ಶುಕ್ರವಾರ, ಜುಲೈ 26, 2013

ಕೆ.ಕೆ.ಮಕಾಳಿ ಕಲೆಯ ದೇಸೀಯತೆ
ಡಾ.ಅರುಣ್ ಜೋಳದಕೂಡ್ಲಿಗಿ


ಜನಪದವನ್ನು ಒಂದು ಸಂವೇದನೆಯನ್ನಾಗಿ ಸಾಹಿತಿಗಳು, ಸಂಗೀತಗಾರರು, ಕಲಾವಿದರು ತಮ್ಮ ತಮ್ಮ ಮಾದ್ಯಮಗಳಲ್ಲಿ ದಾಟಿಸುತ್ತಿದ್ದಾರೆ. ಹೀಗೆ ಜನಪದ ಸಂವೇದನೆ ಬಹುಮುಖಿಯಾಗಿ ಅಭಿವ್ಯಕ್ತಗೊಳ್ಳುತ್ತಲೇ ಬಂದಿದೆ. ಇಂತಹ ಅಭಿವ್ಯಕ್ತಿಗಳಲ್ಲಿ ಜನಪದದ ಸೃಜನಶೀಲ ಜಗತ್ತು ವಿಸ್ತರಿಸುತ್ತದೆ. ಬೇಂದ್ರೆ ಕಂಬಾರರು ಜನಪದ ಕಾವ್ಯವನ್ನು ದುಡಿಸಿಕೊಂಡರೆ, ಕರ್ನಾಡರು ಜನಪದ ಪುರಾಣಗಳ ಪ್ರೆರಣೆ ಪಡೆಯುತ್ತಾರೆ. ಇನ್ನು ಜನಪದ ಕಲೆಯ ಪ್ರೇರಣೆಯನ್ನು ಪಡೆದ ಚಿತ್ರಕಲಾವಿದರು, ಶಿಲ್ಪಿಗಳು ಹಲವರಿದ್ದಾರೆ.

Photo
ಜನಪದವನ್ನು ಒಂದು ಸಂವೇದನೆಯನ್ನಾಗಿ ತಮ್ಮ ರೇಖೆ ಚಿತ್ರಗಳಲ್ಲಿ ದಾಟಿಸುವ ಕಾರಣಕ್ಕೆ ಕೆ.ಕೆ.ಮಕಾಳಿಯವರು ವಿಶಿಷ್ಟವಾಗಿ ಗುರುತಿಸಿಕೊಂಡಿದ್ದಾರೆ. ಮಕಾಳಿಯವರು ತಮ್ಮ ಕಲಾಕೃತಿಗಳನ್ನು ಪ್ರದರ್ಶನ ಮಾಡಿದಾಗಲೆಲ್ಲಾ ನೋಡುಗರಲ್ಲಿ ದೇಸಿ ಅಭಿವ್ಯಕ್ತಿಯ ಹೊಸ ಬಗೆಯ ಅನುಭವ ನೀಡುತ್ತವೆ. ಕ್ಯಾನ್ವಾಸಿನ ನೋಡುವಿಕೆಯ ಕ್ರಮದಲ್ಲಿ ಉಂಟಾದ ಸಿದ್ದ ಗ್ರಹಿಕೆಯನ್ನು ಒಡೆಯುತ್ತವೆ.
Photo

ಕನ್ನಡ ವಿಶ್ವವಿದ್ಯಾಲಯ ಹಂಪಿಯಲ್ಲಿ ಕಲಾವಿದರಾಗಿ ಕೆಲಸ ಮಾಡುವ ಮಕಾಳಿಯವರು ಬಾಗಲಕೋಟೆ ಜಿಲ್ಲೆಯ ಕೊರ್ತಿಯವರು. ಹಲವು ಏಕವ್ಯಕ್ತಿ, ಗುಂಪು ಕಲಾಪ್ರದರ್ಶನ ಮಾಡಿದ್ದಾರೆ. ಕಲೆಗಾಗಿ ಕರ್ನಾಟಕ ಲಲಿತಕಲಾ ಅಕಾಡೆಮಿ, ರೇನ್ ಬೋ ಬೆಸ್ಟ್ ಆರ್ಟಿಸ್ಟ್ ಮುಂತಾದ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ಕಲಾಶಿಭಿರಗಳಲ್ಲಿ ಶಿಭಿರಾರ್ತಿಯಾಗಿಯೂ, ಉಪನ್ಯಾಸಕರಾಗಿಯೂ, ನಿರ್ದೇಶಕರಾಗಿಯೂ, ಕಲಾಸ್ಪರ್ಧೆಗಳ ಜೂರಿಯಾಗಿಯೂ ಕಲಾ ಚಟುವಟಿಕೆಗಳಲ್ಲಿ ಕ್ರಯಾಶೀಲರಾಗಿದ್ದಾರೆ.
Photo

ಮಕಾಳಿಯವರು ಕಲೆಯನ್ನು ಶಾಸ್ತ್ರಬದ್ದವಾಗಿ ಕಲಿತದ್ದಕ್ಕಿಂತ, ಬದುಕಿನ ಪಾಕಶಾಲೆಯಲ್ಲಿ ಅನೌಪಚಾರಿಕವಾಗಿ ಕಲಿತದ್ದೆ ಹೆಚ್ಚು. ಹಾಗಾಗಿ ಅವರ ಕಲಾ ಅಭಿವ್ಯಕ್ತಿಯಲ್ಲಿ ಅಕಾಡೆಮಿಕ್ ಘಾಟು ಕಾಣದೆ, ಗ್ರಾಮೀಣ ಸಂವೇದನೆಯ ಸಹಜತೆ ಉಸಿರಾಡುತ್ತದೆ. ರೇಖಾಚಿತ್ರಗಳಲ್ಲಿ ಮಕಾಳಿಯವರ ಓಘ, ರೇಖೆಗಳ ಬೀಸು, ಚಲನೆ ಎಂತವರನ್ನು ಚಕಿತಗೊಳಿಸುತ್ತದೆ. ಅವರು ಜನಪದ ಕಲೆ, ಕಲಾವಿದರ ಬಗೆಗೆ ಮಾಡಿದ ರೇಖಾಚಿತ್ರಗಳು ಕರ್ನಾಟಕ ಜಾನಪದವನ್ನು ಅರ್ಥಮಾಡಿಕೊಳ್ಳಲು ತುಂಬಾ ಸಹಕಾರಿಯಾಗಿವೆ.

Photo
ವಿಶೇಷವೆಂದರೆ ಮಕಾಳಿಯವರ ಪೇಂಟಿಂಗ್ ನಲ್ಲಿಯೂ ಎದ್ದುಕಾಣುವುದು ಅವರ ರೇಖೆಗಳೆ. ತಪ್ಪುಗಳನ್ನು ಮಚ್ಚಿಹಾಕಬಹುದಾದ ಸಾದ್ಯತೆಗಳು ಪೇಂಟಿಂಗ್ನಲ್ಲಿರುವಂತೆ ರೇಖೆಗಳಲ್ಲಿ ಇರುವುದಿಲ್ಲ. ಕಾರಣ ರೇಖೆ ಕನ್ನಡಿಯಂತೆ ತಪ್ಪುಗಳನ್ನೂ ಸಹ ಬಿಂಬಿಸುತ್ತದೆ. ಹಾಗಾಗಿ ರೇಖಾಚಿತ್ರವನ್ನೇ ಅಭಿವ್ಯಕ್ತಿ ಮಾಧ್ಯಮವನ್ನಾಗಿ ಗುರುತಿಸಿಕೊಳ್ಳುವುದು ಕೂಡ ಸವಾಲಿನ ಕೆಲಸ. ಇಂತಹ ಸವಾಲನ್ನು ಮಕಾಳಿಯವರು ಲೀಲಾಜಾಲವಾಗಿ ನಿರ್ವಹಿಸಿದ್ದಾರೆ.
Photo

ಇಂದು ಮಕಾಳಿಯವರನ್ನು ಮುಖ್ಯವಾಗಿ ಗುರುತಿಸುವುದು ಕೂಡ ರೇಖೆಗಳ ಮೂಲಕವೆ. ಅವರ ಪೇಂಟಿಗ್ಗಳಲ್ಲಿ ಕೂಡ ದೇಸಿತನದ ಛಾಯೆಗಳು ಒಡಮೂಡುತ್ತವೆ. ಹಾಗಾಗಿ ಮಕಾಳಿಯವರ ಜಲವರ್ಣ, ತೈಲವರ್ಣದ ಬಣ್ಣದ ಬಳಕೆಯಲ್ಲಿಯೂ ಅವರದೇ ಆದ ದೇಸಿತನದ ಲಯ ಕಾಣುತ್ತದೆ. ಮಕಾಳಿಯವರು ಪುಸ್ತಕಗಳ ಮುಖಪುಟ ವಿನ್ಯಾಸಕ್ಕೂ, ಸಮಾರಂಭಗಳ ವೇದಿಕೆಯ ಹಿನ್ನೆಲೆಗಳಿಗೂ ದೇಸೀತನದ ಟಚ್ ಕೊಟ್ಟವರು.

ಕನ್ನಡ ವಿಶ್ವವಿದ್ಯಾಲಯ ರೂಪಿಸಿದ ದೇಸಿಚಿಂತನೆಯನ್ನು ಚಿತ್ರರೂಪದಲ್ಲಿ ಕಲ್ಪಿಸಿಕೊಳ್ಳುವಾಗ ಮಕಾಳಿಯವರ ಚಿತ್ರಗಳೇ ಕಾಣುತ್ತವೆ. ಅವರ ದೇಸಿ ಸಂವೇದನೆ ಇನ್ನಷ್ಟು ಪಕ್ವವಾಗಲು ಕನ್ನಡ ವಿಶ್ವವಿದ್ಯಾಲಯದ ವಾತಾವರಣವೂ ಕಾರಣವಾಗಿದೆ. ಕನ್ನಡ ವಿವಿ ಪ್ರಸಾರಾಂಗ ಪ್ರಕಟಿಸಿದ ಪುಸ್ತಕಗಳಿಗೆ ಒಂದು ಭಿನ್ನ ಚಹರೆ ಬಂದಿರುವುದೂ ಕೂಡ ಮಕಾಳಿಯವರ ಕಲೆಯ ಕಾರಣಕ್ಕೆ ಎನ್ನುವುದನ್ನು ನೆನೆಯಬೇಕು.

ಮಕಾಳಿಯವರ ವೈಶಿಷ್ಟವೇ ಅವರ ಮಿತಿಯೂ ಆಗಿದೆ. ಆಧುನಿಕ ತಂತ್ರಜ್ಞಾನವನ್ನು ಅದರೆಲ್ಲಾ ಸಾದ್ಯತೆಗಳಲ್ಲಿ ಬಳಸಿಕೊಂಡು ಭಿನ್ನ ಪ್ರಯೋಗ ಮಾಡಲು ಪೂರ್ಣ ಪ್ರಮಾಣದಲ್ಲಿ ಅವರಿಂದ ಸಾದ್ಯವಾಗುತ್ತಿಲ್ಲ. ಈ ಕಾರಣಕ್ಕೆ ಏಕತಾನತೆಯ ಗುಂಗಿನಿಂಗ ಮಕಾಳಿ ಬಹುಕಾಲ ಹೊರಬಂದಂತಿರಲಿಲ್ಲ. ಈಗೀಗ ತಮ್ಮದೇ ಮಿತಿಯನ್ನು ಮೀರುವ ಪ್ರಯತ್ನಗಳು ಮಕಾಳಿಯವರ ಈಚಿನ ಕಲಾಕೃತಿಗಳಲ್ಲಿ ಕಾಣುತ್ತಿದೆ. ಆಧುನಿಕ ತಂತ್ರಜ್ಞಾನವನ್ನೂ ಬಳಸಿಕೊಳ್ಳುತ್ತ ಮಕಾಳಿವರು ತಮ್ಮ ದೇಸಿತನದ ಕಲೆಗೆ ಮತ್ತಷ್ಟು ಹೊಳಪು ಕೊಡಲು ಸಜ್ಜಾದಂತಿದೆ. ಇನ್ನಷ್ಟು ಹೊಸ ಪ್ರಯೋಗಗಳಿಗೆ ಅವರು ತೆರೆದುಕೊಳ್ಳಲಿ. ದೇಸಿತನದ ತಿಳಿವು ಇನ್ನಷ್ಟು ಗಟ್ಟಿಗೊಳ್ಳಲಿ ಎಂದು ಆಶಿಸೋಣ.

ಕಾಮೆಂಟ್‌ಗಳಿಲ್ಲ: