ಶನಿವಾರ, ಜುಲೈ 13, 2013

ಪಡ್ಡೆ ಹೈಕಳ ಜಾನಪದ



ಪಡ್ಡೆಗಳ ಲೋಕದ ಪದಾರ್ಥ ಚಿಂತಾಮಣಿ!

 
 ಸೌಜನ್ಯ: ವಿಜಯ ಕರ್ನಾಟಕ
ಭಾಷೆಯಲ್ಲಿ ಕೇವಲ ಶಿಷ್ಟತೆಯೊಂದೇ ಇರುವುದಿಲ್ಲ. ಅದರ ಬಾಗು-ಬಳುಕುಗಳು ಹೇಗಿದೆಯೆಂದರೆ, ಅದರಲ್ಲಿ ಅಭಿಜಾತತೆಯ ಜೊತೆಗೆ ತುಂಟತನದ ಲೀಲೆಯೂ ಹದವಾಗಿ ಇರುತ್ತದೆ. ಹಾಗಿದ್ದರಷ್ಟೇ ಭಾಷೆ ಜೀವಂತವಾಗಿ ಬೆಳೆಯುತ್ತಿರುತ್ತದೆ. ಅಂದಹಾಗೆ, ಪ್ರತೀ ಭಾಷೆಯಲ್ಲೂ ಹದಿಹರೆಯದ ಹುಡುಗ-ಹುಡುಗಿಯರದೇ ಆದ ಒಂದು 'ಪದಾರ್ಥ ಚಿಂತಾಮಣಿ' ಇರುತ್ತದೆ. ಲೋಕರೂಢಿಯಲ್ಲಿ ಇವರೆಲ್ಲ ಪಡ್ಡೆಗಳು! ಅವರ ಭಾಷೆಯಲ್ಲಿರುವ ಲಾಲಿತ್ಯವಿದೆಯಲ್ಲ, ಅದು ಉಲ್ಲಾಸದ ಸಂಕೇತ.
***

* ಶ್ರೀದೇವಿ ಕಳಸದ
ಯಾವುದೋ ಊರಿಂದ ಬಂದವರು, ಬೆಂಗಳೂರಿನ ಸಿಟಿ ಬಸ್ಸೇರಿರುತ್ತೀರಿ. ಕಂಡಕ್ಟರ್ ಕೂಗುತ್ತ ಬರುತ್ತಾನೆ: 'ಯಾರ‌್ರೀ ಟಿಕೆಟ್? ಮುಂದೆ ಮಾಮ ಬರ್ತಾನೆ, ಬೇಗ ತಗೊಳ್ಳಿ'.

ಹುಡುಗರ ಗುಂಪೊಂದು ಸೀಟಿದ್ದರೂ ಜೋತಾಡುತ್ತ ಜೋರು ಮಾತು ಶುರು ಮಾಡುತ್ತದೆ. 'ಏನಾಯ್ತ್ ಗೊತ್ತಾ? ನಿನ್ನೆ ರಾತ್ರಿ ನಾವೇನೋ ಸೀರಿಯಸ್ಸಾಗ್ ಮಾತಾಡ್ತಿದ್ರೆ ಇವನೊಬ್ಬ ಬಂದು ಮಧ್ಯೆ ತೊಪ್ಪೆ ಹಾಕ್ಕಂಡ್ ಕುಂತ ಗೂಬೆ ನನ್ಮಗ.'

'ಅಯ್ಯೋ ಅವನ್ನ ಬಿಡು ಮಚ್ಚಾ, ಯಾವಾಗ್ ನೋಡಿದ್ರೂ ಐಟಂ ಸಮೇತ ಇರ್ತಾನೆ. ಏನ್ ಐಟಮ್ಮಮ್ಮಾ ಅದೂ, ನೋಡ್ದಕೂಡ್ಲೇ ಕಳ್ದೋಗಿಬಿಟ್ಟೆ.'

'ಅದು ಇರ‌್ಲಿ ಬಿಡು ಮಾಮು, ನಿನ್ನೆ ಯಾರೋ ನನ್ನ ಪುಸ್ತಕಾನ ಅಬೇಸ್ ಮಾಡ್ಕೊಂಡ್ ಹೋಗ್ಬಿಟ್ಟಿದ್ರು. ಬಹುಶಃ ಆ ಕುಡುಮೀನೇ ಇರಬೇಕು. ಬಾರೋ ಎತ್ಹಾಕ್ಕೊಂಡ್ ಬರಾನ ಅಂದ್ರೆ ಈ ನನ್ಮಗ 'ನಾನೇನು ಗೂಬೆ ಕೆಟ್ಟೋದ್ನಾ, ರಾತ್ರಿಯೆಲ್ಲಾ ಲಾಟ್ರಿ ಹೊಡೆಯೋಕೆ' ಅಂತ ಕೈ ಎತ್ತಿಬಿಡೋದೇ!'

'ಹೌದೇನ್ಲಾ? ಆ ಕಥೆ ಮೇಷ್ಟ್ರು ಪಾಠ ಓದಿ ನೀನು ಭಾರತರತ್ನ ಆಗ್ಬೇಕಂತಿದ್ದೀಯೇನೋ ಗುಲಾಮ. ನಿನ್ನಾಟ ಗೊತ್ತಿಲ್ವಾ ನಮ್ಗೆ? ಆ ತುರೀಮಣಿ ಬಂದ್‌ಕೂಡ್ಲೇ ಹಲ್ ಬಿಟ್ಕಂಡು ಡವ್ ಹೊಡಿಯೋಕೆ ಹೋಗ್ತೀ. ಇರ‌್ಲಿ ಎಷ್ಟ್ ದಿನ ಆಡ್ತೀಯೋ ಆಡು. ಒಮ್ಮೆ ಸರಿಯಾಗಿ ಬೆಂಡೆತ್ತೀವಿ ಡಬ್ಬಾ ನನ್ಮಗನೇ.' 'ತಪ್ಪಾಯ್ತು ಕಣ್ರೋ. ಇನ್ನೇಲೆ ಇಂಥ ಮಣ್ ತಿನ್ನಾ ಕೆಲ್ಸ ಮಾಡಂಗಿಲ್ಲ.' 'ಅದುಮ್ಕಂಡ್ ಸುಮ್ಕಿರಲೇ ಕಂಡಿದ್ದೀವಿ ನಿನ್ನ ಛತ್ರಿ ಬುದ್ಧೀನಾ.'
...
ನೀವು ಕಿವಿ ಬಿಟ್ಕೊಂಡು, ಬಾಯಿ ತೆರಕೊಂಡು, ಅರ್ಥವಾಗದೇ ಕೂತಿದ್ದೀರಿ ಅಂದ್ರೆ ನಿಮಗೆ ಗೊತ್ತಿರೋ ಕನ್ನಡ ದಶಕಗಳಷ್ಟು ಹಳೇದಾಯ್ತು ಅಂತಾನೇ ಅರ್ಥ. ಇದೂ ಪಕ್ಕಾ ಕನ್ನಡವೇ ಸ್ವಾಮಿ. ನಮ್ಮ ಹಳಗನ್ನಡ, ನಡುಗನ್ನಡ, ಹೊಸಕನ್ನಡ, ಸಿನಿಮಾ ಕನ್ನಡದಂತೆ, ಇದು ಪಡ್ಡೆ ಕನ್ನಡ. ಇದಕ್ಕೆ ಭಾಷೆಗಳ ಹಂಗಿಲ್ಲ. ಶಬ್ದದ ನಿಜಾರ್ಥಗಳ ಗೊಡವೆ ಮೊದಲೇ ಇಲ್ಲ. ಆಗಿನ ಸಂದರ್ಭಕ್ಕೆ ತಕ್ಕಂತೆ ಹುಟ್ಟಿದ್ದು, ಬಳಕೆಯಾಗಿದ್ದು, ಹೊಸ ಹೊಸ ಶಬ್ದಗಳನ್ನು, ಹಳೆಯ ಶಬ್ದಗಳಿಗೆ ಹೊಸ ಅರ್ಥಗಳನ್ನು-ಅಪಾರ್ಥಗಳನ್ನು ಸೇರಿಸುತ್ತ ಬೆಳೆದಿದ್ದು. ಬೆಳೆಯುತ್ತಲೇ ಇರುವಂಥದ್ದು. ಒಂದಿಷ್ಟು ಗೇಲಿ, ಇನ್ನೊಂದಿಷ್ಟು ಪೋಲಿ, ತಕ್ಕಷ್ಟು ಅರ್ಥ, ಒಂದಿಷ್ಟು ಹಾಸ್ಯ, ಮತ್ತಷ್ಟು ಪರಿಹಾಸ್ಯ ಸೇರಿಸಿಕೊಳ್ಳುತ್ತ ಹುಡುಗರ ಭಾಷೆಗೆ ಹೊಸ ಗತ್ತು-ಗಮ್ಮತ್ತು ತರ್ತಾನೇ ಇದೆ.

ಪಡ್ಡೆ ಹುಡುಗರ ಈ ಪಡ್ಡೆಭಾಷೆಗೆ ಒಂದೊಂದು ಕಡೆ ಒಂದೊಂದು ಅರ್ಥ. ಸಿನಿಮಾ, ಸಾಹಿತ್ಯ, ಸಾಮಾಜಿಕ ಜಾಲತಾಣಗಳ ಬೇಲಿ ಮೀರಿ ತನ್ನದೇ ಆದ ವಲವಯನ್ನು ಸೃಷ್ಟಿಸಿಕೊಂಡಿದೆ. ಮಂಗಳೂರು ಕಡೆಯ ಪಡ್ಡೆಕನ್ನಡಕ್ಕೆ ಒಂಥರಾ ಸೊಗಸಾದ್ರೆ, ಮೈಸೂರು, ಬೆಂಗಳೂರಿನ ಪಡ್ಡೆಕನ್ನಡಕ್ಕೆ ಇನ್ನೊಂದು ಸೊಗಸು. ಉತ್ತರ ಕರ್ನಾಟಕದ ಪಡ್ಡೆಕನ್ನಡದು ಮತ್ತೊಂಥರಾ ಸೊಗಸು. ಅವೆಲ್ಲ ಸೊಗಸುಗಳ ಚೌಚೌ ಕನ್ನಡದ ಸ್ಯಾಂಪಲ್ ಇಲ್ಲಿದೆ ನೋಡಿ.
***

ಮೈಸೂರ್‌ನಲ್ ಹಿಂಗ್ ನೋಡಿ
ಗಂಗೋತ್ರಿಯಾದ್ರೆ, 'ಲೊ ಬಾರೊ ಮಗಾ ತಲೆ ಕೆಟ್ಟೋಗಿದೆ, ಒಂದು ಕಾಫಿ ಕುಡಿಯೋಣ' ಎಂದು ನಾಲ್ಕೈದು ಮಂದಿ ಕ್ಯಾಂಟಿನ್‌ಗೆ ತೆರಳುತ್ತಾರೆ. 'ಯಾಕೊ ಇವತ್ತು ಕ್ಲಾಸ್ ಸ್ವಲ್ಪ ಬೇಜಾರಾಯ್ತು ಕಣೊ, ನೀನೇನಪ್ಪ ಅಷ್ಟೊಂದು ಗಾಂಧಿ ಥರ ಕೂತಿದ್ದೆ,ರ‌್ಯಾಂಕ್ ಗೀಂಕ್ ಬರೊ ಐಡಿಯಾ ಏನಾದ್ರೂ ಮಾಡಿದಿಯಾ ಗುರು? ನಮ್ಮ ಮನೆಗೆ ನೀನು ಪರಿಚಯ ಇದ್ದೀಯೆ. ಹಂಗೇನಾದ್ರೂ ಮಾಡಿದ್ರೆ ನಮ್ಮಪ್ಪ ಬೆಂಡೆತ್ತಾನೆ, ಹುಷಾರಾಗಿರು...' ಹೀಗೆ ಸಾಗುತ್ತವೆ ಮಾತು.
ಇನ್ನು ಗ್ರಾಮೀಣ ವಿದ್ಯಾರ್ಥಿಗಳಾದರೆ 'ಯ್ಯಾನಪ್ಪ, ಈಗಾ ಬಂದಯಾ ಇಲ್ವ. ನಂಗ ತಲೆ ಕೆಟ್ಟೋಗದೆ, ಟಿ ಕುಡ್ಕೋಡ್ ಬರಮು ಬಾ, ಆಯ್ತು ಬಡೆ ಹೋಗಮು, ನಂಗು ಯಾಕೊ ಆಯ್ತಾ ಇಲ್ಲ' 'ನಂಗೆ ಆಗಲ್ಲ ಉಷಾರಿಲ್ಲ ಕಡ ಇನ್ನೊಂದು ಸಾರಿ ಬತ್ತೀನಿ'. 'ಲೇಯ್ ಪಿಚ್ಚರ್‌ಗೆ ಹೋಗಮ ಬಂದಯಾ, ಎಲ್ಲ ಹೈಕ್ಳು ಹೋಯ್ತಾವ್ರೆ, ನಾವು ಹೋಗ್ಬೇಕು ಅನ್ಕೊಂಡಿವಿ ಏನ್ ಮಾಡ್ದಯಿ ಯೋಳು ಬೇಗ'. 'ಇಲ್ಲ ಕನ ನಂಗ ಆಗಲ್ಲ ನನ್ ತಪು ದುಡ್ಡಿಲ್ಲ. ಇವತ್ತು ಊಟ ಮಾಡಕ್ಕೆ ಅದೆ ಅಷ್ಟೆ. ಅದೂ ಖಾಲಿ ಆಗೋದ್ರ ಉಣ್ಣಕ್ಕೆ ಯಾನ್‌ಮಾಡ್ದಯಿ? ಕಷ್ಟ ಆಗೋಯ್ತದೆ. ನಾನು ಬರಲ್ಲ ಕಣ್ಲ...' ಹೀಗೆ ಇನ್ನೊಂದು ಧಾಟಿ ಸ್ನೇಹಿತರಲ್ಲಿ ಮುಂದುವರಿಯುತ್ತದೆ.
ಮೈಸೂರು ನಿಘಂಟು
ಮಚ್ಚಾ: ಮಗಾ, ಅಣ್ಣ
ಆವಾಝ್: ಕರೆಯುವುದು
ಸ್ಟೆಂಟ್ ಹೊಡಿಬೇಡ: ಅಹಂಕಾರ ಬೇಡ
ಹೈಕ್ಳು: ಹುಡುಗರು
ನೈಂಟಿ ಟೀ ಹಾಕೋಣ: ಸ್ವಲ್ಪ ಟೀ ಕುಡಿಯೋಣ
ಚಮಕ್ ತೋರಿಸಬೇಡ: ಹೆಚ್ಚು ಚಾಣಾಕ್ಷತನ ತೋರಿಸಬೇಡ.
ಚಂಗಾ ಬಿಂಗಿ ಆಡಬೇಡ: ತಳಕು ಬಳಕಿನ ಬುದ್ಧಿ ತೋರಿಸಬೇಡ.
ಕಾಳ್/ಬಿಸ್ಕೀಟ್ ಹಾಕುವುದು: ಹುಡುಗಿಯರನ್ನು ಪ್ರೀತಿಯ ಬಲೆಗೆ ಬೀಳಿಸಲು ಗಾಳ ಹಾಕುವುದು.
ಏನ್ ಮಾಮು: ಪ್ರೀತಿಪಾತ್ರರಾದವರನ್ನು ಆತ್ಮೀಯವಾಗಿ ಕರೆಯುವ ಪರಿ.
ಗಿಣಿ ಆಟ ಬೇಡ: ಗೊತ್ತಿದ್ದೂ ಗೊತ್ತಿಲ್ಲದಂತೆ ನಟಿಸುವುದು ಬೇಡ.
***

ಮಂಗಳೂರು
ನಮ್ ಕುಡ್ಲ ಮಾರಾಯ್ರೆ
ಕರಾವಳಿಯ ಪಡ್ಡೆ ಹೈಕಳ ಅಡ್ಡೆಯಲ್ಲಂತೂ ಹೊಸ ಪದಗಳ ಹುಡುಕಾಟದ ವೇಗದ ಮಿತಿ ಜಾಸ್ತಿ ಪ್ರಮಾಣದಲ್ಲಿದೆ. ತೀರಾ ಜಿಪುಣತನ ತೋರಿಸುವ ವ್ಯಕ್ತಿಗೆ ಈ ಹಿಂದೆ ಕರಾವಳಿಯ ಕ್ಯಾಂಪಸ್‌ನಲ್ಲಿ 'ಜುಗ್ಗ', 'ಕಂಜೂಸ್' ಎಂಬ ಪದಗಳಿದ್ದವು. ಈ ಪದದ ಅರ್ಥ ಎಲ್ಲ ಕಡೆಯೂ ಪ್ರಚಾರವಾಗುತ್ತಿದ್ದಂತೆ 'ಎಸ್‌ಎಂಎಸ್' ಎನ್ನುವ ಆಂಗ್ಲ ಪದ ಬಳಕೆಗೆ ಬಂದಿದೆ. ಎಸ್‌ಎಂಎಸ್‌ನಲ್ಲಿ ವ್ಯವಹಾರ ಮಾಡುವವರು ಜಾಸ್ತಿ ಪ್ರಮಾಣದಲ್ಲಿ ಜಿಪುಣಯಾಗಿರುತ್ತಾರೆ ಎನ್ನೋದು ಪಡ್ಡೆ ಹೈಕಳ ಮಾತು. ಈ ಹಿಂದೆ ಬಳಕೆಯಲ್ಲಿದ್ದ ತುಳು ಪಡ್ಡೆ ಭಾಷೆಯ ಜಾಗದಲ್ಲಿ ಆಂಗ್ಲ ಭಾಷೆ ಬಂದು ಕೂತಿದೆ. ಆತ ಬಹಳ ವಾಚಾಳಿ ಎನ್ನುವ ಪದಕ್ಕೆ ಕರಾವಳಿಯ ಕ್ಯಾಂಪಸ್‌ನಲ್ಲಿ 'ಮೋಟಾರ್' ಎನ್ನುತ್ತಾರೆ. ಧಡೂತಿ ಹಾಗೂ ಯಾವ ವಿಚಾರಕ್ಕೂ ತಲೆ ಭಾಗಗದವ ಗ್ರಾಮೀಣ ಕರಾವಳಿಯಲ್ಲಿ ಎರ್ಮೆ(ಎಮ್ಮೆ) ಜಾತಿಯವನಾದರೆ, ನಗರದ ಕಡೆ 'ಬ್ಯಾರಿಕೇಡ್'.
ಕರಾವಳಿ ಡೈರಿ
ಊದುಬತ್ತಿ - ತುಂಬಾ ತೆಳ್ಳಗಿರೋರು
ಪೆತ್ತ(ದನ) - ಸಾಧು ಮನುಷ್ಯ
ಬೂಬ - ಕಿವಿ ಮಂದ
ಬುರ್ನಾಸ್ - ಕೆಲಸ ಸರಿಯಾಗಿ ಬಾರದವನು
ಚಂಡಿಕೋರಿ- ನಿರುತ್ಸಾಹಿ
ಮುಂಚಿ- ಖಾರವಾಗಿ ಪ್ರತಿಕ್ರಿಯೆ ನೀಡುವವ
ಕಯಿಪೆ- ಹಠವಾದಿ
ದಪ್ಪ- ಏನೂ ಗೊತ್ತಿಲ್ಲದವ
ಕುದಿಕೆ- ತುಂಬಾನೇ ಚಾಣಾಕ್ಷ
ಮುಜು- ಕುರೂಪಿ
ಕಂದಡಿ- ದ್ರೋಹಿ
ಪೆರ್ಮಾರಿ- ಹೊಟ್ಟೆಬಾಕ
ಅರಣೆ- ಮರೆಗುಳಿ
ಪೆಟ್ಟಿಗೆ- ಹೆಂಡತಿ
ಪಕ್ಕಿ- ಹುಡುಗಿಯರು.
ಎರ್ಮೆ- ಸೋಮಾರಿ
ಕುಂಡಕೋರಿ- ತೆಳ್ಳನೆ ಕಾಲುಗಳ ದೊಡ್ಡ ದೇಹದ ವ್ಯಕ್ತಿ
***

ಉತ್ತರ ಕರ್ನಾಟಕ
ಬೈಗುಳಾನ ಬಂಗಾರ
ಉತ್ತರ ಕರ್ನಾಟಕದಲ್ಲಿ ಬೈಗುಳಿಗೆ ಭಾಷೆಯ ಸ್ಥಾನಮಾನ. ಯಾವ ಬೈಗುಳಿಗೂ ಶಬ್ದದ ಮೂಲ ಅರ್ಥ ಇರೋದಿಲ್ಲವಾದರೂ ಕೇಳೋದಕ್ಕೆ ಬಲೇ ಖಾರ. ಸಾಮಾನ್ಯ ಭಾಷೆಯೇ ಈ ಪರಿ ಇರುವಾಗ ಇನ್ನು ಪಡ್ಡೆಕನ್ನಡ ಹೇಗಿರಬಹುದು? ಅದನ್ನೆಲ್ಲ ಇಲ್ಲಿ ಬರೆಯೋದು ಕಷ್ಟ. ಕೆಲ ಸ್ಯಾಂಪಲ್‌ಗಳನ್ನು ಮಾತ್ರ ಕೊಡಬಹುದು. ಉಳಿದವನ್ನು ಕೇಳಿಯೇ ಅನುಭವಿಸಬೇಕು.
'ಅಲೆಲೆ ಮಗನ, ನಿನ್ನೆ ಸಂಜಿಮುಂದ ಕರದ್ರೂ ಕೇಳಿಸಿಲ್ಲ ಅನ್ನಂಗ ಹೋದೆಲ್ಲಲೆ. ಬಾಜೂ ಯಾವ್ದೋ ಫಟ್‌ಪಟ್ಟಿ ಐತಂದಕೂಡ್ಲೇ ನಾವ್ಯಾರೂ ಕಾಣದ ಇಲ್ಲನು?'
'ಹಂಗೇನಿಲ್ಲೋಪ, ನಂಗ ಖರೇನ ಕೇಳಸಿಲ್ಲ.'
'ಗೊತ್ತೈತಿ ಸುಮ್ನಿರಲೇ ಮಂಗ್ಯಾನ ಒಯ್ದೊಂದ್, ಏ ನಿನ ಮಾರಿ ಮಣ್ಣಾಗ ಹಾಕ್ಲಿ... ನಿನ್ನ ಹ... ಬುದ್ಧಿ ನಮಗ ಗೊತ್ತಿಲ್ಲ ಅನ್ಕೊಂಡಿಯನು?'

ಫಟ್‌ಪಟ್ಟಿ - ಚಮಕ್ ಹುಡುಗಿ
ಡಿಂಗಿಚಕ್ಕ - ಕದ್ದುಮುಚ್ಚಿ ಪ್ರೇಮ
ಶಿರಹಟ್ಟಿ - ಬೈರಿಗೆ, ಕೊರೆಯುವವ
ಇದಿ - ಪೀಡೆ
***

ಮಧ್ಯ ಕರ್ನಾಟಕ
ಹಾವೇರಿ ಹಾದ್ಯಾಗ
ಇಲ್ಲಿ ದೇಸಿ ಭಾಷೆ ಸೊಗಡಿನ ಮೇಲೆ ಮೈಸೂರು ಪ್ರಾದೇಶಿಕತೆ ಸವಾರಿ ಮಾಡುತ್ತಿದೆ. ಆಂಗ್ಲ ಭಾಷೆಯ ತುಣುಕುಗಳೂ ಜಾಸ್ತಿಯಾಗಿವೆ. ಸಿನಿಮಾಗಳ ಪ್ರಭಾವ ಬೇರೆ. ಜೊತೆಗೆ, ಮೀಸೆ ಮೇಲೆ ಕೈಹಾಕುವ ಅಥವಾ ಕುಡಿಹುಬ್ಬು ಜತೆಗೆ ಭುಜ ಕುಣಿಸುವ ಶೈಲಿಯೂ ಎದ್ದು ಕಾಣುತ್ತಿದೆ. ಇದುವರೆಗೆ ಎವ್ವಾ, ಬೇ ಎಂದು ಅವ್ವನನ್ನು ಕರೆಯುತ್ತಿದ್ದ ಮಗ ನಾನು ಬರ‌್ಲಾ ಅಮ್ಮಾ ಅನ್ನುತ್ತಿದ್ದಾನೆ. ಲೇ ಬಾರಲೇ, ಬರ‌್ರಲೇ ಎಂದು ಗೆಳೆಯರನ್ನು ಕರೆಯುತ್ತಿದ್ದವರು, ಬನ್ರಲೇ ಬೇವಾರ್ಸಿ ನನ್ಮಕ್ಳ, ಎಲ್ರೋ ಹಾಳಾಗಿ ಹೋಗಿದ್ರೀ? ಅಂತಿದ್ದಾರೆ. ಹೊಡಿ ಮಗಾ, ಹೊಡಿ ಮಗಾ ಬಿಡಬೇಡ ಅವನ್ನಾ! ಎಷ್ಟೋ ಪೊಗರು ನಿನಗೆ? ಏನ್ ಕಣಮ್ಮಿ ಸಂದಾಕಿ, ಪೊಗರದಸ್ತಾಗಿ ಬೆಳ್ದಿದ್ದೀಯಾ? ಎನ್ನುವ ಹುಂಬತನ ಬೇರೆ.
***

ಬಳ್ಳಾರಿ ಬಯಲಲ್ಲಿ
ತಲೆ ತಿನ್ನೋರಿಗೆ ಪಿಟೀಲು, ಕೊರಕ, ಗೆಳೆಯರಿಗೆ ಪ್ರೀತಿಯಿಂದ ಮಚ್ಚ, ಮಾಮಾ, ತಂದೆಗೆ ಬಾಸ್, ಪ್ರೀತಿಯಲ್ಲಿ ಬಿದ್ದ ಜೋಡಿಗಳು ಪರಸ್ಪರ ಜಾನು-ಜಾನ್ ಇವು ಬಳ್ಳಾರಿಯ ಪಡ್ಡೆಭಾಷೆಯ ಪದಗಳು. ಹುಡುಗಿಯರ ಹಿಂದೆ ಸದಾ ಸುತ್ತುವವ ವೋಡಾಫೋನ್; ಬೇಕೆಂದಾಗ ಸಿಗುವವರು, ಸ್ಪಂದಿಸುವವರು ಏರ್‌ಟೆಲ್, ಇನ್ನು ತೆಲುಗು ಭಾಷೆಯ ಪ್ರಭಾವವೂ ಇರುವುದರಿಂದ ಪರಸ್ಪರರು ದೊಂಗ (ಕಳ್ಳ) ಅಂತ ಪ್ರೀತಿಯಿಂದ ಕರೆದುಕೊಳ್ಳೋದೂ ಉಂಟು. ಜತೆಗೆ ಅಪ್ಪಜಿ ಎಂಬ ಆತ್ಮೀಯ ಪದವೂ ಪಡ್ಡೆಗಳ ನಡುವೆ ಬಳಕೆಯಲ್ಲಿದೆ.
***

ಮಲೆನಾಡ ಮಾತಲ್ಲಿ
ಶಿವಮೊಗ್ಗ
'ಏನ್ ಮಚ್ಚಿ, ಏನೋ ಇವತ್ತು ಒಂದೇ ಒಂದೂ ಸೋನಿ ಎರಿಕ್ಸನ್ ಆಗ್ಲಿ, ಸ್ಯಾಮ್ಸಂಗ್ ಆಗ್ಲಿ ಕಾಣ್ತಾನೇ ಇಲ್ಲ. ಎಲ್ ನೋಡಿದ್ರೂ ನೋಕಿಯಾ ಡಬಲ್ ಒನ್ ಡಬಲ್ ಜಿರೋ (1100), ರಿಲೈಯನ್ಸ್, ಸ್ಪೈಸ್, ಎಂಟಿಎಸ್ಸೇ ಕಾಣ್ತಿವೆ'. 'ನೋಡ್ ಮಚ್ಚಾ, ಗಿರಿ ಆ ಟಕ್ಲೂ ರೂಮನಲ್ಲೇ ಎರಡ್ ಗಂಟೆಯಿಂದ ಕೂತವ್ನೆ. ಇವತ್ತು ಅವನು ಸಿಂಟೆಕ್ ಬದ್ಲು ತೊಟ್ಟೀನೇ ಹಿಡಿದಿರ?ಬೇಕು ಕಣೋ.' 'ಓಕೆ ಮಾಮು ನಾಳೆ ಸಿಗ್ತೀನಿ'. ಇವನ್ನೆಲ್ಲ ಕೇಳೋಕೆ ಕಾಲೇಜ್‌ಗೇ ಹೋಗ್ಬೇಕು ಅಂತೇನಿಲ್ಲ. ಬೆಳಗ್ಗೆ 9ರಿಂದ 10ರ ವೇಳೆಗೆ ಕಾಲೇಜು ಕಡೆಗೆ ಹೋಗುವ ಬಸ್ ಹತ್ತಿದ್ರೂ ಸಾಕು, ನಿಮ್ಮ ಕಿವಿಗೆ ಬಿದ್ದೇಬೀಳ್ತವೆ.
ಯಾವ ಹುಡುಗಿಯನ್ನ ಲೈನ್ ಹೊಡೀತಿದ್ದಾನೋ ಆ ಹುಡುಗಿಯ ಹೆಸರಿನ, ಭಾಷೆ, ಕುಲದ ಆಧಾರದ ಮೇಲೂ ಸಂಬೋಧನೆಗಳು ಸೃಷ್ಟಿಯಾಗುತ್ತವೆ. ಮಲೆಯಾಳಿ ಹುಡುಗಿಗೆ ಲೈನ್ ಹೊಡೀಯೋನಿಗೆ ಕುಟ್ಟ ಎಂಬ ಹೆಸರು. ನಿನ್ನೆ ಪರಿಚಯವಾದವನಾದ್ರೆ ಮಚ್ಚಾ, ಇವತ್ತು ಶಿಷ್ಯಾ, ನಾಳೆ ಮಗಾ.
ಮಲ್ನಾಡ್ ಡಿಕ್ಷನರಿ
ಓಳು- ಯವಾಗ್ಲೂ ಸುಳ್ಳು ಹೇಳೋನು
ಕಾಗೆ ಹಾರಿಸೋದು- ಉಡಾಫೆ
ಎಲ್‌ಎಲ್‌ಟಿಟಿ (ಲುಕಿಂಗ್ ಅಟ್ ಲಂಡನ್ ಟಾಕಿಂಗ್ ಅಟ್ ಟೋಕಿಯೋ)- ಮೆಳ್ಳಗಣ್ಣಿನವರಿಗೆ
ಪೆಂಡಾಲ್ ಹಾಕಿಸಿಕೊಂಡ, ಹೊಗೆ ಡಾಟ್ ಕಾಂ- ಮೃತಪಟ್ಟವರಿಗೆ
ಓಟಿ- ಎಣ್ಣೆ ಹೊಡೆಯುವುದು
ಮೈಕ್ ಮಾದೇವಿ- ಯಾವಾಗ್ಲೂ ಮಾತಾಡೊ ಹುಡುಗಿ
ಸೀಗೇಪುಡಿ- ಇರಿಟೇಟ್ ಮಾಡುವವನು
ಬೋರಂಗಿಗಳು-ಬೋರ್ ಹೊಡೆಸುವವರಂತೆ ಮಾತನಾಡುವವರು
ಗಿಣಿಮರಿ- ಮಳ್ಳಗಿರುವವರು
ಚಿಂದಿ, ಸಕ್ಕಾತ್ತಾಗಿದ್ದಾನೆ- ತುಂಬ ಸುಂದರವಾಗಿರುವವರು
ಕೂಳೆ-ಕುಳ್ಳಗಿದ್ದು ಯಾವಾಗಲೂ ಮಂಕಾಗಿರುವವರು
ಬೋಟಿ- ತೆಳ್ಳಗೆ ಕಡ್ಡಿಯಂತಿರುವವರು
ಇಟಾಚಿ- ಕುಳ್ಳಗೆ ದಪ್ಪಗಿರುವವರು
ದಾವಣಿ- ಸಾಂಪ್ರದಾಯಿಕ ಉಡುಪು ಧರಿಸುವವರು
ಗಿರ್ಮಿಟ್- ಬಣ್ಣ ಬಣ್ಣದ ಡ್ರೆಸ್ ಹಾಕಿದೋರು
ಮಸ್ಕಿರಿ- ಟೈಂಪಾಸ್ ಮಾಡೋರು
ಮಾನಸಿಕ್- ಆಕಾಶ ತಲೆ ಮೇಲೆ ಬಿದ್ದಂಗೆ ಆಡೋರು
ಚಾಂಬಾಳ್ಯಾ- ಹುಡುಗಿಯರ ಜೊತೆ ಹೆಚ್ಚಾಗಿ ಮಾತನಾಡೋನು
ಚೂಯಿಂಗ್ ಗಮ್- ಮಾತು ಮುಗಿಸದವನು
ಬಾಡಕೋ- ರೋಪು ಹಾಕೋನು
ಹಲ್ಕಡ್ಡಿ ಸರ್- ವಿದ್ಯಾರ್ಥಿಗಳ ಮುಂದೆ ಏನೇನೋ ಮಾತಾಡೋ ಮೇಸ್ಟ್ರಿಗೆ
ಹಸ್ಮುಖಲಾಲ್- ಸದಾ ನಗೋ ಮೇಸ್ಟ್ರಿಗೆ
ಶಕ್ತಿಮಾನ್- ಸದಾ ತೂಕಡಿಸೋ ಮೇಸ್ಟ್ರಿಗೆ
ಪಾಯಿಂಟರ್- ಪ್ರತಿ ಪಾಠಕ್ಕೂ ಪಾಯಿಂಟ್ ಹಾಕಿ ಹೇಳೋನಿಗೆ
ಫ್ರೆಶ್ಶಿ- ಹೊಸದಾಗಿ ಕಾಲೇಜ್‌ಗೆ ಸೇರಿದ ಫ್ರೆಶರ್
ಸ್ಕ್ರೂಡ್- ಲೆಕ್ಚರರಿಂದ ಚೆನ್ನಾಗಿ ಬೈಸಿಕೊಂಡವನು
***

ಬೆಂಗಳೂರು ಪದಕೋಶ
ಸಿಸಿ (ಚಮ್ಮಕ್ ಚಲೋ) - ಮಜಾ ಮಾಡು
ಹೊಸಾ ಫೋನ್ ಸಿಕ್ತು - ಹೊಸ ಗರ್ಲ್ ಫ್ರೆಂಡ್
ಎಲ್‌ಡಿ ಐಟಮ್ - ಲಾಂಗ್ ಡ್ರೈವ್ ಐಟಮ್
ದೇವ್ರ - ವಾಸನೆ ಬರುವವರು
ಗುಯ್ಯಾ - ಮಾತಾಡಿದ್ರೂ ಅರ್ಥ ಆಗದೇ ಇರುವ ಹುಡುಗ
ಕಥೆ ಮೇಷ್ಟ್ರು - ಮಾತಿಗೆ ಮೊದಲೇ ಕಥೆ ಹೇಳೋವ್ರ
ಮಚ್ಚಿ - ಮಚ್ಚಾ (ಕನ್ನಡದ ಬಾಮೈದ ಅರ್ಥ ಕೊಡುವ ತಮಿಳು ಶಬ್ದ)
ಮಗಾ - ಮಗನೇ ಎಂಬ ಆತ್ಮೀಯ ಸಂಬೋಧನೆ
ಚಮಕ್ - ಕೊಂಕು ತೋರಿಸುವ ಹುಡುಗಿ
ಬೀಟ್ - ಹುಡುಗಿಯರ ಕಾಲೇಜಿನ ಮುಂದೆ ಠಳಾಯಿಸುವುದು
ಕಾಳ್/ಬಿಸ್ಕೀಟ್ ಹಾಕೋದು, ಡವ್ ಹೊಡೆಯೋದು - (ಹುಡುಗಿಯರನ್ನು) ಒಲಿಸಿಕೊಳ್ಳೋ ಪ್ರಯತ್ನ
ಹೊಗೆ ಹಾಕಿಸ್ಕೊಳ್ಳೋದು - ಸಾವು ಶಬ್ದದ ಪರ್ಯಾಯ ಪರ್ಯಾಯ ಪದ
ಅಪೀಟು, ಜೂಟು - ಜಾಗ ಖಾಲಿ ಮಾಡೋದು
ತೂಕು - ಪರೀಕ್ಷೆಯಲ್ಲಿ ಫೇಲಾಗೋದು ಆಗೋದು.
ಚಂಬು : ಫೇಲು, ವಿಫಲನಾಗೋದು
ಭಗಿನಿ ಗೂಟ - ತಪ್ಪಿಸಿಕೊಳ್ಳದಂತೆ ಸಿಕ್ಕಿಹಾಕಿಕೊಳ್ಳೋದು, ಮರ್ಮಾಘಾತ
ಇಕ್ಕಳ - ಎದ್ದು ಹೋಗದ ಪರಿಸ್ಥಿತಿ, ಸಿಲುಕಿಕೊಳ್ಳೋದು, ಕಿರಿಕಿರಿ, ತಲೆಹರಟೆ
ಮೀಟ್ರು - ಧೈರ್ಯ
ಡೀಲ್ - ನಿಭಾಯಿಸು, ಕುದುರಿಸು,
ತಳ್ಳು - ಲಂಚ ಕೊಡು
ಮಾರಿಹಬ್ಬ - ಗ್ರಹಚಾರ ಬಿಡಿಸೋದು
ದೇಪೋದು - ಕದಿಯೋದು
ಟ್ಯಾಕ್ಸ್ - ಇನ್ನೊಬ್ಬರಿಗಾಗಿ ಮಾಡಿದ ಖರ್ಚು
ಓಸಿ - ಬೇರೆಯವರ ದುಡ್ಡಿನಲ್ಲೇ ಮಜಾ ಮಾಡೋದು
ಮುಂಡಾಯ್ಸು - ಮೋಸ ಮಾಡು
'ಮಕ್ಕರ್' ಆಗುವುದು - ಬೆಪ್ಪನಾಗುವುದು
ಗಲ್ ಬಸ್ಕಿ - ಗೊಂದಲ, ಕಸಿವಿಸಿ
ಅಪೋಲಿ - ಸರ್ವನಾಶ
ಪೋಟುಕೋ - ಕುಡಿದು ಚಿತ್ತಾದವನು
ಗೈರು - ಗಾಬರಿ, ಕಕ್ಕಾಬಿಕ್ಕಿ
ಅಬೇಸ್ - ಕಳ್ಳತನ
ಕೂಳೆ - ಅದ್ಭುತ
ಪೋಟ್ - ತಪ್ಪಿಸಿಕೋ
ಜೈ ಆಗು - ತಪ್ಪಿಸಿಕೋ
ಕುಡುಮಿ - ಸದಾ ಓದುವವ
ಮೈಲೇಜ್ - ತಾನು ಮಾಡಿದೆನೆಂಬ ಹಿರಿಮೆ
ದೇವ್ರ - ಯಾವಾಗಲೋ ಒಮ್ಮೆ ಸಿಗೋನು
ಮಾಲ್ - ಹುಡುಗಿ, ಸುಲಭವಾಗಿ ಸಿಗೋಳು
ಗುಲ್ಡು/ಪ್ಯಾದೆ - ಪೆದ್ದ, ಮಂಕ
ತಗಡು - ಕಳಪೆ
ತುರಿಮಣೆ - ಉಬ್ಬುಹಲ್ಲು
ಹತ್ತಿಸು - ಹೊಗಳು
ಉಡೀಸ್ - ಧ್ವಂಸ
ಲಗಾಯ್ಸು - ಮಜಾಮಾಡು
ಭಾರತರತ್ನ - ಅತಿ ಪ್ರಾಮಾಣಿಕ
ಗಾಂಧಿ - ಪ್ರಾಮಾಣಿಕ
ಬತ್ತಿ - ಧೂಮಪಾನ
ಎಲ್ಕೇಜಿ - ಎಳಸು, ಮಾಗಿಲ್ಲ
ಇಕ್ಕು - ಹೊಡೆ, ಥಳಿಸು
ಕಣ್ಣುತಂಪು - ಹುಡುಗಿಯರನ್ನು ನೋಡೋ ಸುಖ,
ರೈನ್‌ಬೋ ನನ್ ಮಗ- ಬಣ್ಣ ಬದಲಾಯಿಸೋನು
ಜಾತ್ರೆ ನನ್ ಮಗ - ಅಪರೂಪದ ವ್ಯಕ್ತಿ
ಕಾಗೆ ನನ್ ಮಗ - ಸುಳ್ಳು ಹೇಳುವವನು
ಓಸಿ ನನ್ ಮಗ - ಜಿಪುಣ
ತಟ್ಟೆ ಇಡ್ಲಿ - ಚಪ್ಪಟೆ ಮುಖ
***

ಬೆಕ್ಕಿನ ಹೆಜ್ಜೆ ಹಾದಿಯೊಳಗೆ
ಫ್ಯಾಷನ್ ಲೋಕದಲ್ಲಿ ಪೋಲಿ ಭಾಷೆ ಬಳಕೆ ವಿಪರೀತ. ಬಹುಶಃ ಬೇರೆ ಯಾವುದೇ ಕ್ಷೇತ್ರದಲ್ಲಿ ಚಾಲ್ತಿಯಲ್ಲಿ ಇಲ್ಲದಷ್ಟು ಪದಗಳು ಇಲ್ಲಿ ವ್ಯಂಗ್ಯ, ಕುಹಕ, ಕೀಟಲೆ, ಪೋಲಿ ಅರ್ಥವನ್ನು ನೀಡುತ್ತವೆ. ಆಡುವ ಪ್ರತಿಯೊಂದು ಪದಗಳ ಸಾಲಿನಲ್ಲಿ ಒಂದಾದರೂ ಅಂಥ ಪಡ್ಡೆ ಪದವು ಎದ್ದು ಹಲ್ಲು ಕಿರಿಯುತ್ತದೆ. ವಿಶೇಷವೆಂದರೆ ಇವೆಲ್ಲ ಪದಗಳು ಫ್ಯಾಷನ್ ಕ್ಷೇತ್ರಕ್ಕೆ ಸಂಬಂಧಿಸಿದವು. ಅಂದರೆ ಈ ಬಣ್ಣದ ಜಗತ್ತಿನಲ್ಲಿ ಅಗತ್ಯ ಬಳಕೆಯ ಪದಗಳು ಎನಿಸಿಕೊಂಡಂಥವು. ಹೆಚ್ಚಿನವು ಡ್ರೆಸ್ ಹಾಗೂ ಫ್ಯಾಷನ್ ಆ್ಯಕ್ಸಸರಿಯ ಪದಗಳು.
ಜೋಜೋ- ಡ್ರೆಸ್ ವಿನ್ಯಾಸ ಪ್ರಕಾರವನ್ನು ಅತಿಯಾಯಿತು ಸಭ್ಯತೆ ಎನ್ನುವ ಅರ್ಥದಲ್ಲಿ ಬಳಕೆ
ಬ್ಯಾಕ್ ಸ್ಟೇಜ್ ಲೀಡ್- ಫ್ಯಾಷನ್ ಲೋಕದಲ್ಲಿ ಕ್ಲಿಕ್ ಆಗದ ಮಾಡೆಲ್‌ಗೆ ವ್ಯಂಗ್ಯ ಮಾಡುವ ರೀತಿ
ಪ್ರಾಂಪಿ-ಮಿತಿಮೀರಿ ಸ್ಟೈಲ್ ಹೊಡೆಯುವ ರೂಪದರ್ಶಿಗೆ ಡಿಸೈನ್‌ವೊಂದರ ಹೆಸರಿಂದ ಗುರುತಿಸುವುದು
ಡಬಲ್ ಮಾಸ್ಕ್-ಅತಿಯಾಗಿ ಮೇಕಪ್ ಮಾಡಿಕೊಳ್ಳುವ ಹಾಗೂ ಅಲಂಕರಿಸಿಕೊಳ್ಳುವ ಹುಡುಗಿ
ಡ್ಯಾಪರ್-ಹುಡುಗಿಯರ ಎದೆಗೆ ಕನ್ನ ಹಾಕುವಂಥ ಸುರಸುಂದರಾಂಗ ಯುವಕ
ವೋಜ್-ಸದಾ ಸುದ್ದಿಯಲ್ಲಿ ಇರಬೇಕೆನ್ನುವ ಕ್ರೇಸ್ ಹೊಂದಿರುವ ರೂಪದರ್ಶಿ
ಹೈಹೀಲ್ಸ್-ಬಿಂದಾಸ್ ಆಗಿ ಬೇರೆಯವರಿಂದ ಹಣ ಬಿಚ್ಚಿಸುವಂಥ ಚಾಲಾಕಿನ ಮಾಡೆಲ್
ಬೇಬಿ ಆನ್ ಬೋರ್ಡ್-ತಿದ್ದಿ ತೀಡಿ ಮುಗ್ಧತೆ ತುಂಬಿದ ಮುದ್ದು ಮುಖ. ಹಾಲುಗೆನ್ನೆ
69-ಮಾಡಿ ತೋರಿಸುವ ತಾಕತ್ತಿಲ್ಲದೇ ಬರಿ ಬಾಯಲ್ಲಿ ಆಡಿ ತೋರಿಸುವ ಗುಣ
ಬರ್ಡ್ ಲಿಪ್-ಯಾವುದನ್ನೂ ಚುರುಕಾಗಿ ಮಾಡುವುದಿಲ್ಲ, ಎಲ್ಲದರಲ್ಲೂ ನಿಧಾನ
ಚೀ ಚೀ-ಎಲ್ಲರೂ ಇಷ್ಟಪಡುವಂಥ ಸೆಕ್ಸಿ ಲುಕ್ ಹುಡುಗಿ
ಡಬಲ್ ಡಿ-ಸ್ಲಿಮ್ ಆಗಿದ್ದರೂ ದೇಹದ ಬಾಕಿ ಅಂಗಳಿಗೆ ಒಪ್ಪದಂಥ ಎದೆಗಾತ್ರ
***

ಆಡ್ತಾ ಆಡ್ತಾ...
ಕ್ರೀಡಾ ಲೋಕದಲ್ಲಿ ಪ್ರತಿಯೊಂದು ಆಟದ ನಿಯಮ ಹಾಗೂ ತಂತ್ರಗಳ ಹೆಸರುಗಳು ಪೋಲಿ ಪದಗಳಾಗಿವೆ. ಅಂಥ ಕೆಲವು ಪದಗಳು ಆಟಗಾರರ ನಡುವೆ ಮಾತ್ರ ಉಳಿದಿದ್ದರೆ, ಇನ್ನು ಕೆಲವು ಆಟಗಾರರ ನಡುವಿನಿಂದ ಹರಿದು ಜನರ ನಡುವೆಯೂ ಬಳಕೆ ಆಗುತ್ತಿವೆ.
ಸ್ಪಿನ್ನರ್-ಹಳೆಯ ಬೌಲ್‌ನಿಂದ ಆಟವಾಡಲು ಇಷ್ಟಪಡುವವನು
ಶಾರ್ಟ್ ಮಿಡ್ ವಿಕೆಟ್-ಇದು ಸಭ್ಯತೆಯನ್ನು ಮೀರಿದ ಮರ್ಮಾಂಗವನ್ನು ಚೂಚಿಸುವ ಪದ
ಗಲ್ಲಿ ಕ್ರಿಕೆಟರ್-ಬೆಲೆವೆಣ್ಣುಗಳನ್ನು ಹುಡುಕಿಕೊಂಡು ಹೋಗುವ ಗುಣದ ವ್ಯಕ್ತಿ
ಗೋಲ್ ಪೋಸ್ಟ್-ಚೆಂಡು ಸೇರುವ ಗುರಿಯಾದರೂ, ಅದಕ್ಕೂ ಗುಪ್ತಾಂಗದ ಸಂಕೇತಾರ್ಥ
ದೂಸ್ರಾ ಅಲ್ಲ ತೀಸ್ರಾ-ದೂಸ್ರಾ ಎನ್ನುವುದು ಕ್ರಿಕೆಟ್‌ನಲ್ಲಿನ ಬೌಲಿಂಗ್ ತಂತ್ರ, ತೀಸ್ರಾ ಎನ್ನುವುದು ಲೈಂಗಿಕ ಪ್ರಚೋದನೆ
ಡಾಟ್ ಬಾಲ್-ಹಲವಾರು ಹುಡುಗಿಯರಿಗೆ ಗಾಳ ಹಾಕಿಯೂ ಪ್ರೇಮ ಬೆಸೆಯುವಲ್ಲಿ ವಿಫಲನಾದವ
ಚೆಕ್ ಮೇಟ್-ಹುಡುಗನೊಬ್ಬ ಹುಡುಗಿದೆ ಪ್ರಪೋಸ್ ಮಾಡಿ ಯಶಸ್ವಿ ಆಗುವುದು
ಡ್ರಿಬ್ಲರ್-ನಿರಂತರವಾಗಿ ಒಂದೇ ಹುಡುಗಿಯ ಬೆನ್ನತ್ತಿದವನು
ಕಬಡ್ಡಿ-ಮೂಲಾರ್ಥದಲ್ಲಿ ಆಟವೊಂದರ ಹೆಸರಾದರೂ, ಅದಕ್ಕೆ ರತಿಕ್ರೀಡೆ ಎನ್ನುವ ಪರ್ಯಾಯಾರ್ಥ
ಪಾಟಿಂಗ್-ಸಕ್ಸಸ್‌ಫುಲ್ ಆಗುವ ಲವ್ ಪ್ರಪೋಜಲ್ ಹಾಗೂ ಡೇಟಿಂಗ್ ಒಪ್ಪಿಗೆ
ಅಂಡರ್ ಪಾರ್-ಗಾಲ್ಫ್‌ನಲ್ಲಿ ಬಳಕೆಯಾಗುವ ಟೆಕ್ನಿಕಲ್ ವರ್ಡ್‌ಗೆ ಶೃಂಗಾರ ಲೀಲೆಯ ನಿಗೂಢಾರ್ಥ
ಪಿಚ್-ಆಟದ ಅಂಗಳವನ್ನು ಹೆಣ್ಣಿಗೆ ಹೋಲಿಕೆ ಮಾಡುವುದು

ಕಾಮೆಂಟ್‌ಗಳಿಲ್ಲ: