ಅನು: ಶಿವಸುಂದರ್
ನಾಗರಿಕರಿಗೆ ಆರೋಗ್ಯದ ಹಕ್ಕನ್ನು ಖಾತರಿಗೊಳಿಸಿಲ್ಲದಿರುವಾಗ ಸಾಯುವ ಹಕ್ಕನ್ನು ಹೇಗೆ ನಿರಾಕರಿಸಲು ಸಾಧ್ಯ?
ಇತ್ತೀಚಿಗೆ ಮುಂಬೈನ ಓರ್ವ ದಂಪತಿಗಳು ದಯಾಮರಣ ಕೋರಿ ನ್ಯಾಯಾಲಯಕ್ಕೆ ಅಹವಾಲು ಸಲ್ಲಿಸುವ ಮೂಲಕ ವ್ಯಕ್ತಿಗಳ ಘನತೆಯಿಂದ ಸಾಯುವ ಹಕ್ಕಿನ ಕುರಿತಾದ ಚರ್ಚೆಯು ಮತ್ತೊಮ್ಮೆ ತೆರೆದುಕೊಂಡಿದೆ. ಅದೇ ಸಮಯದಲ್ಲಿ ಪ್ರಾಣಾಂತಿಕ ಖಾಯಿಲೆಗಳುಳ್ಳ ರೋಗಿಗಳ ವೈದ್ಯಕೀಯ ಚಿಕಿತ್ಸೆ (ರೋಗಿಗಳ ಮತ್ತು ವೈದ್ಯರ ರಕ್ಷಣೆ)) ಮಸೂದೆ-೨೦೧೬ (ಮೆಡಿಕಲ್ ಟ್ರೀಟ್ಮೆಂಟ್ ಆಫ್ ಟರ್ಮಿನಲ್ ಇಲ್ ಪೇಷೆಂಟ್ಸ್ (ಪ್ರೊಟೆಕ್ಷನ್ ಆಫ್ ಪೇಷೆಂಟ್ಸ್ ಅಂಡ್ ಮೆಡಿಕಲ್ ಪ್ರಾಕ್ಟಿಷನರ್ಸ್) ಬಿಲ್-೨೦೧೬) ಸಂಸತ್ತಿನಲ್ಲಿ ಅನುಮೋದನೆಯಾಗುವ ಸಾಧ್ಯತೆಯೂ ಸಹ ಈ ಚರ್ಚೆಗೆ ಸಂದರ್ಭವನ್ನು ಒದಗಿಸಿಕೊಟ್ಟಿದೆ.
೨೦೧೭ರ ಡಿಸೆಂಬರ್ ೨೧ರಂದು ೮೬ ವಯಸ್ಸಿನ ನಾರಾಯಣ ಲಾವತೆ ಮತ್ತು ಅವರ ೭೯ ವಯಸ್ಸಿನ ಹೆಂಡತಿ ಇರಾವತಿಯವರು ವೈದ್ಯಕೀಯ ಸಹಾಯದ ಮೂಲಕ ತಮಗೆ ಪ್ರಾಣ ಬಿಡಲು ಅವಕಾಶ ಕೊಡಬೇಕೆಂದು ಕೋರಿ ರಾಷ್ಟ್ರಪತಿಗಳಿಗೆ ಪತ್ರವೊಂದನ್ನು ಬರೆದರು. ಆ ಪತ್ರದಲ್ಲಿ ಅವರು ತಾವು ಸಾಧ್ಯವಿರುವಷ್ಟು ಸಂತೋಷವಾಗಿಯೇ ಜೀವನವನ್ನು ಕಳೆದಿರುವುದಾಗಿಯೂ, ತಾವು ಇರುವುದರಲ್ಲೇ ಉತ್ತಮ ಆರೋಗ್ಯವನ್ನೂ ಹೊಂದಿರುವುದಾಗಿಯೂ ಮತ್ತು ತಮ್ಮ ಮೇಲೆ ಯಾರೂ ಅವಲಂಬಿತರಾಗಿಲ್ಲವೆಂದು ಮಾತ್ರವಲ್ಲದೆ ತಾವೂ ಯಾರಿಗೂ ಬಾಕಿ ಇಲ್ಲವೆಂದೂ ಸಹ ಸ್ಪಷ್ಟಪಡಿಸಿದ್ದರು. ಹೀಗಾಗಿ ಯಾವುದಾದರೂ ಸಾಯುವಂತ ಖಾಯಿಲೆಗೆ ಕಾಯುತ್ತಾ ಕೂರುವಂತೆ ತಮ್ಮನ್ನು ಬಲವಂತ ಪಡಿಸುವುದು ಮತ್ತು ಅದರ ಪರಿಣಾಮವಾಗಿ ನಮ್ಮಲ್ಲಿ ಒಬ್ಬರನ್ನು ಸಾಯುವ ತನಕ ಒಂಟಿಯಾಗಿ ಉಳಿದು ಕೊರಗುವಂತೆ ಮಾಡುವುದು ಅನ್ಯಾಯವೆಂದು ಅವರು ವಾದಿಸಿದ್ದರು. ಇದಕ್ಕೆ ಮುನ್ನ ೧೯೭೭ರಲ್ಲಿ ಸಿ.ಎ. ಥಾಮಸ್ ಮಾಸ್ಟರ್ ಎಂಬುವರು ತಾವು ತಮ್ಮ ಜಿವನದ ಎಲ್ಲಾ ಕರ್ತವ್ಯಗಳನ್ನೂ ಮುಗಿಸಿರುವುದರಿಂದ ಮತ್ತು ತಮಗೆ ಇನ್ನು ಬದುಕಲು ಇಚ್ಚೆ ಇಲ್ಲದಿರುವುದರಿಂದ ತಮಗೆ ಸಾಯಲು ಅವಕಾಶ ಕೊಡಬೇಕೆಂದು ಕೇರಳ ಹೈಕೋರ್ಟಿನಲ್ಲಿ ಅಹವಾಲು ಸಲ್ಲಿಸಿದ್ದರು. ೨೦೦೦ನೇ ಇಸವಿಯಲ್ಲಿ ಕೋರ್ಟು ಆ ಅಹವಾಲನ್ನು ವಜಾ ಮಾಡಿತ್ತು. ಈ ಮಧ್ಯೆ ಬೆನ್ನುಮೂಳೆ ಮುರಿತದಿಂದಾಗಿ ನರಕಯಾತನೆ ಅನುಭವಿಸುತ್ತಿರುವ ಕರ್ನಾಟಕದ ೭೦ ವರ್ಷದ ಕರಿಬಸಮ್ಮ ತಾನು ಘನತೆಯಿಂದ ಸಾಯಲು ಕಾನೂನು ಎಂದು ಅವಕಾಶ ಕೊಡಬಹುದು ಎಂದು ಕಾಯುತ್ತಿದ್ದಾರೆ. ಮೇಲಿನ ಮೂರೂ ಪ್ರಕರಣಗಳೂ ಘನತೆಯಿಂದ ಸಾಯುವ ಹಕ್ಕನ್ನೇ ಆಗ್ರಹಿಸುತ್ತಿವೆ.
ಭಾರತದಲ್ಲಿ ದಯಾಮರಣವುಈಗಲೂ ಕಾನೂನುಬಾಹಿರವಾಗಿದೆ. ಆದರೂ ಸುಪ್ರೀಂ ಕೋರ್ಟು ೨೦೧೧ರಲ್ಲಿ ಅರುಣಾ ರಾಮಚಂದ್ರ ಶಾನ್ಭಾಗ್ ಮತ್ತು ಭಾರತ ಸರ್ಕಾರದ ನಡುವಿನ ದಾವೆಯಲ್ಲಿ ರೋಗಿಯೊಬ್ಬರು ಶಾಶ್ವತವಾಗಿ ಪ್ರಜ್ನಾಹೀನ ಮತ್ತು ನಿಷ್ಕ್ರಿಯ ಸ್ಥಿತಿಯಲ್ಲಿದ್ದು ಚೇತರಿಸಿಕೊಳ್ಳುವ ಸಾಧ್ಯತೆಯೇ ಇಲ್ಲದಿದ್ದ ಸಂದರ್ಭದಲ್ಲಿ ಆ ರೋಗಿಗಳನ್ನು ಜೀವದಿಂದುಳಿಸಲು ಮಾಡುವ ಪ್ರಯತ್ನಗಳನ್ನು ಹಿಂಪಡೆದುಕೊಳ್ಳಬಹುದು ಎಂದು ಆದೇಶಿಸಿತ್ತು. ಆ ಆದೇಶದಲ್ಲಿ ನಿರುತ್ಸಕ ದಯಾಮರಣಕ್ಕೂ ಮತ್ತು ಉತ್ಸುಕ ದಯಾಮರಣಕ್ಕೂ ಇರುವ ವ್ಯತ್ಯಾಸವನ್ನು ಕೋರ್ಟು ಸ್ಪಷ್ಟಪಡಿಸಿತ್ತು. ಜೀವ ಉಳಿಸಲು ಮಾಡುತ್ತಿದ್ದ ಪ್ರಯತ್ನಗಳನ್ನು ಹಿಂತೆಗೆದುಕೊಳ್ಳುವುದು ನಿರುತ್ಸಕ ದಯಾಮರಣಕ್ಕೆ ಉದಾಹರಣೆಯಾಗಿದ್ದರೆ ವೈದ್ಯಕೀಯ ಮಧ್ಯಪ್ರವೇಶದೊಂದಿಗೆ ಸಾವನ್ನುಂಟು ಮಾಡುವ ಸಕ್ರಿಯ ಪ್ರಕ್ರಿಯೆಯು ಉತ್ಸುಕ ದಯಾಮರಣಕ್ಕೆ ಉದಾಹರಣೆ ಎಂದು ಕೋರ್ಟು ಹೇಳಿತ್ತು. ಸಂಸತ್ತಿನಲ್ಲಿರುವ ಮಸೂದೆಯು ಸುಪ್ರೀಂ ಕೋರ್ಟೀನ ಆದೇಶಕ್ಕೆ ಕಾನೂನಿನ ರೂಪ ಕೊಡಲಿದೆ.
ಭಾರತದಲ್ಲಿ ದಯಾಮರಣದ ಚರ್ಚೆಗಳು ಜೀವದ ಒಡೆತನ ಯಾರದ್ದು ಮತ್ತು ಅದನ್ನು ಯಾವಾಗ ಕೊನೆಗೊಳಿಸಹುದೆಂದು ತೀರ್ಮಾನ ಮಾಡುವ ಹಕ್ಕು ಯಾರದ್ದು ಎಂಬುದರ ಸುತ್ತಲೇ ನಡೆದಿವೆ. ಈ ಚರ್ಚೆಗಳೂ ಮುಂದೆಯೂ ನಡೆಯುತ್ತಾ ಹೋಗಲಿವೆ. ಆದರೆ ಈ ವಿಷಯವು ಭಾರತದ ಸಾರ್ವಜನಿಕ ಆರೋಗ್ಯದ ಮೇಲೆ ಮಾಡುವ ಪರಿಣಾಮವೇನು ಎಂದು ಚರ್ಚಿಸುವುದರ ಮೂಲಕ ಮಾತ್ರ ಇದನ್ನು ಇನ್ನಷ್ಟು ಅರ್ಥಪೂರ್ಣಗೊಳಿಸಬಹುದು. ಭಾರತದಲ್ಲಿ ಘನತೆಯಿಂದ ಸಾಯುವುದು ಬಹಳ ಕಷ್ಟಕರ ಎಂಬ ವಾಸ್ತವವೇ ದಯಾಮರಣದ ಕೂಗಿಗೆ ಆಗ್ರಹದ ಸ್ವರೂಪವನ್ನು ತಂದುಕೊಡುತ್ತಿದೆ. ಒಬ್ಬ ವ್ಯಕ್ತಿಯು ಭವಿಷ್ಯದಲ್ಲಿ ಚಿಕಿತ್ಸೆಯನ್ನು ತಿರಸ್ಕರಿಸಲು ಅವಕಾಶ ಮಾಡಿಕೊಡುವ ಜೀವಂತ ವಿಲ್ ಪದ್ಧತಿಯನ್ನೂ ಮತ್ತು ಉತ್ಸುಕ ದಯಾಮರಣದ ಅವಕಾಶಗಳನ್ನು ಹಿರಿಯ ನಾಗರಿಕರ ಸಂಬಂಧಿಗಳು ದುರುಪಯೋಗ ಪಡಿಸಿಕೊಂಡು ಅವರ ಸಾವು ಬೇಗ ಆಗುವಂತೆ ಮಾಡಬಹುದೆಂಬ ಸಾಧ್ಯತೆಯನ್ನು ಮುಂದುಮಾಡುತ್ತಾ ಸರ್ಕಾರವು ಈ ಎರಡೂ ವಿಷಯಗಳ ಬಗ್ಗೆ ಅನಾಸಕ್ತಿ ತೋರುತ್ತ ಬಂದಿದೆ. ಆದರೆ ಇದೊಂದು ವಿಪರ್ಯಾಸ. ಏಕೆಂದರೆ ಇದೇ ಸರ್ಕಾರವು ಜನರ ಅನಾರೋಗ್ಯವನ್ನು ಖಾಸಗಿ ಅರೋಗ್ಯ ಸೇವಾ ಉದ್ಯಮವು ದುರುಪಯೋಗ ಪಡಿಸಿಕೊಳ್ಳುವುದನ್ನು ತಡೆಗಟ್ಟಲು ಕಿಂಚಿತ್ತೂ ಯತ್ನಿಸುತ್ತಿಲ್ಲ.
ಮಾರಣಾಂತಿಕ ಕಾಯಿಲೆಗಳಿಂದ ನರಳುತ್ತಿರುವವರು ಸಾಯಲು ಭಾರತವು ಸರಿಯಾದ ದೇಶವಲ್ಲವೇ ಅಲ್ಲ. ೨೦೧೫ರಲ್ಲಿ ಆರ್ಥಿಕ ಗೂಢಚರ್ಯೆ ಇಲಾಖೆಯು ವಿಶ್ವದ ಸಾವಿನ ಗುಣಮಟ್ಟದ ಸೂಚ್ಯಂಕವನ್ನು ಹೊರತಂದಿತ್ತು. ಅದು ಪರಿಶೀಲನೆ ನಡೆಸಿದ ೮೦ ದೇಶಗಳಲ್ಲಿ ಭಾರತದ ಸ್ಥಾನ ೬೭ನೆಯದಾಗಿತ್ತು. ವಿಶ್ವ ಅರೋಗ್ಯ ಸಂಸ್ಥೆ ಮತ್ತು ವಿಶ್ವ ಬ್ಯಾಂಕ್ ಜಂಟಿಯಾಗಿ ೨೦೧೭ರ ಡಿಸೆಂಬರ್ನಲ್ಲಿ ಪ್ರಕಟಿಸಿದ ವರದಿಯೊಂದರಲ್ಲಿ ಆರೋಗ್ಯಕ್ಕಾಗಿ ತಮ್ಮ ಕಿಸೆಯಿಂದ ಖರ್ಚು ಮಾಡುವ ಅನಿವಾರ್ಯತೆಗೆ ಸಿಲುಕಿ ಪ್ರತಿ ವರ್ಷ ೪.೯ ಕೋಟಿ ಭಾರತೀಯರು ಬಡತನಕ್ಕೆ ದೂಡಲ್ಪಡುತ್ತಿದ್ದಾರೆ ಎಂಬ ಸಂಗತಿಯನ್ನು ಬಯಲು ಮಾಡಲಾಗಿದೆ. ಈ ಕಾರಣಕ್ಕಾಗಿಯೇ ಬಡತನಕ್ಕೆ ದೂಡಲ್ಪಡುತ್ತಿರುವ ೧೦ ಕೋಟಿ ಜನರಲ್ಲಿ ಅರ್ಧದಷ್ಟು ಜನರು ಭಾರತದಲ್ಲೇ ಇದ್ದಾರೆ. ಭಾರತದ ಕೇಂದ್ರೀಯ ಆರೋಗ್ಯ ಮಾಹಿತಿ ಬ್ಯೂರೋ ಪ್ರಕಾರ ಈ ಸಂಖ್ಯೆ ಇನ್ನು ಹೆಚ್ಚೇ ಇದೆ. ಇದಕ್ಕೆ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯೇ ನೇರವಾಗಿ ಹೊಣೆ ಹೊರಬೇಕಿದೆ. ಭಾರತವು ಆರೋಗ್ಯ ಕ್ಷೇತ್ರದ ಮೇಲೆ ಇಡೀ ಜಗತ್ತಿನಲ್ಲೇ ಅತ್ಯಂತ ಕಡಿಮೆ ವೆಚ್ಚವನ್ನು ಮಾಡುತ್ತದೆ. ೨೦೧೭-೧೮ರ ಆರ್ಥಿಕ ಸಮೀಕ್ಷೆಯ ಪ್ರಕಾರ ಸರ್ಕಾರವು ಒಟ್ಟಾರೆ ಜಿಡಿಪಿಯ ಶೇ.೧.೪ರಷ್ಟನ್ನು ಮಾತ್ರ ಆರೋಗ್ಯದ ಮೇಲೆ ವೆಚ್ಚ ಮಾಡುತ್ತದೆ. ೨೦೧೭ರ ರಾಷ್ಟ್ರೀಯ ಆರೋಗ್ಯ ನೀತಿಯೂ ಸಹ ೨೦೨೫ರ ವೇಳೆಗೆ ಆರೋಗ್ಯದ ಮೇಲೆ ಸರ್ಕಾರಿ ವೆಚ್ಚವು ಜಿಡಿಪಿಯ ಶೇ.೨.೫ರಷ್ಟಾಗಬೇಕೆಂಬ ಗುರಿಯನ್ನು ನೀಡಿದೆ. ಆದರೆ ಇದೂ ಕೂಡಾ ತುಂಬಾ ತಡವಾಗಿ ಬಂದ ತಿಳವಳಿಕೆಯೇ ಆಗಿದೆ ಎಂದರೆ ತಪ್ಪಿಲ್ಲ.
ಈ ವಿಷಯದಲ್ಲಿ ಸಮಾಜದ ಉಳ್ಳ ವರ್ಗಗಳ ಪರಿಸ್ಥಿತಿಯಲ್ಲೂ ಹೆಚ್ಚೇನೂ ಸುಧಾರಣೆಯಾಗಿಲ್ಲ. ಲಭ್ಯವಿರುವ ತೀವ್ರ ನಿಗಾ ಘಟಕಗಳಲ್ಲಿ ಶೇ.೯೦ರಷ್ಟು ಭಾಗ ಖಾಸಗಿ ಕ್ಷೇತ್ರದಲ್ಲಿದ್ದು ಈ ವರ್ಗದ ಜನ ಮಾತ್ರವೇ ಅಂಥ ದುಬಾರಿ ಚಿಕಿತ್ಸೆಯನ್ನು ಪಡೆದುಕೊಳ್ಳಲು ಸಾಧ್ಯ. ಅದರೆ ಆ ಸೇವೆಗಳೂ ಸಹ ಜೀವದ ಕೊನೆ ಗಳಿಗೆಗಳನ್ನೇನೂ ಉತ್ತಮಗೊಳಿಸುವುದಿಲ್ಲ. ಮರಣಪೂರ್ವ ಉಪಶಾಮಕ ಶುಶ್ರೂಷೆಗಳ (ಪಾಲಿಯೇಟೀವ್ ಕೇರ್) ಬಗ್ಗೆ ತಿಳವಳಿಕೆಯಾಗಲೀ ಅಥವಾ ತರಬೇತಿಗಳಾಗಲೀ ಅತ್ಯಂತ ಅಸಮರ್ಪಕವಾಗಿದೆ. ಖಾಸಗಿ ವೈದ್ಯಕೀಯ ಕ್ಷೇತ್ರದಲ್ಲಿ ಲಾಭ ಸೂರೆ ಹೊಡೆಯುತ್ತಿರುವವರಿಗೆ ಇಂಥಾ ಚಿಕಿತ್ಸೆಯನ್ನು ನೀಡುವುದರಲ್ಲಿ ಹೆಚ್ಚಿನ ಲಾಭವಿಲ್ಲ. ಹೀಗಾಗಿ ಮಾರಣಾಂತಿಕ ಕಾಯಿಲೆಗಳಿಂದ ಭಾಧಿತರಾದವರಿಗೆ ಅವರು ನೀಡುವ ಚಿಕಿತ್ಸೆಗಳು ಹೆಚ್ಚು ದುಬಾರಿಯಾಗಿರುತ್ತವೆ ಮತ್ತು ಹೆಚ್ಚು ಯಾತನಾಮಯ ವೈದ್ಯಕೀಯ ಮಧ್ಯಪ್ರವೆಶಗಳಿಂದ ರೋಗಿಗಳ ಜೀವವನ್ನು ಇನ್ನೊಂದಿಷ್ಟು ಕಾಲ ಎಳೆಯುವಂತೆ ಮಾಡುವ ಉದ್ದೇಶವನ್ನು ಮಾತ್ರವೇ ಹೊಂದಿರುತ್ತವೆ. ರೋಗಿಯ ಬಗ್ಗೆಯಾಗಲಿ ಅವರ ಕುಟುಂಬಗಳ ಬಗ್ಗೆಯಾಗಲೀ ಯಾವುದೇ ಕಾಳಜಿ ಅವರಿಗಿರುವುದಿಲ್ಲ.
ಯಾವ ಸರ್ಕಾರವು ಹಿರಿಯರಿಗೆ ಮತ್ತು ರೋಗಗ್ರಸ್ಥರಿಗೆ ಘನತೆಯುಳ್ಳ ಜೀವನವನ್ನು ಖಾತರಿ ಮಾಡುವುದಿಲ್ಲವೋ ಆ ಸರ್ಕಾರಕ್ಕೆ ತನ್ನ ಜನರಿಗೆ ಘನತೆಯುಳ್ಳ ಸಾವಿನ ಹಕ್ಕನ್ನು ನಿರಾಕರಿಸುವ ಯಾವ ನೈತಿಕ ಅಧಿಕಾರವೂ ಇರುವುದಿಲ್ಲ. ಆದರೆ ಈ ದೇಶದ ಕಾನೂನುಗಳು ಬದುಕುವ ಹಕ್ಕನ್ನು ಒಂದು ಸಹಜ ಹಕ್ಕೆಂದೂ, ಸಾಯುವ ಹಕ್ಕನ್ನು ಅಸಹeವೆಂದೂ ಪರಿಗಣಿಸುತ್ತವೆ. ಆದರೆ ಭಾರತ ಪ್ರಭುತ್ವವು ಹಲವಾರು ಸಂದರ್ಭಗಳಲ್ಲಿ ಸಾಯಿಸುವ ಹಕ್ಕನ್ನು ಮಾತ್ರ ಕಾದಿರಿಸಿಕೊಂಡಿದೆ. ಉದಾಹರಣೆಗೆ ಮರಣದಂಡನೆಯು ಈ ದೇಶದಲ್ಲಿ ಈಗಲೂ ಕಾನೂನುಬದ್ಧವಾಗಿದೆ ಮತ್ತು ಪೊಲೀಸ್ ಮತ್ತು ಅರೆ ಸೇನಾಪಡೆಗಳು ನಡೆಸುವ ಕಾರ್ಯಾಚರಣೆಗಳಲ್ಲಿ ಎನ್ಕೌಂಟರ್ ಹತ್ಯೆಗಳನ್ನು ಮಾನ್ಯತೆ ನೀಡುವ ಹಲವಾರು ಅವಕಾಶಗಳನ್ನು ಕಾನೂನುಗಳಲ್ಲಿ ತೂರಿಸಲಾಗಿದೆ.
ಅದೇನೇ ಇದ್ದರೂ, ವ್ಯಕ್ತಿಯೊಬ್ಬರ ಘನತೆಯಿಂದ ಸಾಯುವ ಹಕ್ಕಿನ ಪ್ರತಿಪಾದನೆಯು ಗುಣಮಟ್ಟದ ಮತ್ತು ಕೈಗೆಟುಕುವ ಸಾರ್ವಜನಿಕ ಆರೋಗ್ಯ ಸೇವೆಯ ಹಕ್ಕಿನ ಜೊತೆಗೆ ಮತ್ತು ಖಾಸಗಿ ಆಸಕ್ತಿಗಳಿಂದ ರಕ್ಷಣೆ ನೀಡಬೇಕೆಂಬ ಹಕ್ಕಿನ ಪ್ರತಿಪಾದನೆಯ ಜೊತೆಜೊತೆಗೆ ಸಾಗಬೇಕು. ಆದ್ದರಿಂದ ಕುಸಿಯುತ್ತಿರುವ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಬೆಳಕಿನಲ್ಲಿಯೇ ದಯಾಮರಣದ ಬಗೆಗಿನ ಹಾಲೀ ಚರ್ಚೆಯನ್ನು ಪರಿಶೀಲಿಸಬೇಕು.
ಕೃಪೆ: Economic and Political Weekly,Feb 10, 2018. Vol. 53. No.6
(EPW ಅನುವಾದ ಯೋಜನೆಯ ಹೆಚ್ಚಿನ ಮಾಹಿತಿಗಾಗಿ: http://www.epw.in/translation )
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ