ಶನಿವಾರ, ಜುಲೈ 13, 2013

ಗಣಕಗಳಾಗಿರುವ ಎಳೆ ತಲೆಮಾರು
ರಹಮತ್ ತರೀಕೆರೆ


 

    ಬಹಳ ವರ್ಷಗಳ ಬಳಿಕ ನನ್ನ ಹಳೇ ಗೆಳೆಯ ಮತ್ತು ಸಹಪಾಠಿಯೊಬ್ಬನ ಮನೆಗೆ ಹೋದೆ. ಅವನೂ ಅವನ ಮಡದಿಯೂ ಪ್ರೀತಿಯಿಂದ ಬರಮಾಡಿಕೊಂಡರು. ಮನೆಯೊಳಗೆ ಪ್ರವೇಶಿಸಿದಾಗ ಒಂದು ದೃಶ್ಯ ಕಣ್ಣಿಗೆ ಬಿತ್ತು. ಅವರ ಕಿರಿಯ ಮಗಳು ಬೊಂಬೆಯಲ್ಲಿ ಆಟಕೊಂಡಿದ್ದಳು.   ಮಗ- ೧೫-೧೬ ವರ್ಷದವನಿರಬೇಕು- ಸೋಫಾದಲ್ಲಿ ಮೈಚೆಲ್ಲಿಕೊಂಡು ಕಾಲನ್ನು
 ಆಗಸಕ್ಕೆ ಚಾಚಿ ಲ್ಯಾಪ್‌ಟಾಪಿನಲ್ಲಿ ವಿಡಿಯೊ ಗೇಂ ಆಡುತ್ತಿದ್ದ. ಮನೆಗೆ ಬಂದು ಹೋದವರ ಬಗ್ಗೆ ಖಬರಿಲ್ಲದಷ್ಟು ಆಟದಲ್ಲಿ ತನ್ಮಯನಾಗಿದ್ದ. ನನ್ನ ಗೆಳೆಯ ಶಿಷ್ಟಾಚಾರಕ್ಕಾಗಿ ‘ಲೇ ನೋಡೊ. ನನ್ನ ಕ್ಲಾಸ್‌ಮೇಟ್ ಬಂದಿದ್ದಾನೆ. ಅಂಕಲ್‌ಗೆ
 ನಮಸ್ಕಾರ ಮಾಡು’ ಎಂದ. ಅವನು ಕಣ್ಣೆತ್ತಿಯೂ ನೋಡಲಿಲ್ಲ. ಆದರೆ ನಾವು ಒಯ್ದ ತಿಂಡಿಯ ಪ್ಯಾಕೇಟನ್ನು 
ಹರಿದು ಒಬ್ಬನೇ ಮುಕ್ಕತೊಡಗಿದ. ಅದು ಮುಗಿದ ಬಳಿಕ ತನಗೆ ಪ್ರಿಯವಾದ ಕಾರ್ಟೂನನ್ನು ಟಿವಿಯಲ್ಲಿ
 ಹಾಕಿಕೊಂಡು ಕುಳಿತ. ಅವನ ಜತೆಗೆ ಹಟಮಾಡಿ ಮಾತಾಡಿದೆ. ಕನ್ನಡದಲ್ಲೇನೊ ಜವಾಬುಕೊಟ್ಟ. ಆದರೆ ಅವನ
 ನಿಘಂಟಿನಲ್ಲಿ ಬಣ್ಣಕ್ಕೆ ಮತ್ತು ಅಂಕಿಗಳಿಗೆ  ಮನೆಮಾತಿನಲ್ಲಿ ಗುರುತಿಸುವ ಶಬ್ದಗಳೇ ಇರಲಿಲ್ಲ. ಮಕ್ಕಳನ್ನು ನಮ್ಮ
 ಇಚ್ಛೆಯಂತೆ ಯಾಕೆ ರೂಪಿಸಬೇಕು. ಅವುಗಳಿಂದ ಯಾಕೆ ಕಲಿಯಬಾರದು ಎಂಬ ಖಲೀಲ್ ಗಿಬ್ರಾನನ 
ಹಿತನುಡಿಯನ್ನು ಇಲ್ಲಿ ಒಪ್ಪಲು ಆಗಲಿಲ್ಲ. ನನ್ನ ಮುಖವನ್ನು ನೋಡುತ್ತಿದ್ದ ಗೆಳೆಯ ಹುಸಿನಗುತ್ತ ಹೇಳಿದ: ‘ಮಿತ್ರಾ, ನೋಡಿದೆಯಾ ಕಾಲ ಹೇಗೆ ಬದಲಾಗಿದೆ? 

ನಾವು ಸಣ್ಣವರಿದ್ದಾಗ ಗೋಲಿ, ಚೆಂಡು, ಚಿನ್ನಿದಾಂಡು ಆಡುತ್ತಿದ್ದೆವು. ಈಗಿನವಕ್ಕೆ ಆಡೋಕೆ ಲ್ಯಾಪ್‌ಟಾಪೇ ಬೇಕು’. 
ಗೆಳೆಯನ ದನಿಯಲ್ಲಿ ಹೊಸ ತಲೆಮಾರಿನ ಮಕ್ಕಳ ಅಭಿರುಚಿ ಬದಲಾದ ಬಗ್ಗೆ ಸಣ್ಣಗಿನ ವಿಷಾದವಿತ್ತು. ಜತೆಗೇ ನನ್ನ 
ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ಬೆಳೆಸಿದ್ದೇನೆ ಎಂಬ ಹಮ್ಮೂ ಇದ್ದಂತೆ ಭಾಸವಾಯಿತು.
ಈಗ ಭಾರತದ ಬಹುತೇಕ ಪ್ರಜೆಗಳ ಕೈಗೂ ಮೊಬೈಲು ಬಂದಿವೆ. ಕೆಲವರಿಗೆ ಕಂಪ್ಯೂಟರ್ ಲ್ಯಾಪ್‌ಟಾಪುಗಳೂ ಸಿಕ್ಕಿವೆ. 

ಈ ತಂತ್ರಜ್ಞಾನಿ  ಸರಕುಗಳ ಆಗಮನದಿಂದ ಬದುಕಿನ ಗತಿಯಲ್ಲಿ ವಿಚಿತ್ರ ವೇಗ ಬಂದಿದೆ. ಕೂಲಿಕಾರರ, 
ಮನೆಗೆಲಸ ಮಾಡುವ ಮಹಿಳೆಯಿಂದ ಹಿಡಿದು ದಿನಗೂಲಿ ಹುಡುವವರ ತನಕ, ವ್ಯಾಪಾರಿಯಿಂದ ರೈತರ ತನಕ
 ಅನೇಕರ ವೃತ್ತಿಯಲ್ಲಿ ಸಂಚಲನೆ ಸಿಕ್ಕಿದೆ; ಬರೆಹಗಾರರ, ಅಧ್ಯಾಪಕರ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ
 ದುಡಿಯವವರ ಪತ್ರಕರ್ತರ ಬದುಕಿನಲ್ಲಿಯೂ ಒಂದು ಹೊಸ ನೆಗೆತ ಸಿಕ್ಕಿದೆ. ನಿಜಕ್ಕೂ ಇದೊಂದು ಅದ್ಭುತ 
ಸಂಚಲನೆಯೆಂದು ಒಪ್ಪಲೇಬೇಕು.ಆದರೆ ಈ ಸಂಚಲನೆಯ ಜತೆಗೆ ಈ ಸಲಕರಣೆಗಳ ಒಡೆಯರಾದವರಲ್ಲಿ, ಅದರಲ್ಲೂ ಮಕ್ಕಳ ಮತ್ತು ತರುಣರ 

ವರ್ತನೆಯಲ್ಲಿ ಒಂದು ಚಿಕ್ಕ ಬದಲಾವಣೆಯಾಗಿದೆ. ಅದೆಂದರೆ ಅವರು ಮನುಷ್ಯರ ಸಹವಾಸವಿಲ್ಲದೆ ಕಾಲಕಳೆಯುವವರಾಗಿದ್ದಾರೆ. ಪಕ್ಕದಲ್ಲಿ ಯಾ ಎದುರುಗಡೆ ಯಾರಿದ್ದಾರೆ ಎಂಬ ಖಬರಿಲ್ಲದೆ, ಮೈಕ್ರೊಫೋನಿನ ಬೆಂಡೋಲೆಯನ್ನು ಕಿವಿಗೆ ತುರುಕಿಕೊಂಡು ಹಾಡುಕೇಳುತ್ತ ಧ್ಯಾನಸ್ಥರಾಗಿ ನಮ್ಮದೇ ಆದ ಏಕಾಂತದ ಜಗತ್ತನ್ನು ಸೃಷ್ಟಿಸಿಕೊಂಡು ಮುಳುಗಿಬಿಡಬಲ್ಲವರಾಗಿದ್ದಾರೆ; ಮೊಬೈಲ್ ಪರದೆಯ ಅಥವಾ ಗುಂಡಿಗಳ ಮೇಲೆ ಬೆರಳುಗಳನ್ನು 
ಆಡಲು ಬಿಟ್ಟು ಕಣ್ಣನ್ನು ಅಂಟಿಸಿ ಕಾಲಕಳೆವವರಾಗಿದ್ದಾರೆ; ಹೊರಗಿಂದ ಕರೆ ಬರಲಿ ಬಾರದಿರಲಿ, ಅಲ್ಲಾವುದ್ದೀನನ 
ದೀಪವನ್ನು ಕೈಸೆರೆ ಮಾಡಿಕೊಂಡಿರುವಂತೆ ಅವರ ಅಂಗೈಗಳು ಮೊಬೈಲುಧಾರಿಯಾಗಿವೆ. ಕೆಲವರ ಮನೆಯಲ್ಲಿ 
ಚಿಕ್ಕಮಕ್ಕಳು ಅತಿಥಿಗಳ ಮೇಲುಬಿದ್ದು ಸ್ನೇಹ ಮಾಡಿಕೊಂಡು, ಉಪಾಯವಾಗಿ ಅವರ ಮೊಬೈಲನ್ನು ಎಗರಿಸಿ
 ಗೇಮನ್ನಾಡಲು ಆರಂಭಿಸುವುದುಂಟು. ಆನೆ ಕೋತಿಯ ಬೊಂಬೆಗಳ ಜಾಗದಲ್ಲಿ ಮೊಬೈಲು ಆಟಿಕೆಗಳು 
ಬಂದಾಗಿದೆ. ರೈಲಿನಲ್ಲೊ ಬಸ್ಸಿನಲ್ಲೊ ಅಕ್ಕಪಕ್ಕ ಕೂತವರು, ಹತ್ತು ನಿಮಿಷದಲ್ಲಿ ಮುಗುಳುನಗು ವಿನಿಮಯ 
ಮಾಡಿಕೊಂಡು ಎಲ್ಲಿಗೆ ಹೊರಟಿದ್ದೀರಿ ಯಾಕೆ ಎಂದು ಸುರುಮಾಡಿ, ತಮ್ಮ ಸ್ಟೇಶನ್ ಬರುವ ಹೊತ್ತಿಗೆ ಎಷ್ಟೆಲ್ಲ 
ಹಂಚಿಕೊಳ್ಳುವ ಪದ್ಧತಿಗೆ ವ್ಯತ್ಯಯ ಸಂದಿದೆ. (ಈ ಬದಲಾವಣೆಯಿಂದ ಅನಗತ್ಯವಾಗಿ ಗುದ್ದಲಿ ಹಿಡಿದು ನಮ್ಮ 
ವೈಯಕ್ತಿಕ ವಿಷಯವನ್ನು ಅಗೆಯುವ ಕೆಟ್ಟಕುತೂಹಲಿಗಳ ಕಾಟದಿಂದ ಪಾರಾಗಲು ಸಾಧ್ಯವಾಗಿದೆ ಎಂಬುದನ್ನು ಮರೆಯುವಂತಿಲ್ಲ.) ಆದರೂ ದೂರದಲ್ಲಿದ್ದ ಜನರನ್ನು ಪರಸ್ಪರ ಸಂಪರ್ಕಿಸಲು ಹುಟ್ಟಿದ ತಂತ್ರಜ್ಞಾನವು, ಜನರ 
ಪರಸ್ಪರ ಜನರ ಸಂಪರ್ಕವನ್ನೇ ಕಡಿತಮಾಡಿರುವುದು ಒಂದು ವೈರುಧ್ಯ. 


    ಕೇಳುವ ಓದುವ ಕ್ರಿಯೆಗಿಂತ ನೋಡುವ ಮಾಧ್ಯಮದ ಶಕ್ತಿ ಪ್ರಚಂಡವಾದುದು. ಅದಕ್ಕೆ ಹೊಸ ಈ ತಂತ್ರಜ್ಞಾನ ಸೇರಿಕೊಂಡು ಅದನ್ನು ಮತ್ತಷ್ಟು ವಶೀಕರಣ ಮಾಡಿದೆ. ಯಾವಾಗಲೂ ಹೊಸ ತಲೆಮಾರು ಹೊಸ ತಂತ್ರಜ್ಞಾನವನ್ನು ಬೇಗ ತನ್ನದಾಗಿಸಿಕೊಳ್ಳುತ್ತದೆ. ದೋಷ ಇರುವುದು ತಂತ್ರಜ್ಞಾನದಲ್ಲೊ, ತಂತ್ರಜ್ಞಾನ ಬಳಸುತ್ತಿರುವ ಮನೋಧರ್ಮದಲ್ಲೊ? ತಂತ್ರಜ್ಞಾನ ಸಾಮಾನ್ಯವಾಗಿ ಮೌಲ್ಯ ನಿರ್ಲಿಪ್ತ. ಅದನ್ನು ಯಾರು ಯಾತಕ್ಕಾಗಿ ಬಳಸುತ್ತಿದ್ದಾರೆ ಎನ್ನುವುದರ ಮೇಲೆ ಅದು ದೋಷಪೂರ್ಣವೊ ಉಪಯುಕ್ತವೊ ಅನಾಹುತಕಾರಿಯೊ ಆಗುತ್ತದೆ. ಅದೊಂದು ಇಬ್ಬಾಯ ಕತ್ತಿ. ಬುಲ್ಡೋಜರನ್ನು ದಿಬ್ಬಕಡಿದು ಹಳ್ಳಿಗೆ ರಸ್ತೆ ಮಾಡಲು, ಕಬ್ಬಿಣದ ಅದಿರನ್ನು ಅಕ್ರಮವಾಗಿ ಅಗಿಯಲು, ಹೆಣಗಳ ಸಾಮೂಹಿಕ ಸಂಸ್ಕಾರ ಮಾಡಲು ಅಥವಾ ತಮ್ಮ ಭೂಮಿ ಬಿಟ್ಟುಕೊಡದ ರೈತರ ಮನೆಕೆಡವಿ ಒಕ್ಕಲೆಬ್ಬಿಸಲು ಎಷ್ಟೊಂದು ದಿಸೆಯಲ್ಲಿ ಬಳಸಬಹುದು. ಭಾಷೆಯ ವಿಷಯದಲ್ಲಿಯೂ ಅಷ್ಟೆ. ತನಗೆ ತಾನೇ ಇಂಗ್ಲೀಶು ಕೆಡುಕೂ ಅಲ್ಲ ಒಳಿತೂ ಅಲ್ಲ. ಅದನ್ನು ಸಮಾಜ ಹೇಗೆ ಬಳಸುತ್ತಿದೆ ಎಂಬುದು ಮುಖ್ಯ.  ಹೀಗಾಗಿ ಸಮಸ್ಯೆ ಇರುವುದು ತಂತ್ರಜ್ಞಾನದಲ್ಲಿಯಲ್ಲ. ಅದನ್ನೊಂದು ಬದುಕಿನ ಭಾಗ್ಯವೆಂದು ಭಾವಿಸಿ ಸಂಭ್ರಮಿಸಿರುವ ಸಾಮಾಜಿಕ ಮನೋಭಾವದಲ್ಲಿ. 

    ಈ ಚರ್ಚೆಯನ್ನು ಇನ್ನೊಂದು ಮಜಲಿಗೆ ಒಯ್ಯುವುದಾದರೆ, ಮಕ್ಕಳು ಕಂಪ್ಯೂಟರ್‌ನಲ್ಲಿ ಆಟವಾಡುತ್ತವೆ, ಇಂಗ್ಲೀಶ್ ಮೀಡಿಯಮ್ಮಿನಲ್ಲಿ ಓದುತ್ತಿವೆ, ಅವಕ್ಕೆ ದೊಡ್ಡ ಕಂಪನಿಯಲ್ಲಿ ಕೆಲಸ ಸಿಕ್ಕಿದೆ, ಅವು ವಿದೇಶದಲ್ಲಿವೆ, ನಾವು ನಿವೃತ್ತಿಯಾಗುವಾಗ ಪಡೆದ ಸಂಬಳವನ್ನು ಅವು ಈಗಲೇ ಗಳಿಸುತ್ತಿವೆ-ಮುಂತಾದ ಗರಿಗಳನ್ನು ತಲೆಗೆ ಸಿಕ್ಕಿಸಿಕೊಂಡು ತಿರುಗಾಡುವ ಮಧ್ಯಮವರ್ಗದ ತಂದೆತಾಯಿಗಳನ್ನು ಗಮನಿಸಬೇಕು. ಈ ಸಾಧನೆಗಳ ಫಲವಾಗಿ ಏನೆಲ್ಲ ಕಳೆದುಹೋಗಿದೆ ಎಂಬುದರ ಲೆಕ್ಕಾಚಾರವನ್ನೇ ಅವರು ಮಾಡಿದಂತಿಲ್ಲ ಅಥವಾ ಈಗ ಮಾಡಲು ಆರಂಭಿಸಿದ್ದಾರೆ. ಅವರು  ವರ್ಷಗಳ ಹಿಂದೆ ಕಂಡ ಕನಸು ನಿಜವಾಗಿರಬಹುದು. ಆದರೆ ದೊಡ್ಡಮನೆಗಳಲ್ಲಿ ಒಂಟಿಯಾಗಿ ಬದುಕನ್ನು ಕಳೆಯುವ ಬೆಲೆಯನ್ನೂ ಅವರು ತೆರುತ್ತಿದ್ದಾರೆ. ಅವರ ಈ ಅನಾಥಪ್ರಜ್ಞೆಗೆ ಅವರು ಮಾತ್ರವಲ್ಲ, ಅವರನ್ನು ಸೆಳೆದಿರುವ ಮಾರುಕಟ್ಟೆ ಆರ್ಥಿಕ ವ್ಯವಸ್ಥೆಯೂ ಕಾರಣ. ಮಿತ್ರರೊಬ್ಬರು ಹೇಳಿದ ಮಾತು ನೆನಪಾಗುತ್ತಿದೆ: ‘ಎಸ್‌ಎಸ್‌ಎಲ್‌ಸಿ ಫೇಲಾದ ಒಬ್ಬ ದಡ್ಡಮಗ ಇದ್ದಿದ್ದರೆ ನಾವು ಒಂಟಿಯಾಗಿರುತ್ತಿರಲಿಲ್ಲ’.
ಹೊಸತಲೆಮಾರು ತನ್ನ ಅಪ್ಪಅಜ್ಜಂದಿರ ಹಾಗೆ ಬದುಕಬೇಕು ಎಂತಲ್ಲ. ಹಾಗೆ ಬದುಕುವುದು ಯಾವ ತಲೆಮಾರಿಗೂ ಸಾಧ್ಯವಿಲ್ಲ.     ಪ್ರತಿ ತಲೆಮಾರು ತನ್ನದೇ ಆದ ಲೋಕದೃಷ್ಟಿಯನ್ನು ಜೀವನ ನಡೆಸುವ ಕ್ರಮವನ್ನೂ ವೈಯಕ್ತಿಕ ಅಭಿರುಚಿಯಿಂದಲೂ ಪರಿಸರದ ಒತ್ತಡದಿಂದಲೊ ಪಡೆದುಕೊಳ್ಳುತ್ತದೆ. ಅದು ಅದರ ಹಕ್ಕು ಕೂಡ. ಆಗ ಹಳೆಯ ಮತ್ತು ಹೊಸ ತಲೆಮಾರುಗಳ ನಡುವೆ ಮೌಲ್ಯಗಳ ತಿಕ್ಕಾಟ ಆರಂಭವಾಗುತ್ತದೆ. ಈ ತಲೆಮಾರುಗಳ ನಡುವಣ ಮೌಲ್ಯ ಸಂಘರ್ಷವನ್ನೇ ಕನ್ನಡದ ಕತೆ ಕಾದಂಬರಿಗಳು ಚಿತ್ರಿಸುತ್ತ ಬಂದಿವೆ- ‘ಇಂದಿರಾಬಾಯಿ’ಯಿಂದ ಹಿಡಿದು ಈಚಿನ ‘ಹಳ್ಳಬಂತು ಹಳ್ಳ’ದ ತನಕ. ಪ್ರಶ್ನೆಯೆಂದರೆ ಹೊಸ ತಲೆಮಾರು ತನ್ನ ಬದುಕನ್ನು ಅದು ತನ್ನ  ಸ್ವಂತ ವಿವೇಚನೆ ಮತ್ತು ನಿರ್ಧಾರದಿಂದ ರೂಪಿಸಿಕೊಳ್ಳುತ್ತಿಲ್ಲ. ಅದನ್ನು ಬೇರೆ ಯಾವ್ಯಾವುದೊ ಶಕ್ತಿಗಳು ರೂಪಿಸುತ್ತಿವೆ. ಮಾರುಕಟ್ಟೆ ನಮ್ಮ ಶಿಕ್ಷಣವನ್ನು, ಅದರ ಮಾಧ್ಯಮವನ್ನು, ಆಡುವ ಭಾಷೆಯನ್ನು, ಮಾಡುವ ಉದ್ಯೋಗವನ್ನು ಅಷ್ಟೇಕ ನಮ್ಮ ಆಲೋಚನೆ ವರ್ತನೆ ಮಾತುಕತೆಗಳನ್ನು ಪ್ರಭಾವಿಸುತ್ತಿದೆ. ಇಲ್ಲಿ ಸ್ಪರ್ಧೆ, ಗೆಲುವು, ಯಶಸ್ಸು, ವ್ಯಕ್ತಿವಾದಗಳು ಹೊಸ ಮೌಲ್ಯಗಳಾಗುತ್ತಿವೆ. ನಗರಗಳಲ್ಲಿ ಬೇರುರಹಿತ ಹೊಸತಲೆಮಾರು-ಅನಾಥ ಪ್ರಜ್ಞೆಯ ಹಳೆಯ ತಲೆಮಾರು ನಿರ್ಮಾಣವಾಗುತ್ತಿದೆ.

   ವಿಜ್ಞಾನ ತಂತ್ರಜ್ಞಾನ ಪ್ರಧಾನವಾದ ಶಿಕ್ಷಣ ಪಡೆದು ದೇಶಾಂತರ ಚಲನೆ ಪಡೆದಿರುವ ಮಕ್ಕಳ ಸೀಮೋಲ್ಲಂಘನೆಯ ಬಗ್ಗೆ ಸರೀಕರ ಎದುರು ಬಡಾಯಿ ಕೊಚ್ಚಿಕೊಳ್ಳುವ ತಂದೆತಾಯಿಗಳು, ಏಕಾಂತದಲ್ಲಿ ವಿಚಿತ್ರವಾಗಿ ಚಡಪಡಿಸುತ್ತಿರುತ್ತಾರೆ. ತಮ್ಮ ಮಕ್ಕಳಿಗೆ ಲ್ಯಾಪ್‌ಟಾಪು ಕೊಡಿಸುವಾಗ, ಶಾಲೆಗೆ ಹೋಗಲು ಅಂಗಿಯಿಲ್ಲದ ಚಪ್ಪಲಿಯಿಲ್ಲದ ಮಕ್ಕಳು ಬೀದಿಯ ತುದಿಗಿವೆ ಎಂಬುದನ್ನು ಅವರು ಬಹುಶಃ ಯೋಚಿಸಲಿಲ್ಲ. ಆಕಾಶನೀಲಿ ಯೂನಿಫಾರ್ಮು ಹಾಕಿಕೊಂಡು ಬರಿಗಾಲಲ್ಲಿ ಸರ್ಕಾರಿ ಶಾಲೆಗೆ ಹೋಗುವ ಮಕ್ಕಳು ಹಾಗಾಗಿರಲು, ವ್ಯವಸ್ಥೆ ಮಾತ್ರವಲ್ಲ, ಮಧ್ಯಮವರ್ಗದವರ ಸ್ವಕೇಂದ್ರಿತ ಆಲೋಚನ ಕ್ರಮವೂ ಕಾರಣವೆಂದು ಹೊಳೆಯಲಿಲ್ಲ. ಸುತ್ತಲಿನ ಪರಿಸರದ ಬಗ್ಗೆ ಮಕ್ಕಳನ್ನು ಸೆನ್ಸಿಟೈಜ್ ಮಾಡಲು ಯತ್ನಿಸಲಿಲ್ಲ. ಮಕ್ಕಳನ್ನು ಹೆರುವ ಜೈವಿಕ ಕ್ರಿಯೆ ಸುಲಭ. ಅವನ್ನು ಪರಿಸರದ ಬಗ್ಗೆ ಪ್ರೀತಿ ಕಾಳಜಿ ಕಲಿಸಿ ಸೂಕ್ಷ್ಮ ಸಂವೇದಿ ಮನುಷ್ಯರನ್ನಾಗಿ ಮಾಡುವುದು ಸವಾಲಿನ ಕೆಲಸ. ಸಮಸ್ಯೆ ತಂತ್ರಜ್ಞಾನದಲ್ಲಿಲ್ಲ. ಅದನ್ನು ಬಳಸಿಕೊಳ್ಳುವ ಮನೋಭಾವದಲ್ಲಿದೆ. ಸಮಸ್ಯೆ ಆಧುನಿಕತೆಯಲ್ಲಿಲ್ಲ. ಅದರಲ್ಲಿ ಅಳವಟ್ಟಿರುವ ಮೌಲ್ಯಗಳಲ್ಲಿದೆ.

   ಬದಲಾಗಿರುವ ಯುಗಧರ್ಮವನ್ನು ಅರ್ಥಮಾಡಿಕೊಳ್ಳುವಲ್ಲಿ ಅಥವಾ ಅದಕ್ಕೆ ಹೊಂದಿಕೊಳ್ಳುವಲ್ಲಿ ಸೋತಿರುವುದರಿಂದ ಈ ಎಲ್ಲ ಭಾವುಕ ಗೊಣಗಾಟಗಳು ಹುಟ್ಟುತ್ತಿವೆಯೆ? ನನ್ನ ಸಹಪಾಠಿ ತನ್ನ ಮಗನನ್ನು ಇನ್ಸೆನ್ಸಿಟಿವ್ ಮಾಡುತ್ತ ಕೊನೆಗಾಲದಲ್ಲಿ ಅನಾಥನಾಗುವ ಹಾದಿಯಲ್ಲಿ ಹೊರಟಿರಬಹುದೇ? ನನ್ನ ಮನಸ್ಸು ಹೊಯ್ದಾಡಿತು. ಹರಟೆ ಮುಗಿಸಿ ಹೊರಡುವಾಗ ಆಗಾಗ್ಗೆ ಮಂಕುಗವಿಯುತ್ತಿದ್ದ ಗೆಳೆಯನ ಮುಖಗಗನ್ನಡಿಯನ್ನು ತುಸು ಮರುಕದಿಂದ ನಿಟ್ಟಿಸಿದೆ. ಅದರಲ್ಲಿ ನನ್ನ ಪ್ರತಿಬಿಂಬವೂ ಕಂಡಿತು.    

ಕಾಮೆಂಟ್‌ಗಳಿಲ್ಲ: