ಸೌಜನ್ಯ: ವಿಜಯ ಕರ್ನಾಟಕ
ಇತರ ಸರಕಾರಿ ಕೆಲಸಗಳು ಸುಲಭದಲ್ಲಿ ದಕ್ಕುವುದಿಲ್ಲವಾದ ಕಾರಣಕ್ಕೆ ಬಡವರಿಗೆ ಮಿಲಿಟರಿ ಅನಿವಾರ್ಯ ಆಯ್ಕೆ ಆಗುತ್ತಿದೆ. ಪಿ.ಯು.ಸಿ.ಯಲ್ಲಿ 82% ಮಾರ್ಕ್ಸ್ ಪಡೆಯುವುದು ಪವಾಡವಲ್ಲ. ಆದರೆ ಈ ಹುಡುಗನ ಬದುಕಿನಲ್ಲದು ಪವಾಡವೇ. ಅವನ ದಿನ ಶುರುವಾಗುತ್ತಿದ್ದುದೇ ಎಮ್ಮೆಗೆ ಹುಲ್ಲು ತರೋದ್ರಲ್ಲಿ. ಅವ್ವ ಎಂಬ ಜೀವ 'ಮಗ ಸಾಲಿ ಕಲೀಲಿ' ಎಂದು ಬಯಸುತ್ತಿದ್ದುದರಿಂದ ಹೇಗೋ ವೇಳೆ ಹೊಂದಿಸಿ ಸೈಕಲ್ ಹತ್ತಿ 8 ಕಿ.ಮೀ.ದೂರದ ಸರಕಾರೀ ಕಾಲೇಜಿನಲ್ಲಿ ಕಲಿ ತಿದ್ದ. ಅವ್ವ ನಾಕ ಮನಿ ಮುಸರಿ ತಿಕ್ಕಿ, ನಾಕ ಮಕ್ಳನ್ನ ಸಲುವು ತ್ತಿದ್ದಳು. ಇವನೇ ದೊಡ್ಡ ಮಗ. ಅಪ್ಪ ಕುಡ್ದು ಕುಡ್ದು ಅದಾಗಲೇ ಮಣ್ಣಾಗಿದ್ದ. ಕೈಯಲ್ಲಿ ಮಾರ್ಕ್ಸ್‌ಕಾರ್ಡ್ ಹಿಡಿದು ನಿಂತಿದ್ದವನ ಈ ಕಥೆ ತಿಳಿದದ್ದು ಆಮೇಲೆ. ಅವನ ಎರಡಕ್ಷರದ ಶಬ್ದ ನನ್ನ ಮಾಸ್ತರಕಿಯ ಸೊಕ್ಕಡಗಿಸಿ ಹೆಡೆಮುರಿ ಕಟ್ಟಿದ ಮೇಲೆ.
ಆತ ಬಂದಿದ್ದು ಬಿ.ಎ. ಅಡ್ಮಿಷನ್‌ಗಾಗಿ. ಬಡತನ ಮೈಮುಚ್ಚಿದ ಬಟ್ಟೆಯಂತೆ ಹೊಚ್ಚಿಕೊಂಡಿರುವ ಈ ಸೀಮೆಯಲ್ಲಿ ಮಕ್ಕಳ ಶಿಕ್ಷಣ ಮುಖ್ಯ ಆದ್ಯತೆಯಲ್ಲ. ನಮ್ಮಂತಹ ಸರಕಾರಿ ಕಾಲೇಜು ಗಳನ್ನು ಹುಡುಕಿಕೊಂಡು ಬರುವ ಬಡಮಕ್ಕಳ ಮಾರ್ಕ್ಸ್ ಕಾರ್ಡಿನಲ್ಲಿ 50-60ರ ಗಡಿಯಲ್ಲಿ ಮಾತ್ರ ಅಂಕಗಳಿ ರುತ್ತವೆ. ಕೂತು ಓದಿ ಹೆಚ್ಚಿನ ಪರ್ಸಂಟೇಜ್ ಮಾಡಿದ ಇದ್ದುಳ್ಳವರ ಮನೆಯ ಮಕ್ಕಳು ದೊಡ್ಡ ಊರುಗಳಿಗೆ ದೊಡ್ಡ ಕಾಲೇಜುಗಳಿಗೆ ಓಡಾಡುತ್ತಾರೆ. ಹಾಗಾಗಿ ಅಪರೂಪಕ್ಕೆ ಕೈಗೆ ಹತ್ತುವ ಇಂತಹ ಮಾರ್ಕ್ಸ್ ಕಾರ್ಡ್ ಖುಷಿಯನ್ನುಂಟುಮಾಡು ತ್ತದೆ. ಅದೇ ಉಮೇದಿಯಲ್ಲಿ ಮಾರ್ಕ್ಸ್‌ಗಳನ್ನೇ ನೋಡುತ್ತ 'ಮುಂದೇನು ಮಾಡ್ಬೇಕಂತಿದೀಯಾ?' ಎಂದೆ. ಅವನ ಕಾಲು ಗಳ ಹಿಮ್ಮಡ ಕಿತ್ತ ಚಪ್ಪಲಿಯನ್ನೋ ಕಾಲರು ಪಿಸಿದ ಅಂಗಿ ಯನ್ನೋ ನೋಡಿದ್ದರೆ ಅಷ್ಟು ಸಲೀಸಾಗಿ ಈ ಪ್ರಶ್ನೆ ಕೇಳುತ್ತಿರ ಲಿಲ್ಲವೇನೋ. ಅವನು ಕನಸು ತುಂಬಿ ಒದ್ದೆಯಾದ ದನಿಯಲ್ಲಿ ಹೇಳಿದ್ದ 'ಮಿಲ್ಟ್ರಿ'. ಒಂಚೂರು ಸಾವರಿಸಿಕೊಂಡೆ. ಬಿ.ಎ., ಬಿ.ಎಡ್. ಮಾಡಿಕೊಂಡಿದ್ದರೆ... ಅಂತ ಏನೋ ಹೇಳ ಹೊರಟೆ. ನನಗೇ ಖಚಿತವಿರಲಿಲ್ಲ. ಇನ್ನೂ 4 ವರ್ಷಗಳನ್ನು ಓದಿನಲ್ಲಿ ಕಳೆ ಯುವ ಸ್ಥಿತಿಯಲ್ಲಿ ಅವನಿರಲಿಲ್ಲ. ದಿನದಿಂದ ದಿನಕ್ಕೆ ಜೀವ ತೇದು ಹಣ್ಣಾಗುತ್ತಿರುವ ತಾಯಿ, ಅಣ್ಣನ ಕಡೆ ಆಸೆಕಂಗಳಿಂದ ನೋಡೋ ತಮ್ಮ, ತಂಗಿಯರು ಅವನ ಭವಿಷ್ಯದ ರೂಪುರೇಷೆ ಬರೆಯುತ್ತಿದ್ದರು. 'ಮತ್ತ್ಯಾವ ನೌಕರಿ ಸಿಗೋದೂ ಅಷ್ಟ ಸುಲಭ ಅಲ್ಲ' ಅಂದ. ತಲೆ ಎತ್ತರಿಸಿ ಅವನ ಮುಖ ನೋಡಿದೆ. ಮಕ್ಕಳು ತಲೆದಾಟಿ ಬೆಳೆಯುವು ದೆಂದರೆ ಇದೇ ಏನೋ?
ಇದು ಇವನೊಬ್ಬನ ಕಥೆಯಲ್ಲ. ಕ್ಲಾಸಿನಲ್ಲಿರುವ ಹುಡುಗರ ಮನಸ್ಸಿನಲ್ಲಿ ಮಿಲ್ಟ್ರಿ ಸೆಲೆಕ್ಷನ್ ಎಂಬ ಗುಂಗಿಹುಳು ಕೊರೆಯುತ್ತಿರುತ್ತದೆ. ಸುತ್ತಮುತ್ತಲ ನಗರಗಳಲ್ಲಿ ಐ.ಎ.ಎಸ್., ಐ.ಪಿ.ಎಸ್. ಕೋಚಿಂಗ್ ಸೆಂಟರ್‌ಗಳಂತೆ ಮಿಲಿಟ್ರಿ ಸೆಲೆಕ್ಷನ್‌ಗಾಗಿಯೂ ಕೋಚಿಂಗ್ ಸೆಂಟರ್‌ಗಳು ನಡೆಯುತ್ತವೆ. ನಾವು ಮತ್ತು ನಮ್ಮಂಥವರು ಆಗಾಗ ಕಾಂಪಿಟೇಟಿವ್ ಎಕ್ಸಾಮ್‌ಗಳ ಬಗ್ಗೆ ವಿಶೇಷ ಉಪನ್ಯಾಸಗಳನ್ನು ಇಡಿಸುತ್ತೇವೆ. ಈ ಮಕ್ಕಳು ಅದನ್ನೊಂದು ನಗೆ ನಾಟಕದಂತೆ ನೋಡುತ್ತಾರೋ ಏನೋ? ಹುಡುಗರು ಅಲ್ಲಲ್ಲಿ ಸೇರಿ ಏನೋ ಗಂಭೀರವಾಗಿ ಮಾತಾಡಿ ಕೊಳ್ಳುತ್ತಿ ದ್ದಾರೆಂದರೆ, ಅದು ಈ ಮಿಲಿಟ್ರಿ ಸೆಲೆಕ್ಷನ್ ಕೋಚಿಂಗ್ ಕ್ಲಾಸ್‌ಗಳ ಬಗ್ಗೆ ಮಾಹಿತಿ ಮತ್ತು ಅದಕ್ಕೆ ಫೀಸು ಹೊಂದಿಸೋ ಹೆಣಗಾಟ. ಮಿಲಿಟ್ರಿಯಲ್ಲಿ ಉದ್ಯೋಗ ಪಡೆದು ವರ್ಷಕ್ಕೊಮ್ಮೆ ಬಂದು ಮನೆಯುಪಚಾರ ಊರ ಮರ‌್ಯಾದೆ ಪಡೆದು ಹೋಗುವವರು ಇವರ ಹೀರೋಗಳು. ಇದೇ ಸುಮಾರಿಗೆ ಉತ್ತರಾ ಖಾಂಡದಲ್ಲಿ ಸಂತ್ರಸ್ತರ ನೆರವಿಗೆ ದುಡಿಯುತ್ತಿದ್ದ ನರಗುಂದದ ಯೋಧ ಮರಣ ಹೊಂದಿದ್ದ. ಅವನೂ ಇಂಥ ಕನಸುಗಳ ಬೆನ್ನೇರಿ ಹೋದವನೇ. 2 ದಿನವಾ ದರೂ ಶವ ಬಂದಿರ ಲಿಲ್ಲ. ಆ ಕುಟುಂಬದ ಗೋಳು ನೋಡು ವಂತಿರಲಿಲ್ಲ. ಪತ್ರಿಕೆಗಳಲ್ಲಿ ಅದೇ ಸುದ್ದಿ, ವರಾಂಡದಲ್ಲಿ ಪತ್ರಿಕೆ ಓದುತ್ತ ನಿಂತ ಹುಡುಗರು ಮಾತಾಡಿಕೊಳ್ಳುತ್ತಿದ್ದರು. 'ಸಾವ ಬರೂದ ಐತಿ, ಬ್ಯಾಡಂದ್ರ ಬಿಟ್ಟಿತೇನ ಯಾರನ್ನಾರ? ಹಿಂಗ್ ಸಾಯಾಕೂ ಪುಣ್ಣೇವು ಬೇಕ್, ಏನ್ಲೇ...' ಕಿವಿ ಕೊಡವಿ ಮುಂದಿನ ಕ್ಲಾಸಿಗೆ ಹೋಗಿದ್ದೆ. ಶಾಸನಗಳಲ್ಲಿ ಓದಿದ್ದೆವು. 'ಗೆದ್ದರೆ ರಾಜ್ಯಲಕ್ಷ್ಮಿ, ಸೋತರೆ ಸ್ವರ್ಗದಲ್ಲಿ ಅಪ್ಸರೆ. ಕ್ಷಣಭಂಗುರವಾದ ದೇಹಕ್ಕೆ ರಣಾಂಗಣದಲ್ಲಿ ಮರಣ ಸಂಭವಿಸಬಹುದೆಂದು ಚಿಂತಿಸ ಬಾರದು.' ರಾಜಪ್ರಭುತ್ವವು ಸೈನಿಕರನ್ನು ಪ್ರಚೋದಿ ಸಲು ಬರೆಸುತ್ತಿದ್ದ ಶಾಸನಗಳವು. ಈಗ ರಾಜರಿಲ್ಲ. ಆದರೆ ಪ್ರಚೋದ ನೆಯೂ ಶಾಸನವೂ ಬಡವರ ಮನೆ ಅಂಗಳ ಬಿಟ್ಟು ಕದಲಲಿಲ್ಲ.
ನದಿ ಹರಿದ ಗುರುತಿನಂತೆ ತಿರುವುತಿರುವಾಗಿ ಉದ್ದಕ್ಕೆ ಚಾಚಿಕೊಂಡ ರಸ್ತೆಯಲ್ಲಿ ಹಳಿಯಾಳದಿಂದ ಬೆಳಗಾವಿ ಬಳಸಿ ಮಹಾರಾಷ್ಟ್ರದ ಬೇರೆ ಬೇರೆ ದೊಡ್ಡ ಊರುಗಳಿಗೆ ಬಸ್ಸುಗಳು ಓಡಾಡುತ್ತವೆ. ಅಲ್ಲಲ್ಲಿ ಹಳ್ಳಿಯ ಜನ ಹತ್ತುತ್ತಾರೆ. ಅಥವಾ ಬಿಳಿ ಬಿಳಿ ಗೊಬ್ಬರ ಚೀಲಗಳು ಹತ್ತುತ್ತವೆ. ಊರ ಹೊಲಗಳಿಗೆ ಗೊಬ್ಬರ ತುಂಬಿಕೊಂಡು ಬಂದ ಚೀಲಗಳು ಈಗ ತೊಳೆದು ಹಸನಾಗಿ ಗುಳೆ ಹೋಗುವವರ ಸಾಮಾನು ತುಂಬಿ ಕೊಂಡು ಬಾಯ್ಕಟ್ಟಿ ಕೂತಿವೆ. ಪರಿಚಯದ ಕಂಡಕ್ಟರ್ ಡ್ರೈವರ್ ಗಳು ಅಲ್ಲಿ ಕಾಯುತ್ತಿರುವವರಿಗೆ ಅವನ್ನು ತಲುಪಿಸು ತ್ತಾರೆ. ಹಬ್ಬ ವೊಂದು ಮುಗಿದ ಮಾರನೇ ದಿನವಂತೂ ಗದ್ದ ಲವೋ ಗದ್ದಲ. ಬಂದವರು, ಹೋಗುವವರು, ಕಳಿಸಲು ಬರು ವವರು ಬಸ್ಸಿಡೀ ಸಿದ್ದಪ್ಪಜ್ಜನ ಜಾತ್ರೆಯಂತಾಗುತ್ತದೆ. ಇಲ್ಲೊಂದು ಊರಿದೆ. ಇಲ್ಲಿಂದ ಕನಿಷ್ಠ 50ರಿಂದ 100 ಮಕ್ಕಳು ದುಡಿ ಯಲು 'ಮರಾಠಿ ದೇಸ'ಕ್ಕೆ ಹೋಗಿದ್ದಾರೆ. ಹೈಸ್ಕೂಲು ಕಲಿವ ವಯಸ್ಸಿನ ಇವರು ಅದಾಗಲೇ ದೊಡ್ಡವರ ಸ್ಟೈಲಿಗೆ ತಮ್ಮನ್ನು ಎತ್ತರಿಸಿ ಕೊಂಡಿ ದ್ದಾರೆ. ಅಲ್ಲಿ ಅವರು ಕಟ್ಟಡ ಕಟ್ಟುವ ಗೌಂಡಿಗಳ ಕೈಯಾಳುಗಳು. ಮುಖ್ಯ-ಗೌಂಡಿ ಊರೊಟ್ಟಿನ ಮಕ್ಕಳನ್ನು ಕೂಡಿಸಿಕೊಂಡು ಅಲ್ಲಿ ಕಂಟ್ರಾಕ್ಟ್ ಹಿಡಿಯುವವ. ಅಲ್ಲಿಯ ದುಬಾರಿ ಕೂಲಿಯಿಂದ ತಪ್ಪಿಸಿಕೊಳ್ಳುವವ. ಅದಕ್ಕಾತ ಮಕ್ಕಳ ಹೆತ್ತವರಿಗೆ ಅಡ್ವಾನ್ಸ್ ಕೊಟ್ಟಿರುತ್ತಾನೆ. ಇದೊಂದು ರೀತಿ ಹೊಸ ಜೀತಪದ್ಧತಿ. ಊರಲ್ಲಿ ಶಾಲೆಯಿದೆ, ಸವಲತ್ತುಗಳೂ ಸಿಗುತ್ತಿವೆ. ಆದರೂ ಈ ಮಕ್ಕಳ ಓದು ಕನ್ನಡ ಶಾಲೆಗೇ ಮುಕ್ತಾಯವಾಗಿ ಬಿಡುತ್ತಿದೆ. ಬಡತನವೂ ಸೇರಿದಂತೆ ಶಿಕ್ಷಣದ ಬಗೆಗಿನ ಅವಜ್ಞೆ, ನಿರುದ್ಯೋಗದ ಭಯ, ಗಿಡ ಎಳಕಲಿದ್ದಾಗಲೇ ಬಗ್ಗಿಸಿ ಕಟ್ಟ ಬೇಕು ಎನ್ನೋ ಭಾವನೆ... ಹೀಗೆ ಏನೆಲ್ಲ ಕಾರಣಗಳಿವೆ. ಈ ಜನರಿಗೆ ಹೆಚ್ಚಿನ ಭೂಮಿಯಿಲ್ಲ. ಆದರವರು ಕಷಿ ಪರಿಣತರು. ಮಾವಿನ ಗಿಡಗಳಿಗೆ ಕಸಿಕಟ್ಟುವ ವಿಶಿಷ್ಟ ಜ್ಞಾನವನ್ನೇ ಉದ್ಯೋಗ ವಾಗಿಸಿಕೊಂಡಿದ್ದಾರೆ. ಎರಡು ಹೊತ್ತಿನ ಊಟಕ್ಕೆ ಸಾಲುತ್ತಿದೆ. ಆದರೆ ಮಕ್ಕಳು ಎಷ್ಟು ಬೇಗ ಸಾಧ್ಯವೋ ಅಷ್ಟು ಬೇಗ ಸಂಪಾ ದನೆಗೆ ಕೈಜೋಡಿಸಿದರೆ ಒಂದಿಷ್ಟು ನೆಮ್ಮದಿಯಿಂದ ಉಸಿರಾಡ ಬಹುದೆಂಬ ತುರ್ತು ಇದೆ. ಇದು ತಪ್ಪಲ್ಲ. ಆದರೆ ಸರಿಯೇ?
ಹಬ್ಬಕ್ಕೆ ಮನೆಗೆ ಬಂದ ಮಗ ಮತ್ತೆ ಮರಳಿ ಹೋದಾನೆ ಇಲ್ಲವೆ ಎಂಬ ಆತಂಕ ಹೆತ್ತವರಿಗೆ. ಅಂವ ವಾರಿಗೆಯವರೊಂದಿಗೆ ತಯಾರಾಗದಿದ್ದರೆ ಪುಸಲಾಯಿಸಿ ಸನ್ನದ್ಧಗೊಳಿಸಲಾಗುತ್ತದೆ. ಒಣರೊಟ್ಟಿ ಚಟ್ನಿಗಳೊಂದಿಗೆ ಹಸಿ ಕಣ್ಣೀರನ್ನೂ ಕಟ್ಟಿ ಕಳಿಸಲಾಗುತ್ತದೆ. ಆದರೆ ಕಲಿಯಬೇಕಾದ, ಚಿತ್ರ ಬರೆಯ ಬೇಕಾದ, ಆಡಬೇಕಾದ ವಯಸ್ಸಿನಲ್ಲಿ ಗಾರೆ ಕೆಲಸಕ್ಕೆ ಹೋಗುವ ಮಕ್ಕಳ ಮನಸ್ಸಿನಲ್ಲಿ ಏನನ್ನೋ ಕಳಕೊಂಡ ಯಾತನೆಯ ಮೊಹರು ಉಳಿದುಹೋಗುತ್ತದೆ. ವರ್ಷಗಳು ಸರಿಯುತ್ತವೆ. ಹುಡುಗರು 18 ಚಟಗಳ ಮೇಲುಸ್ತುವಾರಿಯಲ್ಲಿ ಸೊಪ್ಪಾಗಿ ಹೋಗಿರುತ್ತಾರೆ. ಮುಂದೆ ಅವರವರ ಬದುಕು ಗಳಲ್ಲಿ ಏನೇನು ಸಂಭವಿ ಸುತ್ತದೋ ಆ ಎಲ್ಲಕ್ಕೂ ಊರ ಮಾರಮ್ಮ ಹೊಣೆಗಾರ ಳಾಗಬೇಕಾಗುತ್ತದೆ. ಜನಪದ ಕಥೆಯೊಂದು ಹೀಗಿದೆ- ಭಿಕ್ಷುಕಿಯೊಬ್ಬಳು ಎಳೆಮಗು ವನ್ನೆತ್ತಿಕೊಂಡು ಭಿಕ್ಷಕ್ಕೆ ಬರುತ್ತಾಳೆ. ಮೂರು ದಿನ ಗ ಳಿಂದ ಹಸಿವು. ಒಬ್ಬ ಗಹಿಣಿಗೆ ಪಾಪ ಅನ್ನಿಸುತ್ತದೆ. ಅನ್ನ ಕಲಸಿ ತಂದು ಇಲ್ಲೇ ಮಗುವಿಗೆ ಉಣ್ಣಿಸಲು ಹೇಳುತ್ತಾಳೆ. ಆ ಭಿಕ್ಷುಕಿ ತಾಯಿ ಖುಷಿಯಿಂದ ಉಣ್ಣಿಸುತ್ತಾಳೆ. ಆಮೇಲೆ ಅವಳು ಸೀದಾ ಊರ ಹೊರಗೆ ಹೋಗಿ ಸೆರಗು ಹಾಸಿ ಮಗುವನ್ನು ಮಲಗಿಸಿ ಕೈಲಿರೋ ಚಾಕುವಿನಿಂದ ಮಗುವಿನ ಹೊಟ್ಟೆ ಕುಯ್ದು ಅನ್ನ ತಗೊಂಡು
ತಿಂತಾಳೆ-ಅಯ್ಯೋ ಯಾಕಿಂಥ ಕಥೆ ಕಟ್ಟಿದರೋ?
ಎಲ್ಲೆಲ್ಲೂ ರೂಪಾಯಿಗೆ ಕೆ.ಜಿ. ಅಕ್ಕಿಯದೇ ಸುದ್ದಿ. ಇದ್ದುಳ್ಳವರು ದುಡಿಯಲು ಕೂಲಿಯವರು ಸಿಗದಿದ್ದರೆ ಅಂಥ ಭಯಬಿದ್ದಿದ್ದಾರೆ. ಆ ಅಕ್ಕಿ ಆ ಹಾಲು ಆ ಊಟ ಎಲ್ಲ ಸೇರಿ ಇಂಥ ಊರುಗಳಲ್ಲಿ ಕಣ್ಣು ಬಿಡುತ್ತಿರುವ ಮಕ್ಕಳ ಕೈಗೆ ಗಾರೆತೂತು ಬೀಳದಂತೆ ತಡೆಯಲಿ. ಸರಕಾರಿ ಶಾಲೆಗಳು ಜೀವ ಹಿಡಿಯಲಿ. ಶೇ. 82 ಮಾರ್ಕ್ಸ್‌ಕಾರ್ಡಿನವನಿಗೆ ಮಿಲ್ಟ್ರಿ ಬಿಟ್ಟೂ ಬೇರೆ ಉದ್ಯೋಗ ಸಿಗಲಿ.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ