ಶನಿವಾರ, ಜುಲೈ 6, 2013

ಸಂಸ್ಕೃತಿ ನಿಯಂತ್ರಿತ ದೇಹ ಮತ್ತು ರಂಗಭೂಮಿ

ಬಹುರೂಪ: ಸಂಸ್ಕೃತಿ ನಿಯಂತ್ರಿತ ದೇಹ ಮತ್ತು ರಂಗಭೂಮಿ
 
 ಸೌಜನ್ಯ: ವಿಜಯ ಕರ್ನಾಟಕಹವಾಯಿ ದ್ವೀಪದ ಮನಮೋಹಕ ನಗರ ಹೊನುಲುಲುವಿನಲ್ಲಿ ಹತ್ತು ನಿಮಿಷಗಳಿಗೊಮ್ಮೆ ಆಗಸದಲ್ಲಿ ಕಾಮನಬಿಲ್ಲು ಮೂಡುತ್ತಿರುತ್ತದೆ. ಪ್ರವಾಸಿಗರ ಸ್ವರ್ಗ ಎಂದು ಅತ್ಯಂತ ಅರ್ಹವಾಗಿ ಕರೆಯಿಸಿಕೊಂಡಿರುವ ಅಲ್ಲಿ ನಡೆದ ಏಷ್ಯಾ ಸಂಶೋಧಕರ ಸಮ್ಮೇಳನದಲ್ಲಿ ಭಾಗವಹಿಸಲು ಅವಕಾಶ ಸಿಕ್ಕಾಗ ಅದನ್ನು ಕಳಕೊಳ್ಳಲು ನಾನು ಸಿದ್ಧನಿರಲಿಲ್ಲ. ನಾಲ್ಕು ದಿನಗಳ ಕಾಲ ಅಲ್ಲಿ ನಡೆದ ಸಮ್ಮೇಳನದಲ್ಲಿ ಚೀನಾ ಮತ್ತು ಜಪಾನೀಯರದ್ದೇ ಮೇಲುಗೈ. ಭಾರತ, ಬಾಂಗ್ಲಾ, ಶ್ರೀಲಂಕಾ ಮತ್ತು ಪಾಕಿಸ್ತಾನದಿಂದ ಆಗಮಿಸಿದ ಸಂಶೋಧಕರು ಕೇವಲ ಬೆರಳೆಣಿಕೆಯಷ್ಟು. ಆದರೆ, ದಕ್ಷಿಣ ಏಷ್ಯಾದ ಮೇಲೆ ಕೆಲಸ ಮಾಡುವ ಅಮೆರಿಕ ಮತ್ತು ಯುರೋಪಿನ ವಿದ್ವಾಂಸರ ಸಂಖ್ಯೆ ಸಾಕಷ್ಟಿತ್ತು. ವಸಾಹತು ಕಾಲದಲ್ಲಿ ನಡೆದಂತೆ ಈಗಲೂ ನಮ್ಮ ಬಗ್ಗೆ ಬೇರೆಯವರು ಹೇಳುವುದನ್ನೇ ಸುಮ್ಮನೆ ಕುಳಿತು ಕೇಳುವ ದೌರ್ಭಾಗ್ಯ ನಮ್ಮದು.

ಹೊನುಲುಲುವಿನ ಬಹದಾಕಾರದ ಅಂತಾರಾಷ್ಟ್ರೀಯ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆದ ವಿಚಾರ ಸಂಕಿರಣಗಳ ಜೊತೆಗೆ, ಪ್ರತಿದಿನ ಸಾಯಂಕಾಲ ವಿಶ್ವದ ಅನೇಕ ಕಲೆಗಳ ಪ್ರದರ್ಶನ ಏರ್ಪಡಿಸಲಾಗಿತ್ತು. ಜೊತೆಗೆ 'ಏಷ್ಯಾದ ದೇಹ ಮತ್ತು ಪ್ರದರ್ಶಕ ಕಲೆಗಳು' ಎಂಬ ಶೀರ್ಷಿಕೆಯಡಿಯಲ್ಲಿ ಬಾಲಿ, ಹವಾಯಿ, ಚೀನಾ, ಆರ್ಮೇನಿಯಾ, ಜಪಾನ್, ಭಾರತ ಮತ್ತಿತರ ದೇಶಗಳ ಅಪೂರ್ವ ಕಲೆಗಳ ಪ್ರದರ್ಶನ ಮತ್ತು ಚರ್ಚೆ ಏರ್ಪಡಿಸಲಾಗಿತ್ತು. ಜೊತೆಗೆ, ಬೇರೆ ಬೇರೆ ಸಭಾಂಗಣಗಳಲ್ಲಿ ನಡೆಯುತ್ತಿದ್ದ ಕಲಾ ಪ್ರದರ್ಶನಗಳಲ್ಲಿ ಬೇಕಾದ್ದನ್ನು ಆಯ್ದು ನೋಡುವ ಕೆಲಸ ನಮ್ಮದು. ಅಮೆರಿಕದ ಸಾಗರೋತ್ತರ ಅಧ್ಯಯನ ಕೇಂದ್ರವು ನನಗೆ ಉಚಿತ ಪ್ರವೇಶಾವಕಾಶವನ್ನು ಒದಗಿಸಿಕೊಟ್ಟಿದ್ದರಿಂದ ಅದರ ಗರಿಷ್ಠ ಪ್ರಯೋಜನವನ್ನು ಪಡೆಯಲು ನಾನು ನಿರ್ಧರಿಸಿದ್ದೆ. ಪ್ರದರ್ಶನವೊಂದನ್ನು ಪೂರ್ತಿ ನೋಡಿದರೆ ನಷ್ಟ ಜಾಸ್ತಿ ಎಂದು ಲೆಕ್ಕ ಹಾಕುತ್ತಿದ್ದ ನಾನು, ಕೆಲವು ಬಾರಿ ಒಂದೇ ಅವಧಿಯಲ್ಲಿ ಮೂರು ಪ್ರದರ್ಶನ ಗಳನ್ನು ಸ್ವಲ್ಪ ಸ್ವಲ್ಪ ನೋಡಿದ್ದೂ ಉಂಟು. ಕಾಂಬೋಡಿಯಾದ ಬ್ಯಾಲೆ, ಚೀನಾದ ಸಿಂಹ ನತ್ಯ, ಜಪಾನಿನ ಕಾಗುರಾ, ಆರ್ಮೇನಿಯಾದ ಕೊಚಾರಿ, ನಾರ್ಡಿಕ್ ದೇಶಗಳ ಪೊಲ್ಸ್ಕಾ, ಹವಾಯಿಯ ಹುಲಾ, ಟ್ರಿನಿಡಾಡ್‌ನ ಚಟ್ನಿ ಮೊದಲಾದ ನತ್ಯಗಳನ್ನು ನಾನು ಅತ್ಯಂತ ಕುತೂಹಲದಿಂದ ಗಮನಿಸಿದೆ. ಈ ನತ್ಯಗಳಲ್ಲಿ ಯಾವುದು ಅತ್ಯಂತ ಶ್ರೇಷ್ಠ ಮತ್ತು ಯಾವುದು ಕನಿಷ್ಠ ಅಂತ ಕೇಳಿದರೆ ಉತ್ತರ ಕೊಡಲಾಗದು. ಎಲ್ಲ ಕಲೆಗಳಲ್ಲಿಯೂ ಕೆಲವು ಅತ್ಯುತ್ತಮ ಗುಣಗಳಿವೆ ಮತ್ತು ಕೆಲವು ಮಿತಿಗಳೂ ಇವೆ. ಜಪಾನಿನ ಕಾಗುರಾ ಬಹಳ ನಿಧಾನಗತಿಯಿಂದ ಬೆಳೆದರೆ, ಚೀನಾದ ಸಿಂಹ ನತ್ಯ ಅತ್ಯಂತ ಉತ್ಸಾಹದಾಯಕವಾಗಿದೆ. ಆರ್ಮೇನಿಯಾದ ನತ್ಯಗಳಲ್ಲಿನ ಸಂಗೀತದ ಗುಣ ನಮ್ಮನ್ನು ಬಹಳ ಹಿಂದಕ್ಕೆ ಕೊಂಡೊಯ್ದರೆ, ಟ್ರಿನಿಡಾಡ್‌ನ ಕುಣಿತಗಳಲ್ಲಿ ಹುಡುಗಿಯರು ತಮ್ಮ ಸೊಂಟವನ್ನು ಬುಗುರಿಯಂತೆ ತಿರುಗಿಸುವುದನ್ನು ಕಂಡಾಗ ಅಚ್ಚರಿಯಾಗುತ್ತದೆ. ದಕ್ಷಿಣ ಏಷ್ಯಾ ರಾಷ್ಟ್ರ ಗಳಾದ ಬಾಂಗ್ಲಾ, ಪಾಕಿಸ್ತಾನ, ಶ್ರೀಲಂಕಾ ಮತ್ತು ಭಾರತದಲ್ಲಿನ ಕಲೆಗಳಲ್ಲಿ ಕಂಡುಬರುವ ಬಣ್ಣಗಾರಿಕೆಗೆ ಬೆರಗಾಗದವರಿಲ್ಲ.

ಇಷ್ಟಿದ್ದರೂ ರಂಗಭೂಮಿಯ ಮೇಲೆ ದೇಹದ ಪರಿಣಾಮಕಾರಿ ಬಳಕೆಯ ದೃಷ್ಟಿಯಿಂದ ಬ್ಯಾಲೆ ಮತ್ತು ಒಪೆರಾಗಳನ್ನು ಮೀರಿಸುವ ಕಲೆಗಳು ಜಗತ್ತಿನಲ್ಲಿ ಇಲ್ಲವೆಂದು ಹೇಳಬಹುದು. ಬ್ಯಾಲೆಯಲ್ಲಿ ಕಾಲಿನ ಉಂಗುರದ ತುದಿಯಿಂದ ತಲೆಕೂದಲಿನವರೆಗೆ ದೇಹದ ಎಲ್ಲ ಅಂಗಗಳನ್ನು ಅತ್ಯಂತ ಪರಿಣಾಮಕಾರಿಯಾಗಿ ಬಳಸಲಾಗುತ್ತದೆ. ಬ್ಯಾಲೆ ಕಲಾವಿದರಿಗೆ ದೇಹದ ಮೇಲಿರುವ ಹಿಡಿತ ಅಸಾಧಾರಣವಾದುದು. ಕಾಗುರಾದ ಆರಂಭದಲ್ಲಿ ಎರಡು ಕೋಳಿಗಳು (ತೋರಿ-ಮಾಯಿ ಎಂದು ಇದಕ್ಕೆ ಹೆಸರು) ರಂಗಕ್ಕೆ ಸರಕ್ಕನೆ ಪ್ರವೇಶಿಸುತ್ತವೆ ಮತ್ತು ಜತೆ ಜತೆಯಾಗಿ ನರ್ತಿಸುತ್ತವೆ. ಈ ಕೋಳಿಗಳು ಭೂಮಿಯ ಉಮದ ಕಾಲದಲ್ಲಿ ಇದ್ದುವು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ, ಕೋಳಿ ಕುಣಿತಕ್ಕೆ ಪ್ರಾಚೀನತೆಯ ಜತೆಗೆ ಧಾರ್ಮಿಕ ಆಯಾಮವೂ ಲಭಿಸಿ ಅಸಾಧಾರಣವಾಗುತ್ತದೆ. ನೆಲದಿಂದ ಮೇಲಕ್ಕೆ ಜಿಗಿಯುವು ದರಲ್ಲಿ ಪ್ರವೀಣರಾದ ಜಪಾನೀಯರು, ಕೋಳಿ ಕುಣಿತದಲ್ಲಿ ದೇಹವನ್ನು ಬಳಸುವ ವಿಧಾನ ಅಸದಶವಾದುದು.ಆರ್ಮೇನಿಯಾದ ಸಂಗೀತಗಾರರ ಮೋಹಕ ಧ್ವನಿಗೆ ನರ್ತಕರ ದೇಹ ಕರಗುತ್ತದೆ. ಟ್ರ್ರಿನಿಡಾಡ್‌ನ ಹುಡುಗಿಯರು ಸೊಂಟವನ್ನು ವೇಗವಾಗಿ ತಿರುಗಿಸುವುದರಿಂದ ಅದನ್ನು ತೋರಿಸಲೆಂದು ಪ್ರೇಕ್ಷಕರಿಗೆ ಬೆನ್ನು ಹಾಕಿಯೇ ಬಹಳಕಾಲ ಕಳೆಯುತ್ತಾರೆ. ಇವಕ್ಕೆ ಹೋಲಿಸಿದರೆ, ದಕ್ಷಿಣ ಏಷ್ಯಾದ ಕಲೆಗಳಲ್ಲಿನ ದೇಹದ ಬಳಕೆ ತುಂಬಾ ಸೀಮಿತವಾದುದು ಎಂದು ಭಾಸವಾಗುತ್ತದೆ.

ಇವುಗಳಿಗೆ ಹೋಲಿಸಿ ನೋಡಿದರೆ, ನಮ್ಮ ಸಂಸ್ಕೃತಿಯ ಕೆಲವು ನಿಯಮಗಳು ನಮ್ಮದೇ ಆದ ದೇಹದ ಬಳಕೆಯನ್ನು ನಿಯಂತ್ರಿಸಿದಂತೆ ತೋರುತ್ತದೆ. ಈ ಕುರಿತು ದಕ್ಷಿಣ ಭಾರತದ ಮೇಲೆ ಕುತೂಹಲಕರವಾದ ಸಂಶೋಧನೆ ನಡೆಸಿದ ಡಾ.ಬ್ರೆಂಡಾ ಬೆಕ್ ಅವರು ಕೆಲವು ಒಳನೋಟಗಳನ್ನು ಕೊಟ್ಟಿದ್ದಾರೆ.

ನಮ್ಮ ಇಡೀ ದೇಹವನ್ನು ನಡು ಭಾಗದಿಂದ ಕತ್ತರಿಸಿ ನೋಡಿದರೆ, ದೇಹದ ಉತ್ತರಾರ್ಧವನ್ನು ನಾವು ಗೌರವಿಸಿದ ಹಾಗೆ ಅಥವಾ ಬಳಸಿದ ಹಾಗೆ ದೇಹದ ಕೆಳ ಭಾಗವನ್ನು ಗೌರವಿಸುವುದಿಲ್ಲ. ಶರೀರದಲ್ಲಿ ತಲೆ ಶ್ರೇಷ್ಠವಾದರೆ, ಕಾಲು ಕನಿಷ್ಠವೆಂದು ಪರಿಗಣಿತವಾಗಿದೆ. ಹಾಗಾಗಿ ಯಾರದಾದರೂ ಕಾಲು ಹಿಡಿದು, ಅವರ ಪಾದದ ಧೂಳನ್ನು ತಲೆಗೆ ಅಂಟಿಸಿಕೊಳ್ಳುವುದೆಂದರೆ; 'ನಿಮ್ಮ ದೇಹದ ಕನಿಷ್ಠ ಭಾಗವು, ನನ್ನ ದೇಹದ ಅತಿ ಗರಿಷ್ಠ ಭಾಗಕ್ಕೆ ಸಮಾನ' ಎಂದು ಘೋಷಿಸಿಕೊಳ್ಳುವುದು ಎಂದೇ ಅರ್ಥ. ತಮಿಳುನಾಡಿನ ತೆರುಕೂತ್ತಿನಲ್ಲಿ, ಕರ್ನಾಟಕದ ದೊಡ್ಡಾಟದಲ್ಲಿ, ಸೊಂಟದ ಮೇಲ್ಭಾಗ ಅಲಂಕತಗೊಂಡಂತೆ, ಕೆಳಭಾಗ ಅಲಂಕತಗೊಂಡಿಲ್ಲ. ಈ ಅರ್ಥದಲ್ಲಿ ದೇಹದ ಕೆಳ ಅರ್ಧವು ಬಹುಮಟ್ಟಿಗೆ ನಿರುಪಯುಕ್ತವಾಗಿದೆ.

ಇದೇ ರೀತಿ ದೇಹವನ್ನು ಎಡ ಮತ್ತು ಬಲ ಎಂದು ವಿಭಜಿಸಿಕೊಂಡರೆ, ನಮ್ಮಲ್ಲಿ ದೇಹದ ಎಡಭಾಗದ ಬಳಕೆ ಕಡಿಮೆಯೆಂದೇ ಹೇಳಬೇಕು. ಚಿಕ್ಕ ಮಗು ಎಡಗೈನಲ್ಲಿ ಹಿಡಿದಿರುವ ತಿಂಡಿಯನ್ನು ಮುಗ್ಧವಾಗಿ ಕೇಳಿದವರಿಗೆ ಕೊಟ್ಟರೆ, ತಕ್ಷಣ ಎಚ್ಚತ್ತುಕೊಳ್ಳುವ ಹಿರಿಯರು, 'ಎಡಗೈಯಲ್ಲಿ ಕೊಡಬಾರದಪ್ಪಾ, ಬಲಗೈಯಲ್ಲಿ ಕೊಡು' ಎಂದು ಹೇಳಿ ಎಡ-ಬಲಗಳ ವ್ಯತ್ಯಾಸವನ್ನು ಸ್ಥಾಪಿತಗೊಳಿಸುತ್ತಾರೆ. ಎಡಗೈನಿಂದ ನಮಸ್ಕಾರ ಮಾಡಬಾರದು, ಊಟ ಮಾಡಬಾರದು, ಏನನ್ನೂ ಕೊಡಬಾರದು ಎಂಬಿತ್ಯಾದಿ ನಿಷೇಧಗಳ ನಡುವೆ ದೇಹದ ಎಡ ಭಾಗದ ಬಳಕೆ ಸೀಮಿತಗೊಂಡಿದೆ. ಗಂಡಿಗಿಂತ ಹೆಣ್ಣು ಕನಿಷ್ಠಳು ಎಂಬ ನಂಬಿಕೆಯ ಹಿನ್ನೆಲೆಯಲ್ಲಿ ಹೆಣ್ಣನ್ನು ಗಂಡಿನ ಎಡಭಾಗದಲ್ಲಿಯೇ ನಿಲ್ಲಿಸಲಾಗುತ್ತದೆ. ನಮ್ಮ ದೇವರುಗಳು ಕೂಡ ತಮ್ಮ ಪತ್ನೀದೇವಿಯರನ್ನು ಎಡಭಾಗಕ್ಕೆ ತಳ್ಳಿದ್ದಾರೆ. ಹೀಗೆ ನಮ್ಮ ಸಾಂಸ್ಕೃತಿಕ ತಿಳಿವಳಿಕೆಯು ದೇಹದ ಅರ್ಧ ಭಾಗವನ್ನು ನಿರುಪಯುಕ್ತ ಗೊಳಿಸಿವೆ.

ದೇಹವನ್ನು ಹಿಂದೆ ಮತ್ತು ಮುಂದೆ ಎಂದು ವಿಭಜಿಸಿ ಕೊಂಡರೆ, ದೇಹದ ಹಿಂಭಾಗವು ಬಹುಮಟ್ಟಿಗೆ ನಿರುಪಯುಕ್ತ. ಯಕ್ಷಗಾನದಲ್ಲಿ ರಂಗಪ್ರವೇಶ ಮಾಡುವ ಪಾತ್ರಗಳು ಮೊದಲಿಗೆ ಚೌಕಿಯಲ್ಲಿರುವ ಗಣಪತಿಗೆ ನಮಸ್ಕರಿಸುತ್ತವೆ. ಆಗ ಪ್ರೇಕ್ಷಕರಿಗೆ ಬೆನ್ನು ಕಾಣಬಾರದೆಂದು ಪರದೆಯನ್ನು ಹಿಡಿಯಲಾಗುತ್ತದೆ. ದೇವರಿಗೆ ಬೆನ್ನು ಹಾಕಬಾರದು, ಪ್ರೇಕ್ಷಕರಿಗೆ ಬೆನ್ನು ಹಾಕಬಾರದು, ಹಿರಿಯರಿಗೆ ಬೆನ್ನು ಹಾಕಬಾರದು ಎಂಬಿತ್ಯಾದಿ ನಂಬಿಕೆಯ ಹಿನ್ನೆಲೆಯಲ್ಲಿ ದೇಹದ ಬಳಕೆ ಸೀಮಿತವಾಗಿದೆ.

ಹೀಗೆ ದೇಹದ ಕೆಳಭಾಗ, ಎಡಭಾಗ ಮತ್ತು ಹಿಂಭಾಗದ ಬಳಕೆಯನ್ನು ಸಂಸ್ಕೃತಿ ನಿಯಂತ್ರಿಸಿದ್ದರಿಂದ ದೇಹದ ಪೂರ್ಣ ಬಳಕೆಯಿಂದ ಸಾಧ್ಯವಾಗುವ ಪರಿಣಾಮಗಳನ್ನು ನಮಗೆ ರಂಗಭೂಮಿಯ ಮೇಲೆ ತೋರಿಸಲಾಗುತ್ತಿಲ್ಲ. ನಮ್ಮ ಬೇರೆ ಬೇರೆ ಕಲೆಗಳಲ್ಲಿ ದೇಹವನ್ನು ಹೇಗೆ ಅಲಂಕರಿಸಲಾಗುತ್ತದೆ, ದೇಹವನ್ನು ಪ್ರದರ್ಶಕ ಕಲೆಗಳಿಗೆ ನಾವು ಹೇಗೆ ಅಳವಡಿಸಿಕೊಂಡಿದ್ದೇವೆ, ಈ ವಿಷಯದಲ್ಲಿ ನಮ್ಮ ಶಕ್ತಿ ಮತ್ತು ದೌರ್ಬಲ್ಯಗಳೇನು ಎಂಬಿತ್ಯಾದಿ ವಿಷಯಗಳ ಕುರಿತು ನಾವು ಗಾಢವಾಗಿ ಯೋಚಿಸಬೇಕಾಗಿದೆ.

ಕಾಮೆಂಟ್‌ಗಳಿಲ್ಲ: