ಗುರುವಾರ, ಜುಲೈ 25, 2013

ಪರಕೀಯತೆಗೆ ದೂಡಿದ ಅಭಿವೃದ್ಧಿ ಮಾದರಿ
 -ಎಂ.ಚಂದ್ರ ಪೂಜಾರಿ.

ಸೌಜನ್ಯ: ವಿಜಯ ಕರ್ನಾಟಕ

`ನಮಗೆ ಬೇಕಿರುವುದು, ಕಡಿಮೆ ಸಂಪನ್ಮೂಲ ಬಳಸಿಯೂ ಹೆಚ್ಚು ಮಂದಿಯ ಜೀವನ ಪೊರೆಯುವಂಥ ಉದ್ದಿಮೆಗಳು'
 
ಕೃಷಿ, ಕೈಗಾರಿಕೆಗಳ ಉತ್ಪನ್ನಗಳನ್ನು ಬೀದಿ ಬದಿಯಲ್ಲಿ, ತಲೆ ಮೇಲೆ ಹೊತ್ತುಕೊಂಡು ಮಾರುವ ವ್ಯಾಪಾರಿಗಳು ನೂರು-ಸಾವಿರವಲ್ಲ, ಲಕ್ಷಗಟ್ಟಲೆ ಇದ್ದಾರೆ. ಇವರೆಲ್ಲ ಅತ್ಯಲ್ಪ ಬಂಡವಾಳ ಮತ್ತು ಹೆಚ್ಚು ಮಾನವ ಸಂಪನ್ಮೂಲ ಬಳಸಿಕೊಂಡು ವ್ಯವಹರಿಸುತ್ತಿದ್ದಾರೆ. ಇದೇ ಬಗೆಯಲ್ಲಿ ವಿವಿಧ ಸರಕುಗಳನ್ನು ಉತ್ಪಾದಿಸಿ ಮಾರುವ ಸಣ್ಣ ಉದ್ದಿಮೆದಾರರು ಕೂಡ ದೊಡ್ಡ ಪ್ರಮಾಣದಲ್ಲಿದ್ದಾರೆ. ಮುಂಬಯಿ, ಚೆನ್ನೈ, ಬೆಂಗಳೂರು ಮುಂತಾದ ಮಹಾನಗರಗಳಲ್ಲಿ ಕೈಕೆಸರು ಮಾಡುವ, ಪರಿಸರ ನಾಶ ಮಾಡುವ ಬಹುತೇಕ ಉತ್ಪಾದನೆಗಳು ಅಲ್ಲಿನ ಕೊಳೆಗೇರಿಗಳಲ್ಲಿವೆ. ಸುಂದರವಾದ ಮಾಲ್‌ಗಳಲ್ಲಿ ಮಾರಾಟವಾಗುವ ಹಲವು ಸರಕುಗಳು ಇವೇ ಕೊಳೆಗೇರಿಗಳಲ್ಲಿ ತಯಾರಾಗುತ್ತವೆ. ನಮ್ಮ ಅರ್ಥ ವ್ಯವಸ್ಥೆಯ ಮೂರೂ ವಲಯಗಳನ್ನು (ಕಷಿ, ಕೈಗಾರಿಕೆ, ಸೇವೆ) ಸೇರಿಸಿಕೊಂಡು ನೋಡಿದರೆ ಇಂತಹ ಸಣ್ಣ ವ್ಯಾಪಾರಿಗಳು, ಉದ್ದಿಮೆದಾರರು ಕೋಟಿಗಟ್ಟಲೆ ಇದ್ದಾರೆ. ಮೂರೂ ವಲಯಗಳಲ್ಲಿರುವ ಇಂತಹ ಸಣ್ಣಪುಟ್ಟ ವ್ಯಾಪಾರ, ಉದ್ದಿಮೆಗಳ ಮಾಲೀಕರೊಂದಿಗೆ ಇವು ಗಳಲ್ಲಿ ದುಡಿಯುವವರನ್ನು ಸೇರಿಸಿ ಲೆಕ್ಕ ಹಾಕಿದರೆ ಶೇಕಡ ತೊಂಬತ್ತು ಮಂದಿ ಇದೇ ವರ್ಗಕ್ಕೆ ಸೇರಿದವರು.

ಇವೆಲ್ಲವನ್ನು ನಾವು ಅಸಂಘಟಿತ, ಅನಧಿಕತವೆಂದು ಪಟ್ಟಿ ಮಾಡಿ, ಮೂಟೆ ಕಟ್ಟಿ ಒಂದು ಮೂಲೆಯಲ್ಲಿ ಇರಿಸಿದ್ದೇವೆ. ಅಸಂಘಟಿತ, ಅನಧಿಕತ ಎನ್ನುವ ಪದಗಳಿಗೆ ಬೇರೆ ಬೇರೆ ಅರ್ಥ ಇದ್ದರೂ, ಈ ಎರಡೂ ಪದಗಳು ಒಂದೇ ಪರಿಣಾಮವನ್ನು ವ್ಯಕ್ತಪಡಿಸುತ್ತಿವೆ. ಈ ವರ್ಗಕ್ಕೆ ಸೇರಿದವರು ಸರಕಾರದ ನೀತಿ- ನಿಯಮಗಳ ಪ್ರಕಾರ ತಮ್ಮ ವ್ಯವಹಾರಗಳನ್ನು ನಡೆಸುತ್ತಿಲ್ಲ. ಆದುದರಿಂದ ಇವರು ಸರಕಾರದ ಸವಲತ್ತುಗಳಿಗೂ ಅರ್ಹರಲ್ಲ ಎನ್ನುವ ತಾತ್ಪರ್ಯ ಇದೆ. ಅಸಂಘಟಿತ ವಲಯಗಳ ವ್ಯಾಪಾರ ಸ್ಥರು, ಉದ್ಯಮಿಗಳು ಬ್ಯಾಂಕ್‌ಗಳಿಂದ ಹಣಕಾಸು ನೆರವು ಪಡೆ ಯು ವುದಿಲ್ಲ. ಬ್ಯಾಂಕ್ ನೆರವು ಸಿಗಬೇಕಾದರೆ ಅವರಿಗೊಂದು ವಿಳಾಸ ಬೇಕು, ವ್ಯಾಪಾರ-ಉದ್ದಿಮೆ ನಡೆಸುವ ಕಟ್ಟಡ ಬೇಕು, ಅದಕ್ಕೆ ಸಂಬಂಧಿಸಿದ ದಾಖಲೆಗಳು ಬೇಕು. ಇವು ಯಾವುವೂ ಇಲ್ಲದೆ, ಇವರೆಲ್ಲ ವ್ಯಾಪಾರ-ಉದ್ದಿಮೆಗಳನ್ನು ಮಾಡುತ್ತಿದ್ದಾರೆ. ಇವರಲ್ಲಿ ಕೆಲವರ ಹಣಕಾಸಿನ ಮೂಲ, ಪ್ರತಿ ನೂರು ರೂಪಾಯಿಗೆ ದಿನವೊಂದಕ್ಕೆ ಐದರಿಂದ ಹತ್ತು ರೂಪಾಯಿ ಮುರಿದುಕೊಂಡು ಸಾಲ ಕೊಡುವ ಸ್ಥಳೀಯ ಬಡ್ಡಿ ವ್ಯಾಪಾರಿಗಳು. ಬೆಳಗ್ಗೆ ಸಾಲ ಪಡೆದರೆ ಸಂಜೆ ಸಾಲ ತೀರಿಸಬೇಕು. ಒಂದು ವೇಳೆ ತೀರಿಸದಿದ್ದರೆ, ಮರುದಿನ ಹಿಂದಿನ ದಿನದ ಬಡ್ಡಿ ಸೇರಿಸಿ ಕೊಡಬೇಕಾಗುತ್ತದೆ.

ದಿನವೊಂದಕ್ಕೆ ಶೇಕಡ ಐದರಿಂದ ಹತ್ತು ಬಡ್ಡಿಗೆ ಹಣಕಾಸು ಪಡೆದು, ಯಾರದೋ ಅಂಗಡಿ ಎದುರು ಅಥವಾ ಬೀದಿ ಬದಿಯಲ್ಲಿ ವ್ಯಾಪಾರ ಮಾಡುತ್ತಾರೆ. ಈ ಜಾಗಕ್ಕೂ ಬಾಡಿಗೆ ಇದೆ. ದೊಡ್ಡ ಪೇಟೆ, ಪಟ್ಟಣಗಳಲ್ಲಿ ದಿನವೊಂದರ ಬಾಡಿಗೆ ಐವತ್ತು- ನೂರು ಇದ್ದರೆ, ಸಣ್ಣಪುಟ್ಟ ಪೇಟೆಗಳಲ್ಲಿ ಹತ್ತಿಪ್ಪತ್ತು ರೂಪಾಯಿ ಗಳಿರುತ್ತವೆ. ಈ ಬಾಡಿಗೆ ಜತೆಗೆ ತಮ್ಮ ರಕ್ಷಣೆಗಾಗಿ ಪೋಲಿಸರಿಗೆ ಅಥವಾ ಸ್ಥಳೀಯ ಗೂಂಡಾಗಳಿಗೆ ಇಪ್ಪತ್ತರಿಂದ ಐವತ್ತರಷ್ಟು ರೂಗಳ ಹಫ್ತಾ ನೀಡಬೇಕು. ಸಣ್ಣ ಉತ್ಪಾದಕರು ಕೂಡ ಇದೇ ರೀತಿ ಯಲ್ಲಿ ತಮ್ಮ ಮನೆಯಲ್ಲಿ ಅಥವಾ ಸಿಕ್ಕಿದ ಜಾಗದಲ್ಲಿ ಉತ್ಪಾ ದನೆ ನಡೆಸುತ್ತಾರೆ. ಇಷ್ಟೊಂದು ಇತಿಮಿತಿಗಳ ನಡುವೆಯೂ ಅವರು ಕೆಲವು ನೂರು ಲಾಭ ಗಳಿಸುತ್ತಾರೆ. ಇಂತಹ ವ್ಯಾಪಾರ ಉದ್ದಿಮೆ ಗಳು ನಮ್ಮ ದೇಶ/ರಾಜ್ಯದ ಶೇಕಡ ತೊಂಬತ್ತರಷ್ಟು ದುಡಿಯುವ ಜನರಿಗೆ ಉದ್ಯೋಗ ಕೊಟ್ಟಿವೆ. ನಮ್ಮ ದೇಶ/ರಾಜ್ಯದ ಸಂಪತ್ತಿನ ಶೇಕಡ ನಲ್ವತ್ತರಷ್ಟು ಈ ವಲಯದಿಂದ ಬರುತ್ತಿದೆ.

ಇಂತಹ ವ್ಯಾಪಾರ-ಉದ್ದಿಮೆಗಳು ಯಾವುವೂ ನಮ್ಮ ವಿದ್ಯಾರ್ಥಿಗಳ ಪಠ್ಯಗಳಲ್ಲಿ ಉದಾಹರಣೆಗಳಾಗಿಲ್ಲ. ಇವರು ಕೂಡ ಹಣಕಾಸು, ಮಾರುಕಟ್ಟೆ, ಕೆಲಸಗಾರರು ಮತ್ತು ಇತರ ಉತ್ಪಾದನಾ ಪರಿಕರಗಳನ್ನು ತಮ್ಮದೇ ರೀತಿಯಲ್ಲಿ ನಿರ್ವಹಿಸು ತ್ತಿದ್ದಾರೆ. ಇವರು ಎಷ್ಟೊಂದು ಕನಿಷ್ಠ ಸಂಪನ್ಮೂಲಗಳಲ್ಲಿ ತಮ್ಮ ವ್ಯವಹಾರಗಳನ್ನು ನಿರ್ವಹಿಸುತ್ತಾರೆಂದರೆ, ಅಲ್ಲಿ ಸಣ್ಣ ತಪ್ಪಿಗೂ ಅವಕಾಶ ಇರುವುದಿಲ್ಲ. ಸ್ವಲ್ಪ ಹೆಚ್ಚು ಕಡಿಮೆಯಾದರೂ ತಮ್ಮ ಜೀವನಾಧಾರವನ್ನೇ ಕಳೆದುಕೊಳ್ಳುವ ಸಾಧ್ಯತೆ ಇದೆ. ತಮ್ಮ
ಸ್ವಾಧೀನ ಇರುವ ಅತ್ಯಲ್ಪ ಸಂಪನ್ಮೂಲಗಳನ್ನು ಜಾಣ್ಮೆಯಿಂದ ವಿನಿಯೋಗಿಸಿ ಲಾಭ ಗಳಿಸುವ ಕಲೆ ಇವರಿಗೆ ಕರಗತವಾಗಿದೆ.

ಎಲ್ಲ ಸಂಪನ್ಮೂಲಗಳ(ಹಣಕಾಸು, ಭೂಮಿ, ನೀರು, ಕಚ್ಚಾ ಸಾಮಾಗ್ರಿ) ಕೊರತೆ ಅನುಭವಿಸುವ ನಮ್ಮಂತಹ ಸಮಾಜದಲ್ಲಿ ಇಂತಹ ವ್ಯಾಪಾರ-ಉದ್ದಿಮೆಗಳು ಮಾದರಿಯಾಗಬೇಕಿತ್ತು. ಆದರೆ, ಇವರು ಮಾದರಿಯಾಗುವುದು ಬಿಡಿ, ತುಂಬಾ ಸಾಮಾನ್ಯರಿಗೆ ದಕ್ಕುವ ಗೌರವಗಳೂ ಇವರಿಗೆ ದಕ್ಕುತ್ತಿಲ್ಲ. ಸರಕಾರ ಮತ್ತು ಸಮಾಜ ಇವರನ್ನು ತುಂಬಾ ನಿಕಷ್ಟವಾಗಿ ನಡೆಸಿಕೊಳ್ಳು ತ್ತಿವೆ. ಮನಬಂದಂತೆ ಇವರ ವ್ಯಾಪಾರ, ಉದ್ದಿಮೆಗಳನ್ನು ಎತ್ತಂಗಡಿ ಮಾಡುವುದು, ಇವರ ಮನೆಗಳನ್ನು ಎತ್ತಂಗಡಿ ಮಾಡು ವುದು, ನೀರು, ವಿದ್ಯುತ್, ಹಣಕಾಸು, ಭೂಮಿ ಇತ್ಯಾದಿ ಮೂಲ ಸೌಕರ್ಯಗಳನ್ನು ನಿರಾಕರಿಸುವುದು ಇತ್ಯಾದಿ ಕ್ರಮಗಳ ಮೂಲಕ ಸರಕಾರ, ನೀವು ನಮ್ಮ ಸಮಾಜದಲ್ಲಿ ಬದುಕಲು ಯೋಗ್ಯರಲ್ಲ ಎನ್ನುವ ಸಂದೇಶವನ್ನು ಇವರಿಗೆ ರವಾನೆ ಮಾಡುತ್ತಲೇ ಇರುತ್ತದೆ. ನಮ್ಮ ಸಂಸ್ಕೃತಿಯಂತೂ ಹಿಂದಿನಿಂದಲೂ ಬೆವರು ಸುರಿಸಿ ದುಡಿ ಯುವ ಶ್ರಮಿಕರಿಗೆ ವಿಶೇಷ ಮನ್ನಣೆ ನೀಡಿಲ್ಲ. ಈಗಂತೂ ದೇವರು, ದೇಶ ತೋರಿಸಿ ಜನರನ್ನು ಮಂಗ ಮಾಡುವುದನ್ನೇ ನಮ್ಮ ಸಂಸ್ಕೃತಿಯೆಂದು ವ್ಯಾಖ್ಯಾನಿಸಲಾಗುತ್ತಿದೆ.

ಶೇಕಡ ಹತ್ತರಷ್ಟು ಸಂಪನ್ಮೂಲ ಬಳಸಿಕೊಂಡು ಶೇಕಡ ತೊಂಬತ್ತರಷ್ಟು ಜನರು ಬದುಕುವ ಇಂತಹ ವ್ಯಾಪಾರ ಉದ್ದಿಮೆಗಳ ಬದಲು, ಶೇಕಡ ತೊಂಬತ್ತರಷ್ಟು ಸಂಪನ್ಮೂಲ ಬಳಸಿಕೊಂಡು ಶೇಕಡ ಹತ್ತರಷ್ಟು ಜನರಿಗೆ ಉತ್ತಮ ಜೀವನ ನೀಡುವ ವ್ಯಾಪಾರ- ಉದ್ದಿಮೆಗಳನ್ನು ಮಾದರಿಗಳೆಂದು ಸರಕಾರವೇ ಮುಂಚೂಣಿಗೆ ತರುತ್ತಿದೆ. ಇಂತಹ ದೊಡ್ಡ ಉದ್ದಿಮೆಗಳು ಉದ್ಧಾರವಾದರೆ ನಮ್ಮ ಸಮಾಜವೇ ಉದ್ಧಾರವಾಗುತ್ತದೆಯೆಂದು ಸರಕಾರ ಇವರಿಗೆ ನೀರು, ಭೂಮಿ, ಹಣಕಾಸು, ಕಚ್ಚಾ ಸಾಮಗ್ರಿ, ಮಾನವ ಸಂ ನ್ಮೂಲ ಎಲ್ಲವನ್ನು ಹಿಂದೆ ಉಚಿತವಾಗಿ ಮತ್ತು ಇವತ್ತು ಕಡಿಮೆ ದರದಲ್ಲಿ ನೀಡುತ್ತಿದೆ. ದೊಡ್ಡ ವ್ಯಾಪಾರ, ಉದ್ದಿಮೆಗಳಿಗೆ ಮಹತ್ವ ನೀಡುವ ಈ ಮಾದರಿ, ನಮ್ಮ ಸಮಾಜ ಮಾತ್ರವಲ್ಲ, ಸಂಪನ್ಮೂಲ ಗಳ ಕೊರತೆ ಅನುಭವಿಸುವ ಯಾವುದೇ ಸಮಾಜಕ್ಕೂ ಯೋಗ್ಯ ವಲ್ಲ. ಯಾಕೆಂದರೆ, ಈ ಮಾದರಿ ಬಂದಿರುವುದೇ ಶೇಕಡ ಐದ ರಷ್ಟು ಜನರು ಪ್ರಪಂಚದ ಶೇಕಡ ನಲ್ವತ್ತರಷ್ಟು ಸಂಪನ್ಮೂಲಗಳನ್ನು ಅನುಭೋಗಿಸುವ ಸಮಾಜದಿಂದ. ಈ ಸಮಾಜದ ಉತ್ಪಾದನೆ ಯಲ್ಲಿ ಮನುಷ್ಯ ಶ್ರಮಕ್ಕಿಂತ ಮೆಶಿನರಿಗಳ ಬಳಕೆ ಹೆಚ್ಚಿದೆ. ಅದೇ ರೀತಿ ಅಲ್ಲಿನ ಸಂಪತ್ತಿನಲ್ಲೂ ಕಡಿಮೆ ಸಂಖ್ಯೆಯ ಜನ ಹೆಚ್ಚು ಪಾಲು ಪಡೆದು, ಬಹುತೇಕರು ಅತ್ಯಲ್ಪ ಪಾಲು ಪಡೆಯುತ್ತಿದ್ದಾರೆ.

ಹಲವರನ್ನು ನಿರ್ಗತಿಕರನ್ನಾಗಿಸಿ ಕೆಲವರಿಗೆ ಮಾತ್ರ ಉತ್ತಮ ಬದುಕು ನೀಡುವ ಇದೇ ಮಾದರಿಯನ್ನು ನಮ್ಮ ಯುವಕರಿಗೆ ಅರ್ಥ, ವಾಣಿಜ್ಯ, ನಿರ್ವಹಣಾ ಶಾಸ್ತ್ರಗಳ ಹೆಸರಲ್ಲಿ ಉಣಬಡಿಸು ತ್ತಿದ್ದೇವೆ. ಇಂತಹ ಶಿಕ್ಷಣ ಪಡೆದವರ ಕಲಿಕೆ ಮತ್ತು ಅನುಕರಣೆಯ ಮಾದರಿಗಳು ಬಹುರಾಷ್ಟ್ರೀಯ ಕಂಪನಿಗಳು, ದೊಡ್ಡ ದೊಡ್ಡ ಬ್ಯಾಂಕ್‌ಗಳು, ಸ್ಟಾರ್ ಹೋಟೆಲ್‌ಗಳು, ಮಾಲ್‌ಗಳು, ಚೈನ್ ಸ್ಟೋರ್‌ಗಳು, ಮೆಶಿನರಿ ಬಳಸುವ ಕಷಿಗಳು. ಈ ವಿದ್ಯಾರ್ಥಿಗಳಿಗೆ ತಮ್ಮ ಸುತ್ತಮುತ್ತ ನಡೆಯುವ ಸಣ್ಣಪುಟ್ಟ ವ್ಯಾಪಾರ, ಉದ್ದಿಮೆ ಗಳು ತಾವು ಕಲಿಯಬೇಕಾದ ಅಥವಾ ಅನುಕರಿಸಬೇಕಾದ ಮಾದ ರಿಗಳಾಗುವುದಿಲ್ಲ. ಆಮದು ಮಾಡಿಕೊಂಡ ಇಂತಹ ಜ್ಞಾನ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಗುಲಾಮರಂತೆ ದುಡಿ ಯುವ ಮಾನವ ಸಂಪನ್ಮೂಲಗಳನ್ನು ಸಷ್ಟಿಸುತ್ತಿದೆ. ಈ ಜ್ಞಾನ ಇವರನ್ನು ತಮ್ಮದೇ ಪರಿಸರಕ್ಕೆ ಪರಕೀಯವಾಗಿಸಿದೆ. ಬೇಸಿಗೆಯ ಸುಡು ಬಿಸಿಲಲ್ಲೂ ಹಾಕಿಕೊಳ್ಳಬೇಕಾದ ಕೋಟು, ಕಷ್ಟಪಟ್ಟು ಮಾತಾಡಬೇಕಾದ ಇಂಗ್ಲಿಷ್, ರೂಢಿಸಿಕೊಳ್ಳಬೇಕಾದ ಕತಕ ಹಾವಭಾವ ಇತ್ಯಾದಿ ಅನಿವಾರ್ಯತೆಗಳನ್ನು ಈ ವಿದ್ಯಾರ್ಥಿಗಳು ಸಹಿಸಲೇಬೇಕಾಗಿದೆ. ಕೆಲವರು ಇವನ್ನು ಇಷ್ಟಪಟ್ಟು ಕಲಿತರೆ, ಮತ್ತೆ ಕೆಲವರು ಕಷ್ಟಪಟ್ಟು ಕಲಿಯುತ್ತಾರೆ. ಆದರೆ, ಎಲ್ಲರ ಉದ್ದೇಶ ಒಂದೇ-ದೊಡ್ಡ ಉದ್ದಿಮೆಗಳಲ್ಲಿ ನೌಕರಿ ಗಿಟ್ಟಿಸುವುದು. ಯಾರಲ್ಲಿ ಕೂಡ ಸಣ್ಣಪುಟ್ಟ ವ್ಯಾಪಾರ-ಉದ್ದಿಮೆಗಳನ್ನು ಆರಂಭಿಸಿ, ತಾವು ಕೂಡ ಸ್ವತಂತ್ರ ಉದ್ದಿಮೆದಾರರಾಗಬೇಕೆನ್ನುವ ಕನಸನ್ನು ಈ ಶಿಕ್ಷಣ ಬಿತ್ತುತ್ತಿಲ್ಲ.

ಪ್ರಜಾಪ್ರಭುತ್ವದಲ್ಲಿ ಪ್ರಜೆಗಳು ನಿಜವಾಗಿಯೂ ಪ್ರಭುಗಳಾಗಬೇಕಾದರೆ ನಮ್ಮ ಆರ್ಥಿಕ ನೀತಿ ಆಮೂಲಾಗ್ರವಾಗಿ ಬದಲಾಗಬೇಕಾಗಿದೆ. ಶೇಕಡ ತೊಂಬತ್ತರಷ್ಟು ಸಂಪನ್ಮೂಲ ಬಳಸಿ, ಶೇಕಡ ಹತ್ತರಷ್ಟು ಜನರಿಗೆ ಉತ್ತಮ ಬದುಕು ನೀಡುವ ಮಾದರಿಯನ್ನು ಅಧಿಕತಗೊಳಿಸಿ, ಶೇಕಡ ಹತ್ತರಷ್ಟು ಸಂಪನ್ಮೂಲದಿಂದ ಶೇಕಡ ತೊಂಬತ್ತರಷ್ಟು ಜನರು ಬದುಕುವ ವ್ಯವಸ್ಥೆಯನ್ನು ಅನಧಿಕತಗೊಳಿಸುವ ಮಾದರಿಯನ್ನು ಅಭಿವದ್ಧಿ ಎನ್ನಲಾಗುವುದಿಲ್ಲ. ಒಂದು ಕಾಲದಲ್ಲಿ ಇಂತಹ ಸಣ್ಣಪುಟ್ಟ ವ್ಯಾಪಾರಗಳು ಬೆಳೆದು ದೊಡ್ಡ ವ್ಯಾಪಾರ, ಉದ್ದಿಮೆಗಳಾಗುತ್ತವೆ ಎನ್ನುವ ನಂಬಿಕೆಗಳಿದ್ದವು. ಇದೊಂದು ರೀತಿಯಲ್ಲಿ ಇಂದಿನ ಬಡವರು ಮುಂದಿನ ಮಧ್ಯಮ ವರ್ಗ ಮತ್ತು ಇಂದಿನ ಮಧ್ಯಮ ವರ್ಗ ಮುಂದಿನ ಶ್ರೀಮಂತ ವರ್ಗವಾಗುತ್ತದೆ ಎನ್ನುವ ಅಭಿವದ್ಧಿಯ ನಂಬಿಕೆಯಂತೆ. ಇವೆಲ್ಲ ಅವಾಸ್ತವ ಎನ್ನುವುದು ಈಗಾಗಲೇ ಸಾಬೀತಾಗಿದೆ. ಎಲ್ಲ ಬಗೆಯ ಸಂಪನ್ಮೂಲಗಳ ಕೊರತೆ ಅನುಭವಿಸುವ ನಾವಿರುವಂಥ ಸಮಾಜ ಗಳು, ಕನಿಷ್ಠ ಸಂಪನ್ಮೂಲಗಳಲ್ಲಿ ಬಹುತೇಕರಿಗೆ ಬದುಕು ಕೊಡುವ ಆರ್ಥಿಕ ಚಟುವಟಿಕೆಗಳ ಮಾದರಿಗಳಾಗಬೇಕು. ಇದೇ ರೀತಿ ಯಲ್ಲಿ ನಮ್ಮ ಕಾಲೇಜು-ವಿಶ್ವವಿದ್ಯಾಲಯಗಳಲ್ಲಿ ಕಲಿಸುವ ಅರ್ಥ, ವಾಣಿಜ್ಯ, ನಿರ್ವಹಣಾ ಶಾಸ್ತ್ರಗಳು ಕೂಡ ಆಮೂಲಾಗ್ರ ವಾಗಿ ಬದಲಾಗಬೇಕು. ಅಗಾಧ ಪ್ರಮಾಣದ ಸಂಪನ್ಮೂಲಗಳನ್ನು ಬಳಸಿಕೊಂಡು ಸೀಮಿತ ವರ್ಗದ ಆಸಕ್ತಿಗಳನ್ನು ಪೂರೈಸುವ ವ್ಯಾಪಾರ-ಉದ್ದಿಮೆಗಳ ಬದಲು, ಅತ್ಯಲ್ಪ ಬಂಡವಾಳ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಮಾನವ ಸಂಪನ್ಮೂಲ ಬಳಸುವ ವ್ಯಾಪಾರ-ಉದ್ದಿಮೆಗಳು ಕಲಿಕೆಯ ಮಾದರಿಗಳಾಗಬೇಕಾಗಿದೆ.

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ನೀವು ಆರ್ಥಿಕವಾಗಿ ಕೆಳಗೆ ಬಯಸುವಿರಾ?
ನೀವು ವೈಯಕ್ತಿಕ ಸಾಲ ಬೇಕು?
ನೀವು ವ್ಯಾಪಾರ ಅಗತ್ಯ ಸಾಲ ಪ್ರಾರಂಭ?

4% ಬಡ್ಡಿದರದಲ್ಲಿ ವೈಯಕ್ತಿಕ ಅಥವಾ ವ್ಯಾಪಾರ ಸಾಲ ಈಗ ಅನ್ವಯಿಸು ನಮ್ಮ ಕೊಡುಗೆ ಆಸಕ್ತಿ ವೇಳೆ ಹೆಚ್ಚಿನ ಮಾಹಿತಿಗಾಗಿ ಕಂಪನಿಗಳು ಇಮೇಲ್ ಸಂಪರ್ಕಿಸಿ.

ಇಮೇಲ್ ಗೆ: transitfundinggroupllc2001@gmail.com

Mr Josh Hawley ಹೇಳಿದರು...

ಹಲೋ,
ನಾನು ಜೋಶ್ ಹಾಲಿ, ಒಬ್ಬ ವೈಯಕ್ತಿಕ ಸಾಲದಾತ, ವ್ಯಕ್ತಿಗಳು, ಸಂಸ್ಥೆಗಳು, ಸಂಸ್ಥೆಗಳು, ಇತ್ಯಾದಿಗಳಿಗೆ ಯಾವುದೇ ಅವಕಾಶವಿಲ್ಲದೆ 2% ಬಡ್ಡಿದರದಲ್ಲಿ ವಾಸಿಸುವ ಅವಕಾಶವನ್ನು ಒದಗಿಸುವ .... ನಿಮ್ಮ ಸಾಲವನ್ನು ತೀರಿಸಲು ನೀವು ತಕ್ಷಣದ ಸಾಲವನ್ನು ಬೇಕು ಅಥವಾ ನಿಮಗೆ ನಿಮ್ಮ ವ್ಯವಹಾರವನ್ನು ಸುಧಾರಿಸಲು ಸಾಲ ಬೇಕೇ? ಬ್ಯಾಂಕುಗಳು ಮತ್ತು ಇತರ ಹಣಕಾಸು ಸಂಸ್ಥೆಗಳಿಂದ ನಿಮ್ಮನ್ನು ತಿರಸ್ಕರಿಸಲಾಗಿದೆ? ನಿಮಗೆ ಬಲವರ್ಧನೆ ಸಾಲ ಅಥವಾ ಅಡಮಾನ ಅಗತ್ಯವಿದೆಯೇ? ನಿಮ್ಮ ಎಲ್ಲಾ ಚಿಂತೆಗಳೂ ಮುಗಿಯಿತು, ಏಕೆಂದರೆ ನಿಮ್ಮ ಎಲ್ಲ ಹಣಕಾಸಿನ ಸಮಸ್ಯೆಗಳೂ ಹಿಂದಿನ ಒಂದು ವಿಷಯವಾಗಿದೆ.
ಹೆಚ್ಚಿನ ವಿವರಗಳಿಗಾಗಿ (Joshhawleyloanfirm@gmail.com) ಇಮೇಲ್ ಮೂಲಕ ಸಂಪರ್ಕಿಸಿ ..

ಅಭಿನಂದನೆಗಳು!