ಶನಿವಾರ, ಏಪ್ರಿಲ್ 13, 2013

ಅಪೂರ್ವ ಪಯಣದ ಅದ್ಭುತ ಚಿತ್ರಣ

 
 
 
 
 
 
 
 
 
 
 
 
 
 
 
 
 
 
 
 
 
 
 
krupe: prajavani
 
 
ಭಾರತೀಯ ಚಲನಚಿತ್ರರಂಗ ಈಗ ಶತಮಾನೋತ್ಸವದ ಸಂಭ್ರಮದಲ್ಲಿದೆ. ಇದರೊಂದಿಗೆ ಅಮೀರ್‌ಬಾಯಿ ಕರ್ನಾಟಕಿ ಎಂಬ ಅಭಿಜಾತ ಕಲಾವಿದೆಯ ಜನ್ಮ ಶತಮಾನೋತ್ಸವವೂ ಕಳೆಗಟ್ಟಬೇಕಿತ್ತು. ಚಿತ್ರನಿರ್ಮಾಣದ ಆರಂಭದ ದಶಕಗಳಲ್ಲಿ ಮಿಂಚಿದ ಆ ಹಾಡುನಟಿಯ ಜೀವನ ಮತ್ತು ಸಾಧನೆಯ ವಿವರಗಳು ಕಾಲಕ್ರಮೇಣ ವಿಸ್ಮೃತಿಯ ನೇಪಥ್ಯಕ್ಕೆ ಸರಿದುಹೋದವು. ಸಂಶೋಧಕ ರಹಮತ್ ತರೀಕೆರೆ ಆ ಮಸುಕಾದ ಹೆಜ್ಜೆಗುರುತುಗಳನ್ನು ಅರಸುತ್ತ ಹೋದರು. ಅದರ ಫಲವಾದ `ಅಮೀರ್‌ಬಾಯಿ ಕರ್ನಾಟಕಿ' ಎಂಬ ಪುಸ್ತಕ ಆ ಕಲಾವಿದೆಯ ಅಪೂರ್ವ ಸಾಧನೆಯನ್ನು ಮರಳಿ ಮಧ್ಯರಂಗಕ್ಕೆ ತಂದು ನಿಲ್ಲಿಸಿದೆ.
 
ಹಳೆಯ ಹಿಂದಿ ಸಿನಿಮಾಗಳು ಮತ್ತು ಅವುಗಳ ಸುಮಧುರ ಚಿತ್ರಗೀತೆಗಳ ಗೀಳು ಇದ್ದವರಿಗೆ ಮಾತ್ರ ಅಮೀರ್‌ಬಾಯಿ- ಗೋಹರ್‌ಬಾಯಿ ಎಂಬ `ಬೀಳಗಿ ಸೋದರಿಯರು' ಗೊತ್ತಿರುತ್ತಾರೆ. ಈ ಮುಸ್ಲಿಂ ಸೋದರಿಯರು ಬಿಜಾಪುರದ ಬೀಳಗಿಯಿಂದ ದೂರದ ಮುಂಬೈವರೆಗೆ ಹೋಗಿ ಪ್ರಸಿದ್ಧಿ ಪಡೆದ ರೋಮಾಂಚಕ ರೀತಿಯೇ ಒಂದು ಚಲನಚಿತ್ರಕ್ಕೆ ತಕ್ಕ ವಸ್ತು. ಗಮನಿಸಬೇಕಾದ ಅಂಶವೆಂದರೆ, ಅಮೀರ್‌ಬಾಯಿ ಮಾಡಿದ ಸಾಧನೆ ಬರೀ ಕರ್ನಾಟಕ ಸಂಸ್ಕೃತಿಗೆ ಮಾತ್ರ ಸೇರಿದ ವಿಷಯವಲ್ಲ; ಅದು ಭಾರತೀಯ ಸಂಗೀತ, ರಂಗಭೂಮಿ ಮತ್ತು ಚಿತ್ರರಂಗದ ಇತಿಹಾಸದ ಒಂದು ಉಜ್ವಲ ಅಧ್ಯಾಯವೆಂದೇ ಹೇಳಬೇಕು. ಈ ಗ್ರಹಿಕೆಯನ್ನು ಪ್ರಸ್ತುತ ಪುಸ್ತಕದ ಎಲ್ಲ ಅಧ್ಯಾಯಗಳೂ ಸಾಧಾರವಾಗಿ ಗಟ್ಟಿಗೊಳಿಸುತ್ತವೆ.
 
`ಅಮೀರ್‌ಬಾಯಿ ಕರ್ನಾಟಕಿ' ಒಬ್ಬ ಕಲಾವಿದೆಯ ಜೀವನ ಚರಿತ್ರೆಯ ಮಾಮೂಲಿ ಚೌಕಟ್ಟಿನ ಬರಹವಲ್ಲ. `ಮೇಲ್ನೋಟಕ್ಕೆ ಇದು ಹಾಡುನಟಿಯೊಬ್ಬಳ ಜೀವನ ಚರಿತ್ರೆ; ಆದರೆ ಆಳದಲ್ಲಿ 1920-1950ರ ರಂಗಭೂಮಿ, ಸಿನಿಮಾ, ಸಂಗೀತ ಹಾಗೂ ವಸಾಹತುಶಾಹಿ ವಿರೋಧಿ ಆಂದೋಲನಗಳು ಏಕೀಭವಿಸಿರುವ ಸಾಂಸ್ಕೃತಿಕ ಕಥನ' ಎಂದು ಪುಸ್ತಕದ ಬೆನ್ನುಡಿಯೇ ಸಾರುತ್ತದೆ. ರಾಷ್ಟ್ರೀಯ ಚಳವಳಿಯ ಧ್ಯೇಯೋದ್ದೇಶಗಳು ನಮ್ಮ ದೇಶದ ಸಾಮಾಜಿಕ ಮತ್ತು ಸಾಂಸ್ಕೃತಿಕ ಸಂರಚನೆಯನ್ನು ಅನೇಕ ರೀತಿಗಳಲ್ಲಿ ಪ್ರಭಾವಿಸಿ ಅಪಾರ ಪರಿವರ್ತನೆ ತಂದಿತಷ್ಟೆ. ಅಮೀರ್‌ಬಾಯಿ ಮತ್ತು ಅವರಂಥ ಹಲವು ಕಲಾವಿದೆಯರ ಜೀವನ-ಕಲಾಯಾನವು ಆ ಪರಿವರ್ತನೆಯ ಪ್ರತಿಫಲ ಮತ್ತು ಪ್ರತಿಬಿಂಬ ಎಂಬುದನ್ನು ಇಲ್ಲಿ ವ್ಯಾಖ್ಯಾನಿಸುವ ರೀತಿಯೇ ಅದ್ಭುತ.
 
ಅಮೀರ್‌ಬಾಯಿಯ ನೆಪದಲ್ಲಿ ಹತ್ತೊಂಬತ್ತು- ಇಪ್ಪತ್ತನೇ ಶತಮಾನದ ಅತ್ಯಂತ ಪ್ರಮುಖ ಸಾಮಾಜಿಕ ಮತ್ತು ಸಾಂಸ್ಕೃತಿಕ ಸವಾಲುಗಳನ್ನು ರಹಮತ್ ತರೀಕೆರೆ ಇಲ್ಲಿ ಚರ್ಚಿಸುತ್ತಾರೆ. ಧಾರ್ಮಿಕ ಕಟ್ಟುಪಾಡುಗಳಿಗೆ ಪ್ರತಿರೋಧ, ಯಜಮಾನ ವ್ಯವಸ್ಥೆಯ ಉಲ್ಲಂಘನೆ, ಹೊಸ ಸಾಮಾಜಿಕ ಮಾನದಂಡಗಳಿಗೆ ಹೊಂದಿಕೊಳ್ಳುವಿಕೆ- ಹೀಗೆ ಅಂದಿನ ಮಹಿಳೆಯರು ಅದರಲ್ಲೂ ಕಲಾವಿದೆಯರು ನಿಭಾಯಿಸಿದ ಸಮಸ್ಯೆಗಳು ಇಲ್ಲಿ ಸೋದಾಹರಣವಾಗಿ ವಿಶ್ಲೇಷಣೆಗೆ ಒಳಪಟ್ಟಿವೆ. ಶತಮಾನಗಳಿಂದ ಇದ್ದ ಧರ್ಮಾತೀತ ಮನೋಭಾವ ಭಾರತೀಯ ಸಂಗೀತ, ರಂಗಭೂಮಿ ಮತ್ತು ಸಿನಿಮಾ ರಂಗಗಳನ್ನು ಅದೆಷ್ಟು ಶ್ರೀಮಂತವಾಗಿ ಬೆಳೆಸಿತು ಮತ್ತು ದೇಶ ವಿಭಜನೆಯ ನಂತರ ಧಾರ್ಮಿಕ ಮೂಲಭೂತವಾದ ಹೇಗೆ ಆ ರಂಗಗಳನ್ನು ರೂಕ್ಷವಾಗಿ ಪ್ರವೇಶಿಸಿತು ಎಂಬುದನ್ನೂ ಅವರು ತಮ್ಮ ಅಕೆಡೆಮಿಕ್ ಶಿಸ್ತಿಗೆ ನೆಲೆಗಟ್ಟಾಗಿರುವ ಸಾಮಾಜಿಕ ಕಳಕಳಿಯಿಂದ ವಿವರಿಸುತ್ತಾರೆ.
 
ಅಮೀರ್‌ಬಾಯಿ ಹೆಸರಿನಲ್ಲಿ ನಮ್ಮ ಸಂಕರಶೀಲ ಸಂಸ್ಕೃತಿಯ ಹಲವು ಸ್ತರಗಳನ್ನು ಅವರು ಶೋಧಿಸಿದ್ದಾರೆ, ರೂಪಾಂತರಗಳನ್ನು ಚರ್ಚಿಸಿದ್ದಾರೆ. ನಮ್ಮ ಹಿಂದಿನ ಎರಡು ತಲೆಮಾರುಗಳು ಅನುಭವಿಸಿದ ಈ ತವಕ ತಲ್ಲಣಗಳನ್ನು ಅರ್ಥೈಸಿಕೊಳ್ಳುವುದು `ಭಾರತದ ವರ್ತಮಾನ ಮತ್ತು ಭವಿಷ್ಯಕ್ಕೆ ಬೇಕಾಗಿರುವ ಧರ್ಮಾತೀತ ತತ್ವದ ಶೋಧವೂ ಆಗಬಲ್ಲುದು' ಎಂಬ ಲೇಖಕರ ಆಶಯಕ್ಕೆ ಹಲವರು ದನಿಗೂಡಿಸುವುದು ಖಂಡಿತ.
 
ಸಂಸ್ಕೃತಿ ರಂಗದಲ್ಲಿ ಬೇರೆಲ್ಲ ವಿಷಯಗಳಂತೆ ತಾಂತ್ರಿಕ ಆವಿಷ್ಕಾರಗಳೂ ಭಾರೀ ಬದಲಾವಣೆಗಳನ್ನು ತರುತ್ತವೆ ಎಂಬುದಕ್ಕೆ ಜಾಗತಿಕ ಚಿತ್ರರಂಗದಲ್ಲಿ ಹೇರಳ ನಿದರ್ಶನಗಳಿವೆ. ಭಾರತೀಯ ಸಿನಿಮಾಗೆ ಬಂದ `ಮಾತು' ಹಲವು ಪ್ರತಿಭಾವಂತ ಹಾಡುವ ಕಲಾವಿದರ ಬಾಯಿ ಕಟ್ಟಿದ ರೀತಿ, ಅಮೀರ್‌ಬಾಯಿಯ ಏಳುಬೀಳುಗಳ ಮೂಲಕ ಇಲ್ಲಿ ಜಿಜ್ಞಾಸೆಗೆ ಒಳಪಟ್ಟಿದೆ. ಇಂಥ ಅನೇಕ ವಿಶೇಷಗಳಿಂದಾಗಿ ಈ ಪುಸ್ತಕ, ವಸಾಹತುಶಾಹಿ ಮತ್ತು ಸಂಸ್ಕೃತಿ ಕುರಿತ ಅಧ್ಯಯನವಾಗುತ್ತದೆ, ಸ್ತ್ರೀ ಹೋರಾಟದ ಸಂಕಥನವಾಗುತ್ತದೆ; ಸಾಂಸ್ಕೃತಿಕ ರಂಗದ ಸಾಮಾಜಿಕ ಇತಿಹಾಸವೂ ಆಗಿ ಗಮನ ಸೆಳೆಯುತ್ತದೆ.
 
ಸಂಗೀತ, ರಂಗಭೂಮಿ ಮತ್ತು ಚಿತ್ರರಂಗಗಳಲ್ಲಿ ಸಾಧನೆ ಮಾಡಿ ಸೀಮೋಲ್ಲಂಘನಕ್ಕೆ ಸಂಕೇತವಾಗಿದ್ದ ಅಮೀರ್‌ಬಾಯಿ ಕರ್ನಾಟಕಿ ಅವರ ಜೀವನಕಥನ ನಿರೂಪಿಸುವುದಕ್ಕೆ ಅತ್ಯಗತ್ಯವಾದ ಸಂಶೋಧನೆಯಲ್ಲಿ ರಹಮತ್ ತರೀಕೆರೆ ವಹಿಸಿರುವ ಶ್ರದ್ಧೆ ಮತ್ತು ಶ್ರಮ ಕುರಿತು ಇಲ್ಲಿ ವಿಶೇಷವಾಗಿ ಉಲ್ಲೇಖಿಸಬೇಕು. ಅಪೂರ್ವ ಕಲಾಪಯಣ ಕೈಗೊಂಡ ಅಮೀರ್‌ಬಾಯಿ ತೀರಿಕೊಂಡ ದಶಕಗಳ ನಂತರ, ರಹಮತ್ ಕೂಡ ಬೀಳಗಿಯಿಂದ ಮುಂಬೈವರೆಗೆ ಅಪಾರ ತಿರುಗಾಟ ನಡೆಸಿದ್ದಾರೆ. ಕ್ಷೇತ್ರಕಾರ್ಯದಲ್ಲಿ ಹಲವರನ್ನು ಭೇಟಿಯಾಗಿ, ಹಲವು ಸ್ಥಳಗಳಲ್ಲಿ ತಡಕಾಡಿ ಸಿಕ್ಕ ಎಳೆಗಳನ್ನು ಜೋಡಿಸಿ ಒಂದು ಮಾದರಿ ಸಂಶೋಧನಾ ಗ್ರಂಥವನ್ನು ಕನ್ನಡಿಗರ ಮುಂದಿಟ್ಟಿದ್ದಾರೆ. ಇದರಲ್ಲಿ ಕೊಡಲಾಗಿರುವ ಅಮೀರ್‌ಬಾಯಿ ಹಾಡಿದ ಹಾಡುಗಳು, ನಟಿಸಿದ ಸಿನಿಮಾಗಳ ಸುದೀರ್ಘ ಪಟ್ಟಿಯೇ ದಾಖಲೀಕರಣದ ಮುಖ್ಯ ಪ್ರಯತ್ನವಾಗಿ ಗಮನ ಸೆಳೆಯುತ್ತದೆ.
 
ಸಮುದಾಯದ ನಡುವೆ ಬೆಳೆಯುವ ಸಂಗೀತ, ರಂಗಭೂಮಿ ಮತ್ತು ಸಿನಿಮಾದ ಸಂಗತಿಗಳು ಕೂಡ ಸಂಸ್ಕೃತಿ ಕುರಿತ ಚರ್ಚೆಯಲ್ಲಿ ರಾಜಕೀಯ ಮತ್ತು ಸಾಹಿತ್ಯಕ ಬೆಳವಣಿಗೆಗಳಷ್ಟೇ ಪ್ರಾಧಾನ್ಯ ಪಡೆಯಬೇಕು ಎಂಬ ಆಶಯ ಮುಖ್ಯವಾಗಿ ಈ ಪುಸ್ತಕವನ್ನು ಆವರಿಸಿಕೊಂಡಿದೆ. ಸಂಗೀತ- ನರ್ತನವೇ ಉಸಿರಾದ ತವಾಯಿಫ್ ಪರಂಪರೆಯ ಉಜ್ವಲ ಕಲಾವಿದೆ ಗೋಹರ್ ಜಾನ್ ಕಲ್ಕತ್ತವಾಲಿಯ ಬದುಕು ಮತ್ತು ಸಾಧನೆ ಕುರಿತ ವಿಕ್ರಮ್ ಸಂಪತ್ ಅವರ ಸಂಶೋಧನಾ ಗ್ರಂಥ “ಮೈ ನೇಮ್ ಈಸ್ ಗೋಹರ್ ಜಾನ್‌” (ರೂಪ ಪಬ್ಲಿಕೇಷನ್ಸ್, ನವದೆಹಲಿ, 2010) ಒಂದು ಅತ್ಯುತ್ತಮ ಸಾಂಸ್ಕೃತಿಕ ಸಂಕಥನವಾಗಿ ಈಗಾಗಲೇ ಎಲ್ಲರ ಗಮನ ಸೆಳೆದಿದೆ. ಕನ್ನಡದ “ಅಮೀರ್‌ಬಾಯಿ ಕರ್ನಾಟಕಿ” ಆ ಕಲಾಪರಂಪರೆಯ ಇನ್ನಷ್ಟು ಪ್ರಮುಖ ಎಳೆಗಳನ್ನು ಜೋಡಿಸುವ ಮತ್ತೊಂದು ಮಹತ್ವದ ಪ್ರಯತ್ನವಾಗಿದೆ.
 
ನಿಜಕ್ಕೂ ಸಂಶೋಧನೆಯಲ್ಲಿ ಕೂಡ `ನಡೆದಷ್ಟೂ ನಾಡು' ಎಂಬುದನ್ನು ರಹಮತ್ ತರೀಕೆರೆ ಈ ನಾಡಕಥನದ ಮೂಲಕ ಸಾಬೀತು ಪಡಿಸಿದ್ದಾರೆ. ಇಂಥ ನಡಿಗೆಗೆ ಇನ್ನೂ ಅನೇಕ ಯುವ ಸಂಶೋಧಕರು ಮನಸ್ಸು ಮಾಡಲಿ ಎಂದು ಹಾರೈಸುವಂತಾಗುತ್ತದೆ.

ಕಾಮೆಂಟ್‌ಗಳಿಲ್ಲ: