-ನಿರೂಪಣೆ: ಕೃಷ್ಣ ಎನ್ ಲಮಾಣಿ
ಸೌಜನ್ಯ:ವಿಜಯ ಕರ್ನಾಟಕ
ನಿತ್ಯ ಬೆಳಗ್ಗೆ ಐದು ಗಂಟೆಗೆ ಕೈಯಾಗ ಕುಡುಗೋಲು, ಬಟ್ಟೆ ತಗಂಡು ಮನೆ ಬುಡ್ತೀನಿ. ಹೊಲದಿಂದ ಹುಲ್ಲು ತರಾ ತನಕ ಹೊಟ್ಟಿಗಿ ಏನೂ ಕಾಣಂಗಿಲ್ಲ. ಅಷ್ಟು ದೂರ ಹೋಗಿ ಹುಲ್ಲು ತಂದೀರ‌್ತವಲ್ಲ, ಆ ಹೊತ್ತಿನ್ಯಾಗ ಅಡುಗೆ ಮಾಡಾಕನೂ ಆಗಂಗಿಲ್ಲ. ಮಧ್ಯಾಹ್ನ ಎರಡು ಗಂಟೆ ತನಕ ಹುಲ್ಲು ಮಾರಾಟ ಮಾಡ್ತೀನಿ. ಅಲ್ಲಿವರೆಗೂ ಉಪವಾಸ ಇರ‌್ತೀನಿ. ನನಗ ಇದೆಲ್ಲ ರೂಢಿ ಆಗಿಬಿಟ್ಟೈತಿ.
ದನಗಳು ತಿನ್ನೋ ಈ ಹುಲ್ಲಿನಿಂದ ನನ್ನ ಕುಟುಂಬ ಹಿಡಿ ಹಿಟ್ಟು ತಿನ್ನುತ್ತಿದೆ. ಹಸಿ ಹುಲ್ಲೇ ನನ್ನ ಬದುಕಿಗೆ ಆಸರೆ ಆಗೈತಿ. ನನ್ನ ಹೆಸ್ರು ಲಕ್ಷ್ಮಮ್ಮ ಅಂತ. ಆಂಧ್ರಪ್ರದೇಶದ ಆಧೋನಿಲಿಂದ 20 ವರ್ಷಗಳ ಹಿಂದೆ ಇಲ್ಲಿಗೆ ಬಂದೀನಿ. ಹೊಸಪೇಟೆಯ ಛಲವಾದಿ ಕೇರಿಯ ಮುನಿಯಪ್ಪನ ಜತೆ ನನ್ನ ಮದುವೆ ಆಯ್ತು. ಗಂಡ ಕೂಡ ಹುಲ್ಲು ಮಾರುತ್ತಿದ್ದ. ಅದರಿಂದನ ಕುಟುಂಬ ಸಲುಹುತ್ತಿದ್ದ. ಕಿತ್ತು ತಿನ್ನುವ ಬಡತನ ಮನ್ಯಾಗ ಕಾಲು ಮುರ‌್ಕಂಡು ಬಿದ್ದಿತ್ತು. ಈ ಹುಲ್ಲು ಗರಿಕೆಯದೇ ದೊಡ್ಡ ಆಸರೆ ನಮ್ಮ ಜೀವನಕ್ಕ. ಎರಡು ವರ್ಷಗಳ ಹಿಂದ ನನ್ನ ಗಂಡ ಅದೆಂಥದೋ ರೋಗ ಅಂತೇಳಿ, ಕಣ್ಣುಮುಚ್ಚಿಬುಟ್ಟ. ಮಕ್ಕಳಾದ ರಾಮಾಲಿ ಮತ್ತು ವೆಂಕಟೇಶ್ ಕೂಲಿ ಕೆಲಸ ಮಾಡಾಕ ಹೋಗ್ತಾರ. ದುಬಾರಿ ಕಾಲದಾಗ, ಎಷ್ಟು ಮಂದಿ ದುಡುದ್ರೂ ಕಮ್ಮಿ. ಗೇಣು ಹೊಟ್ಟೆ ತುಂಬ್ಸಾಕ ಹೆಣ ಗೋದು ಅಷ್ಟಿಷ್ಟಲ್ಲ. ಮಕ್ಕಳು ದುಡಿತಾರ ಅಂದ್ರೂ ಹಸಿ ಹುಲ್ಲು ಮಾರಾಟ ಮಾಡೋದನ್ನ ನಾ ನಿಲ್ಲಿಸಿಲ್ಲ.
ಹುಲ್ಲು ಮಾರಾಟ ಮಾಡಿ ಬಂದ ಹಣ ಸಂತಿ, ಪ್ಯಾಟಿ ಖರ್ಚಿಗೆ ಬರುತ್ತ. ಹೊಸಪೇಟೆ ಸುತ್ತಮುತ್ತ ಇರೋ ಹೊಸೂರು, ಇಪ್ಪಿತ್ತೇರಿ ಗ್ರಾಮಗಳ ಹೊಲ-ಗದ್ದೆಗಳಲ್ಲಿ ಬೆಳೆದ ಹುಲ್ಲು ಕೊಯ್ಕಂಡು ಬರಾಕ ಇನ್ನಾ ಸೂರ್ಜ ಮೂಡಕ್ಕಿಂತ ಮೊದ್ಲೇ ಎದ್ದು ಹೋಗ್ತೀನಿ. ಕೆಲವು ಸಲ ಹೊಲದವರು ಬಾಯಿಗಿ ಬಂದಂಗ ಬೈಯ್ತಾರ. ಹೊಟ್ಟೆ ಪಾಡು ಕೇಳಬೇಕಲ್ಲ. ಬೈಯ್ಸಿಕೊಂಡಾದ್ರೂ ಮೇವು ತರಾಕ ಹೋಗ್ತೀವಿ. ಬದುಕು ಕೆಟ್ಟ ಕೋಡಿ. ಈ ಜೀವಕ್ಕ ಛೀ, ಥೂ ಅಂತ ಬೈಯ್ಸಿಕೊಳ್ಳೋದು ದಡ್ಡಿ ಬಿದ್ದೈತಿ. ಮಕ್ಕಳಿಬ್ಬರು ಅದ್ಯಾರ ಅಂತ ಅಂದ್ನೆಲ್ಲ. ಅವರಿಬ್ಬರೂ ಬೇಲ್ದಾರಿ ಕೆಲ್ಸಕ್ಕ ಹೋಗ್ತಾರ. ಒಮ್ಮೆ ಕೆಲ್ಸ ಸಿಕ್ರ ಸಿಗುತ್ತ. ಕೆಲವೊಮ್ಮೆ ಆ ಕೆಲ್ಸಾನೂ ಸಿಗಲ್ಲ. ಮಕ್ಕಳ ಮುಖ ನೋಡಿ, ಓಡೋಡಿ ಹೋಗಿ, ನನಗ ಎತ್ತಿಕೊಂಡು ಬರಾಕ ಆಗಲಾ ರದಷ್ಟು ಮೇವು ಕೊಯ್ಕಂಡು ಬರ‌್ತೀನಿ.
ಅದೇಟು ವರ್ಷ ಆದ್ವೋ ಏನೋ ಇದ ಸ್ಥಳದಾಗ ಕುಂತು ಮೇವು ಮಾರಾಕ ಹತ್ತೀನಿ. ನಮ್ಮಂಥವರ ಗೋಳು ಕೇಳೋರು ಇಲ್ಲ. ಹೇಳಿಕೊಳ್ಳದ ಆಗೈತಿ. ಗಾಡಿ, ಪಾಡಿ ಓಡಾಡೋ ದಾರ‌್ಯಾಗನ ಮೇವಿನ ವ್ಯಾಪಾರ ನಡೆಯುತ್ತ. ಈ ಜಾಗ ಏನಾದ್ರೂ ಬುಡುಸಿದ್ರ ಮುಗೀತಿ ನಮ್ ಕಥಿ. ಇಬ್ರು ಮಕ್ಳ ಜತೆ ಉಪಾಸ ಮಲಗಬೇಕು. ಒಂದ್ಕಡೆ ನಮ್ಮಂಥೋರಿಗೆ ಜಾಗ ಗೊತ್ತು ಮಾಡಿದ್ರ ಚಲೋ. ಅಷ್ಟು ಮಾತ್ರ ನಾವು ಕೇಳೋದು. ಆದ್ರ ಕೊಡೋರಿಗೆ ದೊಡ್ಡ ಮನ್ಸು ಬೇಕಲ್ಲ. ಅದ ಕೊರತಿ ಭಾಳ ಕಾಡಾಕ ಹತ್ತೈತಿ. ಮೇವು ಮಾರಾಟದಿಂದ ದಿನಕ್ಕ 70 ರೂಪಾಯಿ ಸಿಗುತ್ತ. ಆ ಹಣದಲ್ಲೇ ಜೀವನ ನಡೆಸಬೇಕು. ಕೆಲವು ಸಲ ಹುಲ್ಲು ಮಾರಾಟ ಆಗಲಿಲ್ಲ ಅಂದ್ರ ಆ ದಿನ ಉಪವಾಸನ.
ಇಷ್ಟು ವರ್ಷದಾಗ ಅವೇಸು ದಿನ ಉಪವಾಸ ಕಳೆ ದೀವೊ ಲೆಕ್ಕಕ್ಕ ಸಿಗಂಗಿಲ್ಲ. ನಿತ್ಯ ಬೆಳಗ್ಗೆ 5 ಗಂಟೆಗೆ ಕೈಯಾಗ ಕುಡುಗೋಲು, ಬಟ್ಟೆ ತಗಂಡು ಮನೆ ಬುಡ್ತೀನಿ. ಹೊಲದಿಂದ ಹುಲ್ಲು ತರಾ ತನಕ ಹೊಟ್ಟಿಗಿ ಏನೂ ಕಾಣಂಗಿಲ್ಲ. ಅಷ್ಟು ದೂರಹೋಗಿ ಹುಲ್ಲು ತಂದೀರ‌್ತವಲ್ಲ, ಆ ಹೊತ್ತಿನ್ಯಾಗ ಅಡುಗೆ ಮಾಡಾಕನೂ ಆಗಂಗಿಲ್ಲ. ಮಧ್ಯಾಹ್ನ 2 ಗಂಟೆ ತನಕ ಹುಲ್ಲು ಮಾರಾಟ ಮಾಡ್ತೀನಿ. ಅಲ್ಲಿವರೆಗೂ ಉಪವಾಸ ಇರ‌್ತೀನಿ. ನನಗ ಇದೆಲ್ಲ ರೂಢಿ ಆಗಿಬಿಟ್ಟೈತಿ. ನನ್ನ ಗಂಡ ಇದ ಕಸಬಿನಿಂದ ಮನಿ ಮಂದೀನ ಸಲುಹುತ್ತಿದ್ದ. ಅದಕ್ಕ ಇದೇ ಕಸುಬು ನಂಬಿ ಕಂಡು ಹೊಂಟೀನಿ. ಭಿಕ್ಷೆ ಬೇಡುವುದಕ್ಕಿಂತ ಏನಾದ್ರು ಒಂದು ಕೆಲ್ಸ ಮಾಡಿ, ಹೊಟ್ಟೆ ತುಂಬಿಸಿ ಕೊಳ್ಳೋದ ಬೇಸು. ನನ್ನ ಗಂಡ ಸಮೇತ ಇದ ಮಾತು ಪದೇಪದೆ ಹೇಳ್ತಿದ್ದ.
ರೈತರು ಬೈಯ್ತಾರಲ್ಲ. ಆವಾಗ, ಅಣ್ಣಾ ಬರೀ ಹುಲ್ಲು ಕೊಯ್ಕಂಡು ಹೋಗ್ತೀವಪ. ನಿಮ್ ಬೆಳಿಗೆ ಏನೂ ಮಾಡಂಗಿಲ್ಲ ಅಂತ ಬೇಡಿಕೊನ್ತೀವಿ. ಅಂಥ ಪುಣ್ಯಾತ್ಮರು ಇರೋದಕ್ಕನ ನಮ್ಮಂಥವರ ಹೊಟ್ಟಿಗೆ ಅನ್ನ ಕಾಣಂಗ ಆಗೈತಿ. ನಮ್ಮ ಹೆಸರಲಿ ಈ ಊರಾಗ ಅಂಗೈಯಷ್ಟು ಭೂಮಿ ಇಲ್ಲ. ಅವರಿವರ ಹೊಲದ ಬದುವಿಗೆ ಬೆಳೆದ ಹುಲ್ಲೇ ನಮಗ ದೊಡ್ಡ ಆಸ್ತಿ.
ಮಳೆರಾಯ ಕಣ್ಣು ಬುಟ್ರ, ನಾವು ಚೆಂದಾಗಿ ಬದುಕು ನಡೆಸ್ಬೋದು. ಬದುವಿಗೆ ಬೆಳೆದ ಹುಲುಸಾದ ಹುಲ್ಲು ನೋಡಿದ್ರ ಹಸಿದ ಹೊಟ್ಟೆ ತುಂಬಿದಂಗ ಅನಿಸುತ್ತ. ನಾವು ಹುಲ್ಲು ಕೊಯ್ಯೋ ದರಿಂದ ರೈತರಿಗೂ ಕೆಲಸ ಕಡಿಮೆ ಆಗುತ್ತ. ನಮಗ ಹೊಲ ಇಲ್ಲ ಅಂದ್ರೂ ಕಾಲಕ್ಕ ತಕ್ಕಂತೆ ಬೇಸು ಮಳೆ ಬರ‌್ಲೆಪ ದೇವ್ರೆ ಅಂತ ನಿತ್ಯ ಬೇಡಿಕೊಳ್ತೀನಿ. ಯಾಕಂದ್ರ ಬರ ಬಲು ಕೆಟ್ಟದು. ಬರ ಬಿತ್ತು ಅಂತ ಅಂದ್ರ ರೈತರ ಜತಿ ನಮ್ಮಂಥ ಹುಳಹುಪ್ಪಡಿ ಸಟಕ್ಕನ ಸತ್ತುಬುಡ್ತಾವ. ನನ್ ಬೇಡಿಕೆ ಇಷ್ಟೆ ನೋಡಿ. ಜೀವ್ನ ಅಂದ್ರ ಹೆಚ್ಚು ಕುಸಿನೂ ಇಲ್ಲ, ದುಃಖ ದಿನ ಇದ್ದಿದ್ದೆ ಅನ್ನೋದು ಅರ್ಥ ಆಗೈತಿ. ಇರೋವಷ್ಟು ದಿನ ದುಡಿ, ಕೊನೆಗೊಂದಿನ ಮಣ್ಣಿಗೆ ಹೋಗುದು, ಅಷ್ಟೆಯಾ...
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ