ಗುರುವಾರ, ಜುಲೈ 4, 2013

ನೆಲಜೇರಿ ಉರುಸಿನ ಕಣ್ಣು ಮತ್ತು ಕಣ್ಕಟ್ಟು

ರಹಮತ್ ತರೀಕೆರೆ

(ನೆಜಲೇರಿ ಅಂದಾನಪ್ಪ)
ನಾನು ನನ್ನ ಮಿತ್ರ ಅರುಣ್ ಜೋಳದಕೂಡ್ಲಿಗಿ, ರೋಣ ತಾಲೂಕಿನ ಶಾಂತಗಿರಿ ಎಂಬಲ್ಲಿರುವ ಒಬ್ಬ ಜನಪದ ಗಾಯಕನ ಭೇಟಿಗೆಂದು ಹೊರಟಿದ್ದೆವು. ಹಾದಿಯ ನಡುವೆ ನೆಲಜೇರಿ ಎಂಬ  ಯಲಬುರ್ಗಾ ತಾಲೂಕಿನ ಪುಟ್ಟ ಹಳ್ಳಿ ಎಡತಾಕಿತು. ಗೋಧಿ, ಉಳ್ಳಾಗಡ್ಡೆ, ಸುರೇಪಾನ, ಮೆಣಸು ಮುಂತಾಗಿ ಮಳೆಯಾಶ್ರಯದ ಬೆಳೆ ಬೆಳೆಯುವ ಎರೆಸೀಮೆ. ಹೆಚ್ಚಿನ ತರುಣರು  ಕೊಪ್ಪಳದ ಬಗಲಲ್ಲಿ ಬೀಡುಬಿಟ್ಟಿರುವ ದೊಡ್ಡದೊಡ್ಡ ಉಕ್ಕುಕಾರ್ಖಾನೆಗಳಿಗೆ ದಿನಗೂಲಿಗಳಾಗಿ ಹೋಗುತ್ತಾರೆ. ಆರ್ಥಿಕವಾಗಿ ಬಡಕಲಾದರೂ ಸಾಂಸ್ಕೃತಿಕವಾಗಿ ಸಮೃದ್ಧವಾದ ಹಳ್ಳಿ. ಈ ವೈರುಧ್ಯಕರ ವಾಸ್ತವವು ಉತ್ತರ ಕರ್ನಾಟಕದ ಅನೇಕ ಹಳ್ಳಿಗಳ ಚಹರೆಯಾಗಿದೆ.
ನೆಜಲೇರಿಯಲ್ಲಿ ನಿಂತು ತಟ್ಟಿಹೋಟೆಲೊಂದರ ಚಹ ಕುಡಿಯುತ್ತ, ಊರಲ್ಲಿ ಯಾರಾದರೂ ಗಾಯಕರು ಇದ್ದಾರೆಯೇ ಎಂದು ಕೇಳಿದೆವು. ಅಲ್ಲೊಬ್ಬ ಮೂಲೆಯಲ್ಲಿ ಟೀಕುಡಿಯುತ್ತ ಬೀಡಿ ಸೇದುತ್ತ ಕುಳಿತವನು, ‘ಅದಾನಲ್ಲ ಅಂದಾನಪ್ಪ, ಜಗ್ಗಿ ಹಾಡ್ತಾನ’ ಎಂದನ. ಅಂದಾನಪ್ಪನವರನ್ನು ನೋಡೋಣವೆಂದು ಅವರ ಮನೆಗೆ ಹೋದೆವು. ಅವರು ಹೊಲಕ್ಕೆ ಹೋಗಿದ್ದರು. ಅವರು ಬರುವ ತನಕ ಅವರ ಮನೆಯ ಜಗುಲಿಯಲ್ಲೇ ಬೀಡುಬಿಟ್ಟೆವು. ಒಕ್ಕಲುತನದವರ ಹಳೆಯ ಮಾಳಿಗೆ ಮನೆ. ಹೊರಬಾಗಿಲ ಅಕ್ಕಪಕ್ಕ  ದೊಡ್ಡದಾದ ಎರಡು ಜಗುಲಿಗಳು. ಅವುಗಳ ಮೇಲೆ ಚೀಲಗಳಲ್ಲಿ ದವಸ. ಚೀಲಗಳ ಪಕ್ಕ ಕೌದಿಹಾಸಿ ದಿಂಬಿಟ್ಟು ಮನೆಯ ಯಜಮಾನರು ಕೂರಲು ಆಸನ. ಗೋಡೆಯ ಮೇಲೆ ದಿವಂಗತರಾಗಿದ್ದು ವಿಭೂತಿಧಾರಣೆ ಮಾಡಿಕೊಂಡಿರುವ ಕುಟುಂಬದ ಹಿರಿಯರ ಫೋಟೊ. ಮನೆಯೊಳಗೆ ಇಣುಕಿದರೆ, ಸಿನುಗು ವಾಸನೆಯ ದನದ ಕೊಟ್ಟಿಗೆ. ಅಂಬಾ ಎನ್ನುವ ಒಂಟಿಕರು. ಕೊಟ್ಟಿಗೆ ಅಟ್ಟಕ್ಕೆ ಕಟ್ಟಿರುವ ಉಳ್ಳಾಗಡ್ಡಿ ಬೆಳ್ಳುಳ್ಳಿ ಒಣಗಿದ ಹೀರೇಕಾಯಿ ಗೊಂಚಲು. ಅದರ ಮುಂದೆ ಮಬ್ಬು ಬೆಳಕಿನಲ್ಲಿ ಕಾಣುವ ಉಣ್ಣುವ ಜಗುಲಿ. ನಂತರ ಹೊಗೆಯಿಂದ ಕಪ್ಪಗಾಗಿ ಅಲ್ಲಿದ್ದ ಬೆಳಕನ್ನೆಲ್ಲ ಕುಡಿದು ಮತ್ತಷ್ಟು ಕತ್ತಲಾಗಿರುವ ಅಡುಗೆಕೋಣೆ.
ಹೀಗೆ ಕಣ್ಣುಮೂಗುಕಿವಿಗಳಿಗೆ ಕೆಲಸ ಹಚ್ಚಿ ಕೂತಿರುವಾಗ ತುಸು ಹೊತ್ತಲ್ಲೇ ಅಂದಾನಪ್ಪನವರ  ಸವಾರಿ ಬಂತು. ಆರಡಿ ಎತ್ತರದ ೭೫ ವರ್ಷದ ಹಿರಿಯರು. ದಪ್ಪನೆಯ ಬಿಳಿಪಟಗ ಎದ್ದು ಕಾಣುತ್ತಿತ್ತು. ವಿಶೇಷವೆಂದರೆ, ಕೈಬೆರಳು ಕುಷ್ಠದಿಂದ ಕರಗಿಹೋಗಿದ್ದರೂ ಮೋಟು ಬೆರಳುಗಳಲ್ಲಿ ಹೇಗೊ ಹ್ಯಾಂಡಲನ್ನು ಹಿಡಿದು, ನಟ್ಟನಡುವೆ ಬಚ್ಚಲು ನೀರು ಹರಿಯುತ್ತ ಬೈತಲೆ ತೆಗೆದಂತಿರುವ ಅಂಕುಡೊಂಕು ಬೀದಿಗಳಲ್ಲಿ ಬೀಳದಂತೆ ಸೈಕಲನ್ನು ನಡೆಸುತ್ತ ಬಂದರು. ನಮಸ್ಕಾರ ಮಾಡಿ ಅವರ ಭೇಟಿಗೆ ಬಂದಿರುವುದಾಗಿ ಹೇಳಿದೆವು.
ತಮ್ಮ ಹಾಡು ಕೇಳಲು ಪರಸ್ಥಳದ ಜನ ಕಾರಿನಲ್ಲಿ ಬಂದಿರುವುದಕ್ಕೆ ಹೆಮ್ಮೆಯ ಭಾವ ಅವರ ಮುಖದಲ್ಲಿ ಮೂಡಿದಂತೆ ತೋರಿತು. ಲಗುಬಗೆಯಿಂದ ಅಡುಗೆ ಮನೆಯೊಳಗೆ ನುಗ್ಗಿ ಬಿಸಿರೊಟ್ಟಿ ಮಾಡಲು ಹೇಳಿದರು. ದೊಡ್ಡ ಚರಿಗೆಯಲ್ಲಿ ಅದೇ ಮುಂಜಾನೆ ಕಡೆದ ಮಜ್ಜಿಗೆ ತಂದುಕೊಟ್ಟರು. ಹಳತಾದ ನೋಟುಬುಕ್ಕನ್ನು ನಾಗಂದಿಯ ಮೇಲಿಂದ ತೆಗೆದುಕೊಂಡು ತೆರೆದು ಅದರಲ್ಲಿರುವ ಕೆಲವು ರಿವಾಯತ್ ಹಾಡಲು ಶುರುಮಾಡಿದರು. ಇನಿದಾದ ದನಿ. ಈ ಭಾರಿಕಾಯದೊಳಗೆ ಇಂತಹ ಹೆಣ್ದನಿ ಹೇಗಾದರೂ ಸೇರಿಕೊಂಡಿದೆ ಎಂದು ವಿಸ್ಮಯವಾಗಿ, ಪೈಲವಾನರಂತಿರುವ ಬಡೇಗುಲಾಮಲಿ ಖಾನರು ಜೇನಲ್ಲಿ ಅದ್ದಿತೆಗೆದಂತೆ ‘ಕ್ಯಾಕರ‍್ಞೂ ಸಜನೀ ಸಾಜನ್ ನ ಆವೆ’ ಠುಮ್ರಿ ಹಾಡುವುದು ನೆನಪಾಯಿತು. ರಿವಾಯತ್ ಹಾಡಿಕೆಯಲ್ಲಿ ಹಿಮ್ಮೇಳವಿದ್ದರೇ ಚಂದ. ಒಂಟಿದನಿ ಬೇಗನೇ ದಣಿಯುತ್ತದೆ. ಅಂದಾನಪ್ಪನವರು ಎರಡು ಮೂರು ಹಾಡಿಗೆ ನಿಲ್ಲಿಸಿದರು. ಕೆಲವೇ ತಿಂಗಳುಗಳಲ್ಲಿ ತಮ್ಮೂರಿನಲ್ಲಿ ರಾಜಪ್ಪಸ್ವಾಮಿಯ ಉರುಸು ನಡೆಯುವುದೆಂದೂ, ಅಲ್ಲಿ ಯಲಬುರ್ಗ ರೋಣ ಕುಷ್ಟಗಿ ಕೊಪ್ಪಳ ಸೀಮೆಯ ಅನೇಕ ಗಾಯಕರು ಸೇರುವರೆಂದೂ ಆಗ ಬರಬೇಕೆಂದೂ ಅವರು ತಿಳಿಸಿ,  ನನ್ನ ಮೊಬೈಲು ನಂಬರನ್ನು ಬರೆದುಕೊಂಡರು.
ಈ ಪ್ರಸಂಗವನ್ನು ನಾನು ಗಡಿಬಿಡಿಯಲ್ಲಿ ಮರೆತುಬಿಟ್ಟೆ. ಒಂದು ದಿನ ಅಂದಾನಪ್ಪನವರ ಫೋನು ಬಂದಿತು. ರಾಜಪ್ಪಸ್ವಾಮಿಯ ಉರುಸು ಫಲಾನೆ ದಿನವಿದೆಯೆಂದೂ ತಪ್ಪದೇ ಬರಬೇಕೆಂದೂ ಊಟ ವಸತಿಯ ವ್ಯವಸ್ಥೆಗೆ ಚಿಂತೆ ಮಾಡಬಾರದೆಂದೂ ತಿಳಿಸಿದರು. ನೆಲಜೇರಿಗೆ ಹೋದೆ. ಹೋದಾಗ ಸಂಜೆಯಾಗಿತ್ತು. ಸುತ್ತಮುತ್ತಲ ಗ್ರಾಮದವರು ಓದಿಕೆ ಮಾಡಿಸಿಕೊಂಡು ಕೈಯಲ್ಲಿ ವಸ್ತ್ರಹೊದಿಸಿದ ಪ್ರಸಾದದ ತಟ್ಟೆಯನ್ನು ಹಿಡಿದು, ಗುಂಪುಗುಂಪಾಗಿ ಮನೆಗಳಿಗೆ ಮರಳುತ್ತಿದ್ದರು. ಅಂದಾನಪ್ಪನರ  ಶಿಷ್ಯನೊಬ್ಬ, ತನ್ನ ಮನೆಗೊಯ್ದು ರೊಟ್ಟಿ ಮೊಸರು ಬದನೆಪಲ್ಯ ಮಾಲ್ದಿಯಿರುವ ಊಟ ಹುಲಿವೇಷಹಾಕಿಸಿದನು.
ರಾತ್ರಿ ಹತ್ತಕ್ಕೆ ಉರುಸಿನ ಮೆರವಣಿಗೆ ಒಬ್ಬ ಕುರುಬರ ಮನೆಯಿಂದ ಹೊರಟಿತು. ಆ  ಮನೆಯ ಹಿರೀಕರೊಬ್ಬರು ಮೈದುಂಬಿ ರಾಜಪ್ಪಜ್ಜನ ಸಮಾಧಿಯ ತನಕ ಬಾಜಾಬಜಂತ್ರಿಯಲ್ಲಿ ಮೆರವಣಿಗೆ ಹೊರಟರು. ಅವರ ಜತೆ ವಾಲ್ಮೀಕಿ ಸಮುದಾಯಕ್ಕೆ ಸೇರಿದ ಹನುಮಂತದೇವರ ಗುಡಿಯ ಪೂಜಾರಿ ಜತೆಗೂಡಿದರು. ಮೆರವಣಿಗೆಗೆ ಈ ಭಾಗದ ಮುಸ್ಲಿಮರನ್ನೂ ಒಳಗೊಂಡಂತೆ ಎಲ್ಲ ಜಾತಿ ಸಮುದಾಯಗಳಿಗೆ ಸೇರಿದವರೂ ಕಲೆತಿದ್ದರು. ಅಂದಾನಪ್ಪನವರು ದೊಡ್ಡದೊಂದು ಕೋಲಿನ ತುದಿಗೆ ಹಾಡುಗಾರರಿಗೆ ಕೊಡುವ ಬಹುಮಾನದ ಬೆಳ್ಳಿಬಳೆಗಳನ್ನು ಸಿಕ್ಕಿಸಿಕೊಂಡು, ಮೆರವಣಿಗೆಯ ಮುಂಚೂಣಿಯಲ್ಲಿದ್ದರು. ಮೆರವಣಿಗೆಯ ಹಿಂದೆ ಅಂದು ರಾತ್ರಿ ‘ಕಂದೂರಿ’ಗೆ ಬಲಿಯಾಗಲಿರುವ ಕುರಿಗಳನ್ನು ಹಿಡಿದು ಭಕ್ತರು ಇದ್ದರು.
ಊರಹೊರಗೆ ದೊಡ್ಡ ಬಯಲಿನಲ್ಲಿ ಮರಗಳ ಗುಂಪಿನ ನಡುವೆ ರಾಜಪ್ಪಜ್ಜನ ಸಮಾಧಿಯಿದ್ದು,  ಸೂಫಿಗೋರಿಗಳಂತೆ ಉತ್ತರ ದಕ್ಷಿಣಮುಖಿಯಾಗಿತ್ತು. ಅಲ್ಲಿ ಮುಸ್ಲಿಂ ಮುಜಾವರರು ಫಾತೆಹಾ ನೆರವೇರಿಸುತ್ತಿದ್ದರು. ರಾಜಪ್ಪಜ್ಜನ ಪುಣ್ಯತಿಥಿಗೆ ‘ಉರುಸು’ ಎಂದು ಕರೆಯುವುದರಿಂದ, ಇದು ಯಾವುದಾದರೂ ಸೂಫಿಸಂತನಿಗೆ ಸಂಬಂಧಪಟ್ಟಿದ್ದು ಎಂಬುದು ನನ್ನ ಊಹೆಯಾಗಿತ್ತು. ಆದರೆ ರಾಜಪ್ಪಜ್ಜ ಸುಮಾರು ೭೦-೮೦ ವರ್ಷಗಳ ಹಿಂದೆ ಬದುಕಿದ್ದ ಒಬ್ಬ ಆರೂಢನಾಗಿದ್ದರು. ಹಿಂದುಳಿದ ಜಾತಿಗೆ ಸೇರಿದ್ದ ಈ ಆರೂಢನ ಶಿಷ್ಯರಲ್ಲಿ ಹೆಚ್ಚಿನವರು ದಲಿತರಾಗಿದ್ದು, ಅವರ ಸಮಾಧಿಗಳು ಅಲ್ಲೇ ಆಸುಪಾಸಿನಲ್ಲಿದ್ದವು.
ರಾಜಪ್ಪಜ್ಜನ ಸಮಾಧಿ ಪೌಳಿದ್ವಾರದಲ್ಲಿ ಮೊಹರಂ ಚಿಹ್ನೆಗಳಾದ ಹುಲಿ ಹಾಗೂ ಹಸ್ತದ ಚಿತ್ರಗಳೂ  ಇವುಗಳ ಜತೆ ಗಣಪತಿ ಹಾಗೂ ಹನುಮಂತನ ಚಿತ್ರಗಳೂ ಬರೆಯಲ್ಪಟ್ಟಿದ್ದವು. ಅಂದು ನಡೆಯಲಿದ್ದ ರಿವಾಯತ್ ಪದಗಳ ಹಾಡಿಕೆ ಸಹ ಮೊಹರಂ ಸಂಪ್ರದಾಯಕ್ಕೆ ಸೇರಿತ್ತು. ರಾತ್ರಿ ಹತ್ತರ ಸುಮಾರಿಗೆ  ಹತ್ತಾರು ಹಳ್ಳಿಗಳಿಂದ ರಿವಾಯತ್ ಗಾಯಕರು ಸೇರಿಕೊಂಡರು. ಕಂಬಕ್ಕೆ ಮೈಕನ್ನು ಕಟ್ಟಿ ಅದರ ಸುತ್ತ ಮುಖ್ಯಗಾಯಕನೂ ಸಹಗಾಯಕರೂ ತಿರುಗುತ್ತ ಅಭಿನಯ ಮಾಡುತ್ತ ಹಾಡಿದರು. ಹಾಡಿಕೆ ಬೆಳಗಿನ ಜಾವಕ್ಕೆ ಮುಗಿಯಿತು. ಜನ ಕೌದಿ ಹೊದ್ದುಕೊಂಡು ಚೀಲ ಚಾಪೆ ಹಾಸಿಕೊಂಡು ಕುಳಿತು ಕೇಳಿದರು. ಗಾಯಕರನ್ನು ಹಾಡಲು ಕರೆಯುವುದು, ಚೆನ್ನಾಗಿ ಹಾಡಿದಾಗ ಉತ್ತೇಜಿಸುವುದು, ಗೆದ್ದವರಿಗೆ ಬೆಳ್ಳಿಯ ಬಳೆ ಬಹುಮಾನವಾಗಿ ಕೊಡುವುದು ಮುಂತಾದ ಉರುಸಿನಲ್ಲಿ ಜನಕೆಲಸಗಳನ್ನು ಅಂದಾನಪ್ಪ ಹರೆಯದ ಹುಡುಗನಂತೆ ಓಡಾಡುತ್ತ ಮುತುವರ್ಜಿಯಿಂದ ಮಾಡಿದರು.
ಈ ಉರುಸಿನ ವಿಶೇಷವೆಂದರೆ ಕಂದೂರಿ ಎಂಬ ಔತಣದ ಆಚರಣೆ. ಮೆರವಣಿಗೆಯಲ್ಲಿ ಆಗಮಿಸಿದ್ದ ಕುರಿಗಳನ್ನು ಮುಲ್ಲಾ ಹಲಾಲ್ ಮಾಡಿದನು. ಬಳಿಕ ಅವನ್ನು ಜನ ತಾವು ಬೀಡುಬಿಟ್ಟಲ್ಲಿ ದೊಂದಿ ಗ್ಯಾಸ್‌ಲೈಟಿನ ಬೆಳಕಲ್ಲಿ ಹಸಿಗೆ ಮಾಡಲು ಆರಂಭಿಸಿದರು. ಸುಮಾರು ರಾತ್ರಿ ಹನೆರಡಕ್ಕೆ ಅಡುಗೆ ಶುರುವಾಯಿತು. ಇಡೀ ಬಯಲು ಒಲೆಗಳ ಬೆಂಕಿಯಿಂದ ಬೀಡುಬಿಟ್ಟ ಸೈನಿಕರ ಶಿಬಿರದಂತೆ ಕಾಣತೊಡಗಿತು. ಬೆಳಗಿನ ಜಾವ ಪೂಜಾರಿಯು ಮೈದುಂಬಿ ವರ್ಷದ ಮಳೆಬೆಳೆ ಕುರಿತಂತೆ ಕಾರ್ಣೀಕ ಹೇಳಿದನು. ಇದಾದ ಬಳಿಕ ರಾತ್ರಿಯೆಲ್ಲ ಮಾಡಿದ ಅಡುಗೆಯ ಊಟ ಶುರು. ಜಾತ್ರೆಗೆ ಬಂದ ಜನರನ್ನು ಎಲ್ಲರೂ ಕರೆಕರೆದು ಉಣ್ಣಿಸುವವರೇ. ಮಾಡಿದ ಅಡುಗೆ ಬೆಳಕು ಹರಿಯುವ ಮುನ್ನ ಖಾಲಿಯಾಗಬೇಕು. ಮನೆಗೆ ಒಯ್ಯುವಂತಿಲ್ಲ. ಈ ಊಟದ ಜತೆ ಉರುಸು ಮುಕ್ತಾಯ ಕಂಡಿತು. ಜನ ಟಂಟಂ, ಬಂಡಿಗಳಲ್ಲಿ ಊರುಗಳಿಗೆ ತೆರಳಿದರು.
ನೇಲಜೇರಿಯಲ್ಲಿ ಉರಿಸಿದೆ, ಆದರೆ ಸೂಫಿ ಪರಂಪರೆಯಿಲ್ಲ; ರಿವಾಯತ್ ಹಾಡಿನ ಪರಂಪರೆಯಿದೆ, ಆದರಿದು ಮೊಹರಂ ಅಲ್ಲ; ಇಲ್ಲಿ ಮುಸ್ಲಿಮರ ಭಾಗವಹಿಸುವಿಕೆಯಿದೆ, ಆದರೆ ಸಾಂಪ್ರದಾಯಿಕ ಇಸ್ಲಾಮಲ್ಲ; ಇಲ್ಲಿ ಹತ್ತಕ್ಕೆ ಒಂಬತ್ತರಷ್ಟು ಹಿಂದುಗಳ ಭಾಗವಹಿಸುವಿಕೆಯಿದೆ, ಜಾತ್ರೆಯಲ್ಲ; ಅವಧೂತ ಪರಂಪರೆಯ ಲಕ್ಷಣಗಳಿವೆ, ದೀಕ್ಷೆ ಕೊಡುವ ಪದ್ಧತಿಯಿಲ್ಲ; ಹಾಗಾದರೆ ಇದನ್ನು ಯಾವ ಧರ್ಮದ ಅಥವಾ ಪಂಥದ ಚೌಕಟ್ಟಿನಲ್ಲಿಟ್ಟು ನೋಡುವುದು?
ಈ ಚೌಕಟ್ಟಿನ ಸಮಸ್ಯೆ ನೆಲಜೇರಿಯ ಉರುಸಿನಲ್ಲಿಲ್ಲ; ಅದರಲ್ಲಿ ಭಾಗವಹಿಸಿರುವ ಜನರಲ್ಲೂ ಇಲ್ಲ. ಜನರಿಗೆ ತಾವು ಮಾಡುವ ಉರುಸು, ಹಾಡುವ ಹಾಡು, ಉಣ್ಣುವ ಊಟ ಯಾವ ಧರ್ಮಕ್ಕೆ ಸಂಬಂಧಿಸಿದವು ರಿವಾಯತ್ ಹಸ್ತಪ್ರತಿಎಂಬುದು ದೊಡ್ಡ ಪ್ರಶ್ನೆಯಾಗಿ ಕಾಡುವುದಿಲ್ಲ. ಅದು ಸಮಸ್ಯೆಯಾಗಿದ್ದರೆ, ಧಾರ್ಮಿಕ ಆಚರಣೆಯನ್ನು ಈಗಾಗಲೇ ನಿರ್ವಚನಗೊಂಡಿರುವ ಜಾತಿ ಧರ್ಮ ಇಲ್ಲವೇ ಪಂಥದ ಚೌಕಟ್ಟಿನಲ್ಲಿ ಇಟ್ಟುನೋಡಬೇಕು ಎಂಬ ನಮ್ಮ ಬೌದ್ಧಿಕ ತುರ್ತಿಗೆ. ನೆಲಜೇರಿಯ ಉರುಸು ತನಗೆ ತಾನೇ ಸ್ಥಳೀಯವಾಗಿ ರೂಪುಗೊಂಡಿರುವ ಜನತೆಯ ಧರ್ಮ. ಅದರಲ್ಲಿ ಸೂಫಿಗಳ ಅವಧೂತರ ಮೊಹರಮ್ಮಿನ ಇಸ್ಲಾಮಿನ ಚಹರೆಗಳೆಲ್ಲ ಒಗ್ಗೂಡಿವೆ. ಇಂತಹ ಅನೇಕ ಆಚರಣೆಗಳು ಕರ್ನಾಟಕದಾದ್ಯಂತ ಇವೆ. ಬಹುಶಃ ಭಾರತದ ತುಂಬ ಇದ್ದಾವು. ಇಂತಹ ಲೋಕಗಳನ್ನು ಕಾಣಲು ಅರಿಯಲು ಸದ್ಯ ಚಾಲ್ತಿಯಲ್ಲಿರುವ ಚೌಕಟ್ಟು ಸಾಲವು. ರಾಜಕೀಯವಾಗಿ ಧರ್ಮವನ್ನು ನೋಡಲು ರೂಪುಗೊಂಡಿರುವ ಕಣ್ಕಟ್ಟುಗಳಂತೂ ಯಾತಕ್ಕೂ ಬಾರವು. ಇವನ್ನು ನೋಡಲು ತೆರೆದಮನದ  ಕಣ್ಣನ್ನು ಪಡೆದುಕೊಳ್ಳುವ ಅಗತ್ಯವಿದೆ. ಬುದ್ಧಿ ಕಲಿಸಿದ್ದನ್ನು ಮಾತ್ರ ನೋಡುವ ಕಣ್ಕಟ್ಟುಗಳನ್ನಲ್ಲ. 
ಹಂಪಿಗೆ ಹೊರಡುವ  ಮುನ್ನ ಅಂದಾನಪ್ಪನವರಿಗೆ ವಿದಾಯದ ನಮಸ್ಕಾರ ಮಾಡಲೆಂದು ಹುಡುಕಿದರೆ ಆ ಜಂಗುಳಿಯಲ್ಲಿ ಸಿಗಲೇ ಇಲ್ಲ. ಬಹುಶಃ ಸೈಕಲ್ ಹತ್ತಿಕೊಂಡು ಹೊಲಕ್ಕೆ ಹೋಗಿಬಿಟ್ಟಿದ್ದರು.

2 ಕಾಮೆಂಟ್‌ಗಳು:

lalxminarasimha ಹೇಳಿದರು...

"ಇಂತಹ ಲೋಕಗಳನ್ನು ಕಾಣಲು ಅರಿಯಲು ಸದ್ಯ ಚಾಲ್ತಿಯಲ್ಲಿರುವ ಚೌಕಟ್ಟು ಸಾಲವು. ರಾಜಕೀಯವಾಗಿ ಧರ್ಮವನ್ನು ನೋಡಲು ರೂಪುಗೊಂಡಿರುವ ಕಣ್ಕಟ್ಟುಗಳಂತೂ ಯಾತಕ್ಕೂ ಬಾರವು. ಇವನ್ನು ನೋಡಲು ತೆರೆದಮನದ ಕಣ್ಣನ್ನು ಪಡೆದುಕೊಳ್ಳುವ ಅಗತ್ಯವಿದೆ. ಬುದ್ಧಿ ಕಲಿಸಿದ್ದನ್ನು ಮಾತ್ರ ನೋಡುವ ಕಣ್ಕಟ್ಟುಗಳನ್ನಲ್ಲ." tumbaa nijavaada maatugaLu. endinante, Rahamat avara nirvyaaja preetiya baravaNige. -laxminarasimha

Nanjunda Raju ಹೇಳಿದರು...

ಮಾನ್ಯರೇ, ಇದು ಒಳ್ಳೆಯ ಲೇಖನ. ಹಂತ ಹಂತವಾಗಿ ವಿವರಿಸಿದ್ದೀರಿ. ಆದರೆ ಶ್ರೀ ನೆಲಜೇರಿ ಅಂದಾನಪ್ಪನವರ ಕಲೆಯ ಬಗ್ಗೆ ವಿವಿರಿಸಿದ್ದೀರಿ. ಈಗ ಬಹುತೇಕ ಇಂತಹ ಹಾಡುಗಳು ಹಿರಿಯರಿಂದ ಬಳಕೆ ಇಲ್ಲದೆ ಮಾಯವಾಗುತ್ತಿವೆ. ಇಂತಹ ಹಾಡುಗಳನ್ನು ಅಂತಹ ಕಲಾವಿದರಿಂದಲೇ ಹಾಡಿಸಿ, ಓದುಗರಿಗೆ ಮತ್ತು ಕೇಳುಗರಿಗೆ ಪುನ: ಕೇಳಲು ಅನುಕೂಲವಾಗುವಂತೆ, ದಾಖಲಿಸಿ(ರೆಕಾರ್ಡ್ ಮಾಡಿ)ಉತ್ತಮ ಹಾಡುಗಳೆಂದು ಕಂಡವುಗಳನ್ನು ಹಾಕಿದ್ದರೆ ಈ ಲೇಖನ ಪೂರ್ಣವಾಗುತ್ತಿತ್ತು ಅಲ್ಲವೇ?