ಗುರುವಾರ, ಏಪ್ರಿಲ್ 4, 2013

ಅಂತರಾಷ್ಟ್ರೀಯ ಪ್ರಜ್ಞೆ ಮತ್ತು ದೇಸೀಯತೆ.

  -ಡಾ.ಪ್ರಕಾಶ ಗ.ಖಾಡೆ


  ನಮ್ಮಲ್ಲಿ ಸ್ಥಳೀಯತೆ ಎಂಬುದು ನಗಣ್ಯ ಆದ ಸಂದರ್ಭದಲ್ಲಿ ಇಲ್ಲಿ ದೇಸೀ ಜೀವನಮುಖಿಯಾದ ಮೌಖಿಕ ಕಾವ್ಯ ಪ್ರಕ್ರಿಯೆಯು ತನ್ನ ಅಸ್ತಿತ್ವದ ನೆಲೆಗಾಗಿ ಯಾವುದೇ ಬಗೆಯ ಪ್ರಯತ್ನವಾದಿ ಹುಡುಕಾಟಕ್ಕೆ ತಾನು ನಿಲ್ಲದೆ, ಹಾಗೆಂದು ತೋರುಗೊಡದೆ ಅದು ಸದಾ ಪ್ರವಹಿಸುತ್ತಿರುವುದು ಅದರ ಜಾಗೃತಿ ಮತ್ತು ಜೀವಂತಿಗೆಯ ಹೆಚ್ಚುಗಾರಿಕೆಯಾಗಿದೆ. ಆದರೆ ಅದೊಂದು ಅದಿsಕೃತತೆ ಪ್ರಾಪ್ತವಾಗುವ ಸಮಯ ಸಂದರ್ಭಕ್ಕಾಗಿ ಕಾಯುತ್ತಿತ್ತು. ಹೀಗೆ ಈ ನಾಡಿನ ಬಹುಮುಖಿ ದೇಸೀ ಕವಿತ್ವ ರಚನಾಕಾರರು, ಹಾಡುಗಾರರು, ಮೇಳದವರು ಕಟ್ಟಿಕೊಂಡ ಕೇಳುಗ ನೆಲೆಯನ್ನು ಸದಾ ಹಸಿಯಾಗಿಯೇ ಇಟ್ಟುಕೊಂಡು ಬಂದು ತನ್ನ ಸಮೃದ್ಧ ನೆಲದ ಪೈರಿಗಾಗಿ ಕಾದು ಕೊಂಡು ಬಂದ ಈ ಬಗೆಯ ಫಲವತ್ತತೆಗೆ ಸಾಕ್ಷಿಯಾಗಿ ಮೌಖಿಕ ಕಾವ್ಯ ಸಂವಹನ ಸಂದರ್ಭಗಳು ಹೆಚ್ಚು ತೋರುಗೊಳ್ಳುತ್ತ ಒಂದು ನಿರಂತರತೆಯ ಪ್ರಕ್ರಿಯೆಗೆ ಒಳಗಾಗುವುದು ಇದೆ.
    ಇಲ್ಲಿ ಮೊದಲಿನಿಂದಲೂ ಮಾರ್ಗ-ದೇಸೀ, ಶಿಷ್ಟ-ಜಾನಪದ, ನಗರ-ಗ್ರಾಮೀಣ ಎಂಬ ಈ ಬಗೆಯ ವಾಗ್ವಾದಗಳು ನಡೆದುಕೊಂಡು ಬಂದಿವೆ. ಇಂಥ ವಾಗ್ವಾದಗಳನ್ನು ಕೆಲ ಉದಾಹರಣೆಗಳ ಮೂಲಕ ಒಟ್ಟು ಕಾವ್ಯ ಸಂದರ್ಭವನ್ನು ಪ್ರತ್ಯೇಕವಾಗಿಟ್ಟುಕೊಂಡು ನೋಡಿದರೂ ಒಂದರೊಳಗೊಂದರ ಬೆಸುಗೆ ಬಿಡಿಸುವಲ್ಲಿ ಒಂದು ಬಗೆಯ ೞsದ್ರತೆಯ ಸೃಷ್ಟಿಗೆ ಒಳಗಾಗುತ್ತೇವೆ. ಏಕೆಂದರೆ ದೇಸಿ, ಜಾನಪದ, ಗ್ರಾಮ್ಯವೆನ್ನುವುದು ನಮ್ಮ ಕಾವ್ಯ ರಚನಾ ವ್ಯಕ್ತತೆಯ ಉದ್ದಕ್ಕೂ ತನ್ನ ಅಸ್ತಿತ್ವ, bsಪು ಮೂಡಿಸಿಕೊಂಡೆ ಬಂದಿದೆ. ಕಿ.ರಂ. ನಾಗರಾಜರು ಗುರುತಿಸುವಂತೆ.
   ಕನ್ನಡದ ಮಟ್ಟಿಗೆ ಹೇಳುವುದಾದರೆ ಶಿಷ್ಟ ಎಂಬ ಪ್ರಭೇದವೇ ಒಂದು ರೀತಿಯಲ್ಲಿ ಅಸ್ಪಷ್ಟವೂ, ಕೃತಕವೂ ಆಗಿದೆ. ಏಕೆಂದರೆ ವಚನಕಾರರಾಗಲಿ, ಹರಿಹರ, ರಾಘವಾಂಕ, ಕುಮಾರವ್ಯಾಸ, ಕೀರ್ತನಕಾರರು, ಲಕ್ಷ್ಮೀಶ, ಸರ್ವಜ್ಞ ಇವರ ಕೃತಿಗಳು ನಮ್ಮ ಗ್ರಾಮೀಣ ಸಂಸ್ಕೃತಿಯ ಅತ್ಯಂತ ಪ್ರಮುಖ ಭಾಗವಾಗಿ ಹರಡಿಕೊಂಡಿವೆ.ನಮ್ಮ ಹಿಂದಿನವರ ಈ ಕಾವ್ಯಗಳು ಸ್ಥಳೀಯವಾದವನ್ನೇ ಹೆಚ್ಚು ಜನಪದಗೊಳಿಸಿರುವುದು ಹಾಗೂ ನಂತರದ ಇವತ್ತಿಗೂ ಪುರಾಣ, ಪ್ರವಚನಗಳಲ್ಲಿ ಹೇಳಿಕೊಂಡು ಬರುತ್ತಿರುವ ’ಶೂನ್ಯ ಸಂಪಾದನೆ’ ಬಸವ ಪುರಾಣ, ’ರಾಜಶೇಖರ ವಿಳಾಸ’, ’ನೇಮಿಜಿನೇಶ ಸಂಗತಿ’, ’ಹರಿಭಕ್ತಿಸುಧೆ’, ’ಹರಿಕಥಾಮತೃಸಾರ’ - ಇವುಗಳು ಈಗಿನ ಸಂದರ್ಭದಲ್ಲೂ ಹೆಚ್ಚು ಜನಪದವಾಗಿರುವುದು ಅವುಗಳ ಜಾನಪದೀಯತೆಯನ್ನೇ ಸಾರುತ್ತವೆ.

   ಪ್ರದೇಶ ಮತ್ತು ಸಂದರ್ಭಗಳು ವಿಸ್ತೃತವಾಗುತ್ತ ಸಾಗಿದಂತೆ ಮಾರ್ಗ-ದೇಸೀ ಒಂದರೊಳಗೊಂದು ಹುಟ್ಟು ಪಡೆಯುವ ಸಾಧ್ಯತೆ ಇದೆ. ’ಐರೋಪ್ಯ ಮಾರ್ಗದ ಎದುರಿನಲ್ಲಿ ಸಂಸ್ಕೃತವು ದೇಸೀಯಾಗಿ ಕಂಡರೆ, ಸಂಸ್ಕೃತ ಮಾರ್ಗದ ಎದುರಿನಲ್ಲಿ ದೇಶಭಾಷೆಗಳು ದೇಸೀಯವಾಗಿ ಕಾಣುತ್ತವೆ. ಅದೇ ದೇಶ ಭಾಷಾ ಸಾಹಿತ್ಯಗಳ ಲಿಖಿತ ಮಾರ್ಗದ ಎದುರಿನಲ್ಲಿ ಅದೇ ದೇಶ, ಭಾಷಾ ಸಾಹಿತ್ಯಗಳ ಅಲಿಖಿತ ನೆಲೆಗಳು ದೇಸೀ ಆಗುತ್ತವೆ. ಮಾರ್ಗವೇ ದೇಸೀಯಾಗುವ, ದೇಸೀಯೇ ಮಾರ್ಗವಾಗುವ, ಮಾರ್ಗದೊಳಗೆ ಮಾರ್ಗವಿರುವ, ದೇಸೀಯೊಳಗೆ ದೇಸೀಯಿರುವ ಸಂಕೀರ್ಣವಾದ ನೇಯ್ಗೆಯನ್ನು ಇಲ್ಲಿ ಗ್ರಹಿಸಬೇಕಾಗಿದೆ. ಹೀಗಾಗಿ ಒಂದು ಸಂದರ್ಭದ ಕಾವ್ಯದಲ್ಲಿ ಈ ದೇಸೀಯ ಹುಡುಕಾಟವು ಒಂದು ರೀತಿಯಲ್ಲಿ ಮಾರ್ಗಮುಖಿ ನೆಲೆಗಳನ್ನು ಗುರುತಿಸುತ್ತದೆ. ಯಾಕೆಂದರೆ ವಿಸ್ಮೃತಿಗೆ ಒಳಗಾದ ಈ ಬಗೆಯ ಸಾಹಿತ್ಯ ಶೋಧನೆ ಅದು ಪ್ರಭಾವಿಸಿಕೊಂಡ ನೆಲೆಗಳಿಂದ ಹುಡುಕಿ ಕಟ್ಟಿಕೊಡಬೇಕಾಗುತ್ತದೆ.

    ಹೀಗೆ ಪಂಪ ಸಾರಿದಂತೆ ’ದೇಸೀಯೊಳ್ ಪುಗುವುದು ಪೊಕ್ಕು ಮಾರ್ಗದೊಳೆ ತಳ್ಪುದು’ ಎಂದು ಸಾರಿದಂತೆ ಪಾರಂಪರಿಕ ಕ್ರಿಯೆ ಪ್ರಕ್ರಿಯೆ ರೂಪದ ಸ್ವದೇಶೀ ಸತ್ಯಗಳನ್ನು ಶೋದಿsಸುವುದು ಈ ಸಂದರ್ಭದ ಅಗತ್ಯವಾಗಿದೆ. ವಸಾಹತುಶಾಹಿ ಸಂದರ್ಭದ ನೆಲೆಯಲ್ಲಿ ದೇಸೀವಾದಿ ಚಿಂತನೆಗಳು ಹುಟ್ಟಿಕೊಳ್ಳುವ ಮೂಲಕ ಸ್ಥಳೀಯ ಕಾವ್ಯಕ್ಕೆ ಒಂದು ಬಗೆಯ ಜೀವಂತಿಕೆಯ ಅರಿವಾಯಿತು. ವಸಾಹತುಶಾಹಿ ತನ್ನ ಉದ್ದೇಶದ ಈಡೇರಿಕೆಗಾಗಿ ಬಳಸಿದ ತಂತ್ರಗಳು ಒಟ್ಟು ದೇಸಿತನವನ್ನು ಹತ್ತಿಕ್ಕುವುದೇ ಆಗಿತ್ತು. ಆದರೆ ಪುರಾತನ ಜಾಗೃತಿಯೊಂದಿಗೇ ನಡುವೆಯೇ ಬಂದ ಇಂಥ ಚಿಂತನೆಗಳು ವ್ಯಾಪಕವಾಗಿ ಹಬ್ಬದಿರಲು ಇಲ್ಲಿನ ಗಟ್ಟಿಗೊಂಡ ಸಾಂಸ್ಕೃತಿಕ ಸಂದರ್ಭಗಳು ವಿಸ್ತಾರವಾಗಿ ಹಬ್ಬಿದ ಭೌಗೋಳಿಕ ಸನ್ನಿವೇಶಕ್ಕೆ ಪೂರಕವಾಯಿತು.
ವಸಾಹತುಶಾಹಿ ಸಂದರ್ಭವು ತನ್ನ ಅಸ್ತಿತ್ವಕ್ಕಾಗಿ ಇಲ್ಲಿ ಗೊಂದಲಗಳನ್ನು ಸೃಷ್ಟಿಸಬೇಕಾಯಿತು. ’ವಸಾಹತುಶಾಹಿ ಮುಖ್ಯ ಗುರಿಯೆಂದರೆ ದೇಸೀಯ ಸಂಸ್ಕೃತಿಗಳ ಬಹುಮುಖತ್ವವನ್ನು ಹತ್ತಿಕ್ಕುವುದು, ಅವುಗಳ ಅನನ್ಯತೆಯನ್ನು ನಾಶಮಾಡಿ ಅವುಗಳನ್ನು ಸಾಂಸ್ಕೃತಿಕ ವಸಾಹತುಗಳನ್ನಾಗಿ ಪರಿವರ್ತಿಸುವುದು, ಇಂಥ ಸಂದರ್ಭದಲ್ಲಿ ಪರಸ್ಪರ ವಿನಿಮಯದ ಬದಲು ಯಜಮಾನಿಕೆಯೇ ಮುಖ್ಯವಾಗುತ್ತದೆ. ವಸಾಹತುಶಾಹಿಯ ಉದ್ದೇಶಗಳು ಪೂರ್ತಿ ಈಡೇರದಿದ್ದರೂ ದೇಸೀಯ ಸಂಸ್ಕೃತಿಯಲ್ಲಿ ಏರುಪೇರುಗಳು ಉಂಟಾಗುತ್ತವೆ. ದೇಸೀವಾದಿ ನಿಲುವುಗಳು ಹುಟ್ಟಿಕೊಳ್ಳುವುದು ಇಂಥ ಸನ್ನಿವೇಶದಲ್ಲಿ’ ಎಂಬುದನ್ನು ರಾಜೇಂದ್ರ ಚೆನ್ನಿ ಅವರ ಹೇಳಿಕೆಯಿಂದ ಸ್ಪಷ್ಟ ಪಡಿಸಲು ಸಾಧ್ಯ.

    ಈ ಸಂಘರ್ಷದ ನೆಲೆಯಲ್ಲಿ ತನ್ನ ಭಾಷೆ, ಸಂಸ್ಕೃತಿಯ ಅಬಿsಮಾನದ ನೆಲೆ ಮುಂಚಿನಿಂದಲೂ ಇಲ್ಲಿ ಬಂದಿದೆ. ಅನ್ಯ ಸಂಸ್ಕೃತಿಯ ಒತ್ತಡಗಳು ತುಂಬಾ ಸಪ್ಪಳ ಮಾಡಿಕೊಂಡು ಬರಲು ಆಕರ್ಷಣೆಗೆ ತೆರೆದುಕೊಂಡರೂ ಇಲ್ಲಿನ ಜನಸಮುದಾಯದ ಸ್ಥಳೀಯತೆಯನ್ನು ಬಿಟ್ಟು ಕೊಡಲಿಲ್ಲ. ಮಾತು ವ್ಯವಹಾರ ಅದು ಎಷ್ಟೇ ಸ್ಥಳೀಯವಾದುದು ಆಗಿರುತ್ತದೆಯೋ ಅಲ್ಲಿ ಸಹಜ ಬದುಕಿಗೆ ದಾರಿಯಾಗುತ್ತದೆ. ದೇಸಿಯತೆಯ ನೆಲೆಗಳನ್ನು ತಟ್ಟಿಕೊಂಡು ಬಂದ ವಸಾಹತುಶಾಹಿ ಬಾಹುಗಳು ಇಲ್ಲಿ ಸ್ಥಳೀಯವಾದುದನ್ನು ಹತ್ತಿಕ್ಕಲು ನೋಡಿದ್ದೇ ಹೆಚ್ಚು. ಆದರೆ ಆ ಸಂದರ್ಭಕ್ಕೆ ನಮ್ಮವರು ಕಾದುಕೊಂಡು ಬಂದ ಸ್ಥಳೀಯ ಕೋಮಲ, ನಿರ್ಮಲ ಭಾವಗಳು ಭಾವುಕ ನೆಲೆಯಲ್ಲಿ ನಿಲ್ಲದೆ ಅರ್ಥ ಮಾಡಿಸಿದ್ದು  ಸಾಧನೆ. ಲಂಕೇಶ್ ಅವರು ಒಂದು ಕರ್ತವ್ಯವನ್ನು eಪಿಸುತ್ತಾರೆ.’ನಾವು ಈಗ ಈ ಜಗತ್ತಿನಲ್ಲಿರುವ ನೂರಾರು ಸಾಂಸ್ಕೃತಿಕ ವಲಯಗಳನ್ನು ಗಮನಿಸಿದರೆ, ಸ್ಥಳೀಯ ನಂಬಿಕೆ ಮತ್ತು ಆಚರಣೆಗಳನ್ನು ಅಭ್ಯಸಿಸಿದರೆ ಈ ಸಂಸ್ಕೃತಿಗಳು ಅಂತರ್‌ರಾಷ್ಟ್ರೀಯ ಪ್ರeಯ ಜೊತೆಗೆ ಸಂಘರ್ಷಿಸುವುದು ಖಂಡಿತ ಅನ್ನಿಸುತ್ತದೆ. ಬೇಂದ್ರೆಯವರ ಸಾಧನಕೇರಿಯ ಚೆಂದ, ಅರ್ಥದ ಈ ಅಂತರಾಷ್ಟ್ರೀಯ ಮನಸ್ಸರಿಗೆ ತಿಳಿಯುವುದು ಕಷ್ಟ.

    ಅಂತರ್‌ರಾಷ್ಟ್ರೀಯವೆಂದರೆ ಏನು? ಈ ಅಂತರ್‌ರಾಷ್ಟ್ರೀಯ ಮನುಷ್ಯನಿಗೆ ಇಡೀ ಜಗತ್ತು ಒಂದು’ ಎಂಬ ಲಂಕೇಶ್‌ರ ಚಿಂತನೆಯು ಬಳಕೆಯ ಸಂದರ್ಭಗಳಲ್ಲಿ ಸ್ಥಳೀಯವಾದಕ್ಕೆ ಹೊರಗಿನ ಪ್ರಭಾವಗಳು ಉಂಟುಮಾಡಿದ ಒತ್ತಡಗಳು ಅರ್ಥರೂಪಿ ಸಂದರ್ಭದಲ್ಲಿ ಮೌಲ್ಯಕಳಕೊಳ್ಳುವ ಸೂಚನೆ ಸಾರುತ್ತದೆ. ಅವರೇ ಈ ಚಿಂತನೆಯ ಮುಂದುವರಿಕೆಯಾಗಿ ಹೇಳುತ್ತಾರೆ. ಮಾತೃಭಾಷೆ ಮತ್ತು ಪರಿಸರ ಒಂದು ಸಮುದಾಯಕ್ಕೆ ಮತ್ತು ಆ ಸಮುದಾಯದ ಸೂಕ್ಷ್ಮ ವ್ಯಕ್ತಿಗಳಿಗೆ ಕಾಣುವ ಹಾಗೆ ಒಂದು ಅಂತಾರಾಷ್ಟ್ರೀಯ ಮನಸ್ಸಿಗೆ ಕಾಣುವುದಿಲ್ಲ. ಆ ಮನಸ್ಸಿಗೆ ಎಲ್ಲ ಒಂದೇ. ತಲೆ, ಹೃದಯ ಎರಡೂ ಇಲ್ಲದ ವಸ್ತು. ಆದ್ದರಿಂದಲೇ ಅಂತರ್‌ರಾಷ್ಟ್ರೀಯ ಪ್ರeಯೇ ಒಂದು ಅಸ್ತ್ರವಾಗುತ್ತಿರುವಾಗ ನಾವು ನಮ್ಮ ಸ್ಥಳೀಯ ಕೋಮಲ ವೈಯಕ್ತಿಕ ಕೃತಿಗಳನ್ನು ರಕ್ಷಿಸಿಕೊಳ್ಳಬೇಕಾದ್ದು ನಮ್ಮ ಕರ್ತವ್ಯ ಈ ಸ್ಥಳೀಯ ಕೋಮಲ ಕೃತಿಗಳೇ ಆಧುನಿಕ ಕಾವ್ಯವನ್ನು ರೂಪಿಸುವಲ್ಲಿ ಕಾರಣವಾದ ಸಂದರ್ಭವನ್ನು ಕಟ್ಟಿಕೊಡಲು  ದೇಸೀಯ ಹಾಡು ಸಂಪ್ರದಾಯಗಳು ಹುಟ್ಟುಹಾಕಿದ, ಸಾಂಸ್ಕೃತಿಕ ಬದುಕು ರೂಪಿಸಿದ, ಹೊಸತಾದ ಕಾವ್ಯ ಕ್ರಿಯೆಗೆ ಜಾನಪದ ಸಂದರ್ಭ ಪ್ರಧಾನವಾಗಬೇಕಾಯಿತು.

 -ಡಾ.ಪ್ರಕಾಶ ಗ.ಖಾಡೆ,ಬಾಗಲಕೋಟ
ವಿಳಾಸ : ಡಾ.ಪ್ರಕಾಶ ಗ.ಖಾಡೆ,ಶ್ರೀ ಗುರು,ಸರಸ್ವತಿ ಬಡಾವಣೆ,ಸೆಕ್ಟರ್ ನಂ.೬೩,ನವನಗರ,ಬಾಗಲಕೋಟ ಮೊ.೯೮೪೫೫೦೦೮೯೦.
 

ಕಾಮೆಂಟ್‌ಗಳಿಲ್ಲ: