೋಗಗಳ ಬಗ್ಗೆ ಒಂದು ಅಂದಾಜನ್ನಷ್ಟೆ ಮುಂದಿಟ್ಟಿದೆ. ಆದರೆ ಉದ್ಯೋಗ ಸೃಷ್ಟಿಯ ಬಗ್ಗೆ ಮತ್ತು ಒಟ್ಟಾರೆ ಆರ್ಥಿಕತೆಯ ಇತರ ಅಂಶಗಳ ಬಗ್ಗೆ ಲಭ್ಯವಿರುವ ಎಲ್ಲಾ ಮಾನದಂಡಗಳೂ ಕಳೆದ ವರ್ಷಕ್ಕಿಂತೆ ೨೦೧೭-೧೮ರ ಸಾಲಿನಲ್ಲಿ ಹೆಚ್ಚು ಉದ್ಯೋಗ ಸೃಷ್ಟಿಯಾಗುವ ಸಾಧ್ಯತೆಗಳನ್ನು ಸಂಪೂರ್ಣವಾಗಿ ಅಲ್ಲಗಳೆಯುತ್ತವೆ.

ನೀತಿ ಅಯೋಗಕ್ಕೆ ಸಲ್ಲಿಸಲಾದ ವರದಿಯ ಹೆಸರು ಭಾರತದಲ್ಲಿನ ತಿಂಗಳ ಸಂಬಳಗಳ ವರದಿಗಾರಿಕೆಯ ಕುರಿತು. ಇದು ಭಾರತದಲ್ಲಿ ಉದ್ಯೋಗ ಸೃಷ್ಟಿಯ ಕುರಿತಾದ ತಿಳವಳಿಕೆಯನ್ನು ಬದಲಿಸಲು ಸರ್ಕಾರದ ಆಸ್ಥಾನ ಬುದ್ಧಿಜೀವಿಗಳು ನಡೆಸುತ್ತಿರುವ ದೊಡ್ಡ ಪ್ರಯತ್ನದ ಭಾಗವಾಗಿದೆ. ಅವರ ಪ್ರಕಾರ ನಮ್ಮ ತಿಳವಳಿಕೆಯಲ್ಲಿ ಬದಲಾವಣೆ ಬರುವ ಅಗತ್ಯ ಏಕಿದೆಯೆಂದರೆ (ಇದನ್ನು ಕೆಲವು ಕಾರ್ಮಿಕ ಅರ್ಥಶಾಸ್ತ್ರಜ್ನರೂ ಸಮ್ಮತಿಸುತ್ತಾರೆ) ಭಾರತದಲ್ಲಿ ಉದ್ಯೋಗಗಳ ಗಣನೆಯ ಮಾನದಂಡಗಳಲ್ಲಿ ಕೆಲವು ದೌರ್ಬಲ್ಯಗಳಿವೆ: ಸಣ್ಣ ಸ್ಯಾಂಪಲ್ಗಳು, ಅನಿಯಮಿತವಾದ ಸಮೀಕ್ಷೆಗಳು ಮತ್ತು ಅತ್ಯಂತ ವಿಳಂಬದಿಂದ ಅಂಕಿಅಂಶಗಳನ್ನು ಬಿಡುಗಡೆ ಮಾಡುವುದು. ಹೀಗಾಗಿ ದೊಡ್ಡ ಸ್ಯಾಂಪಲ್ಗಳನ್ನು ಆಧರಿಸಿದ ಸಮೀಕ್ಷೆ ನಡೆಸಬೇಕೆಂದೂ ಮತ್ತು ಸೂಚಕಾಂಶಗಳು ಸಮಕಾಲೀನವಾಗಿರುವಂತೆ ನೋಡಿಕೊಳ್ಳಲು ಅದನ್ನು ತ್ವರಿತವಾಗಿ ಬಿಡುಗಡೆ ಮಾಡಬೇಕೆಂದೂ ತುಂಬಾ ದಿನಗಳಿಂದಲೂ ಒತ್ತಡವಿದೆ. ಅದನ್ನು ಸಾಧ್ಯಗೊಳಿಸಲು ಇತರ ಎಲ್ಲಾ ಕ್ರಮಗಳ ಜೊತೆಗೆ ಉದ್ಯೋಗಿಗಳ ಭವಿಷ್ಯ ನಿಧಿ ಸಂಘಟನೆ (ಇಪಿಎಫ್), ಉದ್ಯೋಗಿಗಳ ರಾಜ್ಯ ವಿಮಾ ನಿಗಮ (ಇಎಸ್ಐಸಿ), ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್ಪಿಎಸ್)ನಂಥ ಆಡಳಿತಾತ್ಮಕ ಅಂಕಿಅಂಶಗಳನ್ನು ಬಳಸಿ ಕಾರ್ಮಿಕ ಮಾರುಕಟ್ಟೆಯ ಬಗ್ಗೆ ಒಂದು ಅಂದಾಜನ್ನು ಪಡೆಯಬಹುದೆಂದು ಉದ್ಯೋಗ ಸಂಬಂಧೀ ಅಂಕಿಅಂಶಗಳ ಸುಧಾರಣೆಯ ಬಗೆಗಿನ ಟಾಸ್ಕ್ ಫೋರ್ಸ್ ವರದಿ (೨೦೧೭)ಯು ತಿಳಿಸುತ್ತದೆ
Image result for unemployment in india

ಅದು ಉದ್ಯೋಗ ಸೃಷ್ಟಿಯ ಬಗೆಗೆ ಅಂದಾಜನ್ನು ಪಡೆಯಲು ಬಗೆಯ ಅಂಕಿಅಂಶಗಳನ್ನು  ಬಳಸಿಕೊಂಡು ಪ್ರಸ್ತುತ ಹಣಕಾಸು ವರ್ಷದಲ್ಲಿ ಪ್ರತಿತಿಂಗಳು . ಲಕ್ಷ ವ್ಯಕ್ತಿಗಳು ಸಂಬಳದಾರರ ಪಟ್ಟಿಗೆ ಸೇರಲಿದ್ದಾರೆಂದು ತೀರ್ಮಾನಿಸುತ್ತದೆ. ಸ್ಪಷ್ಟವಾಗಿ ಕಾಣುವಂತೆ ಬಗೆಯ ಸಾಮಾಜಿಕ ಕಲ್ಯಾಣ ಯೋಜನೆಗಳಿಗೆ ಹೊಸದಾಗಿ ಸೇರ್ಪಡೆಯಾಗುವ ಉದ್ಯೋಗಿಗಳನ್ನು ವರದಿಯು ಹೊಸ ಉದ್ಯೋಗಿಗಳೇ ಎಂಬಂತೆ ಪರಿಗಣಿಸಿದೆ. ಅದೇನೇ ಇದ್ದರೂ ಅಧ್ಯಯನಕ್ಕೆ ಬಳಸಲಾದ ಮೇಲೆ ಹೇಳಲಾದ ಆಡಳಿತಾತ್ಮಕ ಅಂಕಿಅಂಶಗಳು ಒಟ್ಟಾರೆ ಕಾರ್ಮಿಕರ ಅತ್ಯಲ್ಪ ಭಾಗದ ಮಾಹಿತಿಯನ್ನು ಮಾತ್ರ ನೀಡುತ್ತದೆ. ಹೀಗಾಗಿ ಕಾರ್ಮಿಕ ಮಾರುಕಟ್ಟೆಯ ಇತರ ಅಂಶಗಳನ್ನು  ಮತ್ತು ಒಟ್ಟಾರೆ ಪರಿಸ್ಥಿತಿಯನ್ನು ಗಮನಿಸದೆ ಕೇವಲ ಇಷ್ಟನ್ನು ಮಾತ್ರ ಗಮನದಲ್ಲಿರಿಸಿಕೊಂಡು ಹೊಸ ಉದ್ಯೊಗಳ ಸೃಷ್ಟಿಯ ಬಗ್ಗೆ ಮಾತನಾಡುವುದು ಅರ್ಥಹೀನ. ಹೆಚ್ಚೆಂದರೆ ಅಂಕಿಅಂಶಗಳು ಯಾವ ಪ್ರಮಾಣದಲ್ಲಿ ಈಗಾಗಲೇ ಇರುವ ಉದ್ಯೋಗಿಗಳು ಸಾಮಾಜಿಕ ಭದ್ರತಾ ಯೋಜನೆಗಳ ಫಲಾನುಭವಿಗಳೂ ಆಗುತ್ತಿದ್ದಾರೆಂದು (ಔಪಚಾರಿಕ ಉದ್ಯೋಗಿಗಳಾಗುತ್ತಿರುವ ಪ್ರಮಾಣ) ಹೇಳುತ್ತದೆಯೇ ವಿನಃ ಹೊಸ ಉದ್ಯೋಗಗಳ ಸೃಷ್ಟಿಯ ಬಗ್ಗೆಯಂತೂ ಖಂಡಿತಾ  ಹೇಳುವುದಿಲ್ಲ.

ಟಾಸ್ಕ್ಫೋರ್ಸ್ ವರದಿಯು ಆಡಳಿತಾತ್ಮಕ ಅಂಕಿಅಂಶಗಳ ನ್ಯೂನತೆಯೂ ಬಗ್ಗೆಯೂ ಹೇಳುತ್ತದೆ. ಅಂಕಿಅಂಶಗಳು ಒಂದು ನಿರ್ದಿಷ್ಟ ಅಂಶದ ಕುರಿತಾಗಿ ಮಾತ್ರವಿದ್ದು ಅದನ್ನು ಇತರ ವಿದ್ಯಮಾನಗಳಿಗೆ ಬಳಕೆ ಮಾಡಿಕೊಂಡಾಗ ದಾರಿತಪ್ಪಿಸುವ ಎಲ್ಲಾ ಸಾಧ್ಯತೆಯೂ ಇರುತ್ತದೆ. ಸರ್ಕಾರದ ನೀತಿಗಳು ಬದಲಾದಂತೆ ಅಂಕಿಅಂಶಗಳು ಹೊರಡಿಸುವ ಧ್ವನಿಗಳು ಬದಲಾಗುತ್ತಾ ಹೋಗುತ್ತದೆ. ಇವನ್ನು ಜಾರಿಗೊಳಿಸುವ ಉದ್ದೇಶ ಮತ್ತು ತೀವ್ರತೆಗಳು ವರ್ಷದಿಂದ ವರ್ಷಕ್ಕೆ ಬದಲಾಗುತ್ತಾ ಹೋಗುವ ಸಾಧ್ಯತೆಯೂ ಇದ್ದೇ ಇದೆ. ಸಾಮಾಜಿಕ ಭದ್ರತಾ ಯೋಜನೆಗಳಲ್ಲಿ ಹೆಚ್ಚೆಚ್ಚು ಕಾರ್ಮಿಕರನ್ನು ಸೇರಿಸಿಕೊಳ್ಳಬೇಕೆಂಬ ಒತ್ತಡದಿಂದಾಗಿ ಅಂಕಿಅಂಶಗಳು ಹೆಚ್ಚಾಗಬಹುದು. ಅದನ್ನೇ ಉದ್ಯೋಗ ಸೃಷ್ಟಿಯನ್ನು ಸೂಚಿಸುವ ಅಂಕಿಅಂಶಗಳಾಗಿ ಬಳಸಿದರೆ ದಾರಿ ತಪ್ಪುತ್ತೇವೆ. ಉದ್ಯೋಗಿಗಳ ಭವಿಷ್ಯ ನಿಧಿ ಇಲಾಖೆಯು ಇತ್ತೀಚಿನ ಸಮಯದಲ್ಲಿ ಸಕ್ರಿಯವಾಗಿದ್ದು ಎಲ್ಲಾ ಸರ್ಕಾರಿ ಸಂಸ್ಥೆಗಳಲ್ಲಿ ನೇಮಕವಾಗಿರುವ ಗುತ್ತಿಗೆ ಕಾರ್ಮಿಕರನ್ನು ಕಡ್ಡಾಯವಾಗಿ ಭವಿಷ್ಯ ನಿಧಿ ಮತ್ತು ಪಿಂಚಣಿ ಯೋಜನೆಗಳಲ್ಲಿ ಸೇರ್ಪಡೆ ಮಾಡಿಸಲು ೨೦೧೭ರಲ್ಲಿ ಒಂದು ಆಂದೋಲನವನ್ನೇ ಕೈಗೊಂಡಿತ್ತು. ಹಾಗೆಯೇ ಒಬ್ಬ ತಾತ್ಕಾಲಿಕ ಉದ್ಯೋಗಿ ಖಾಯಂ ಆದಾಗಲೂ ಅದು ಸಂಬಳದಾರರ ಖಾತೆಯ ಸಂಖ್ಯೆಯನ್ನು ಹೆಚ್ಚಿಸುತ್ತದೆಯೇ ವಿನಃ ಉದ್ಯೋಗವನ್ನಲ್ಲ. ಹಾಗೆಯೇ ಭವಿಷ್ಯ ನಿಧಿ, ಪಿಂಚಣಿ ಮತ್ತು ರಾಜ್ಯ ವಿಮೆಯಂಥ ಯೋಜನೆಗಳಲ್ಲಿ ಒಂದೇ ಹೆಸರಿನ ಪುನರವರ್ತೆನೆಯ ಅವಕಾಶಗಳು ಹೆಚ್ಚು ಎಂಬುದರ ಬಗ್ಗೆಯೂ ವರದಿಯು ಎಚ್ಚರಿಕೆ ನೀಡುತ್ತದೆ. ಬಗೆಯ ಪುನರಾವರ್ತನೆಯನ್ನು ತಡೆಗಟ್ಟಿದರೂ ಸಹ ಅಂಕಿಅಂಶಗಳಲ್ಲಿನ ಲೋಪಗಳು ಬಗೆಹರಿದುಬಿಡುತ್ತದೆ ಎಂದೇನಲ್ಲ.

೨೦೧೬-೧೭ ಮತ್ತು ೨೦೧೭-೧೮ ಎರಡು ವರ್ಷಗಳೂ ಸಹ ಭಾರತದ ಆರ್ಥಿಕತೆಯ ಮಟ್ಟಿಗೆ ಅಸಾಧಾರಣ ವರ್ಷಗಳಾಗಿವೆ. ನೋಟು ನಿಷೇಧ ಮತ್ತು ಜಿಎಸ್ಟಿ ಕ್ರಮಗಳ ಮೂಲಕ ಸರ್ಕಾರವೂ ಅಸಂಘಟಿತ ವಲಯದ ಮೇಲೆ ದಾಳಿಯನ್ನೇ ನಡೆಸಿತು. ಹೀಗಾಗಿ ಅಸಂಘಟಿತ ಕ್ಷೇತ್ರದ ಬಹುಪಾಲು ಜನ ಒತ್ತಡಕ್ಕೆ ಒಳಪಟ್ಟು ಸರ್ಕಾರದ ನಿಯಂತ್ರಣಗಳಿಗೆ ತಲೆಬಾಗಬೇಕಾಯಿತು. ಇದರಿಂದಾಗಿ ಕೆಲವರ ವ್ಯವಹಾರ-ಉದ್ಯಮಗಳೇ ಅಸುನೀಗಿದವು. ಕಾರಣಕ್ಕಾಗಿ ಉಂಟಾಗಿರುವ ಬಲವಂತದ  ಔಪಚಾರೀಕರಣವು ಸಾಮಾಜಿಕ ಭದ್ರತಾ ಯೋಜನೆಗಳಲ್ಲಿನ ಸೇರ್ಪಡೆಗಳನ್ನು ಹೆಚ್ಚಿಸಿರಬಹುದೇ ವಿನಾ ಒಟ್ಟಾರೆಯಾಗಿ ಉದ್ಯೋಗದಲ್ಲಿ ಹೆಚ್ಚಳವಾಗಿದೆಯಂದಲ್ಲ. ಹೀಗಾಗಿ ಸಮೀಕ್ಷೆಯನ್ನು ಆಧರಿಸಿದ ಅಧ್ಯಯನಕ್ಕೆ ಪರ್ಯಾಯವಾಗಿ ಅಂಕಿಅಂಶಗಳನ್ನು ಬಳಸುವುದು ದಾರಿ ತಪ್ಪಿಸುವ ವಿಧಾನವೇ ಆಗಿದೆ.

 ಕುತೂಹಲಕಾರಿ ಆಂಶವೆಂದರೆ ನೀತಿ ಆಯೋಗಕ್ಕೆ ವರದಿಯನ್ನು ಸಲ್ಲಿಸಿದ ವರದಿಯ ಕರ್ತೃಗಳು ತಾವು ಅಳವಡಿಸಿರುವ ವಿಧಾನವು ಅಮೆರಿಕದಲ್ಲಿ ಕಾರ್ಮಿಕ ಸಂಬಂಧೀ ಅಂಕಿಅಂಶಗಳ ಇಲಾಖೆಯು ಕೃಷಿಯೇತರ ಸಂಬಳದಾರರ ವರದಿಯನ್ನು ತಯಾರಿಸುವ ಬಗೆಯಲ್ಲೇ ಭಾರತದಲ್ಲೂ ಅಂಥಾ ಅಂಕಿಅಂಶಗಳನ್ನು  ಸಂಗ್ರಹಿಸಲು ಸಹಾಯ ಮಾಡುತ್ತದೆಂದು ಹೇಳುತ್ತದೆ. ಆದರೆ ಅಮೆರಿಕದ ಕಾರ್ಮಿಕ ಅಂಕಿಅಂಶಗಳ ಇಲಾಖೆಯು ಕೃಷಿಯೇತರ ಸಂಬಳದಾರರ ಯಾದಿಯನ್ನು ಸಿದ್ಧಪಡಿಸಲು ದೊಡ್ಡ ಸ್ಯಾಂಪಲಗಳನ್ನು ಆಧರಿಸಿ ನಡೆಸಲಾದ ಅಧ್ಯಯನಗಳ ತ್ವರಿತ ವರದಿಗಳನ್ನೂ, ಹಾಗೂ ಮನೆಮನೆ ಸಮೀಕ್ಷೆಗಳನ್ನು ಪ್ರಧಾನವಾಗಿ ಆಧರಿಸುತ್ತದೆ. ಸಮೀಕ್ಷೆಗಳು ಒಂದು ರೀತಿಯಲ್ಲಿ ಭಾರತದ ಕಾರ್ಮಿಕ ಇಲಾಖೆಯು ನಡೆಸುವ ಗೃಹ ಸಮೀಕ್ಷೆಗಳ ರೀತಿಯಲ್ಲೇ ಇದ್ದರೂ ಅಮೆರಿಕದಲ್ಲಿ ಸ್ಯಾಂಪಲ್ಗಳು ದೊಡ್ಡ ಗಾತ್ರದವಾಗಿರುತ್ತವೆ, ಸಮೀಕ್ಷೆಗಳು ನಿಯಮಿತವಾಗಿ ನಡೆಯುತ್ತಿರುತ್ತವೆ ಮತ್ತು ಅದರ ವರದಿಗಳು ತ್ವರಿತವಾಗಿ ಬಿಡುಗಡೆಯಾಗುವ ವ್ಯವಸ್ಥೆಯನ್ನೂ ಹೊಂದಿವೆ. ಸ್ಪಷ್ಟವಾಗಿ ಎದ್ದು ಕಾಣುವುದೆಂದರೆ ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಸಂಗ್ರಹಿಸಲಾಗುವ ಆಡಳಿತಾತ್ಮಕ ಅಂಕಿಅಂಶಗಳು ಉದ್ಯಮಗಳ ಮತ್ತು ಗೃಹ ಸಮೀಕ್ಷೆಗಳಿಗೆ ಪರ್ಯಾಯವಾಗಲು ಸಾಧ್ಯವೇ ಇಲ್ಲ.

 ಕಾರ್ಮಿಕ ಮಾರುಕಟ್ಟೆಯ ಅಧ್ಯಯನದಲ್ಲಿ ಉದ್ಯೋಗಗಳ ಸೃಷ್ಟಿಯ ಅಧ್ಯಯನ ಒಂದು ಸಣ್ಣ ಭಾಗವಷ್ಟೆ. ಅಧ್ಯಯನವು ಕೆಲಸದ ಸ್ವರೂಪ ಮತ್ತು ಸ್ಥಿತಿಗತಿಗಳ ಅಧ್ಯಯನವನ್ನೂ ಒಳಗೊಂಡಿರುತ್ತದೆ. ಅತ್ಯಂತ ಪ್ರಮುಖ ವಿಷಯವೇನೆಂದರೆ ಅಮೆರಿಕದ ಆರ್ಥಿಕತೆ ಪ್ರಧಾನವಾಗಿ ಸಂಘಟಿತ ಕ್ಷೇತ್ರದ ಆರ್ಥಿಕತೆಯಾಗಿದ್ದರೂ ಮಾರುಕಟ್ಟೆಯ ಸಮಕಾಲೀನ ಪರಿಸ್ಥಿತಿಯನ್ನು ತಿಳಿದುಕೊಳ್ಳಲು ಸಮೀಕ್ಷೆ ಆಧರಿತ ಅಂಕಿಅಂಶಗಳನ್ನೇ ಬಳಸುತ್ತದೆ. ಹೀಗಾಗಿ ಆಡಳಿತಾತ್ಮಕ ಅಂಕಿಅಂಶಗಳು ಒಂದು ಕುತೂಹಲಕಾರಿ ಅಧ್ಯಯನವೇ ಆಗಿದ್ದರೂ ಅದು ಶ್ರಮಶಕ್ತಿಯಲ್ಲಿ ಎಷ್ಟು ಭಾಗ ಔಪಚಾರಿಕ ಕಾರ್ಮಿಕ ವಲಯಕ್ಕೆ ಸೇರುತ್ತಿದ್ದಾರೆ ಎಂಬುದರ ಹೊಳಹನ್ನು ನೀಡುತ್ತದೆಯೇ ವಿನಾ ಉದ್ಯೋಗ ಸೃಷ್ಟಿಯ ಬಗ್ಗೆ ಯಾವ ನೈಜ ಅಂಕಿಅಂಶಗಳನ್ನೂ ಒದಗಿಸುವುದಿಲ್ಲಮತ್ತು ಸಮೀಕ್ಷೆ ಆಧರಿಸಿದ ವಿಧಾನಕ್ಕೆ ಒಂದು ಪರ್ಯಾಯವಾಗಲು ಸಾಧ್ಯವೇ ಇಲ್ಲ. ಇದಕ್ಕಿಂದ ಸಮೃದ್ಧವಾದ ಅಂಕಿಅಂಶಗಳನ್ನು ನೀಡುವ ನ್ಯಷನಲ್ ಸ್ಯಂಪಲ್ ಸರ್ವೇ ಆಫೀಸಿನ ಮತ್ತು ಲೇಬರ್ ಬ್ಯೂರೋಗಳು ನಡೆಸುವ ಉದ್ಯೋಗ ಸಮೀಕ್ಷೆಯ ಮೇಲೆ ಹೆಚ್ಚಿನ ಗಮನವನ್ನು ನೀಡುವುದು ಸೂಕ್ತವಾಗಿದೆ. ಕಳೆದ ಹಲವಾರು ವರ್ಷಗಳಿಂದ ಅವರು ಭಾರತದ ಸಂಕೀರ್ಣ ಕಾರ್ಮಿಕ ಸಂದರ್ಭಗಳಿಗೆ ಸೂಕ್ತವಾದ ಸಮೀಕ್ಷಾ ಮಾದರಿಯನ್ನು ರೂಪಿಸಿದ್ದಾರೆ. ಉದಾಹರಣೆಗೆ ಸಮೀಕ್ಷೆಯು ಸಂಘಟಿತ ಕ್ಷೇತ್ರದೊಳಗೇ ಇರುವ ಅಸಂಘಟಿತ ಕ್ಷೇತ್ರವನ್ನೂ, ಅಸಂಘಟಿತ ವಲಯದಲ್ಲಿರುವ ವಿವಿಧ ಬಗೆಯ ಉದ್ಯೋಗಗಳನ್ನು, ಉದ್ಯೋಗಗಳ ಹುಟ್ಟುವ ಕಾಲಬದ್ಧ ಆವರ್ತನವನ್ನು ಮತ್ತು ಅರೆ ಉದ್ಯೋಗವನ್ನೂ ಸಹ ಅರ್ಥಮಾಡಿಕೊಳ್ಳಲು ಬೇಕಾದ ಮಾನದಂಡಗಳನ್ನು ಒದಗಿಸುತ್ತದೆ.

ಅಧ್ಯಯನದ ಬಗ್ಗೆ ಮತ್ತು ಅದರ ಮಾಹಿತಿ ವಿನಿಮಯದ ಬಗೆಗಿನ ಅತ್ಯಂತ ದೊಡ್ಡ ನಿರಾಶೆಯೇನೆಂದರೆ ಸಂಪೂರ್ಣ ವರದಿಯಾಗಲೀ ಅಥವಾ ಅಂಕಿಅಂಶಗಳಾಗಲೀ ಸಾರ್ವಜನಿಕರಿಗೆ ಲಭ್ಯವಾಗುತ್ತಿಲ್ಲ. ಹೀಗಾಗಿ ಇನ್ನೂ ಸರಿಯಾಗಿ ಪರೀಕ್ಷಿಸದ ವಿಧಾನ ಮತ್ತು ಅದರ ಅಂಕಿಅಂಶಗಳನ್ನು ಯಾವುದೇ ಪರಿಣಿತರ ಅಭಿಪ್ರಾಯಗಳಿಗೆ ಒಪ್ಪಿಸದೆ ಅಧ್ಯಯನವು ಕಂಡುಹಿಡಿದ ಅಂಶಗಳನ್ನು ಒಂದು ರಾಜಕೀಯ ಉದ್ದೇಶಗಳಿಗಾಗಿ ಪ್ರಚಾರ ಮಾಡುತ್ತಿರುವುದು ಮಾತ್ರ ತುಂಬಾ ಖೇದದ ವಿಷಯವಾಗಿದೆ.
 ಕೃಪೆ: Economic and Political Weekly,Jan 27,  2018. Vol. 53. No. 4
    (EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )



ಕಾಮೆಂಟ್‌ಗಳಿಲ್ಲ: