ಶುಕ್ರವಾರ, ಜುಲೈ 19, 2013

ವೀರಮದಕರಿ ಸಿನೆಮಾ ಮತ್ತು ಪ್ರಾಣಿ ಬಲಿ




   -ಅರುಣ್ ಜೋಳದಕೂಡ್ಲಿಗಿ




     ಕನ್ನಡದಲ್ಲಿ ೨೦೦೮ ರಲ್ಲಿ ಶತಮಾನದ ವೀರಮದಕರಿ ಎನ್ನುವ ಸಿನಿಮಾ ಬಂತು. ಅದು ಹಣ ಗಳಿಕೆಯಲ್ಲೂ ಮತ್ತು ಪ್ರಸಿದ್ಧಿಯಲ್ಲೂ ಹೆಸರು ಮಾಡಿತು. ಇದು ತೆಲುಗು ಸಿನಿಮಾದ ರಿಮೇಕ್. ಕನ್ನಡದಲ್ಲಿ ಚಿತ್ರನಟ ಸುದೀಪ್ ಅಭಿನಯಿಸಿ ನಿರ್ದೇಶನವನ್ನೂ ಮಾಡಿದ್ದಾರೆ. ಸಿನಿಮಾ ತೆಲುಗಿನಲ್ಲೂ ಹೆಚ್ಚು ಜನಪ್ರಿಯವಾಯಿತು. ಕಾರಣ ತೆಲುಗು ಚಿತ್ರನಟ ರವಿತೇಜ ಅವರ ವಿಚಿತ್ರ ಮ್ಯಾನರಿಸಮ್ ಮತ್ತು ತುಂಬಾ ಭಿನ್ನವಾದ ಚಂಬಲ್ ಡಕಾಯಿತರನ್ನು ಖಳನಾಯಕರನ್ನಾಗಿ ಚಿತ್ರಿಸಿ ತೀರಾ ಹೊಸತನದಿಂದ ನಿರೂಪಿಸಿದ್ದು .  ಶತಮಾನದ  ವೀರ ಮದಕರಿ ಎನ್ನುವ ಸಿನಿಮಾಕ್ಕೂ ಚಿತ್ರದುರ್ಗದ ಚಾರಿತ್ರಿಕ ವ್ಯಕ್ತಿ ಮದಕರಿ ನಾಯಕನಿಗೂ ಅಂತಹ ಯಾವುದೇ ಸಂಬಂಧವಿಲ್ಲ. ಹಾಗಾಗಿ ಸಿನೆಮಾಕ್ಕೆ ವೀರ ಮದಕರಿ ಎಂಬ ನಾಮಕರಣ ಸಲ್ಲದು ಎನ್ನುವ ವಿವಾದವೂ ಆಯಿತು. ಸಾಹಿತಿ ಬಿ.ಎಲ್. ವೇಣು ಅವರು ಬಗೆಯ ಹೆಸರು ಇಡುವುದನ್ನು ವಿರೋದಿಸಿದರು. ನಾಯಕ ನಟ ಸುದೀಪ್ ತೀರಾ ಉಡಾಫೆಯಿಂದ ಅವರ ವಾದವನ್ನು ತಳ್ಳಿಹಾಕಿದರು. ಹಾಗೆ ನೋಡಿದರೆ ಇದೊಂದು ಸಿನಿ ಮಸಾಲೆಯ ಸಾದಾ ಸೀದಾ ಜನಪ್ರಿಯ ಚಿತ್ರ. ವೀರ ಮದಕರಿಗೆ ಸಂಬಂದಿಸಿದಂತೆ ಇರುವುದು ಒಂದೇ  ಸಾಮ್ಯ ಎಂದರೆ ಮದಕರಿ ನಾಯಕನ ಶೌರ್ಯ ಸಾಹಸವನ್ನು ಸಿನಿಮಾ ನಾಯಕನ ಶೌರ್ಯ ಸಾಹಸದ ಜೊತೆ ಸಮೀಕರಿಸಲಾಗಿದೆ.  ಬಗೆಯ ಸಮೀಕರಣವೇ ಚಿತ್ರದ ಗೆಲುವಿನಲ್ಲಿ ಮುಖ್ಯ ಪಾತ್ರವಹಿಸಿದೆ.
           
         ಮುಖ್ಯವಾಗಿ ಸಿನಿಮಾದ ಹೆಸರು ಮಾತ್ರ ಬೇಡ ನಾಯಕ ಬುಡಕಟ್ಟಿನ ವೀರನನ್ನು ಪ್ರತಿನಿಧಿಸುತ್ತದೆ. ಅಂತೆಯೇ ಈ ಸಿನಿಮಾದ ನಾಯಕ ನಟ ಸುದೀಪ್ ನಾಯಕ ಸಮುದಾಯಕ್ಕೆ ಸೇರಿದವ ಎನ್ನುವುದು. ನಾಯಕ ಸಮುದಾಯದ ಗುರುತಿಗೆ ಗಾದ್ರಿ ಪಾಲನಾಯಕ, ಜಗಲೂರು ಪಾಪಯ್ಯ, ಮುಂತಾದ ಬುಡಕಟ್ಟಿನ ಸಾಂಸ್ಕೃತಿಕ ನಾಯಕರು ಇರುವಂತೆ, ವೀರ ಮದಕರಿನಾಯಕ, ವೀರ ಸಿಂಧೂರ ಲಕ್ಷ್ಮಣ ಮುಂತಾದ ಚಾರಿತ್ರಿಕ ವ್ಯಕ್ತಿಗಳು ಇದ್ದಾರೆ. ಹಾಗೆಯೇ ಇಂದು ಆಧುನಿಕ ಕಾಲದಲ್ಲಿ ಕೆಲವು ನಾಯಕರು ಅಥವಾ ನಾಯಕ ಸಮುದಾಯವನ್ನು ಪ್ರತಿನಿದಿಸುತ್ತಿದ್ದಾರೆ ಅಥವಾ ಸಮುದಾಯದ ಜನರು ಹಾಗೆ ಭಾವಿಸಿಕೊಂಡ ನಾಯಕರು ಇದ್ದಾರೆ. ಅವರಲ್ಲಿ ಸಚಿವ ಶ್ರೀರಾಮುಲು, ರಾಜನಳ್ಳಿ ವಾಲ್ಮೀಕಿ ಸ್ವಾಮೀಜಿ ಮತ್ತು ಕನ್ನಡ ಚಲನಚಿತ್ರ ನಟ ಸುದೀಪ್ ಕೂಡ ಸೇರಿಸಿದ್ದಾರೆ. ಹಾಗಾಗಿ ಸುದೀಪ್ ಅಭಿನಯದ ಸಿನಿಮಾಗಳನ್ನು ನಾಯಕ ಸಮುದಾಯದವರಲ್ಲಿ ಕೆಲವರು ಹೆಚ್ಚು ಅಭಿಮಾನದಿಂದ ನೋಡುತ್ತಾರೆ.

          ಲೇಖನದ ವಿಷಯಕ್ಕೆ ಬರುವುದಾದರೆ, ಕನ್ನಡದಲ್ಲಿ ಚಲನಚಿತ್ರಗಳಿಗೆ ಪ್ರಾಣಿ ಬಲಿ ಕೊಡುವ ಪರಂಪರೆ ಅಷ್ಟಾಗಿಲ್ಲ. ಇದು ತೆಲುಗು ಮತ್ತು ತಮಿಳು ಸಿನಿಮಾ ಪರಂಪರೆಯಲ್ಲಿ ಹೆಚ್ಚಿದೆ. ಚಿರಂಜೀವಿ ಸಿನಿಮಾ ಬಿಡುಗಡೆಯ ದಿನ ನೂರಾರು ಪ್ರಾಣಿ ಬಲಿಯಾಗುವುದು ಸಾಮಾನ್ಯ ಸಂಗತಿಯಾಗಿತ್ತು. ಈಚೆಗೆ ಜೂನಿಯರ್ ಎನ್.ಟಿ.ಆರ್ ಸಿನೆಮಾಗಳಿಗೆ ಬಲಿ ಕೊಡುವ ಆಚರಣೆ ಹೆಚ್ಚಿದೆ. ಅದೀಗ ಹಿಂಸೆಯನ್ನು ಪ್ರತಿನಿಧಿಸುವ ಎಲ್ಲಾ ಸಿನೆಮಾಕ್ಕೂ ವಿಸ್ತರಿಸುತ್ತಿದೆ. ಕನ್ನಡದಲ್ಲಿ ಪ್ರಭಾವವೇ ಪ್ರಾಣಿ ಬಲಿಯ ಪರಂಪರೆಗೆ ಕಾರಣವಾಗಿದೆ. ಸುದೀಪ್ ಅಭಿನಯದ ಸಿನಿಮಾಕ್ಕೂ ಮುಂಚೆ ಕನ್ನಡದ ಸಿನಿಮಾಗಳಿಗೂ ಬಲಿ ನೀಡಿದ ಉದಾಹರಣೆಗಳಿವೆ. ಅವು ಮುಖ್ಯವಾಗಿ ರಕ್ತ ಹಿಂಸೆಯನ್ನು ಪ್ರಧಾನವಾಗಿಸಿಕೊಂಡ ಸಿನಿಮಾಕ್ಕೆ ಮಾತ್ರ ಇದ್ದಂತಿತ್ತು. ಅಥವಾ ಕೆಲವು ನಾಯಕರುಗಳಿಗೆ ಸೀಮಿತವಾಗಿತ್ತು. ಇದು ಪ್ರೇಕ್ಷಕರು ತಮ್ಮ ನೆಚ್ಚಿನ ನಟನಿಗೆ ತೋರುವ ಗೌರವ ಅಥವಾ ಅಭಿಮಾನದ ಸಂಕೇತವೆಂದು ತಿಳಿಯಲಾಗುತ್ತದೆ. ಅಭಿಮಾನವು ಹಿಂಸೆಯ ರೂಪದಲ್ಲಿ ಎನ್ನುವುದು ವಿಶೇಷ.
       ಬಲಿ ಕೊಡುವ ಆಚರಣೆ ಹೊಸದೇನಲ್ಲ. ಈಗಲೂ ಗ್ರಾಮ ದೇವತೆಗಳ ಎದುರು  ಈ ಆಚರಣೆ ಜೀವಂತವಾಗಿದೆ. ಉಚ್ಚಂಗಿ ದುರ್ಗ, ಗೌರಸಂದ್ರದ ಜಾತ್ರೆ, ನಾಯಕನ ಹಟ್ಟಿ, ದಾವಣಗೆರೆ ದುಗ್ಗಮ್ಮ ಮುಂತಾದ ನೂರಾರು ಗ್ರಾಮ ನಗರಗಳಲ್ಲಿ ಬಲಿ ಈಗಲೂ ನಡೆಯುತ್ತಿದೆ.  ಚಲನಚಿತ್ರಕ್ಕೆ  ಬಲಿ ಕೊಟ್ಟ ಆಚರಣೆಯೂ ಸಹ ಇಂತಹದೇ ಆಚರಣೆಯ ಅನುಕರಣೆ. ಬಳ್ಳಾರಿ ಜಿಲ್ಲೆಯ ಕೊಟ್ಟೂರು, ಕೂಡ್ಲಿಗಿ, ಹೊಸಪೇಟೆ ಮುಂತಾದ ಹೈದರಾಬಾದ್ ಕರ್ನಾಟಕದ ಬಹುಪಾಲು ಹಳ್ಳಿ ಮತ್ತು ನಗರಗಳಲ್ಲಿ ವೀರ ಮದಕರಿ  ಸಿನಿಮಾಕ್ಕೆ ಪ್ರಾಣಿ ಬಲಿ ಕೊಡುವ ಆಚರಣೆ ನಡೆಯಿತು. ಮುಖ್ಯವಾಗಿ ಬಲಿಕೊಟ್ಟ ಸಮುದಾಯ ಬೇಡನಾಯಕ. ಪ್ರಾಣಿ ಬಲಿಯ ಸ್ವರೂಪ ಗ್ರಾಮದೇವತೆಗೆ ಕೊಡುವ ಪ್ರಾಣಿ ಬಲಿಯನ್ನೇ ಹೋಲುತ್ತಿತ್ತು.

      ಕೊಟ್ಟೂರಿನಲ್ಲಿ ಟ್ರಾಕ್ಟರ್ ನಲ್ಲಿ ವೀರಮದಕರಿ ಸಿನೆಮಾ ಪೋಷ್ಟರ್ ಇಟ್ಟುಕೊಂಡು, ಮುಂದೆ ಮೂರ್ನಾಲ್ಕು ಕುರಿಗಳಿಗೆ ಬೇವಿನ ಸೊಪ್ಪು ತೊಡಿಸಿ ಹಿಡಿದಿದ್ದರು. ಹತ್ತಾರು ಯುವಕರು ರೋಷಾವೇಷದಿಂದ ಕುಣಿಯುತ್ತಿದ್ದರೆ, ಉರಿಮೆ, ಹಲಗೆ ಬಾರಿಸುವವರು ಹುರುಪಿನಲ್ಲಿದ್ದರು. ಸುತ್ತುವರಿದು ಜನವೋ ಜನ. ಕೊಟ್ಟೂರಿಗೆ ಬಂದ ಸುತ್ತಮುತ್ತಲ ಹಳ್ಳಿಗರು ಇದನ್ನು ಕುತೂಹಲದಿಂದ ನೋಡುತ್ತಿದ್ದರು. ಕೆಲವರು ನೋಡು ನೋಡುತ್ತಲೇ ಮೈದುಂಬಿಕೊಂಡು ಮೆರವಣಿಗೆಯಲ್ಲಿ ತಾವೂ ಸೇರಿಕೊಂಡರು. ಕುಣಿವವರು ಹಣೆಗೆ ದೊಡ್ಡದಾಗಿ ಕುಂಕುಮ ಹಾಕಿದ್ದರು. ಕುಣಿದು ಸುಸ್ತಾಗಿ ದಣಿವಾರಿಸಿಕೊಳ್ಳುತ್ತಿದ್ದ ರಾಮಪ್ಪ ಎನ್ನುವವರನ್ನು ಮಾತನಾಡಿಸಿದಾಗ ದಿನ ಬಲಿಕೊಡುತ್ತಿರುವವರು ಕೊಟ್ಟೂರಿನ ಸಮೀಪದ ಸೀರನಹಳ್ಳಿ ನಾಯಕರು ಎಂಬ ಉತ್ತರ ಬಂತು. ಅಂದರೆ ಒಂದೊಂದು ಊರಿನವರು ಒಂದೊಂದು ದಿನ ಬಲಿ ಕೊಡುತ್ತಿದ್ದರು ಎಂದಂತಾಯಿತು.


   ಸಂಗತಿಯನ್ನು ಇನ್ನಷ್ಟು ಜನರಲ್ಲಿ ವಿಚಾರಿಸಿದಾಗ ಬಲಿಯ ಇನ್ನೊಂದು ಮುಖ ತಿಳಿಯಿತು. ಹೀಗೆ ಬಲಿ ಕೊಟ್ಟದ್ದು ಬೇಡ ಸಮುದಾಯದವರು. ಕೊಟ್ಟೂರಿನಲ್ಲಿ ಬೇಡ ಸಮುದಾಯದ ಸಂಖ್ಯೆ ಹೆಚ್ಚಿದೆ. ಅಂತೆಯೇ ಸುತ್ತಮುತ್ತಲ ಹಳ್ಳಿಗಳ ಬೇಡರಿಗೆ ಮೇಲು ಜಾತಿಗಳಿಂದ ಯಾವುದೇ ತೊಂದರೆಗಳು ಸಂಭವಿಸಿದಲ್ಲಿ, ಕೊಟ್ಟೂರಿನ ಬೇಡರು ಅವರ ಸಹಾಯಕ್ಕೆ ನಿಂತು ಆಯಾ ಊರಿನ ಮೇಲು ಜಾತಿಯವರ ಕಿರುಕುಳ ತಪ್ಪಿಸುತ್ತಾರೆ. ಇದರಿಂದಾಗಿ ಆಯಾ ಊರಿನ ಬೇಡರಿಗೆ ಕೊಟ್ಟೂರಿನ ಬೇಡರು ಆಪದ್ಭಾಂದವರಂತೆ ಕಾಣುತ್ತಾರೆ.

  ಇಲ್ಲಿ ಆಯಾ ಊರುಗಳ ಸ್ಥಳೀಯ ಸಂಘರ್ಷವನ್ನು ವೀರ ಮದಕರಿ ಸಿನೆಮಾ ಒಂದು ನೆಲೆಯಲ್ಲಿ ಪ್ರತಿನಿಧಿಸುತ್ತದೆ. ಸಿನೆಮಾದಲ್ಲಿ ಊರನ್ನು ಆಳುವ ಕ್ರೂರ ಮನೆತನವನ್ನು ವೀರ ಮದಕರಿ ನಾಶ ಮಾಡುತ್ತಾನೆ. ಹಾಗಾಗಿ ಬೇಡರು ವೀರಮದಕರಿ ಸಿನೆಮಾಕ್ಕೆ ಬಲಿಕೊಡುವ ಮೂಲಕ ನಾವೂ ಸಿನೆಮಾದಲ್ಲಿ ಸುದೀಪ್ ಮಟ್ಟ ಹಾಕಿದಂತೆ, ನಮ್ಮನ್ನು ಯಾರಾದರೂ ಕೆಣಕಿದರೆ ನಾವೂ ವೀರ ಮದಕರಿಗಳಾಗುತ್ತೇವೆ ಎನ್ನುವ ಸಂದೇಶ ರವಾನೆ ಮಾಡಲು ಬಲಿ ಕೊಡುತ್ತಿದ್ದರು ಎನ್ನುವಂತಿತ್ತು. ಅದರಲ್ಲೂ ಸಿನೆಮಾದಲ್ಲಿ ಕ್ರೂರಿಗಳನ್ನು ಮಟ್ಟಹಾಕುವ ನಾಯಕ ಸುದೀಪ್ ಕೂಡ ನಾಯಕ ಸಮುದಾಯಕ್ಕೆ ಸೇರಿದವನು ಎನ್ನುವ ಕಾಕತಾಳೀಯ ಸಂಗತಿಯೂ ಇವರನ್ನು ಪ್ರೇರೇಪಿಸಿದಂತಿದೆ.

  ಅಂತೆಯೇ ಕೊಟ್ಟೂರಿನಲ್ಲಿ ಬಲಿಕೊಟ್ಟು ಇಲ್ಲಿಯೇ ಅಡುಗೆ ಮಾಡಿ ಕುಡಿದು ಕುಣಿದು ಕುಪ್ಪಳಿಸಿ ತಮ್ಮ ತಮ್ಮ ಊರಿಗೆ ಮರಳುತ್ತಿದ್ದರು. ಇದರ ಹಿಂದೆ ಕೊಟ್ಟೂರಿನ ಬೇಡರ ಮನವೊಲಿಸುವ ಮತ್ತು ಸಂತೈಸುವ ಆಯಾಮವೂ ಇತ್ತು. ಹೀಗೆ ಬಲಿ ಕೊಟ್ಟ ಹಳ್ಳಿಗರು ತಮ್ಮ ತಮ್ಮ ಊರುಗಳಿಗೆ ತೆರಳಿ ಎಂದಿನಂತೆಯೇ ತಮ್ಮ ಚಟುವಟಿಕೆಗಳಲ್ಲಿ ಉತ್ಸಾಹದಿಂದ ತೊಡಗಿಕೊಳ್ಳುತ್ತಿದ್ದರು. ನಮಗೆ ಬೆಂಬಲವಾಗಿ ಕೊಟ್ಟೂರಿನ ಬೇಡರು ಇದ್ದಾರೆ ಎಂಬ ಸಂದೇಶವನ್ನು ಊರಿನ ಮೇಲು ಜಾತಿಗಳಿಗೆ ತಲುಪಿಸಿ ಒಳಗೊಳಗೆ ಖುಷಿಗೊಳ್ಳುತ್ತಿದ್ದರು. ಒಂದು ಬಗೆಯ ಚೈತನ್ಯವನ್ನು ಪಡೆಯುತ್ತಿದ್ದರು.
  ವೀರ ಮದಕರಿ ಸಿನೆಮಾ ಇದ್ದದ್ದು ಕೊಟ್ಟೂರಿನ ರೇಣುಕಾ ಟಾಕೀಸಿನಲ್ಲಿ. ಈ ಟಾಕೀಸು ಜಂಗಮರ ಒಡೆತನಕ್ಕೆ ಸೇರಿದ್ದು. ಜನರು ಹೀಗೆ ಬಲಿ  ಕೊಡುವುದು, ಟಾಕೀಸಿನ ಆವರಣದಲ್ಲಿ ರಕ್ತ ಚೆಲ್ಲಾಡುವುದು ಅವರಿಗೆ ಸಹಿಸದ ಸಂಗತಿಯಾಗಿತ್ತು. ಇಲ್ಲಿ ಬಲಿ ಕೊಡಬೇಡಿ ಎಂದರೆ ಈ ಹುರುಪಿನ ಜನರು ದಾಂದಲೆ ಮಾಡುವ ಅಪಾಯವೂ ಇದ್ದದ್ದನ್ನು ಗಮನಿಸಿ ಪೋಲೀಸರ ಗಮನಕ್ಕೆ ತಂದು ಮೌನವಾಗಿದ್ದರು.

  ಹೀಗೆ ವೀರಮದಕರಿ ಸಿನೆಮಾಕ್ಕೆ ಬಲಿಕೊಡುವ ಆಚರಣೆಯ ಹಿಂದೆ, ಜಾತಿಕಲಹದ ಹಿನ್ನೆಲೆ ಇದೆ. ಅಂತೆಯೇ ಹಳ್ಳಿಗಳು ಹೊಸ ಮಾದ್ಯಮದಿಂದಲೂ ಹೇಗೆ ಬದುಕಿಗೆ ನೆರವನ್ನು ಪಡೆಯುತ್ತವೆ ಎನ್ನುವುದನ್ನೂ ಇದು ತೋರುತ್ತಿದೆ. ತಮ್ಮ ತಮ್ಮ ದೈನಂದಿನ ಚಟುವಟಿಕೆಗಳೊಂದಿಗೆ ಸಿನೆಮಾವೊಂದನ್ನು ಬೆಸೆದುಕೊಳ್ಳುತ್ತಿರುವ ಮಾದರಿ ಮೂಲತಃ ಆದ್ರ ಮತ್ತು ತಮಿಳುನಾಡಿನ ಪ್ರಭಾವದಿಂದ ಬಂದದ್ದು. ಕನ್ನಡದ ಸಂದರ್ಭದಲ್ಲೂ ಇಂತಹ ಘಟನೆಗಳ ಮೂಲಕ ಆಗಾಗ ಸಿನೆಮಾ ಜತೆಗಿನ ಜನರ ಹೊಸ ಬಗೆಯ ಸಂಬಂಧಗಳು ಏರ್ಪಡುತ್ತಿರುತ್ತವೆ.

  ಜಾನಪದವೆಂದರೆ ಹಳೆಯದು ಎನ್ನುವ ಗ್ರಹಿಕೆಯಿಂದ ಹೊರ ಬಂದಾಗ ಮಾತ್ರ ಇಂತಹ ಘಟನೆಗಳೂ ಜಾನಪದ ಪರಂಪರೆಯ ಪ್ರಭಾವದ ಕೂಸುಗಳಂತೆ ಕಾಣುತ್ತವೆ. ಇದನ್ನು ತಪ್ಪು ಸರಿ ಎನ್ನುವ ಕಪ್ಪು ಬಿಳುಪಿನ ವಿವರಣೆಯ ಆಚೆ ನಿಂತು ಆಯಾ ಸಮುದಾಯಗಳ ಅಗತ್ಯ ಮತ್ತು ಒಳ ತುಡಿತಗಳನ್ನು ಅರ್ಥಮಾಡಿಕೊಳ್ಳುವ ನೆಲೆಯಲ್ಲಿ ನೋಡಬೇಕಿದೆ. ಇಂತಹ ಹತ್ತಾರು ಸಂಗತಿಗಳ ಒಳಗಿಂದ ಹೊಸ ಜಾನಪದದ ರೂಪಗಳು ಮೈ ಪಡೆಯುವುದನ್ನು ಸೂಕ್ಷ್ಮವಾಗಿ ಗಮನಿಸಬೇಕಿದೆ.









1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಲೇಖನ ಚೆನ್ನಾಗಿದೆ