ಮಂಗಳವಾರ, ಜೂನ್ 7, 2016

ಕನ್ನಡ ನಾಡು, ನುಡಿ, ಜನತೆ

- ಡಾ. ಎಚ್.ಜೆ. ಲಕ್ಕಪ್ಪಗೌಡ




ನಾಡು-ಮೊದಲ ನೋಟ
ಹಸಿರು ವನಗಳ ನಾಡು, ಬೆಟ್ಟ ಘಟ್ಟಗಳ ಬೀಡು. ಶ್ರೀಗಂಧ ಬೀಟೆ ತೇಗ ಹೊನ್ನೆ ನಂದಿ ಮತ್ತಿ ಆಲ ಬೇಲ ಸಂಪಿಗೆ ನೇರಳೆ ಬಾಗೆ ಹಲಸು ಅಶೋಕ ಮಾವು ಬೇವು ತೆಂಗು ಕಂಗು ಮೊದಲಾದ ಉನ್ನತ ಮಲಿಕವೃಕ್ಷಗಳ ಸಿರಿತವರು. ಕಾವೇರಿ, ಕೃಷ್ಣೆ ಗೋದಾವರಿಯರು ಮೈದೊಳೆವ ನಲುನಾಡು. ಆನೆ ಸಿಂಹ ಹುಲಿ ಚಿರತೆ ತೋಳ ಕಿರುಬ ಕರಡಿ ಜಿಂಕೆ ಹಂದಿ; ನವಿಲು ಗಿಳಿ ಕೋಗಿಲೆ ಮೈನಾ ಗೀಜಗ ಪಾರಿವಾಳ ಲಾವಿಗ ಕೊಕ್ಕರೆ ಮುರುಳಿ ಮರಕುಟಿಗ ವಿಂಚುಳ್ಳಿ ಗರುಡ ಡೇಗೆ ಕೊಕ್ಕರೆ ಬಾತುಕೋಳಿ ಗಿಡುಗ ರಣಹದ್ದು; ಮೊಸಳೆ ಹೆಬ್ಬಾವು ಗೋಸುಂಬೆ ನಾಗರಹಾವು ಕೇರೆಹಾವು ಹಸುರುಹಾವು ಮಂಡಲದಹಾವು ಆಮೆ ಹಲ್ಲಿ ಹೆಂಟೆಗೊದ್ದ; ಹಸು ಎಮ್ಮೆ ಆಡು ಕುರಿ – ಮುಂತಾದ ಪ್ರಾಣಿ ಪಕ್ಷಿ ಸರೀಸೃಪಗಳ ಸಮೃದ್ಧಧಾಮ. ದ್ವೈತ ಅದ್ವೈತ ವಿಶಿಷ್ಟಾದ್ವೈತ ಜೈನ ಬೌದ್ಧ ಶೈವ ವೀರಶೈವ ಚಾರ್ವಾಕ ಮತ್ತು ಜನಪದ ಧರ್ಮಗಳ ಸಂಗಮಭೂಮಿ. ಮಹಾಕವಿಗಳ ಮಹಾಕಲಿಗಳ ಮಹಾ ಕಲಾವಿದರ ಮಹಾತ್ಯಾಗಿಗಳ ಮಹಾತಪಸ್ವಿಗಳ ಸಿದ್ಧಕ್ಷೇತ್ರ – ಈ ಕನ್ನಡ ನಾಡು. ಈ ಕರ್ನಾಟಕ ಪ್ರಪಂಚದ ಭೂಪಟದಲ್ಲಿ ತನ್ನ ವೈವಿಧ್ಯಮಯ ವೈಶಿಷ್ಟ್ಯಮಯ ಐತಿಹಾಸಿಕ ಪರಂಪರೆಯಿಂದ ಸಮೃದ್ಧವೂ ಅದ್ವಿತೀಯವೂ ಆದ ಸಾಂಸ್ಕೃತಿಕ ಪರಂಪರೆಯಿಂದ, ಅವಿಸ್ಮರಣೀಯ ದಾಖಲೆಯನ್ನು ಗುರುತಿಸಿಕೊಂಡಿರುವ ಹಿರಿಮೆಯ ಹಿರಿನಾಡು ಇದು, ಈ ಕರ್ನಾಟಕ.
ಮೇಲುನೋಟ
ಸ್ವತಂತ್ರ ಭಾರತದ ಇಪ್ಪತ್ತೆರಡು ರಾಜ್ಯಗಳಲ್ಲಿ ಒಂದು ಕರ್ನಾಟಕ. ಭಾರತದ ದಕ್ಷಿಣ ಭಾಗದಲ್ಲಿ ಪೂರ್ವ ಪಶ್ಚಿಮ ಘಟ್ಟಗಳ ತೋಳತೆಕ್ಕೆಯಲ್ಲಿ ವಿರಮಿಸಿರುವ ದೇಶ ಇದು. ಉತ್ತರ ಮತ್ತು ವಾಯವ್ಯ ದಿಕ್ಕುಗಳಲ್ಲಿ ಮಹಾರಾಷ್ಟ್ರ, ಪೂರ್ವ ಮತ್ತು ಈಶಾನ್ಯ ದಿಕ್ಕುಗಳಲ್ಲಿ ಆಂಧ್ರಪ್ರದೇಶ, ಆಗ್ನೇಯ ಮತ್ತು ದಕ್ಷಿಣ ದಿಕ್ಕಿನಲ್ಲಿ ತಮಿಳು ನಾಡು, ನೈರುತ್ಯ ಭಾಗದಲ್ಲಿ ಕೇರಳ, ಪಶ್ಚಿಮದಲ್ಲಿ ಅರಬ್ಬೀ ಕಡಲು – ಇದರ ಹೊರ ರೇಖೆಗಳಾಗಿವೆ. ಮೈಸೂರು, ಬೆಂಗಳೂರು, ಕೋಲಾರ, ಕೊಡಗು, ದಕ್ಷಿಣ ಕನ್ನಡ, ಉತ್ತರ ಕನ್ನಡ, ಧಾರವಾಡ, ಬಳ್ಳಾರಿ, ಗುಲ್ಬರ್ಗಾ, ಬೆಳಗಾಂ, ರಾಯಚೂರು, ಬಿಜಪುರ ಮತ್ತು ಬೀದರ್ ಜಿಲ್ಲೆಗಳೆಂಬ ಹತ್ತೊಂಬತ್ತು ಒಳಾಂಗಗಳು ಇದಕ್ಕಿವೆ. ಇವು ಮೈಸೂರು, ಬೆಂಗಳೂರು, ಬೆಳಗಾಂ ಮತ್ತು ಗುಲ್ಬರ್ಗಾಗಳೆಂಬ ನಾಲ್ಕು ವಿಭಾಗಗಳಲ್ಲಿ ಸೇರ್ಪಡೆಯಾಗಿವೆ. ಸುಮಾರು ಒಂದು ಲಕ್ಷದ ತೊಂಬತ್ತೆರಡು ಸಾವಿರ ಚದರ ಕಿಲೋಮೀಟರುಗಳಷ್ಟು ಇದರ ಹರಹು. ಇದರ ಮಣ್ಣಿನಲ್ಲಿ ವಾಸಿಸುವ ಜನ ಹತ್ತಿರ ಹತ್ತಿರ ಐದು ಕೋಟಿ. ಇದರ ರಾಜಕೀಯ ಕೇಂದ್ರ ಬೆಂಗಳೂರು ನಗರ. ಒಂದು ಅಂದಾಜಿನ ಪ್ರಕಾರ ಈ ನಾಡಿನ ವಿಸ್ತೀರ್ಣ ಇಂಗ್ಲೆಂಡ್ ಮತ್ತು ಸ್ಕಾಟ್‌ಲೆಂಡುಗಳ ಒಟ್ಟು ವಿಸ್ತೀರ್ಣದಷ್ಟು, ಗ್ರೀಸಿನ ಎರಡರಷ್ಟು, ಡೆನ್ಮಾರ್ಕಿನ ಐದರಷ್ಟು, ಹಾಲೆಂಡಿನ ಆರರಷ್ಟು, ಬೆಲ್ಜಿಯಂನ ಏಳರಷ್ಟು!

ಹಿನ್ನೋಟ
ಕರ್ನಾಟಕ ಭಾರತದ ಅತ್ಯಂತ ಪುರಾತನ ಪ್ರಾಂತ್ಯಗಳಲ್ಲಿ ಒಂದೆಂಬುದು ಐತಿಹಾಸಿಕ ಸತ್ಯವಾಗಿದೆ. ಕ್ರಿ.ಶ. ೪೫೦ರ ಹಲ್ಮಿಡಿ ಶಾಸನದಲ್ಲಿ ಮೊತ್ತಮೊದಲು ನಾವು ಕನ್ನಡ ಲಿಪಿಯನ್ನು ಕಾಣುವೆವಾದರೂ ಇದಕ್ಕಿಂತ ನೂರಾರು ವರ್ಷಗಳ ಹಿಂದಿನಿಂದಲೂ ಕನ್ನಡ ಭಾಷೆ ಹಾಗೂ ಕರ್ನಾಟಕ ರಾಜ್ಯ ಅಸ್ತಿತ್ವದಲ್ಲಿದ್ದುವೆನ್ನಲು ಹಲವಾರು ಮೂಲಭೂತವಾದ ಮತ್ತು ನಂಬಲರ್ಹವಾದ ಆಧಾರಗಳು ದೊರೆಯುತ್ತವೆ. ಚಂದ್ರವಳ್ಳಿ, ಮಾಸ್ಕಿ ಮುಂತಾದ ಕಡೆಗಳಲ್ಲಿ ನಡೆದ ಉತ್ಖನನ ಮತ್ತು ಸಂಶೋಧನೆಗಳಿಂದ ಕರ್ಣಾಟಕದ ಇತಿಹಾಸ ತುಂಬ ಪ್ರಾಚೀನ ಯುಗಕ್ಕೆ ಸರಿಯುವುದು ಮಾತ್ರವಲ್ಲದೆ, ಪ್ರಪಂಚ ನಾಗರಿಕತೆಯ ಅತ್ಯುನ್ನತ ಸ್ತರಗಳನ್ನು ಈ ನಾಡವರು ಪ್ರತಿನಿಧಿಸುತ್ತಾರೆ ಎಂಬುದು ಸ್ಪಷ್ಟವಾಗುತ್ತದೆ.

ವಿಷ್ಣುವಿನ ದಶಾವತಾರಗಳಲ್ಲಿ ಹಲವು ಅವತಾರಗಳ ಕಾರ್ಯಕ್ಷೇತ್ರ ಕರ್ನಾಟಕ. ವಾಮನನಿಂದ ಪಾತಾಳಕ್ಕೆ ತುಳಿಯಲ್ಪಟ್ಟ ಬಲಿಚಕ್ರವರ್ತಿಯ ರಾಜ್ಯ ಈಗಿನ ಕರ್ನಾಟಕದ ಕೆಲವು ಭಾಗಗಳನ್ನು ಒಳಗೊಂಡಿತ್ತೆಂದು ಶ್ರೀ ಆರ್.ಎಚ್. ದೇಶಪಾಂಡೆ ಎಂಬ ವಿದ್ವಾಂಸರು ಊಹಿಸಿದ್ದಾರೆ. ಈ ವಾಮನಾವತಾರದ ಕಾಲ ಕ್ರಿ.ಪೂ. ೨೯೦೦ ಇರಬಹುದೆಂದು ಅಭಿಪ್ರಾಯ ವಿದೆ. ಉತ್ತರ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳು ಪರಶುರಾಮಕ್ಷೇತ್ರವೆಂದೇ ಪ್ರಸಿದ್ಧವಾಗಿವೆ. ಕರ್ನಾಟಕದಾದ್ಯಂತ ಪರಶುರಾಮನ ಹಾಗೂ ಅವನ ತಾಯಿ ರೇಣುಕಾದೇವಿಯ ದೇವಾಲಯ ಗಳಿವೆ. ಮಹಾಭಾರತದ ಪಾಂಡವರು ಅಜ್ಞಾತವಾಸ ಮಾಡಿದ ವಿರಾಟನಗರ ಇಂದಿನ ಧಾರವಾಡ ಜಿಲ್ಲೆಯ ಹಾನಗಲ್ಲು ಎಂದು ತಿಳಿಯಲಾಗಿದೆ. ಚಂದ್ರಹಾಸನ ರಾಜಧಾನಿಯಾಗಿದ್ದ ಕುಂತಲಪುರ ಈಗಿನ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಕುಬಟೂರು. ಬಬ್ರುವಾಹನನ ಮಣಿಪುರ ಮೈಸೂರು ಜಿಲ್ಲೆಯ ಹೆಗ್ಗಡದೇವನಕೋಟೆ ತಾಲ್ಲೂಕಿನ ಒಂದು ಹಳ್ಳಿ ಎಂದು ಭಾವಿಸಲಾಗಿದೆ. ಹಾಗೆಯೇ ಚಿತ್ರದುರ್ಗ, ಕೈವಾರ, ಹರಿಹರ, ಬನವಾಸಿ, ಶ್ರೀಶೈಲ, ಬಳ್ಳಿಗಾವಿ ಮಣಿಪುರ ಮುಂತಾದ ಸ್ಥಳಗಳು ಮಹಾಭಾರತದ ಕಥಾಸಂದರ್ಭದೊಡನೆ ಸಂಬಂಧ ಪಡೆದಿವೆ. ಶ್ರೀರಾಮಾಯಣದೊಡನೆ ಕೂಡ ಈ ನಾಡು ನಿಕಟ ಸಂಪರ್ಕ ಹೊಂದಿದೆ. ಶ್ರೀರಾಮಚಂದ್ರನ ಅದ್ವಿತೀಯ ಭಕ್ತ, ಅಸಮಸಾಹಸಿ ಆಂಜನೇಯ ಕನ್ನಡಿಗ. ರಾಮನಿಗೆ ಸೀತೆಯನ್ನುತಂದೊಪ್ಪಿಸುವುದಕ್ಕಾಗಿ ಸಾಗರಕ್ಕೆ ಸೇತುವೆ ನಿರ್ಮಿಸಿದ, ಆ ಮಹಾಸಮರದಲ್ಲಿ ಅಸೀಮ ಶೌರ್ಯದಿಂದ ಹೋರಾಡಿದ ವಾನರವೀರರು ಕನ್ನಡಿಗರು. ಅಂದಿನ ಕಿಷ್ಕಿಂಧೆಯೇ ಇಂದಿನ ಹಂಪೆ. ರಾವಣನಿಂದ ಗೋಕರ್ಣದ ಮಹಾ ಬಲೇಶ್ವರಲಿಂಗ ಸ್ಥಾಪಿತವಾಯಿತು, ಇತ್ಯಾದಿ ಐತಿಹ್ಯಗಳಿವೆ. ಹೀಗೆಯೇ ರಾಮನಾಥಪುರ, ಚುಂಚನಕಟ್ಟೆ, ಶೃಂಗೇರಿ, ಚುದ್ರಗುತ್ತಿ, ಅವನಿ, ನಂದಿ ಮುಂತಾದ ಹಲವಾರು ಊರುಗಳು ರಾಮಾಯಣದೊಡನೆ ಸಂಬಂಧ ಹೊಂದಿವೆ.

ಫಾದರ್ ಹೆರಾಸ್ ಅವರು ಕನ್ನಡನಾಡಿನ ಹಾಗೂ ಜನರ ಕಾಲವನ್ನು ಹರಪ್ಪಾ ಮೊಹೆಂಜೊದಾರೊ ನಾಗರಿಕತೆಯ ಯುಗಕ್ಕೆ ಕೊಂಡೊಯ್ದು, ಕನ್ನಡಿಗರು ಮಾನವ ಕುಲದ ನಾಗರಿಕತೆಗೇ ಭಾಗಶಃ ಕಾರಣರೆಂದು ಸೂಚಿಸುತ್ತಾರೆ : “The future excavations…will all prove a statement to be true, viz that the origin of the kannadiga happens to be karnataka itself and that he is partially responsible for the civilisation of mankind” ಎಂಬ ಅವರ ಮಾತುಗಳು ಕನ್ನಡಿಗರ ಮೈನವಿರೇಳಿಸುತ್ತವೆ. ಈ ಹರಪ್ಪಾ-ಮೊಹೆಂಜೊದಾರೊಗಳಲ್ಲಿ ದೊರೆತಿರುವ ಚಿನ್ನ ಕೋಲಾರ ಮತ್ತು ಹಟ್ಟಿಗಣಿ ಗಳಿಂದ ಬಂದಿರಬಹುದೆಂದು ಮಾರ್ಷೆಲ್ ಅವರು ಅಭಿಪ್ರಾಯ ಪಡುತ್ತಾರೆ. ನಂದಿ ಧ್ವಜರಾದ ಈ ಹಟ್ಟಿಕಾರರು ಆರು ಸಾವಿರ ವರ್ಷಗಳಿಗೂ ಹಿಂದಿನ ಪ್ರಾಚೀನ ಜನಾಂಗ. ಸಿಂಧೂ ತೀರದ ಉತ್ಖನನದಲ್ಲಿ ಲಭ್ಯವಾದ ಪಾತ್ರೆಗಳನ್ನೇ ಹೋಲುವ ಕೆಲವು ಪಾತ್ರೆಗಳು ಬೆಂಗಳೂರು ಸಮೀಪದ ಹುತ್ತನಹಳ್ಳಿಯಲ್ಲಿ ದೊರೆತಿವೆ. ಇವು ಲೋಹಯುಗದ ಆರಂಭ ಕಾಲಕ್ಕೆ ಸೇರಿದ ವಸ್ತುಗಳು. ಆರ್ಯಪೂರ್ವಯುಗದವೆನ್ನಲಾದ ಗೋರಿಗಳು ಬ್ಯಾಡಗಿ ರಟ್ಟಹಳ್ಳಿ ಅಗಡಿ ಮುಂತಾದೆಡೆಗಳಲ್ಲಿ ಸಿಕ್ಕಿರುವುದು ಕನ್ನಡನಾಡಿನ ಪ್ರಾಚೀನತೆಗೆ ಇನ್ನೊಂದು ಜ್ವಲಂತ ಸಾಕ್ಷಿಯಾಗಿದೆ. ಋಗ್ವೇದ ಕಾಲದಲ್ಲಿಯೇ ಕರ್ನಾಟಕದ ಸಂಸ್ಕೃತಿ ರೂಪುಗೊಳ್ಳಲು ಆರಂಭವಾಯಿತೆಂದು ಡಾ. ಶಂ.ಬಾ. ಜೋಷಿಯವರು ಅಭಿಪ್ರಾಯಿಸಿದ್ದಾರೆ.

ಈಗ ದೊರೆತಿರುವ ಮಾಹಿತಿಗಳ ಪ್ರಕಾರ ಕರ್ನಾಟಕದ ಬಗ್ಗೆ ಮೊತ್ತಮೊದಲ ಖಚಿತ ಮತ್ತು ಲಿಖಿತ ಆಧಾರ ದೊರೆಯುವುದು ಮಹಾಭಾರತದಲ್ಲಿ. ಕ್ರಿ.ಪೂ. ೪ನೇ ಶತಮಾನದಲ್ಲಿ ರಚಿತವಾದುದೆಂದು ವಿದ್ವಾಂಸರು ನಿರ್ಣಯಿಸಿರುವ ಈ ಮಹಾಕೃತಿಯ ಸಭಾಪರ್ವ ಮತ್ತು ಭೀಷ್ಮಪರ್ವಗಳಲ್ಲಿ ಕರ್ನಾಟಕದ ಹೆಸರು ಮಾತ್ರವಲ್ಲದೆ, ಕರ್ನಾಟಕದ ಇತರ ಭಾಗಗಳಾಗಿದ್ದ ಮಹಿಷಕ ಮತ್ತು ಕುಂತಲಗಳ ಹೆಸರೂ ಪ್ರಸ್ತಾಪಿತವಾಗಿದೆ :

ಅಥಾಪರೇ ಜನಪದಾಃ ದಕ್ಷಿಣಾ ಭರತರ್ಷಭ!
ದ್ರಾವಿಡಾಃ ಕೇರಲಾಃ ಪ್ರಾಚ್ಯಾ ಮೂಷಿಕ ವನವಾಸಿಕಾಃ ||
ಕರ್ಣಾಟಕ ಮಹಿಷಕಾ ವಿಕಲ್ಪ ಮೂಷಕಸ್ತಥಾ|
ಝಿಲ್ಲಿಕಾ ಕುಂತಲಾಶ್ಚೈವ ಸೌಹೃದಾ ನಭ ಕಾನನಾಃ ||
(ಭೀಷ್ಮಪರ್ವ, ೯-೫೮, ೫೯)

ಸಭಾಪರ್ವದಲ್ಲಿ ಜನಪದಗಳ ಬಗ್ಗೆ ಹೇಳುವಾಗ, “ಕರ್ಣಾಟಾಃ ಕಾಂಸ್ಯಕುಟ್ವಾಶ್ಚ ಪದ್ಮಜಲಾಃ ಸತೀನರಾಃ” – ಇತ್ಯಾದಿಯಾಗಿ ಉಲ್ಲೇಖಿಸಲಾಗಿದೆ. ಭೀಷ್ಮಪರ್ವದ ಶ್ಲೋಕಗಳಲ್ಲಿ ಬರುವ ‘ಮಹಿಷಕಾ’ ಎಂಬುದು ಮೈಸೂರನ್ನು ಸೂಚಿಸುವುದೆಂದು ವಿದ್ವಾಂಸರು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಕರ್ನಾಟಕ ಮತ್ತು ಕುಂತಲ ಎಂಬ ಹೆಸರುಗಳಂತೂ ಕನ್ನಡನಾಡಿನ ಭಾಗಗಳನ್ನೇ ಸೂಚಿಸುತ್ತವೆಂಬುದು ಸಿದ್ಧಸಂಗತಿ. ಕನ್ನಡನಾಡಿನ ಉತ್ತರ ಭಾಗ ಕುಂತಲ; ದಕ್ಷಿಣ ಭಾಗ ಕರ್ಣಾಟಕ.
ಕ್ರಿ.ಪೂ. ಮೂರನೇ ಶತಮಾನದಲ್ಲಿ ರಚಿತವಾದುದೆಂದು ಸಂಶೋಧಕರು ತೀರ್ಮಾನಿಸಿರುವ ರಾಮಾಯಣದಲ್ಲಿ ಕರ್ಣಾಟಕ ಎಂಬ ಹೆಸರಿನ ಸ್ಪಷ್ಟ ಉಲ್ಲೇಖವಿಲ್ಲವಾದರೂ ‘ಮಹಿಷಕ’ ಮತ್ತು ‘ಋಷಿಕ’ಗಳ ಪ್ರಸ್ತಾಪವಿದೆ.

ಕ್ರಿ.ಪೂ. ಸುಮಾರು ೩೦೦ರಲ್ಲಿ ತನ್ನ ಗುರುವಾದ ಭದ್ರಬಾಹು ಮುನಿಗಳೊಡನೆ ಕರ್ನಾಟಕಕ್ಕೆ ಬಂದ ಮರ್ಯ ಚಕ್ರವರ್ತಿ ಚಂದ್ರಗುಪ್ತ ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ ತಪಸ್ಸು ಮಾಡಿ ಸಲ್ಲೇಖನವ್ರತದಿಂದ ದೇಹತ್ಯಾಗ ಮಾಡಿದನೆಂದು ಐತಿಹ್ಯವಿದೆ. ಅಶೋಕ ಚಕ್ರವರ್ತಿ ಮಹಿಷಮಂಡಲ, ಮಹಾರಾಷ್ಟ್ರ, ಬನವಾಸಿಗಳಿಗೆ ಧರ್ಮ ಬೋಧಕರನ್ನು ಕಳಿಸಿದನೆಂದು ‘ಮಹಾವಂಶ’ದಲ್ಲಿ ಉಲ್ಲೇಖಿತವಾಗಿದೆ. ಇಲ್ಲಿ ಮಹಾರಾಷ್ಟ್ರವೆಂದರೆ ಅಂದಿನ ಕರ್ನಾಟಕದ ಒಂದು ಭಾಗ ಮಾತ್ರ, ಇಂದಿನ ಮಹಾರಾಷ್ಟ್ರವಲ್ಲ. ಬ್ರಹ್ಮಗಿರಿ, ಸಿದ್ಧಾಪುರ, ಜಟಿಂಗ ರಾಮೇಶ್ವರ, ಮಾಸ್ಕಿ ಮುಂತಾದ ಸ್ಥಳಗಳಲ್ಲಿ ಅಶೋಕನ ಹಲವು ಶಾಸನಗಳು ದೊರೆಯುತ್ತವೆ. ಕ್ರಿ.ಪೂ. ಸುಮಾರು ೨೦೫ರಲ್ಲಿ ‘ಏಲಾಲಿ’ ಎಂಬ ಚೋಳರಾಜನು ಲಂಕೆಯನ್ನು ಗೆಲ್ಲಲು ಮೈಸೂರು ಸೇನೆಯ ಸಹಾಯ ಪಡೆದನೆಂದು ತಿಳಿದು ಬರುತ್ತದೆ. ಕ್ರಿ.ಪೂ. ಒಂದರಿಂದ ಕ್ರಿ.ಶ. ಒಂದನೇ ಶತಮಾನದಲ್ಲಿ ರಚಿತವಾದುದೆಂದು ಅಭಿಪ್ರಾಯವಿರುವ ಶೂದ್ರಕನ ‘ಮೃಚ್ಚಕಟಿಕ’ ನಾಟಕದ ಒಂದು ಸಂವಾದ ಭಾಗದಲ್ಲಿ “ಕರ್ಣಾಟ ಕಲಹ ಪ್ರಯೋಗಮ್ ಕರಿಷ್ಟಾಮಿ’ ಎಂಬ ಮಾತಿದೆ. ಕ್ರಿ.ಶ. ಸಂ. ೧೫೦ರಲ್ಲಿ ಭಾರತಕ್ಕೆ ಬಂದಿದ್ದ ಗ್ರೀಸಿನ ಟಾಲೆಮಿ ಬಾದಿಯಾ (ಬಾದಾಮಿ), ಇಂಡೆ (ಇಂಡಿ), ಮೊದಗೌಲ (ಮುದ್ಗಲ್), ಕಲ್ಲಿಗೇರಿಸ್ (ಕಲ್ಲಿಗೇರಿ), ಬನವಾಸ್ಯ (ಬನವಾಸಿ), ಪೇಟರ್‌ಗಾಲ (ಪಟ್ಟದಕಲ್ಲು) ಮುಂತಾದ ಊರುಗಳನ್ನು ತನ್ನ ಪ್ರವಾಸ ಕಥನದಲ್ಲಿ ವರ್ಣಿಸಿದ್ದಾನೆ. ಪುನ್ನಾಟದ ವಜ್ರವೈಢೂರ್ಯಗಳನ್ನು ಅತ್ಯಂತ ಉತ್ಸಾಹದಿಂದ ವಿವರಿಸಿದ್ದಾನೆ.

ಮಾರ್ಕಂಡೇಯ ಪುರಾಣದ ಅತ್ಯಂತ ಪ್ರಾಚೀನ ಭಾಗ (ಕ್ರಿ.ಶ. ಸು. ೧೦೦)ವೆಂದು ಪರಿಗಣಿಸಲಾಗಿರುವ ೫೫ನೇ ಅಧ್ಯಾಯದಲ್ಲಿ ದಕ್ಷಿಣ ದೇಶಗಳನ್ನು ಪ್ರಸ್ತಾಪಿಸುವಾಗ ಮಹಾರಾಷ್ಟ್ರ, ಮಹಿಷಕ, ಕರ್ಣಾಟಾ, ಕುಂತಲ, ವನವಾಸಿಕ ಎಂಬ ಹೆಸರುಗಳನ್ನು ಹೇಳಲಾಗಿದೆ. ಇವು ಕನ್ನಡನಾಡನ್ನು ಕುರಿತ ಉಲ್ಲೇಖಗಳಲ್ಲದೆ ಬೇರೆಯಲ್ಲ. ಕ್ರಿ.ಶ. ಸುಮಾರು ಎರಡನೇ ಶತಮಾನದಲ್ಲಿ ರಚಿತವಾದ ತಮಿಳಿನ ಮಹಾಕೃತಿ ‘ಶಿಲಪ್ಪದಿಗಾರಂ’ನಲ್ಲಿ ‘ಕರುನಾಟರ್’ ಎಂಬ ಪದ ಎರಡು ಬಾರಿ ಪ್ರಯೋಗವಾಗಿದೆ. ಇದೇ ಕ್ರಿ.ಶ. ಎರಡನೇ ಶತಮಾನದ ಕೃತಿಯಾದ ‘ಅಹನಾನೂರು’ ತಮಿಳು ಗ್ರಂಥದಲ್ಲಿ ಎರುಮೈನಾಡಿನ (ಈಗಿನ ಮೈಸೂರು) ಪ್ರಸ್ತಾಪವಿದೆ. ಸಂಘಯುಗದ ಪ್ರಾಚೀನ ತಮಿಳು ಕೃತಿಗಳಲ್ಲೂ ಕೂಡ ಮಂಗಳೂರು, ಪುನ್ನಾಡು ಮುಂತಾದ ಊರುಗಳ ಹೆಸರುಗಳು ಕಂಡು ಬರುತ್ತವೆ. ಅಶೋಕನ ಬ್ರಹ್ಮಗಿರಿ ಶಾಸನದಲ್ಲಿನ ‘ಇಸಿಲ’ ಎಂಬ ಪದ ಕನ್ನಡವೆಂದು ಪ್ರೊ. ಡಿ.ಎಲ್. ನರಸಿಂಹಾ ಚಾರ್ಯರು ಸಂಶೋಧಿಸಿದ್ದಾರೆ. ಕ್ರಿ.ಶ. ಸು. ೨೦೦ರಲ್ಲಿದ್ದ ಹಾಲರಾಜನ ಗಾಥಾಸಪ್ತಶತಿಯಲ್ಲಿ ಪೊಟ್ಟೆ ಮುಂತಾದ ಕನ್ನಡ ಪದಗಳು ದೊರೆಯುತ್ತವೆ. ವಿಷ್ಣುಧರ್ಮೋತ್ತರ ಪುರಾಣದ (ಕ್ರಿ.ಶ. ೪೦೦-೫೦೦) ೧೨೧ನೇ ಅಧ್ಯಾಯದ ೩ನೇ ಖಂಡದಲ್ಲಿ, ವರಾಹಮಿಹಿರನ (ಕ್ರಿ.ಶ. ಸು. ೬೦೦) ಬೃಹತ್ ಸಂಹಿತೆಯ ೧೪ನೇ ಅಧ್ಯಾಯದಲ್ಲಿ, ಭಾಗವತ ಪುರಾಣದ (ಕ್ರಿ.ಶ. ಸು. ೬೦೦) ೫ನೇ ಸ್ಕಂಧದ ೬ನೇ ಅಧ್ಯಾಯದಲ್ಲಿ, ‘ಕರ್ಣಾಟಕ’ ಎಂಬ ಹೆಸರಿನ ಸ್ಪಷ್ಟ ಉಲ್ಲೇಖಗಳಿವೆ.

ಮುಂದಿನ ಕಾಲಗಳಲ್ಲಿ ರಚಿತವಾದ ಪದ್ಮಪುರಾಣ, ಬೃಹದ್ದೇಶಿ, ಛಂದೋನು ಶಾಸನ, ರಾಜತರಂಗಿಣಿ, ಔಚಿತ್ಯ ವಿಚಾರ ಚರ್ಚಾ, ವಿಕ್ರಮಾಂಕದೇವ ಚರಿತ ಮುಂತಾದ ಸಂಸ್ಕೃತ ಗ್ರಂಥಗಳಲ್ಲಿ ‘ಕರ್ಣಾಟಕ’ ಎಂಬ ಪದದ ಬಳಕೆಯಾಗಿದೆ. ಇವುಗಳ ಅನಂತರ ನಿರ್ಮಿತವಾದ ಶ್ರೀ ವಿಜಯನ ‘ಕವಿರಾಜಮಾರ್ಗ’, ಪಂಪಮಹಾಕವಿಯ ‘ಆದಿಪುರಾಣ’ ಮತ್ತು ‘ವಿಕ್ರಮಾರ್ಜುನ ವಿಜಯ’ಗಳಿಂದ ಮೊದಲುಗೊಂಡು ಬಹುಮಟ್ಟಿಗೆ ಎಲ್ಲ ಪ್ರಮುಖ ಕನ್ನಡ ಕೃತಿಗಳಲ್ಲೂ ಕರ್ನಾಟಕದ ಹೆಸರು ಉಕ್ತವಾಗಿದೆ. ಆದರೆ ಹಿಂದೆ ‘ಕರ್ನಾಟಕ’ ಎಂಬ ಹೆಸರೊಂದೇ ಇಡೀ ಕನ್ನಡನಾಡನ್ನು ಪ್ರತಿನಿಧಿಸಿದ್ದಿತೆಂದು ಹೇಳಲಾಗುವುದಿಲ್ಲ. ಮಹಾರಾಷ್ಟ್ರ, ಲಾಟ, ಕುಂತಳ, ಕೊಂಕಣ, ಪುನ್ನಾಟ ಮೊದಲಾದ ಹೆಸರುಗಳು ಕನ್ನಡ ಭಾಷೆಯನ್ನಾಡುವ ಬೇರೆ ಬೇರೆ ಪ್ರದೇಶಗಳಿಗೆ ಇದ್ದವು ಎಂಬುದನ್ನು ಗಮನಿಸಬೇಕು.

ಕಾಲನಿರ್ಣಯದ ದೃಷ್ಟಿಯಿಂದ ಶಾಸನಗಳು ಅತ್ಯಂತ ವಿಶ್ವಾಸಾರ್ಹ ದಾಖಲೆಗಳು. ಇವುಗಳಲ್ಲಿ ಕದಂಬರ ದೊರೆ ಶಾಂತಿವರ್ಮನ ಒಂದು ಶಾಸನ ಗಮನಾರ್ಹ. ಇದು ಕ್ರಿ.ಶ. ೪೫೦ಕ್ಕೆ ಸೇರಿದ್ದು. ಇದರಲ್ಲಿ ‘ವೈಜಯಂತೀ ತಿಲಕ’, ‘ಸಮಗ್ರ ಕರ್ಣಾಟಕ ಭೂವರ್ಗ ಭರ್ತ್ತಾರಂ’ ಎಂಬ ಉಲ್ಲೇಖಗಳಿವೆ. ಇದೇ ಅತ್ಯಂತ ಪ್ರಾಚೀನ ಸಾಕ್ಷಿ. ಹೀಗೆಯೇ ಗಂಗ ದೊರೆ ಭೂವಿಕ್ರಮನ ತಾಮ್ರಶಾಸನ, ರಾಷ್ಟ್ರಕೂಟದ ದಂತಿದುರ್ಗನ ತಾಮ್ರಶಾಸನ ಮೊದಲಾದವುಗಳಲ್ಲೂ ಕರ್ನಾಟಕ ಕರ್ಣಾಟಕ ಎಂಬ ರೂಪಗಳಿವೆ. ಪಾಂಡ್ಯರಾಜ ಶೆಡೈಮನ್ ಪರಾಂತಕನ ತಾಮ್ರಶಾಸನವೊಂದರಲ್ಲೂ ‘ಕರುನಾಡಗನ್’ ಎಂಬ ರೂಪವನ್ನು ಬಳಸಲಾಗಿದೆ. ಹೀಗೆ ಕನ್ನಡನಾಡಿನ ಉಲ್ಲೇಖವುಳ್ಳ ನೂರಕ್ಕೂ ಹೆಚ್ಚು ಶಾಸನಗಳು ಉಪಲಬ್ಧವಿವೆ.

ಈ ನಾಡಿನ ಬಗ್ಗೆ ದೊರೆಯುವ ಮೊತ್ತ ಮೊದಲ ಕನ್ನಡ ಗ್ರಾಂಥಿಕ ದಾಖಲೆ ‘ಕವಿರಾಜ ಮಾರ್ಗ’. ಕನ್ನಡನಾಡು ನುಡಿ ಸಾಹಿತ್ಯ ಮತ್ತು ಜನತೆಯ ಬಗ್ಗೆ ಅಭಿಮಾನ ಪೂರ್ಣ ವಿವರಗಳನ್ನು ನೀಡುವ ಈ ಮಹತ್ವದ ಕೃತಿ, ನಾಡಿನ ವಿಸ್ತಾರವನ್ನು ವರ್ಣಿಸುತ್ತ “ಕಾವೇರಿ ಯಿಂದಮಾ ಗೋದಾವರಿ ವರಮಿರ್ದ ನಾಡದಾ ಕನ್ನಡದೋಳ್” ಎಂದು ಉಲ್ಲೇಖಿಸಿದೆ. ಈ ಹೇಳಿಕೆಯಿಂದ, ನೃಪತುಂಗನ ಕಾಲಕ್ಕೆ (೯ನೇ ಶತಮಾನ) ಈ ರಾಜ್ಯ ದಕ್ಷಿಣದ ಕಾವೇರಿಯಿಂದ ಉತ್ತರದ ಗೋದಾವರಿಯವರೆಗೆ ವಿಸ್ತರಿಸಿತ್ತು ಎಂಬುದು ಸ್ಪಷ್ಟವಾಗುತ್ತದೆ. ‘ರಾಮನಾಥ ಚರಿತ್ರೆ’ಯನ್ನು ರಚಿಸಿದ ನಂಜುಂಡ ಕೂಡ ಕರ್ನಾಟಕವನ್ನು “ಕಾವೇರಿಯಿಂದ ಗೋದಾವರಿವರಗಮಿರ್ಪ ವಸುಧಾತಳವಳಯ” ಎಂದಿದ್ದಾನೆ. ಕನ್ನಡ ನಿಷ್ಠಕವಿ ಆಂಡಯ್ಯ ತನ್ನ ‘ಕಬ್ಬಿಗರ ಕಾವ್ಯ’ದಲ್ಲಿ ‘ಕನ್ನಡಮೆನಿಪ್ಪಾ ನಾಡು’ ಎಂದು ಕರೆದಿದ್ದಾನೆ.

ಇದುವರೆಗೆ ಗಮನಿಸಿದಂತೆ ಕರ್ನಾಟ, ಕರ್ನಾಟಕ, ಕರ್ಣಾಟಕ, ಕನ್ನಡ, ಕನ್ನಡ ನಾಡು ಮುಂತಾದ ಹೆಸರುಗಳಿಂದ ಈ ರಾಜ್ಯ ಶಾಸನಗಳಲ್ಲಿ ಹಾಗೂ ಗ್ರಂಥಗಳಲ್ಲಿ ಉಲ್ಲೇಖಿತ ವಾಗಿರುವುದು ನಿಚ್ಚಳವಾಗಿದೆ. ಈ ಎಲ್ಲ ಆಧಾರಗಳಿಂದ ಕರ್ನಾಟಕ ಅಥವಾ ಕನ್ನಡ ನಾಡು ಇತಿಹಾಸಪೂರ್ವಯುಗದಿಂದಲೂ ಅಸ್ತಿತ್ವದಲ್ಲಿದ್ದು ಪ್ರಸಿದ್ಧವಾಗಿದೆಯೆಂದು ಹೇಳಬಹುದು.
ಜನತೆ
ಈ ನಾಡಿನ ಉಲ್ಲೇಖದ ಜೊತೆ ಜೊತೆಗೇ ಈ ನಾಡಿನ ಜನತೆಯ ಗುಣ ಸ್ವಭಾವಗಳ ಬಗೆಗೂ ಹೃದಯಸ್ಪರ್ಶಿಯಾದ ವಿವರಗಳು ದೊರೆಯುತ್ತವೆ. ತಾವಾಡುವ ಮಾತುಗಳ ಅರ್ಥಭಾವಗಳನ್ನು ಅರಿತು ನುಡಿಯಬಲ್ಲವರು, ನುಡಿದುದನ್ನು ಅರ್ಥವಿಸಿಕೊಳ್ಳಬಲ್ಲವರು ಈ ನಾಡಿನ ಜನ. ಇವರು ಚದುರರು. ಕುರಿತು ಓದದೆಯೂ ಕೂಡ ಇವರು ಕಾವ್ಯಪ್ರಯೋಗ ಮತಿಗಳು. ಇವರು ಸುಭಟರು, ಕವಿಗಳು, ಸುಪ್ರಭುಗಳು, ಚೆಲುವರು, ಗುಣಿಗಳು, ಅಭಿಮಾನಿಗಳು, ಅತ್ಯುಗ್ರರು, ಗಂಭೀರ ಚಿತ್ತರು, ವಿವೇಕಿಗಳು-ಇದು ಕವಿರಾಜ ಮಾರ್ಗಕಾರ ಬಿಡಿಸಿರುವ ಕನ್ನಡ ಜನತೆಯ ಚಿತ್ರ. ಕನ್ನಡ ಜನ ಚಾಗದ ಭೋಗದ ಅಕ್ಕರದ ಗೇಯದ ಗೊಟ್ಟಿಯ ಅಲಂಪಿನ ಇಂಪುಗಳಿಗೆ ಆಗರವಾದ ಮಾನಿಸರು-ಇದು ಪಂಪನ ಅಭಿಮಾನಪೂರ್ಣ ವರ್ಣನೆ. ಈ ನಾಡಿನಲ್ಲಿ ವೀರರಲ್ಲದೆ ಹೇಡಿಗಳಿಲ್ಲ; ವಿತರಣ ಗುಣಶೂರರಲ್ಲದೆ ಲೋಭಿಗಳಿಲ್ಲ; ಸಾರಗುಣಗ್ರಾಹಿರಸಿಕರಲ್ಲದೆ ದುರ್ವಿಕಾರಿಗಳಿಲ್ಲ; ಇಲ್ಲಿ ಅನೃತವನ್ನು ಆಡುವವರಿಲ್ಲ; ಯುದ್ಧರಂಗದಿಂದ ಓಡುವವರಿಲ್ಲ; ಬೇಡಿದುದನ್ನು ಕೊಡದ ವರಿಲ್ಲ-ಇದು ನಂಜುಂಡ ಕವಿಯ ಹೆಮ್ಮೆಯ ಉದ್ಗಾರ. ಕನ್ನಡ ಜನರ ವ್ಯಕ್ತಿತ್ವದ ಸುಸಂಸ್ಕೃತ ಪ್ರಪಂಚ ಈ ಬರಹಗಳಲ್ಲಿ ಮೂರ್ತಿವೆತ್ತಿದೆ.

ಮೇಲಿನ ಉಲ್ಲೇಖಗಳು ಕೇವಲ ಭಾವಜೀವಿಗಳ ಭಾವಾವೇಶದ ಅತ್ಯುಕ್ತಿಗಳಲ್ಲ ವೆಂಬುದಕ್ಕೆ ಚಾರಿತ್ರಿಕ ಸಾಕ್ಷಿಗಳಿವೆ. ಕ್ರಿ.ಶ.ದ ಆರಂಭದಿಂದಲೂ ಈ ರಾಜ್ಯವನ್ನು ಹತ್ತಾರು ಸುಪ್ರಸಿದ್ಧ ರಾಜವಂಶಗಳ ನೂರಾರು ಜನ ಕದನಕಲಿಗಳೂ ಬುದ್ದಿಶ್ರೀಮಂತರೂ ಕಲಾರಸಿಕರೂ ಪ್ರಜವತ್ಸಲರೂ ಆಡಳಿತ ಸಮರ್ಥರೂ ಆದ ರಾಜರುಗಳು ಆಳಿದ್ದಾರೆ. ಕರ್ನಾಟಕವನ್ನು ಆಳಿದ ಮೊದಲ ರಾಜವಂಶ ಶಾತವಾಹನರದು. ಹಾಲರಾಜ, ಶಾತಕರ್ಣಿ ಇವರಲ್ಲಿ ಪ್ರಖ್ಯಾತರು. ಹಾಲರಾಜ ಕವಿಯೂ ಆಗಿದ್ದು ‘ಗಾಥಾಸಪ್ತಶತಿ’ ಎಂಬ ಸುಂದರ ಕಾವ್ಯವೊಂದನ್ನು ರಚಿಸಿದ್ದಾನೆ. ಈ ರಾಜವಂಶದವರ ಕಾಲದಲ್ಲಿ ಕರ್ನಾಟಕವು ಇಟಲಿ ಚೀನಾ ಮುಂತಾದ ದೇಶಗಳೊಡನೆ ವಾಣಿಜ್ಯ ಸಂರ್ಪಕವನ್ನು ಹೊಂದಿದ್ದಂತೆ ತಿಳಿದು ಬಂದಿದೆ. ಇವರ ನಂತರದ ಕದಂಬ ರಾಜರು ಅತ್ಯಂತ ಶೌರ್ಯಧೈರ್ಯಗಳಿಂದ ಈ ನಾಡಿನ ಘನತೆಯನ್ನು ಕೀರ್ತಿಯನ್ನು ಮೆರೆಸಿದರು. ಇವರು ಬನವಾಸಿಯನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ವೈಜಯಂತೀಪುರವರಾಧೀಶರೆನಿಸಿ ಕನ್ನಡ ನಾಡಿನ ವಾಯುವ್ಯ ಭಾಗವನ್ನು ಆಳಿದರು. ಗಂಗರಾಜರದು ಮತ್ತೊಂದು ಖ್ಯಾತ ವಂಶ. ಮೊದಲು ಅನಂತಪುರ ಮತ್ತು ಕಡಪ ಜಿಲ್ಲೆಗಳನ್ನು ಒಳಗೊಂಡಿದ್ದ ಇವರ ರಾಜ್ಯ, ಅನಂತರ ಸೇಲಂ, ಕೊಯಮತ್ತೂರು, ಕೊಡಗು, ತುಮಕೂರು, ಬೆಂಗಳೂರು ಮತ್ತು ಮೈಸೂರು ಜಿಲ್ಲೆಗಳನ್ನು ಒಳಗೊಂಡಿತು. ಕದಂಬ, ಗಂಗ, ಹೈಹಯ ಮೊದಲಾದ ರಾಜವಂಶಗಳಲ್ಲಿ ಚಿಕ್ಕದಾಗಿ ಹರಿಹಂಚಾಗಿದ್ದ ನಾಡು ಬಾದಾಮಿಯ ಚಾಲುಕ್ಯರ ಕಾಲದಲ್ಲಿ ಒಗ್ಗೂಡಿ ವಿಸ್ತಾರವಾಯಿತು. ಉತ್ತರ ಭಾಗದಲ್ಲಿ ನರ್ಮದಾ ನದಿಯವರೆಗೆ, ದಕ್ಷಿಣದಲ್ಲಿ ಕಾವೇರಿಯವರೆಗೆ, ಪೂರ್ವದಲ್ಲಿ ಕರ್ನೂಲ್, ನಲ್ಲೂರು ಮತ್ತು ಗುಂಟೂರುಗಳವರೆಗೆ, ಪಶ್ಚಿಮದಲ್ಲಿ ಅರಬ್ಬೀಸಮುದ್ರದವರೆಗೆ ಇದು ಹಬ್ಬಿತು. ಗುಜರಾತ್ ಮತ್ತು ಆಂಧ್ರಗಳ ಮೇಲೂ ಇವರ ಪ್ರಭುತ್ವ ವ್ಯಾಪಿಸಿತು. ರಾಷ್ಟ್ರಕೂಟರಂತೂ ಹಲವು ರಂಗಗಳಲ್ಲಿ ಕನ್ನಡದ ಕೀರ್ತಿ ಪತಾಕೆಯನ್ನು ಹಾರಿಸಿದರು. ಉಸ್ಮಾನಾಬಾದ್ ಜಿಲ್ಲೆಯ ಲಟ್ಟಲೂರು (ಇಂದಿನ ಲಾಟೂರು), ನಾಸಿಕ್ ಜಿಲ್ಲೆಯ ಮಯೂರಖಂಡಿ ಮತ್ತು ಗುಲ್ಬರ್ಗ ಜಿಲ್ಲೆಯ ಮಾನ್ಯಖೇಟ (ಮಾಲ್ಕೇಡ್) ಇವರ ರಾಜಧಾನಿಗಳಾಗಿದ್ದವು. ದಕ್ಷಿಣದ ಕಾವೇರಿಯಿಂದ ಉತ್ತರದ ನರ್ಮದೆಯವರೆಗಿನ ವಿಶಾಲ ಭೂಭಾಗವನ್ನು ತನ್ನ ನೇರ ತೆಕ್ಕೆಗೆ ತೆಗೆದುಕೊಂಡದ್ದು ಮಾತ್ರವಲ್ಲದೆ, ಗುಜರಾತ್, ಮಾಳವ, ಆಂಧ್ರ, ಕಂಸಿ ಮತ್ತು ತಂಜವೂರು ಪ್ರಾಂತ್ಯಗಳ ಮೇಲೂ ತಮ್ಮ ಆಡಳಿತವನ್ನು ಸ್ಥಾಪಿಸಿದ  ಖ್ಯಾತಿ ಇವರದು. ಸುಮಾರು ಮೂರು ಶತಮಾನಗಳ ಸುದೀರ್ಘ ಕಾಲ ಇಡೀ ಭರತಖಂಡ ವನ್ನೇ ಕರ್ನಾಟಕದ ತೋಳಿಗೆ ತೆಗೆದುಕೊಂಡಿದ್ದ ಈ ರಾಜ್ಯವನ್ನು ವಿಶ್ವದ ನಾಲ್ಕು ಮಹಾರಾಷ್ಟ್ರಗಳಲ್ಲಿ ಒಂದೆಂದು ಅರಬ್ ಇತಿಹಾಸಕಾರ ಸುಲೇಮಾನ್ ಕೈವಾರಿಸಿದ್ದಾನೆ. ಈ ಕಾಲಮಾನದ ಭಾರತದ ಇತಿಹಾಸವನ್ನು ರಾಷ್ಟ್ರಕೂಟಯುಗವೆಂದೇ ಹೆಸರಿಸುವುದು ಔಚಿತ್ಯಪೂರ್ಣವಾದುದೆಂದು ಇತಿಹಾಸಕಾರರು ಅಭಿಪ್ರಾಯಪಡುವಷ್ಟರ ಮಟ್ಟಿಗೆ ಕನ್ನಡದ ರಾಷ್ಟ್ರಕೂಟ ದೊರೆಗಳು ಅವಿಸ್ಮರಣೀಯ ಪ್ರಸಿದ್ದಿಗೆ ಪಾತ್ರರಾಗಿದ್ದಾರೆ. ಅನಂತರದ ಕಾಲದಲ್ಲಿ ಈ ಸಾಮ್ರಾಜ್ಯದ ಚಕ್ರವರ್ತಿಗಳಾಗಿ ವಿಜೃಂಭಿಸಿದ ಕಲ್ಯಾಣದ ಚಾಲುಕ್ಯರು ಬನವಾಸಿ, ಪಾನುಂಗಲ್ಲು, ಪುಲಿಗೆರೆ, ಬೆಳುವೊಲ, ವೇಣುಗ್ರಾಮ, ಕಿಸುಕಾಡು, ಬಾಗಡಿಗೆ, ತರ್ದವಾಡಿ ಮುಂತಾದ ಭೂಪ್ರದೇಶಗಳನ್ನು ತಮ್ಮ ಆಡಳಿತ ವಿಭಾಗಗಳಾಗಿ ಹೊಂದಿದ್ದರು. ಸೊಲ್ಲಾಪುರ ಜಿಲ್ಲೆಯ ಮಂಗಳವೇಡೆಯ ಕೇಂದ್ರದಿಂದ ಆಳುತ್ತಿದ್ದ ಕಲಚೂರ್ಯರು ಬಿಜಪುರ ಮತ್ತು ಸೊಲ್ಲಾಪುರಗಳನ್ನೊಳಗೊಂಡ ತರ್ದವಾಡಿ ಪ್ರಾಂತ್ಯವನ್ನು ತಮ್ಮ ವ್ಯಾಪ್ತಿಯಲ್ಲಿರಿಸಿ ಕೊಂಡಿದ್ದರು. ಅಚ್ಚಗನ್ನಡದ ಹೊಯ್ಸಳ ಸಾಮ್ರಾಜ್ಯ ವಿಷ್ಣುವರ್ಧನನ ಕಾಲದಲ್ಲಿ ತನ್ನ ವೈಭವದ ತುತ್ತತುದಿಯನ್ನು ಮುಟ್ಟಿತ್ತು. ದ್ವಾರಸಮುದ್ರವನ್ನು ರಾಜಧಾನಿಯನ್ನಾಗಿ ಹೊಂದಿದ್ದ ಈ ಸಾಮ್ರಾಜ್ಯ ಸೇಲಂ (ಕೊಂಗು), ನಂಗಲಿ, ತಲಕಾಡು, ನೊಳಂಬವಾಡಿ, ಗಂಗವಾಡಿ, ಬನವಾಸಿ, ಹಾನಗಲ್, ಹುಲಿಕೆರೆ, ಬೆಳುವೊಲ ಮುಂತಾದ ಪ್ರದೇಶಗಳನ್ನೊಳ ಗೊಂಡಿತ್ತು. ಅನಂತರ ಕನ್ನಡ ನಾಡಿಗೆ ವಿಶ್ವವಿಖ್ಯಾತಿಯನ್ನು ದೊರಕಿಸಿಕೊಟ್ಟವರು ವಿಜಯನಗರದ ಸಾಮ್ರಾಜ್ಯದವರು. ಕಲೆ, ಸಾಹಿತ್ಯ, ಸಂಸ್ಕೃತಿ, ಸಂಪತ್ತುಗಳಲ್ಲಿ ಶಿಖರಸ್ಥಾಯಿಯಾಗಿದ್ದ ಈ ಚಕ್ರಾಧಿಪತ್ಯ ಒರಿಸ್ಸಾದ ತುದಿಯಿಂದ ಸಿಲೋನಿನವರೆಗೆ ಮೈಚಾಚಿತ್ತು. ವಿಜಯನಗರದ ಪತನಾನಂತರ ಮತ್ತೆ ಈ ನಾಡು ಛಿದ್ರವಾಯಿತು.

ಹೀಗೆ ಕ್ರಿ.ಪೂರ್ವದ ಶಿಲಾಯುಗ ಮತ್ತು ಲೋಹಯುಗಗಳಿಂದಲೂ ಈ ನಾಡು ವಿಕಾಸಗೊಳ್ಳುತ್ತ ಬಂದಿದೆ; ಅನಂತರದ ಇತಿಹಾಸಯುಗದಲ್ಲಿ ಮರ್ಯರು, ಶಾತವಾಹನರು, ಬಾಣರು, ಅಳುಪರು, ಸೇಂದ್ರಕರು, ಪುನ್ನಾಟರು, ಪಲ್ಲವರು, ಕದಂಬರು, ನೊಳಂಬರು, ಗಂಗರು, ಬಾದಾಮಿಯ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣದ ಚಾಲುಕ್ಯರು, ಯಾದವರು, ಕಲಚೂರ್ಯರು, ಹೊಯ್ಸಳರು, ಶಿಲಾಹಾರರು, ರಟ್ಟರು, ಕದಂಬರು, ಸಾಳುವರು, ಪಾಂಡ್ಯರು, ವಿಜಯನಗರದವರು, ಕೆಳದಿ, ಇಕ್ಕೇರಿ, ಮೈಸೂರೊಡೆಯರು ಇತ್ಯಾದಿ ರಾಜಮನೆತನಗಳ ಆಳ್ವಿಕೆಗೆ ಒಳಪಟ್ಟು, ಹಲವಾರು ಏಳುಬೀಳುಗಳನ್ನು ಕಂಡು, ತ್ಯಾಗ ಶೌರ್ಯ ಬಲಿದಾನ ಶಕ್ತಿ ಸಾಮರ್ಥ್ಯ ಸಂಸ್ಕೃತಿಗಳನ್ನು ರೋಮಾಂಚನಕಾರಿಯಾಗಿ ಮೆರೆದಿದೆ.

ಪ್ರಭಾವ
ಭಾರತದ ರಮ್ಯೋಜ್ವಲವಾದ ಇತಿಹಾಸದಲ್ಲಿ ಹಲವು ವಿಕ್ರಮಗಳನ್ನು ಸ್ಥಾಪಿಸಿಕೊಂಡು ಬಂದಿರುವ ಕರ್ನಾಟಕ ತನ್ನ ನೆರೆಹೊರೆಯ ಪ್ರಾಂತ್ಯಗಳ ಮೇಲೆ ಬೀರಿದ ಹಲವು ಮುಖದ ಪ್ರಭಾವ ಅವಗಣಿಸುವಂಥದಲ್ಲ. ಇಂದು ಭಾರತದ ರಾಜಕೀಯ ನಕ್ಷೆಯಲ್ಲಿ ಪ್ರಮುಖ ಸ್ಥಾನ ಪಡೆದಿರುವ ಮಹಾರಾಷ್ಟ್ರ, ಗುಜರಾತ್, ಬಂಗಾಳ, ಬಿಹಾರ, ತಮಿಳುನಾಡು ಮತ್ತು ಆಂಧ್ರಪ್ರದೇಶಗಳು ಒಮ್ಮೆಯಲ್ಲ ಒಮ್ಮೆ ರಾಜಕೀಯವಾಗಿ, ಸಾಹಿತ್ಯಕವಾಗಿ, ಸಾಂಸ್ಕೃತಿಕ ವಾಗಿ ಕರ್ನಾಟಕದ ಪ್ರಭಾವಕ್ಕೆ ಒಳಗಾಗಿವೆ.

ಹಲವಾರು ದೃಷ್ಟಿಗಳಿಂದ ಭಾರತದ ಮುಖ್ಯ ರಾಜ್ಯಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದ ಅಸ್ತಿತ್ವವೇ ಹಿಂದೆ ಇರಲಿಲ್ಲವೆಂದರೆ ವಿಸ್ಮಯವಾದೀತು. ಈಗ ಈ ಹೆಸರಿನಿಂದ ಕರೆಯ ಲಾಗುವ ರಾಜ್ಯದ ಬಹುಭಾಗ ಶುದ್ಧ ಕನ್ನಡನಾಡಿನ ಅಂಗ ಭಾಗವಾಗಿತ್ತು. ಮಹಾರಾಷ್ಟ್ರ ಎಂಬ ಹೆಸರೇ ಮರಾಠಿಯದಲ್ಲ, ಮಹಾನಾಡು ಎಂಬುದರ ಸಂಸ್ಕೃತೀಕರಣ. ಕನ್ನಡ ಚಕ್ರವರ್ತಿ ಇಮ್ಮಡಿ ಪುಲಿಕೇಶಿಯ ಐಹೊಳೆ ಶಾಸನದಲ್ಲಿ ಇರುವ ಮಹಾರಾಷ್ಟ್ರ ಎಂಬ ಪದ ಅವನ ಆಳ್ವಿಕೆಯ ವಿಶಾಲ ಕನ್ನಡನಾಡನ್ನು ಸೂಚಿಸುತ್ತದೆ. ನಮ್ಮ ಹೆಮ್ಮೆಯ ಕವಿಗಳಲ್ಲೊಬ್ಬನಾದ ಜನ್ನ ನರ್ಮದಾ ಮತ್ತು ಕಾವೇರಿಗಳ ನಡುವಣ ನಾಡನ್ನು ಮಹಾರಾಷ್ಟ್ರ ಮಂಡಲವೆಂದು  ಕರೆದಿದ್ದಾನೆ ತನ್ನ ‘ಅನಂತನಾಥ ಪುರಾಣ’ದಲ್ಲಿ. ಮಹಾರಾಷ್ಟ್ರವನ್ನು ಕರ್ನಾಟಕವೆಂದು ‘ತಾರಾತಂತ್ರ’ ಎಂಬ ಕೃತಿಯಲ್ಲಿ ಹೆಸರಿಸಿರುವುದು ಇವೆರಡೂ ಮೂಲತಃ ಒಂದೇ ಆಗಿದ್ದವೆಂಬುದಕ್ಕೆ ಪ್ರಬಲ ಆಧಾರವಾಗಿದೆ. ಚೀನಾದ ಯಾತ್ರಿಕ ಹ್ಯೂಯನ್‌ತ್ಯಾಂಗ್ ಪುಲಿಕೇಶಿಯನ್ನು ಮಹಾರಾಷ್ಟ್ರದ ಒಡೆಯನೆಂದೇ ಕರೆದಿದ್ದಾನೆ. ಮಹಾರಾಷ್ಟ್ರ ಮತ್ತು ಕರ್ನಾಟಕಗಳೆರಡೂ ಬೇರೆ ಬೇರೆಯಲ್ಲವೆಂದೂ, ಅವೆರಡರಲ್ಲಿ ಹರಿಯುವುದು ಒಂದೇ ರಕ್ತವೆಂದೂ, ಅವೆರಡರ ಭಾಷೆಯೂ ಮೊದಲು ಕನ್ನಡವೇ ಆಗಿತ್ತೆಂದು ಬಾಲ ಗಂಗಾಧರ ತಿಲಕ್ ಅವರೇ ಉಲ್ಲೇಖಿಸಿದ್ದಾರೆ. ೧೩ನೇ ಶತಮಾನದಲ್ಲೂ ಸಹ ಭೀಮರತಿಯವರೆಗೂ  ಕನ್ನಡವಿತ್ತೆಂಬುದಕ್ಕೆ ‘ಜ್ಞಾನೇಶ್ವರಿ’ ಸಾಕ್ಷಿಯಾಗಿದೆ. ಬರೋಡ ಪ್ರದೇಶದಲ್ಲಿ ದೊರೆತಿರುವ ತಾಮ್ರಶಾಸನವೊಂದರಲ್ಲಿ ರಾಷ್ಟ್ರಕೂಟರ ಸಹಿ ಇದೆ. ಔರಂಗಾಬಾದ್ ಜಿಲ್ಲೆಯ ಪಶ್ಚಿಮ ಭಾಗದಲ್ಲಿರುವ ಪೈಠಣ ಎಂಬುದು ಕನ್ನಡ ನುಡಿಯ ಕೇಂದ್ರವಾಗಿತ್ತೆಂದು ಕ್ರಿ.ಶ. ೭ನೇ ಶತಮಾನದ ಪ್ರದ್ಯೋತನ ಸೂರಿ ಎಂಬ ಜೈನ ಕವಿ ತನ್ನ ‘ಕುವಲಾಯಮಾಲಾ’ ಗ್ರಂಥದಲ್ಲಿ ಲೇಖಿಸಿದ್ದಾನೆ. ಈಗಿನ ಮಹಾರಾಷ್ಟ್ರದಲ್ಲಿರುವ ನಾಸಿಕ್ ನಮ್ಮ ರಾಷ್ಟ್ರಕೂಟರ ಮುಖ್ಯ ಪಟ್ಟಣಗಳಲ್ಲಿ ಒಂದಾಗಿತ್ತು. ಇಂದಿನ ಮುಂಬಯಿ ನಗರ ಮುಂಬಣಿ ಎಂಬ ಹೆಸರಿನಿಂದ ಕನ್ನಡ ಅರಸರಾದ ಶಿಲಾಹಾರರ ರೇವು ಪಟ್ಟಣವಾಗಿತ್ತು. ನಾಗಪುರ, ಪೂನಾ, ಶಿರೂರ್ ಮುಂತಾದವು ಕನ್ನಡ ನುಡಿಯ ಕೇಂದ್ರಗಳಾಗಿ ರಾಷ್ಟ್ರಕೂಟರ ಪ್ರಮುಖ ನಗರಗಳಾಗಿದ್ದವು. ಮರಾಠಿಯ ಪ್ರಸಿದ್ಧ ಕೃತಿ ‘ಜ್ಞಾನೇಶ್ವರಿ’ಯಲ್ಲಿ ಹೇರಳವಾಗಿ ಕನ್ನಡ ಪದಗಳಿವೆ. ಕರ್ನಾಟಕ ಸಂಗೀತ ಪಿತಾಮಹರೆನಿಸಿರುವ ಪುರಂದರದಾಸರು ಪುಣೆಯ ಹತ್ತಿರದ ಪುರಂದರಗಡದವರು. ಮಹಾರಾಷ್ಟ್ರದ ಹಲವು ಸಂತರ ಮೇಲೆ ಬಸವೇಶ್ವರರ ವ್ಯಕ್ತಿತ್ವ ಮತ್ತು ವಚನಗಳ ಪ್ರಭಾವವಾಗಿದೆ. ಸಂತ ತುಕಾರಾಮರು ತಮ್ಮ ಅಭಂಗಗಳಲ್ಲಿ ಬಸವಣ್ಣನನ್ನು ಸ್ಮರಿಸಿದ್ದಾರೆ. ನಮ್ಮ ಕನ್ನಡ ಕವಿಗಳಾದ ಚೌಂಡರಸ, ಸಾಳ್ವ ಮುಂತಾದವರು ಪಂಡರಿಗೆ ಮತ್ತು ನಗಿರೆ ಊರಿನವರು. ಮಹಾರಾಷ್ಟ್ರದ ಅರ್ಧಕ್ಕಿಂತ ಹೆಚ್ಚಿನ ಊರುಗಳ ಹೆಸರುಗಳು ಕನ್ನಡದವೆಂದು ಪ್ರಸಿದ್ಧ ಸಂಶೋಧಕರಾದ ಶ್ರೀ ರಾಜವಾಡೆಯವರೇ ಅಭಿಪ್ರಾಯಪಟ್ಟಿದ್ದಾರೆ. ‘ಕನ್ನಡ’ ಎಂಬ ಹೆಸರಿನ ಒಂದು ತಾಲ್ಲೂಕೇ ಇಲ್ಲಿದ್ದು, ರಾಷ್ಟ್ರಕೂಟರ ಮೂರನೆಯ ಕೃಷ್ಣ ನಿರ್ಮಿಸಿದ ಲೋಕಪ್ರಸಿದ್ಧ ಕೈಲಾಸ ದೇವಾಲಯ ಇಲ್ಲಿಯೇ ಇದೆ. ನಮ್ಮ ಚಾಮರಸ ಕವಿಯ ‘ಪ್ರಭುಲಿಂಗಲೀಲೆ’, ಕುಮಾರವ್ಯಾಸನ ಮಹಾಕಾವ್ಯ ‘ಕರ್ನಾಟಕ ಭಾರತ ಕಥಾಮಂಜರಿ’ ಮರಾಠಿಗೆ ಅನುವಾದಗೊಂಡು ಆ ಸಾಹಿತ್ಯದ ಮೇಲೆ ಗಾಢವಾದ ಪ್ರಭಾವ ಬೀರಿವೆ. ಮರಾಠಿಕೋಶದ ಮೇಲೆ ಕನ್ನಡ ಬೀರಿರುವ ಪರಿಣಾಮವಂತೂ ನಿಚ್ಚಳವಾದುದು.

ಗುಜರಾತ್ ಐದು ಶತಮಾನಗಳಷ್ಟು ಸುದೀರ್ಘಕಾಲ ಕನ್ನಡ ರಾಜರ ಪ್ರಭುತ್ವಕ್ಕೆ ಒಳಪಟ್ಟಿತ್ತು. ಕರ್ನಾಟಕದ ಸಾಮಂತರಲ್ಲಿ ಒಬ್ಬನಾಗಿದ್ದ ಗೋವೆಯ ಕಂದಬರ ಒಂದನೇ ಜಯಕೇಶಿ ತನ್ನ ಮಗಳನ್ನು ಗುಜರಾತಿನ ದೊರೆ ಒಂದನೆಯ ಕರ್ಣನಿಗೆ ವಿವಾಹ ಮಾಡಿಕೊಟ್ಟಿದ್ದ. ಕನ್ನಡದ ಮಹಾಕೀರ್ತಿವೆತ್ತ ದೊರೆ ಎರಡನೇ ಪುಲಿಕೇಶಿ ಮರ್ಯ ಲಾಟ ಗುರ್ಜರರನ್ನು ಸೋಲಿಸಿದ್ದ. ಏಳನೇ ಶತಮಾನದ ಪೂರ್ವದಲ್ಲಿ ಇದು ಕಲಚೂರ್ಯ ರಾಜ್ಯದ ಒಂದು ಭಾಗವಾಗಿತ್ತು. ಪಶ್ಚಿಮ ಚಾಳುಕ್ಯ ರಾಜ ಮಂಗಳೇಶ ಈ ಲಾಟನನ್ನು ಗೆದ್ದ. ಅವನಿಜಶ್ರಯ ಪುಲಿಕೇಶಿ ಗುರ್ಜರ ರಾಜನ ಉತ್ತರ ಪ್ರಾಂತ್ಯಗಳನ್ನು ವಶಪಡಿಸಿಕೊಂಡಿದ್ದ. ಚಾಲುಕ್ಯರ ಸೇನಾಪತಿ ಭಾರಪನ ಸಂತತಿಯವರು ಕ್ರಿ.ಶ. ೧೦೫೧ರವರೆಗೂ ಲಾಟವನ್ನಾಳಿದರು. ೧೩ನೇ ಶತಮಾನದಲ್ಲಿ ಮಹಾದೇವರಾಜ ಲಾಟರನ್ನು ಜಯಿಸಿ ರಾಜ್ಯವಾಳಿದ. ರಾಷ್ಟ್ರಕೂಟರ ಮೂರನೆಯ ಕೃಷ್ಣನ ಒಂದು ಕನ್ನಡ ಶಾಸನ ಉತ್ತರದ ‘ಜೂರಾ’ ಎಂಬ ಕಡೆ ದೊರೆತಿದೆ. ಎರಡನೇ ಪುಲಿಕೇಶಿ ಹರ್ಷನನ್ನು ಸೋಲಿಸುವ ಮುಂಚೆ ಅಲ್ಲಿ ರಾಜ್ಯಭಾರ ಮಾಡುತ್ತಿದ್ದ ಸೇಂದ್ರಕ ರಾಜರು ಕನ್ನಡಿಗರೆಂದು ಸಹ ಅಭಿಪ್ರಾಯವಿದೆ. ಗುಜರಾತಿನ ಎಷ್ಟೋ ಹಳ್ಳಿಗಳ ಹೆಸರುಗಳು ಕನ್ನಡದವೆಂಬುದು ಪ್ರಸಿದ್ಧ ಇತಿಹಾಸಜ್ಞ ಡಾ. ಬಿ.ಎ. ಸಾಲತೊರೆಯವರ ಅಭಿಮತ. ಚಾಲುಕ್ಯರು ಹಲವು ಹೊಸ ಆಡಳಿತ ಪದ್ಧತಿಗಳನ್ನು ಗುಜರಾತಿನಲ್ಲಿ ಜರಿಗೆ ತಂದರೆಂದು ಡಾ. ಸಂಕಾಲಿಯಾ ಅಭಿಪ್ರಾಯಪಡುತ್ತಾರೆ. ಅಲ್ಲಿನ ಶಾಸನಗಳಲ್ಲಿ ದೊರೆಯುವ “ಗ್ರಾಮಭೋಜಿತ” ಗ್ರಾಮ ಗುಂಪು, ಪಟ್ಟಸಿಲ ಮುಂತಾದ ಹೆಸರುಗಳು ಇದರ ಫಲಗಳು. ರಾಷ್ಟ್ರಕೂಟರ ದಂತಿವರ್ಮನ ಕಾಲದಲ್ಲಿ ಪ್ರಖ್ಯಾತ ಜೈನ ಸನ್ಯಾಸಿ ಸಮಂತಭದ್ರರು ಜೈನ ದಿಗಂಬರ ಸಂಪ್ರದಾಯವನ್ನು ಪ್ರಸಾರ ಮಾಡುವುದಕ್ಕಾಗಿ ಮಾಳವ, ಸಿಂಧ, ಮಗಧ ದೇಶಗಳಿಗೆ ಹೋಗಿದ್ದರೆಂದು ತಿಳಿದುಬರುತ್ತದೆ. ಮಹಾವೀರರ ಜೈನಧರ್ಮ ಇಂದಿಗೂ ಹೆಚ್ಚು ಉತ್ಕರ್ಷ ದೆಸೆಯಲ್ಲಿರುವುದು ಗುಜರಾತ್ ಮತ್ತು ಕರ್ನಾಟಕಗಳಲ್ಲಿಯೇ ಎಂಬುದೂ ಗಮನಾರ್ಹ. ಗುಜರಾತಿ ಭಾಷೆಯ ಮೇಲೂ ಕೂಡ ಕನ್ನಡದ ಪ್ರಭಾವ ಸಾಕಷ್ಟು ಆಗಿದೆ.

ಬಂಗಾಳ ಕರ್ನಾಟಕಗಳಿಗೆ ಒಂದು ಸಾವಿರ ವರ್ಷಗಳ ಹಿಂದಿನಿಂದಲೂ ರಾಜಕೀಯ ಮತ್ತು ಸಾಂಸ್ಕೃತಿಕ ಸಂಬಂಧವಿದೆ. ಕ್ರಿ.ಶ. ೮-೯ನೇ ಶತಮಾನಗಳಲ್ಲಿ ಕರ್ನಾಟಕದಲ್ಲಿ ರಾಷ್ಟ್ರಕೂಟರು ಅತ್ಯಂತ ಉಚ್ಛ್ರಾಯ ಸ್ಥಿತಿಯಲ್ಲಿದ್ದ ಕಾಲದಲ್ಲೇ ಬಂಗಾಳದಲ್ಲಿ ‘ಸೇನ’ ಮನೆತನದವರು ರಾಜ್ಯವಾಳುತ್ತಿದ್ದರು. ಈ ಸೇನರು ಕನ್ನಡಿಗರು. ತಾವು ಕರ್ನಾಟಕ ಕ್ಷತ್ರಿಯ ರೆಂದು ಇಂದಿಗೂ ಅವರು ಅಭಿಮಾನದಿಂದ ಹೇಳಿಕೊಳ್ಳುತ್ತಾರೆ. ಕರ್ನಾಟಕದ ಬ್ರಹ್ಮ ಕ್ಷತ್ರಿಯ ಕುಲಕ್ಕೆ ಸೇರಿದ ಸಾಮಂತಸೇನ ತಮ್ಮ ಮೂಲಪುರುಷನೆಂಬುದು ಅವರ ಹೇಳಿಕೆ. ರಾಷ್ಟ್ರಕೂಟರ ಎರಡನೆ ಕೃಷ್ಮನ ಮುಳಗುಂದದ ಶಾಸನದಲ್ಲಿ (ಕ್ರಿ.ಶ. ೯೦೨) ಈ ಸೇನರ ಪ್ರಸ್ತಾಪವಿದೆ. ಈ ಪ್ರಾಂತ್ಯವನ್ನಾಳಿದ ಲಕ್ಷಣಸೇನನ ಮಧ್ಯೆನಗರ ಶಾಸನದಲ್ಲಿ “ಕರ್ನಾಟಕ್ಷತ್ರಿ ಯಾನಾಮ್ ಅಜನಿಕುಲ ಶಿರೋಧಾಮಃ ಸಾಮಂತಸೇನಃ” ಎಂಬ ಖಚಿತ ಉಲ್ಲೇಖವಿರುವುದೂ ಗಮನಾರ್ಹ.

ಪೂರ್ವ ಬಂಗಾಳದ ಬಾರಭೂಜ್ಯ ರಾಜರೂ ಸಹ ಕರ್ನಾಟಕದಿಂದ ಹೋದವರೇ. ಬಂಗಾಳದ ಸೇನವಂಶದ ರಾಜರಲ್ಲಿ ‘ಬಲ್ಲಾಳಸೇನ’ ತುಂಬ ಪ್ರಸಿದ್ಧನಾದವನು. ಈ ಹೆಸರೂ ಸಹ ಹೊಯ್ಸಳರ ಸುವಿಖ್ಯಾತ ದೊರೆಯಿಂದ ಸ್ವೀಕರಿಸಿದ್ದು. ಎರಡನೇ ವಿಕ್ರಮಾದಿತ್ಯ ಈ ಗೌಡ ಮತ್ತು ಕಾಮರೂಪಗಳ ಮೇಲೆ ಧಾಳಿ ಮಾಡಿದ್ದನೆಂದು ಬಿಲ್ಹಣನ ‘ವಿಕ್ರಮಾಂಕ ಚರಿತೆ’ ಉಲ್ಲೇಖಿಸುತ್ತದೆ. ಮಿಥಿಲೆಯ ರಾಜನಾಗಿದ್ದ ನಾನ್ಯದೇವ ಗೌಡ ಬಂಗಾಲ ರಾಜರನ್ನು ಗೆದ್ದು ಗುರ್ಜರ ರಾಜಪುತ್ರಿಯೊಬ್ಬಳನ್ನು ಮದುವೆಯಾಗಿದ್ದ. ಈತ “ಸರಸ್ವತೀ ಹೃದಯಾ ಲಂಕಾರ” ಎಂಬ ಸಂಗೀತಶಾಸ್ತ್ರದ ಗ್ರಂಥವನ್ನು ರಚಿಸಿದ್ದಾನೆ. ರಾಷ್ಟ್ರಕೂಟರ ದೊರೆ ಮೂರನೇ ಗೋವಿಂದನ ಬಂಧುವಾಗಿದ್ದ ರನ್ನಾದೇವಿ ಎಂಬ ರಾಜಕುಮಾರಿಯನ್ನು ಬಂಗಾಳದ ಧರ್ಮಪಾಲ ಎಂಬ ರಾಜ ವಿವಾಹವಾಗಿದ್ದ. ಕರ್ನಾಟಕದ ಮಧ್ಯಾಚಾರ್ಯರ ದ್ವೈತ ಭಕ್ತಿಮಾರ್ಗ ಬಂಗಾಳದ ಚೈತನ್ಯಪಂಥಕ್ಕೆ ಸ್ಫೂರ್ತಿಯಾಗಿರುವುದು ಸರ್ವವಿದಿತ. ಸ್ವತಃ ಮಧ್ವಾಚಾರ್ಯರೇ ವೈಷ್ಣವ ಧರ್ಮಪ್ರಚಾರಕ್ಕಾಗಿ ಬಂಗಾಲಕ್ಕೆ ಹೋಗಿದ್ದರೆಂಬುದಕ್ಕೆ ಗ್ರಾಂಥಿಕ ಆಧಾರಗಳೇ ಇವೆ. ಪ್ರಸಿದ್ಧ ವೈಷ್ಣವ ಧರ್ಮ ಪ್ರಚಾರಕರಾದ ರೂಪಗೋಸ್ವಾಮಿ ಮತ್ತು ಸನಾತನ ಗೋಸ್ವಾಮಿಯವರೂ ಕರ್ನಾಟಕದ ಮೂಲದವರೇ. ಹೀಗೆಯೇ ಬಂಗಾಳಿಯ ಸಂಪ್ರದಾಯ ಮತ್ತು ಶಬ್ದಕೋಶದ ಮೇಲೂ ಆಗಿರುವ ಕರ್ನಾಟಕದ ಪ್ರಭಾವ ಕಡಿಮೆಯದೇನೂ ಅಲ್ಲ.

ಕರ್ನಾಟಕದ ಹಲವು ಪ್ರಸಿದ್ಧ ದೊರೆಗಳು ತೆಲುಗು ದೇಶವನ್ನೂ ಆಳುತ್ತಿದ್ದುದರಿಂದ ಸಹಜವಾಗಿಯೇ ಕರ್ನಾಟಕದ ಪ್ರಭಾವ ತೆಲುಗು ನಾಡಿನ ಮೇಲೆ ಮತ್ತು ಭಾಷೆಯ ಮೇಲೆ ಆಗಿದೆ. ಕನ್ನಡ ರಾಜರುಗಳೇ ತೆಲುಗು ಗ್ರಂಥಗಳನ್ನು ರಚಿಸಿರುವ ನಿದರ್ಶನಗಳೂ ಇವೆ. ಕನ್ನಡ ರಾಜ್ಯ ರಮಾರಮಣನೆನಿಸಿದ್ದ ಶ್ರೀ ಕೃಷ್ಣದೇವರಾಯನೇ ಸ್ವತಃ ‘ಆಮುಕ್ತಮಾಲ್ಯ’ದ ತೆಲುಗು ಕೃತಿಯನ್ನು ನಿರ್ಮಿಸಿದ್ದಾನೆ. ಬುಕ್ಕರಾಯನ ಆಸ್ಥಾನದಲ್ಲಿ ಪ್ರಸಿದ್ಧ ತೆಲುಗು ಕವಿ ನಾಸನ ಸೋಮನಾಥ ಗೌರವದ ಸ್ಥಾನ ಪಡೆದಿದ್ದ. ಪ್ರೌಢ ದೇವರಾಯನ ಆಸ್ಥಾನ ಕವಿ ಯಾಗಿದ್ದ ಶ್ರೀನಾಥ ಆಂಧ್ರದ ಮಹಾಕವಿಗಳಲ್ಲಿ ಒಬ್ಬ. ‘ಕವಿ ಸಾರ್ವಭೌಮ’ನೆಂಬ ಬಿರುದನ್ನೂ ಆತ ಪಡೆದಿದ್ದ. ‘ನಾ ಕವಿತ್ವಂಬು ನಿಜಮು ಕರ್ನಾಟ ಭಾಷಾ’ (ಕಾವ್ಯದ ಭಾಷೆ ಯೆಂದರೆ ನಿಜಕ್ಕೂ ಕನ್ನಡ ಭಾಷೆಯೇ) ಎಂದು ಅವನು ಉದ್ಗರಿಸಿದ್ದಾನೆ. ಕೃಷ್ಣದೇವರಾಯನ ಆಸ್ಥಾನದಲ್ಲಿ ಅಲ್ಲಾಸಾನಿ ಪೆದ್ದನ, ನಂದಿ ತಿಮ್ಮಯ್ಯ ಮುಂತಾದ ಖ್ಯಾತ ತೆಲುಗು ಕವಿಗಳು ವಿಜೃಂಭಿಸಿದ್ದರು. ಕೃಷ್ಣದೇವರಾಯನ ಸ್ವಂತ ಕೃತಿ ತೆಲುಗು ಸಾಹಿತ್ಯಕ್ಕೆ ಮಾರ್ಗದರ್ಶನ ಮಾಡಿಸಿದ ಕೃತಿಯೆಂದು ಹೆಸರು ಪಡೆದಿದೆ. ಮೈಸೂರೊಡೆಯರ ಕಾಲದಲ್ಲೂ ತೆಲುಗು ಅಪಾರವಾಗಿ ಪ್ರಭಾವಿತವಾಗಿದೆ. ಚಿಕ್ಕದೇವರಾಜರ ದಳವಾಯಿ ವೀರರಾಜ ಮಹಾಭಾರತ ವನ್ನು ತೆಲುಗಿಗೆ ಅನುವಾದಿಸಿದ್ದಾನೆ. ಇದು ತೆಲುಗಿನ ಪ್ರಪ್ರಥಮ ಗದ್ಯ ಕಾವ್ಯವೂ ಹೌದು. ಇವನ ಪುತ್ರನಾದ ನಂಜರಾಜನೂ ತೆಲುಗು ಗ್ರಂಥಕರ್ತನಾಗಿದ್ದು ‘ಹಾಲಾಸ್ಯ ಮಾಹಾತ್ಮ್ಯ’ ಮತ್ತು ‘ಹರಭಕ್ತಿ ವಿಲಾಸ’ಗಳೆಂಬ ಕೃತಿಗಳನ್ನು ಸೃಜಿಸಿದ್ದಾನೆ. ತೆಲುಗು ಸಾಹಿತ್ಯದ ಆದಿಕವಿಯೆಂದು ಪರಿಗಣಿಸಿರುವ ನನ್ನಯ್ಯಭಟ್ಟ (ಕ್ರಿ.ಶ. ೧೦೪೦) ನಮ್ಮ ಮಹಾಕವಿ ಪಂಪನ ‘ವಿಕ್ರಮಾರ್ಜುನ ವಿಜಯ’ದಿಂದ ಪ್ರಭಾವಿತನಾಗಿ, ಕನ್ನಡ ಕವಿ ನಾರಾಯಣ ಭಟ್ಟನಿಂದ ಮಾರ್ಗದರ್ಶನ ಪಡೆದು ತೆಲುಗು ಭಾರತವನ್ನು ಬರೆದಿದ್ದಾನೆ.

ಬಿಹಾರವಂತೂ ಮೂರು ಶತಮಾನಗಳಿಗೂ ಅಧಿಕಕಾಲ ಕರ್ನಾಟಕ ದೊರೆಗಳ ಪ್ರಭುತ್ವಕ್ಕೆ ಒಳಪಟ್ಟಿತ್ತು. ಒರಿಸ್ಸಾದ ಗಜಪತಿರಾಯನನ್ನು ಸೋಲಿಸಿ ಅವನ ಕುಮಾರಿಯನ್ನು ವಿಜಯನಗರದ ಶ್ರೀಕೃಷ್ಣದೇವರಾಯ ಮದುವೆಯಾದದ್ದು, ಆ ಮೂಲಕ ಒರಿಸ್ಸಾ ಮತ್ತು ಕರ್ನಾಟಕಗಳ ಬಾಂಧವ್ಯ ಭದ್ರವಾದುದೂ ಐತಿಹಾಸಿಕ ಸತ್ಯ. ನಮ್ಮ ನೆರೆಯ ತಮಿಳುನಾಡಿನ ಸಾಹಿತ್ಯ ಮತ್ತು ಆಡಳಿತದ ಮೇಲೂ ಕನ್ನಡಿಗರ ಪ್ರಭಾವ ಸಾಕಷ್ಟು ದಟ್ಟವಾಗಿಯೇ ಇದೆ. ಹೀಗೇ ಹೆಚ್ಚು ಕಡಿಮೆ ಅಖಂಡ ಭಾರತದ ಮೇಲೆ ಕರ್ನಾಟಕ ರಾಜಕೀಯವಾಗಿ ಸಾಂಸ್ಕೃತಿಕವಾಗಿ ಸಾಹಿತ್ಯಕವಾಗಿ ತನ್ನ ವಿಶಿಷ್ಟ ಬೆಳಕನ್ನು ಚೆಲ್ಲಿದೆ.


ಈ ದೇಶಕ್ಕಿರುವ ಕರ್ನಾಟ, ಕರ್ಣಾಟ ಮತ್ತು ಕನ್ನಡ ಎಂಬ ಹೆಸರಿನ ಮೂಲದ ಬಗ್ಗೆ ಕೂಡ ವಿದ್ವಾಂಸರಲ್ಲಿ ವಿಪುಲ ಚರ್ಚೆ ನಡೆದಿದೆ. ಈ ಹೆಸರಿನಲ್ಲಿರುವ ಎರಡನೆಯ ಪದ ನಾಡು ಎಂಬ ಬಗ್ಗೆ ವಿವಾದವಿಲ್ಲ. ಮೊದಲನೆಯ ಕರ್, ಕರು ಶಬ್ದಗಳನ್ನು ಬೇರೆ ಬೇರೆ ರೀತಿಯಲ್ಲಿ ಅರ್ಥಮಾಡಿ ಕಪ್ಪುಮಣ್ಣಿನ ಪ್ರದೇಶ, ಎತ್ತರವಾದ ಪ್ರದೇಶ, ವಿಸ್ತಾರವಾದ ಪ್ರದೇಶ ಇತ್ಯಾದಿ ವಿವರಣೆಗಳನ್ನು ನೀಡಲಾಗಿದೆ. ಈ ಎಲ್ಲ ವ್ಯಾಖ್ಯಾನಗಳನ್ನು ಇದು ಧಾರಣ ಮಾಡುವ ಸಾಮರ್ಥ್ಯವನ್ನು ಹೊಂದಿದೆಯೆಂಬುದು ನಿಸ್ಸಂದೇಹ. ರಾಜಕೀಯ ಕಾರಣಗಳಿಗಾಗಿ; ಹಿಂದೊಮ್ಮೆ ಅತ್ಯಂತ ವಿಸ್ತಾರವಾಗಿದ್ದ ಈ ರಾಜ್ಯ, ಬೇರೆ ಬೇರೆ ಭಾಷಾ ಪ್ರಾಂತ್ಯಗಳಲ್ಲಿ ಹಂಚಿಹೋಗಿ, ಕರ್ನಾಟಕ ಎನ್ನುವ ಸುದೀರ್ಘ ಇತಿಹಾಸವನ್ನುಳ್ಳ ಹೆಸರೇ ಮರೆಯಾಗಿ ಹೋಗಿತ್ತು. ಈ ನಾಡಿನ ಕನ್ನಡ ಪ್ರೇಮಿಗಳ ಅವಿರತ ಹೋರಾಟದಿಂದಾಗಿ, ಈ ಹರಿಹಂಚಾಗಿದ್ದ ಭಾಗಗಳು ೧೯೫೬ರಲ್ಲಿ ಮತ್ತೆ ಒಂದುಗೂಡಿದವು. ೧೯೭೩ರ ನವೆಂಬರ್ ಒಂದರಿಂದ. ಕರ್ನಾಟಕ ಎಂಬ ಇತಿಹಾಸ ಪ್ರಸಿದ್ಧ ಹೆಸರು ಮತ್ತೆ ಪ್ರಾಪ್ತವಾಯಿತು. ಕಾಸರಗೋಡು, ಸೊಲ್ಲಾಪುರ, ಜತ್ತ, ಅಕ್ಕಲ ಕೋಟೆ ಮುಂತಾದ ಇನ್ನೂ ಹಲವು ಅಚ್ಚಗನ್ನಡ ಪ್ರದೇಶಗಳು ಈ ರಾಜ್ಯದ ಒಡಲೊಳಗೆ ಬಂದಾಗ ಕರ್ನಾಟಕ ಎಂಬ ಹೆಸರು ಪೂರ್ಣ ವಾಗುತ್ತದೆ, ಅನ್ವರ್ಥವಾಗುತ್ತದೆ.


ನುಡಿ
ಮೊದಲು ನಾಡಿನ ಉಗಮ, ಅನಂತರ ನುಡಿಯ ಉಗಮ, ತದನಂತರ ಸಾಹಿತ್ಯದ ಉಗಮ. ಇದು ಕ್ರಮ. ಸಾಹಿತ್ಯ ಶಿಶುವಿಗೆ ಭಾಷೆಯೇ ತಾಯಿ. ಆದ್ದರಿಂದ ಕನ್ನಡ ಸಾಹಿತ್ಯ ಉದಯವಾಗುವ ಎಷ್ಟೋ ಕಾಲದ ಹಿಂದೆಯೇ ಈ ಭಾಷೆ ಹುಟ್ಟಿ ಬೆಳೆದು ಸತ್ವಶಾಲಿಯಾಗುತ್ತ ತೇಜೋನ್ನಿತವಾಗುತ್ತ ಬಂದಿತ್ತೆಂಬುದು ಅಲ್ಲಗಳೆಯಲಾಗದ ಅಪ್ಟಟ ಸತ್ಯ. ಆಡುನುಡಿ ನೂರಾರು ವರ್ಷಗಳ ಸತತ ಬಳಕೆಯಿಂದ ಸೂಕ್ಷ್ಮವಾಗುತ್ತ ಮೊನಚಾಗುತ್ತ ಹರಿತವಾಗುತ್ತ ಸರ್ವಗ್ರಾಸಿಯಾಗುತ್ತ ಸರ್ವಭಾವ ಭಿತ್ತಿಯಾಗುತ್ತ, ಲಿಪಿಯನ್ನು ಸೃಷ್ಟಿಸಿ ಸಂಕೇತವಾಗುತ್ತ, ಆ ಮೂಲಕ ಚಾಕ್ಷುಷತ್ವ ಪಡೆದು ಚಿರಂಜೀವಿಯಾಗುತ್ತ ಸಾಗುತ್ತದೆ. ಇದರ ಪೂರ್ವಚರಿತ್ರೆ ಯನ್ನು ತಿಳಿಯಲು ಎರಡು ಮುಖ್ಯ ಆಧಾರಗಳಿವೆ. ಒಂದು, ಶಾಸನಾಧಾರ; ಮತ್ತೊಂದು ಶಾಸನೇತರ ಆಧಾರ.

ವೇದ ಕಾಲದಲ್ಲೇ ಕನ್ನಡ ಭಾಷೆ ಪ್ರಚಲಿತವಿತ್ತೆಂದು ಕೆಲವು ಆಧಾರಗಳ ಮೂಲಕ ವಿದ್ವಾಂಸರು ಊಹಿಸಿದ್ದಾರೆ. ಛಾಂದೋಗ್ಯ ಉಪನಿಷತ್ತಿನಲ್ಲಿ ಚೆನ್ (ಚಂದ್ರ), ಮಟಚಿ (ಮಿಡತೆ) ಎಂಬ ಶಬ್ದಗಳಿದ್ದು, ಇವು ಕನ್ನಡವೆಂದು ಅವರ ಎಣಿಕೆ. ‘ಮಟಚಿ’ ಎಂಬುದು ಕನ್ನಡದ ‘ಮಿಡಿಚೆ’ಯ ಸಂಸ್ಕೃತೀಕರಣವೆಂದು ಡಾ. ಭಂಡಾರ್‌ಕರ್ ಅಭಿಪ್ರಾಯಪಡುತ್ತಾರೆ. ಭಾರತದ ಭೂವಿವರಣೆಯನ್ನು ಕುರಿತ ಟಾಲೆಮಿಯ ಕೃತಿಯಲ್ಲಿ ಕರ್ನಾಟಕದ ಹತ್ತು ಸ್ಥಳಗಳನ್ನು ಹೆಸರಿಸಲಾಗಿದೆಯಾದ್ದರಿಂದ, ಟಾಲೆಮಿಯ ಕಾಲಕ್ಕಿಂತ (ಕ್ರಿ.ಶ. ೩ನೇ ಶತಮಾನ) ಒಂದೆರಡು ಶತಮಾನಗಳ ಹಿಂದಿನಿಂದಲೂ ಕನ್ನಡ ಭಾಷೆ ಬಳಕೆಯಲ್ಲಿ ಇದ್ದಿರಬೇಕೆಂದು ಪ್ರಸಿದ್ಧ ಸಂಶೋಧಕರಾದ ಶ್ರೀ ಗೋವಿಂದ ಪೈ ನಿರ್ಣಯಿಸಿದ್ದಾರೆ. ಈ ನಾಡಿನಲ್ಲಿ ಜೈನಧರ್ಮ ಅಸ್ತಿತ್ವಕ್ಕೆ ಬರುವ ಮುಂಚೆ ಬೌದ್ಧಧರ್ಮ ನೆಲೆಯೂರಿದ್ದರಿಂದ, ಜೈನಕವಿಗಳು ಕನ್ನಡ ಕೃತಿರಚನೆ ಮಾಡುವ ಪೂರ್ವದಲ್ಲಿಯೇ ಕನ್ನಡ ಬೌದ್ಧ ಗ್ರಂಥಗಳು ರಚನೆಯಾಗಿರಬೇಕೆಂದೂ, ಬೌದ್ಧಮತ ಕರ್ನಾಟಕದಲ್ಲಿ ನಾಶವಾದಾಗ ಅವೂ ನಾಶವಾಗಿರಬೇಕೆಂದೂ ಪ್ರೊ. ಟಿ.ಎಸ್. ವೆಂಕಣಯ್ಯನವರು ಅಭಿಪ್ರಾಯಪಡುತ್ತಾರೆ. ಇದು ಕ್ರಿಸ್ತಪೂರ್ವದ ಶತಮಾನಗಳಲ್ಲೇ ಕನ್ನಡ ಸಾಹಿತ್ಯ ಭಾಷೆಯಾಗಿಯೂ ಪ್ರಚಲಿತವಾಗಿತ್ತೆಂಬುದನ್ನು ಸೂಚಿಸುತ್ತದೆ. ಕ್ರಿ.ಪೂ. ಒಂದನೇ ಶತಮಾನದವನೆಂದು ನಿರ್ಣಯಿಸಲಾಗಿರುವ ಶಾತವಾಹನ ರಾಜ ಹಾಲ ‘ಗಾಥಾಸಪ್ತಶತಿ’ ಎಂಬ ಪ್ರಾಕೃತ ಗ್ರಂಥವೊಂದನ್ನು ರಚಿಸಿದ್ದಾನೆ. ಇದರಲ್ಲಿ ಸಂಸ್ಕೃತವೂ ಅಲ್ಲದ ಪ್ರಾಕೃತವೂ ಅಲ್ಲದ ಕೆಲವು ಶಬ್ದಗಳು ಪ್ರಯೋಗವಾಗಿವೆ. ಅತ್ತಾ (ಅತ್ತೆ),  ತುಪ್ಪ (ಘೃತ), ಪೊಟ್ಟ (ಹೊಟ್ಟೆ) ಮುಂತಾದ ಈ ಶಬ್ದಗಳು ಕನ್ನಡವೆಂದು ಗೋವಿಂದ ಪೈ ಗುರುತಿಸಿ, ಪ್ರಾಕೃತ ಕೃತಿಯಲ್ಲಿ ಈ ಕನ್ನಡ ಶಬ್ದಗಳು ಬಳಕೆಯಾಗಿರಬೇಕಾದರೆ, ಅದಕ್ಕಿಂತ ಬಹುಹಿಂದೆ, ಕೊನೆಯಪಕ್ಷ ಕ್ರಿ.ಪೂ. ಮೂರನೆಯ ಶತಮಾನದಿಂದಲಾದರೂ ಕನ್ನಡ ನುಡಿ ಅಸ್ತಿತ್ವ ದಲ್ಲಿದ್ದಿರಬೇಕೆಂದು ತೀರ್ಮಾನಿಸುತ್ತಾರೆ. ಈಜಿಪ್ಟಿನಲ್ಲಿ ದೊರೆತ, ಕ್ರಿ.ಶ. ಎರಡನೇ ಶತಮಾನಕ್ಕೆ ಸೇರಿದ್ದೆಂದು ನಿರ್ಧರಿಸಲಾಗಿರುವ, ಒಂದು ಗ್ರೀಕ್ ಪ್ರಹಸನದಲ್ಲಿ ಗ್ರೀಕೇತರ ಭಾಷೆಯ ಕೆಲವು ಶಬ್ದಗಳಿದ್ದು, ಅವು ಕನ್ನಡವೆಂದು ಡಾ. ಹುಲ್ಷ್ ಅಭಿಪ್ರಾಯಪಟ್ಟರು. ಇದನ್ನು ಮತ್ತಷ್ಟು ಸಂಶೋಧನೆಯಿಂದ ಗೋವಿಂದ ಪೈ ಅವರು ಖಚಿತಪಡಿಸಿ, ಕನ್ನಡ ನುಡಿಯ ಹಳಮೆಯನ್ನು ಮತ್ತೆ ಕ್ರಿ.ಪೂರ್ವಕ್ಕೆ ಸರಿಸಿದ್ದಾರೆ.
ಶಾಸನಾಧಾರವನ್ನು ಪರಿಶೀಲಿಸಿದರೆ, ಪಂಪ ಪೂರ್ವಯುಗಕ್ಕೆ ಸೇರಿದ ಸಾವಿರದ ಸಂಖ್ಯೆಯನ್ನು ಮೀರಿದ ಶಾಸನಗಳು ಪ್ರಕಟವಾಗಿವೆ. ಇವುಗಳಲ್ಲಿ ಕಾಲದ ದೃಷ್ಟಿಯಿಂದ, ಕ್ರಿ.ಪೂ. ಮೂರನೆಯ ಶತಮಾನಕ್ಕೆ ಸೇರಿದ ಅಶೋಕನ ಶಾಸನಗಳು ಪ್ರಾಕೃತ ಭಾಷೆಯಲ್ಲಿ ಬ್ರಾಹ್ಮೀ ಲಿಪಿಯಲ್ಲಿ ಇವೆ. ಇವುಗಳಲ್ಲಿ ಬ್ರಹ್ಮಗಿರಿ ಶಾಸನ ಒಂದು. ಇದರಲ್ಲಿ ಇರುವ ‘ಇಸಿಲ’ ಎಂಬ ಶಬ್ದ ಕನ್ನಡವೆಂದು ಪ್ರೊ. ಡಿ.ಎಲ್. ನರಸಿಂಹಾಚಾರ್ಯರು ಬೇರೆ ಬೇರೆ ಆಧಾರಗಳನ್ನು ನೀಡಿ ನಿರ್ಣಯಿಸಿದ್ದಾರೆ. ಆದ್ದರಿಂದ ಕನ್ನಡನುಡಿ ಕ್ರಿ.ಶಕದ ಹಿಂದಿನಿಂದಲೂ ಇದ್ದು, ಕ್ರಿ.ಶ. ಎರಡು ಅಥವಾ ಮೂರನೆಯ ಶತಮಾನಗಳಲ್ಲಿ ಅದಕ್ಕೆ ಲಿಪಿ ಪ್ರಾಪ್ತವಾಗಿರಬೇಕೆಂಬ ಅಭಿಪ್ರಾಯಕ್ಕೆ ಅವರು ಮುಟ್ಟಿದ್ದಾರೆ. ಇದನ್ನು ಹೊರತು ಪಡಿಸಿದರೆ ಕ್ರಿ.ಶ. ೪೫೦ರದೆಂದು ಬಹಳ ಮಂದಿ ವಿದ್ವಾಂಸರು ತೀರ್ಮಾನಿಸಿರುವ ಹಲ್ಮಿಡಿ ಶಾಸನವೇ ಕನ್ನಡ ನುಡಿಯ ಅತ್ಯಂತ ಪ್ರಾಚೀನತಮ ದಾಖಲೆ. ಇಲ್ಲಿಯ ಪ್ರೌಢ ಭಾಷಾ ಸ್ವರೂಪವನ್ನು ಗಮನಿಸಿದರೆ, ಈ ಶಾಸನಕ್ಕಿಂತ ಕೊನೆಯಪಕ್ಷ ಎರಡು ಶತಮಾನಗಳ ಹಿಂದೆ ಕನ್ನಡ ಭಾಷೆಯ ಬರವಣಿಗೆ ಪ್ರಾರಂಭವಾಗಿರಬೇಕೆಂದೂ ಅದಕ್ಕಿಂತ ಒಂದು ಶತಮಾನದ ಹಿಂದೆಯಾದರೂ ಈ ಭಾಷೆ ಅಸ್ತಿತ್ವಕ್ಕೆ ಬಂದಿರಬೇಕೆಂದೂ ಭಾವಿಸಲು ಅಡ್ಡಿಯಿಲ್ಲ.

ಈ ಭಾಷೆ ಬೆಳೆಬೆಳೆಯುತ್ತ ಕಾಲಾನುಸಾರಿಯಾಗಿ ಹಲವು ಅವಸ್ಥೆಗಳನ್ನು ಪಡೆಯುತ್ತ ದಾಟುತ್ತ ಬಂದಿದೆ. ಇದರ ಫಲವಾಗಿ ಪೂರ್ವದ ಹಳಗನ್ನಡ, ನಡುಗನ್ನಡ ಮತ್ತು ಹೊಸಗನ್ನಡ ಎಂಬ ಮುಖ್ಯ ಪ್ರಭೇದಗಳು ಉಂಟಾಗಿವೆ. ಭೌಗೋಳಿಕ ವಿಸ್ತಾರದ ಕಾರಣ ದಿಂದಲೂ ಭಾಷೆಯಲ್ಲಿ ವ್ಯತ್ಯಾಸಗಳುಂಟಾಗಿ ಪ್ರಧಾನವಾಗಿ ಮೈಸೂರು ಕನ್ನಡ, ಕರಾವಳಿ ಕನ್ನಡ ಮತ್ತು ಉತ್ತರ ಕರ್ನಾಟಕದ ಕನ್ನಡ ಎಂಬ ಮೂರು ಪ್ರಾದೇಶಿಕ ಪ್ರಭೇದಗಳು ಕಂಡುಬರುತ್ತವೆ. ಇವುಗಳಲ್ಲಿ ಮತ್ತೆ ಹತ್ತಾರು ಉಪಪ್ರಭೇದಗಳೂ ಇವೆ. ವ್ಯಕ್ತಿಗತ ವೈಲಕ್ಷಣ್ಯಗಳಂತೂ ಅಸಂಖ್ಯವಾಗಿವೆ.

ವಿವಿಧ ಸಾಮಾಜಿಕ ಸ್ತರಗಳು, ಧಾರ್ಮಿಕ ಸ್ಥಿತ್ಯಂತರಗಳು, ಆಚಾರ ವಿಚಾರ ಪ್ರವಾಹಗಳು, ವೃತ್ತಿ ಪ್ರವೃತ್ತಿಗಳು, ಬೋಧನೆ ಸಂಶೋಧನೆಗಳು ಈ ಭಾಷೆಯನ್ನು ಅತ್ಯಂತ ಸಮರ್ಥವಾಗಿ ಬೆಳೆಸಿವೆ. ಕಾಲಕಾಲಕ್ಕೆ ಸಂಸ್ಕೃತ ಪ್ರಾಕೃತ ಉರ್ದು ಅರೇಬಿಕ್ ಮರಾಠಿ ತಮಿಳು ತೆಲುಗು ಮಲಯಾಳಂ ಇಂಗ್ಲಿಷ್ ಮುಂತಾದ ಅನ್ಯಭಾಷಾ ಸಂಪರ್ಕದಿಂದ ವೀರ್ಯವತ್ತಾಗಿ ಸತ್ವಭರಿತ ವಾಗಿ ತೇಜೋನ್ವಿತವಾಗಿ ಸರ್ವವ್ಯಾಪಕವಾಗಿ ಬೆಳೆಯುತ್ತ ಆಧುನಿಕ ಜಗತ್ತಿನ ಸರ್ವ  ವ್ಯವಹಾರಗಳನ್ನು ಸಮರ್ಥವಾಗಿ ಅಭಿವ್ಯಕ್ತಿಸುವ ಸಮರ್ಪಕ ಮಾಧ್ಯಮವಾಗಿ ಸಿದ್ಧಗೊಂಡಿದೆ ಈ ಭಾಷೆ.

ಸಾಹಿತ್ಯ
ಕ್ರಿ.ಶ. ೪೫೦ರ ಹಲ್ಮಿಡಿ ಶಾಸನದಿಂದ ಮೊದಲುಗೊಂಡು ಹಲವಾರು ಶಾಸನಗಳು ಮುಂದಿನ ಸಂಪುಷ್ಟ ಸಾಹಿತ್ಯದ ಮುಂಬೆಳಗಿನ ಮೊದಲ ಗಮನಾರ್ಹ ರೇಖೆಗಳಾಗಿವೆ. ಕೆಲವಂತೂ ಚಿಕ್ಕ ಚೊಕ್ಕ ಕುಶಲ ವ್ಯಕ್ತಿ ಚಿತ್ರಗಳನ್ನೇ ಬಿಡಿಸಿವೆ. ಈ ನಿಟ್ಟಿನಲ್ಲಿ ಮುಂದೆ ಲಭ್ಯವಾದ ಒಂಬತ್ತನೆಯ ಶತಮಾನದ ಮಹತ್ವಪೂರ್ಣ ಕೃತಿ ಕವಿರಾಜಮಾರ್ಗ. ಇದು ದಂಡಿ ವಿರಚಿತ ಕಾವ್ಯಾದರ್ಶವೆಂಬ ಅಲಂಕಾರ ಗ್ರಂಥದ ಆಧಾರದಿಂದ ನಿರ್ಮಿತವಾದು ದಾದರೂ ಈ ವೇಳೆಗಾಗಲೇ ಕನ್ನಡ ಸಾಹಿತ್ಯ ಸಮೃದ್ಧವಾಗಿ ಬೆಳೆದಿತ್ತೆಂಬುದಕ್ಕೆ ಪರಿಪುಷ್ಟ ಪ್ರಮಾಣವನ್ನೊದಗಿಸುವ ಮೂಲಕ ನಮ್ಮ ಸಾಹಿತ್ಯ ಚರಿತ್ರೆಯ ಮುಖ್ಯ ಮೈಲಿಗಲ್ಲಾಗಿದೆ. ಕನ್ನಡ ನಾಡಿನ ವಿಸ್ತಾರ, ಕನ್ನಡ ಜನರ ನಾಗರಿಕತೆ ಸಂಸ್ಕೃತಿ, ಅಚ್ಚಗನ್ನಡದ ಪ್ರದೇಶಗಳು ಮುಂತಾದುವನ್ನು ಕುರಿತ ಮೈನವಿರೇಳಿಸುವ ಮಾಹಿತಿಗಳು ಇದರಲ್ಲಿವೆ. ತನಗಿಂತ ಹಿಂದಿನ ಶ್ರೀವಿಜಯ, ಕವೀಶ್ವರ, ಪಂಡಿತ, ಚಂದ್ರ, ಲೋಕಪಾಲ ಮೊದಲಾದ ಪದ್ಯ ಕವಿಗಳನ್ನೂ ಕವಿರಾಜ ಮಾರ್ಗಕಾರ ಹೆಸರಿಸಿದ್ದಾನೆ. ಇದಲ್ಲದೆ ರಾಮಾಯಣ ಮುಂತಾದ ಹಿಂದಿನ ಕನ್ನಡ ಕಾವ್ಯಗಳ ಕೆಲವು ಪದ್ಯಗಳನ್ನು ಉದಾಹರಿಸುವ ಮೂಲಕ ಕವಿರಾಜಮಾರ್ಗ ಪೂರ್ವ ಸಾಹಿತ್ಯದ ಅಜ್ಞಾತ ಲೋಕಕ್ಕೆ ಸುಂದರ ಬೆಳಕಿಂಡಿಯೊಂದನ್ನು ಕೊರೆದಿದ್ದಾನೆ.

ಪಂಪ (ಕ್ರಿ.ಶ. ೯೪೦) ಕನ್ನಡದ ಆದಿಮಹಾಕವಿ. ಇವನಿಗಿಂತ ಹಿಂದೆ ಕನ್ನಡದಲ್ಲಿ ವಿಪುಲ ಗ್ರಂಥ ರಚನೆಯಾಗಿದ್ದರೂ ನಮಗೆ ದೊರೆತಿಲ್ಲ. ಈ ಕೊರತೆಯನ್ನು ಪಂಪ ಅನ್ಯಾದೃಶವಾಗಿ ತುಂಬಿಕೊಟ್ಟಿದ್ದಾನೆ. ಆದಿಪುರಾಣ ಮತ್ತು ವಿಕ್ರಮಾರ್ಜುನ ವಿಜಯ ಅವನ ಕೃತಿರತ್ನಗಳು. ಮೊದಲನೆಯದು ಧಾರ್ಮಿಕ, ಎರಡನೆಯದು ಲೌಕಿಕ. ವೃಷಭನಾಥನನ್ನು ಕುರಿತ ಆದಿಪುರಾಣ ಜೈನಧಾರ್ಮಿಕ ಸಂಗತಿಗಳಿಂದ ತುಂಬಿದ್ದರೂ ಅತ್ಯಂತ ಚೇತೋ ಹಾರಿಯೂ ಮಹೋನ್ನತವೂ ಆದ ಕಲ್ಪನೆಗಳಿಂದ ದರ್ಶನದೀಧಿತಿಯಿಂದ ಸತ್ವಸಂಪನ್ನ ಕಾವ್ಯವಾಗಿದೆ. ವ್ಯಾಸಭಾರತವನ್ನಾಧರಿಸಿದ ಎರಡನೆಯ ಗ್ರಂಥ ಪಂಪನ ಕಾವ್ಯಶಕ್ತಿಯ ಗೌರಿಶಂಕರವಾಗಿದೆ. ಸನ್ನಿವೇಶ ನಿರ್ಮಾಣ, ಪಾತ್ರ ಪರಿಪೋಷಣೆ, ರಸನಿರ್ಭರತೆ, ಪರಂಪರೆಯ ಪ್ರಜ್ಞೆಯೊಂದಿಗೆ ಮಿಳಿತವಾದ ಗಾಢ ಸಮಕಾಲೀನ ದೃಷ್ಟಿ ಮತ್ತು ಅತ್ಯಂತ ಪರಿಣತವಾದ ಭಾಷಾ ಪ್ರಯೋಗ ಚಾತುರ್ಯಗಳಿಂದಾಗಿ ನಮ್ಮ ಸಾಹಿತ್ಯದ ಮೇರುಕೃತಿಯಾಗಿದೆ. ಲೌಕಿಕ ಮತ್ತು ಧಾರ್ಮಿಕ ಕಾವ್ಯರಚನಾ ಪರಂಪರೆಗೂ ಪಂಪನೇ ಮೂಲಪುರುಷನಾಗಿದ್ದಾನೆ. ಇವನ ಪ್ರಭಾವ ಸಾವಿರ ವರ್ಷಗಳ ಕನ್ನಡ ಸಾಹಿತ್ಯದ ಇತಿಹಾಸದುದ್ದಕ್ಕೂ ಅವಿಚ್ಛಿನ್ನವಾಗಿ ಹರಿದುಬಂದಿದೆ.

ಪಂಪನ ಅನಂತರ ರನ್ನ (ಕ್ರಿ.ಶ. ೯೯೩) ತುಂಬ ಪ್ರಮುಖ ಕವಿ. ಪಂಪನ ಹಾದಿಯಲ್ಲೇ ನಡೆದ ಈತನೂ ಅಜಿತತೀರ್ಥಂಕರ ಪುರಾಣವೆಂಬ ಆಗಮಿಕ ಗ್ರಂಥವನ್ನು, ಸಾಹಸಭೀಮ ವಿಜಯ ಎಂಬ ಲೌಕಿಕ ಗ್ರಂಥವನ್ನೂ ಬರೆದಿದ್ದಾನೆ. ಮೊದಲ ಕೃತಿಯ ಕೆಲವೇ ಭಾಗಗಳು ಮಾತ್ರ ರನ್ನನ ಕವಿತಾ ಸಾಮರ್ಥ್ಯಕ್ಕೆ ಕನ್ನಡಿಯಾಗಿವೆ. ಆದರೆ ಅವನ ಹೆಸರನ್ನು ಅಜರಾಮರಗೊಳಿಸಿದ್ದು ಸಾಹಸ ಭೀಮವಿಜಯ. ಪಂಪನ ವಿಕ್ರಮಾರ್ಜುನ ವಿಜಯದ ಹದಿಮೂರನೇ ಆಶ್ವಾಸದ ಬುನಾದಿಯ ಮೇಲೆ ಕಟ್ಟಿದ ಅನುಪಮ ಕೃತಿಸೌಧ ಇದು. ಸಿಂಹಾವಲೋಕನ ಕ್ರಮದಿಂದ ಇಡೀ ಮಹಾಭಾರತದ ಕಥೆಯನ್ನು ಸಂಕ್ಷಿಪ್ತವಾಗಿ ದರ್ಶನ ಮಾಡಿಸುವ ಅಪೂರ್ವ ತಂತ್ರ ನೈಪುಣ್ಯವನ್ನು ಮೆರೆದ ಈ ಕೃತಿ ಕೈಯಿಂದ ಮುಟ್ಟಬಹುದಾದಷ್ಟು ಗಟ್ಟಿಮುಟ್ಟಾದ ಪಾತ್ರ ಸೃಷ್ಟಿಯಿಂದ, ಮೈ ಜುಮೈನಿಸುವ ಸನ್ನಿವೇಶ ನಿರ್ಮಾಣ ಕೌಶಲದಿಂದ, ಅದ್ವಿತೀಯ ವಾದ ನಾಟಕೀಯತೆಯಿಂದ, ವೀರರಸೋಜ್ವಲವಾದ ಗಂಡುಭಾಷೆಯಿಂದ ಕನ್ನಡದ ಹೆಮ್ಮೆಯ ಕೃತಿಗಳಲ್ಲಿ ಒಂದಾಗಿದೆ.

ಕನ್ನಡದ ಮೊದಲ ಗದ್ಯ ಗ್ರಂಥವಾದ ‘ಚಾವುಂಡರಾಯ ಪುರಾಣ’ವನ್ನು ಬರೆದ ಚಾವುಂಡರಾಯ ಇದೇ ಕಾಲದವನು. ಶಿವಕೋಟ್ಯಾಚಾರ್ಯನ ‘ವಡ್ಡಾರಾಧನ’ ಇದೇ ಕಾಲದ ಅಪೂರ್ವ ಜೈನಕಥೆಗಳ ಸಂಗ್ರಹ. ಆಧುನಿಕ ಸಣ್ಣಕತೆಗಳ ನಿರೂಪಣಾ ಸೌಂದರ್ಯವನ್ನು ಅಧಿಕ ಪ್ರಮಾಣದಲ್ಲಿ ಮೈಗೂಡಿಸಿಕೊಂಡಿರುವ ಈ ಕೃತಿ, ಶೈಲಿಯ ಸೊಗಸಿನಿಂದ ಸಾಂದರ್ಭಿಕ ಚಿತ್ರಕತೆಯಿಂದ ಕನ್ನಡ ಗದ್ಯ ಶಕ್ತಿಯ ಶ್ರೇಷ್ಠ ಮಾದರಿಗಳಲ್ಲಿ ಒಂದಾಗಿದೆ. ನಾಗವರ್ಮನ ‘ಛಂದೋಂಬುಧಿ’ ಮತ್ತು ‘ಕಾದಂಬರಿ’ಗಳೂ ಈ ಕಾಲದ ಮುಖ್ಯ ಕೃತಿಗಳೇ. ಮೊದಲನೆಯದು ಛಂದಸ್ಸನ್ನು ಕುರಿತ ಶಾಸ್ತ್ರ ಗ್ರಂಥವಾದರೆ, ಎರಡನೆಯದು ಬಾಣನ ಸಂಸ್ಕೃತ ಗದ್ಯ ಕೃತಿಯ ಪದ್ಯಾನುವಾದ. ಕನ್ನಡಕ್ಕೆ ಅಪರೂಪದ ರೋಮಾಂಚಕ ಪ್ರಣಯ ಕಥೆಯೊಂದನ್ನು ಇದು ನೀಡಿರುವುದು ಮಾತ್ರವಲ್ಲದೆ ಪಾಂಡಿತ್ಯ ಮತ್ತು ಕಾವ್ಯಕಲೆಗಳ ಸುಂದರ ಎರಕವಾಗಿದೆ. ಹನ್ನೆರಡನೆಯ ಶತಮಾನದ ಆದಿಭಾಗದ ನಾಗಚಂದ್ರ ಕನ್ನಡದ ಮತ್ತೊಬ್ಬ ಹೆಮ್ಮೆಯ ಕವಿ. ಅಭಿನವ ಪಂಪನೆಂದು ತನ್ನನ್ನು ಕರೆದುಕೊಂಡಿರುವ ಈ ಕವಿ ‘ರಾಮಚಂದ್ರ ಚರಿತ ಪುರಾಣ’ ಮತ್ತು ‘ಮಲ್ಲಿನಾಥ ಪುರಾಣ’ ಎಂಬ ಎರಡು ದೀರ್ಘ ಕಾವ್ಯಗಳನ್ನು ರಚಿಸಿದ್ದಾನೆ. ರಾಮಚಂದ್ರಚರಿತ ಪುರಾಣ ಕನ್ನಡದ ಮೊದಲ ಜೈನ ರಾಮಾಯಣ, ಉಪಲಬ್ಧ ರಾಮಾಯಣಗಳಲ್ಲೇ ಮೊದಲನೆಯದೂ ಹೌದು. ಇಲ್ಲಿಯ ರಾವಣ ವಾಲ್ಮೀಕಿಯ ರಾವಣನಿಗಿಂತ ಭಿನ್ನವಾದ ಧರ್ಮವೀರನೂ ಉದಾತ್ತಶೀಲನೂ ಆದ ವಿಶಿಷ್ಟ ವ್ಯಕ್ತಿ. ಪಾಶ್ಚಾತ್ಯರ ದುರಂತನಾಯಕನನ್ನು ನೆನಪಿಗೆ ತರುವ ಇಂಥ ಅತ್ಯಪೂರ್ವ ಪಾತ್ರ ನಿರ್ಮಾಣದಿಂದ, ಮನಸ್ಸನ್ನು ಸೆರೆಹಿಡಿದು ನಿಲ್ಲಿಸುವ ನಿಪುಣ ನಿರೂಪಣಾ ವಿದಗ್ಧv ಯಿಂದ, ವರ್ಣನೆಯ ಮೋಹಕತೆಯಿಂದ, ಲಲಿತ ಮಧುರ ಶೈಲಿಯಿಂದ ಈ ಕೃತಿ ಕನ್ನಡದ ಚಿರಸ್ಮರಣೀಯ ಕಾವ್ಯಗಳಲ್ಲೊಂದಾಗಿದೆ. ನೇಮಿಚಂದ್ರನ ‘ಲೀಲಾವತಿ’ ವರ್ಣನಾ ಪ್ರಧಾನವಾದ ಪಾಂಡಿತ್ಯಭೂಯಿಷ್ಠವಾದ ಪ್ರೌಢ ಕೃತಿ. ಆಂಡಯ್ಯನ ‘ಕಬ್ಬಿಗರ ಕಾವ್ಯ’ ತನ್ನ ಅಚ್ಚಗನ್ನಡದ ವೀರದೀಕ್ಷೆಯಿಂದ ಮನಸೆಳೆಯುವ ಚಿಕ್ಕ ಕಾವ್ಯ. ಈ ಪಂಪ ಯುಗದಲ್ಲಿ ನೆನೆಯಲೇಬೇಕಾದ ಮತ್ತೊಬ್ಬ ಮಹತ್ವದ ಕವಿ ಜನ್ನ. ಯಶೋಧರ ಚರಿತ್ರೆ, ಅನಂತನಾಥ ಪುರಾಣಗಳು ಅವನ ಕೃತಿಗಳು. ಧರ್ಮಸಹಿಷ್ಣುತೆ, ಅಹಿಂಸೆಯ ಶ್ರೇಷ್ಠತೆ, ಹಿಂಸೆಯ ಪರಿಣಾಮ ಮುಂತಾದುವುಗಳನ್ನು ಅತ್ಯಂತ ಸರಳವಾಗಿ ಸುಂದರವಾಗಿ ಸಂಕ್ಷಿಪ್ತವಾಗಿ ಆಕರ್ಷಕವಾಗಿ ನಿರೂಪಿಸುವ ‘ಯಶೋಧರ ಚರಿತ್ರೆ’ ಅವನ ಶ್ರೇಷ್ಠ ಕೃತಿ ಮಾತ್ರವಲ್ಲ, ಕನ್ನಡ ಸಾಹಿತ್ಯದ ಸ್ಮರಣೀಯ ಕೃತಿಗಳಲ್ಲಿ ಒಂದು ಕೂಡ. ಮೇಲೆ ಉಲ್ಲೇಖಿಸಿದ ಕಾವ್ಯಗಳನ್ನು ಹೊರತು ಪಡಿಸಿದರೆ, ಈ ಕಾಲದ ಇನ್ನುಳಿದ ಕೃತಿಗಳು ಬಹಳಮಟ್ಟಿಗೆ ಧರ್ಮ ಪ್ರಚಾರೋದ್ದೇಶದಿಂದ ರಚಿತವಾದವುಗಳು. ಈ ಕಾಲಮಾನದ ಕೃತಿಗಳೆಲ್ಲ ಪ್ರಧಾನವಾಗಿ ಸಂಸ್ಕೃತದ ಗಾಢ ಪ್ರಭಾವದಲ್ಲಿ, ಪಾಂಡಿತ್ಯದ ದಟ್ಟ ಆಸರೆಯಲ್ಲಿ ಮೂಡಿದವುಗಳು. ಆದರೂ ಪ್ರಥಮ ದರ್ಜೆಯ ಪ್ರತಿಭಾ ಸಾಮರ್ಥ್ಯದಿಂದ, ಧರ್ಮ ಸಂಯಮದಿಂದ, ಅತ್ಯುನ್ನತ ಕಲ್ಪಕತೆಯಿಂದ ಪಂಪ, ರನ್ನ, ನಾಗಚಂದ್ರ ಮತ್ತು ಜನ್ನ ನಮ್ಮ ಸಾಹಿತ್ಯದ ಸೀಮಾ ಪುರುಷರಾಗಿದ್ದಾರೆ.

ಪ್ರೌಢವಾದ ಚಂಪೂಯುಗದ ಅನಂತರ ಕನ್ನಡ ನೆಲದಲ್ಲಿ ಸಾಮಾಜಿಕ ಸಮಾನತೆ ಮತ್ತು ಜನಸಾಮಾನ್ಯ ದೃಷ್ಟಿಯ ವಿಚಾರಧಾರೆ ಪ್ರಚಂಡ ವೇಗದಲ್ಲಿ ಹರಿಯಲಾರಂಭಿಸಿತು. ಬಸವಣ್ಣನವರ ಆವತರಣದಿಂದಾಗಿ ಧಾರ್ಮಿಕ, ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಭಾಷಿಕ ಮತ್ತು ಸಾಹಿತ್ಯಕ ಕ್ರಾಂತಿಗಳೆಲ್ಲವನ್ನು ಒಟ್ಟಿಗೇ ಮೇಳವಿಸಿಕೊಂಡ ಈ ಆಂದೋಲನ ಕನ್ನಡ ಭಾಷೆ ಮತ್ತು ಸಾಹಿತ್ಯದ ದೃಷ್ಟಿಯಿಂದಂತೂ ಅಭೂತ ಪೂರ್ವ ಪರಿವರ್ತನೆಯನ್ನು ತಂದಿತು. ಜನಪರಿಚಿತವಾದ ದಿನನಿತ್ಯವಾದ ವಿವರಗಳು, ಸಂಸ್ಕೃತದೂರವಾದ ತಿಳಿಯಾದ ತಿರುಳಾದ ಆಡುಭಾಷೆಯಲ್ಲಿ ಪರಿಣಾಮಕಾರಿಯಾಗಿ ಮೈವಡೆದವು. ಆತ್ಮ ನಿವೇದನೆ, ವ್ಯಾವಹಾರಿಕ ಸಂಗತಿ. ವೈಚಾರಿಕ ಮಿಂಚು, ದರ್ಶನದ ಉನ್ನತಿ – ಎಲ್ಲವನ್ನೂ ಸಮರ್ಥವಾಗಿ ಧಾರಣೆ ಮಾಡಲು ಕನ್ನಡ ಸರ್ವ ಸಮರ್ಥವಾಗಿದೆಯೆಂಬುದನ್ನು ಈ ವಚನಗಳು, ಸಾಬೀತು ಪಡಿಸಿದವು. ಬೇರೆ ಬೇರೆ ವರ್ಗ ಮತ್ತು ವೃತ್ತಿಗಳಿಂದ ಬಂದ ಜನ ಈ ಮಾಧ್ಯಮವನ್ನು ತಮ್ಮ ವಿಶಿಷ್ಟ ಅನುಭವ ಮತ್ತು ಭಾಷೆಯಿಂದ ಅಪೂರ್ವವಾಗಿ ಜೀವಂತಗೊಳಿಸಿದರು. ಬಸವಣ್ಣ, ಪ್ರಭುದೇವ, ಅಕ್ಕಮಹಾದೇವಿ, ದೇವರದಾಸಿಮಯ್ಯ ಮುಂತಾದವರ ವಚನಗಳು ಕಾವ್ಯಗುಣದ ದೃಷ್ಟಿಯಿಂದ ಕೂಡ ಮಹತ್ವಪೂರ್ಣವಾಗಿವೆ. ಈ ವಚನಸಾಹಿತ್ಯ ಮುಂದಿನ ಹಲವು ಶತಮಾನಗಳವರೆಗೆ ಕನ್ನಡ ಸಾಹಿತ್ಯವನ್ನು ಪರಿಣಾಮಕಾರಿಯಾಗಿ ಪ್ರಭಾವಿಸಿತು.

ಈ ಶರಣರ ಸಮಗ್ರ ಕ್ರಾಂತಿಯ ಫಲಿತವೋ ಎಂಬಂತೆ ಹರಿಹರ ಕನ್ನಡ ಕಾವ್ಯದ ವೇದಿಕೆಯಲ್ಲಿ ಕಾಲಿರಿಸಿದ. ಈತ ‘ಗಿರಿಜ ಕಲ್ಯಾಣ’ವೆಂಬ ಚಂಪೂ ಗ್ರಂಥವನ್ನು ಬರೆದು ತನ್ನ ಪಾಂಡಿತ್ಯ ಪ್ರದರ್ಶನ ಮಾಡಿದರೂ, ಶಿವಶರಣರ ಚರಿತ್ರೆಗಳನ್ನು ರಗಳೆಯ ಛಂದಸ್ಸಿನಲ್ಲಿ ಬರೆದು ಸಾಹಿತ್ಯಕ್ಕೂ ಶ್ರೀಸಾಮಾನ್ಯನಿಗೂ ನಡುವೆ ಇದ್ದ ಗೋಡೆಯನ್ನು ಒಡೆದುಬಿಟ್ಟ. ಪ್ರವಾಹರೂಪಿಯಾದ ತನ್ನ ಪ್ರತಿಭಾ ವಿಲಾಸದಿಂದ, ಸರಳವಾಗಿ ನಿರರ್ಗಳವಾಗಿ ಓಜೋಪೂರ್ಣವಾಗಿ ಭಕ್ತಿಭಾವಭರಿತವಾಗಿ ಶಕ್ತಿ ಸಮನ್ವಿತವಾಗಿ ನೂರಾರು ರಗಳೆಗಳನ್ನು ಬರೆದು, ವಸ್ತು ಛಂದಸ್ಸು ನಿರೂಪಣೆಗಳಲ್ಲಿ ಕ್ರಾಂತಿಯನ್ನೇ ಉಂಟುಮಾಡಿದ. ವೀರಶೈವ ಕವಿಗಳಿಗಂತೂ ಮಾದರಿಯೇ ಆದ. ಇವನ ಶಿಷ್ಯ ರಾಘವಾಂಕ ಕನ್ನಡ ಛಂದಸ್ಸಾದ ಷಟ್ಪದಿ ಯನ್ನು ಬಳಸಿ ಹರಿಶ್ಚಂದ್ರ ಕಾವ್ಯ, ಸಿದ್ಧರಾಮ ಚರಿತ, ಸೋಮನಾಥಪುರಾಣ ಮುಂತಾದ ಸತ್ವಶಾಲಿ ಕೃತಿಗಳನ್ನು ರಚಿಸಿದ. ಕುತೂಹಲಭರಿತ ಜೀವಂತ ಸಂವಾದ ಸಂದರ್ಭಗಳಿಂದ, ಚೈತನ್ಯಪೂರ್ಣವಾದ ಪಾತ್ರಗಾರಿಕೆಯಿಂದ, ರಸೋತ್ಕಟವಾದ ನಿರೂಪಣಾ ಕೌಶಲದಿಂದ ತೀರ ಸರಳವೂ ತೀರ ಪ್ರೌಢವೂ ಅಲ್ಲದ ಸರಳ ಗಂಭೀರ ಶೈಲಿಯಿಂದ ರಾಘವಾಂಕ ನಮ್ಮ ಅತ್ಯಂತ ಜನಪ್ರಿಯ ಕವಿಗಳಲ್ಲಿ ಒಬ್ಬನಾಗಿದ್ದಾನೆ; ಅವನ ಹರಿಶ್ಚಂದ್ರ ಕಾವ್ಯ ನಮ್ಮ ಶ್ರೇಷ್ಠ ಕಾವ್ಯಗಳಲ್ಲಿ ಒಂದಾಗಿದೆ. ಇವನ ಅನಂತರ ಷಟ್ಪದಿಯಲ್ಲಿ ಗಮನಾರ್ಹ ಕೃತಿಗಳನ್ನು ರಚಿಸಿದವರು ಚಾಮರಸ, ಭೀಮಕವಿ ಮತ್ತು ವಿರೂಪಾಕ್ಷ ಪಂಡಿತ. ಬಸವ ಪುರಾಣ, ಚೆನ್ನಬಸವಪುರಾಣ ಮತ್ತು ಪ್ರಭುಲಿಂಗಲೀಲೆ – ಇವೇ ಆ ಕೃತಿಗಳು. ಇವುಗಳಲ್ಲಿ ಪ್ರಭುಲಿಂಗಲೀಲೆ ಹೆಚ್ಚು ಜನಪ್ರಿಯವಾದ ಮತ್ತು ಕಾವ್ಯಮಲ್ಯವನ್ನುಳ್ಳ ಮುಖ್ಯ ಕಾವ್ಯ.

ಷಟ್ಪದೀ ಸಂಪ್ರದಾಯ ತನ್ನ ಮಹೋನ್ನತಿಯ ಶಿಖರವನ್ನು ಮುಟ್ಟಿದ್ದು ಕುಮಾರವ್ಯಾಸನಲ್ಲಿ. ಪಂಪನಾದ ನಂತರ ಅವನ ಮಟ್ಟದ ಮಹಾಪ್ರತಿಭೆಯ ಮಹಾಕವಿಯನ್ನು ಕನ್ನಡ ಕಂಡುಕೊಂಡದ್ದು ಇವನಲ್ಲಿ. ಭಾಮಿನೀ ಷಟ್ಪದಿ ಭಾವಮಯಿಯಾಗಿ ಸರ್ವ ಸೌಂದರ್ಯಮಯಿಯಾಗಿ ಪರಿಪೂರ್ಣಾವತಾರವನ್ನು ತಳೆದು ಹರಿದಿದ್ದು ಇವನ ‘ಕರ್ಣಾಟ ಭಾರತ ಕಥಾಮಂಜರಿ’ಯಲ್ಲಿ. ಕನ್ನಡ ಭಾಷೆಯ ವೈವಿಧ್ಯಮಯ ಸತ್ವವನ್ನು, ಅದ್ವಿತೀಯ ರೂಪಕ ವಿಲಾಸವನ್ನು, ಅನುಪಮ ಸ್ವಾತಂತ್ರ್ಯದಿಂದ ಜೀಕುವ ಬಗೆಬಗೆಯ ಸ್ತರಗಳ ಪಾತ್ರಗಳನ್ನು, ಸಾವಧಾನಶೀಲವಾಗಿಯಾದರೂ ಕುತೂಹಲಕರವಾಗಿ ಮೈಮುರಿದೇಳುವ ಜೀವಂತ ಸನ್ನಿವೇಶಗಳನ್ನು, ಹರಿಯುವ ಸುರಿಯುವ ಬಾಗುವ ಬಳುಕುವ ಸಿಡಿಯುವ ಮಿಂಚುವ ಗುಡುಗುವ ಮಹಾಶೈಲಿಯನ್ನು ಗರ್ಭೀಕರಿಸಿಕೊಂಡ ಈ ಕಾವ್ಯ ಕನ್ನಡದ ಅನುಪಮ ಸಿದ್ದಿಗಳಲ್ಲಿ ಒಂದು. ಇವನ ನಂತರ ನಿತ್ಯಾತ್ಮ ಶುಕಯೋಗಿ ಭಾಗವತವನ್ನು ಕನ್ನಡಿಸಿದ. ಕುಮಾರ-ವಾಲ್ಮೀಕಿ ಕನ್ನಡಕ್ಕೆ ಮೊತ್ತ ಮೊದಲಾಗಿ ವಾಲ್ಮೀಕಿ ರಾಮಾಯಣವನ್ನು ತಂದು ಕೊಟ್ಟು ಜನಪ್ರಿಯನಾದ. ಪಂಡಿತ ಪಾಮರರೆಲ್ಲರನ್ನು ತನ್ನ ನಾದ ಲೋಲತೆಯಿಂದ ಅಲಂಕಾರ ವೈಭವದಿಂದ ಸತ್ವಯುಕ್ತ ಶೈಲಿಯಿಂದ ಕಥನಕೌಶಲದ ಹಿರಿತನದಿಂದ, ಸನ್ನಿವೇಶ ನಿರ್ಮಾಣದ ನೈಪುಣ್ಯದಿಂದ, ರಸಪೋಷಣೆಯಿಂದ ಪರವಶರನ್ನಾಗಿಸಿದ ಲಕ್ಷ್ಮೀಶ ತನ್ನ ಜೈಮಿನಿಭಾರತದ ಮೂಲಕ. ಪಂಪನ ಆದಿಪುರಾಣದಲ್ಲಿ ಬರುವ ಭರತನನ್ನೇ ನಾಯಕನನ್ನಾಗಿ ಮಾಡಿಕೊಂಡು ಸಾಂಗತ್ಯ ಛಂದಸ್ಸಿನಲ್ಲಿ ಬೃಹದ್‌ಗಾತ್ರದ ಕಾವ್ಯವನ್ನು ರಚಿಸಿದ ಕೀರ್ತಿ ರತ್ನಾಕರವರ್ಣಿಯದು. ಅಧ್ಯಾತ್ಮ, ಶೃಂಗಾರಗಳನ್ನು ಅನ್ಯಾದೃಶ್ಯವಾಗಿ ಮೇಳವಿಸಿ ಅತ್ಯಂತ ಸರಸವಾಗಿ ಸವಿಯಾಗಿ ಸರಳವಾಗಿ ರಸೋತ್ಕಟವಾಗಿ ವಿವರಪೂರ್ಣವಾಗಿ ಬರೆಯಲಾದ ಅದ್ಭುತ ಕುಸುರಿಗೆಲಸದ ವಿಶಿಷ್ಟ ಕಾವ್ಯ ಇದು.

ಶಿವಪಾರಮ್ಯವನ್ನೂ ಸಾಮಾಜಿಕ ಸಮಾನತೆಯನ್ನೂ ಶುದ್ಧ ಕನ್ನಡತನವನ್ನೂ ಒಮ್ಮೆಗೇ ಅಭಿವ್ಯಕ್ತಿಸಿದ ವಚನಸಾಹಿತ್ಯದಂತೆ, ಹರಿಪಾರಮ್ಯವನ್ನೂ ನೀತಿಪ್ರಚಾರವನ್ನೂ ಗೇಯಗನ್ನಡ ವನ್ನೂ ಅಭಿವ್ಯಂಜಿಸಿದ್ದು ದಾಸಸಾಹಿತ್ಯ. ಪುರಂದರದಾಸ, ಕನಕದಾಸರು ಇವರಲ್ಲಿ ಮುಖ್ಯರು. ಆತ್ಮನಿವೇದನೆ ಸಾಮಾಜಿಕ ವಿಡಂಬನೆ ನೀತಿಬೋಧನೆ ಮತ್ತು ಭಕ್ತಿ ಪ್ರತಿಪಾದನೆಯನ್ನು ಮಾಡುವ ಪುರಂದರದಾಸರ ಕೀರ್ತನೆಗಳು ಅನುಭವದ ಗಟ್ಟಿತನದಿಂದ, ಅಂತಃಕರಣಪೂರ್ವಕ ಕಳಕಳಿಯಿಂದ, ರೋಚಕವಾದ ಕಲ್ಪಕತೆಯಿಂದ, ಸರಳನುಡಿಗಟ್ಟುಗಳಿಂದ ಆಕರ್ಷಕ ವಾಗಿದ್ದರೂ ಸಂಪ್ರದಾಯದ ದಟ್ಟ ನೆರಳನ್ನೂ ಹೊದ್ದುಕೊಂಡಿವೆ. ಶೂದ್ರವರ್ಗದಿಂದ ಬಂದ ಕನಕದಾಸರ ಕೀರ್ತನೆಗಳಲ್ಲಿ ತಾವು ಸಾಮಾಜಿಕವಾಗಿ ಅನುಭವಿಸಿದ ಯಾತನೆಯ ತೀವ್ರತೆಯಿದೆ, ಜತಿ ವರ್ಗಗಳ ಬಗೆಗಿನ ಹರಿತವಾದ ಖಂಡನೆಯಿದೆ, ಡಾಂಭಿಕತನದ ಕಟುವ್ಯಂಗ್ಯವಿದೆ, ಸಾಧಕ ಜೀವದ ಆರ್ತಮೊರೆ ಕರೆಗಳಿವೆ. ಇವು ಹೃತ್‌ಸ್ಪರ್ಶಿಯಾದ ಕಾವ್ಯ ಗುಣವನ್ನು ಧಾರಣಮಾಡಿಕೊಂಡಿವೆ. ಇವಲ್ಲದೆ ಮೋಹನ ತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ರಾಮಧಾನ್ಯ ಚರಿತೆಗಳೆಂಬ ಲಲಿತ ಮಧುರ ಕಾವ್ಯಗಳನ್ನೂ ಇವರು ರಚಿಸಿದ್ದಾರೆ. ಇವರಲ್ಲದೆ ವಿಜಯದಾಸ, ವಾದಿರಾಜ, ಜಗನ್ನಾಥದಾಸ ಮುಂತಾದವರೂ ಹಾಡುಗಳನ್ನೂ ಗ್ರಂಥಗಳನ್ನೂ ನಿರ್ಮಿಸಿ ವೈಷ್ಣವ ಸಾಹಿತ್ಯವನ್ನು ಪುಷ್ಟಗೊಳಿಸಿದ್ದಾರೆ. ಲೋಕದ ಅಂಕು ಡೊಂಕುಗಳನ್ನು ಮತ್ತು ಜೀವನ ನೀತಿಯನ್ನು ಅನ್ಯಾದೃಶ್ಯನಾಗಿ ತ್ರಿಪದಿಯ ಮಾಧ್ಯಮದಲ್ಲಿ ಅಭಿವ್ಯಕ್ತಿಸಿ ಪ್ರಸಿದ್ಧನಾದವನು ಸರ್ವಜ್ಞ.

ಮೈಸೂರರಸರಾದ ಚಿಕ್ಕದೇವರಾಜರ ಕಾಲದಲ್ಲಿ ವೈಷ್ಣವ ಸಾಹಿತ್ಯ ರಚನೆ ಮತ್ತಷ್ಟು ಕುಡಿವರಿಯಿತು. ತಿರುಮಲಾರ್ಯ, ಸಿಂಗರಾರ್ಯ, ಚಿಕ್ಕುಪಾಧ್ಯಾಯ ಮುಂತಾದ ಕವಿಗಳು ಸ್ವಯಂ ಕವಿಗಳಾಗಿದ್ದ ಈ ರಾಜರ ಆಸ್ಥಾನದಲ್ಲಿ ಕೃತಿರಚನೆ ಮಾಡಿದರು. ಹೊನ್ನಮ್ಮ ಎಂಬ ಸಂಚಿಯ ಊಳಿಗದ ಕವಿಯತ್ರಿ ‘ಹದಿಬದೆಯ ಧರ್ಮ’ ಎಂಬ ಸಾಂಗತ್ಯ ಕೃತಿಯೊಂದನ್ನು ಸೃಷ್ಟಿಸಿದಳು. ಮುಮ್ಮಡಿ ಕೃಷ್ಣರಾಜರ ಆಶ್ರಯದಲ್ಲಿ ಅನುವಾದ ಗದ್ಯರಚನೆ ಸುಗಮವಾಗಿ ಸಾಗಿತ್ತು. ಈ ಕಾಲದ ಕೆಂಪುನಾರಾಯಣನ ‘ಮುದ್ರಾಮಂಜೂಷ’ ಒಂದು ಉತ್ತಮ ಗದ್ಯ ಕಥನವಾಗಿದ್ದು ಹೊಸಗನ್ನಡದ ಪ್ರಥಮ ಕಿರಣವನ್ನು ಚೆಲ್ಲಿತು.

ಹತ್ತೊಂಬತ್ತನೆಯ ಶತಮಾನದ ಆದಿಭಾಗದಿಂದ ಮುದ್ರಣಯಂತ್ರ ಸ್ಥಾಪನೆ, ಕ್ರೈಸ್ತಮಿಷನರಿಗಳ ಆಸಕ್ತಿ, ಪತ್ರಿಕೋದ್ಯಮದ ಬೆಳವಣಿಗೆ, ಇಂಗ್ಲಿಷ್ ಶಿಕ್ಷಣದ ಪರಿಣಾಮ ಮುಂತಾದುವುಗಳ ಕಾರಣವಾಗಿ ಹೊಸಗನ್ನಡ ಸಾಹಿತ್ಯದ ಉದಯವಾಯಿತು. ಈ ಸಂಧಿ ಕಾಲದ ಕವಿಯಾಗಿ ಮುದ್ದಣ ಸ್ವತಂತ್ರ ಕ್ರಾಂತಿಯಿಂದ ಕಂಗೊಳಿಸುತ್ತಾನೆ. ಪುರಾತನ ವಸ್ತುವಿಗೆ ವಿನೂತನ ವಿನ್ಯಾಸವನ್ನು ಕೊಟ್ಟು ತಿರುಳುಗನ್ನಡದ ಬನಿಯನ್ನು ಅನ್ಯಾದೃಶ್ಯವಾಗಿ ಮೆರೆದ ವಿಶಿಷ್ಟ ಗದ್ಯ ಗ್ರಂಥ ಇವನ ‘ಶ್ರೀರಾಮಾಶ್ವಮೇಧ’. ಅನಂತರ ಚ. ವಾಸುದೇವಯ್ಯ, ಗುಲ್ವಾಡಿ ವೆಂಕಟರಾಯರು, ಬೋಳಾರ ಬಾಬುರಾಯರು, ಎಂ.ಎಸ್. ಪುಟ್ಟಣ್ಣನವರು ತಮ್ಮ ಕಾದಂಬರಿಗಳ ಮೂಲಕ ಹೊಸಗನ್ನಡ ಗದ್ಯಕ್ಕೆ ಗಟ್ಟಿಯಾದ ಅಡಿಪಾಯ ಹಾಕಿದರು. ಬಿ. ವೆಂಕಟಚಾರ್ಯರು ಮತ್ತು ಗಳಗನಾಥರು ಬಂಗಾಳಿ ಮತ್ತು ಮರಾಠಿ ಕೃತಿಗಳನ್ನು ಕನ್ನಡಿಸುವ ಮೂಲಕ ಹೊಸಗನ್ನಡ ಸಾಹಿತ್ಯಕ್ಕೆ ಹೊಸ ಪ್ರಪಂಚದ ಹೆಬ್ಬಾಗಿಲನ್ನು ತೆರೆದರು; ಜಡವಾಗಿ ಮಂಕಾಗಿದ್ದ ಸಾಹಿತ್ಯವಾಹಿನಿಗೆ ಜೀವಂತಿಕೆಯನ್ನು ತುಂಬಿದರು.

ಹೀಗೆ ಸುತ್ತ ಮುತ್ತಣ ಮತ್ತು ಒಳಗಿನ ಗಾಳಿ ಬೆಳಕುಗಳಿಗೆ ಮುಕ್ತವಾಗಿ ತನ್ನನ್ನು ತೆರೆದುಕೊಂಡ ಹೊಸಗನ್ನಡ ಸಾಹಿತ್ಯ ಕೆವಲ ಏಳೆಂಟು ದಶಕಗಳಲ್ಲಿ ಸರ್ವ ವ್ಯಾಪಕವಾಗಿ ಸಂಪುಷ್ಟವಾಗಿ ಸರ್ವೋನ್ನತವಾಗಿ ಬೆಳೆದು ನಿಂತಿದೆ. ಕಾಲಕಾಲಕ್ಕೆ ನವೋದಯ, ಪ್ರಗತಿಶೀಲ, ನವ್ಯ, ಬಂಡಾಯ, ದಲಿತ ಆಂದೋಲನಗಳಿಗೆ ತನ್ನನ್ನು ಖುಷಿಯಿಂದ ಒಡ್ಡಿಕೊಂಡು, ಅವುಗಳ ಸಾರಸತ್ವವನ್ನು ಹೀರಿಕೊಂಡು ವಿರಾಟ್ ಸ್ವರೂಪಿಯಾಗಿ ವಿಜೃಂಭಿಸಿದೆ. ಭಾವಗೀತೆ, ಸಣ್ಣಕತೆ, ಕಾದಂಬರಿ, ನಾಟಕ, ಪ್ರಬಂಧ ಮತ್ತು ಮಹಾಕಾವ್ಯ ಪ್ರಕಾರಗಳು ಈ ಕಾಲದ ಸಾಹಿತ್ಯದ ಮುಖ್ಯಾಂಗಗಳಾಗಿವೆ ಮತ್ತು ಇವೆಲ್ಲ ಪಾಶ್ಚಾತ್ಯ ಸಾಹಿತ್ಯದಿಂದ ಸ್ಫೂರ್ತಿ ಪ್ರೇರಣೆಗಳನ್ನು ಪಡೆದಿವೆ.

ಇಂಗ್ಲಿಷ್ ರೊಮ್ಯಾಂಟಿಕ್ ಯುಗದ ಕವಿಗಳಾದ ವರ್ಡ್ಸ್‌ವರ್ತ್, ಶೆಲ್ಲಿ, ಕೊಲಿರಿಡ್ಜ್ ಮುಂತಾದವರಿಂದ ಸ್ಫೂರ್ತವಾಗಿ ಭಾಗವಗೀತೆ ಕನ್ನಡಕ್ಕೆ ಕಾಲಿಟ್ಟಿತು. ಬಿ.ಎಂ.ಶ್ರೀ ಅವರ ಅನುವಾದಿತ ಭಾವಗೀತೆ ಸಂಕಲನ ‘ಇಂಗ್ಲಿಷ್ ಗೀತೆಗಳು’ ಹೊಸ ಛಂದಸ್ಸಿನ ಹೊಸವಸ್ತುವಿನ ಹೊಸ ದೃಷ್ಟಿಯ ಯುಗವನ್ನೇ ಆರಂಭಿಸಿತು. ಹಳೆಯ ಮೈಸೂರು ಪ್ರಾಂತ್ಯದಲ್ಲಿ ಕುವೆಂಪು ಈ ನವೋದಯ ಆಂದೋಲನದ ಮಹಾಕವಿಯಾಗಿ ವಿಜೃಂಭಿಸಿದರು. ಪ್ರಕೃತಿಯ ನಾನಾ ಮುಖಗಳನ್ನು ಇವರಂತೆ ಅನುಪಮವಾಗಿ ಕಾವ್ಯದಲ್ಲಿ ಅನಾವರಣ ಮಾಡಿದ ಮತ್ತೊಬ್ಬ ಕವಿಯಿಲ್ಲ. ಪ್ರಕೃತಿ ಗೀತೆಗಳು, ಪ್ರಣಯ ಗೀತೆಗಳು, ಸಾಮಾಜಿಕ ಗೀತೆಗಳು, ಆಧ್ಯಾತ್ಮಿಕ ಗೀತೆಗಳು, ದೇಶಪ್ರೇಮದ ಗೀತೆಗಳು, ಕ್ರಾಂತಿಗೀತೆಗಳು, ವ್ಯಕ್ತಿಗೀತೆಗಳು – ಹೀಗೆ ವೈವಿಧ್ಯಮಯ ವಸ್ತು ಮತ್ತು ಛಂದಸ್ಸಿನಿಂದ ಕೂಡಿದ ಭಾವ, ಭಾಷೆ, ನಾದಗಳ ಅಪೂರ್ವ ಸಮನ್ವಯವನ್ನು ಸಾಧಿಸಿದ ಸಾವಿರಾರು ಭಾವಗೀತೆಗಳನ್ನು ಅವರು ರಚಿಸಿದ್ದಾರೆ. ಭಾವಗೀತೆ, ಕಥನ ಗೀತೆ, ಖಂಡಕಾವ್ಯ, ಮಹಾಕಾವ್ಯಗಳೆಲ್ಲ ಅವರ ದೈತ್ಯ ಕಾವ್ಯಶಕ್ತಿಯ ಅಮೃತಫಲಗಳಾಗಿ ಹೊಮ್ಮಿವೆ. ಆಡುನುಡಿಯನ್ನೇ ತನ್ನ ಕಾವ್ಯದ ಪ್ರಧಾನ ಮಾಧ್ಯಮ ಮಾಡಿಕೊಳ್ಳುವ ಮೂಲಕ ಅಪೂರ್ವತೆಯನ್ನು ಸಾಧಿಸಿದ ಮತ್ತೊಬ್ಬ ಶ್ರೇಷ್ಠ ಕವಿ ದ.ರಾ. ಬೇಂದ್ರೆ. ಪ್ರಕೃತಿ, ಅನುಭಾವ, ಪ್ರಣಯಗಳನ್ನು ಅತ್ಯಂತ ಸೋಪಜ್ಞಶೀಲವಾಗಿ ಕಲಾತ್ಮಕವಾಗಿ ಗೇಯಾತ್ಮಕವಾಗಿ ಕವಿತಾವತಾರ ಮಾಡಿಸಿದ ಅದ್ಭುತ ಪ್ರತಿಭಾಶಾಲಿ ಇವರು. ಅತ್ಯಂತ ಸರಳವಾದ ಭಾಷೆಯಲ್ಲಿ ಅತ್ಯಂತ ಮಾರ್ದವವಾದ ಭಾವನೆಗಳನ್ನು ನಿರಾಯಾಸವಾಗಿ ಅಭಿವ್ಯಕ್ತಿಸಿದವರು ಮಾಸ್ತಿ. ದಾಂಪತ್ಯ ಜೀವನದ ಮಧುರ ಕ್ಷಣಗಳನ್ನು ತಮ್ಮ ಹೂವಿನಂಥ ಭಾಷೆಯಲ್ಲಿ ಸೆರೆಹಿಡಿದು ಅಮರಗೊಳಿಸಿ ಅಪಾರ ಜನಪ್ರಿಯತೆಯನ್ನು ಪಡೆದವರು ಕೆ.ಎಸ್. ನರಸಿಂಹಸ್ವಾಮಿ. ತಮ್ಮ ಹೊಸ ಹೊಸ ಪ್ರಯೋಗ ಮತ್ತು ಅನುಭವಗಳ ಮೂಲಕ ಕನ್ನಡ ಕಾವ್ಯ ಪರಿಧಿಯನ್ನು ವಿಸ್ತರಿಸಿದವರು ಗೋಕಾಕ್, ಡಿ.ವಿ.ಜಿ., ವಿ.ಸೀ., ಪು.ತಿ.ನ., ಶಿವರುದ್ರಪ್ಪ, ಕಣವಿ, ಪರಮೇಶ್ವರ ಭಟ್ಟ, ಎಕ್ಕುಂಡಿ, ಕಂಬಾರ, ಕಾವ್ಯಾನಂದ, ಅಡಿಗ ಮುಂತಾದ ನೂರಾರು ಪ್ರತಿಭಾವಂತ ಕವಿಗಳು ಈ ನವೋದಯ ಕಾವ್ಯವನ್ನು ಶ್ರೀಮಂತಗೊಳಿಸಿದರು.

ಕಾದಂಬರಿ ಕ್ಷೇತ್ರದಲ್ಲಂತೂ ನಮ್ಮ ಲೇಖಕರ ಸಾಧನೆ ದಂಗುಬಡಿಸುವಂಥದು. ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಮನೋವಿಶ್ಲೇಷಣಾತ್ಮಕ, ಪ್ರತೀಕಾತ್ಮಕ – ಮುಂತಾಗಿ ಹತ್ತಾರು ಬಗೆಯ ಸಾವಿರಾರು ಕಾದಂಬರಿಗಳು ರಚಿತವಾಗಿವೆ. ಕಾರಂತ ಈ ಕ್ಷೇತ್ರದ ಸೀಮಾಪುರುಷರು. ಕುವೆಂಪು, ಮಾಸ್ತಿ, ದೇವುಡು, ಪುಟ್ಟಸ್ವಾಮಯ್ಯ, ರಾವ್‌ಬಹದ್ದೂರ್, ಅ.ನ.ಕೃ., ತ.ರಾ.ಸು., ನಿರಂಜನ, ಕಟ್ಟೀಮನಿ, ಚದುರಂಗ, ಗೋಕಾಕ್, ಕೆ.ವಿ. ಅಯ್ಯರ್, ಸಿ.ಕೆ. ನಾಗರಾಜರಾವ್, ಭೈರಪ್ಪ, ತ್ರಿವೇಣಿ, ಅನುಪಮಾ, ಎಂ.ಕೆ. ಇಂದಿರಾ, ಎಚ್.ಎಲ್. ನಾಗೇಗೌಡ ಮುಂತಾದವರು ಈ ಕ್ಷೇತ್ರದ ಗಣ್ಯರಲ್ಲಿ ಕೆಲವರು. ಕುವೆಂಪು ಅವರ ಕಾನೂರು ಹೆಗ್ಗಡಿತಿ, ಮಲೆಗಳಲ್ಲಿ ಮದುಮಗಳು; ಕಾರಂತರ ಮರಳಿಮಣ್ಣಿಗೆ, ಅಳಿದ ಮೇಲೆ; ದೇವುಡು ಅವರ ಮಹಾಬ್ರಾಹ್ಮಣ; ಪುಟ್ಟಸ್ವಾಮಯ್ಯನವರ ಕ್ರಾಂತಿಕಲ್ಯಾಣ; ಗೋಕಾಕ್ ಅವರ ಸಮರಸವೇ ಜೀವನ; ರಾವ್‌ಬಹದ್ದೂರರ ಗ್ರಾಮಾಯಣ; ಅ.ನ.ಕೃ. ಅವರ ನಟಸಾರ್ವಭೌಮ; ತ.ರಾ.ಸು. ಅವರ ದುರ್ಗಾಸ್ತಮಾನ; ನಿರಂಜನರ ಮೃತ್ಯುಂಜಯ; ಕಟ್ಟೀಮನಿಯವರ ಜಲಾಮುಖಿಯ ಮೇಲೆ; ಭೈರಪ್ಪನವರ ಪರ್ವ; ಚದುರಂಗರ ಸರ್ವಮಂಗಳಾ; ಕೆ.ವಿ. ಅಯ್ಯರ್ ಅವರ ಶಾಂತಲಾ; ನಾಗೇಗೌಡರ ದೊಡ್ಡಮನೆ; ನಾಗರಾಜರಾಯರ ಪಟ್ಟಮಹಾದೇವಿ ಶಾನ್ತಲಾ – ಮುಂತಾದುವು ಯಾವುದೇ ಭಾಷೆಯ ಶ್ರೇಷ್ಠ ಕಾದಂಬರಿಗಳಿಗೆ ಹೊಯ್‌ಕಯ್ಯಾಗಿವೆ. ಸಣ್ಣಕತೆಯ ಕ್ಷೇತ್ರದಲ್ಲಿ ಮಾಸ್ತಿ ಅವರದು ಬಹುದೊಡ್ಡ ಹೆಸರು. ಸಂಖ್ಯೆಯಲ್ಲಿ, ವೈವಿಧ್ಯದಲ್ಲಿ, ಕಲಾತ್ಮಕತೆಯಲ್ಲಿ ಅವರ ಕತೆಗಳನ್ನು ಸರಿಗಟ್ಟುವವನು ಯಾವುದೇ ಭಾಷೆಯಲ್ಲಿ ವಿರಳ. ಆನಂದ, ಎ.ಆರ್.ಕೃ, ಅಶ್ವತ್ಥ, ಕುವೆಂಪು, ಕಟ್ಟೀಮನಿ, ತ.ರಾ.ಸು., ಅ.ನ.ಕೃ., ನಿರಂಜನ – ಈ ಕ್ಷೇತ್ರದಲ್ಲಿ ಕೆಲಸ ಮಾಡಿದ ಹಿರಿಯರಲ್ಲಿ ಕೆಲವರು.
ಕನ್ನಡದಲ್ಲಿ ತಡವಾಗಿ ಕಾಲಿರಿಸಿದ ನಾಟಕ ಭದ್ರವಾಗಿ ಬೇರೂರಿ ಸತ್ವಪೂರ್ಣ ಫಲಗಳನ್ನು ನೀಡಿದೆ. ಹಿರಿಯ ಕವಿಗಳಾದ ಕುವೆಂಪು. ಬೇಂದ್ರೆ, ಮಾಸ್ತಿ, ಪು.ತಿ.ನ. ಕಾವ್ಯಗುಣಭರಿತವಾದ ಶಕ್ತಿಶಾಲಿ ನಾಟಕಗಳನ್ನು ಸೃಷ್ಟಿಸಿದ್ದಾರೆ. ಈ ಕ್ಷೇತ್ರದ ಇಬ್ಬರು ದೈತ್ಯರು ಕೈಲಾಸಂ ಮತ್ತು ಶ್ರೀರಂಗ. ನಾಟಕವನ್ನು ಸಾಮಾಜಿಕ ಸುಧಾರಣೆಯ ಅಸ್ತ್ರವಾಗಿ ಬಳಸಿದ ಇವರು ನಾಟಕದ ಭಾಷೆ, ವಸ್ತು, ನಿರೂಪಣೆ, ಪಾತ್ರ, ತಂತ್ರಗಳಲ್ಲಿ ಅಪೂರ್ವ ದಾಖಲೆಯನ್ನು ಸ್ಥಾಪಿಸಿದರು. ಹೀಗೆ ನವೋದಯ ಸಾಹಿತ್ಯ ಎಲ್ಲ ಪ್ರಕಾರಗಳಲ್ಲಿಯೂ ತನ್ನ ಸೃಜನಶೀಲ ಸಾಮರ್ಥ್ಯದ ತುತ್ತತುದಿಯನ್ನು ಮುಟ್ಟಿತು.

ಸ್ವಾತಂತ್ರ್ಯೋತ್ತರ ಭಾರತದಲ್ಲಿ ಆದ ಮಲ್ಯಗಳ ಅಧಃಪತನ, ನಾಗರಿಕತೆಯ ಅದ್ಭುತ ಬೆಳವಣಿಗೆಯಿಂದಾಗಿ ಮನುಷ್ಯನ ಬದುಕಿನಲ್ಲಿ ಉಂಟಾದ ಸಂಕೀರ್ಣತೆ, ಹಲವು ದಶಕಗಳ ಕಾಲ  ಏಕಪ್ರಕಾರವಾಗಿ ಬಳಸಿದ್ದರಿಂದಾಗಿ ಭಾಷೆಯಲ್ಲಿ ಮೂಡಿದ ನಿರ್ವೀರ್ಯತೆ, ವೈಜ್ಞಾನಿಕ ಪ್ರಗತಿಯಿಂದಾಗಿ ಹೃದಯಕ್ಕಿಂತ ಮೆದುಳಿಗೆ ಬಂದ ಬೆಲೆ ಮತ್ತು ಪಾಶ್ಚಾತ್ಯ ನವ್ಯಸಾಹಿತ್ಯದ ಆಳವಾದ ಅಭ್ಯಾಸ – ಇತ್ಯಾದಿಗಳಿಂದಾಗಿ ಕನ್ನಡ ಸಾಹಿತ್ಯದಲ್ಲಿ ಹೊಸದೊಂದು ಆಂದೋಲನ ಹುಟ್ಟಿಕೊಂಡಿತು. ಅದೇ ನವ್ಯ ಸಾಹಿತ್ಯ ಚಳವಳಿ. ಕವಿ ತನ್ನ ಒಳಮನಸ್ಸಿನ ತುಡಿತಕ್ಕೆ ಪ್ರಾಮಾಣಿಕವಾಗಿ ಬದ್ಧವಾಗಿರುವುದು, ತನ್ನ ಅನುಭವಗಳನ್ನು ಶೋಧಿಸುವುದು, ಅದರ ಗರ್ಭದಿಂದಲೇ ಅನಿವಾರ್ಯ ಮತ್ತು ಅವಿಭಾಜ್ಯವಾಗಿ ಭಾಷೆ ಹೊಮ್ಮುವುದು, ಭಾಷೆಯನ್ನು ಅತ್ಯಂತ ಜತನದಿಂದ ಹೆಚ್ಚು ಶಕ್ತಿಯುತವಾಗಿ ದುಡಿಸಿಕೊಳ್ಳುವುದು, ವೈಚಾರಿಕತೆಗೆ ಒತ್ತು-ಇತ್ಯಾದಿಗಳು ನವ್ಯ ಸಾಹಿತ್ಯದ ಗುರಿಗಳಾದವು. ವಿನಾಯಕರ ‘ಸಮುದ್ರ ಗೀತೆಗಳು’ ಈ ಕಾವ್ಯದ ಮಾರ್ಗವನ್ನು ತೆರೆಯಿತು. ಆದರೆ ಮೊದಲಿನಿಂದಲೂ ಹೊಸದಕ್ಕೆ ತುಡಿಯುತ್ತ ಬಂದ ಗೋಪಾಲಕೃಷ ಅಡಿಗರು ನವ್ಯಯುಗದ ಅತ್ಯಂತ ಶಕ್ತಿಯುತ ವಕ್ತಾರರೂ ಪ್ರತಿನಿಧಿಯೂ ಆದರು. ತೀಕ್ಷ್ಣವಾದ ವೈಚಾರಿಕತೆ, ಭಾಷಾಪ್ರಭುತ್ವ ಮತ್ತು ಪ್ರಥಮದರ್ಜೆಯ ಸೃಜನಶೀಲ ಪ್ರತಿಭೆಗಳನ್ನು ಪಡೆದ ಈ ಕವಿ ‘ಚಂಡೆ ಮದ್ದಳೆ’, ‘ಭೂಮಿಗೀತ’ ಮುಂತಾದ ಸಂಕಲನಗಳ ಮೂಲಕ ಈ ಸಂಪ್ರದಾಯಕ್ಕೆ ಭದ್ರಬುನಾದಿಯನ್ನು ಹಾಕಿದರು. ನೂರಾರು ಯುವಕವಿಗಳು ಇವರ ಮಾರ್ಗದಲ್ಲಿ ಮುನ್ನಡೆದರು. ನವೋದಯದಲ್ಲಿ ಗಮನಾರ್ಹ ಸಾಧನೆ ಮಾಡಿದ್ದ ಕೆ.ಎಸ್. ನರಸಿಂಹಸ್ವಾಮಿ, ಶಿವರುದ್ರಪ್ಪ, ಕಣವಿ ಮುಂತಾದವರೂ ಈ ಹಾದಿಯಲ್ಲಿ ಶ್ರೇಷ್ಠ ಕವಿತೆಗಳನ್ನು ರಚಿಸಿದರು. ರಾಮಚಂದ್ರಶರ್ಮ, ಲಂಕೇಶ್, ನಿಸಾರ್‌ಅಹಮದ್, ಕಂಬಾರ, ತಿರುಮಲೇಶ್ ಮೊದಲಾದವರು ಈ ಮಾರ್ಗದ ಸತ್ವಶಾಲಿ ಕವಿಗಳಾಗಿ ಬೆಳೆದರು. ಕತೆ, ಕಾದಂಬರಿ ನಾಟಕ ಮತ್ತು ವಿಮರ್ಶೆಗಳ ಕ್ಷೇತ್ರದಲ್ಲೂ ಈ ಒಲವು ಕಾಲಿಟ್ಟು ಸಮೃದ್ಧ ಸಾಹಿತ್ಯ ನಿರ್ಮಾಣವಾಯಿತು. ಅನಂತಮೂರ್ತಿ, ಲಂಕೇಶ್, ಯಶವಂತ ಚಿತ್ತಾಲ, ಶಾಂತಿನಾಥ ದೇಸಾಯಿ, ತೇಜಸ್ವಿ, ಕಂಬಾರ, ಕಾರ್ನಾಡ್, ಚಂದ್ರಶೇಖರ ಪಾಟೀಲ್ ಮುಂತಾದ ಪ್ರತಿಭಾವಂತರು ಈ ರಂಗದಲ್ಲಿ ಮಹತ್ವಪೂರ್ಣ ಸಾಧನೆ ಮಾಡಿದ್ದಾರೆ; ರಾಷ್ಟ್ರೀಯ ಅಂತಾರಾಷ್ಟ್ರೀಯ ಖ್ಯಾತಿಯನ್ನು ಗಳಿಸಿದ್ದಾರೆ.

ಅನುಭವಕ್ಕೆ ನಿಷ್ಠವಾಗಬೇಕೆನ್ನುವ, ಭಾಷೆಯನ್ನು ಅತ್ಯಂತ ಹಿಡಿತವಾಗಿ ಬಳಸಬೇಕೆನ್ನುವ ನವ್ಯಸಾಹಿತ್ಯ ಬರಬರುತ್ತ ಬೌದ್ದಿಕ ಕಸರತ್ತಾಗಿ ಜನಸಾಮಾನ್ಯರ ಮನದಲ್ಲಿ ಯಾವ ಸ್ಪಂದನವನ್ನೂ ಮೂಡಿಸದೆ ಹೋದಾಗ ಮತ್ತು ಅವರ ನೋವು ಹಿಂಸೆಗಳನ್ನು ಅಭಿವ್ಯಕ್ತಿ ಸುವಲ್ಲಿ ವಿಫಲವಾದಾಗ ಹೊಸದೊಂದು ಆಂದೋಲನ ಆರಂಭವಾಗುವುದು ಅನಿವಾರ್ಯ ವಾಯಿತು. ಬಸವಣ್ಣ, ಕಾರ್ಲ್‌ಮಾರ್ಕ್ಸ್, ಲೋಹಿಯಾ, ಅಂಬೇಡ್ಕರ್ ವಿಚಾರಧಾರೆಗಳಿಂದ ಪ್ರೇರಿತವಾದ ಬಂಡಾಯ-ದಲಿತ ಧೋರಣೆಗಳು ಸಾಹಿತ್ಯದಲ್ಲಿ ಢಾಳಾಗಿ ಪ್ರಕಟಗೊಂಡು ದೀನರ ದುರ್ಬಲರ ಶೋಷಿತರ ಹೃದಯದ ದನಿಯಾಗಿ ಸಾಹಿತ್ಯ ಈಗ ರೂಪುಗೊಳ್ಳುತ್ತಿದೆ. ಬರಗೂರು ರಾಮಚಂದ್ರಪ್ಪ, ಚಂದ್ರಶೇಖರ ಪಾಟೀಲ, ದೇವನೂರು ಮಹಾದೇವ, ಸಿದ್ಧಲಿಂಗಯ್ಯ, ಕಾಳೇಗೌಡ ನಾಗವಾರ, ಚೆನ್ನಣ್ಣವಾಲಿಕಾರ ಮೊದಲಾದ ಜನಪರ ಧೋರಣೆಯ ಸಮರ್ಥ ಲೇಖಕರು ಈ ನಿಟ್ಟಿನಲ್ಲಿ ಕಾವ್ಯ, ಕತೆ, ಕಾದಂಬರಿ ಮತ್ತು ನಾಟಕಗಳ ಮೂಲಕ ಸಂಪುಷ್ಟ ಕೃಷಿ ಮಾಡುತ್ತಿದ್ದಾರೆ. ಇದು ಹೊಸ ಭರವಸೆಯತ್ತ ಮತ್ತು ಫಲದಾಯಕ ಸಾಧನೆಗಳತ್ತ ನಮ್ಮ ಸಾಹಿತ್ಯ ಮುಖ ಮಾಡಿರುವುದನ್ನು ಸೂಚಿಸುತ್ತದೆ.

ಬೇರೊಂದು ಕ್ಷೇತ್ರದಲ್ಲೂ ಕನ್ನಡ ಸಾಹಿತ್ಯ ನೂತನ ದಾಖಲೆಯನ್ನು ನಿರ್ಮಿಸಿದೆ. ಆಧುನಿಕ ಸಂಕೀರ್ಣ ಬದುಕಿನಲ್ಲಿ, ಸುರ್ದೀರ್ಘಕಾಲದ ಚಿತ್ತೈಕಾಗ್ರತೆಯನ್ನು ಮಹದ್ವಸ್ತು ನಿರ್ವಹಣೆಗೆ ಅಗತ್ಯವಾದ ವೈವಿಧ್ಯಮಯವೂ ಪ್ರಗಾಢವೂ ಆದ ಭಾಷಾಪ್ರಭುತ್ವವನ್ನು ಅಖಂಡರಾಷ್ಟ್ರದ ಸಮರ್ಥ ಪ್ರತಿನಿಧಿಯಾಗಬಲ್ಲ ಸುವಿಸ್ತೃತ ಅನುಭವವನ್ನು ಮತ್ತು ಹೃದಯ ವೈಶಾಲ್ಯವನ್ನು – ಇವೆಲ್ಲವನ್ನೂ ಅತ್ಯಂತ ಎತ್ತರಕ್ಕೆ ಕೊಂಡೊಯ್ಯಬಲ್ಲ ಮಹಾಪ್ರತಿಭೆಯನ್ನು ಅಪೇಕ್ಷಿಸುವ ಮಹಾಕಾವ್ಯದ ಸೃಷ್ಟಿ ಸಾಧ್ಯವಿಲ್ಲವೆನ್ನುವ ವಾದವನ್ನು ಸುಳ್ಳು ಮಾಡಿ ಕುಬ್ಜಮತಿ ತತ್ತರಿಸುವಂಥ ಮಹೋನ್ನತ ಕಾವ್ಯಗಳಿಗೆ ಕನ್ನಡನಾಡು ಜನ್ಮ ಕೊಟ್ಟಿದೆ. ಕುವೆಂಪು ‘ಶ್ರೀರಾಮಾಯಣದರ್ಶನಂ’ ಈ ಮಹತ್ವದ ದಾಖಲೆಯನ್ನು ಸ್ಥಾಪಿಸಿತು; ಮಾತ್ರವಲ್ಲ, ಭವ್ಯಶೈಲಿ, ಮಹಾಛಂದಸ್ಸು, ವಿನೂತನ ಸನ್ನಿವೇಶ ನಿರ್ಮಾಣ, ನಭೋಗಾಮಿಯಾದ ಕಲ್ಪನೆ, ಸರ್ವಸ್ತರಗಳನ್ನು ಏಕಗ್ರಾಹಿಯಾಗಿ ಸೆರೆಹಿಡಿಯಬಲ್ಲ ಪೂರ್ಣದೃಷ್ಟಿ, ಸಮಕಾಲೀನತೆ ಒತ್ತಾಯಿಸುವ ಪ್ರಖರ ವೈಚಾರಿಕತೆಗಳನ್ನು ಮೇಳವಿಸಿಕೊಂಡು ಈಗಾಗಲೇ ವಿದ್ವಾಂಸರ ಜನಸಾಮಾನ್ಯರ ಮನಸ್ಸಿನಲ್ಲಿ ಭದ್ರವಾಗಿ ಬೇರು ಬಿಡತೊಡಗಿದೆ, ಹೊಸಗನ್ನಡದ ಹೈಮಾಚಲ ಸಿದ್ದಿಯೆನಿಸಿದೆ. ಹೀಗೆಯೇ ವಿಮರ್ಶಕರಿಗೆ ಸವಾಲಾಗಿ ನಿಲ್ಲಬಲ್ಲ ಗೋಕಾಕರ ‘ಭಾರತ ಸಿಂಧು ರಶ್ಮಿ’ ಮತ್ತು ಭೂಸನೂರು ಮಠರ ‘ಭವ್ಯಮಾನವ’ ಬೃಹತ್ ಕಾವ್ಯಗಳು ಮೂಡಿ ಬಂದಿವೆ.

ಭಾರತದ ಅತ್ಯಂತ ಪ್ರತಿಷ್ಠಿತ ಪ್ರಶಸ್ತಿಯಾದ ಜ್ಞಾನಪೀಠ ಪುರಸ್ಕಾರವನ್ನು ಈಗಾಗಲೇ ಕನ್ನಡದ ಏಳು ಕೃತಿಗಳು ಪಡೆದಿರುವುದು ಅತ್ಯಂತ ಅಭಿಮಾನದ ಸಂಗತಿಯಾಗಿದೆ. ರಾಷ್ಟ್ರಕವಿ ಕುವೆಂಪು ಅವರ ‘ಶ್ರೀರಾಮಾಣದರ್ಶನಂ’, ವರಕವಿ ಬೇಂದ್ರೆಯವರ ‘ನಾಕುತಂತಿ’, ಶಿವರಾಮ ಕಾರಂತರ ಮೂಕಜ್ಜಿಯ ಕನಸುಗಳು, ಮಾಸ್ತಿಯವರ ‘ಚಿಕವೀರ ರಾಜೇಂದ್ರ’ ಮತ್ತು ಗೋಕಾಕರ ಭಾರತ ಸಿಂಧು ರಶ್ಮಿ, ಡಾ. ಯು.ಆರ್. ಅನಂತಮೂರ್ತಿ ಮತ್ತು ಡಾ. ಗಿರೀಶ್ ಕಾರ್ನಾಡರ ಇವೇ ಆ ಕೃತಿಗಳು. ಇವಲ್ಲದೆ ಇಪ್ಪತ್ತೊಂಬತ್ತು ಕೃತಿಗಳು ಭಾರತ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದಿವೆ. ಶ್ರೀ ರಾಮಾಯಣದರ್ಶನಂ (ಕುವೆಂಪು), ಕನ್ನಡ ಸಾಹಿತ್ಯ ಚರಿತ್ರೆ (ರಂ.ಶ್ರೀ. ಮುಗಳಿ), ಅರಳು ಮರಳು (ದ.ರಾ. ಬೇಂದ್ರೆ), ಯಕ್ಷಗಾನ ಬಯಲಾಟ (ಕಾರಂತ), ದ್ಯಾವಾಪೃಥ್ವಿ (ಗೋಕಾಕ್), ಬಂಕಿಮಚಂದ್ರ (ಎ.ಆರ್. ಕೃಷ್ಣಶಾಸ್ತ್ರೀ), ಮಹಾಕ್ಷತ್ರಿಯ (ದೇವುಡು) ಕ್ರಾಂತಿಕಲ್ಯಾಣ (ಬಿ. ಪುಟ್ಟಸ್ವಾಮಯ್ಯ), ರಂಗಬಿನ್ನಪ (ಎಸ್.ವಿ. ರಂಗಣ್ಣ), ಹಂಸದಮಯಂತಿ ಮತ್ತು ಇತರ ರೂಪಕಗಳು (ಪು.ತಿ. ನರಸಿಂಹಾಚಾರ್), ಶ್ರೀಮದ್ ಭಗವದ್ಗೀತಾ ತಾತ್ಪರ್ಯ (ಡಿ.ವಿ. ಗುಂಡಪ್ಪ), ಸಣ್ಣಕತೆಗಳು (ಮಾಸ್ತಿ), ಕರ್ನಾಟಕ ಸಂಸ್ಕೃತಿ ಸಮೀಕ್ಷೆ (ಎಚ್. ತಿಪ್ಪೇರುದ್ರಸ್ವಾಮಿ), ಕರ್ನಾಟಕ ಸಂಸ್ಕೃತಿಯ ಪೂರ್ವ ಪೀಠಿಕೆ (ಶಂ.ಬಾ. ಜೋಷಿ), ಕಾಳಿದಾಸ (ಶ್ರೀರಂಗ), ಶೂನ್ಯ ಸಂಪಾದನೆಯ ಪರಾಮರ್ಶೆ (ಭೂಸನೂರ ಮಠ), ಅದಲು ಬದಲು (ವಿ. ಸೀತಾರಾಮಯ್ಯ), ವರ್ಧಮಾನ (ಗೋಪಾಲಕೃಷ್ಣ ಅಡಿಗ), ದಾಟು (ಭೈರಪ್ಪ), ಮನಮಂಥನ (ಎಂ. ಶಿವರಾಂ), ತೆರೆದ ಬಾಗಿಲು (ಕೆ.ಎಸ್. ನರಸಿಂಹಸ್ವಾಮಿ), ಹಸಿರು ಹೊನ್ನು (ಬಿ.ಜಿ.ಎಲ್. ಸ್ವಾಮಿ), ಚಿತ್ರಗಳು-ಪತ್ರಗಳು (ಎ.ಎನ್. ಮೂರ್ತಿರಾವ್), ಅಮೆರಿಕದಲ್ಲಿ ಗೊರೂರು (ಗೊರೂರು ರಾಮಸ್ವಾಮಿ ಅಯ್ಯಂಗಾರ್), ಜೀವಧ್ವನಿ (ಕಣವಿ), ವೈಶಾಖ (ಚದುರಂಗ), ಕತೆಯಾದಳು ಹುಡುಗಿ (ಯಶವಂತ ಚಿತ್ತಾಲ), ದುರ್ಗಾಸ್ತಮಾನ (ತ.ರಾ.ಸು), ಕಾವ್ಯಾರ್ಥ ಚಿಂತನ (ಜಿ.ಎಸ್. ಶಿವರುದ್ರಪ್ಪ), ಚಿದಂಬರ ರಹಸ್ಯ (ಕೆ.ಪಿ. ಪೂರ್ಣಚಂದ್ರ ತೇಜಸ್ವಿ), ಅವಧೇಶ್ವರಿ (ಶಂಕರ ಮೇಕಾಶಿ ಪುಣೇಕರ) ಇವೇ ಆ ವಿಶಿಷ್ಟ ಕೃತಿಗಳು. ಇವಲ್ಲದೆ ಸಿದ್ಧಯ್ಯ ಪುರಾಣಿಕರ ವಚನೋದ್ಯಾನ ಬಿಲ್ವಾರ ಪ್ರಶಸ್ತಿಯನ್ನು. ಗಿರೀಶ್ ಕಾರ್ನಾಡರ ‘ಹಯವದನ’ ಮತ್ತು ಚಂದ್ರಶೇಖರ ಕಂಬಾರರ ‘ಜೋಕುಮಾರಸ್ವಾಮಿ’ ಕಮಲಾದೇವಿ ಚಟ್ಟೋಪಾಧ್ಯಾಯ ಪ್ರಶಸ್ತಿಯನ್ನು ಸಿ.ಕೆ. ನಾಗರಾಜರಾವ್ ಅವರ ‘ಪಟ್ಟಮಹಾದೇವಿ ಶಾನ್ತಲಾ’’ ಮೂರ್ತಿದೇವಿ ಪುರಸ್ಕಾರವನ್ನೂ, ಗೋಪಾಲಕೃಷ್ಣ ಅಡಿಗರ ‘ವರ್ಧಮಾನ’ ಕಬೀರ ಸಮ್ಮಾನವನ್ನು ಪಡೆದಿವೆ. ನಮ್ಮ ಸಾಹಿತ್ಯದ ಈ ಅತ್ಯುನ್ನತ ಶಿಖರಗಳು ರಾಷ್ಟ್ರಮಟ್ಟದಲ್ಲಿ ಕನ್ನಡದ ಕೀರ್ತಿಯನ್ನು ಬೆಳಗಿವೆ. ಈ ಹಿರಿಮೆ ಕನ್ನಡ ಸಾಹಿತ್ಯ ಏರಿರುವ ಎತ್ತರವನ್ನು, ಸಾಧಿಸಿರುವ ವಿಕ್ರಮಗಳನ್ನು ನಿರ್ವಿವಾದವಾಗಿ ಸಾಬೀತುಪಡಿಸುತ್ತದೆ.

ನಮ್ಮ ಸಾಹಿತ್ಯದ ಕಳೆದ ಒಂದು ಸಾವಿರ ವರ್ಷಗಳ ಸಾಧನೆ ಒಂದು ತೂಕವಾದರೆ, ಕಳೆದ ನೂರು ವರ್ಷಗಳ ಸಾಧನೆಯೇ ಮತ್ತೊಂದು ತೂಕವಾಗಿದೆ. ಈ ಸಾಧನೆ ವೈವಿಧ್ಯಮಯವಾಗಿದೆ, ವೈಶಿಷ್ಟ್ಯಮಯವಾಗಿದೆ, ಅಪೂರ್ವ ಗುಣಮಲ್ಯಭೂಯಿಷ್ಠವಾಗಿದೆ ಮತ್ತು ಈ ಕಾರಣದಿಂದ ಯಾವುದೇ ಭಾರತೀಯ ಭಾಷಾ ಸಾಹಿತ್ಯಕ್ಕೆ ಸಮಸ್ಪರ್ಧಿಯಾಗಿದೆ.
ಇದು ನಮ್ಮ ನಾಡಿನ, ನುಡಿಯ, ಸಾಹಿತ್ಯದ ಹಿರಿಮೆಗರಿಮೆಗಳ ಸ್ಥೂಲ ಸಮೀಕ್ಷೆ ಮಾತ್ರ.
ಆಧಾರ ಗ್ರಂಥಗಳು
೧. ಕನ್ನಡ ವಿಶ್ವಕೋಶ – ಸಂ. ೩, ೪.
೨. ಅವಲೋಕನ – ಸಂ: ಎಚ್ಚೆಸ್ಕೆ
೩. ಕನ್ನಡ ಸಾಹಿತ್ಯ ಚರಿತ್ರೆ – ಸಂ. ೧ – ಸಂ: ಡಾ. ಹಾ.ಮಾ. ನಾಯಕ ಮತ್ತು ಡಾ. ವೆಂಕಟಾಚಲಶಾಸ್ತ್ರೀ.
೪. ಕನ್ನಡ ಸಾಹಿತ್ಯ ಚರಿತ್ರೆ – ಡಾ. ರಂ.ಶ್ರೀ. ಮುಗಳಿ
೫. ಹೊಸಗನ್ನಡ ಸಾಹಿತ್ಯ – ಎಲ್.ಎಸ್. ಶೇಷಗಿರಿರಾವ್
೬. ಕನ್ನಡ ಭಾರತಿ – ಎಲ್.ಎಸ್. ಶೇಷಗಿರಿರಾವ್
೭. ಕನ್ನಡ ಭಾಷಾಶಾಸ್ತ್ರ – ಡಾ. ರಾ.ಯ. ಧಾರವಾಡಕರ
೮. ಬೆರಕೆ ಸೊಪ್ಪು – ಡಾ. ದೇ. ಜವರೇಗೌಡ
೯. ಕನ್ನಡದ ನೆಲೆ – ಡಾ. ಶಂ.ಬಾ. ಜೋಶಿ
೧೦. ಕನ್ನಡ ಸಂಸ್ಕೃತಿ – ಪ್ರೊ. ಎಂ. ಮರಿಯಪ್ಪಭಟ್ಟ
೧೧. ಕನ್ನಡ ಕೈಪಿಡಿ, ಭಾಗ-೧ – ಮೈಸೂರು ವಿಶ್ವವಿದ್ಯಾನಿಲಯ
೧೨. ಕನ್ನಡ ನಾಡಿನ ಚರಿತ್ರೆ – ಡಾ. ಬಿ.ಎ. ಸಾಲೆತೊರೆ
೧೩. ಮೂರು ಉಪನ್ಯಾಸಗಳು – ಎಂ. ಗೋವಿಂದ ಪೈ

ಸೌಜನ್ಯ: ಸಾಹಿತ್ಯ ಶೋಧನ ಪುಸ್ತಕದಿಂದ ಆಯ್ದ ಲೇಖನ:
             ಪ್ರಸಾರಾಂಗ, ಕನ್ನಡ ವಿಶ್ವವಿದ್ಯಾಲಯ, ಹಂಪಿ.


1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಚಾ ಶಿ ಜಯಕುಮಾರ್ ಕೃಷ್ಣರಾಜಪೇಟೆ ಮಂಡ್ಯ ಜಿಲ್ಲೆ