ಗುಲ್ಬರ್ಗದ
ಶ್ರೀಮಾತಾ ಮಾಣಿಕೇಶ್ವರಿ ಕಾಲೊನಿಯಲ್ಲಿ ನಿಂತು `ಮಹಾದೇವಿ ನಂದಿಕೋಲ ಅವರ ಮನೆ
ಎಲ್ಲಿದೆ' ಎಂದು ಕೇಳಿದರೆ ಅಲ್ಲಿಯ ಜನ `ಗೊತ್ತಿಲ್ಲ' ಎನ್ನುತ್ತಾರೆ. ಅದೇ `ರೊಟ್ಟಿ
ಮಹಾದೇವಿ ಅವರ ಮನೆ' ಎನ್ನುತ್ತಿದ್ದಂತೆ, ಮನೆಯಿಂದ ಹೊರಕ್ಕೆ ಬಂದು ದಾರಿ
ತೋರಿಸುತ್ತಾರೆ. ಇದು ರೊಟ್ಟಿ ಮಹಾದೇವಿ ಮಹಾತ್ಮೆ!
21 ವರ್ಷಗಳ ಹಿಂದೆ ಏನೇನೂ ಅಲ್ಲವಾಗಿದ್ದ ಮಹಾದೇವಿ ಈಗ 60 ಮಹಿಳೆಯರಿಗೆ ಕೆಲಸ ಕೊಟ್ಟಿದ್ದಾರೆ. ತಾವೂ ಹಣ ಗಳಿಸುತ್ತಿದ್ದಾರೆ. ಕೆಲಸದವರೂ ಹಣ ಗಳಿಸುವಂತೆ ಮಾಡುತ್ತಿದ್ದಾರೆ. ತಾವೂ ಹೊಟ್ಟೆ ತುಂಬ ಉಣ್ಣುತ್ತಿದ್ದಾರೆ, ಹಾಗೆಯೇ ತಮ್ಮಂದಿಗೆ ಕೆಲಸ ಮಾಡುತ್ತಿರುವವರು ಮತ್ತು ಅವರ ಕುಟುಂಬದವರೂ ನೆಮ್ಮದಿಯಿಂದ ಬದುಕುವಂತೆ ಮಾಡಿದ್ದಾರೆ.
ಮಹಾದೇವಿ ಅವರ ಗಂಡನ ಮನೆಯಲ್ಲಿ ಕಷ್ಟಗಳ ಸರಮಾಲೆಯೇ ಇತ್ತು. ಇಬ್ಬರು ಗಂಡು ಮಕ್ಕಳು, ಕಾಯಿಲೆಯಿಂದ ಬಳಲುತ್ತಿದ್ದ ಗಂಡ. ಎಲ್ಲರೂ ಮೂರು ಹೊತ್ತು ಹೊಟ್ಟೆ ತುಂಬ ಉಣ್ಣುವುದೇ ಕಷ್ಟವಾಗಿತ್ತು. ಬೇರೆ ದಾರಿ ಕಾಣದ ಮಹಾದೇವಿ ಮನೆ ಮನೆಗೆ ಹೋಗಿ ರೊಟ್ಟಿ ಮಾಡಿಕೊಡುತ್ತಿದ್ದರು. ಇವರು ಜೋಳದ ಹಿಟ್ಟನ್ನು ಕಲಸಿ ಮಣೆ ಮೇಲೆ ಇಟ್ಟು `ಪಟ... ಟಪ' ಬಡಿಯುತ್ತಿದ್ದರೆ ರೊಟ್ಟಿಗಳು ಹೂವಿನಂತೆ ಅರಳುತ್ತಿದ್ದವು.
ರೊಟ್ಟಿ ಮಾಡುವುದರಲ್ಲಿ ಮಹಾದೇವಿ ಎತ್ತಿದ ಕೈ ಆಗಿದ್ದರು. ಆದರೆ ಇಂತಹ ಕೆಲಸಕ್ಕೂ ಕುತ್ತು ಬಂತು. `ಮಹಾದೇವಿ ಕೈ ಸರಿಯಿಲ್ಲ. ಮನೆಯಲ್ಲಿ ವಸ್ತುಗಳನ್ನು ಕದಿಯುತ್ತಾಳೆ' ಎನ್ನುವ ಅಪಪ್ರಚಾರ ಶುರುವಾಯಿತು. ಮನೆ ಕೆಲಸಕ್ಕೆ ಕರೆ ಬರುವುದು ನಿಂತಿತು. ಜೊತೆಗೆ ಮಹಾದೇವಿ ಅವರ ಮನೆಯವರ ಹೊಟ್ಟೆ ತುಂಬುವುದೂ ಸಹ.
ಮಹಾದೇವಿ ಅಧೀರರಾದರು. ಭವಿಷ್ಯವನ್ನು ನೆನೆದು ಅತ್ತು ಅತ್ತು ಸೆರಗು ಒದ್ದೆ ಆಯಿತು. ದಿಕ್ಕು ತೋಚಲಿಲ್ಲ. ತಮ್ಮ ಸಂಪ್ರದಾಯದಲ್ಲಿ ಬಂದಿದ್ದ `ಕಂತಿ ಭಿಕ್ಷೆ' ನೆನಪಿಗೆ ಬಂತು. ಜೋಳಿಗೆಯನ್ನು ಹೆಗಲಿಗೇರಿಸಿದ ಮಹಾದೇವಿ ಮನೆ ಮನೆಗೆ ಭಿಕ್ಷೆಗೆ ಹೊರಟರು. ಹೀಗೆ ಕಂತಿ ಭಿಕ್ಷೆಯಿಂದ ಬರುತ್ತಿದ್ದ ಜೋಳದ ಹಿಟ್ಟನ್ನು ತಂದು ಮನೆಯಲ್ಲಿ ರೊಟ್ಟಿ ಮಾಡುತ್ತಿದ್ದರು. ದಿನಗಳೆದಂತೆ ಜೋಳಿಗೆ ತುಂಬತೊಡಗಿತ್ತು. ತುಂಬಿದ ಜೋಳಿಗೆ ಹೊಸದೊಂದು ದಾರಿಯನ್ನು ಕಂಡುಕೊಳ್ಳಲು ಅವರನ್ನು ಪ್ರೇರೇಪಿಸಿತು.
ಮಹಾದೇವಿ ತಮಗೆ ಬೇಕಾದಷ್ಟು ರೊಟ್ಟಿ ಮಾಡಿಕೊಳ್ಳುತ್ತಿದ್ದರು. ಬಿಡುವಿನ ವೇಳೆಯಲ್ಲಿ ಇನ್ನಷ್ಟು ರೊಟ್ಟಿಗಳನ್ನು ಮಾಡಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ರೂಪಾಯಿಗೆ ಒಂದರಂತೆ ಮಾರಾಟ ಮಾಡತೊಡಗಿದರು. ರೊಟ್ಟಿ ಸೊಗಸಾಗಿತ್ತು. ಬಾಯಿಂದ ಬಾಯಿಗೆ ಸುದ್ದಿ ಹರಡಿತು. ಮಹಾದೇವಿ ಅವರ ಮನೆ ಮುಂದೆ ವಿದ್ಯಾರ್ಥಿಗಳು ರೊಟ್ಟಿಗಾಗಿ ಕಾಯತೊಡಗಿದರು. ಅಷ್ಟರಲ್ಲಿ ಮಹಾದೇವಿಗೆ ಬದುಕುವ ದಾರಿ ಗೊತ್ತಾಗಿಬಿಟ್ಟಿತ್ತು.
ಕಂತಿ ಭಿಕ್ಷೆಗೆ ಹೋಗುವುದನ್ನು ನಿಲ್ಲಿಸಿದರು. ತಾವೇ ದುಡ್ಡು ಕೊಟ್ಟು ಜೋಳ, ಗೋಧಿ, ಶೇಂಗಾ ತರಲು ಶುರು ಮಾಡಿದರು. ಒಬ್ಬರೇ ದಿನ ಪೂರ್ತಿ ಉರಿಯುವ ಒಲೆ ಮುಂದೆ ಕುಳಿತು ರೊಟ್ಟಿ, ಚಪಾತಿಯನ್ನು ಮಾಡತೊಡಗಿದರು. ದಿನಕ್ಕೆ 200, 300 ರೊಟ್ಟಿ, ಚಪಾತಿ ಕಾವಲಿ ಮೇಲೆ ಬೇಯುತ್ತಿದ್ದವು. ಬೇಡಿಕೆ ಹೆಚ್ಚಾಗಿ, ಪೂರೈಸುವುದು ಕಷ್ಟವಾಯಿತು. ಆಗ ಸಹಾಯಕ್ಕೆ ಒಬ್ಬಳನ್ನು ಕರೆದುಕೊಂಡರು. ಆಮೇಲೆ ಇಬ್ಬರು, ನಾಲ್ಕು, ಆರು, ಈಗ ಭರ್ತಿ 60 ಮಹಿಳೆಯರು ಮಹಾದೇವಿ ಅವರ ಬಳಿ ಕೆಲಸ ಮಾಡುತ್ತಿದ್ದಾರೆ.
ಮಹಾದೇವಿ ಅವರ ಜೋಳದ ರೊಟ್ಟಿ, ಸಜ್ಜಿ ರೊಟ್ಟಿ, ಚಪಾತಿ, ಶೇಂಗಾ ಹೋಳಿಗೆ, ಧಪಾಟಿ, ಬನದ ಹಿಟ್ಟು, ಶೇಂಗಾ ಹಿಂಡಿ, ಅಗಸಿ ಹಿಂಡಿಗಳ ರುಚಿ ಗಲ್ಲಿಗಳು, ಬಡಾವಣೆಗಳನ್ನು ದಾಟಿ ಗುಲ್ಬರ್ಗದ ಮನೆ ಮನೆಗಳು, ಬಾರ್ ಆಂಡ್ ರೆಸ್ಟೋರೆಂಟ್‌ಗಳು, ಡಾಬಾಗಳು, ಹೋಟೆಲ್‌ಗಳನ್ನು ತಲುಪಿದವು. ಅಲ್ಲದೆ ಬೆಂಗಳೂರು, ಹೈದರಾಬಾದ್‌ನಂತಹ ದೂರದ ಊರುಗಳಲ್ಲಿ ಓದುತ್ತಿರುವ ಗುಲ್ಬರ್ಗದ ಹುಡುಗರು ಮಹಾದೇವಿ ಅವರ ಜೋಳದ ರೊಟ್ಟಿ, ಚಪಾತಿ, ಶೇಂಗಾ ಹೋಳಿಗೆಗಳನ್ನು ಪಾರ್ಸಲ್ ತೆಗೆದುಕೊಂಡು ಹೋಗುವುದು ಮಾಮೂಲಿ ಆಯಿತು.
ಬೇಡಿಕೆ ಹೆಚ್ಚಿದಷ್ಟೂ ಕೆಲಸವೂ ಹೆಚ್ಚಿತು. ಶ್ರೀಮಾತಾ ಮಾಣಿಕೇಶ್ವರಿ ಕಾಲೊನಿಯಲ್ಲಿರುವ ತಮ್ಮ ಮನೆಯನ್ನು ಕೇಂದ್ರ ಸ್ಥಾನವನ್ನಾಗಿ ಮಾಡಿಕೊಂಡು ಮಹಾದೇವಿ `ಶ್ರೀ ವೀರಭದ್ರೇಶ್ವರ ಫುಡ್ ಸಪ್ಲೈ' ಕೇಂದ್ರವನ್ನು ಆರಂಭಿಸಿದರು. ಆಮೇಲೆ ಶಿವಾಜಿ ನಗರ, ಭವಾನಿ ನಗರ, ಆಶ್ರಯ ಕಾಲೊನಿ, ಬಾಳಿ ಲೇಔಟ್, ಜಿ.ಆರ್.ನಗರದಲ್ಲೂ ಶಾಖೆಗಳನ್ನು ತೆರೆದರು. ಪ್ರತಿ ಶಾಖೆಯಲ್ಲೂ ಹತ್ತತ್ತು ಮಂದಿ ಕೆಲಸ ಮಾಡುತ್ತಿದ್ದಾರೆ.
`ನಾನು ಜೋಳದ ರೊಟ್ಟಿ, ಚಪಾತಿ ಮಾರಾಟ ಆರಂಭಿಸಿ 21 ವರ್ಷಗಳಾದವು. ಒಂದೇ ಒಂದು ರೊಟ್ಟಿಯನ್ನೂ ಹೊರಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡಿಲ್ಲ. ಎಲ್ಲರೂ ಮನೆಗೇ ಬಂದು ಕೊಂಡೋಗುತ್ತಾರೆ. ಅಷ್ಟರಮಟ್ಟಿಗೆ ನಾವು ಮಾಡುವ ರೊಟ್ಟಿ, ಚಪಾತಿ ಗುಣಮಟ್ಟ ಚೆನ್ನಾಗಿದೆ' ಎಂದು ಮಹಾದೇವಿ ಹೆಮ್ಮೆಯಿಂದ ಹೇಳುತ್ತಾರೆ.
ದಿನಕ್ಕೆ 200 ರೊಟ್ಟಿಯೊಂದಿಗೆ ಆರಂಭವಾದ ಇವರ ವ್ಯಾಪಾರ ಈಗ ದಿನಕ್ಕೆ 4 ರಿಂದ 5 ಸಾವಿರ ರೊಟ್ಟಿ, ಚಪಾತಿಗಳನ್ನು ಮಾರುವ ಹಂತ ತಲುಪಿದೆ. ಮೊದಲು ಎರಡು ಸೇರು ಜೋಳ ಖರೀದಿಸುತ್ತಿದ್ದವರು ಈಗ ದಿನಕ್ಕೆ ಎರಡು ಕ್ವಿಂಟಲ್‌ಗಳಷ್ಟು ಜೋಳ, ಗೋಧಿ, ಶೇಂಗಾ ಇತ್ಯಾದಿಗಳನ್ನು ಖರೀದಿಸುತ್ತಿದ್ದಾರೆ. ಮದುವೆ ಸೀಸನ್‌ನಲ್ಲಿ ಬೇಡಿಕೆ ದುಪ್ಪಟ್ಟು ಆಗುತ್ತದೆ. ಮದುವೆ ಮನೆಯವರು 4ರಿಂದ 5 ಸಾವಿರ ರೊಟ್ಟಿ, ಚಪಾತಿಗಳಿಗೆ ಬೇಡಿಕೆ ಇಡುತ್ತಾರೆ. ಇಂತಹ ವಿಶೇಷ ಸಂದರ್ಭದಲ್ಲಿ 50 ಮಂದಿಯನ್ನು ಹೆಚ್ಚುವರಿಯಾಗಿ ಕೆಲಸಕ್ಕೆ ತೆಗೆದುಕೊಳ್ಳುತ್ತಾರೆ.
`ಈ ಕಾಯಕದಿಂದ ತುಂಬಾ ಹಣ ಗಳಿಸಿಲ್ಲ. ಆದರೆ ಚೆನ್ನಾಗಿದ್ದೀನಿ. ನನ್ನ ಹೊಟ್ಟೆ ಜೊತೆಗೆ ಕೆಲಸಗಾರರು ಮತ್ತು ಅವರ ಕುಟುಂಬದವರ ಹೊಟ್ಟೆಯೂ ತುಂಬುತ್ತಿದೆ. ಅವರ ಮಕ್ಕಳು ಶಾಲೆಗೆ ಹೋಗುತ್ತಿವೆ. ಇದನ್ನು ನೋಡಿದಾಗ ಖುಷಿ ಆಗುತ್ತದೆ' ಎನ್ನುತ್ತಾರೆ ಮಹಾದೇವಿ.21 ವರ್ಷಗಳ ಹಿಂದೆ ಗುಲ್ಬರ್ಗದಲ್ಲಿ ಮಹಿಳೆಯರು ರೊಟ್ಟಿ, ಚಪಾತಿ ಮಾರಾಟ ಮಾಡುವ ಸ್ವಯಂ ಉದ್ಯೋಗವನ್ನು ಕಂಡುಕೊಂಡಿರಲಿಲ್ಲ.
ಮಹಿಳೆಯರು ಹೆಚ್ಚಾಗಿ ಮನೆ ಬಿಟ್ಟು ಹೊರಗೆ ಬರುತ್ತಿರಲಿಲ್ಲ. `ಮಹಾದೇವಿ ಮಾದರಿ'ಯಲ್ಲಿ ಈಗ ಪ್ರತಿ ಬಡಾವಣೆಯಲ್ಲೂ ಮಹಿಳೆಯರು ಮನೆಯಲ್ಲೇ ರೊಟ್ಟಿ ಮಾಡಿ, ಮಾರಾಟ ಮಾಡುವ ಸ್ವಯಂ ಉದ್ಯೋಗವನ್ನು ಕಂಡುಕೊಂಡಿದ್ದಾರೆ. ಮಹಾದೇವಿ ಕಂತಿ ಭಿಕ್ಷೆ ಬೇಡಿ ರೊಟ್ಟಿ, ಚಪಾತಿ ಮಾರಾಟ ಮಾಡಿ ಗಂಡನ ಕಾಯಿಲೆಗೆ 3 ಲಕ್ಷ ರೂಪಾಯಿ ಖರ್ಚು ಮಾಡಿದ್ದರು.
ಆದರೂ ಅವರು ಉಳಿಯಲಿಲ್ಲ. ಹಿರಿಯರು ಕೊಟ್ಟಿದ್ದ ಮನೆಯನ್ನು ರಿಪೇರಿ ಮಾಡಿಸಿಕೊಂಡಿದ್ದಾರೆ. ಲಗೇಜ್ ಆಟೋವನ್ನೂ ಖರೀದಿಸಿದ್ದಾರೆ. ಪುತ್ರರಾದ ವೀರೇಶ, ಮಲ್ಲಿಕಾರ್ಜುನ ತಾಯಿಗೆ ಸಾಥ್ ನೀಡುತ್ತಿದ್ದಾರೆ. ನೋಡ ನೋಡುತ್ತಿದ್ದಂತೆ ಮಹಾದೇವಿ ಅವರು ರೊಟ್ಟಿ ರಾಶಿ ಹಾಕುವುದನ್ನು ಕಂಡ ಕೆಲವರ ಕಣ್ಣು ಕೆಂಪಾಯಿತು. ಮಹಾದೇವಿ ಶ್ರೀಮಂತೆ ಆಗುತ್ತಿದ್ದಾರೆ ಎನ್ನುವ ಅಸೂಯೆಯಿಂದ ತೊಂದರೆ ಕೊಡುವವರೂ ಹುಟ್ಟಿಕೊಂಡರು.
ಮಹಾನಗರ ಪಾಲಿಕೆ ಮಾಜಿ ಸದಸ್ಯ ತಿಪ್ಪಣ್ಣಪ್ಪ ಕಮಕನೂರು ಅವರು ಮಹಾದೇವಿ ಅವರ ಬೆನ್ನಿಗೆ ನಿಂತರು. ಹೀಗಾಗಿ ಅವರನ್ನು ಮಹಾದೇವಿ ಕೃತಜ್ಞತೆಯಿಂದ ನೆನಪಿಸಿಕೊಳ್ಳುತ್ತಾರೆ. ಮಹಾದೇವಿ ಬಳಿ ಕೆಲಸ ಮಾಡುವವರು ದಿನಕ್ಕೆ 150 ರೂಪಾಯಿ ಗಳಿಸುತ್ತಾರೆ. ಬೆಳಿಗ್ಗೆ 8.30ಕ್ಕೆ ಬಂದರೆ ಸಂಜೆ 6ಕ್ಕೆ ಮನೆಗೆ ಮರಳುತ್ತಾರೆ. ತಿಂಡಿ, ಚಹಾ, ಮಧ್ಯಾಹ್ನದ ಊಟ ಎಲ್ಲವೂ ಇಲ್ಲಿಯೇ ಆಗುತ್ತದೆ.
ಮಕ್ಕಳಿಗಾಗಿ ಮನೆಗೆ ರೊಟ್ಟಿ ತೆಗೆದುಕೊಂಡು ಹೋಗಲು ಕೊಡುತ್ತಾರೆ. `ಇವರು ನಮ್ಮ ಪಾಲಿನ ಅನ್ನಪೂರ್ಣೆ' ಎಂದು ಮಹಾದೇವಿ ಅವರ ಬಳಿ ಕೆಲಸ ಮಾಡುವ ಎಲ್ಲರೂ ಒಮ್ಮತದಿಂದ ಹೇಳುತ್ತಾರೆ. `ತಂದೆ ಮನೆಯಲ್ಲಿ ಸುಖವಾಗಿ ಬೆಳೆದಿದ್ದೆ. ಆದರೆ ಗಂಡ ಕುಡುಕ, ಮನೆಯಲ್ಲಿ ಪರಿಸ್ಥಿತಿ ಕೆಟ್ಟದಾಗಿದೆ. ಆದ್ದರಿಂದ ರೊಟ್ಟಿ ಬಡಿಯಲು ಬರುತ್ತಿದ್ದೇನೆ. ಈಗ ಮನೆ ಮಂದಿಯ ಹೊಟ್ಟೆ ತುಂಬುತ್ತಿದೆ. ಮಕ್ಕಳು ಶಾಲೆಗೆ ಹೋಗುತ್ತಿವೆ' ಎಂದು ಹೆಸರು ಹೇಳಲು ಇಚ್ಛಿಸದ ಮಹಿಳೆಯೊಬ್ಬರು ಸೆರಗಿನಿಂದ ಕಣ್ಣೀರು ಒರೆಸಿಕೊಂಡರು.
`ನಾನು ಅವರನ್ನು ಕೆಲಸದವರೆಂದು ಭಾವಿಸಿಲ್ಲ. ಅವರೂ ಅಷ್ಟೆ. ನಾನು ಇಲ್ಲದೇ ಇದ್ದರೂ ಒಂದು ರೂಪಾಯಿಯೂ ವ್ಯತ್ಯಾಸವಾಗದಂತೆ ನೋಡಿಕೊಳ್ಳುತ್ತಾರೆ. ಹೀಗಾಗಿ ಇಬ್ಬರೂ ನೆಮ್ಮದಿಯಾಗಿದ್ದೇವೆ' ಎಂದು ಮಹಾದೇವಿ ತಮ್ಮ ಕೆಲಸಗಾರರನ್ನು ಮನದುಂಬಿ ಹೊಗಳುತ್ತಾರೆ.
`ಶ್ರೀ ವೀರಭದ್ರೇಶ್ವರ ಫುಡ್ ಸಪ್ಲೈ'ನಲ್ಲಿ ರೊಟ್ಟಿ ರಾಶಿ ಹೆಚ್ಚಿದಷ್ಟೂ ಅಸಹಾಯಕ ಮಹಿಳೆಯರ ಕೈಗೆ ಉದ್ಯೋಗ ಸಿಗುತ್ತಿದೆ, ಜೊತೆಗೆ ಅವರ ಮಕ್ಕಳಿಗೆ ಅಕ್ಷರ ಲೋಕವೂ ಎಟಕುತ್ತಿದೆ.
-ಚಿತ್ರ: ಕೃಷ್ಣಕುಮಾರ್ ಪಿ.ಎಸ್

ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ