ಶನಿವಾರ, ಏಪ್ರಿಲ್ 27, 2013

ನಾಟಿ ಕೋಳಿ ಸಾಕಣೆ; ಯಶಸ್ಸು ಕಂಡ ಮಹಿಳೆ


















-ಸಹನಾ ಕಾಂತಬೈಲು


ಕೃಪೆ: ವಿಜಯ ಕರ್ನಾಟಕ


 



ಇತ್ತೀಚಿನ ವರ್ಷಗಳಲ್ಲಿ ನಾಟಿಕೋಳಿ ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ರೈತ ಮಹಿಳೆಯೊಬ್ಬರು 70ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಸಾಕುತ್ತಿದ್ದಾರೆ. ಮನೆಗೆ ಬಳಸಿ ಮಿಕ್ಕಿದ್ದನ್ನು ಮಾರಾಟ ಮಾಡಿ ಕೈಖರ್ಚಿಗೆ ಹಣ ಗಳಿಸುತ್ತಾರೆ.

ಕೋಳಿ ಸಾಕಣೆ ಕೃಷಿಗೆ ಪೂರಕ ಚಟುವಟಿಕೆ. ಹಳ್ಳಿಗಳಲ್ಲಿ ರೈತರು ಮನೆ ಬಳಕೆಗಾಗಿ ನಾಟಿ ಕೋಳಿಗಳನ್ನು ಸಾಕುತ್ತಾರೆ. ಇವುಗಳ ಮಾಂಸ ಮತ್ತು ಮೊಟ್ಟೆ ಹೆಚ್ಚಿನ ರುಚಿ ಹೊಂದಿರುತ್ತದೆ. ಭೂತಾರಾಧನೆ, ಹರಕೆ ಇತ್ಯಾದಿ ಧಾರ್ಮಿಕ ಆಚರಣೆಗಳಿಗೆ ನಾಟಿ ಕೋಳಿಗಳೇ ಬೇಕು. ಹೀಗಾಗಿ ಇವುಗಳಿಗೆ ಬೇಡಿಕೆ ಮತ್ತು ಬೆಲೆ ಹೆಚ್ಚು. ಆದರೆ ಇತ್ತೀಚಿನ ವರ್ಷಗಳಲ್ಲಿ ಇವುಗಳನ್ನು ಸಾಕುವವರ ಸಂಖ್ಯೆ ಕಡಿಮೆಯಾಗಿದೆ. ನಾಲ್ಕೈದು ಕೋಳಿಗಳನ್ನು ಸಾಕಿದರೆ ಅದೇ ಹೆಚ್ಚು.

ಮಡಿಕೇರಿ ತಾಲ್ಲೂಕಿನ ಚೆಂಬು ಗ್ರಾಮದ ರೈತ ಮಹಿಳೆ ಜಾನಕಿ 70ಕ್ಕೂ ಹೆಚ್ಚು ನಾಟಿ ಕೋಳಿಗಳನ್ನು ಸಾಂಪ್ರದಾಯಿಕ ಪದ್ಧತಿಯಲ್ಲಿ ಸಾಕುತ್ತಿದ್ದಾರೆ. ಕೋಳಿ ಮಾರಿ ತಿಂಗಳಿಗೆ ಸರಾಸರಿ ಎರಡು ಸಾವಿರ ರೂ. ಆದಾಯ ಗಳಿಸುತ್ತಾರೆ.

ಜಾನಕಿ ಅವರಿಗಿರುವುದು ಮೂರು ಎಕರೆ ಕೃಷಿಭೂಮಿ. ಅರ್ಧ ಎಕರೆಯಲ್ಲಿ ಭತ್ತ ಬೆಳೆಯುತ್ತಾರೆ. ಅಕ್ಕಿ ಮತ್ತು ಭತ್ತಗಳೇ ಕೋಳಿಗಳಿಗೆ ಆಹಾರ. ಮರಿಗಳಿಗೆ ಅಕ್ಕಿ ನುಚ್ಚು. ನಾಟಿ ಕೋಳಿಗಳನ್ನು ಬೆಳೆಸಲು ವಿಶೇಷ ಖರ್ಚಿಇಲ್ಲ. ಇವು ಗಟ್ಟಿಮುಟ್ಟಾಗಿದ್ದು, ಹೆಚ್ಚು ರೋಗ ನಿರೋಧಕ ಶಕ್ತಿಯನ್ನೂ ಹೊಂದಿರುತ್ತವೆ. ಎಲ್ಲ ಹವಾಮಾನಗಳಿಗೆ ಸುಲಭವಾಗಿ ಹೊಂದಿಕೊಳ್ಳುತ್ತವೆ. ಬೆಳಿಗ್ಗೆ ಆಹಾರ ತಿಂದು ಹೊರಗೆ ಅಡ್ಡಾಡಲು ಹೋದರೆ ಮತ್ತೆ ಬರುವುದು ಸಾಯಂಕಾಲ ಆದಾಗಲೇ. ಹಗಲೆಲ್ಲ ಬಯಲಿನಲ್ಲಿ ಓಡಾಡಿಕೊಂಡು ಹುಳು-ಹುಪ್ಪಟೆ, ಕಾಳುಕಡ್ಡಿ, ಎಲೆ, ಕ್ರಿಮಿ-ಕೀಟಗಳನ್ನು ತಿನ್ನುತ್ತವೆ. ರಾತ್ರಿ ಹೊತ್ತು ಗೂಡಿನಲ್ಲಿ, ಮನೆಯ ಮಾಡಿನಲ್ಲಿ ಇಲ್ಲವೇ ಮರದಲ್ಲಿ ರಕ್ಷಣೆ ಪಡೆಯುತ್ತವೆ. ಹಾಗಾಗಿ ಇವುಗಳ ಬಗ್ಗೆ ಹೆಚ್ಚು ಕಾಳಜಿ ತೆಗೆದುಕೊಳ್ಳುವ ಅಗತ್ಯವೂ ಇರದು.

ಕೋಳಿಯು ಮೊಟ್ಟೆಗಳಿಗೆ ಕಾವು ಕೊಡಲು ಅನುಕೂಲ ಆಗುವಂತೆ ಜಾನಕಿ ಅವರು ಮನೆ ಚಾವಣಿಯಲ್ಲಿ ಭತ್ತದ ಹುಲ್ಲು ಹರಡಿದ ಬುಟ್ಟಿಗಳನ್ನು ನೇತು ಹಾಕಿದ್ದಾರೆ. ಕೋಳಿಗಳು ಇಲ್ಲಿಗೇ ಬಂದು ಮೊಟ್ಟೆ ಇಡುತ್ತವೆ. ನೆಲದಲ್ಲಿ ಮೊಟ್ಟೆ ಇಟ್ಟರೆ ನಾಯಿ, ಹಾವು, ಬೆಕ್ಕುಗಳು ತಿನ್ನುವ ಭಯ ಅವಕ್ಕೂ ಇದೆ. ಮೊಟ್ಟೆಯಿಂದ ಮರಿ ಹೊರ ಬರಲು 22 ದಿನ ಬೇಕು.

ನಾಟಿ ಕೋಳಿಗಳು ಆರು ತಿಂಗಳ ವಯಸ್ಸಿನ ನಂತರ ಮೊಟ್ಟೆ ಇಡಲು ಆರಂಭಿಸುತ್ತವೆ. ಕೋಳಿಯೊಂದು ವರ್ಷಕ್ಕೆ ಸುಮಾರು 60-80 ಮೊಟ್ಟೆಗಳನ್ನು ಇಡುತ್ತದೆ. ಹಾಗೆಯೇ, ಒಂದು ಕೋಳಿ ಎರಡರಿಂದ ಮೂರು ಕೆ.ಜಿ. ತೂಗುತ್ತದೆ. ಕೆ.ಜಿ. ಮಾಂಸಕ್ಕೆ ಸರಾಸರಿ 250 ರೂ. ಬೆಲೆ ಇದೆ. ಇದು ಫಾರಂ ಕೋಳಿ ಬೆಲೆಗಿಂತ ಮೂರು ಪಟ್ಟು ಹೆಚ್ಚು. ಜಾನಕಿ ಅವರು ಮನೆಗೆ ಬಳಸಿ ಹೆಚ್ಚಾದ ಕೋಳಿಗಳನ್ನು ಸ್ಥಳೀಯವಾಗಿ ಮಾರುತ್ತಾರೆ. ಕೋಳಿ ಗೂಡಿನಲ್ಲಿ ಸಂಗ್ರಹವಾಗುವ ಗೊಬ್ಬರವನ್ನು ಅವರದೇ ಹೊಲಕ್ಕೆ ಬಳಸಿಕೊಳ್ಳುತ್ತಾರೆ.

ಗ್ರಾಮೀಣ ರೈತ ಮಹಿಳೆಯರು ನಿತ್ಯದ ಕೆಲಸಗಳ ಜತೆಗೆ ಉಪಕಸುಬಾಗಿ ಈ ಕೋಳಿಸಾಕಣೆ ಮಾಡಿದರೆ ಕೈ ಖರ್ಚಿಗೆ ಕಾಸು ಸಂಪಾದಿಸಿಕೊಳ್ಳಬಹುದು ಎನ್ನುತ್ತಾರೆ ಜಾನಕಿ.
 

ಕಾಮೆಂಟ್‌ಗಳಿಲ್ಲ: