ಸೋಮವಾರ, ಏಪ್ರಿಲ್ 8, 2013

ಮಧುರ ಕಂಠಸಿರಿಯ ಬಯಲಾಟದ ಚೆಲುವ ವಿರೂಪಾಕ್ಷಪ್ಪ ನಿಂಗಪ್ಪ ಅಂಗಡಿ

virupaxappa anagadi8.jpg

virupaxappa anagadi11.jpg
     ಧಾರವಾಡ ಸಮೀಪದ ಹಾರೋಬೆಳವಡಿ ಗ್ರಾಮದ ಶ್ರೀ ವಿರೂಪಾಕ್ಷಪ್ಪ ನಿಂಗಪ್ಪ ಅಂಗಡಿಯವರು. ಆ ಭಾಗದ ಪ್ರತಿಭಾವಂತ ಬಯಲಾಟದ ಹಿರಿಯ ಕಲಾವಿದರು. ಅವರಿಗೆ ಕರ್ನಾಟಕ ರಾಜ್ಯ ಯಕ್ಷಗಾನ-ಬಯಲಾಟ ಅಕಾಡೆಮಿಯು ೨೦೧೨-೧೩ನೇ ಸಾಲಿನ ’ಗೌರವ (ಯಕ್ಷ)ಪ್ರಶಸ್ತಿ’ ನೀಡಿ ಗೌರವಿಸಿದೆ. ದಾರವಾಡದ ಕರ್ನಾಟಕ ವಿಶ್ವವಿದ್ಯಾಲಯದ ಸಿದ್ದರಾಮ ಹಿಪ್ಪರಗಿ ಅವರು ಸಂಸ ರಂಗ ಪತ್ರಿಕೆಗೆ ನಡೆಸಿದ ಸಂದರ್ಶನವನ್ನು ಕನ್ನಡ ಜಾನಪದ ಬ್ಲಾಗ್‌ಗೆ ಕಳಿಸಿಕೊಟ್ಟಿದ್ದಾರೆ.  ಅದಕ್ಕಾಗಿ ಅವರಿಗೆ ಕೃತಜ್ಞತೆಗಳು.  ಈ ಸಂದರ್ಶನ ವಿರೂಪಾಕ್ಷಪ್ಪ ನಿಂಗಪ್ಪ ಅಂಗಡಿಯವರ ಬಯಲಾಟ ನಾಟಕ ಪರಂಪರೆಯ ಪಯಣದ ವಿವಿಧ ಮಗ್ಗಲುಗಳನ್ನು ಒಡೆದು ತೋರುವಂತಿದೆ. ನೀವೂ ಓದಿ.
-ಅರುಣ್ ಜೋಳದಕೂಡ್ಲಿಗಿ.
ಸಂದರ್ಶನ: ಸಿದ್ಧರಾಮ ಹಿಪ್ಪರಗಿ. ಧಾರವಾಡ

ಮೂಲತಃ ಧಾರವಾಡ ಗ್ರಾಮೀಣ ವಲಯದಲ್ಲಿ ಬರುವ ಹಾರೋಬೆಳವಡಿ ಗ್ರಾಮದವರಾದ ಶ್ರೀ ವಿರೂಪಾಕ್ಷಪ್ಪ ನಿಂಗಪ್ಪ ಅಂಗಡಿಯವರು (ಮೊಬೈಲ್-೯೯೮೬೨೮೧೩೩೮) ಅಪ್ಪಟ ಗ್ರಾಮೀಣ ಹಿನ್ನಲೆಯ, ಯಾವ ಗುರುಕುಲಗಳ ಹಂಗಿಲ್ಲದೆ, ಯಾವುದೇ ವಿಶ್ವವಿದ್ಯಾಲಯಗಳ ಡಿಗ್ರಿಗಳನ್ನು ಅವಲಂಭಿಸದೇ ಮತ್ತು ಅಪೇಕ್ಷಿಸದೇ, ಸ್ವಪ್ರಯತ್ನದಿಂದ ಸಂಗೀತ ಕಲಿತು, ಅವುಗಳಲ್ಲಿಯ ಮಧುರತೆಯನ್ನು ಬಯಲಾಟ, ಸಣ್ಣಾಟ, ಕೋಲಾಟ, ಹೆಜ್ಜೆಮೇಳ, ತತ್ವಪದ, ಭಕ್ತಿಗೀತೆಗಳು ಹೀಗೆ ಉತ್ತರ ಕರ್ನಾಟಕದ ಸಮೃದ್ಧ ಜಾನಪದದ ವಿವಿಧ ಪ್ರಕಾರಗಳಲ್ಲಿ ಅಳವಡಿಸುತ್ತಾ ಮತ್ತು ಅವುಗಳನ್ನು ವಿಶಿಷ್ಟಶೈಲಿಯಲ್ಲಿ ಪ್ರಸ್ತುತ ಪಡಿಸುತ್ತಾ  ಪ್ರಯೋಗಿಸುವುದರೊಂದಿಗೆ ಜನಪ್ರಿಯಗೊಳಿಸುತ್ತಿರುವ ಏಕಲವ್ಯ ಪ್ರತಿಭೆ. ಆಗಿನ ಕಾಲದ ಮುಲ್ಕಿ ಪರೀಕ್ಷೆ ಪಾಸಾದರೂ ಕಡುಬಡತನದಿಂದಾಗಿ ದಿನವಿಡೀ ಬೇರೊಬ್ಬರ ಹೊಲ-ಗದ್ದೆಗಳಲ್ಲಿ ಜೀವನೋಪಾಯಕ್ಕಾಗಿ ಕೂಲಿ ಕೆಲಸ ಮುಗಿಸಿಕೊಂಡು ಸಂಜೆ ಬಂದ ನಂತರ ಸಮಯ ವ್ಯರ್ಥಗೊಳಿಸದೇ ಹಳ್ಳಿಯಲ್ಲಿಯ ಅಗಸಿ ಕಟ್ಟಿ, ಚವಡಿ, ದೇವಸ್ಥಾನದಲ್ಲಿ ನಡೆಯುತ್ತಿದ್ದ ಭಜನಾ ಕಾರ್ಯಕ್ರಮ, ನಾಟಕ ತಾಲೀಮುಗಳಿಗೆ ಆಸಕ್ತಿಯಿಂದ ಹೋದಾಗ ಹಾರ್ಮೋನಿಯಮ್ ಮಾಸ್ತರ್‌ರು ಹಾರ್ಮೋನಿಯಮ್ ಪೆಟ್ಟಿಗೆಯ ಮೇಲೆ ಚಕಚಕನೇ ಬೆರಳಾಡಿಸುತ್ತಾ ಸ್ವರ ಹೊರಡಿಸುವುದನ್ನು ಅಚ್ಚರಿಯಿಂದ ನೋಡುತ್ತಾ ಅದರಲ್ಲಿಯೇ ತಲ್ಲೀನನಾಗುವುದು. ಹೊಲಗೆಲಸದ ವೇಳೆಯಲ್ಲಿ ಅದನ್ನೆ ದ್ಯಾನಿಸುವುದು. ಆ ತಲ್ಲೀನತೆಯ ದ್ಯಾನ ಇವರನ್ನು ಹಾರ್ಮೋನಿಯಮ್‌ನ್ನು ಇನ್ನೂ ಹತ್ತಿರಕ್ಕೆ ಸೆಳೆದುಕೊಂಡಿತು. ಹಾರ್ಮೋನಿಯಂ ಕಲಿಯಬೇಕೆಂದರೆ ಕಲಿಸುವವರಾರು? ಕೇಳಿದರೆ ನಕಾರಾತ್ಮಕ, ಅವಮಾನಿಸುವ, ಮನಸಿಗೆ ನೋಯಿಸುವಂತಹ ಹೀನ ಮಾತುಗಳು. ಮನೆಯಲ್ಲಿ ಎಲ್ಲರಿಂದಲೂ ವಿರೋಧ. ಹೊಟ್ಟೆಗೆ ಗತಿಯಿಲ್ಲದಾಗ ಇವೆಲ್ಲಾ ಯಾಕೆ ಬೇಕು ಎಂಬ ಪ್ರೋತ್ಸಾಹವಿಲ್ಲದ ಬೈಗುಳಗಳ ಸುರಿಮಳೆ ವಿರೋಧ. ಆದರೂ ನಿರಾಶೆಯಾಗದೆ ಛಲದಂಕ ಮಲ್ಲನಂತೆ ಹಾರ್ಮೋನಿಯಂ ಪೆಟ್ಟಿಗೆಯಿಂದ ಸ್ವರ ಹೊರಡಿಸಲು ಕಲಿತರು. ಮುಂದೆ ಸಂಗ್ಯಾ-ಬಾಳ್ಯಾ, ರಾಧಾನಾಟ, ನಿಜಗುಣ ಶಿವಯೋಗಿಯಂತಹ ಸಣ್ಣಾಟಗಳಿಗೆ ಸಂಗೀತ ಒದಗಿಸುತ್ತಾ ಹಲವಾರು ರೀತಿಯ ಪ್ರಯೋಗಗಳನ್ನು ಮಾಡುತ್ತಾ ಜನಪ್ರಿಯಗೊಳಿಸುವುದರೊಂದಿಗೆ ಉತ್ತರ ಕರ್ನಾಟಕ ಮಾತ್ರವಲ್ಲದೇ ನೆರೆಯ ಮಹಾರಾಷ್ಟ್ರ ರಾಜ್ಯದ ಗ್ರಾಮೀಣ ಭಾಗಗಳಲ್ಲಿ ನಡೆಯುವ ಕನ್ನಡ ಕಾರ್ಯಕ್ರಮಗಳಿಗೆ ಇವರಿಗೆ ನಿರಂತರ ಆಹ್ವಾನಗಳು ಬರುವಷ್ಟರ ಮಟ್ಟಿಗೆ ಬೆಳೆದರು. ಗ್ರಾಮೀಣ ವಲಯದಲ್ಲಿ ಹಲವಾರು ಕಲಾ ಸಂಘಟನೆಗಳನ್ನು ಹುಟ್ಟು ಹಾಕುವುದರೊಂದಿಗೆ ಗ್ರಾಮೀಣ ರಂಗಭೂಮಿಯ ಚಟುವಟಿಗಳು ನಿರಂತರ ನಡೆಯುವಂತೆ ನೋಡಿಕೊಂಡಿದ್ದಾರೆ. ಇವರ ರಂಗಪ್ರೇಮ ಮತ್ತು ರಂಗಾಸಕ್ತಿಯನ್ನು ಗಮನಿಸಿ ನಾಡಿನಾದ್ಯಂತ ಹಲವಾರು ಸಂಘ-ಸಂಸ್ಥೆ-ಪ್ರತಿಷ್ಟಾನ-ಸರಕಾರಗಳು ಪ್ರಶಸ್ತಿ-ಪುರಸ್ಕಾರಗಳಿಂದ ಗೌರವಿಸಿವೆ. ಕಳೆದ ಡಿಶೆಂಬರ್-೨೦೧೨ರ ಮೊದಲ ವಾರದಲ್ಲಿ ಬೆಂಗಳೂರಿನಲ್ಲಿ ನಡೆದ ಕರ್ನಾಟಕ ರಾಜ್ಯ ಯಕ್ಷಗಾನ-ಬಯಲಾಟ ಅಕಾಡೆಮಿಯು ೨೦೧೨-೧೩ನೇ ಸಾಲಿನ ಗೌರವ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೌರವ (ಯಕ್ಷ)ಪ್ರಶಸ್ತಿನೀಡಿ ಪುರಸ್ಕರಿಸಿತು. ಈ ಸಂದರ್ಭದಲ್ಲಿ ಅವರು ಸಂಸ ರಂಗಪತ್ರಿಕೆಯೊಂದಿಗೆ ತಮ್ಮ ಅನುಭವವನ್ನು ಹಂಚಿಕೊಂಡರು.virupaxappa anagadi1.jpg
 

   ಸಿದ್ಧರಾಮ ಹಿಪ್ಪರಗಿ: ಶ್ರೀಯುತ ವಿರೂಪಾಕ್ಷಪ್ಪ ಅಂಗಡಿಯವರೇ ರಂಗನಮಸ್ಕಾರಗಳು, ನಿಮಗೆ ೨೦೧೨-೧೩ನೇ ಸಾಲಿನ ಕರ್ನಾಟಕ ಯಕ್ಷಗಾನ-ಬಯಲಾಟ ಅಕಾಡೆಮಿಯ ಗೌರವ ಪ್ರಶಸ್ತಿ ಪುರಸ್ಕೃತರಾಗಿರುವ ಸುಸಂದರ್ಭದಲ್ಲಿ ಸಂಸ ರಂಗಪತ್ರಿಕೆಯ ಬಳಗದ ಪರವಾಗಿ ಅಭಿನಂಧನೆಗಳು. ಈ ಸಂದರ್ಭದಲ್ಲಿ ಏನು ಹೇಳೊದಕ್ಕೆ ಇಚ್ಛಿಸುತ್ತೀರಿ.

ವಿರೂಪಾಕ್ಷಪ್ಪ ಅಂಗಡಿ : ಸರ್, ತಮಗೂ ತಮ್ಮ ಪತ್ರಿಕೆಯ ಬಳಗಕ್ಕೂ ನನ್ನ ನಮಸ್ಕಾರಗಳು. ಸಹಜವಾಗಿ ಯಾವುದೇ ಕಲಾವಿದನಿಗೆ ಸರಕಾರ/ಸಮಾಜ ಗುರುತಿಸಿ ಗೌರವಿಸಿದಾಗ ಆನಂದವುಂಟಾಗುವಂತೆ ನನಗೂ ಆನಂದವಾಗಿದೆ. ಇಂತಹ ಒಂದು ಸಂದರ್ಭ ನನ್ನ ಜೀವನದಲ್ಲಿ ಬರುತ್ತದೆ ಎಂದು ಅಂದುಕೊಂಡಿರಲಿಲ್ಲ. ಅದಕ್ಕಾಗಿ ನನ್ನಂತಹ ಒಬ್ಬ ಹಳ್ಳಿಹೈದ ಮತ್ತು ಗ್ರಾಮಾಂತರ ಪ್ರದೇಶದ ಹಾಡುಹಕ್ಕಿಯನ್ನು ಗುರುತಿಸಿ, ಗೌರವಿಸಿದ ಕರ್ನಾಟಕ ಸರಕಾರದ ಯಕ್ಷಗಾನ-ಬಯಲಾಟ ಅಕಾಡೆಮಿಯ ಮಾನ್ಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರುಗಳಿಗೆ ಮತ್ತು ಎಲ್ಲಾ ಕಲಾಭಿಮಾನಿಗಳಿಗೆ, ಕಲಾಪೋಷಕರಿಗೆ, ಪ್ರೇಕ್ಷಕಮಹಾಶಯರಿಗೆ ನನ್ನ ಹೃದಯಪೂರ್ವಕ ಕೃತಜ್ಞತೆಗಳು. ಯಾವುದೇ ಸೃಜನಶೀಲ ಕೆಲಸದಲ್ಲಿ ನಮ್ಮನ್ನು ನಾವು ಪ್ರಾಮಾಣಿಕವಾಗಿ ತೊಡಗಿಸಿಕೊಂಡರೆ ಯಾವತ್ತಿಗಾದರೂ ಪ್ರತಿಭಾವಂತರನ್ನು ಈ ಸಮಾಜ ಮತ್ತು ಸರಕಾರಗಳು ಗುರುತಿಸುತ್ತವೆ ಎಂಬುದು ಸುಳ್ಳಲ್ಲ. ಕೆಲವೊಮ್ಮೆ ಗೌರವ ಸನ್ಮಾನಗಳು ಬೇಗನೆ ಅಗಬಹುದು ಇಲ್ಲವೆ ತಡವಾಗಬಹುದು. ನಮ್ಮ ಪ್ರಾಮಾಣಿಕತೆ ಮತ್ತು ಪ್ರಾಂಜಲ ಮನದ ಪ್ರತಿಭಾ ಪ್ರಯತ್ನಕ್ಕೆ ಫಲ ಇದ್ದೇ ಇರುತ್ತದೆ ಎಂಬ ಆತ್ಮವಿಶ್ವಾಸ ನನ್ನದು.

virupaxappa anagadi7.jpg
  ಸಿದ್ಧರಾಮ ಹಿಪ್ಪರಗಿ: ಸಂತೋಷ ವಿರೂಪಾಕ್ಷಪ್ಪನವರೇ, ನಿಮ್ಮ ಬಾಲ್ಯಜೀವನದ ಕುರಿತು ಹೇಳಿರಿ.

ವಿರೂಪಾಕ್ಷಪ್ಪ ಅಂಗಡಿ : ತಾಯಿ(ಪಾರ್ವತೆವ್ವಾ)ಯ ತವರೂರಾದ ಧಾರವಾಡ ತಾಲೂಕಿನ ಲೋಕೂರಿನಲ್ಲಿ (೦೧-೦೨-೧೯೫೫) ನನ್ನ ಜನನ, ಮನೆಯಲ್ಲಿ ಕಡುಬಡತನ, ತಂದೆಯವರು (ದಿ.ನಿಂಗಪ್ಪ ವೀರಭದ್ರಪ್ಪ ಅಂಗಡಿ) ಬಡತನದ ಪರಿಸ್ಥಿತಿಯಿಂದಾಗಿ ಊರಗೌಡರ ಮನೆಯಲ್ಲಿ ಜೀತದಾಳಾಗಿ ದುಡಿದು ಕುಟುಂಬವನ್ನು ಸಲುಹುತ್ತಿದ್ದರು. ತಾವು ಅಕ್ಷರವಂಚಿತರಾದರೂ ತಮ್ಮ ಮಕ್ಕಳಿಗೆ ಅಂತಹ ಪರಿಸ್ಥಿತಿ ಬರಬಾರದೆಂದು ಕಡು ಬಡತನದ ಪರಿಸ್ಥಿತಿಯಲ್ಲಿ ತಂದೆಯವರು ಶಾಲೆಗೆ ಕಳುಹಿಸಿದರು. ಪ್ರಾಥಮಿಕ (ಆಗಿನ ಕಾಲದ ಮುಲ್ಕಿ ಅಂದರೆ ಈಗಿನ ಕಾಲದ ೭ನೇಯ ತರಗತಿ) ಶಿಕ್ಷಣವನ್ನು ಸ್ವಗ್ರಾಮ ಹಾರೋಬೆಳವಡಿಯಲ್ಲಿ ಕಲಿಯುತ್ತಿರುವಾಗಲೇ ಸಾಂಸ್ಕೃತಿಕ ರಂಗಕಲೆಗಳ ವಿಶೇಷವಾಗಿ ಸಂಗೀತದ ಕುರಿತು ಆಸಕ್ತಿ ಇತ್ತು ಅಂತ ನೀವು ಅಕ್ಷರದಲ್ಲಿ ಹೇಳುತ್ತೀರಿ ಆದರೆ ನಾನು ಅದನ್ನು ವಿಪರೀತ ಹುಚ್ಚು ಹಚ್ಚಿಕೊಂಡೆ ಅಂತ ಹೇಳುತ್ತೇನೆ, ಯಾರಾದರೂ ರಂಗಕಲೆಗಳ ಕುರಿತು ಮಾತಾಡುತ್ತಿದ್ದರೆ ಆಸಕ್ತಿಯಿಂದ ಆಲಿಸುವುದು ಮಾಡುತ್ತಿದ್ದೆ. ಒಂದು ಸಲ ನಮ್ಮೂರಿನಲ್ಲಿ ನಾಟಕದ ತಾಲೀಮು ನಡೆದಿತ್ತು. ಪಾತ್ರಧಾರಿಗಳನ್ನು ಹೊರತುಪಡಿಸಿ ಬೇರೆ ಯಾರೂ ಇರುವುದು ಬೇಡವೆಂದು ಕಿಡಕಿ-ಬಾಗಿಲುಗಳನ್ನು ಮುಚ್ಚಿಕೊಂಡು ತಾಲೀಮು ಮಾಡುತ್ತಿದ್ದರು. ನನಗೆ ಕುತೂಹಲ ತಡೆಯದೆ, ತಾಲೀಮು ಕೋಣೆಯ ಮೇಲೆ ಹೋಗಿ ಬೆಳಕಿಂಡಿಯಿಂದ ತಾಲೀಮು ನೋಡಿ ಚೆನ್ನಾಗಿ ಬೈಸಿಕೊಂಡಿದ್ದೇನೆ. ಅದಕ್ಕಾಗಿ ಇಂದಿಗೂ ಬೇಜಾರಿಲ್ಲ. ಪ್ರಾಥಮಿಕ ಶಿಕ್ಷಣ ಮುಗಿದ ನಂತರ ಮುಂದಿನ ವಿದ್ಯಾಭ್ಯಾಸವನ್ನು ಮುಂದುವರಿಸಲಾಗದ ಬಡತನವೆಂಬ ಭೀಕರತೆಯ ಮುಂದೆ ನನ್ನ ಓದಿಗೆ ಶರಣು ಹೊಡೆದು, ಜೀವನೋಪಾಯಕ್ಕಾಗಿ ಗೌಡರ ಮನೆಯ ಕೂಲಿ ಕೆಲಸಕ್ಕೆ ಹೋಗಬೇಕಾಯಿತು. ದಿನವಿಡೀ ದುಡಿದು ಬಂದ ನಂತರ ಸಾಯಂಕಾಲದ ಬಿಡುವಿನ ಸಮಯದಲ್ಲಿ ಗ್ರಾಮದಲ್ಲಿ ಹಬ್ಬ-ಹರಿದಿನಗಳಲ್ಲಿ ನಡೆಯುತ್ತಿದ್ದ ಕರಡಿ ಮಜಲು, ಭಜನಾ ಮಂಡಳಿ, ದೇವಸ್ಥಾನಗಳಲ್ಲಿ ಭಕ್ತಿಗೀತೆಗಳ ಗಾಯನಕ್ಕೆ ಆಸಕ್ತನಾಗಿ ಹೋಗುತ್ತಿದ್ದೆ. ವಿಶೇಷವಾಗಿ ನಮ್ಮೂರಿನ ಶ್ರೀ ವೀರಭದ್ರೇಶ್ವರ ಗುಡಿಯಲ್ಲಿ ಇಂತಹ ಕಾರ್ಯಕ್ರಮಗಳು ನಡೆಯುತ್ತಿದ್ದವು. ಮುಂದುವರೆದು ಪಕ್ಕದ ಹಳ್ಳಿಗಳಿಗೂ ಹೋಗಲಾರಂಭಿಸಿದೆ. ಸಂಗೀತದ ಹುಚ್ಚು ಇನ್ನೂ ಹೆಚ್ಚಾಯಿತು. ಬರಬರುತ್ತಾ ಕೆಲವೊಂದು ಭಜನಾ ಪದಗಳನ್ನು ಕಲಿತು ಹಾಡತೊಡಗಿದೆ. ಇದನ್ನು ಆಲಿಸಿದ ಗ್ರಾಮದ ಹಿರಿಯರು ನನ್ನನ್ನು ಗ್ರಾಮದಲ್ಲಿ ನಡೆಯುತ್ತಿದ್ದ ಪೌರಾಣಿಕ, ಸಾಮಾಜಿಕ ನಾಟಕಗಳಿಗೆ ನಾಂದಿ ಹಾಡನ್ನು ಹಾಡಿಸಲು ಪ್ರೋತ್ಸಾಹಿಸಿದರು. ಹಾಗೆಯೇ ನಮ್ಮೂರಿನ ಶಾಲೆಯ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರಾರ್ಥನಾ ಗೀತೆ ಹಾಡುವುದು, ವಿದ್ಯಾರ್ಥಿಗಳಿಗೆ ದೇಶಭಕ್ತಿಗೀತೆ, ಜನಪದ ಗೀತೆಗಳನ್ನು ಕಲಿಸಲು ಆರಂಭಿಸಿದೆ. ಹೆಜ್ಜೆಮೇಳ, ಲೇಜಿಮ್, ಕೋಲಾಟದಂತಹ ಆಟಗಳಿಗೆ ಹಿನ್ನಲೆಯಲ್ಲಿ ಅವಶ್ಯಕವಾಗಿರುವ ಹಲಗೆ(ತಮಟೆ)ಯನ್ನು ಬಾರಿಸಲು ಆರಂಭಿಸಿದೆ. ಇದರ ಜೊತೆಯಲ್ಲಿಯೇ ಜೀವನನೌಕೆ ಸಾಗುತ್ತಿತ್ತು. ಜೊತೆಗೆ ಬಡತನದ ಭೂತ ಬೆಂಬಿಡದೇ ಕಾಡುವುದರೊಂದಿಗೆ ಬಾಲ್ಯದ ಜೀವನವನ್ನು ಸಂಕಟಗಳ ಸರಮಾಲೆಯಿಂದ ಕಡ್ಡಾಯವಾಗಿ ಅಲಂಕರಿಸಿಕೊಳ್ಳುವಂತೆ ಮಾಡುತ್ತಿತ್ತು. ಇನ್ನೊಂದೆಡೆ, ಆಸಕ್ತಿಯ ವಿಷಯವಾದ ಸಂಗೀತವನ್ನು ಬಿಟ್ಟಿರಲಾರದ ಪರಿಸ್ಥಿತಿ, ನನಗೆ ಹಲವಾರು ಬಾರಿ ಧರ್ಮಸಂಕಟವನ್ನುಂಟು ಮಾಡಿದ್ದಂತೂ ನಿಜ. ಹೀಗೆ ಹಲವಾರು ವಿಶಿಷ್ಟ ಸಂಗತಿಗಳಿಂದ ಕೂಡಿದ ಜೀವನವೆಂಬ ಗಾಣದಲ್ಲಿ ನುಜ್ಜು-ಗುಜ್ಜಾಗಿ, ಅದರೊಳಗಿಂದ ಪಾರಾಗಿ ಸಂಗೀತ ಕಲಾಸರಸ್ವತಿದೇವಿಯ ಅನುಗ್ರಹ ನನಗಾಗಿದ್ದು ನನ್ನ ಪೂರ್ವಜನ್ಮದ ಪುಣ್ಯವೆಂದು ನಾನು ಅರಿತಿದ್ದೇನೆ.
virupaxappa anagadi2.JPG

  ಸಿದ್ಧರಾಮ ಹಿಪ್ಪರಗಿ: ಖಂಡಿತ ನಿಮ್ಮ ಅರಿವು ನಿಮ್ಮನ್ನು ಯಾವಾಗಲೂ ಕಾಪಾಡುತ್ತಿದೆ ಎಂಬುದು ನಿಮ್ಮನ್ನು ಹಲವಾರು ವರ್ಷಗಳಿಂದ ಗಮನಿಸುತ್ತಿರುವ ನಮಗೆಲ್ಲಾ ತಿಳಿದಿದೆ. ಆ ಕಲಾಸರಸ್ವತಿ ನಿಮ್ಮನ್ನು ಅನುಗಾಲವೂ ಕೈಹಿಡಿದು ಮುನ್ನಡೆಸಲಿ ಎಂಬುದು ನಮ್ಮೆಲ್ಲರ ಹಾರೈಕೆ. ಮುಂದೆ ನೀವು ಹೆಸರಾಂತ ರಂಗಕರ್ಮಿ ಅಂದರೆ ನಿಮ್ಮ ನಿಜವಾದ ಹೆಸರನ್ನು ಜನರು ಮರೆತು ನಾಟಕ ಕಲಿಸುವ ಹಾರೋಬೆಳವಡಿ (ಆಟದ) ಮಾಸ್ತರ್ಅಂತ ಪ್ರಸಿದ್ಧರಾದಿರಿ. ಅದರ ಬಗ್ಗೆ ಹೇಳಿರಿ.

ವಿರೂಪಾಕ್ಷಪ್ಪ ಅಂಗಡಿ : ಹೇಳ್ತಿನ್ರಿ ಸರ್. ಹೀಗಿರುವಾಗ ಹಾರ್ಮೋನಿಯಮ್ ಕಲಿಯಬೇಕೆಂಬುದು ನನ್ನ ಹಲವಾರು ವರ್ಷಗಳ ಬಯಕೆಯಾಗಿತ್ತು. ಮೊದಲೆಲ್ಲಾ ಭಜನಾ ಮಾಡುವಾಗ ಹಾರ್ಮೋನಿಯಮ್ ವಾದಕರಿಗೆ ನಾನು ಬಾ(ತಿ)ತೆ ಹಾಕುತ್ತಾ ಅವರಿಗೆ ನೆರವಾಗುತ್ತಿದ್ದೆ. ಹಾಗೆಯೇ ಅವರು ಹಾರ್ಮೋನಿಯಮ್‌ದಿಂದ ಸ್ವರ ಹೊರಡಿಸುವುದನ್ನು ಆಶ್ಚರ್ಯಚಕಿತನಾಗಿ ಅದೊಂದು ಅದ್ಭುತ ಪವಾಡವೆಂಬಂತೆ ನೋಡುತ್ತಿದ್ದೆ. ಮತ್ತು ಅವರು ಬೆರಳಾಡಿಸಿದಂತೆಲ್ಲಾ ವಿವಿಧ ಸ್ವರಗಳು ಅದರಲ್ಲಿಂದ ಹೊರಡುತ್ತಿದ್ದವು. ಅದಕ್ಕೆ ತಕ್ಕಂತೆಯೋ ಅಥವಾ ಹಾಡುಗಾರರ ಧ್ವನಿಗೋ ತಕ್ಕಂತೆ ಸ್ವರಗಳು ಶ್ರುಶಾವ್ಯವಾಗಿ ಅಲೆಅಲೆಯಾಗಿ ಹೊರಹೊಮ್ಮುತ್ತಿದ್ದವು. ನಾನೂ ಸಹ ಅವರಂತೆ ಹಾರ್ಮೋನಿಯಮ್ ವಾದಕನಾಗಬೇಕೆಂಬ ಹಂಬಲ ಇಮ್ಮಡಿಯಾಗತೊಡಗಿತು. ಹಾಡುಗಾರಿಕೆ ಅಥವಾ ಭಜನಾ ಕಾರ್ಯಕ್ರಮ ಮುಗಿದ ನಂತರ ಸಂಗೀತ ಪರಿಕರಗಳನ್ನು ದೇವಸ್ಥಾನದಲ್ಲಿ ಸುರಕ್ಷಿತವಾಗಿಡುವುದು ಆಗಿನ ಕಾಲದ ವಾಡಿಕೆಯಾಗಿತ್ತು. ಯಾರೂ ಇಲ್ಲದ ಸಮಯ ನೋಡಿಕೊಂಡು ದೇವಸ್ಥಾನದ ಒಳಗೆ ಹೋಗಿ ಹಾರ್ಮೋನಿಯಮ್‌ದ ದೂಳು ಸರಿಸಿ ಬಾರಿಸಲು ಆರಂಭಿಸಿದೆ. ಆಗ ದೇವಸ್ಥಾನದ ಮುಂದಿದ್ದ ಹಿರಿಯರಿಗೆ ಈ ವಿಷಯ ಗೊತ್ತಾಗಿ ಕೆಲವೊಮ್ಮೆ ನನ್ನನ್ನು ಬೈದರು. ಮತೊಮ್ಮೆ ಅವಮಾನಿಸಿದರು. ಮಗುದೊಮ್ಮೆ ಥಳಿಸಿದರು. ಆದರೂ ಛಲಬಿಡದ ತ್ರಿವಿಕ್ರಮನಂತೆ ಹಿರಿಯರ ಕಣ್ಣು ತಪ್ಪಿಸಿ, ಕದ್ದು ದೇವಸ್ಥಾನದೊಳಗೆ ನುಸುಳಿ ಹಾರ್ಮೋನಿಯಮ್ ಬಾರಿಸುವುದನ್ನು ಅಭ್ಯಾಸ ಮಾಡಿದೆನು. ಮುಂದೆ ಗ್ರಾಮದಲ್ಲಿ ನಡೆಯುವ ಕಾರ್ಯಕ್ರಮಗಳಿಗೆ ಹಾರ್ಮೋನಿಯಮ್ ಸಾಥ್ ನೀಡುವುದನ್ನು ಆರಂಭಿಸಿದೆ. ನನ್ನ ಹಾರ್ಮೋನಿಮ್ ಸಾಥ್ ಇಲ್ಲದಿದ್ದರೆ ಕಾರ್ಯಕ್ರಮಗಳು ಜರುಗದಂತಹ ಅನಿವಾರ್ಯ ಪರಿಸ್ಥಿತಿ ಉಂಟಾಯಿತು. ಮುಂದೆ ನಮ್ಮ ಗ್ರಾಮದವರಾದ ಶ್ರೀ ಈರಪ್ಪಾ ಜಕ್ಕಣ್ಣವರ (ಇವರನ್ನು ನನ್ನ ಸಂಗೀತ ಗುರುಗಳೆಂದು ನನ್ನ ಮನದಲ್ಲಿ ಸ್ಥಾಪಿಸಿಕೊಂಡಿದ್ದೇನೆ) ಎಂಬುವವರು ಗುರುವರನೆ ಕರುಣಿಸು ಪರದಾತು ಕರುಣಿಸುಎಂಬ ಹಾಡಿಗೆ ಸ್ವರ (ಸೂರ) ಹಿಡಿದು ನನಗೆ ಒಂದು ಪದವನ್ನು ಕಲಿಸಿಕೊಟ್ಟರು. ಅದರ ಮುಂದುವರೆದ ಭಾಗವಾಗಿಯೇ ಮುಂದೆ ನಾನು ಬರು- ಬರುತ್ತಾ ರೂಡಿಯಾದ ಮೇಲೆ ಯಾವುದೇ ಆತಂಕವಿಲ್ಲದೆ ಸ್ವತಂತ್ರವಾಗಿ ಹಾಮೋನಿಯಮ್ ಬಾರಿಸಲು ಆರಂಭಿಸಿದೆ. ಹಾಗೆಯೇ ಶ್ರೀಯುತ ಈರಪ್ಪಾ ಜಕ್ಕಣ್ಣವರ ಅವರು ಜನಪದ ವಾಧ್ಯಗಳ ಕುರಿತು ಹೆಚ್ಚಿನ ಮಾಹಿತಿ ನೀಡುವುದರೊಂದಿಗೆ ನನ್ನನ್ನು ತಿದ್ದಿ ತೀಡಿದರು.

virupaxappa anagadi10.jpg  

   ಸಿದ್ಧರಾಮ ಹಿಪ್ಪರಗಿ: ಸರಿ, ವಾಧ್ಯಗಳನ್ನು ಯಾವುದೇ ತೊಂದರೆಯಿಲ್ಲದೆ ಬಾರಿಸುವುದರೊಂದಿಗೆ ಎಲ್ಲ ಕಡೆ ನಿಮ್ಮ ಅನಿವಾರ್ಯತೆ ಸೃಷ್ಟಿಯಾಯಿತು ಅಂತ ಹೇಳಿದಿರಿ. ಇಂತಹ ಅನಿವಾರ್ಯತೆಯ ಮದ್ಯೆ ನೀವು ಸಣ್ಣಾಟ, ಬಯಲಾಟ, ನಾಟಕ ಮುಂತಾದ ಪ್ರಕಾರಗಳನ್ನು ಹೊಂದಿರುವ ರಂಗಭೂಮಿ ಕ್ಷೇತ್ರಕ್ಕೆ ಹೇಗೆ ಬಂದೀರಿ?

ವಿರೂಪಾಕ್ಷಪ್ಪ ಅಂಗಡಿ : ಈಗ ನೀವು ಬಹಳ ಸಮಂಜಸ ವಿಚಾರ ಕೇಳಿದ್ರಿ ನೋಡ್ರಿ. ಹೀಗೆ ಜೀವನಾ ನಡೀತಿತ್ತು. ಎಲ್ಲಾ ಕಡೆಗೂ ಆಹ್ವಾನಗಳು ಬರುತ್ತಿದ್ದವು. ಹಾರ್ಮೋನಿಯಮ್ ಸಾಥ್ ನೀಡುತ್ತಿದ್ದೆ. ಕಾರ್ಯಕ್ರಮ ಮುಗಿಸಿಕೊಂಡು ನಮ್ಮೂರಿಗೆ ಮರಳುವುದು ನಿರಂತರ ನಡೆಯುತ್ತಿತ್ತು. ಸರಿ ಸುಮಾರು ೧೯೬೪-೬೫ರ ಸಂದರ್ಭದಲ್ಲಿ, ಸಂಗ್ಯಾ-ಬಾಳ್ಯಾ ಸಣ್ಣಾಟದ ಆಸಕ್ತರು ಮತ್ತು ನಮ್ಮೂರಿನ ಹತ್ತಿರದ ಕೊಟಬಾಗಿ ಗ್ರಾಮದ ಶಿವನಗೌಡ ಎಂಬುವವರು, ಸದರಿ ಆಟವನ್ನು ತಮ್ಮೂರಿನಲ್ಲಿ ಆಡಿಸಲು ನಿರ್ಧರಿಸಿದ ಸಂದರ್ಭದಲ್ಲಿ ನನ್ನಿಂದ ಹಾರ್ಮೋನಿಮ್ ಮತ್ತು ಹಿನ್ನಲೆ ಹಾಡುಗಾರಿಕೆಯನ್ನು ನಿರ್ವಹಿಸಲು ವಿನಂತಿಸಿಕೊಂಡಾಗ, ಇಂತಹ ಅವಕಾಶಕ್ಕಾಗಿಯೇ ಹಲವಾರು ದಿನಗಳಿಂದ ಕಾದಿದ್ದ ನನಗೆ ಅಮೃತ ಸಿಕ್ಕಷ್ಟೇ ಖುಷಿಯಾಯಿತು. ನಿರಂತರ ಎರಡು ತಿಂಗಳು ಹಗಲಿರುಳನ್ನೆದೆ ಶ್ರಮವಹಿಸಿದ್ದರಿಂದ ಸಂಗ್ಯಾ-ಬಾಳ್ಯಾಸಣ್ಣಾಟವೂ ಯಶಸ್ವಿಗೊಂಡಿತು. ನನಗೂ ಹಾರ್ಮೊನಿಯಮ್‌ದಲ್ಲಿ ಹೆಚ್ಚಿನ (ಪ್ರಾಕ್ಟಿಸ್) ತರಬೇತಿ ಸಿಕ್ಕಂತಾಯಿತು. ನನ್ನ ಗಾಯನದಿಂದ ಸಂತುಷ್ಟರಾದವರು ನಿಂದು ಹೈಪಿಚ್ ಐತಿ, ಬಿಡಬ್ಯಾಡ ಇನ್ನೂ ಹೆಚ್ಚಿಗೆ ಹಾಡೋದು ಕಲಿಬೇಕು ನೋಡುಎಂದು ಹೇಳುತ್ತಾ ಬೆನ್ನುತಟ್ಟಿದರು. ಅಂದಿನ ಸಣ್ಣಾಟಕ್ಕೆ ಗಂಗಾನ ಪಾತ್ರ ಮಾಡಲು ಬಂದಿದ್ದ ಹಿರಿಯ ನಟಿ ಶ್ರೀಮತಿ ಲಲಿತಾ ನಾವಲಗಟ್ಟಿಯವರು, ತಮ್ಮ ನಾಟಕಗಳ ಪ್ರದರ್ಶನ ಇದ್ದಾಗ ಬಂದು ಹಾರ್ಮೋನಿಯಮ್ ಮತ್ತು ಹಿನ್ನಲೆ ಗಾಯನ ನಿರ್ವಹಿಸುವಂತೆ ವಿಶ್ವಾಸದಿಂದ ಆಹ್ವಾನಿಸಿದರು. ಅವರೊಂದಿಗೆ ಹಲವಾರು ಊರುಗಳಲ್ಲಿ ಪ್ರದರ್ಶನ ನೀಡುತ್ತಾ ತಿರುಗಾಡಿದೆ. ಇಂತಹ ತಿರುಗಾಟದಲ್ಲಿ ರಂಗಭೂಮಿಯ ಹಲವರ ಪರಿಚಯದೊಂದಿಗೆ ಅವರಿಗೆ ಹತ್ತಿರದವನಾದೆ. ಹೆಚ್ಚಿನ ಪ್ರಯೋಗಗಳನ್ನು ಸಂಗೀತ ಮತ್ತು ಹಿನ್ನಲೆ ಗಾಯನದಲ್ಲಿ ಪ್ರಯೋಗಿಸಿದೆ. ಮುಂದೆ ಬರ-ಬರುತ್ತಾ ಸಣ್ಣಾಟದ ಎಲ್ಲ ನಟಿಯರು ಅಂದರೆ ನಮ್ಮ ಭಾಗದಲ್ಲಿ ವೃತ್ತಿರಂಗಭೂಮಿಯ ಕೆಲವು ಕಲಾವಿದೆಯರು ಯಾವುದೇ ವೃತ್ತಿರಂಗಭೂಮಿಯ ಕಂಪನಿಯನ್ನು ಅವಲಂಭಿಸದೆ ಹಳ್ಳಿಗಳಲ್ಲಿ ನಡೆಯುವ ಜಾತ್ರೆ, ಉತ್ಸವಗಳ ಸಂದರ್ಭಗಳಲ್ಲಿ ಗ್ರಾಮದ ಯುವಕ ಮಂಡಳದವರು ನಾಟಕವಾಡುವ ಸಂದರ್ಭದಲ್ಲಿ ಸ್ತ್ರೀ ಪಾತ್ರಗಳಿಗೆ ಇಂತಹ ರಂಗನಟಿಯರನ್ನು ಆಹ್ವಾನಿಸುತ್ತಾರೆ. ಅವರಿಗೆ ಕೈತುಂಬಾ ಸಂಭಾವನೆಯೊಂದಿಗೆ ಗೌರವಾದರಗಳೊಂದಿಗೆ ನೋಡಿಕೊಳ್ಳುವುದು ಇಂದಿಗೂ ನಮ್ಮ ಗ್ರಾಮೀಣ ರಂಗಭೂಮಿಯಲ್ಲಿ ಚಾಚು ತಪ್ಪದೇ ನಡೆಯುತ್ತಿರುವ ಪ್ರಾಚೀನ ಪದ್ಧತಿಯಿದು. ಕೈತುಂಬಾ ಬರುವ ಸಂಭಾವನೆಯು ಆ ರಂಗನಟಿಯರ ಜೀವನೋಪಾಯಕ್ಕೆ ಆದಾಯ ಮೂಲ. ಅಂತಹ ನಟಿಯರು ಹುಬ್ಬಳ್ಳಿಯ ಚಂದ್ರಕಲಾ ಟಾಕೀಜಿನ ಹತ್ತಿರದ ವಠಾರ, ರಾಜೀವಗಾಂಧಿ ನಗರ, ಇಲಕಲ್ಲ, ಹಾಲಳ್ಳಿ, ಲಿಂಗದಾಳ, ಗಟಕೂರ ಮುಂತಾದ ಊರುಗಳಲ್ಲಿ ವಾಸವಾಗಿದ್ದಾರೆ. ಅಂತಹ ನಟಿಯರಲ್ಲಿಯೇ ಜಾಸ್ತಿ ಪ್ರಭಾವಿ ನಟಿಯರು ಕೆಲವೊಮ್ಮೆ ತಮಗೆ ಅನುಕೂಲವಾಗುವಂತಹ ವಾಧ್ಯಗಾರರನ್ನು, ಸಹನಟರನ್ನು ಕರೆಸುವಂತೆ ಸಣ್ಣಾಟದ ಸಂಘಟಕರಿಗೆ ಸಲಹೆ ನೀಡುತ್ತಾರೆ. ಹೀಗೆ ಪ್ರಭಾವ ಇರುವ ನಟಿಯೊಬ್ಬರ ಪರಿಚಯ ಸಣ್ಣಾಟದ ಸಂದರ್ಭದಲ್ಲಿ ನನಗಾಯಿತು. ಅವರು ನನಗೆ ಬಹಳ ಸಹಾಯ ಮಾಡಿದರು. ಅವರು ಬೇರೆ ಯಾರೂ ಅಲ್ಲ ಈ ಮೊದಲು ಹೇಳಿದ ಹಿರಿಯ ರಂಗನಟಿ ಶ್ರೀಮತಿ ಲಲಿತಾ ನಾವಲಗಟ್ಟಿಯವರು. ಒಂದು ರೀತಿಯಲ್ಲಿ ನನಗೆ ಅವರು ಬಯಲಾಟ-ಸಣ್ಣಾಟ-ನಾಟಕ ಇತ್ಯಾದಿ ಕ್ಷೇತ್ರದ ಜನರನ್ನು ಪರಿಚಯಿಸಿದ್ದು ನನಗೆ ಹೆಚ್ಚಿನ ಜವಾಬ್ದಾರಿಯೊಂದಿಗೆ ಅವರ ಉಪಕಾರವನ್ನು ಜೀವನ ಪರ್ಯಂತ ಮರೆಯದಂತಾಗಿದ್ದು ಈಗ ಇತಿಹಾಸ ! ಮುಂದೆ ನಾನು ಸಹ ಹಲವಾರು ರಂಗನಟ-ನಟಿಯರನ್ನು ರಂಗಕ್ಕೆ ಪರಿಚಯಿಸಿದೆನು. ಅವರಲ್ಲಿ ಮುಖ್ಯವಾಗಿ ಸಾಲಳ್ಳಿಯ ಮಲ್ಲವ್ವಾ, ಫಕೀರವ್ವಾ, ಚಂದ್ರವ್ವಾ, ಶಿವಕ್ಕಾ, ಮೀನಾಕ್ಷಿ, ನಾವಲಗಟ್ಟಿ ಕಮಲವ್ವಾ, ಗಟಕನೂರ ಸುಮಿತ್ರಾ, ಲಿಂಗದಾಳ ಶಾಮಲಾ, ಗುರಪಾದಪ್ಪಾ ಜಕ್ಕಣ್ಣವರ್, ಈರಪ್ಪ ಹೊಸಮನಿ, ಈರಪ್ಪ ಮದ್ದಾನಿ, ರುದ್ರಪ್ಪ ಕಲ್ಲೂರ, ಬನಪ್ಪ ಶಿರೂರ ಮುಂತಾದವರು. ಮೇಲೆ ಹೇಳಿದ ಯಾವುದೇ ನಟ-ನಟಿಯರಿಗೆ ಆಹ್ವಾನ ಬಂದಾಗ ನನ್ನನ್ನೂ ತಮ್ಮೊಂದಿಗೆ ಹಿನ್ನಲೆಗಾಯನ ಅಥವಾ ಹಾರ್ಮೋನಿಯಂ ವಾದನಕ್ಕೆ ಕೆರದುಕೊಂಡು ಹೋಗುವುದು ಕಾಯಂ ಆದ ಸಂಗತಿಯಾಯಿತು. ಹೀಗೆ ಅಂದಿನ ಕಾಲದಲ್ಲಿಯೇ ಪಕ್ಕದ ಮಹಾರಾಷ್ಟ್ರದ ಕನ್ನಡ ಗ್ರಾಮಗಳಿಗೆ ಹೋಗಿ ಹಲವಾರು ಸಣ್ಣಾಟ, ಬಯಲಾಟ, ಹೆಜ್ಜೆಮೇಳ, ಡಪ್ಪಿನಾಟ, ನಾಟಕ ಮುಂತಾದ ವಿವಿಧ ಪ್ರಕಾರದ ಕಾರ್ಯಕ್ರಮಗಳನ್ನು ನೀಡಿದ್ದೇನೆ. ನನಗೆ ಎಲ್ಲಿಯೂ ಮಹಾರಾಷ್ಟ್ರ-ಕರ್ನಾಟಕವೆಂಬ ಬೇಧ-ಭಾವ ಗೊತ್ತಿಲ್ಲದಂತೆ ಕನ್ನಡಿಗರು ಎಲ್ಲಿಯೇ ಇದ್ದರೂ ತಮ್ಮತನವನ್ನು ಬಿಡಲಾರದ, ಪರರ ಕುರಿತು ಗೌರವಾದರವನ್ನು ಹೊಂದಿರುವ ಭಾಷಾಸಹಿಷ್ಣುಗಳು ಎಂಬುದು ನನಗೆ ಆಗಿನ ಕಾಲದಲ್ಲಿಯೇ ಮನದಟ್ಟಾಗಿದೆ.
virupaxappa anagadi9.jpg

   ಸಿದ್ಧರಾಮ ಹಿಪ್ಪರಗಿ:ನಿಜವಾಗಿಯೂ ಅದು ಹೆಮ್ಮೆಯ ಮಾತು. ಇಷ್ಟೊಂದು ವಿವಿಧ ಪ್ರಕಾರದ ರಂಗಪ್ರಕಾರಗಳಲ್ಲಿ ಕೆಲಸ ಮಾಡಿದ ನಿಮಗೆ ಸಂಘಟನೆ-ನಿರ್ದೇಶನ ಮುಂತಾದ ವಿಷಯಗಳಲ್ಲಿ ಏನಾದರೂ ಕೆಲಸ ಮಾಡಿದ್ದೀರಾ ಹೇಗೆ ?

ವಿರೂಪಾಕ್ಷಪ್ಪ ಅಂಗಡಿ : ಇಷ್ಟೊತ್ತು ನನ್ನ ಅನುಭವಕಥನ ಹೇಳುವುದರಲ್ಲಿ ಮುಖ್ಯವಾದ ವಿಚಾರವನ್ನು ಮರೆತಿದ್ದೆ. ನೀವು ಜ್ಞಾಪಿಸಿ ಒಳ್ಳೆಯದು ಮಾಡಿದಿರಿ. ನಮ್ಮ ಗ್ರಾಮೀಣ ಮಟ್ಟದಲ್ಲಿ ನಿರ್ದೇಶಕ ಅಂತ ನಾವು ಯಾರನ್ನೂ ಕರೆಯೋದಿಲ್ಲ. ನಮ್ಮ ಭಾಗದಲ್ಲಿ ಹಾರ್ಮೋನಿಯಮ್ ಬಾರಿಸುವವರನ್ನು ನಾಟಕದ ಮಾಸ್ತರ (ನಾಟಕದ ಮೇಷ್ಟ್ರು) ಅಂತ ಕರೆಯುವುದು ಹಳೆಯ ವಿಚಾರ. ಮೊದಮೊದಲು ರಂಗನಟಿಯರು ಸೂಚಿದವರನ್ನು ನಾಟಕ ಕಲಿಸುವ ಮಾಸ್ತರ ಅಂತ ಕರೆದು ಗ್ರಾಮದ ಆಸಕ್ತ ಯುವಕರಿಗೆ ನಾಟಕ ಕಲಿಸಲು ಕರೆಸುತ್ತಿದ್ದರು. ಹಾಗೆ ಕರೆದಲ್ಲಿ ಹೋದಾಗ ಸಂಗ್ಯಾ-ಬಾಳ್ಯಾ, ರಾಧಾನಾಟ, ನಿಜಗುಣ ಶಿವಯೋಗಿ, ಬಸವಂತ-ಬಲವಂತ ಮುಂತಾದ ಸಣ್ಣಾಟಗಳನ್ನು ಕಲಿಸುವುದರೊಂದಿಗೆ ಸಂಗೀತವನ್ನು ನಿರ್ವಹಣೆ ಮಾಡಿದ್ದೇನೆ. ಅಣ್ಣ-ತಂಗಿ, ಕಲಿತ ಕಳ್ಳ, ಕಣ್ಣಿಟ್ಟ ಹೆಣ್ಣು, ಆಶಾ-ಲತಾ, ಚಿನ್ನದ ಗೊಂಬೆ, ಕಾಸಿದ್ರೆ ಕೈಲಾಸ ಹೀಗೆ ಹಲವಾರು ಸಾಮಾಜಿಕ ನಾಟಕಗಳನ್ನು ಕಲಿಸಿಕೊಟ್ಟಿದ್ದೇನೆ. ಮಹಾರಾಷ್ಟ್ರದ ಕೆಲವು ಯುವಕ ಮಂಡಳಗಳಿಗೆ ಸಂಗ್ಯಾ-ಬಾಳ್ಯಾ ಸಣ್ಣಾಟವನ್ನು ಕಲಿಸುವುದರೊಂದಿಗೆ ನಿರ್ದೇಶನ ಮಾಡಿಕೊಟ್ಟಿದ್ದೇನೆ.  ಇತ್ತೀಚಿನ ವರ್ಷಗಳಲ್ಲಿ ಧಾರವಾಡ ನಗರದ ಹಲವಾರು ರಂಗಭೂಮಿ ಸಂಘಟನೆಗಳೊಂದಿಗೆ ಸಂಪರ್ಕಕ್ಕೆ ಬಂದ ನಂತರ ಆಧುನಿಕ ರಂಗಭೂಮಿಯಲ್ಲಿಯೂ ಕೆಲಸ ಮಾಡುವ ಅವಕಾಶ ನೀಡಿದವರು ರಂಗಪರಿಸರ ಸಂಸ್ಥೆಯ ಪೋಷಕರು ಮತ್ತು ಬೆನ್ನೆಲುಬಾಗಿರುವ ಶ್ರೀ ವಿಠ್ಠಲ ಕೊಪ್ಪದರವರು. ಅವರ ತಂಡದಿಂದ ಪ್ರಯೋಗಿಸಲ್ಪಟ್ಟ ಖರೇ ಖರೇ ಸಂಗ್ಯಾ-ಬಾಳ್ಯಾ, ಸೊನ್ನಲಗಿ ಸಿದ್ದರಾಮ, ಹೆಂಡ್ತಿ ಬೇಕು ಹೆಂಡ್ತಿ, ಶ್ರೀ ಕೃಷ್ಣಗಾರುಡಿ ಮುಂತಾದವುಗಳಲ್ಲಿ ಭಾಗವಹಿಸಿದ್ದೇನೆ. ರಂಗಪಯಣ ಸಂಸ್ಥೆಯವರ ಯಕ್ಷಗಾನವೊಂದರಲ್ಲಿ ಹೆಜ್ಜೆ ಹಾಕಿದ್ದೇನೆ. ಕೇವಲ ನಾಟಕ ಮಾಡಿಸುವುದು, ನಾಟಕ ಕಲಿಸುವುದು ಮುಂತಾದ ಸಂಗತಿಗಳಿಗೆ ತೃಪ್ತನಾಗದೇ ಕರ್ನಾಟಕ ಸರ್ವಕಲಾವಿದರ ಹಿತರಕ್ಷಣಾ ಸಂಘವನ್ನು ಎಂ.ಕೆ.ಹುಬ್ಬಳ್ಳಿಯಲ್ಲಿ ಹುಟ್ಟು ಹಾಕಿ ಅನೇಕ ಕಲಾವಿದರನ್ನು ಒಂದುಗೂಡಿಸಿ ಅನೇಕ ಕಾರ್ಯಕ್ರಮಗಳನ್ನು ಮಾಡಿಸಿರುವೆನು. ಅನೇಕ ಹಳ್ಳಿಗಳಲ್ಲಿ ಹೊಸ ಯುವಕ ಮಂಡಳಗಳನ್ನು ಸ್ಥಾಪಿಸುವಂತೆ ಮನವೊಲಿಸುವ ಕಾರ್ಯ, ಇರುವ ಯುವಕ ಮಂಡಳಗಳನ್ನು ಮತ್ತೆ ಕ್ರಿಯಾಶೀಲವಾಗುವಂತೆ ಹಾಗೂ ಅವರಲ್ಲಿ ಕಲಾಸಕ್ತಿ ಮೂಡುವಂತೆ ಮಾಡುವ ಪ್ರಯತ್ನವನ್ನು ಹಲವಾರು ವರ್ಷಗಳಿಂದ ನಿರಂತರವಾಗಿ ಮಾಡುತ್ತಾ ಬಂದಿದ್ದೇನೆ. ಅದರಂತೆ ಧಾರವಾಡ, ಬೆಳಗಾಂವಿ, ಬಾಗಲಕೋಟ, ಇಚಲಕರಂಜಿ, ಮಿರಜ, ಸೊಲ್ಲಾಪೂರ, ಕೊಲ್ಲಾಪೂರ, ಜತ್ತ ಮುಂತಾದ ಕಡೆಗಳಲ್ಲಿಯ ಸುಮಾರು ಗ್ರಾಮೀಣ ಸಂಘಗಳು, ಯುವಕ ಸಂಘಗಳ ಗೌರವ ಸದಸ್ಯತ್ವ, ಸಂಘಟನೆ, ಪ್ರಾಯೋಜಕತ್ವ ಇತ್ಯಾದಿಗಳಲ್ಲಿ ಸಕ್ರೀಯನಾಗಿದ್ದೇನೆ. ಕರ್ನಾಟಕ ಭಜನಾ ಸಂಘವನ್ನು ತಾರಿಹಾಳದಲ್ಲಿ ಆರಂಭಿಸಿ, ಯುವಕರನ್ನು ಅದರಲ್ಲಿ ತೊಡಗಿಸಿದ್ದೇನೆ. ಧಾರವಾಡದ ರಂಗಪರಿಸರ(ರಿ) ರಂಗತಂಡದೊಂದಿಗೆ ಸೇರಿಕೊಂಡು ಆಧುನಿಕ ನಾಟಕ, ಪಾರಿಜಾತ, ಯಕ್ಷಗಾನ, ಸಣ್ಣಾಟಗಳ ಪ್ರಕಾರಗಳನ್ನು ಆಸಕ್ತಿಯಿಂದ ಕಲಿಯುತ್ತಿದ್ದೇನೆ.
Photo0024.jpg

  ಸಿದ್ಧರಾಮ ಹಿಪ್ಪರಗಿ: ಇಷ್ಟೆಲ್ಲಾ ಕೇಳಿದ ಮೇಲೆ ನಿಮ್ಮ ವೈಯಕ್ತಿಕ ಜೀವನದ ವಿಚಾರವನ್ನು ತಿಳಿಸುತ್ತೀರಾ ?

ವಿರೂಪಾಕ್ಷಪ್ಪ ಅಂಗಡಿ : ಅದೇನು ದೊಡ್ಡ ವಿಚಾರ ಬಿಡ್ರಿ, ಕೇಳುವಂತಹ ವಿಚಾರವಾದ್ದರಿಂದ ಕೇಳಿರಿ. ತೊಂದರೆಯೇನಿಲ್ಲ. ನನ್ನ ಧರ್ಮಪತ್ನಿ ಚನ್ನಮ್ಮ ಮತ್ತು ಪಾರ್ವತೆವ್ವ ಹಾಗೂ ಪ್ರೇಮಾ ಎಂಬ ಹೆಸರಿನ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದೇನೆ. ತಮ್ಮ-ತಮ್ಮ ಸಂಸಾರಿಕ ಜೀವನದಲ್ಲಿ ಸುಖವಾಗಿದ್ದಾರೆ. ಒಬ್ಬ ಪುತ್ರ ಶಂಕರನು ಜೀವನೋಪಾಯಕ್ಕಾಗಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾನೆ. ನಾನಂತೂ ಸಣ್ಣಾಟ, ದೊಡ್ಡಾವೆಂದು ಯಾವ ಊರಿನವರು ಆಹ್ವಾನಿಸುವರೋ ಆ ಊರಿಗೆ ಹೋಗಿ ತಿಂಗಳು ಕಾಲ ಅಲ್ಲಿಯೇ ಇದ್ದು ನಾಟಕಗಳನ್ನು ಕಲಿಸಿ, ಪ್ರದರ್ಶನವಾದ ನಂತರ ಊರಿಗೆ ಮರಳುತ್ತೇನೆ. ಇದ್ದುದರಲ್ಲಿಯೇ ಸುಖಿಸಂಸಾರವನ್ನು ನಡೆಸುತ್ತಿದ್ದೇನೆ.
 

   ಸಿದ್ಧರಾಮ ಹಿಪ್ಪರಗಿ: ಬಹಳ ಸಂತೋಷ ವಿರೂಪಾಕ್ಷಪ್ಪನವರೇ, ಇಷ್ಟು ವರ್ಷಗಳ ಕಾಲ ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ನಿಮಗೆ ಗೌರವ ಸನ್ಮಾನಗಳು ಸಂಧಿರಬಹುದಲ್ಲ !

ವಿರೂಪಾಕ್ಷಪ್ಪ ಅಂಗಡಿ : ಹೂಂನ್ರಿ, ಈ ಸಮಾಜದೊಳಗಿಂದ ನಾನು ಎದ್ದು ಬಂದವನು. ಈ ಸಮಾಜಕ್ಕೆ ನನ್ನಿಂದ ಏನಾದರೂ ಕಿಂಚಿತ್ ಒಳ್ಳೆಯದು ಅದೂ ರಂಗಭೂಮಿ ಮೂಲಕ ಆಗಿದ್ದರೆ ಅದಕ್ಕೆ ಸ್ಪೂರ್ತಿ ಮತ್ತು ಶಕ್ತಿ ಯಾವುದೆಂದು ಕೇಳಿದರೆ ಸಮಾಜಎಂದು ಆತ್ಮ ಸಂತೋಷದಿಂದ ಎದೆತಟ್ಟಿ ಹೇಳುತ್ತೇನೆ. ಅಂತಹ ಸಮಾಜ ಮತ್ತು ಅದರ ಮುಂದಿನ ಭಾಗ ಸರಕಾರವೆಂಬ ವ್ಯವಸ್ಥೆ ನನಗೆ ಸತ್ಕಾರ-ಪುರಸ್ಕಾರವನ್ನು ಆಯಾ ಸಂದರ್ಭದಲ್ಲಿ ನೀಡಿ ಗೌರವಿಸಿದ್ದಾರೆ. ನನಗೆ ನೆನಪಿನಲ್ಲಿರುವ ಕೆಲವನ್ನು ಹೇಳುತ್ತೇನೆ, ರಂಗಪರಿಸರ(ರಿ), ಧಾರವಾಡದವರ ಗೌರವ ಸನ್ಮಾನ (೨೦೧೦), ಬೈಲಹೊಂಗಲದ ನಾಗರಿಕ ಸನ್ಮಾನ(೨೦೧೧), ಶ್ರಾವಣ ಭಜನಾ ಸಪ್ತಾಹ ಸನ್ಮಾನ ರೋಣದ ಗ್ರಾಮದೇವತೆಯ ಜಾತ್ರಾ ಮಹೋತ್ಸವದಲ್ಲಿ (೨೦೦೮), ಎಂ.ಕೆ.ಹುಬ್ಬಳ್ಳಿಯ ಜಾತ್ರಾಮಹೋತ್ಸವ ಸನ್ಮಾನ (೨೦೦೭) ಮುಂತಾದೆಡೆಗಳಲ್ಲಿ ಸನ್ಮಾನಿತನಾಗಿದ್ದೇನೆ. ರಂಗಪಯಣ, ಧಾರವಾಡದವರ ಸನ್ಮಾನ (೨೦೧೨) ಮತ್ತು ಕರ್ನಾಟಕ ವಿದ್ಯಾವರ್ದಕ ಸಂಘ್ದವರ ರಮಗಸನ್ಮಾನ(೨೦೧೨) ಮುಂತಾದ ಗೌರವಗಳೊಂದಿಗೆ ೨೦೧೨-೧೩ನೇ ಸಾಲಿನ ಕರ್ನಾಟಕ ಯಕ್ಷಗಾನ ಅಕಾಡೆಮಿಯ ಗೌರವ (ಯಕ್ಷ) ಪ್ರಶಸ್ತಿಯನ್ನು ನೀಡಿ ಗೌರವಿಸಿದ್ದಾರೆ.
virupaxxappa angadi6.jpg

  ಸಿದ್ಧರಾಮ ಹಿಪ್ಪರಗಿ: ಬಹಳ ಸಂತೋಷ ಶ್ರೀಯುತ ವಿರೂಪಾಕ್ಷಪ್ಪನವರೇ, ಇಲ್ಲಿಯವರೆಗೆ ನಿಮ್ಮ ರಂಗಪಯಣದಲ್ಲಿಯ ಹಲವಾರು ಅನುಭಗಳನ್ನು ನಮ್ಮ ಸಂಸ ರಂಗಪತ್ರಿಕೆಯೊಂದಿಗೆ ಹಂಚಿಕೊಂಡಿದ್ದೀರಿ. ಮುಂದಿನ ದಿನಗಳು ನಿಮಗೆ ಇನ್ನಷ್ಟು ಉತ್ಸಾಹ, ಉಲ್ಲಾಸ, ಚೈತನ್ಯ ವನ್ನು ನೀಡಲಿ. ರಂಗಭೂಮಿಗೆ ಹೆಚ್ಚಿನ ಸೇವೆಯನ್ನು ನೀಡುವ ಶಕ್ತಿಯನ್ನು ಆ ನಾಟ್ಯಕಲಾದೇವಿಯು ನೀಡಲಿ. ಅದರೊಂದಿಗೆ ದೇವರು ನಿಮಗೆ ಆಯುರಾರೋಗ್ಯ ಭಾಗ್ಯ ಸಂಪತ್ತು ನೀಡಿ ಕರುಣಿಸಲೆಂದು ಪ್ರಾರ್ಥನೆ ನಮ್ಮ ಪತ್ರಿಕೆಯ ಬಳಗದ್ದು. ಧನ್ಯವಾದಗಳು.

ವಿರೂಪಾಕ್ಷಪ್ಪ ಅಂಗಡಿ : ಸರ್, ನಿಮ್ಮ ಎಲ್ಲಾ ಬಳಗಕ್ಕೂ ನನ್ನ ಅನಂತ ನಮಸ್ಕಾರಗಳನ್ನು ತಿಳಿಸಿರಿ. ನಿಮ್ಮ ಪ್ರೋತ್ಸಾಹ ನನ್ನಂಥ ಬಡಕಲಾವಿದನ ಮೇಲೆ ನಿರಂತರ ಇರಲಿ. ಹೃತ್ಪೂರ್ವಕ ಧನ್ಯವಾದಗಳು.

ಕಾಮೆಂಟ್‌ಗಳಿಲ್ಲ: