ಮಂಗಳವಾರ, ಜುಲೈ 23, 2013

ಅಲೆಮಾರಿಯ ಅಂತರಂಗ

ನೆಲೆಯಿಲ್ಲದ ಅಲೆಮಾರಿಗಳು

 


ಜಿ.ಪಿ.ಬಸವರಾಜು


   ‘ಇಷ್ಟು ವಿಶಾಲವಾದ ಈ ಭೂಮಿಯ ಮೇಲೆ ನನ್ನ ಅಪ್ಪನಿಗೆ ಎಲ್ಲಿಯೂ ಒಂದು ಅಂಗೈ ಅಗಲ ಜಾಗ ಇರಲಿಲ್ಲ.’
ಇಡೀ ಭೂಮಂಡಲವನ್ನೇ ನುಂಗಲು ಹೊರಟಿರುವ ಭೂಗಳ್ಳರನ್ನು ನಿತ್ಯವೂ ನೋಡುತ್ತಿರುವ ನಮ್ಮಂಥವರಿಗೆ ಈ ಒಂದು ಮಾತು ಹೇಗೆ ಅರ್ಥವಾಗುತ್ತದೋ ಹೇಳುವುದು ಕಷ್ಟ. ನನಗಂತೂ ಈ ಮಾತಿನಲ್ಲಿ ಯಾವುದೇ ಉತ್ಪ್ರೇಕ್ಷೆ ಕಾಣಿಸಲಿಲ್ಲ. ಯಾಕೆಂದರೆ ಈ ಮಾತು ಕಾಣಿಸಿಕೊಂಡಿರುವುದು, ಬರಹವನ್ನು ಕೇವಲ ಕಲೆಯ ಮಾಧ್ಯಮ ಎಂದು ಭಾವಿಸಿರುವ ಲೇಖಕನ ಕೃತಿಯಲ್ಲಿ ಅಲ್ಲ. ನೆಲೆಯೇ ಇಲ್ಲದ, ಹೇಳಿಕೊಳ್ಳಲು ಒಂದು ಊರೇ ಇಲ್ಲದ ಅಲೆಮಾರಿ ಸಮುದಾಯದಿಂದ ಅದು ಹೇಗೋ ಅಕ್ಷರ ಲೋಕಕ್ಕೆ ಬಂದು, ತಮ್ಮ ನೋವಿನ ಅಭಿವ್ಯಕ್ತಿಗಾಗಿ ಅಕ್ಷರವನ್ನು ಹಿಡಿದಿರುವ ಕುಪ್ಪೆ ನಾಗರಾಜ್ (ಮೈಸೂರು ಜಿಲ್ಲೆಯವರು) ಎಂಬ ನನ್ನ ಮಿತ್ರರು ಪ್ರಕಟಿಸಿರುವ ‘ಅಲೆಮಾರಿಯ ಅಂತರಂಗ’ ಕೃತಿಯಲ್ಲಿ. ಅವರ ಕೃತಿಯ ಮೊದಲ ವಾಕ್ಯವೇ ಇದು. ಈ ಮಾತು ನನ್ನನ್ನು ನಡುಗಿಸಿತು.

ಇವತ್ತಿಗೂ ಅಂಗೈಯಗಲ ಜಾಗವಿಲ್ಲದ ಕುಟುಂಬಗಳು ಕರ್ನಾಟಕದಲ್ಲಿ ಲೆಕ್ಕಕ್ಕೆ ಸಿಕ್ಕದಷ್ಟು ಇವೆ. ದಲಿತರು, ಹಿಂದುಳಿದವರು, ಅಲೆಮಾರಿಗಳು, ಅರೆ ಅಲೆಮಾರಿಗಳು, ಆದಿವಾಸಿಗಳು ಹೀಗೆ ಎಷ್ಟೋ ಸಮುದಾಯಗಳ ಸಾವಿರಾರು ಕುಟುಂಬಗಳಿಗೆ ಇವತ್ತಿಗೂ ನೆಲವಾಗಲಿ, ನೆಲೆಯಾಗಲೀ ಇನ್ನೂ ದಕ್ಕಿಯೇ ಇಲ್ಲ. ಈ ಕೃತಿಯನ್ನು ಓದುತ್ತ ಹೋದರೆ ಬೆಚ್ಚಿಬೀಳಿಸುವ ಇಂಥ ಹಲವಾರು ಸಂಗತಿಗಳಿವೆ.

‘ಸತ್ತ ಶವಗಳನ್ನು ಹೂಳಲು ನಮ್ಮಂತಹ ಅಲೆಮಾರಿ ಸಮುದಾಯಗಳಿಗೆ ನಿಜಕ್ಕೂ ಮೂರು ಅಡಿ ಆರು ಅಡಿ ಜಾಗ ಕೂಡಾ ಸಿಗೋದು ಕಷ್ಟಾನೆ. ಅವರಿವರನ್ನು ಬೇಡಿ ಶವಸಂಸ್ಕಾರ ಮಾಡಬೇಕಾದ ಪರಿಸ್ಥಿತಿ.’

ತಮ್ಮ ತಾಯಿ ತೀರಿಹೋದ ಸಂದರ್ಭದಲ್ಲಿ ಈ ಮೂರು ಅಡಿ ಆರು ಅಡಿ ಜಾಗಕ್ಕಾಗಿ ನಾಗರಾಜ್ ಅವರ ಕುಟುಂಬ ಪರದಾಡಿದ ಸನ್ನಿವೇಶವನ್ನು ವರ್ಣಿಸುವ ಅಧ್ಯಾಯ ಈ ಪರಿಸ್ಥಿತಿಯನ್ನು ತೆರೆದಿಡುತ್ತದೆ.

ಇವತ್ತು ಭಾರತದಲ್ಲಿ ಅಲೆಮಾರಿ ಬುಡಕಟ್ಟಿಗೆ ಸೇರಿದವರ ಸಂಖ್ಯೆ 14 ಕೋಟಿ ಇದೆ. ಇವರಲ್ಲಿ ಶೇ 31ರಷ್ಟು ಕುಟುಂಬಗಳಿಗೆ ನೆತ್ತಿಯ ಮೇಲೆ ಸೂರಿಲ್ಲ; ಶೇ 62ರಷ್ಟು ಜನರಿಗೆ ಮತ ಚಲಾಯಿಸುವ ಹಕ್ಕಿಲ್ಲ: ಶೇ 51ರಷ್ಟು ಜನರಿಗೆ ಶವಸಂಸ್ಕಾರಕ್ಕೆ ಜಾಗವಿಲ್ಲ. ಕರ್ನಾಟಕದಲ್ಲಿ ಅಲೆಮಾರಿ, ಅರೆ ಅಲೆಮಾರಿ ಎಂದು ಹೇಳಬಹುದಾದ ಸಮುದಾಯಗಳ ಸಂಖ್ಯೆ ಸುಮಾರು 56. ಇವುಗಳಲ್ಲಿ ಅರ್ಧದಷ್ಟು ಸಮುದಾಯಗಳನ್ನು ಮಾತ್ರ ಗುರುತಿಸಲಾಗಿದೆ. ಉಳಿದ ಸಮುದಾಯಗಳನ್ನು ಗುರುತಿಸುವ ಕೆಲಸವೂ ನಡೆದಿಲ್ಲ. ಇದು ಯಾವುದನ್ನೂ ಲೆಕ್ಕಕ್ಕೆ ತೆಗೆದುಕೊಳ್ಳದೆ ತಮ್ಮ ಬದುಕನ್ನು ಹುಡುಕಿ ಅಲೆಯುತ್ತಿರುವ ಈ ಸಮುದಾಯಗಳ ಬಗ್ಗೆ ನಾವೆಷ್ಟು ಜನ ತಲೆಕೆಡಿಸಿಕೊಂಡಿದ್ದೇವೆ?

ಇವರಲ್ಲಿ ಎಷ್ಟು ಜನ ಎರಡು ಹೊತ್ತು ಊಟಮಾಡುತ್ತಾರೆ, ಎಷ್ಟು ಜನ ಭಿಕ್ಷುಕರಾಗಿ ಅರೆಹೊಟ್ಟೆಯಲ್ಲಿ ಅಲೆಯುತ್ತಿದ್ದಾರೆ, ಮಳೆಗಾಳಿಗಳನ್ನು ಲೆಕ್ಕಿಸದೆ ಎಷ್ಟು ಜನ ಬಯಲಲ್ಲಿ ಹಗಲು ರಾತ್ರಿಗಳನ್ನು ಕಳೆಯುತ್ತಾರೆ ಇತ್ಯಾದಿ ಅಂಕೆಸಂಖೆಗಳು ದಾಖಲೆಯ ಪುಸ್ತಕಗಳಲ್ಲಿ ಇರಬಹುದು. ಆದರೆ ಈ ಅಂಕೆಸಂಖೆಗಳಾದರೂ ಎಷ್ಟು ಅಧಿಕೃತ, ಎಷ್ಟು ವೈಜ್ಞಾನಿಕ? ಈ ಸಮುದಾಯಗಳ ಜನಗಣತಿಯನ್ನು ವೈಜ್ಞಾನಿಕವಾಗಿ ಮಾಡಿ, ಸರ್ಕಾರದ ಸವಲತ್ತುಗಳು ಇವರಿಗೆ ತಲುಪುವಂತೆ ಮಾಡಿ ಎಂಬ ನ್ಯಾಯಬದ್ಧ ಬೇಡಿಕೆಯನ್ನು ‘ಅಲೆಮಾರಿ ಬುಡಕಟ್ಟು ಮಹಾಸಭಾ’, ‘ಕರ್ನಾಟಕ ರಾಜ್ಯ ಅಲೆಮಾರಿ, ಅರೆ ಅಲೆಮಾರಿ ಒಕ್ಕೂಟ’ ಮೊದಲಾದ ಸಂಘಟನೆಗಳು ಕರ್ನಾಟಕ ಸರ್ಕಾರದ ಮುಂದಿರಿಸಿವೆ. ಡಾ.ಕೆ.ಎಂ.ಮೈತ್ರಿ, ಕೆ.ಭಾಸ್ಕರ್ದಾಸ್ ಎಕ್ಕಾರು, ಡಾ.ಬಾಲಗುರುಮೂರ್ತಿ, ಕುಪ್ಪೆ ನಾಗರಾಜ್ ಮೊದಲಾದವರು ಇದಕ್ಕಾಗಿಯೇ ಹೋರಾಟವನ್ನು ನಡೆಸುತ್ತ ಬಂದಿದ್ದಾರೆ. ಆದರೆ ಸರ್ಕಾರಗಳು ಎಷ್ಟು ಸ್ಫಂದಿಸಿವೆ?

ಹಾವನೂರು ಆಯೋಗವನ್ನು ರಚಿಸಿ, ಆ ವರದಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತಂದು ದೇವರಾಜ ಅರಸು ಅವರು ದೊಡ್ಡ ಕ್ರಾಂತಿಯನ್ನೇ ಮಾಡಿದರು ಎಂಬುದು ನಿಜ. ಆದರೆ ಹಾವನೂರು ಆಯೋಗ ಈ ಅಲೆಮಾರಿ ಸಮುದಾಯಗಳನ್ನು ಸರಿಯಾದ ರೀತಿಯಲ್ಲಿ ಅಧ್ಯಯನ ಮಾಡಲಿಲ್ಲ. ಅವರಿಗೆ ಸಿಕ್ಕಬೇಕಾದ ಸಾಮಾಜಿಕ ನ್ಯಾಯ ದಕ್ಕುವಂತೆ ಮಾಡಲಿಲ್ಲ. ಅಲೆಮಾರಿಗಳು ಹಾವನೂರು ವರದಿಯನ್ನು ‘ಮರಣಶಾಸನ’ ಎಂದು ಕರೆಯುತ್ತಾರೆ. ಅದಕ್ಕೆ ಕಾರಣವೂ ಇದೆ. ಹಾವನೂರು ಆಯೋಗಕ್ಕಿಂತ ಮೊದಲು ಅಲೆಮಾರಿ ಸಮುದಾಯದ ಸಣ್ಣಪುಟ್ಟ ಜಾತಿಗಳನ್ನು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಗುಂಪಿಗೆ ಸೇರಿಸಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸವಲತ್ತುಗಳು ಈ ಅಲೆಮಾರಿ ಸಮುದಾಯಗಳಿಗೂ ಸಿಕ್ಕುವ ವ್ಯವಸ್ಥೆಯಿತ್ತು. ಹಾವನೂರು ಆಯೋಗ ಈ ಪಟ್ಟಿಯನ್ನು ರದ್ದುಪಡಿಸಿ, ಈ ಪಟ್ಟಿಯಲ್ಲಿದ್ದ ಅಲೆಮಾರಿ ಸಮುದಾಯದ ಎಲ್ಲ ಜಾತಿಗಳನ್ನು ಹಿಂದುಳಿದಳಿದ ಬುಡಕಟ್ಟುಗಳ ಗುಂಪಿಗೆ ಸೇರಿಸಿತು. ಇದರಿಂದಾಗಿ ಈ ಜಾತಿಗಳಿಗೆ ಎಸ್.ಸಿ./ ಎಸ್.ಟಿ.ಯ ಪಟ್ಟಿಯಲ್ಲಿ ಸಿಕ್ಕುತ್ತಿದ್ದ ಎಲ್ಲ ಸವಲತ್ತುಗಳು ತಪ್ಪಿಹೋದವು. ಆ ಅನ್ಯಾಯವನ್ನು ಸರಿಪಡಿಸುವ ದೃಷ್ಟಿಯಿಂದಲಾದರೂ ಕರ್ನಾಟಕ ಸರ್ಕಾರ ರಾಜ್ಯದಲ್ಲಿರುವ ಅಲೆಮಾರಿ ಅರೆ ಅಲೆಮಾರಿ ಸಮುದಾಯಗಳ ಸಾಮಾಜಿಕ, ಆರ್ಥಿಕ, ಶೈಕ್ಷಣಿಕ, ರಾಜಕೀಯ ಸ್ಥಿತಿಗತಿಗಳನ್ನು ವೈಜ್ಞಾನಿಕ ಅಧ್ಯಯನಕ್ಕೆ ಒಳಪಡಿಸಬೇಕು.

ಊರಿಲ್ಲದ, ಬೇರಿಲ್ಲದ, ಹೆಸರಿಲ್ಲದ ಈ ಸಮುದಾಯಗಳ ಮನಃಸ್ಥಿತಿ ಈಗ ಹೇಗಿರಬೇಡ?
ದೊಂಬಿದಾಸರು, ಪಂಜಿನ ದಾಸಯ್ಯಗಳು, ಕಿಳ್ಳೇಕ್ಯಾತರು, ಹಕ್ಕಿಪಿಕ್ಕರು, ಚಂದದಾಸರು, ಜೋಷಿಗಳು, ಹಗಲುವೇಷದವರು, ರಾಜಗೊಂಡರು, ಹೆಳವರು, ಬುಡ್ಗಜಂಗಮರು, ಕುರುತೋಕಯ್ಯಗಳು, ಬುಡುಬುಡಿಕೆಯವರು, ಕೋಲೆಬಸವನ್ನಾಡಿಸುವವರು, ಸುಡುಗಾಡು ಸಿದ್ಧರು, ಗೊರವಯ್ಯಗಳು, ಮೊಂಡರು, ಮೋಡಿಮಲ್ಲರು, ಕಿನ್ನರಿ ಜೋಗಯ್ಯನವರು ಇನ್ನೂ ಅನೇಕ ಸಮುದಾಯಗಳು. ಈ ಹೆಸರುಗಳೇ ಅವುಗಳ ಕಸುಬನ್ನೂ ಸೂಚಿಸುವಂತಿವೆ.

ಒಂದು ಕಾಲಕ್ಕೆ ಈ ಸಮುದಾಯಗಳೆಲ್ಲ ತಮ್ಮ ಕುಲಕಸುಬುಗಳನ್ನೇ ನಂಬಿ ಬದುಕುತ್ತಿದ್ದವು. ಗ್ರಾಮೀಣ ಭಾರತದಲ್ಲಿ ಈ ಕಸುಬುಗಳಿಗೆ ಮಾನ್ಯತೆಯೂ ಇತ್ತು. ಈ ಮಾನ್ಯತೆಯೇ ಕಾರಣವಾಗಿ ಅಲೆಮಾರಿ ಸಮುದಾಯಗಳು ಸೂರಿಲ್ಲದಿದ್ದರೂ, ಊರಿಲ್ಲದಿದ್ದರೂ, ಹೊಟ್ಟೆತುಂಬಿಸಿಕೊಂಡು ಬದುಕುತ್ತಿದ್ದವು; ಊರಿಂದ ಊರಿಗೆ ಅಲೆಯುತ್ತಿದ್ದವು. ಹೆಳವರು, ತಾವು ಸುತ್ತುತ್ತಿದ್ದ ಊರುಗಳ ಪ್ರತಿಕುಟುಂಬದ ವಂಶವೃಕ್ಷವನ್ನು ಅತ್ಯಂತ ಶ್ರದ್ಧೆಯಿಂದ ತಮ್ಮಲ್ಲಿ ಇಟ್ಟುಕೊಂಡಿರುತ್ತಿದ್ದರು. ಗಿಡಮೂಲಿಕೆಗಳು, ಔಷಧಿಗಳು, ಬಗೆಬಗೆಯ ಚಿಕಿತ್ಸೆಗಳು ಹೀಗೆ ಸಕಲ ವೈದ್ಯವಿದ್ಯೆಯನ್ನು ಬಲ್ಲ ಅಲೆಮಾರಿ ಸಮುದಾಯಗಳಿದ್ದವು. ರಾಜ ಮಹಾರಾಜರಿಗೆ ವೈದ್ಯರಾಗಿದ್ದ ರಾಜಗೊಂಡರಿದ್ದರು. ಕವಡೆಯನ್ನು ಹಾಕಿ ಶಾಸ್ತ್ರ ಹೇಳುವವರಿದ್ದರು. ಅಂತ್ರ, ಮಂತ್ರ, ತಾಯಿತಗಳನ್ನು ಬಲ್ಲ ಸಮುದಾಯಗಳಿದ್ದವು.

ಜಾನಪದ ಸಾಹಿತ್ಯವನ್ನು ತಮ್ಮ ನೆನಪಿನ ಸಂಪುಟಗಳಲ್ಲಿ ಭದ್ರವಾಗಿರಿಸಿಕೊಂಡು ಹಾಡುವ, ಕತೆಹೇಳುವ, ನಾಟಕ ಪ್ರದರ್ಶಿಸುವ, ನಾಟಕ ಕಲಿಸುವ ಪ್ರತಿಭಾವಂತರಿದ್ದರು. ಹಲಬಗೆಯ ವಾದ್ಯಗಳನ್ನು ನುಡಿಸುವ ಕಲಾಕಾರರಿದ್ದರು. ಸಣ್ಣಪುಟ್ಟ ಪ್ರಾಣಿಗಳನ್ನು, ಪಕ್ಷಿಗಳನ್ನು, ಅಳಿಲು ಆಮೆಗಳನ್ನು, ಮೀನುಗಳನ್ನು ಅತ್ಯಂತ ಕುಶಲತೆಯಿಂದ ಬೇಟೆಯಾಡಬಲ್ಲ ಪರಿಣತರಿದ್ದರು. ಅವುಗಳ ಚಲನವಲನ, ಜೀವನಕ್ರಮ ಇತ್ಯಾದಿ ಸಂಗತಿಗಳನ್ನು ಅವರು ನಿಖರವಾಗಿ ತಿಳಿದಿದ್ದರು. ಹಲವಾರು ಕೌಶಲಗಳಲ್ಲಿ (ಬಲೆ ನಿರ್ಮಾಣ, ವಾದ್ಯಗಳ ರಿಪೇರಿ ಇತ್ಯಾದಿ) ಪ್ರತಿಭೆಯನ್ನು ತೋರಬಲ್ಲ ಅಲೆಮಾರಿಗಳಿದ್ದರು. ತಮ್ಮ ಈ ಕಸುಬುಗಳನ್ನು, ಕಲೆ, ಕೌಶಲಗಳನ್ನು ನಂಬಿಯೇ ಅವರು ಊರಿಂದ ಊರಿಗೆ ಪಯಣಿಸುತ್ತಿದ್ದರು. ಅದೊಂದು ನಿರಂತರ ಪಯಣ; ಎಂದೆಂದೂ ಮುಗಿಯದ ಪಯಣ. ಅದರ ಅರಿವಿದ್ದೂ ಅವರು ಅಖಂಡ ಆತ್ಮವಿಶ್ವಾಸವನ್ನು ಪಡೆದಿದ್ದರು. ಅನೇಕ ಊರುಗಳನ್ನು, ಪ್ರದೇಶಗಳನ್ನು, ಮಳೆಬೆಳೆಯ ಪರಿಸ್ಥಿತಿಯನ್ನು, ಪ್ರಾಣಿಪಕ್ಷಿಗಳನ್ನು ಅವರು ಬಲ್ಲವರಾಗಿದ್ದರು. ಜನರನ್ನು ರಂಜಿಸುವುದು ಮಾತ್ರವಲ್ಲ, ಸಮಾಜಕ್ಕೆ ತಮ್ಮ ಕಥನಗಳ ಮೂಲಕ ನೀತಿಪಾಠವನ್ನು ಅವರು ಬೋಧಿಸುತ್ತಿದ್ದರು. ಸಮಾಜದ ಮುನ್ನಡೆಗೆ ಮಹತ್ವದ ಕೊಡುಗೆಯನ್ನು ನೀಡುತ್ತಿದ್ದರು.

ಇವತ್ತು ಗ್ರಾಮಭಾರತ ಬದಲಾಗಿದೆ. ಆಧುನಿಕ ವಿದ್ಯೆ ಹಳೆಯ ವಿದ್ಯೆಗಳನ್ನು ಪಕ್ಕಕ್ಕೆ ತಳ್ಳಿದೆ. ಆಧುನಿಕ ಬದುಕಿನ ರುಚಿ, ಅಭಿರುಚಿ, ಆದ್ಯತೆಗಳೇ ಬೇರೆಯಾಗಿವೆ. ಜೆಟ್ ವಿಮಾನದ ವೇಗದಲ್ಲಿ ಓಡುತ್ತಿರುವ ಆಧುನಿಕ ಮನುಷ್ಯ ಎಲ್ಲಿಗೆ ಓಡುತ್ತಿದ್ದಾನೆ? ಅವನ ಗುರಿ ಯಾವುದು?-ಇಂಥ ಪ್ರಶ್ನೆಗಳಿಗೆ ಉತ್ತರಗಳಿಲ್ಲ. ಈ ಬದಲಾದ ಪರಿಸ್ಥಿತಿಯಲ್ಲಿ ಅಲೆಮಾರಿಗಳು ದಿಕ್ಕೆಟ್ಟಿದ್ದಾರೆ. ಪಾರಂಪರಿಕ ಜ್ಞಾನ, ತಂತ್ರ, ತಂತ್ರಜ್ಞಾನಗಳು ಅವರಲ್ಲಿ ಈಗಲೂ ಇವೆ. ಆದರೆ ಅವುಗಳನ್ನು ಮಾನ್ಯ ಮಾಡುವವರಿಲ್ಲ. ಇಂಥ ಹೊತ್ತಿನಲ್ಲಿ ದೇಶವನ್ನು ಸುತ್ತಿಯೇ ಅನ್ನವನ್ನು ಸಂಪಾದಿಸುವುದು ದುಸ್ತರವಾಗಿದೆ. ಹಾಗಾದರೆ ಅವರು ಆತ್ಮವಿಶ್ವಾಸದಿಂದ ಬದುಕುವುದು ಹೇಗೆ? ನಾವು ಒಪ್ಪಿಕೊಂಡಿರುವ ಪ್ರಜಾಪ್ರಭುತ್ವ ವ್ಯವಸ್ಥೆ ಈ ಸಮುದಾಯಗಳನ್ನು ಮುಖ್ಯವಾಹಿನಿಗೆ ತರಬೇಕಾಗಿದೆ; ಅವರಲ್ಲಿರುವ ಜ್ಞಾನ ಮತ್ತು ಕುಶಲತೆಗಳನ್ನು ಸೂಕ್ತವಾಗಿ ಬಳಸಿಕೊಳ್ಳಬೇಕಾಗಿದೆ; ಅವರಿಗೂ ಒಂದು ನೆಲೆಯನ್ನು ಕಲ್ಪಿಸಬೇಕಾಗಿದೆ. ಅವರ ಘನತೆಯನ್ನು ಕಾಯಬೇಕಾಗಿದೆ. ಇದು ನಮ್ಮ ಪ್ರಜಾಸತ್ತೆಯ ಮೇಲಿರುವ ಹೊಣೆಗಾರಿಕೆ.
(ಸೌಜನ್ಯ: ಅವಧಿ)

ಕಾಮೆಂಟ್‌ಗಳಿಲ್ಲ: