ಶುಕ್ರವಾರ, ಜುಲೈ 12, 2013

ಕಬಕ ಪುತ್ತೂರಿನ ಕುಂಞಿ ಭೂತ
ಸೌಜನ್ಯ: ಕೆಂಡಸಂಪಿಗೆ
(ಫೋಟೋಗಳು:ಲಕ್ಷ್ಮೀ.ಜಿ.ಪ್ರಸಾದ್)
ಭೂತಾರಾಧನೆ ಕುರಿತು ನನಗೆ ತೀರದ ಕುತೂಹಲ ,ತೀವ್ರ ಸೆಳೆತ.ನನಗೆ ಈ ತನಕ ಹಸರು ಕೂಡಾ ದಾಖಲಾಗದ ಭೂತಗಳ ಬಗ್ಗೆ ಅಧ್ಯಯನ ಮಾಡುವುದು ಒಂದು ಗೀಳು !ಇದಕ್ಕಾಗಿ ರಾತ್ರಿ ಹಗಲಿನ ಪರಿವೆ ಇಲ್ಲದ ತುಳುನಾಡಿನಾದ್ಯಂತ ಕೆಮರಾ ,ರೆಕಾರ್ಡರ್ ಹಿಡಿದುಕೊಂಡು ಸುತ್ತಿದ್ದೇನೆ.ಅಲ್ಲಿ ಇಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವಾದ ವಿಷಯಗಳನ್ನು ಓದಿ ,ಅನೇಕ ಬಾರಿ ಇನ್ನು ಫೀಲ್ಡ್ ವರ್ಕ್ ಗಾಗಿ ರಾತ್ರಿ ಹೋಗುವುದನ್ನು ನಿಲ್ಲಿಸ ಬೇಕು ಎಂದು ಕೊಂಡಿದ್ದೇನೆ .ಆದರೆ ಭೂತಾರಾಧನೆ ಆಗುವುದು ಹೆಚ್ಚಾಗಿ ನಡು ರಾತ್ರಿ !ಒಂದು ಹೊಸ ಭೂತದ ಹೆಸರು ಕೇಳಿದ ತಕ್ಷಣ ಮತ್ತೆ ನನ್ನ ಮನಸ್ಸು ಗರಿಗೆದರಿ ಕುಣಿಯುತ್ತದೆ .ಈ ಒಂದು ಭೂತದ ರೆಕಾರ್ಡ್ ಗೆ ಹೋಗಿ ಬರುವುದು, ಇದು ಕೊನೆಯದ್ದು, ಮುಂದೆ ಇನ್ನು ರಾತ್ರಿ ಹೊತ್ತು ಹೋಗುವುದು ಬೇಡ ಎಂದು ಅಂದು ಕೊಂಡು ಮತ್ತೆ ರೆಕಾರ್ಡಿಂಗ್ ಗೆ ಹೋಗುತ್ತೇನೆ .ಹೀಗೆ ಹೋಗಿ ಹೋಗಿ ಸುಮಾರು ೧೨೮ ಹೊಸ ಭೂತಗಳ ಬಗ್ಗೆ ಮಾಹಿತಿ ಸಂಗ್ರಹವಾಗಿದೆ. ಹೊಸ ಭೂತ ಅಂದರೆ ಹೊಸತಾಗಿ ಬಂದ ಭೂತ ಎಂದರ್ಥವಲ್ಲ. ಈ ತನಕ ಬೆಳಕಿಗೆ ಬಾರದ ಭೂತ ಎಂಬರ್ಥದಲ್ಲಿ ಹೊಸ ಭೂತ ಎಂಬ ಪದ ಬಳಕೆ ಮಾಡಿದ್ದೇನೆ ಅಷ್ಟೆ. ಆದರೂ ದೆಹಲಿ ಹುಡುಗಿಯ ಕಥೆ ಓದಿದ ನಂತರ ಇನ್ನು ಖಂಡಿತವಾಗಿಯೂ ರಾತ್ರಿ ರೆಕಾರ್ಡ್ ಗೆ ಅಂತ ಅಪರಿಚಿತ ಪ್ರದೇಶಕ್ಕೆ ಹೋಗುವುದಿಲ್ಲ  ಅಂತ ನಿರ್ಧರಿಸಿದ್ದೇನೆ. ಮೊನ್ನೆ ಮಣಿಪಾಲದ ವಿದ್ಯಾರ್ಥಿನಿ ಪ್ರಕರಣ ಓದಿದ ಮೇಲೆ ನನ್ನ ಈ ನಿರ್ಧಾರ ಮತ್ತಷ್ಟು ಗಟ್ಟಿಯಾಗಿದೆ. ಆದರೂ ಇದೊಂದು ಬಿಡಲಾಗದ ವ್ಯಾಮೋಹ ನನಗೆ !.

 ನನ್ನ ಈ ಗೀಳನ್ನು ಬೇರೆಯವರಿಗೂ ಹಿಡಿಸಿದ್ದೇನೆ ಕೂಡಾ. ತುಳುನಾಡಿನ ಎಲ್ಲೇ ಹೋಗಲಿ ಯಾರೇ ಸಿಕ್ಕಲಿ, ಪರಿಚಯ ಆದ ಕೂಡಲೇ ಮೆಲ್ಲನೆ ಅವರ ಮನೆ ಸುತ್ತ ಮುತ್ತ ಭೂತಗಳ ಆರಾಧನೆ ಇದೆಯೇ ?ಎಂದು ವಿಚಾರಿಸುತ್ತೇನೆ .ಇಂತ ಸಂದರ್ಭಗಳಲ್ಲಿ ಭೂತಾರಾಧನೆ ಕುರಿತು ಆಸಕ್ತಿ  ಇರುವ ಅನೇಕರು ನನಗೆ ಒಳ್ಳೆಯ ಸ್ನೇಹಿತರಾಗಿದ್ದಾರೆ .ಬೆಳ್ಳಾರೆಯ ಲಕ್ಷ್ಮಿ ಸ್ಟುಡಿಯೋದ ಮಾಲಕಿ ಶ್ರೀಮತಿ  ಪ್ರೀತಾ, ಪಾಲ್ತಾಡಿಯ ನಿರಂಜನ ಶೆಟ್ಟಿ, ಲೋಕೇಶ್ ಸೇಡಿಯಾಪು ಮೊದಲಾದವರು ನನ್ನಂತೆ ಭೂತಾರಾಧನೆ  ಕುರಿತು ಆಸಕ್ತಿ ಹೊಂದಿದ ನನ್ನ ಆತ್ಮೀಯರು. ಸುತ್ತ ಮುತ್ತ ವಿಚಾರಿಸಿ ಅನೇಕ ಈ ತನಕ ಹೆಸರು ಕೂಡಾ ದಾಖಲಾಗದ ಭೂತಗಳ  ಆರಾಧನೆ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ ,ಅಲ್ಲಿ ಹೋಗಿ ರೆಕಾರ್ಡ್ ಮಾಡಲು ಬೇಕಾದ ಎಲ್ಲ ವ್ಯವಸ್ಥೆಗಳನ್ನು ಮಾಡಿಕೊಟ್ಟಿದ್ದಾರೆ. 

ನಮ್ಮ ಬೆಳ್ಳಾರೆ ಪಿ ಯು  ಕಾಲೇಜ್ ಗೆ ೩ ವರ್ಷ ಮೊದಲು  ಅತಿಥಿ ಉಪನ್ಯಾಸಕರಾಗಿ ಉತ್ಸಾಹಿ ಯುವಕ ಲೋಕೇಶ್ ಸೇಡಿಯಾಪು ಬಂದಿದ್ದರು. ಇತಿಹಾಸ ಉಪನ್ಯಾಸಕರಾದ ಇವರಿಗೆ ತುಳು ಸಂಸ್ಕೃತಿ, ಜಾನಪದ, ಭೂತಾರಾಧನೆಗಳ ಕುರಿತು ಆಸಕ್ತಿ ಇದೆ. ಅವರು ಪುತ್ತೂರು  ಸುತ್ತ ಮುತ್ತ ಆರಾಧನೆಯಾಗುವ ಭೂತಗಳ ಹೆಸರನ್ನು  ಸಂಗ್ರಹಿಸಿ ಒಂದೆಡೆ ಬರೆದಿಟ್ಟಿದ್ದರು. ನನ್ನಲ್ಲಿ ಈ ಬಗ್ಗೆ ಹೇಳಿದಾಗ ಆ ಪಟ್ಟಿಯನ್ನು ನನಗೊಮ್ಮೆ ತೋರಿಸಿ ಎಂದು ಹೇಳಿದೆ  ಮರು ದಿವಸ ಬಂದಾಗ ಆ ಪಟ್ಟಿಯನ್ನು ತಂದರು. ಅದರಲ್ಲಿ ೧೧೮ ಭೂತಗಳ ಹೆಸರು ಇತ್ತು . ಅದರಲ್ಲಿ ನನ್ನನ್ನು ಆಕರ್ಷಿಸಿದ್ದು ಭೂತ ಕುಂಞಿ ಭೂತ.

ಆ ಭೂತದ ಹೆಸರು ಎಲ್ಲೂ ದಾಖಲಾಗಿರಲಿಲ್ಲ. ನಾನು ಆ ಹೆಸರನ್ನು ಕೇಳಿರಲಿಲ್ಲ !ಲೋಕೇಶ್ ಅವರಿಗೆ ಈ ಭೂತವನ್ನು ಕಟ್ಟುವ ಕಲಾವಿದ ಸುರೇಶ ನಲಿಕೆಯವರನ್ನು ಪರಿಚಯ ಇತ್ತು. ಒಂದು ದಿನ ಬಿಡುವು ಮಾಡಿಕೊಂಡು ಸುರೇಶರ ಮನೆಗೆ ನಾವು ಹೋದೆವು .ಅಲ್ಲಿ ಅವರು ಈ ಭೂತದ ಕುರಿತಾದ ಸಂಕ್ಷಿಪ್ತ ಮಾಹಿತಿ ನೀಡಿದರು . "ಇನ್ನು ಹೆಚ್ಚಿನ ಮಾಹಿತಿಗೆ ಭೂತದ ಕೋಲ ನಡೆಯುವಲ್ಲಿಗೆ ಬನ್ನಿ .ಅಲ್ಲಿ ಈ ಭೂತದ ಪಾಡ್ದನ ಹೇಳುತ್ತೇವೆ. ಅದನ್ನು ಕೇಳಿ ದರೆ ನಿಮಗೆ ಎಲ್ಲ ವಿಚಾರ ತಿಳಿಯುತ್ತದೆ" ಎಂದು ತಿಳಿಸಿದರು . ಈ ಭೂತದ ಕೋಲ ಇದ್ದಾಗ ನಮಗೆ ತಿಳಿಸುವಂತೆ ಕೇಳಿಕೊಂಡು ಹಿಂದೆ  ಬಂದೆವು. ಆ ಸಮಯದಲ್ಲಿ ನನ್ನ ಪುಸ್ತಕ ತುಂಡು ಭೂತಗಳು - ಒಂದು ಅಧ್ಯಯನ ಪ್ರಕಟಣೆಗೆ ಸಿದ್ಧವಾಗುತ್ತಿತ್ತು .

 ಈ ಭೂತದ ಬಗ್ಗೆಯೂ ನನಗೆ ತಿಳಿದ ವಿಚಾರವನ್ನು ಬರೆದು ಸೇರಿಸಿದೆ. ನನಗೆ ಬೆಳ್ಳಾರೆಯಲ್ಲಿ ಆತ್ಮೀಯರಾಗಿದ್ದ ,ಬಹಳ ಸಹೃದಯಿಗಳೂ ಸಾಹಿತ್ಯ ಪ್ರಿಯರೂ ಆದ  ವೈದ್ಯರಾದ ಡಾಕ್ಟರ್ ನಾರಾಯಣ ಭಟ್ ಮತ್ತು ಅವರ ಮಡದಿ ಮಹಾಲಕ್ಷ್ಮಿ ಅಮ್ಮ ನನ್ನ ಪುಸ್ತಕವನ್ನು ಖರೀದಿಸಿ ನಂಗೆ ಬೆಂಬಲ ನೀಡಿದರು . ಅದರಲ್ಲಿ ಕುಂಞ ಭೂತದ ಬಗ್ಗೆ ಬರೆದಿರುವುದನ್ನು ಓದಿ ಆಶ್ಚರ್ಯದಿಂದ "ಈ ಭೂತದ ಬಗ್ಗೆ ನಿಮಗೆ ಹೇಗೆ ತಿಳಿಯಿತು ?! ಇದು ನಮ್ಮ ಮನೆಯಲ್ಲಿ ಮಾತ್ರ ಆರಾಧನೆಗೊಳ್ಳುವ ಭೂತ !"ಎಂದು ಕೇಳಿದರು .ಮಹಾಲಕ್ಷ್ಮಿ ಅಮ್ಮನವರ ತಂದೆ ಮನೆ ಪುತ್ತೂರು ಹತ್ತಿರದ ಕಬಕ ಸಮೀಪ ಇದೆ. ಅಲ್ಲಿ ಅವರ ತಂದೆ ಮನೆ ಬೈಪ್ಪದವಿನಲ್ಲಿ ಈ ಭೂತಕ್ಕೆ ಕೋಲ ನೀಡಿ ಆರಾಧನೆ ಸಲ್ಲಿಸುತ್ತಾರೆ. ಮುಂದಿನ ಸಲ ಈ ಭೂತದ ಕೋಲ ಇರುವಾಗ ನಿಮಗೆ ತಿಳಿಸುತ್ತೇನೆ .ಅಲ್ಲಿ ಬಂದು ಭೂತದ ಬಗ್ಗೆ ರೆಕಾರ್ಡ್ ಮಾಡಿ ಬೇಕಾದ ಮಾಹಿತಿ ಪಡೆಯಬಹುದು ಎಂದೂ ತಿಳಿಸಿದರು. ಅವರು ಹೇಳಿದಂತೆಯೇ ಅವರಲ್ಲಿ ಈ ಭೂತದ ಕೋಲ ಇದ್ದಾಗ ನನಗೆ ತಿಳಿಸಿದರು .

  ಮಹಾಲಕ್ಷ್ಮಿಅಮ್ಮ ನ ಜೊತೆಗೆ ಅವರ ತಂದೆ ಮನೆ ಬೈಪ್ಪದವಿಗೆ ಹೋದೆ .ಅಲ್ಲಿ ಈ ಭೂತವನ್ನು ಕಟ್ಟಲು ಸುರೇಶ ನಲಿಕೆ ಮತ್ತವರ ಕುಟುಂಬದವರು ಬಂದಿದ್ದರು .ಬೈಪ್ಪದವು ಕುಟುಂಬದ ಎಲ್ಲ ಸದಸ್ಯರು ನನಗೆ ತುಂಬು ಪ್ರೋತ್ಸಾಹ ನೀಡಿದ್ದಾರೆ .ಜೊತೆಗೆ ಸಹೃದಯಿ ಸುರೇಶ ನಲಿಕೆ ಮತ್ತು ಅವರ ಮಡದಿ ಕೂಡಾ ಎಲ್ಲ ಮಾಹಿತಿಯನ್ನು ನೀಡಿದರು. ಭೂತದ ಕೋಲದ ಸಮಯದಲ್ಲಿ ಆ ಭೂತದ ಪೂರ್ಣ ಪಾಡ್ದನವನ್ನು ಸ್ಪಷ್ಟವಾಗಿ ಹಾಡಿದರು. ಅದನ್ನು ರೆಕಾರ್ಡ್ ಮಾಡಿ ಈ ಭೂತದ ಬಗ್ಗೆ ಬೇಕಾದ ಎಲ್ಲ ಮಾಹಿತಿಯನ್ನು ನಾನು ಒಟ್ಟಿಗೆ ಕಲೆ ಹಾಕಿದೆ .ಈ ಭೂತ ಅಲ್ಲದೆ ದಾರು- ಕುಂದಯರೆಂಬ ಎರಡು ಭೂತಗಳ ಬಗ್ಗೆ ಕೂಡ ಇಲ್ಲಿ ಮಾಹಿತಿ ತಿಳಿಯಿತು.  ಅಣ್ಣಪ್ಪ ದೈವದ ಸೇರಿಗೆಗೆ ಸಂದು ಹೋಗಿ ಕಬಕ ಪುತ್ತೂರಿನ ಬೈಪ್ಪದವು ಮನೆಯವರಿಂದ ಆರಾಧನೆ ಪಡೆವ  ಕುಂಞಿಭೂತ ಮೂಲತಃ ಮಲೆಯರ ಹುಡುಗಿ. ಬೈಪ್ಪದವು ಮನೆಯಲ್ಲಿ ವರುಷಕ್ಕೊಮ್ಮೆ ಅಣ್ಣಪ್ಪ ಹಾಗೂ ಇತರ ಸೇರಿಗೆ ದೈವಗಳಿಗೆ ಕೋಲ ನೀಡಿ ಆರಾಧಿಸುತ್ತಾರೆ. ಇಲ್ಲಿನ ಸೇರಿಗೆ ದೈವಗಳಲ್ಲಿ ಕುಂಞಿ ಭೂತ ಹೆಚ್ಚು ಮಹತ್ವವನ್ನು ಪಡೆದಿದೆ.

 ಕುಂಞಿ ಭೂತಕ್ಕೆ ಎಳೆಯ ತರುಣಿಯಂತೆ ಸೀರೆ ಉಟ್ಟು ಬೊಟ್ಟು ಇಟ್ಟು ಹೂ ಮುಡಿದು ಭೂತ ಕಟ್ಟುತ್ತಾರೆ. ಮುಖಕ್ಕೆ ಅರದಳ ಹಾಕುವಾಗ ಮತ್ತು ನಂತರ ಕುಣಿಯುವಾಗ  ಕುಂಞ ಭೂತಕ್ಕೆ ಸಂಬಂಧಿಸಿದ  ಪಾಡ್ದನವನ್ನು ಭೂತ ಮಾಧ್ಯಮರು ಹಾಡುತ್ತಾರೆ.

 ಆ ಏ  ಯೇ
ಬೈಪ್ಪದವು ನಾಲಿಲ್ಲುದ ಉಳಾಯಿ
ಜತ್ತುದು ಬನ್ನಾಗ.......
ಅಪ್ಪೆ ಪಣ್ಣಗ ಉಳ್ಳೇರು ಮಲೆನಾಳು
ಅಮ್ಮೆ ಪಣ್ಣಗ ಉಳ್ಳೆರು ಮಲೆನಾಯೇ
ಅಕುಲೆಗು ಪುಟ್ಟಿನ ಮಗಳು ಪಣ್ಣಾಗ
ಆ   ನಾ   ಯೇ
ಕನ್ನಡ ಅನುವಾದ :
ಆ ಏ   ಯೇ ...ಬೈಪ್ಪದವು ನಾಲ್ಕು ಮನೆಯ ಒಳಗೆ ಇಳಿದು ಬರುವಾಗಾ ....ತಾಯಿ ಎಂದರೆ ಇದ್ದಾರೆ ಮಲೆಯವಳು ತಂದೆ ಎಂದು  ಹೇಳುವಾಗ ಇದ್ದಾರೆ ಮಲೆಯವನು ಅವರಿಗೆ ಹುಟ್ಟಿದ ಮಗಳು ಎನ್ನುವಾಗ ಆ   ನಾ ಏ ..
ಮಲೆಯ ದಂಪತಿಗಳಿಗೆ ಒಂದು ಹೆಣ್ಣು ಮಗು ಹುಟ್ಟುತ್ತದೆ . ಮಲೆಯ ದಂಪತಿಗಳಿಗೆ ಹೆಣ್ಣು ಮಗು ಹುಟ್ಟಿದಾಗ ಮಲೆಯರ ಸಂಪ್ರದಾಯದಂತೆ ಹದಿನಾರನೆಯ ದಿವಸ ಮಡಿವಾಳ್ತಿ ಅಬ್ಬಕ್ಕನನ್ನು ಕರೆಯಿಸಿ ಶುದ್ಧ ಸ್ನಾನ ಮಾಡಿಸಿ ಮಗುವನ್ನು ತೊಟ್ಟಿಲಿಗೆ ಹಾಕುತ್ತಾರೆ, ಸೊಂಟಕ್ಕೆ ನೂಲು ಕಟ್ಟುತ್ತಾರೆ. ಅನ್ನ ಪ್ರಾಶನ ಮಾಡಿ ಕುಂಞಿ ಎಂದು ಹೆಸರಿಡುತ್ತಾರೆ
ಆಳೆನು ತೊಟ್ಟಿಲುಗು ಪಾಡಿಯೇರು
ನೂಲು ಕಟ್ಟಾದೇರು
ಬಾಯಿದ ನುಣುಪ್ಪು ಮೈಪ್ಪಾದೆರು
ಪುದರು ಪುರಪ್ಪು ಲೆಪ್ಪಾದೇರು
 ಕುಂಞ ಕುಂಞಿೀಂದುಂಯಾ

ಕನ್ನಡ ಅನುವಾದ :
ಅವಳನ್ನು ತೊಟ್ಟಿಲಿಗೆ ಹಾಕಿದರು. ನೂಲು ಕಟ್ಟಿಸಿದರು ಹೆಸರು ಹಿಡಿದು ಕರೆಸಿದರು ಕುಂಞಿ  ಎಂದು ಕರೆದರು  ಕುಂಞಿ
ಮಲೆಯರ ಮುದ್ದಿನ  ಹೆಣ್ಣು  ಮಗು  ಬೆಳೆದು ಕುಂಞಿ ದೊಡ್ಡವಳಾಗುತ್ತಾಳೆ. ಹತ್ತು ಹನ್ನೆರಡು ವರುಷಗಳಾಗುವಾಗ ಅವಳು ಋತುಮತಿಯಾಗುತ್ತಾಳೆ.
ಏಳು ಎಣ್ಮ ಒಂರ್ಬ ಕರಿತುಂಡು ಮಗಳೆಗು
ಪತ್ತು ಪದುರಾಡು  ವರ್ಷ
ಮೆರೆವೊಂಡು ಬರ್ಪುಂಡುಗು ಕುಂಞಿ
ಒರಿಯನ ಒಡ್ಡಾರಗು ಆತಾಳು ಕುಂಞಿಮಡಿಮುಟ್ಟಾಳು ಪೋತಾಳು ಕುಂಞಿಮದಿಮಾಳು ಆತಾಳು ಕುಂಞಿ
ಕನ್ನಡ ಅನುವಾದ :
ಏಳು ಎಂಟು ಒಂಬತ್ತು ಕಳೆಯಿತು ಮಗಳಿಗೆ ಹತ್ತು ಹನ್ನೆರಡು ವರ್ಷ ಆಗಿ ಕೊಂಡು  ಬರುತ್ತದೆಒಬ್ಬನ ಒಡ್ಡೋಲಗಕ್ಕೆ (?) ಆಗಿದ್ದಾಳೆ ಕುಂಞಿಮಡಿ ಮುಟ್ಟು  ಹೋಗಿದ್ದಾಳೆ ಕುಂಞಿ ಮದುಮಗಳು ಆಗಿದ್ದಾಳೆ ಕುಂಞಿ ನಾಲ್ಕನೆಯ ದಿವಸ ಸ್ನಾನ ಮಾಡಲೆಂದು "ಆಲಿಕಲ್ಲು" ಎಂಬ ಹೆಸರಿನ ನೀರಿನ ಮಡುವಿಗೆ ಕುಂಞಿ ಇಳಿಯುತ್ತಾಳೆ. ಇದೇ ಹೊತ್ತಿನಲ್ಲಿ ಬೈಪ್ಪದವಿನಲ್ಲಿ ಅಣ್ಣಪ್ಪ ದೈವದ ನೇಮ ನಡೆಯುತ್ತಿದ್ದು ದೈವ ಎದ್ದು ನಿಲ್ಲುತ್ತದೆ. ದೈವದ ದೃಷ್ಟಿ ಬಿದ್ದು ಕುಂಞಿ  ಮಾಯವಾಗುತ್ತಾಳೆ. ಮಾಯವಾದ ಕುಂಞಿ ಅಣ್ಣಪ್ಪ ದೈವದ ಸೇರಿಗೆಗೆ ಸಂದು ಹೋಗಿ ಕುಂಞಿ ಭೂತವಾಗಿ ಆರಾಧನೆ ಪಡೆಯುತ್ತಾಳೆ.
ಓ ಎನ್ನನು ಲೆಪ್ಪಾಡೇ ಎನ್ನನು ಬುಳ್ಪಾಡೇ
ಬೈಪ್ಪದವು ನಾಲು ಇಲ್ಲುದ ಕತೃಳೆನ
ನಂಬಿಯಾರು ನಾಕುಲೆನ ಇಲ್ಲುಡು
ನಂಬಿಯಾರು ನಾಕುಲೆನ ದೈವದ ಸೇರಿಗೆಯಾದು
ನಂಬಿಯಾರುನಾಕುಲೆನ ದೈವದ ಚಿತ್ತ ಪತ್ತೊಂಡೇ
ಆ   ನಾ   ಯೇ.....ಓ
ನನ್ನನ್ನು ಕರೆಯಬೇಡಿ ನನ್ನನ್ನು (ನನಗಾಗಿ )ಅಳಬೇಡಿ ಬೈಪ್ಪದವು ನಾಲ್ಕು ಮನೆಯ ಒಡೆಯರ ನಂಬಿಯಾರರ ಮನೆಯಲ್ಲಿ ನಂಬಿಯಾರರ ದೈವದ ಸೇರಿಗೆಯಾಗಿ ನಂಬಿಯಾರರರ ದೈವದ ಚಿತ್ತ (ಅನುಗ್ರಹ ) ಹಿಡಿದುಕೊಂಡೆ ಆ   ನಾ   ಏ ......ಭೂತದ ಕೋಲ ಆಗುವಾಗ ಈ ಪಾಡ್ದನವನ್ನು ಹಾಡುತ್ತಾ ಈ ಹುಡುಗಿಯನ್ನು ಕರೆಯುವ ಅವಳನ್ನು ಹುಡುಕುವ ಅಭಿನಯ ಮಾಡುತ್ತಾರೆ ಆಗ ಅವಳು "ನನ್ನನ್ನು ಹುಡುಕಬೇಡಿ ನಾನು ಅಣ್ಣಪ್ಪ ದೈವದ ಸನ್ನಿಧಿಗೆ ಸೇರಿ ಹೋಗಿದ್ದೇನೆ" ಎಂದು ತಿಳಿಸುವುದನ್ನು ಹಾಡಿನ ಮೂಲಕ ಹೇಳಿ ಅಭಿನಯಿಸುತ್ತಾರೆ .ಈ ಪರಿಸರದಲ್ಲಿ ಒಡೆಯನನ್ನು ಮಲೆ ಕುಡಿಯ ಜನಾಂಗದವರು ನಂಬಿಯಾರ್ ಎಂದು ಕರೆಯುತ್ತಾರೆ. ರಾತ್ರಿ ೯ ಗಂಟೆಗೆ ಈ ಭೂತದ ಕೋಲ ಆರಂಭವಾಗಿ ಸುಮಾರು ೧೨ ಗಂಟೆ ಹೊತ್ತಿಗೆ ಮುಗಿಯಿತು. ಅನಂತರ ಅಣ್ಣಪ್ಪ ದೈವದ ನೇಮ ಇತ್ತು .ಇಲ್ಲಿ "ಅಣ್ಣಪ್ಪ ದೈವವನ್ನು ಹೆಂಗಸರು ನೋಡಬಾರದು" ಎಂಬ  ನಿಯಮ ಇರಲಿಲ್ಲ

.ಇತರೆಡೆಗಳಲ್ಲಿ ಅಣ್ಣಪ್ಪ ದೈವದ ನೇಮವನ್ನು ಸ್ತ್ರೀಯರು ನೋಡುವಂತಿಲ್ಲ! ಆದ್ದರಿಂದ ಅಣ್ಣಪ್ಪ ದೈವದ ನೇಮವನ್ನು ರೆಕಾರ್ಡ್ ಮಾಡುವ ಅವಕಾಶವನ್ನು ಕಳೆದುಕೊಳ್ಳದೆ ರೆಕಾರ್ಡ್ ಮಾಡಿಕೊಂಡೆ .ಬೆಳಗ್ಗಿನ ಜಾವ ೪-೫ ಗಂಟೆ ಹೊತ್ತಿಗೆ ದಾರು -ಕುಂದಯ ಎಂಬ  ಎರಡು ಅಪರೂಪದ ಭೂತಗಳಿಗೆ ಇಲ್ಲಿ ಕೋಲ ಇತ್ತು. ಅದನ್ನು ರೆಕಾರ್ಡ್ ಮಾಡಿದ್ದೇನೆ .ಈ ದೈವಗಳಿಗೂ ಒಂದು ಕುತೂಹಲಕಾರಿ ಕಥಾನಕ ಇದೆ .ಮುಂದೆ ಅವಕಾಶ ಸಿಕ್ಕಾಗ ತಿಳಿಸುತ್ತೇನೆ .

ವಾಸ್ತವಿಕ ನೆಲೆಯಿಂದ ಆಲೋಚಿಸಿದರೆ  ಕುಂಞಿ ಸ್ನಾನ ಮಾಡುವಾಗ ಆಕಸ್ಮಾತ ಜಾರಿ ಬಿದ್ದು ನೀರಿನಲ್ಲಿ ಮುಳುಗಿ ಮರಣ ಹೊಂದಿರ ಬಹುದು. ಇಲ್ಲವೇ ಸ್ನಾನಕ್ಕೆ ಬಂದ ಅವಳಿಗೆ ಯಾರೋ ಒಬ್ಬಾತ ತೊಂದರೆ ಕೊಟ್ಟಿದ್ದು, ಅವಳು ಸಾವಿಗೀಡಾಗಿರಬಹುದು. ಇಂಥಹ ಸಂದರ್ಭಗಳಲ್ಲಿ ದೈವದ ಮಹಿಮೆಯ ಕಥಾನಕಗಳು ಸಹಜವಾಗಿದ್ದು ಇಲ್ಲಿ ಕೂಡಾ ಅಣ್ಣಪ್ಪ  ದೈವ ಮಾಯ ಮಾಡಿತೆಂಬ ಕಥಾನಕ ಸೇರಿಕೊಂಡಿರಬಹುದು.
ಕಾಲಾಂತರದಲ್ಲಿ ಅವಳು ದೈವತ್ವವನ್ನು ಪಡೆದು ಅಣ್ಣಪ್ಪ ದೈವದೊಂದಿಗೆ ಆ ಪರಿಸರದಲ್ಲಿ ಆರಾಧನೆ ಪಡೆದಿರಬಹುದು. ಚಿಕ್ಕ ಮಕ್ಕಳಿಗೆ ಅನಾರೋಗ್ಯ ಉಂಟಾದಾಗ ಕುಂಞಿಭೂತಕ್ಕೆ  ಹಾಲನ್ನು ಎರೆಯುತ್ತೇವೆ ಎಂದು ಹರಿಕೆ ಹೇಳುವ ಪದ್ದತಿ ಇಲ್ಲಿ ಪ್ರಚಲಿತವಾಗಿದೆ. ಕುಂಞಿ ಎಳೆಯ ಹುಡುಗಿಯಾದ್ದರಿಂದ ಕುಂಞಿ  ಭೂತಕ್ಕೆ ಹಾಲನ್ನು ನೀಡುವ ಪದ್ದತಿ ಬಳಕೆಗೆ ಬಂದಿರಬಹುದು. ಬಸುರಿ ಬಾಣಂತಿ ಹಾಗೂ ಎಳೆಯ ಮಕ್ಕಳ ರಕ್ಷಣೆಯನ್ನು ಈ ಭೂತ ಮಾಡುತ್ತದೆ ಎಂಬ ನಂಬಿಕೆ ಪ್ರಚಲಿತವಿದೆ . ಇಲ್ಲಿ ಸುತ್ತ ಮುತ್ತ ಮಕ್ಕಳು ಹುಟ್ಟಿದಾಗ,ಹಸು ಕರು ಹಾಕಿದಾಗ  ಜನರು ಈ ಭೂತ ನೇಮಕ್ಕೆ ಬಂದು ಹಾಲನ್ನು ಅರ್ಪಿಸಿ ಧನ್ಯರಾಗುತ್ತಾರೆ.


3 ಕಾಮೆಂಟ್‌ಗಳು:

laxmi prasad ಹೇಳಿದರು...
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
ಡಾ.ಲಕ್ಷ್ಮೀ ಜಿ ಪ್ರಸಾದ ಹೇಳಿದರು...

ನನ್ನ ಲೇಖನ ಕಬಕ ಪುತ್ತೂರಿನ ಕುಂಞಿ ಭೂತ ವನ್ನು ಹಂಚಿಕೊಂಡದ್ದಕ್ಕೆ ಧನ್ಯವಾದಗಳು ಇದಲ್ಲದೆ ಅಬ್ಬೆ ಜಲಾಯ ,ಕುಲೆ ಭೂತಗಳು ,ಅರಬ್ಬೀ ಚೀನಿ ಭೂತಗಳು ,ಹಿಂದೂ ಮುಸ್ಲಿಂ ಸಾಮರಸ್ಯ ಬೆಸೆದ ಆಲಿ ಭೂತ ,ತುಳು ಭೂತವಾದ ಬ್ರಿಟಿಶ್ ಸುಭೇದಾರ ಕನ್ನಡ ಬೀರೆ ಮೊದಲಾದ ನಾನು ಸಂಶೋಧಿಸಿ ಮಾಹಿತಿ ಸಂಗ್ರಹಿಸಿ ಅಧ್ಯಯನ ಮಾಡಿದ ಭೂತಗಳ ಬಗ್ಗೆಯೂ ಹೆಚ್ಚಿನ ಮಾಹಿತಿಗೆ ಆಸಕ್ತರು ನನ್ನ ಬ್ಲಾಗ್ ಅನ್ನು ನೋಡ ಬಹುದು
ಭೂತಗಳ ಬಗ್ಗೆಯೂ ನನ್ನ ಬ್ಲಾಗ್ ನಲ್ಲಿ ಮಾಹಿತಿ ಇದೆ ನನ್ನ ಬ್ಲಾಗ್ http//laxmipras.blogspot.com

ಧನ್ಯವಾದಗಳು

ಲಕ್ಷ್ಮೀ ಜಿ ಪ್ರಸಾದ

Padyana Ramachandra ಹೇಳಿದರು...

ಜಾನಪದ ಸಂಸ್ಕೃತಿ ಅಧ್ಯಯನದಲ್ಲಿ ಆಸಕ್ತರಾಗಿರುವ ಡಾ.ಲಕ್ಷ್ಮೀ ಜಿ ಪ್ರಸಾದ ಅವರು ಪಿಎಚ್ ಡಿ ಪದವಿಯನ್ನು ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ ಎಂಬ ಸಂಶೋಧನಾ ಮಹಾ ಪ್ರಬಂಧವನ್ನು ರಚಿಸಿ ಹಮಿ ವಿಶ್ವ ವಿದ್ಯಾಲಯದಿಂದ ಪಡೆದಿದ್ದಾರೆ .ಈ ತನಕ ಹೆಸರು ಕೂಡಾ ದಾಖಲಾಗದ 125 ಕ್ಕೂ ಹೆಚ್ಚು ತುಳು ಭೂತಗಳ ಬಗ್ಗೆ ಅಧ್ಯಯನ ಮಾಡಿರುವ ಇವರ ಬೆಳಕಿನೆಡೆಗೆ ,ತುಂಡು ಭೂತಗಳು ಒಂದು ಅಧ್ಯಯನ ,ತುಳುನಾಡಿನ ಅಪೂರ್ವ ಭೂತಗಳು ,ತುಳುನಾಡಿನ ನಾಗ ಬ್ರಹ್ಮ ಮತ್ತು ಕಂಬಳ –ಒಂದು ವಿಶ್ಲೇಷಣಾತ್ಮಕ ಅಧ್ಯಯನ ,ಭೂತಗಳ ಅದ್ಭುತ ಜಗತ್ತು ,ಪಾಡ್ದನ ಸಂಪುಟ ,ಕಂಬಳ ಕೋರಿ ನೇಮ ,ಚಂದ ಬಾರಿ ರಾಧೇ ಗೋಪಾಲ ಮತ್ತು ಇತರ ಪಾಡ್ದನಗಳು ,ತುಳುಜನಪದ ಕವಿತೆಗಳು ,ಕನ್ನಡ ತುಳು ಜನಪದ ಕಾವ್ಯಗಳಲ್ಲಿ ಸಮಾನ ಆಶಯಗಳು ,ತುಳು ಜನಪದ ಕಾವ್ಯಗಳಲ್ಲ್ಲಿ ಕಾವ್ಯ ತತ್ವಗಳು ಮೊದಲಾದ 20 ಕ್ಕೂ ಹೆಚ್ಚು ಕೃತಿಗಳು ಪ್ರಕಟವಾಗಿವೆ ,ಇವರ ನಿರಂತರ ಅಧ್ಯಯನ ,ಬರವಣಿಗೆ ಬೆರಗು ಹುಟ್ಟಿಸುತ್ತವೆ

-ಪ. ರಾಮಚಂದ್ರ ,
ದುಬೈ -ಸಂಯುಕ್ತ ಅರಬ್ ಸಂಸ್ಥಾನ