ಮಂಗಳವಾರ, ಏಪ್ರಿಲ್ 9, 2013

ಜಟಾಪಟಿಯಲ್ಲಿ ಗೆದ್ದ ’ಜನಪದರ ಚಾಮುಂಡಿ’

ಜಟಾಪಟಿಯಲ್ಲಿ ಗೆದ್ದ ’ಜನಪದರ ಚಾಮುಂಡಿ’

-ಕಾತ್ಯಾಯಿನಿ ಕುಂಜಿಬೆಟ್ಟು
620463_249368795184865_332313345_o.jpg

 

 ಇತ್ತೀಚೆಗೆ ಮಂಡ್ಯ ರಮೇಶ್ ನಿರ್ದೇಶನದಲ್ಲಿ ಜಾನಪದ ಜಟಾಪಟಿ (ಚಾಮ ಚೆಲುವೆ) ಎಂಬ ನಾಟಕವು  ರಂಗ ನಿರ್ದೇಶಕ ಜೀವನರಾಂ ಸುಳ್ಯ ಇವರ ರಂಗಮನೆಯಲ್ಲಿ ಮೈಸೂರಿನ ನಟನಾ ಕಲಾವಿದರಿಂದ ಅತ್ಯುತ್ತಮವಾಗಿ ಅರಳಿತು.

 ಡಾ| ಸುಜಾತ ಅಕ್ಕಿಯವರು ಬರೆದಿರುವರೆನ್ನಲಾದ ಚಾಮ ಚೆಲುವೆಯು ಮಂಡ್ಯ ರಮೇಶರ ಕಲಾತ್ಮಕ ನಿರ್ದೇಶನದಲ್ಲಿ ರಂಗಕೃತಿಯಾಗಿ ಸಿದ್ಧವಾದ ೪೫ ದಿನಗಳಲ್ಲೇ ೨೭ ರಂಗಪ್ರದರ್ಶನಗಳನ್ನು ಕಂಡಿರುವುದು ಗಮನಾರ್ಹ ಸಂಗತಿ. ಆದರೆ ಇತ್ತೀಚೆಗೆ ಜಾನಪದ ಸಂಗ್ರಾಹಕಾರರಾದ ಡಾ| ಪಿ.ಕೆ. ರಾಜಶೇಖರ್ ಇವರು ’ಇದು ನಾನು ಬರೆದ ನಾಟಕ’ ಎಂದು ಕಾನೂನಿನ ಮೂಲಕ ನಾಟಕಕ್ಕೆ ತಡೆ ತಂದಿದ್ದು, ಸುಜಾತ ಅಕ್ಕಿಯವರ ’ಚಾಮ ಚೆಲುವೆ’ ಹಾಗು ಪಿ. ಕೆ. ರಾಜಶೇಖರ್‌ರ ’ಸಿರಿಚಾಮುಂಡಿ’ ಈ ಎರಡೂ ಕೃತಿಗಳ ತೌಲನಿಕ ಅಧ್ಯಯನದಿಂದ ಕೃತಿಯ ಸ್ವಾಮ್ಯದ ಕುರಿತು ನಿರ್ಣಯ ಇನ್ನಷ್ಟೇ ಆಗಬೇಕಾಗಿದೆ.

 ಚಾಮುಂಡಿಯು ತನ್ನ ಬೆವರಿನಿಂದ ಸೃಷ್ಟಿಯಾದ ಉತ್ನಳ್ಳಿ ಮಾರಿಯ ಸಹಾಯದಿಂದ ಇಡೀ ಜಗತ್ತನ್ನೇ ತನ್ನ ದೈತ್ಯಶಕ್ತಿಯಿಂದ ನಡುಗಿಸುತ್ತಿದ್ದ ಮಹಿಷಾಸುರನನ್ನು ಸಂಹರಿಸಿ ಬೆಟ್ಟದಲ್ಲೇ ನೆಲೆಸುವುದು; ಆಗಾಗ ಕನಸಿನಲ್ಲಿ ಬಂದು ವಿಚಲಿತಗೊಳಿಸುತ್ತಿದ್ದ ಆಕೆಯನ್ನರಸುತ್ತ ಬಂದ ನಂಜನಗೂಡಿನ ನಂಜುಂಡೇಶ್ವರನು ಕಪಿನಿ-ಕಾವೇರಿ ಸಂಗಮಸ್ಥಾನದಲ್ಲಿ ಹುಣ್ಣಿಮೆ ರಾತ್ರಿಯಲ್ಲಿ ಮೀಯುತ್ತಿದ್ದ ಆಕೆಯ ನೆಂದ ಚಂದಕ್ಕೆ ಮೋಹಗೊಂಡು ಪ್ರೇಮ ನಿವೇದನೆ ಮಾಡಿಕೊಳ್ಳುವುದು; ’ಈಗಾಗಲೇ ಇಬ್ಬರು ಪತ್ನಿಯರನ್ನು ಹೊಂದಿರುವ ನಿನ್ನನ್ನು ವರಿಸಿದರೆ ನಾನು ಇಟ್ಟುಕೊಂಡವಳು ಎಂದೆನಿಸಿಕೊಳ್ಳುತ್ತೇನೆಯೇ ಹೊರತು ಕಟ್ಟಿಕೊಂಡವಳಾಗಲಾರೆ’ ಎಂದು ಮೊದಲು ನಿರಕಾರಿಸಿದರೂ ಕ್ರಮೇಣ ಪುರುಷನ ಪ್ರೀತಿಯ ಆಮಿಷಕ್ಕೆ ತಂತ್ರಗಳಿಗೆ ಪ್ರಕೃತಿ ವಶಳಾಗುವುದು; ಆರು ತಿಂಗಳಾದರೂ ಮನೆಗೆ ಬಾರದ ಪತಿಯನ್ನು ಹುಡುಕಿಸಿ ಆತನ ಕಳ್ಳ ಸಂಬಂಧದ ಸುಳಿವು ಪಡೆದಿದ್ದ ಪತ್ನಿಯರು ಪತಿ ಮರಳಿದೊಡನೆ ಸಂಶಯ ವಾಸನೆಯಿಂದ ಕತ್ತಲ ಕೋಣೆಯಲ್ಲಿ ಬಂಧಿಸುವುದು; ಉತ್ನಳ್ಳಿ ಮಾರಿಯು ಅಕ್ಕನ ವಿರಹ ತಾಪವನ್ನು ನಂಜುಂಡನ ಕಿವಿಯಲ್ಲುಸುರಿ ಆತ ತಪ್ಪಿಸಿಕೊಂಡು ಬರುವಂತೆ ಮಾಡುವುದು; ಕುದುರೆಯೇರಿ ನೇರ ಬೆಟ್ಟ ಸೇರುವ ದೇವೇರಿಯು ಚಾಮುಂಡಿಯ ಕುಲ ಗೋತ್ರಗಳ ಕುರಿತು ಹೀನಾಮಾನ ಬೈದು ಪತಿಯನ್ನು ಬಲವಂತದಿಂದ ಮರಳಿ ಕರೆದೊಯ್ಯುವುದು; ಶ್ರೀರಂಗಪಟ್ಟಣದ ರಂಗನಾಥನ ಸಲಹೆಯಂತೆ ನಂಜುಂಡ ಸತ್ತಂತೆ ನಟಿಸಿದಾಗ ಪೂರ್ವಯೋಜನೆಯಂತೆ ಕೊರವಂಜಿ ರೂಪದಲ್ಲಿ ಬರುವ ಚಾಮುಂಡಿಯು ’ಪೂರ್ವಜನ್ಮದಲ್ಲಿ  ನಂಜುಂಡನೇ ಚಾಮುಂಡಿಯ ಪತಿಯಾಗಿದ್ದುದರಿಂದ ಆಕೆಯೇ ಆತನ ಪಟ್ಟದರಾಣಿ’ ಎಂಬ ನಂಬಿಕೆ ಹುಟ್ಟಿಸಿ, ಅವರಿಂದ ವಚನ ಪಡಕೊಂಡು ಮದ್ದು ನೀಡಿ ಬದುಕಿಸುವುದು; ಪತಿಯ ಜೀವ ಉಳಿದರೆ ಸಾಕು ಎಲ್ಲಾದರೂ ಆತ ಬದುಕಲಿ ಎಂಬ ಮಟ್ಟಕ್ಕೇರಿದ್ದ ಪತ್ನಿಯರು ಆತನನ್ನು ಚಾಮುಂಡಿಗೆ ಒಪ್ಪಿಸುವುದು; ಆಕೆ ಆತನನ್ನು ಸವತಿಯರ ಸಮೇತ ಸ್ವೀಕರಿಸುವುದು - ಮೈಸೂರು ಪ್ರಾಂತ್ಯದ ಮಣ್ಣಲ್ಲಿ ಚಿಗುರಿ, ಜನಮನದಲ್ಲಿ ಹಾಸುಹೊಕ್ಕಿರುವ ಚಾಮುಂಡೇಶ್ವರಿ, ಉತ್ನಳ್ಳಿಮಾರಿ, ನಂಜುಂಡೇಶ್ವರ, ಶ್ರೀರಂಗನಾಥ ದೇವರ ಸುತ್ತ ತಿರುಗುವ ಜನಪದ ಕಥಾಹಂದರವಿದು.
336361_4197732498722_267476803_o.jpg

 ನಾಟಕವು ರಥವನ್ನೆಳೆಯುವ ರಂಗಕ್ರಿಯೆಯಿಂದ ಆರಂಭವಾಗಿ ಈ ಕ್ರಿಯೆಯಲ್ಲೇ ಅಂತ್ಯವಾಗುವುದರಿಂದ ನಾಟಕದುದ್ದಕ್ಕೂ ಚಲಿಸುವ ಮೇಳ, ಮಹಿಷಾಸುರ ವಧೆ, ಚಾಮುಂಡಿ ನಂಜುಂಡರ ಗಾಂಧರ್ವ ವಿವಾಹ, ಎರಡು ಸಂಸಾರಗಳ ಜಟಾಪಟಿ, ಕೀಲುಕುದುರೆ, ಗರುಡ, ಮುಖವಾಡಗಳು, ಪಾತ್ರಗಳು, ಸಾವಿನ ನಟನೆ, ಕೊರವಂಜಿ ವೇಷ, ನಂಜುಂಡ ದೇವರನ್ನು ಹೊರುವ ಪಲ್ಲಕ್ಕಿ...... ಎಲ್ಲವೂ ಬಣ್ಣದ ಮೆರವಣಿಗೆಯಂತೆ ಸಾಗುತ್ತ ಜನಪದ ಜಾತ್ರೆಯದ್ದೇ ಭಾಗವೆನಿಸುತ್ತವೆ. ಜತೆಗೆ ಬದುಕಿನ, ಕಾಲದ, ದೇವರು, ಧರ್ಮ, ಸಂಸ್ಕೃತಿಗಳ ಯಾತ್ರೆಯಂತೆ ಭಾಸವಾಗುತ್ತವೆ.
 ರಂಗದ ಕೇಂದ್ರ ಭಾಗದಲ್ಲಿ ಅಡಿಕೆ ಮರದಲ್ಲಿ ಎತ್ತರದಲ್ಲಿ ಸುಂದರವಾದ ಬೆಳಕಿನೊಂದಿಗೆ ಮೇಳೈಸಿಕೊಂಡು ಹೊಳೆಯುತ್ತಿದ್ದ ಉದ್ದ ಕೆನ್ನಾಲಗೆಯ, ಉಂಗುರ ಮೂಗುತಿಯ ಮುಖವಾಡವು ನಾಟಕದ ಜೀವಕೇಂದ್ರ. ರಂಗದ ಎಡಭಾಗದಲ್ಲಿ ಚಾಮುಂಡಿಬೆಟ್ಟ, ಬಲಭಾಗದಲ್ಲಿ ನಂಜನಗೂಡು ಇವು ನೀಚ-ಉಚ್ಛ, ಉಳ್ಳವ-ಇಲ್ಲದವ, ಗಂಡು-ಹೆಣ್ಣು ಅಸಮಾನತೆಗಳನ್ನು ಬಿಂಬಿಸುವ ಪ್ರತ್ಯೇಕ ವರ್ಗಗಳಂತೆ ಕಂಡು ಬಂದು ಈ ಅಸಮಾನತೆಗಳನ್ನು ಮರೆಯಿಸಿ ಬೆಸೆಯುವ ಕೊಂಡಿಯಂತೆ ಉತ್ನಳ್ಳಿ ಮಾರಿಯು ಕಂಡು ಬಂದಳು. ಕೊನೆಯಲ್ಲಿ ’ಪತಿ ಎಲ್ಲಾದರೂ ಸುಖವಾಗಿ ಬದುಕಿರಲಿ’ ಎಂಬ ಮನೋಭಾವಕ್ಕೇರುವ ಭಾರತೀಯ ಸ್ತ್ರೀಯ ಮನೋಭಾವದ ಸಂಕೇತದಂತೆ ಮೂಗುತಿಯು ಕಂಡು ಬಂದಿತು.
 ’ಚಾಚು ನಾಲಗೆ’ಯು ನಾಟಕದ ಮುಖ್ಯ ಆಶಯದ ಸಾಂಕೇತಿಕ ರೂಪದಂತೆ ವ್ಯಾಪಿಸಿ ಸನ್ನಿವೇಶ ದೃಶ್ಯಗಳಿಗನುಗುಣವಾಗಿ ಸಂದರ್ಭೋಚಿತವಾಗಿ ನಾನಾ ಅರ್ಥಗಳನ್ನು ಎಳೆ ಎಳೆಯಾಗಿ ಬಿಡಿಸುತ್ತ ಹೋಗುವುದು, ಏಕಕಾಲದಲ್ಲೇ ಜಾನಪದ ಹಾಗು ಆಧುನಿಕ ದೃಷ್ಟಿಕೋನಗಳನ್ನು ರಂಗಪ್ರಜ್ಞೆಗಳನ್ನು ರಂಗದಲ್ಲಿ ಬಿಂಬಿಸಲು ನೆರವಾಗುವುದು ನಿರ್ದೇಶಕರ ವಿಶಿಷ್ಟ ಸೂಕ್ಷ್ಮ ರಂಗಪ್ರಜ್ಞೆಗೆ ಸಾಕ್ಷಿ.

 ನಾಲಗೆಯನ್ನೇ ಹರಿತ ಅಸ್ತ್ರವನ್ನಾಗಿಸಿಕೊಂಡು ಗಂಡ ನಂಜುಂಡನನ್ನು ಹದ್ದು ಬಸ್ತಿನಲ್ಲಿಡಲು ಯತ್ನಿಸುವ ದುಂಡುದೇವೇರಿ ಹಾಗು ಪಟ್ಟದ ಪಾರ್ವತಿ ಒಂದು ಕಡೆಯಾದರೆ ಅದನ್ನೇ ಹೂವಾಗಿಸಿಕೊಂಡು ಪ್ರೀತಿಯಿಂದ ಒಲಿಸಿಕೊಳ್ಳುವ ಚಾಮುಂಡಿ ಇನ್ನೊಂದು ಕಡೆ, ಕೊಟ್ಟ ಮಾತಿಗೆ ತಪ್ಪದೆ ಅಕ್ಕನ ಸುಖದಲ್ಲೆ ತನ್ನ ಸುಖ ಕಾಣುವ ನುಡಿದಂತೆ ನಡೆಯುವ ಶುದ್ಧ ನಾಲಗೆಯ ಉತ್ನಳ್ಳಿ ಮಾರಿ ನಡುರಂಗದಲ್ಲಿ. ಆರಂಭದಲ್ಲಿ ಮಹಿಷಾಸುರನ ರಕ್ತಹೀರುವ ಉತ್ನಳ್ಳಿ ಮಾರಿಯ ನಾಲಗೆಯು ಕ್ರಮೇಣ ಕಾಯಕ ಯಂತ್ರವನ್ನು ಪಠಿಸುವ ಬೆವರು ಸುರಿಸಿ ದುಡಿಯುವ ವರ್ಗದ ನಾಲಗೆಯೂ ಆಗುತ್ತದೆ. ಚಾಮುಂಡಿ-ದೇವೇರಿಯರ ನಡುವೆ ಜಾತಿ, ಆಹಾರಪದ್ಧತಿ, ಜೀವನಕ್ರಮ, ಗುಣಸ್ವಭಾವಗಳ ಕುರಿತು ನಡೆಯುವ ಜಟಾಪಟಿಗೆ ಪೂರಕವಾದ ಹಿನ್ನೆಲೆಯನ್ನು ಒದಗಿಸುತ್ತ ಇದು ನಾಟಕದ ಅಂತ್ಯದಲ್ಲಿ ಜನಪದರ ರಸಾಭಿವ್ಯಕ್ತಿಯ ಹಾಗು ರಸಾಸ್ವಾದದ ’ಹೃದಯದ ನಾಲಗೆ’ಯಾಗುತ್ತದೆ. ಒಟ್ಟಿನಲ್ಲಿ ಜಾತಿ, ಧರ್ಮ, ಸಂಸ್ಕೃತಿ, ಕಲೆ ಸಮಸ್ತ ಮಾನವಕುಲ ನಿಂತಿರುವುದೇ ನಾಲಗೆಯ ಮೇಲೆ ಎಂದು ತೋರುವುದು ಗಮನಾರ್ಹ ಧನಾತ್ಮಕ ಅಂಶ. ದೇವರಾಗಿ ಉಪ್ಪರಿಗೆಯಲ್ಲಿ ನಿಂತು ಮಾತನಾಡುವ ಈಶ್ವರನು ನಂಜುಂಡನಾಗಿ, ನಾಟಿ ವೈದ್ಯನಾಗಿ, ಜಂಗಮನಾಗಿ ಸಾಮಾನ್ಯರ ಕೈಗೆಟುಕುವ ದೈಹಿಕ ಮಾನಸಿಕ ಕಾಯಿಲೆಗಳನ್ನು ಗುಣಪಡಿಸುವ ಚಿಕಿತ್ಸಕ ನಂಬಿಕೆಯಾಗುತ್ತಾನೆ. ಲಯಕರ್ತೃವಾದ ಆತನೇ ಸಾಯುವ ನಾಟಕವಾಗುವುದು, ಚಿಕಿತ್ಸೆ ಪಡೆದು ಬದುಕುವುದು ಸಾಮಾನ್ಯರೊಂದಿಗೆ ಹುಟ್ಟಿ ಸಾಮಾನ್ಯರೊಂದಿಗೇ ಸತ್ತು..... ಆದರೆ ಸದಾ ಜೀವಂತವಾಗಿಯೇ ಉಳಿಯುವ ’ದೇವರ’ ನಂಬಿಕೆಯ ಪ್ರಯೀಕದಂತೆ ಕಂಡುಬರುತ್ತದೆ.

 ಮೇಳವು ಮಹಿಷಾಸುರನ ವಧೆಗಾಗಿ ಚಾಮುಂಡಿಗೆ ಹಲವು ಕೈಗಳನ್ನು, ಕಿರೀಟಗಳನ್ನು ತೊಡಿಸುತ್ತ ದೈವತ್ವಕ್ಕೇರಿಸುವ ಪೂರ್ವ ರಂಗಕ್ರಿಯೆ ಹಾಗು ವಧೆಯ ಬಳಿಕ ಕಳಚಿಡುತ್ತ ಮನುಷ್ಯತ್ವಕ್ಕಿಳಿಸುವ ಉತ್ತರ ರಂಗಕ್ರಿಯೆ ಇವು ಜಗತ್ತಿನಲ್ಲಿ ಪಂಚೇಂದ್ರಿಯಗಳಿಂದ ಗ್ರಹಿಸಿದ್ದನ್ನೇ ಅನುಭವಿಸಿದ್ದನ್ನೇ ತಮ್ಮ ದೇವರಿಗೆ ನೀಡುವ ಜನಪದರ ಕಲ್ಪನೆಗಳ ಛಾಯೆಗಳಂತೆ ಕಂಡು ಬಂದವು. ಜನಪದರು ತಮ್ಮದೇ ಆದ ಉಸಿರು, ಹಸಿವು, ರೂಪ, ಅಂತರಂಗ, ಬಹಿರಂಗ, ಅರಿಷಡ್‌ವರ್ಗಗಳನ್ನು, ಗುಣಸ್ವಭಾವ, ಭಾವನೆ, ವರ್ತನೆ, ನೋವು-ನಲಿವುಗಳನ್ನು ಇಲ್ಲಿನ ದೇವಪಾತ್ರಗಳಿಗೆ ನೀಡುತ್ತ; ರೈಲು ವಿಮಾನ ಕಂಡಿರದ, ಜಡ ವಸ್ತುಗಳಲ್ಲಿ ಚೇತನ ಕಂಡಿರದ ಕಾಲದಲ್ಲಿ ಗರುಡ, ಕುದುರೆ, ಸರ್ಪ, ಬಸವ ಪ್ರಾಣಿ ಪಾತ್ರಗಳನ್ನೇ ದೇವರ ವಾಹನಗಳನ್ನಾಗಿಸುತ್ತ; ಧರ್ಮ, ಸಂಸ್ಕೃತಿ, ಕಲೆ, ಮನೋರಂಜನೆ, ಸಂಸ್ಕಾರ ಎಲ್ಲದಕ್ಕೂ ದೇವರನ್ನು ಮುಕ್ತವಾಗಿ ತೆರೆದಿಡುತ್ತ ಬಂದಿರುವುದರ ಹಿಂದಿನ ಕಲಾತ್ಮಕ ದೃಷ್ಟಿಕೋನವು ಸುಂದರವಾಗಿ ಅನಾವರಣಗೊಂಡಿತು.

 ನಂಜುಂಡನು ಮರದ ದಿಮ್ಮಿಯನ್ನು ದೇವೇರಿ-ಪಾರ್ವತಿಯರ ಮಧ್ಯೆ ಮಲಗಿಸಿ ಹೊದೆಸಿ ತಪ್ಪಿಸಿಕೊಂಡು, ಕಾವಲು ಕಾಯುವ ಬಸವನ ದವಡೆ ಮುರಿದು ಸರ್ಪದ ನಾಲಗೆ ಸೀಳಿ ಓಡಿ ಹೋಗುವುದು ದವಡೆ ಹಲ್ಲಿಲ್ಲದ ಬಸವನ, ಸೀಳುನಾಲಗೆಯ ಸರ್ಪದ ಹಿಂದಿನ ಹಾಸ್ಯ ಜನಪದ ಕಥನ ಕೌಶಲ. ಈ ಸ್ವತಂತ್ರ ಪಾತ್ರಗಳಷ್ಟೇ ಅಲ್ಲ, ಕುದುರೆ, ಗರುಡ, ಸಿಂಹ, ಪ್ರಾಣಿ ಪಾತ್ರಗಳು ಸ್ತ್ರೀ ಪುರುಷ ಪಾತ್ರಗಳ ಹಿನ್ನೆಲೆಯಲ್ಲಿ ಚಲಿಸುತ್ತ ಅವರ ಅಂತರಂಗದ ಹಾಗು ಸ್ವಭಾವಗಳ ಧ್ವನಿಗಳೂ ಆದವು. ಮನುಷ್ಯನೊಳಗೆ ಉಳಿದಿರುವ ಪಶುಪ್ರವೃತ್ತಿಯ ಪ್ರತಿಮೆಗಳಂತೆ ಕಂಡವು.
 ಮಹಿಷ, ಚಾಮುಂಡಿ, ನಂಜುಂಡ, ಪಾರ್ವತಿ, ದೇವೇರಿ, ಕೊರವಂಜಿ....... ಆ ಪಾತ್ರ ಈ ಪಾತ್ರವೆಂದಲ್ಲ, ಪ್ರತಿಯೊಂದು ಪಾತ್ರವೂ ಪ್ರೇಕ್ಷಕರ ಮನಗಳಲ್ಲಿ ಅಚ್ಚಳಿಯದಂತೆ ಉಳಿಯಬಲ್ಲ ಪರಿಣಾಮಗಳನ್ನುಂಟು ಮಾಡಿದವು. ಗರುಡನನ್ನೇರಿ ಸವಾರಿ ಮಾಡುವ ಶ್ರೀರಂಗನ ಪಾತ್ರವಂತೂ ಸೌಂದರ್ಯಪ್ರಜ್ಞೆಯ ಪಾಕವಾಗಿತ್ತು. ಜೀವನರಾಂ ಸುಳ್ಯ ಇವರ ಸೃಜನಶೀಲ ಹೃದಯದಿಂದ ಅರಳಿದ ಮುಖವಾಡಗಳು, ರಂಗಪರಿಕರಗಳು, ಜನಪದರು ಬದುಕಲ್ಲಿ ಉಳಿಸಿಕೊಂದ ’ಲಯ’ದ ಪ್ರತೀಕವಾದ ಜನಪದ ನೃತ್ಯಗಳ ಅಳವಡಿಕೆ....... ಯಶಸ್ಸಿನ ಧನಾತ್ಮಕ ಅಂಶಗಳು.
 ಮೇಳಪ್ರಧಾನ ನಾಟಕವಾಗಿದ್ದು, ಅಪ್ಪಟ ಜನಪದ ಹಾಡುಗಳು ಪಿಚ್ಚಳ್ಳಿ ಶ್ರೀನಿವಾಸರ ಎಗ್ಗಿಲ್ಲದ ಮುಕ್ತ ಜನಪದ ಕಂಠದಿಂದ ಧುಮ್ಮಿಕ್ಕಿ ಮೇಳದ ಕಂಠಗಳಲ್ಲಿ ನೆಲೆಗೊಂಡು ಅಲೆಅಲೆಯಾಗಿ ಹರಿಯುತ್ತ ಮಂತ್ರಮುಗ್ಧಗೊಳಿಸಿದವು. ಮೇಳವು ಸಂಸಾರದ ಸರಸ-ವಿರಸಗಳಲ್ಲಿ ಆಗು-ಹೋಗುಗಳಲ್ಲಿ ಒಂದಾಗುತ್ತ, ಪಾತ್ರಗಳೊಂದಿಗೆ ಪರಸ್ಪರ ಸಂವಾದ ಮಾಡುತ್ತ ಇಡೀ ರಂಗವೇ ಚಲಿಸುವಂಥ ಚೈತನ್ಯದ ಭಾವವನ್ನುಂಟುಮಾಡಿತು. ನಿರ್ದೇಶಕರೇ ಅಲ್ಲಲ್ಲಿ ಸೃಷ್ಟಿಸಿರುವ ಸಂಭಾಷಣೆಗಳು, ವ್ಯಂಗ್ಯ ವಿಡಂಬನೆಗಳು ಇಂದಿನ ರಾಜಕೀಯ ಮುಖಗಳ ಮೇಲೂ ಬೆಳಕು ಚೆಲ್ಲುತ್ತ ನಗುವಂತೆ ಮಾಡಿದವು. ಬೆಳಕು, ನಟನೆ, ಸಂಗೀತ, ರಂಗಪರಿಕರಗಳು. ಪ್ರಸಾಧನ ಒಟ್ಟು ದೃಷ್ಟಿಯಿಂದ ಬೆರಗುಗೊಳಿಸುವ ನಾಟಕವಿದು.
 ’ಈ ಮಗು ನನ್ನದು, ನನ್ನದು’ ಎಂದು ಜಟಾಪಟಿ ಕಾಳಗದಲ್ಲಿ ಮುಳುಗುವ ಇಬ್ಬರು ತಾಯಂದಿರಿಗೆ ನ್ಯಾಯಾಧೀಶನು, ’ಮಗುವನ್ನು ಎರಡು ಸಮಪಾಲು ಮಾಡಿ ಇಬ್ಬರಿಗೂ ಹಂಚಿ’ ಎಂಬ ತೀರ್ಪು ನೀಡಿದಾಗ ನಿಜವಾದ ತಾಯಿಯು ’ಬೇಡ. ನನ್ನ ಮಗು ಎಲ್ಲಾದರೂ ಸುಖವಾಗಿ ಬದುಕಿರಲಿ ದೇವರೇ’ ಎಂದಳಂತೆ. ಈ ನಾಟಕ ಕೃತಿಯ ಕರ್ತೃತ್ವದ ಕುರಿತು ಕೃತಿಕಾರರ ನಡುವಿನ ಭಿನ್ನಾಭಿಪ್ರಾಯಗಳು ಏನೇ ಇರಲಿ ’ನಟನಾ’ ಹವ್ಯಾಸಿ ತಂಡವನ್ನು ಕಟ್ಟಿಕೊಂಡು ರಂಗ ತಾಲೀಮು ನಡೆಸುತ್ತ; ಪಾತ್ರಧಾರಿಗಳು ಕೈಕೊಟ್ಟಾಗ ಬದಲಿ ವ್ಯವಸ್ಥೆ ಮಾಡಿ ಮತ್ತೆ ತರಬೇತಿ ನೀಡುತ್ತ; ಒಂದು ನಾಟಕವನ್ನು ರಂಗಪ್ರದರ್ಶನಕ್ಕೆ ಅಳವಡಿಸಿಕೊಳ್ಳುವ ಸಂದರ್ಭದಲ್ಲಿ ಅದರ ಹಿಂದೆ  ಎಷ್ಟೆಲ್ಲ ವಿಘ್ನಗಳು, ಒತ್ತಡಗಳು ಇವೆ ಅವುಗಳನ್ನೆಲ್ಲ ನಿಭಾಯಿಸಿಕೊಂಡು ಮುನ್ನಡೆಯುತ್ತಿರುವ ಮಂಡ್ಯ ರಮೇಶ್ ಹಾಗು ಸತತ ಯತ್ನದಿಂದ ಅತ್ಯುತ್ತಮ ನಟನೆಯನ್ನು ತಮ್ಮದಾಗಿಸಿಕೊಂಡಿರುವ ಕಲಾವಿದರು - ನಾಟಕ ನಿಂತರೆ ಇವರ ಕಲಾಮನಸ್ಸುಗಳು ಮುದುಡುವುದು ಮಾತ್ರವಲ್ಲ ಇದರಿಂದ ಕನ್ನಡ ರಂಗಭೂಮಿಗೆ ತುಂಬಲಾರದ ನಷ್ಟವಾಗುವುದೂ ಖಂಡಿತ.

 ಆದುದರಿಂದ ಎಲ್ಲ ರಂಗ ಜಟಾಪಟಿಗಳನ್ನು ಮೀರಿ ಗೆಲ್ಲುತ್ತಿರುವ ಜನಪದ ಚಾಮುಂಡಿಯು ಮತ್ತೆ ಮತ್ತೆ ರಂಗಗಳಲ್ಲಿ ಕಾಣಿಸಿಕೊಳ್ಳಲಿ.  ಸುಂದರವಾದ ನಾಟಕದ ರಸಾಸ್ವಾದದ ಖುಷಿಯಿಂದ ರಂಗಾಸಕ್ತರು ವಂಚಿತರಾಗದಿರಲಿ ಎಂಬ ಹಾರೈಕೆ ನಾಟಕವನ್ನು ಸವಿದ ಪ್ರೇಕ್ಷಕರದ್ದು. ಇನ್ನು ಜೈಲಿಗೆ ಬೇಕಾದರೂ ಹಾಕಲಿ, ನಾಟಕವನ್ನು ನಿಲ್ಲಿಸುವುದಿಲ್ಲ’ ಎನ್ನುವ ಮಂಡ್ಯ ರಮೇಶರ ಮಾತಿನಲ್ಲಿ, ಕಣ್ಣಿನಲ್ಲಿ ಮಗುವನ್ನು ಪ್ರೀತಿಸುವ ತಾಯಿಯ ವಾತ್ಸಲ್ಯ,  ನಾವು ಬೆರಗಾಗಲೇ ಬೇಕು.

        ಕಾತ್ಯಾಯಿನಿ ಕುಂಜಿಬೆಟ್ಟು
        ಛಾಯಾನಟ್, ಬುಡ್ನಾರ್ ರಸ್ತೆ,
        ಕುಂಜಿಬೆಟ್ಟು, ಉಡುಪಿ - ೨
        ಮೊ : ೯೮೪೪೫೪೮೬೧೦
        Email : kathikunjibettu@gmail.com

1 ಕಾಮೆಂಟ್‌:

ಅನಾಮಧೇಯ ಹೇಳಿದರು...

ಸುಂದರವಾದ ನಾಟಕದ ರಸಾಸ್ವಾದದ ಖುಷಿಯಿಂದ ರಂಗಾಸಕ್ತರು ವಂಚಿತರಾಗದಿರಲಿ
Anjali Ramanna