ರಾಜೇಂದ್ರ
ಚೆನ್ನಿ
ವಚನ ಸಾಹಿತ್ಯ ಹಾಗೂ ಜಾತಿ ವ್ಯವಸ್ಥೆಯ ಕುರಿತಾದ ಸಂವಾದದಲ್ಲಿ ದಿನಾಂಕ
15/04/2013ರಂದು 'ಪ್ರಜಾವಾಣಿ'ಯಲ್ಲಿ ಪ್ರಕಟವಾದ ಡಾ.ಎ.ಷಣ್ಮುಖ ಹಾಗೂ ಜೆ.ಎಸ್.ಸದಾನಂದರ
ಬರಹಗಳನ್ನು ಗಮನಿಸಿದೆ. ಎಚ್.ಎಸ್.ಶಿವಪ್ರಕಾಶರ ಅಂಕಣದಿಂದ ಆರಂಭವಾದ ಚರ್ಚೆಗಳನ್ನೂ ಕುತೂಹಲ ಮತ್ತು
ಆಶ್ಚರ್ಯದಿಂದ ಓದುತ್ತ ಬಂದಿದ್ದೇನೆ. ಆಶ್ಚರ್ಯವೇಕೆಂದರೆ ಡಂಕಿನ್ ಝಳಕಿಯವರ ಹಾಗೂ ಅವರ ತಾತ್ವಿಕ
ಚೌಕಟ್ಟಾಗಿರುವ ಎಸ್.ಎನ್.ಬಾಲಗಂಗಾಧರರ ವಾದಗಳು ವಚನ ಸಾಹಿತ್ಯ ಮತ್ತು ಜಾತಿ ವ್ಯವಸ್ಥೆಯ ಕುರಿತು
ಮರುಚರ್ಚೆಗೆ ಕಾರಣವಾಗಬಹುದಾದ ಸ್ವಂತಿಕೆ, ವಿವೇಚನಾ ಸಾಮಥ್ರ್ಯವನ್ನು ಹೊಂದಿವೆಯೆಂಬ ತಪ್ಪು
ಕಲ್ಪನೆಯ ಮೇಲೆ ಈ ಸಂವಾದ ನಡೆಯುತ್ತಿದೆ. ಜಗತ್ತಿನ ಬೌದ್ಧಿಕ ವಲಯದಲ್ಲಿಯೇ ಒಂದು ಮೂಲಭೂತವಾದ
ಪಲ್ಲಟವನ್ನು ಮತ್ತು ಭಾರತೀಯ ಸಾಮಾಜಿಕ ವಿಜ್ಞಾನಗಳ ಮೂಲಸ್ವರೂಪವನ್ನೇ ಪುನರ್ರಚಿಸುವ ಸೈದ್ಧಾಂತಿಕ,
ತಾತ್ವಿಕ ಪಲ್ಲಟಗಳು ಈ ವಾದಗಳಿಂದ ಆಗಿವೆ, ಆಗಬೇಕು ಎಂದು ಕುವೆಂಪು ವಿಶ್ವವಿದ್ಯಾಲಯದ ಸ್ಥಳೀಯ
ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಒಂದು ಗುಂಪು ಪ್ರತಿಪಾದಿಸುತ್ತಾ ಬಂದಿದೆ. ಅಲ್ಲದೇ ಇದನ್ನು
ಅರ್ಥಮಾಡಿಕೊಳ್ಳಲಾಗದ 'ಕನ್ನಡ ಬುದ್ಧಿಜೀವಿಗಳು' ತಿರಸ್ಕಾರಕ್ಕೆ ಯೋಗ್ಯರೆಂದು ವಾದಿಸುತ್ತಾ
ಬಂದಿದೆ. ('ನೋಡಿ, ರಾಜಾರಾಮ್ ಹೆಗಡೆ ಹಾಗೂ ಸದಾನಂದ ಜೆ.ಎಸ್.'ಪೂರ್ವವಲೋಕನ'ದ ಪೀಠಿಕೆ ಪುಟ
1.)
ಕೇವಲ ಕನ್ನಡ ಬುದ್ಧಿಜೀವಿಯಾದ ನಾನು ಈ ಗುಂಪು ಈಗಾಗಲೇ ನಿರ್ಧರಿಸಿದ ನನ್ನ ಅಜ್ಞಾನದ
ಮಿತಿಗಳಲ್ಲಿ ಕೆಲವು ಪ್ರಶ್ನೆಗಳನ್ನು ಎತ್ತುತ್ತಿದ್ದೇನೆ.
1. ಡಾ.ಷಣ್ಮುಖ ಅವರು
ಹೇಳುತ್ತಾರೆ ಡಂಕಿನ್ರ ಪ್ರಬಂಧದಲ್ಲಿ ಎಲ್ಲೂ ಈಗ ಇರುವ ವಚನಗಳು ಜಾತಿ(ವ್ಯವಸ್ಥೆ) ವಿರೋಧಿ ಚಳುವಳಿ
ಎಂಬ ಕಥೆಯನ್ನು ವೀರಶೈವರು ತಮ್ಮ ಮೇಲುಚಲನೆಗಾಗಿ ಹರಡಿದರು ಎನ್ನುವ ವಾದವಿಲ್ಲ. ಡಂಕಿನ್ ಅವರ
‘Vachanas as Caste Critiques’ ಎಂಬ ಪ್ರಬಂಧದ ಬಗ್ಗೆಯೇ ಷಣ್ಮುಖ ಅವರು ಮಾತನಾಡುತ್ತಿದ್ದರೆ
ಮೊದಲನೆಯದಾಗಿ, ಅವರು ಈ ಪ್ರಬಂಧವನ್ನು ಓದಿಲ್ಲ. ಎರಡನೆಯದಾಗಿ ಅವರು ಕನ್ನಡ
ಬುದ್ಧಿಜೀವಿಗಳಲ್ಲದಿದ್ದರೂ ಅವರಿಗೆ ಅರ್ಥವಾಗಿಲ್ಲ. ಡಂಕಿನ್ರ ಮುಖ್ಯವಾದಗಳು ಹೀಗಿವೆ: ಬ್ರಿಟಿಷ್
ಆಡಳಿತಗಾರರು, ಹವ್ಯಾಸಿ ವಿದ್ವಾಂಸರು ಮತ್ತು ಇತರರು ಲಿಂಗಾಯತ/ವೀರಶೈವ ಧರ್ಮ ಹಾಗೂ ಗ್ರಂಥಗಳ
ಬಗ್ಗೆ ದ್ವಂದ್ವಾತ್ಮಕವಾದ ನಿಲುವನ್ನು ಹೊಂದಿದ್ದಾರೆ. ಈ ರಿಲಿಜನ್ ಇನ್ನಿತರ ಭಾರತೀಯ
ಸಂಪ್ರದಾಯಗಳಿಗೆ ಹೋಲಿಸಿದರೆ ಹಿಂದೂ ರಿಲಿಜನ್ ನ ಹಲವು ಪ್ರತಿಗಾಮಿ ಧೋರಣೆ ಹಾಗೂ ಆಚರಣೆಗಳನ್ನು
ತಿರಸ್ಕರಿಸುವ ಮೂಲಕ ಪ್ರಶಂಸೆಗೆ ಅರ್ಹವಾಗಿದೆಯಾದರೂ ಅದರ ಗ್ರಂಥಗಳು (texts) ಹಾಗೂ ಆಚರಣೆಗಳು
ಇತರ ಭಾರತೀಯ ಸಂಪ್ರದಾಯಗಳಂತೆಯೇ ತಿರಸ್ಕಾರಯೋಗ್ಯವಾಗಿವೆ. ಇದರಲ್ಲಿ ಅವರು ಇತ್ಯಾತ್ಮಕವೆಂದು
ಗುರುತಿಸುವ ಅಂಶಗಳು ಪ್ರಾಟೆಸ್ಟಂಟ್ ಕ್ರಿಶ್ಚಿಯನ್ ಥಿಯಾಲಜಿಯ ಪ್ರಭಾವದಲ್ಲಿ ಮಾಡಲಾದ ರಚನೆಗಳು.
ಅನಂತರ ತನ್ನ ಅಸ್ಮಿತೆ ಹಾಗೂ ಸಂಘಟನೆಯನ್ನು ಬಲಪಡಿಸುವ ಪ್ರಯತ್ನದಲ್ಲಿ ಈ ಬ್ರಿಟಿಷ್
stereo-story ತನಗೆ ಅಪ್ಯಾಯಮಾನವಾಗಿ ಕಂಡಿದ್ದರಿಂದ ಆಧುನಿಕ ವೀರಶೈವ ಶಿಕ್ಷಿತ ವರ್ಗವು ಇದನ್ನು
ಒಪ್ಪಿಕೊಂಡಿತು. ಇಂಥ ವಿವರಣೆಯನ್ನು ಡಂಕಿನ್ ವೀರಶೈವ ಸಭಾದ ನಡಾವಳಿಗಳು, ಅದರ ನೇತಾರರ ಭಾಷಣ
ಬರಹಗಳು, ಮೊದಲಾದವುಗಳ ಮೂಲಕ ಮಂಡಿಸುತ್ತಾರೆ. ಒಂದು ಗುಂಪಿನ ನಿರ್ಧಿಷ್ಟ ಉದ್ದೇಶದಿಂದ (ಇಲ್ಲಿ
ಶಿಕ್ಷಿತ ವೀರಶೈವ ಧೀಮಂತ ವರ್ಗ) ಇದಾಯಿತೆಂದು ಕನ್ನಡ ಬುದ್ಧಿಜೀವಿಗಳೂ
ಹೇಳುತ್ತಿಲ್ಲ.\
ಇಲ್ಲಿರುವ ಪ್ರಶ್ನೆಗಳೆಂದರೆ ಬ್ರಿಟಿಷ್ ಓರಿಯಂಟಲಿಸ್ಟ್ ಎಂದು
ಕರೆಯಬಹುದಾದ ಬರಹಗಳು ವೀರಶೈವ ಧರ್ಮದ ಬಗ್ಗೆ ಏಕಮುಖವಾದ ಚಿತ್ರವನ್ನು ಕೊಟ್ಟಿವೆಯೆ? ಅಂದಾಜು
ಹತ್ತರಿಂದ ಹದಿನೈದನೇ ಶತಮಾನದವರೆಗೆ ಪ್ರವರ್ಧಮಾನವಾದ ಒಂದು ಸಂಪ್ರದಾಯದ ಬಗ್ಗೆ ಬ್ರಿಟಿಷ್ರ ಆಗಮನದ
ಮೊದಲು ಯಾವುದೇ ವಿವರಣೆಗಳು,ವ್ಯಾಖ್ಯಾನಗಳು ಇರಲೇ ಇಲ್ಲವೇ? ಈ ವಿವರಣೆಗಳು ಜಾತಿ, ಜಾತಿಪದ್ಧತಿ,
ಬ್ರಾಹ್ಮಣ ಪುರೋಹಿತಶಾಹಿ ಇವುಗಳು ತಮ್ಮ ಯಾವ 'ಅನುಭವ'ವನ್ನು ವಿವರಿಸಲೇ ಇಲ್ಲವೇ? ಡಂಕಿನ್ ಹಾಗೂ
ಇತರರು ಆಧ್ಯಾತ್ಮಿಕವೆಂದು ಗುರುತಿಸಿ ಅದನ್ನು 'ಸಾಮಾಜಿಕ'ದಿಂದ ಬೇರ್ಪಡಿಸುವ ನಿರ್ಣಯಗಳನ್ನು
ವಚನಕಾರರು ಜಾತಿಯ ಬಗ್ಗೆ ತಾಳಿದ ಧೋರಣೆಯ ಬಗ್ಗೆ ಬಳಸುತ್ತಾರೆ.
ಆಧ್ಯಾತ್ಮಿಕ/ಸಾಮಾಜಿಕ
ಎನ್ನುವ ವಿಂಗಡಣೆಯೇ ವಸಾಹತುಶಾಹಿ ಪ್ರಜ್ಞೆಯ ಫಲವಾಗಿದೆ. ಇದನ್ನು ವಸಾಹತುಶಾಹಿ-ಪೂರ್ವ
ಸಂದರ್ಭಕ್ಕೆ ಅನ್ವಯಿಸುವ ಡಂಕಿನ್ರ ಪ್ರಬಂಧ Orientalism ನ ಪುನರುತ್ಪಾದನೆಯಾಗಿದೆ. ಹೀಗಾಗಿ ಅವರ
ಸಂಶೋಧನೆಯ ವೈಚಾರಿಕ ಚೌಕಟ್ಟು ದುರ್ಬಲ ಮಾತ್ರವಲ್ಲ ಅಸಿಂಧುವಾಗಿದೆ (invalid).
ವಸಾಹತುಪೂರ್ವ/ಆಧುನಿಕಪೂರ್ವ ಕಾಲದ ಅನುಭವದ ಬಗ್ಗೆ ಇನ್ನೂ ಸಂಶೋಧನೆಯಾಗಬೇಕಿದೆ ಎಂದು ಬಾಲಗಂಗಾಧರ
ಗುಂಪು ಹೇಳುತ್ತದೆ; ಆದರೆ ಆ ಸಂಶೋಧನೆಯು ಆಗದಿದ್ದರೂ, ಅದರ ಬಗ್ಗೆ ಬಂದಿರುವ ಎಲ್ಲಾ ಕನ್ನಡ
ಸಂಶೋಧನೆಯನ್ನು ತಿರಸ್ಕಾರದಿಂದ ನೋಡುವ ತನ್ನ obscene arrogance ಬಗ್ಗೆ ಅದು
ಸೂಕ್ಷ್ಮವಾಗಿಲ್ಲ.
ರಿಲಿಜನ್ ಬಗ್ಗೆ ಹಾಗೂ ಜಾತಿ ವ್ಯವಸ್ಥೆಯ ಬಗ್ಗೆ ಬಾಲಗಂಗಾಧರರ ವಾದಗಳು
ವಿಶ್ವನಾಗರೀಕತೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಸತ್ಯವನ್ನು ಹೇಳುತ್ತಿವೆ ಅದನ್ನು ಒಪ್ಪದವರು
ಅಶಿಕ್ಷಿತರು ಎಂದು ಅವರ ಹಿಂಬಾಲಕರು ವಾದಿಸುತ್ತಾರೆ. ಇಡೀ ಪಶ್ಚಿಮದ ಲೋಕಗ್ರಹಿಕೆಯು ಕ್ರಿಶ್ಚಿಯನ್
ಥಿಯಾಲಜಿಯಿಂದ ಪ್ರಭಾವಿತವಾಗಿದೆ ಎನ್ನುವ ಹಾಗೂ ಈ ಥಿಯಾಲಜಿಯ ಮಾದರಿಯನ್ನು ಆಧರಿಸಿರುವ
ವಸಾಹತುಶಾಹಿ ಪ್ರಜ್ಞೆ ಮತ್ತು ಅದರ ಪುನರುತ್ಪಾದನೆಯಾಗಿರುವ ಆಧುನಿಕ ಭಾರತೀಯ ಸಮಾಜವಿಜ್ಞಾನಗಳ
ಬಗೆಗಿನ ಬೀಸು ಹೇಳಿಕೆಗಳು ಅವರಂದುಕೊಂಡಂತೆ 'ವೈಜ್ಞಾನಿಕ'ವಾಗಿಲ್ಲ. ಕಾಲ್ ಪಾಪರ್ (Carl
Popper)ನಿಂದ ತೆಗೆದುಕೊಂಡಿರುವ ಹೇಳಿಕೆಗಳ ವಿಶ್ಲೇಷಣೆಯ ಮಾದರಿ ಸತ್ಯ ಮತ್ತು falsification
ಬಗೆಗಿನ ನಿಲುವುಗಳನ್ನು ಜಗತ್ತಿನ ವಿದ್ವತ್ ಪ್ರಪಂಚ ಈಗಾಗಲೇ ಅತ್ಯಂತ ಪ್ರಶ್ನಾರ್ಹವಾಗಿ ನೋಡಿದೆ.
ಇಂಥ ಸಂದೇಹಾಸ್ಪದ ತರ್ಕಪದ್ಧತಿಗಳ ಮೇಲೆ ನಿಂತಿರುವ ತಮ್ಮ ಸಂಶೋಧನೆಯನ್ನು ಜಗತ್ತಿನ ಅಖೈರಾದ
ಸತ್ಯವೆಂದರೆ ಅದನ್ನು ನಂಬಬೇಕಾಗಿಲ್ಲ.
ಇನ್ನೂ ಮುಖ್ಯವಾಗಿ, ಚರಿತ್ಮಾತ್ಮಕ ಅಧ್ಯಯನಗಳ
ಸಾಧ್ಯತೆಯನ್ನೇ ಒಪ್ಪದ ಇಂಥ ವಾದಗಳು ಬಾಲಿಶ ಹಾಗೂ ಅಸಂಬದ್ಧ. ಉದಾಹರಣೆಗೆ ಡಂಕಿನ್ ಅವರು
ವೀರಶೈವ/ಲಿಂಗಾಯತ ಸಂಪ್ರದಾಯಗಳು ಒಪ್ಪುವ ವಚನಕಾರರ ಬಗೆಗಿನ stereo-stories ಗಳಿಗೆ ಯಾವುದೇ
ಚಾರಿತ್ರಿಕ ಆಧಾರಗಳಿಲ್ಲವಾದ್ದರಿಂದ ವಚನಗಳಲ್ಲಿ ಬರುವ ಹೇಳಿಕೆಗೆ textual ಓದುಗಳು ಮಾತ್ರ ನಮ್ಮ
ವಾದಗಳಿಗೆ ಆಧಾರವಾಗಿರಬೇಕು ಎನ್ನುತ್ತಾರೆ. ಅಲ್ಲದೇ ಈ ಓದುಗಳಲ್ಲಿ (textual reading)
ಸಾಹಿತ್ಯಿಕ ಓದು ಮತ್ತು ಸಮಾಜಶಾಸ್ತ್ರೀಯ ಓದುಗಳ ಮಧ್ಯ ಅಂತಹ ಭಿನ್ನತೆಯಿಲ್ಲವೆಂದು ವಾದಿಸಿ
ವಚನಗಳಲ್ಲಿ ಜಾತಿ/ಜಾತಿ ವ್ಯವಸ್ಥೆಯ ಬಗ್ಗೆ ಇರುವ ಹೇಳಿಕೆಗಳನ್ನು ಶೇಕಡಾವಾರು ಸಂಖ್ಯಾಶಾಸ್ತ್ರೀಯ
ಮಾದರಿಯಲ್ಲಿ ಪರಿಶೀಲಿಸುತ್ತಾರೆ. ಈ ವಾದಸರಣಿಗಳಲ್ಲಿ ಒಂದು ಮೆಟ್ಟಿಲಿನಿಂದ ಇನ್ನೊಂದು
ಮೆಟ್ಟಿಲಿಗೆ ಹೋಗುವಾಗ ಅದೆಷ್ಟು ವೈಚಾರಿಕ ಕೊರಕಲುಗಳನ್ನು ಹಾರುತ್ತಾರೆ ಎಂದರೆ ತತ್ವಜ್ಞಾನದ
ಪ್ರಾಥಮಿಕ ಪರಿಚಯವಿರುವವರಿಗೂ ಇದು ಅಸಮರ್ಥನೀಯವಾಗಿ ಕಾಣುತ್ತದೆ. ಇದರ ಪರಿಣಾಮವೆಂದರೆ
ಆದಿಶಂಕರರಲ್ಲಿಲ್ಲದ್ದು ವಚನಕಾರರಲ್ಲಿ ಏನಿದೆ ಎನ್ನುವ ಅಚಾರಿತ್ರಿಕ, ಅಪ್ರಬುದ್ಧ ಹೇಳಿಕೆ ಡಂಕಿನ್
ಅವರಿಗೆ ಸಾಧ್ಯವಾಗುತ್ತದೆ. ಈ ದುರ್ಬಲ ಹೇಳಿಕೆಯ ಹಿಂದಿರುವುದೆಂದರೆ ಚರಿತ್ರೆ, ಸಾಮಾಜಿಕ ಅನುಭವ,
ಸಾಮಾಜಿಕ ಬದಲಾವಣೆ ಇದಾವುದರಿಂದಲೂ ಅಬಾಧಿತವಾದ, ಅಚಾರಿತ್ರಿಕವಾದ 'ಅನುಭಾವ ಪರಂಪರೆ'ಯಿದೆಯೆಂದೂ
ಹಾಗೂ ಈ ಪರಂಪರೆಯು ಜಾತಿ/ಜಾತಿ ವ್ಯವಸ್ಥೆಯ ಬಗ್ಗೆ (ಇವೆರಡೂ ನಿಜವಾಗಿ ಇಲ್ಲದಿದ್ದರೂ) ಒಂದೇ ಬಗೆಯ
ಹೇಳಿಕೆಗಳನ್ನು ನೀಡುತ್ತ ಬಂದಿದೆಯೆನ್ನುವ ವಾದ. ಈ ಪರಂಪರೆಗೆ ಸೇರಿದ ಯಾರಾದರೂ (ಉದಾಹರಣೆಗೆ
ವಚನಕಾರರು) ಜಾತಿಯ ಬಗ್ಗೆ ಏನನ್ನೇ ಹೇಳಿದರೂ ಅದು ಈ ಅಚಾರಿತ್ರಿಕ ಅನುಭಾವಿಕ ಪರಂಪರೆಯ
ಚೌಕಟ್ಟಿನಲ್ಲಿ ಅರ್ಥಮಾಡಿಕೊಳ್ಳಬೇಕು. ಅದರಾಚೆಗೆ ಹೋಗಿ ಅದನ್ನು ಜಾತಿ ವಿರೋಧಿಯೆಂದರೆ ಅದು ನಮ್ಮ
ಆಧುನಿಕ/ವಸಾಹತುಶಾಹಿ/ ಕ್ರಿಶ್ಚಿಯನ್ ಥಿಯಾಲಜಿ ಪ್ರಭಾವಿತ ಪ್ರಜ್ಞೆಯಿಂದ ಹುಟ್ಟಿದ stereo-story
ಮಾತ್ರ; ಅಥವಾ ಈ ಎಲ್ಲವೂ ಆದ ಓರಿಯೆಂಟಲಿಸಂನ ಪುನರುತ್ಪಾದನೆ. ದಯವಿಟ್ಟು ಗಮನಿಸಿ.
ಆಧುನಿಕ/ವಸಾಹತುಶಾಹಿ/ಕ್ರಿಶ್ಚಿಯನ್ ಥಿಯಾಲಜಿ ಪ್ರೇರಿತ/ ಓರಿಯಂಟಲಿಸ್ಟ್ ಇವೆಲ್ಲವನ್ನೂ
ಒಂದೇ ಎನ್ನುವ ಹಾಗೆ ಬಾಲಗಂಗಾಧರರ ವಾದಗಳು collapse ಮಾಡುತ್ತವೆ.
ಏಕಾಕೃತಿಗೊಳಿಸುತ್ತವೆ.(homogenize) ಇದು ಚಾರಿತ್ರಿಕವಾಗಿ ಮತ್ತು ತಾತ್ವಿಕವಾಗಿ
ಅಸಿಂಧುವಾಗಿದ್ದರಿಂದ ಮತ್ತು ಹೀಗೆ ಮಾಡುತ್ತಿರುವುದು ಬಾಲಗಂಗಾದರರ ವೈಚಾರಿಕ ಚೌಕಟ್ಟಿನ
ದೌರ್ಬಲ್ಯವಾಗಿರುವುದರಿಂದ ಅದನ್ನು ಕನ್ನಡ ಬುದ್ಧಿಜೀವಿಗಳು ತಿರಸ್ಕರಿಸುತ್ತಾರೆ. ಒಂದು
ಥಿಯರಿಯನ್ನು ಕಟ್ಟುವಾಗ ಅದು ಅನುಭವವನ್ನು ವಿವರಿಸುವ ಸಾಮಥ್ರ್ಯವನ್ನು ಹೊಂದಿದೆಯೇ? ವಿಭಿನ್ನ
ಅನುಭವಗಳ ಮಧ್ಯೆ ವ್ಯತ್ಯಾಸವನ್ನು ಖಚಿತವಾಗಿ ಗುರುತಿಸುವ ಶಕ್ತಿ ಅದಕ್ಕಿದೆಯೇ? ಅಥವಾ ಅದು
ಸಮಸ್ಯಾತ್ಮಕವೇ ಅಲ್ಲದ ಒಂದು ಆಕೃತಿಯೆಂದು, ಅದು ಕೇವಲ ಮತ್ತು ಸಮಗ್ರವಾಗಿ ಕ್ರಿಶ್ಚಿಯನ್
ಥಿಯಾಲಜಿಯಿಂದ ತನ್ನ ಲೋಕಗ್ರಹಿಕೆಗಳನ್ನು ರೂಪಿಸಿಕೊಂಡಿತು ಎನ್ನುವ ಬಾಲಗಂಗಾಧರರ ವಾದವು
ಸೂಕ್ಷ್ಮವಾದ ವೈಚಾರಿಕ ವಿಶ್ಲೇಷಣೆಗೆ ಒಳಪಡಿಸದೇ ಇರುವ ಬೌದ್ಧಿಕ
ಏಕದೇವೋಪಾಸನೆಯಂತಿದೆ.
ಬಾಲಗಂಗಾಧರರ ಅಭಿಪ್ರಾಯ ಈ ಬಗ್ಗೆ ಏನೇ ಇರಲಿ, ಯಾವುದೇ ಥಿಯರಿ
ತನ್ನ ಒಟ್ಟಾರೆ ಸಂದರ್ಭವನ್ನು ಮೀರಿ ಹೋಗುವುದಿಲ್ಲ. The Heathen in his Blindness (1994)
ಕೃತಿ ಹಾಗೂ ಅನೇಕ ಸಂಕೀರ್ಣ ಪ್ರಬಂಧಗಳ ಮೂಲಕ ಅವರು ವಸಾಹತುಶಾಹಿ ಪ್ರಜ್ಞೆ ಮತ್ತು ಓರಿಯಂಟಲಿಸಂ
ಬಗ್ಗೆ ಒಂದು ವಿಸ್ತಾರವಾದ ಪ್ರಾಕ್ಕಲ್ಪನೆಯನ್ನು ರೂಪಿಸಿಕೊಂಡಿದ್ದರು. ಇದಕ್ಕೆ ಪಶ್ಚಿಮದ ವಿದ್ವತ್
ಪ್ರಪಂಚದಲ್ಲಿ ಹಿನ್ನೆಲೆ ಇರಲಿಲ್ಲವೆಂದಲ್ಲ. 'ರಿಲಿಜನ್' ಅನ್ನುವ ಪದ ಮತ್ತು ಪರಿಕಲ್ಪನೆ ಎಲ್ಲಾ
ಧರ್ಮಗಳಿಗೆ ಅನ್ವಯಿಸಬಹುದಾದಂಥ 'ಸರ್ವನಾಮ'ವಲ್ಲ. ಅದು ಕೇವಲ ಕ್ರಿಶ್ಚಿಯನ್, ಯಹೂದಿ ಮತ್ತು ಕೆಲವೇ
ಧರ್ಮಗಳನ್ನು ವಿವರಿಸುವ ಪದ. ಹಿಂದೂಯಿಸಮ್, ಬುದ್ಧಿಸಮ್ ಮುಂತಾದ ಪದಗಳು ಕೇವಲ ರಚನೆಗಳು ಮತ್ತು
ಅವು ಅಸಂಬದ್ಧವೆಂದು-------- 1962ರಲ್ಲಿ ಅವರು ವಾದಿಸಿದ್ದರು. ಇದನ್ನೇ ಮುಂದುವರೆಸಿ 1989ರಲ್ಲಿ
Frits Staal ಅವರು 'ರಿಲಿಜನ್'ಅನ್ನುವುದು ಸಾರ್ವತ್ರಿಕವಾದ ಸಂಗತಿಯಲ್ಲ; ಅದರ ಕಲ್ಪನೆ
ಕ್ರಿಶ್ಚಿಯನ್ ಥಿಯಾಲಜಿಗೆ ಸಂಬಂಧಿಸಿದ್ದು ಎಂದು ವಾದಿಸಿದ್ದರು. ಇದು ಬಾಲಗಂಗಾಧರರ ಚಿಂತನೆಯ ಮೂಲ
ಆಧಾರವಾಗಿದೆ. ಈ ಆಧಾರದ ಮೇಲೆ ಅವರು ಎಡ್ವರ್ಡ್ ಸೈಯಿದ್ ತನ್ನ Orinetalism ನಲ್ಲಿ ವಿಸ್ತಾರವಾಗಿ
ಬಳಸಿದ ವಸಾಹತುಶಾಹಿ ಸಂಕಥನದ ವಿಶ್ಲೇಷಣೆಯ ಮಾದರಿಯನ್ನು ಬಳಸಿಕೊಂಡು ತಮ್ಮ ಪ್ರಾಕ್ಕಲ್ಪನೆಯನ್ನು
ಕಟ್ಟುತ್ತಾರೆ. ಅಂದರೆ ಕ್ರಿಶ್ಚಿಯನ್ ಥಿಯಾಲಜಿಯು ರಚಿಸಿದ 'ರಿಲಿಜನ್'ನ ಪರಿಕಲ್ಪನೆಯು ಸೆಮೆಟಿಕ್
ರಿಲಿಜನ್ಗಳ ವಿವರಣೆಯನ್ನು ಕೊಟ್ಟಿತು. ಭಾರತಕ್ಕೆ ಬಂದ ಪಶ್ಚಿಮದ ವಿದ್ವಾಂಸರು, ಮಿಶನರಿಗಳು ತಮ್ಮ
ಲೋಕಗ್ರಹಿಕೆಯಲ್ಲಿರುವ 'ರಿಲಿಜನ್'ನಿಂದಾಗಿ ಭಾರತದಲ್ಲಿರುವ ಧರ್ಮ ಮತ್ತು ಸಂಪ್ರದಾಯಗಳು ರಿಲಿಜನ್
ಆಗಿರಲೇಬೇಕು ಎಂದು ಆಗ್ರಹಿಸಿ, ಅದು ಇಲ್ಲಿದೆಯೆಂದು ಭಾವಿಸಿ ಅದಕ್ಕೆ ತಕ್ಕಂತೆ ಭಾರತೀಯ
ಧರ್ಮಗಳನ್ನು ವಿವರಿಸಿದರು. ಇದರ ಹಿಂದೆ ಭಾರತೀಯ 'ರಿಲಿಜನ್' ಕೆಟ್ಟದ್ದು ಎಂದು ಸಾಬೀತು ಮಾಡಿ
ಕ್ರಿಶ್ಚಿಯನ್ ಧರ್ಮದ ಶ್ರೇಷ್ಠತೆಯನ್ನು ಸಮರ್ಥಿಸುವ ಉದ್ದೇಶವಿತ್ತು. ಗಂಗಾಧರರ ಪ್ರಕಾರ
ಪಾಶ್ಚಿಮಾತ್ಯರು ವಿವರಿಸಿದ್ದು 'ಅನುಭವವನ್ನಲ್ಲ', 'ಸತ್ಯವನ್ನಲ್ಲ'. ಅವರು ವಿವರಿಸಿಕೊಂಡಿದ್ದು
ತಮ್ಮನ್ನೇ. ಈ ಘಟ್ಟದವರೆಗೆ ಗಂಗಾಧರರ ವಾದ ಎಡ್ವರ್ಡ್ ಸೈಯಿದ್ ಮತ್ತು ವಸಾಹತೋತ್ತರ ಚಿಂತನೆಗೆ ಬಹಳ
ಹತ್ತಿರವಾಗಿದೆ. ತಮ್ಮ ಥಿಯರಿ ಸೈಯದ್ನ ಚಿಂತನೆಗಿಂತ ಹೇಗೆ ಭಿನ್ನ ಮತ್ತು ಅದರ ದೌರ್ಬಲ್ಯಗಳೇನು
ಎಂಬುದಾಗಿ ಗಂಗಾಧರ ವಾದಿಸುತ್ತಾರೆ.Orinetalismನ ವೈಚಾರಿಕ ಕೊರತೆಗಳ ಬಗ್ಗೆ ಸುಮಾರು ಎರಡು
ದಶಕಗಳಿಗೂ ಮೀರಿ ಜಗತ್ತಿನಲ್ಲಿ ಬಹಳ ವಿಸ್ತಾರವಾಗಿ ಚರ್ಚೆಗಳು ನಡೆದಿವೆ. ಈ ಚರ್ಚೆಗೆ ಗಂಗಾಧರ
ಅವರು ಏನನ್ನೂ ಸೇರಿಸಿಲ್ಲ. ಈಗಾಗಲೇ, ಎಡ್ವರ್ಡ್ ಸೈಯಿದ್ನ ಬರಹದ ಹಿಂದಿರುವ ಮಿಶೆಲ್ ಫೂಕೋನ
‘power-knwoledge’ ನ ವೈಚಾರಿಕ ಆಕೃತಿಯ ದೌರ್ಬಲ್ಯಗಳ ಬಗ್ಗೆ ತೀಕ್ಷ್ಣ ವಿಮರ್ಶೆಗಳು ಬಂದಿವೆ.
ಇಂಥ ಭರಾಟೆಯಲ್ಲಿ ವಸಾಹತೋತ್ತರ ಚಿಂತನೆಯು ತನ್ನ ಮೂಲಸತ್ವವನ್ನೇ ಕಳೆದುಕೊಂಡಿದೆ. ಓರಿಯಂಟಲಿಸಮ್ನ
ಸಂಕಥನಗಳು ಮೂಲತಃ ಸಾಮ್ರಾಜ್ಯಶಾಹಿಯ ಸಂಕಥನಗಳು; ವಸಾಹತುಶಾಹಿ ಆಳ್ವಿಕೆಯ ನ್ಯಾಯ ಸಮರ್ಥನೆಗಳು;
ಹೀಗಾಗಿ ಅವು ಜ್ಞಾನಕ್ಕಿಂತ ಹೆಚ್ಚಾಗಿ power ಗೆ ಸಂಬಂಧಿಸಿವೆ ಎಂಬುದು ಸೈಯಿದ್ನ ಮುಖ್ಯ
ಒಳನೋಟವಾಗಿತ್ತು. ಇದರ ಓರೆಕೋರೆಗಳನ್ನು ವಿಮರ್ಶಿಸುವ ಅವಸರದಲ್ಲಿ ವಸಾಹತೋತ್ತರ ಚಿಂತನೆಯು
ಸಾಮ್ರಾಜ್ಯಶಾಹಿ ಹಾಗೂ ಅದರ power ನ ಚರ್ಚೆಯನ್ನು ಸಂಪೂರ್ಣ ಬದಿಗಿರಿಸಿ ವಸಾಹತೋತ್ತರ ಚಿಂತನೆಯು
ಚಾರಿತ್ರಿಕ, ರಾಜಕೀಯ ಅಂಶಗಳನ್ನು 'ಅರಾಜಕೀಯವಾಗಿ' ಚರ್ಚಿಸಬಹುದಾದ ಅಕಡೆಮಿಕ್ ಸಿದ್ಧಾಂತವಾಗಿ
ಪರಿವರ್ತನೆ ಹೊಂದಿತು. ಬಾಲಗಂಗಾಧರರು ಮಾಡಿರುವುದು ಇದನ್ನೇ. ಅವರು ವಸಾಹತುಶಾಹಿ ಪ್ರಜ್ಞೆಯನ್ನು
ಕೇವಲ ಪ್ರಜ್ಞೆಯಾಗಿ, ಗ್ರಹಿಕೆಯಾಗಿ ಎಷ್ಟು ಅಮೂರ್ತವಾಗಿ ಚರ್ಚಿಸುತ್ತಾರೆಂದರೆ ಅವರ ಯಾವುದೇ
ಲೇಖನದಲ್ಲಿ ಭಾರತದಲ್ಲಿ ಬ್ರಿಟಿಶ್ ವಸಾಹತುಶಾಹಿ ಒಂದು ರಾಜಕೀಯ, ಆರ್ಥಿಕ ವ್ಯವಸ್ಥೆಯೂ ಆಗಿತ್ತು
ಎನ್ನುವ ಸಣ್ಣ ಪ್ರಸ್ತಾಪವೂ ಇಲ್ಲ. ಈ ಕಾರಣದಿಂದಾಗಿಯೇ ಅವರ ವಾದಗಳು ಸಂಪೂರ್ಣವಾಗಿ ಅಚಾರಿತ್ರಿಕ,
ಅರಾಜಕೀಯ ನಿರ್ವಾತದಲ್ಲಿ ನೇತಾಡುತ್ತಿವೆ. ಅವರ ವಾದದ ಪ್ರಕಾರ ಚರಿತ್ರೆ (history) ಕೂಡ
ಕ್ರಿಶ್ಚಿಯನ್ ಥಿಯಾಲಜಿಯಿಂದ ಬಂದ ಪರಿಕಲ್ಪನೆ. ಕ್ರಿಶ್ಚಿಯನ್ ಥಿಯಾಲಜಿ ಪ್ರೇರಿತ history ಗೂ
ಮನುಷ್ಯ ಅನುಭವದ ಮೂಲ ಸತ್ಯವೇ ಆಗಿರುವ ಚರಿತ್ರೆಗೂ ವ್ಯತ್ಯಾಸವಿದೆ ಮತ್ತು ಆ ಚರಿತ್ರೆಯನ್ನು
ಅಲಕ್ಷಿಸಲಾಗದು ಎಂಬ ಅರಿವು ಗಂಗಾಧರರಿಗೆ ಇಲ್ಲ.ಹಾಗಾಗಿ ಅವರ ಥಿಯರಿ ಪಶ್ಚಿಮದ ವಿದ್ವತ್ ವಲಯದಲ್ಲಿ
ಯಾವ ಸಣ್ಣ ಪರಿಣಾಮವನ್ನೂ ಮಾಡಲಿಲ್ಲ. ಭಾರತದ ಸಂದರ್ಭದಲ್ಲಿ ಅದು ವೈಚಾರಿಕವಾಗಿ
ನಿಷ್ಪ್ರಯೋಜಕ.
ನಮ್ಮ ಚರ್ಚೆಗೆ ಮರಳುವುದಾದರೆ ಪಶ್ಚಿಮದ ವಿವರಣೆಗಳು ನಿಜವಾಗಿ ಪಶ್ಚಿಮದ
ಸ್ವವಿವರಣೆಗಳೇ. ಮತ್ತು ಆ ವಿವರಣೆಗಳಲ್ಲಿರುವ 'ರಿಲಿಜನ್', 'ಸೆಕ್ಯುಲರ್' ಈ ಪರಿಕಲ್ಪನೆಗಳು ನಮ್ಮ
ಅನುಭವವನ್ನು ವಿವರಿಸಲಾರವು ಎನ್ನುವ ವಾದವು ಕುತೂಹಲಕಾರಿಯಾಗಿದೆ. ಅದು ನಾವು ಜ್ಞಾನವೆಂದು
ಒಪ್ಪಿಕೊಂಡಿರುವುದನ್ನು ಪ್ರಶ್ನಿಸಲು ಅತ್ಯಂತ ಉಪಯುಕ್ತವಾಗಿದೆ. ಬಾಲಗಂಗಾಧರರನ್ನು ಬಲವಾಗಿ
ಸಮರ್ಥಿಸುವ ವಿವೇಕ್ ಧಾರೇಶ್ವರ ಅವರ ಲೇಖನಗಳಲ್ಲಿ ಇದು ಸ್ಪಷ್ಟವಾಗುತ್ತದೆ. ಆದರೆ ಇಂಥ ಅನೇಕ
ಸಾಧ್ಯತೆಗಳಿದ್ದ ಥಿಯರಿಯನ್ನು ಬಾಲಗಂಗಾಧರ ಹಾಗೂ ಅವರ ಗುಂಪು ಅಸಹ್ಯಗೊಳಿಸಿಬಿಟ್ಟಿದೆ. ಉದಾಹರಣೆಗೆ
ಕುವೆಂಪು ವಿಶ್ವವಿದ್ಯಾನಿಲಯದ ಸ್ಥಳೀಯ ಸಂಸ್ಕೃತಿಗಳ ಅಧ್ಯಯನ ಕೇಂದ್ರದ ಬ್ಲಾಗ್ನಲ್ಲಿರುವ
ಲೇಖನಗಳನ್ನು ನೋಡಬಹುದು. ಬಾಲಗಂಗಾಧರರ ಥಿಯರಿ ಮಡೆಸ್ನಾನವನ್ನು ಬುದ್ಧಿಜೀವಿಗಳ ಸಮಸ್ಯೆಯನ್ನಾಗಿ
ನೋಡಲು, ಮತಾಂತರ ನಿಷೇಧವನ್ನು ಪುರಸ್ಕರಿಸಲು ಉಪಯೋಗವಾಗಿದೆ. ನಾನು ಈ ಹಿಂದೆ ಪ್ರಸ್ತಾಪಮಾಡಿದಂತೆ
ಬಾಲಗಂಗಾಧರರು ಕೊಡುವ ಪಶ್ಚಿಮದ ಲೋಕಗ್ರಹಿಕೆಯ ವಿವರಣೆಯೇ ಏಕಮುಖವಾದದ್ದು. ಅವರ ಕೃತಿಯ ವಿಮರ್ಶೆ
ಬರೆದ ಪಾಶ್ಚಾತ್ಯ ವಿದ್ವಾಂಸರೊಬ್ಬರು ಹೇಳುವಂತೆ,ಒಬ್ಬ ಸಾಮಾನ್ಯ ಶಿಕ್ಷಿತ ವ್ಯಕ್ತಿಗೂ
ಪರಿಚಿತವಿರುವ ಪಶ್ಚಿಮದ ಸ್ಥೂಲ ವಿವರಣೆಯನ್ನು ಬಾಲಗಂಗಾಧರರು ಮತ್ತೆ ಮತ್ತೆ ಲಂಬಿಸಿ, ದೀರ್ಘವಾಗಿ,
ಪುನರಾವರ್ತಿಸುತ್ತಾರೆ. ಕೇವಲ ಕ್ರಿಶ್ಚಿಯನ್ ಥಿಯಾಲಜಿಯ ಪ್ರಭಾವದಲ್ಲಿ ತನ್ನ ಸಮಗ್ರ
ಲೋಕಗ್ರಹಿಕೆಯನ್ನು ನಿರ್ಮಿಸಿಕೊಂಡಿದೆ ಎನ್ನಲಾಗುವ ಪಶ್ಚಿಮವು ಬಾಲಗಂಗಾಧರರ ಅವಸರದ ಕಲ್ಪನೆಯ
ಆಚೆಗೆ ಎಲ್ಲಿಯೂ ಎಂದೂ ಅಸ್ತಿತ್ವದಲ್ಲಿರಲಿಲ್ಲ. ಪೂರ್ವವೂ ಹೇಗೆ ಏಕಶಿಲಾಕೃತಿಯದಲ್ಲವೋ ಪಶ್ಚಿಮವೂ
ಏಕಶಿಲಾಕೃತಿಯದಲ್ಲ; ಅಷ್ಟೇ ಏಕೆ ಸಾಮ್ರಾಜ್ಯಶಾಹಿ ಪಶ್ಚಿಮವೂ ಕೂಡ ಹಾಗಿರಲಿಲ್ಲ.
ಯಾವುದೇ
ಒಂದು ಸಿದ್ಧಾಂತ ಜೀವಂತವಾಗಿ ಉಳಿಯಬೇಕಾದರೆ ಅದು ನಿರಂತರ ವಿಮರ್ಶೆಗೊಳಪಡುತ್ತಿರಬೇಕು. ಮತ್ತು
ಅಂತಹ ಪ್ರಕ್ರಿಯೆಯಲ್ಲಿ ಅದರ ಮೂಲಸ್ವರೂಪ ಬದಲಾಗುತ್ತಾ ಹೋಗುತ್ತದೆ. ಇಲ್ಲವಾದಲ್ಲಿ ಅದೊಂದು
ನಿರ್ಜೀವ ಐಡಿಯಾಲಜಿಯಾಗಿಬಿಡುತ್ತದೆ. ಮಾರ್ಕ್ಸವಾದ ಇದಕ್ಕೊಂದು ಅತ್ಯುತ್ತಮ ಉದಾಹರಣೆಯಾಗಿ ನಮ್ಮ
ಮುಂದಿದೆ ಎಂದು ಜೆ.ಎಸ್.ಸದಾನಂದ ಹೇಳುತ್ತಾರೆ. (ಪ್ರಜಾವಾಣಿ 15-04-2013). ಸಂಶೋಧನೆ
ಹೇಗಿರಬಾರದು ಎನ್ನುವುದಕ್ಕೆ ಈ ಹೇಳಿಕೆ ಒಂದು ಉದಾಹರಣೆಯಾಗಿದೆ. ಇದೇ ಸದಾನಂದರು, 'ಹಿಂದುತ್ವ
ಎಂದರೇನು' ಎನ್ನುವುದು ಇತರರಿಗೆ ಖಚಿತವಾಗಿ ಅರ್ಥವಾಗಿಲ್ಲವೆಂದು ಹೇಳುತ್ತಾರೆ. ಆದರೆ,
ಮಾರ್ಕ್ಸವಾದವೆಂದರೇನು ಮತ್ತು ಅದು ಖಚಿತವಾಗಿ ನಿರ್ಜೀವ ಐಡಿಯಾಲಜಿಯಾಗಿದೆಯೆಂದು, ಅದರ ಅಂತಿಮ
ಮರಣಕ್ಕೆ ಕಾರಣಗಳೇನು ಎಂದು ಬಹಳ ಆತ್ಮವಿಶ್ವಾಸದಿಂದ ಹೇಳುತ್ತಾರೆ. ಇದೇ ರೀತಿ ಆಧುನಿಕತೆ,
ಸೆಕ್ಯುಲರಿಸಂ, ಅಂಬೇಡ್ಕರ್ವಾದಗಳ ಬಗ್ಗೆ ಅಂತಿಮವಾದ ನಿರ್ಣಯಗಳನ್ನು ಈ ಗುಂಪು ಈಗಾಗಲೇ ಕೊಟ್ಟಿದೆ.
ಇಡೀ ಮಾರ್ಕ್ಸವಾದದ (ವಾದಗಳ) ಸಮಗ್ರ ಅಧ್ಯಯನ, ಸಂಶೋಧನೆಯನ್ನು ಮಾಡಿ ಸದಾನಂದರು ಅದರ ಮರಣದ ಬಗ್ಗೆ
ತೀರ್ಮಾನ ಕೊಟ್ಟಿರುವುದು ಆಶ್ಚರ್ಯ. ವಿಶ್ವದ ಸಹಸ್ರಾರು ಚಿಂತಕರು, ಸಂಶೋಧಕರು, ಬರಹಗಾರರು ಇನ್ನೂ
ಮಾರ್ಕ್ಸವಾದದ ಅಧ್ಯಯನ ಮಾಡುತ್ತಿದ್ದಾರೆ; ಮತ್ತು ಅದನ್ನು ಪೂರೈಸಿದಂತೆ ಕಾಣುವುದಿಲ್ಲ.
ಬಾಲಗಂಗಾಧರರ ವಾದಗಳನ್ನು ಒಪ್ಪದೇ ಇದ್ದರೂ ಅವರ ವಿಸ್ತೃತವಾದ ಓದಿನ ಬಗ್ಗೆ ಯಾರಿಗೂ ಸಂಶಯಗಳಿಲ್ಲ.
ಅವರು ಮಾರ್ಕ್ಸನ ಮೂಲಬರಹಗಳನ್ನು ಹಲವಾರು ವರ್ಷಗಳ ಕಾಲ ಚರ್ಚಿಸಿ ಗೆಂಟ್ ವಿಶ್ವವಿದ್ಯಾನಿಲಯದಲ್ಲಿ
ಬೋಧಿಸಿದವರು ಎಂದು ಅವರಿಂದಲೇ ಕೇಳಿದ್ದೇನೆ. ಅವರು ಮಾರ್ಕ್ಸವಾದದ ಬಗ್ಗೆ ವಿಸ್ತೃತವಾಗಿ
ಬರೆದಿದ್ದರೆ ಅದು ನಮಗೆ ಲಭ್ಯವಾಗಿಲ್ಲದಿರುವುದು ಒಂದು ಹಾನಿಯೇ ಸರಿ. ಆದರೆ ಇಂಥ ಯಾವ ಬೌದ್ಧಿಕ
ಸಿದ್ಧತೆಯೂ ಇಲ್ಲದ ಸದಾನಂದರು ಮಾರ್ಕ್ಸ್್ವಾದದ ಮರಣದ ಘೋಷಣೆಯನ್ನು ಮಾಡುವ ಮೂರ್ಖತನ
ಹಾಸ್ಯಾಸ್ಪದವಾಗಿದೆ. ಬಾಲಗಂಗಾಧರರನ್ನು ಅವರ ಗಿಂಡಿಮಾಣಿಗಳಿಂದ ಯಾರೂ
ರಕ್ಷಿಸಲಾರರು!
ನನ್ನ ಮಾತನ್ನು ಕೊನೆಗೊಳಿಸುವ ಮೊದಲು ಡಂಕಿನ್ರ ಪ್ರಬಂಧದ ಹಿನ್ನೆಲೆಯಲ್ಲಿ
ಈಗ ನಡೆದಿರುವ ಒಟ್ಟು ಸಂವಾದದ ಬಗ್ಗೆ ನನ್ನ ಅಭಿಪ್ರಾಯವನ್ನು ಹೀಗೆ ಕ್ರೋಢೀಕರಿಸುತ್ತೇನೆ:
ಸಂಶೋಧನೆಯಾಗಿ ಈ ಪ್ರಬಂಧವು ಈವರೆಗೆ ಕನ್ನಡವಲಯದಲ್ಲಿ ಚರ್ಚೆಗೆ ಬಾರದ ಯಾವುದೇ ಚಾರಿತ್ರಿಕ,
ಆರ್ಕೈವಲ್ ಸಂಗತಿಗಳನ್ನು ಚರ್ಚೆಗೆ ತಂದಿದೆಯೇ? ಇಲ್ಲ. ಯಾವುದೇ ವಚನಗಳ ಸಮರ್ಥನೀಯವಾದ ಅಥವಾ
ಹೊಸದಾದ ಓದನ್ನು ಎದುರಿಗಿಟ್ಟಿದೆಯೇ? ಇಲ್ಲ. ವಚನಗಳನ್ನು ಓದುವ, ಅರ್ಥೈಸುವ ಹೊಸ ವಿಧಾನವೊಂದನ್ನು
ನಮ್ಮೆದುರಿಗೆ ತಂದಿದೆಯೇ? ಇಲ್ಲ. ಹೊಸದಾದ ವೈಚಾರಿಕ ಚೌಕಟ್ಟನ್ನು ಶೋಧಿಸಿದೆಯೇ? ಇಲ್ಲ. ಅದು
ಬಾಲಗಂಗಾಧರರು ಮುಂದಿಟ್ಟಿರುವ ಚೌಕಟ್ಟುಗಳನ್ನು ಪ್ರಶ್ನಾತೀತವೆಂದು ಒಪ್ಪಿಕೊಂಡು ಯಾವುದೇ
ಪರೀಕ್ಷೆಗೆ ಒಳಪಡಿಸದೇ ಅವುಗಳನ್ನು ವಚನಗಳ ಬಗ್ಗೆ ಒಂದು ಸರಳವೂ, ಅಸೂಕ್ಷ್ಮವೂ ಆದ ಪೂರ್ವ
ನಿರ್ಧಾರಿತವಾದ ವಾದವನ್ನು ಇಟ್ಟು ಸಮರ್ಥಿಸುತ್ತದೆ. ಅದೇನೆಂದರೆ, ವಚನಗಳು ಜಾತಿವ್ಯವಸ್ಥೆಯ ಬಗ್ಗೆ
ವಿಮರ್ಶೆಯನ್ನು (critique) ಅಭಿವ್ಯಕ್ತಿಸಿವೆ ಎನ್ನುವುದನ್ನು ಕನ್ನಡದ ವಚನ scholarship,
ಲಿಂಗಾಯತ/ವೀರಶೈವ ಸಂಸ್ಥೆಗಳು, ಬ್ರಿಟಿಷ್ ಓರಿಯಂಟಲಿಸ್ಟ್ ವ್ಯಾಖ್ಯಾನಗಳು, ಶಿಕ್ಷಿತ ಆಧುನಿಕ
ವೀರಶೈವ ಸಮುದಾಯ ಹಾಗೂ ಬಹುಮಟ್ಟಿಗೆ ಸಮಾಜವಿಜ್ಞಾನಗಳು (?) ಪ್ರತಿಪಾದಿಸಿವೆ. (ಇವೆಲ್ಲವುಗಳನ್ನು
ಒಟ್ಟಿಗೇ ಪ್ರಸ್ತಾಪಿಸಲು ಕಾರಣವೆಂದರೆ ಡಂಕಿನ್ ರು ಬಳಸುವ ಚೌಕಟ್ಟಿನ ಪ್ರಕಾರ ಇವುಗಳಲ್ಲಿ ಮೂಲಭೂತ
ಭಿನ್ನತೆಗಳು ಇಲ್ಲ; ಏಕೆಂದರೆ ಅವೆಲ್ಲವೂ ಮೂಲತಃ ಕ್ರಿಶ್ಚಿಯನ್ ಥಿಯಾಲಜಿಯ ವೈಚಾರಿಕ ಮಾದರಿಯಿಂದ
ರೂಪಿತವಾಗಿರುವವು. ಇವುಗಳು ವಚನಗಳು ಹಾಗೂ ಜಾತಿ ವ್ಯವಸ್ಥೆಯ ಬಗ್ಗೆ ಹೇಳುವ ಕತೆಯನ್ನು
stereo-story ಡಂಕಿನ್ ವಚನಗಳ ತಮ್ಮ ಓದು (?!) ಮತ್ತು ಸಂಖ್ಯಾಶಾಸ್ತ್ರೀಯ ವಿಶ್ಲೇಷಣೆಯಿಂದ
ತಿರಸ್ಕರಿಸುತ್ತಾರೆ. ಈ ಸಂಶೋಧನೆಯ ತೀರ್ಮಾನವೆಂದರೆ ವಚನಕಾರರು ಜಾತಿವ್ಯವಸ್ಥೆಯ ಬಗ್ಗೆ ಏನನ್ನೂ
ಹೇಳುವುದಿಲ್ಲ. ಏಕೆಂದರೆ ಅಂಥಹದು ಏನೂ ಇಲ್ಲ. ಅವರು ಕೇವಲ ಆಧ್ಯಾತ್ಮಿಕವಾದ ಚೌಕಟ್ಟಿನಲ್ಲಿ ಜಾತಿಯ
ಬಗ್ಗೆ ಅಲ್ಲಲ್ಲಿ ಹೇಳಿಕೊಂಡಿದ್ದಾರೆ. ಈ ಪ್ರಕಾರದ ಸಂಶೋಧನೆಯ ಬಗ್ಗೆ ಕನ್ನಡ ವಿದ್ವಾಂಸರು
ಸಾರ್ವಜನಿಕ ಚರ್ಚೆ ನಡೆಸಬೇಕೆ? ನನ್ನ ಅಭಿಪ್ರಾಯದಲ್ಲಿ ಇದು ಅವಶ್ಯಕವಲ್ಲ. ಈ ಸಂಶೋಧನೆಯ
ಉತ್ಪಾದನೆಗೆ ಕಾರಣವಾದ ಚೌಕಟ್ಟುಗಳನ್ನು ವಿಶ್ಲೇಷಿಸಬೇಕೆ?
ಈ ಪ್ರಶ್ನೆಗೆ ನನ್ನ ಉತ್ತರ
ಹೀಗಿದೆ. ಬಾಲಗಂಗಾಧರರ ಒಂದು ವಾದ ಹೀಗಿದೆ. ತನ್ನ ಓರಿಯಂಟಲಿಸ್ಟ್ ಚೌಕಟ್ಟುಗಳ ಮೂಲಕ ಪಶ್ಚಿಮವು
ಹಿಂದೂ ರಿಲಿಜನ್ ಬಗ್ಗೆ, ಸಂಪ್ರದಾಯಗಳ ಬಗ್ಗೆ ಎತ್ತುವ ಪ್ರಶ್ನೆಗಳ ಬಗ್ಗೆ ನಾವು ಉತ್ತರಗಳನ್ನು
ಕೊಡಬೇಕೆ? ಇಲ್ಲ. ಬದಲಾಗಿ ಆ ಪ್ರಶ್ನೆಗಳನ್ನು ಪಶ್ಚಿಮವು ಯಾಕೆ ಕೇಳಿದೆ ಎನ್ನುವುದರ ಮೂಲಕ ಪಶ್ಚಿಮ
ನಾಗರಿಕತೆಯೆನ್ನೇ ಅರ್ಥಮಾಡಿಕೊಳ್ಳಬಹುದಾಗಿದೆ. ಏಕೆಂದರೆ, (1986ರ ತನ್ನ ಕೃತಿಯಲ್ಲಿ ಎಡ್ವರ್ಡ್
ಸೈಯೀದ್ ವಿವರಿಸಿದ ಹಾಗೆ) ಪಶ್ಚಿಮವು ಪೂರ್ವದ (ಭಾರತ ಸೇರಿದಂತೆ) ಬಗೆಗಿನ ತನ್ನ ಅನುಭವವನ್ನು
ವಿವರಿಸುತ್ತದೆಯೇ ಹೊರತು ಪೂರ್ವವನ್ನಲ್ಲ. ಬಾಲಗಂಗಾಧರರ ವಾದವನ್ನು ಅವರ ಇಡೀ ವೈಚಾರಿಕ ಯೋಜನೆಯ
ಬಗ್ಗೆ ವಿಸ್ತರಿಸಿ ನಾನು ಅನ್ವಯಿಸಬಯಸುತ್ತೇನೆ. ಡಂಕಿನ್ರು ವಚನಗಳ ಬಗ್ಗೆ, ಬಾಲಗಂಗಾಧರರು
ಸೆಕ್ಯೂಲರಿಸಂ ಬಗ್ಗೆ, ರಿಲಿಜನ್ ಬಗ್ಗೆ, ಈ ಗುಂಪಿನ ಇತರರು ಬೌದ್ಧಧರ್ಮದ ಬಗ್ಗೆ, ಭಕ್ತಿ
ಚಳುವಳಿಗಳ ಬಗ್ಗೆ, ಗಾಂಧೀಜಿಯ ಬಗ್ಗೆ ಎತ್ತಿರುವ ಪ್ರಶ್ನೆಗಳನ್ನು ನಾವು ಉತ್ತರಿಸಬೇಕೆ? ಇಲ್ಲ. ಈ
ಎಲ್ಲಾ ಸಂಶೋಧನೆಗಳ ಮೂಲಕ ಅವರು ಕಟ್ಟಿಕೊಡುತ್ತಿರುವ ವಿವರಣೆಗಳು ಪರಸ್ಪರ ಸಂಬಂಧಿತವಾಗಿವೆ.
ಅವುಗಳನ್ನು ಸರಿಯೆಂದು ಒಪ್ಪುವುದಾದರೆ ಅದರಿಂದ ಮೂಡುವ ಭಾರತೀಯ ಚರಿತ್ರೆಯ ತಿಳುವಳಿಕೆ
ಹೀಗಿರುತ್ತದೆ. ಆಧುನಿಕ ಕಾಲದ ಬರಹಗಾರರು, ಚಿಂತಕರು ಹಾಗೂ ಬಹುಪಾಲು ಸಮಾಜವಿಜ್ಞಾನಿಗಳು
ಅಂದುಕೊಂಡಂತೆ ಬೌದ್ಧಧರ್ಮವಾಗಲೀ, ವಚನಕಾರರಾಗಲಿ ಬ್ರಾಹ್ಮಣ/ವೈದಿಕ ಪುರೋಹಿತಶಾಹಿ, ಜಾತಿ
ವ್ಯವಸ್ಥೆ ಇವುಗಳನ್ನು ವಿರೋಧಿಸಲಿಲ್ಲ. ಅವರು ಈ ಬಗೆಯ 'ಸಾಮಾಜಿಕ' ಚೌಕಟ್ಟುಗಳನ್ನು
ಹೊಂದಿರಲಿಲ್ಲ. ಅವರದು ಕೇವಲ ಆಧ್ಯಾತ್ಮಿಕವಾದ ಪರಂಪರೆ. ಮುಖ್ಯವಾಗಿ ಪಶ್ಚಿಮದ ಪ್ರತಿನಿಧಿಗಳು
ಕ್ರಿಶ್ಚಿಯನ್ ಥಿಯಾಲಜಿಯ ಪ್ರಭಾವದಲ್ಲಿ caste system ಅನ್ನು ಅನೈತಿಕವೆಂದು, ಅಸಮಾನತೆಯ
ಆಧಾರವೆಂದು, ಅಮಾನುಷವೆಂದು ವಿವರಿಸಿದ್ದಾರೆ. ಇದು ಪಶ್ಚಿಮ ನಾಗರೀಕತೆಯ ಲೋಕಗ್ರಹಿಕೆಯನ್ನು
ವಿವರಿಸುತ್ತದೆಯೇ ಹೊರತು ಇಲ್ಲಿಯ ಸಮಾಜದ ವಾಸ್ತವವನ್ನಲ್ಲ. ಈ ಲೋಕಗ್ರಹಿಕೆಯನ್ನೇ
ತಮ್ಮದಾಗಿಸಿಕೊಂಡ (ವಸಾಹತುಶಾಹಿಯ ಮೂಲಕ)ನಮ್ಮ ಆಧುನಿಕ ಚಿಂತಕರು ಕ್ರಿಶ್ಚಿಯನ್ ಥಿಯಾಲಜಿ ಪ್ರೇರಿತ
ವಸಾಹತುಶಾಹಿ ಪ್ರಜ್ಞೆಯನ್ನು ಅಭಿವ್ಯಕ್ತಿಸುತ್ತಿದ್ದಾರೆ. ಇದು ಇಲ್ಲಿಗೆ ನಿಲ್ಲುವುದಿಲ್ಲ.
ಜಾತಿವ್ಯವಸ್ಥೆಯು ಅನೈತಿಕ, ಅಸಮಾನ ಎನ್ನುವುದಕ್ಕೆ ಆಧಾರವಿಲ್ಲ. ನಮ್ಮಲ್ಲಿ ರಿಲಿಜನ್ ಇಲ್ಲ.
ಸಂಪ್ರದಾಯಗಳು ಇವೆ. ಅವುಗಳು ಯಾಕಿವೆ ಎಂದರೆ ಅವನ್ನು ನಮಗೆ ನಮ್ಮ ಹಿರಿಯರು ಬಿಟ್ಟುಹೋಗಿದ್ದಾರೆ.
ಇದರ ಹೊರತಾದ ಯಾವ ಸಮರ್ಥನೆಯನ್ನೂ ನಾವು ಕೊಡಬೇಕಾಗಿಲ್ಲ.
ಬಾಲಗಂಗಾಧರ ಚೌಕಟ್ಟನ್ನು
ವಿಸ್ತರಿಸಿಕೊಂಡು ಈ ಅವರ ವಾದಗಳನ್ನೂ, ತೀರ್ಮಾನಗಳನ್ನೂ ವಿಶ್ಲೇಷಿಸುವಾಗ ನಾವು ಅವರು ಎತ್ತುವ
ಪ್ರಶ್ನೆಗಳನ್ನು ಉತ್ತರಿಸಬೇಕಾಗಿಲ್ಲ. ಅವರ ವಾದಗಳು ವಿವರಣೆಗಳು ಅವರ ಸಂದರ್ಭವನ್ನು
ವಿವರಿಸುತ್ತವೆ. ವಾಸ್ತವವನ್ನಲ್ಲ. ಜಾತಿ ವ್ಯವಸ್ಥೆ ಇಲ್ಲ. ಸಂಪ್ರದಾಯಗಳು ಇವೆ, ಭಾರತದಲ್ಲಿ
ಪುರೋಹಿತಶಾಹಿ, ಜಾತಿವ್ಯವಸ್ಥೆಗೆ ವಿರೋಧವಿರಲಿಲ್ಲ - ಈ ತೀರ್ಮಾನಗಳು ಯಾವ ಸಂದರ್ಭದ ಬೌದ್ಧಿಕ
ಅವಶ್ಯಕತೆಗಳನ್ನು ಪೂರೈಸುತ್ತವೆ? ಅವರ ವಾದಗಳು ಒಟ್ಟಾರೆಯಾಗಿ ಸೆಮೆಟಿಕ್ ರಿಲಿಜನ್ಗಳ ಬಗ್ಗೆ,
ಕ್ರಿಶ್ಚಿಯನ್ ಥಿಯಾಲಜಿಯ ಬಗ್ಗೆ ಹಾಗೂ ಜಾತಿ ವ್ಯವಸ್ಥೆ ಇಲ್ಲದ ಭಾರತದ ಚರಿತ್ರೆಯ ಪರಿಕಲ್ಪನೆ ಯಾವ
ಸಂದರ್ಭದ ಅಪೇಕ್ಷೆ ಹಾಗೂ ಸ್ವ-ವಿವರಣೆಯಾಗಿದೆ? ಬಾಲಗಂಗಾಧರರು ಸ್ಪಷ್ಟಪಡಿಸುವಂತೆ ಮತ್ತು
ನಿರಂತರವಾಗಿ ಅವರು internet ಮೂಲಕ ನಡೆಸುತ್ತಿರುವ ಚರ್ಚೆಗಳು ಸ್ಪಷ್ಟಪಡಿಸುವ ಹಾಗೆ ಅವರ
ಸಂಶೋಧನಾ ಯೋಜನೆ ಬಲಪಂಥೀಯ ಅನಿವಾಸಿ ಭಾರತೀಯ ಸಮುದಾಯದ ಬೌದ್ಧಿಕ ಅವಶ್ಯಕತೆಯನ್ನು ಪೂರೈಸುತ್ತದೆ.
ಈ ಸಮುದಾಯದ ಸ್ವ-ವಿವರಣೆಯಾಗಿ, ಅದು ಭಾರತವನ್ನು ಕಲ್ಪಿಸಿಕೊಳ್ಳಲು ಇಚ್ಛಿಸುವ ಮಾದರಿಯಾಗಿ ಅವರ
ಸಂಶೋಧನಾ ಯೋಜನೆಯನ್ನು ನಾವು ನೋಡಬೇಕಾಗಿದೆ. ಅವರ ಜೊತೆಗೆ ನಾವು ಜಾತಿವ್ಯವಸ್ಥೆ ಇದೆಯೆಂದು
ಹೋರಾಡುವುದು ಮೂರ್ಖತನವಾಗುತ್ತದೆ. ಬದಲಾಗಿ ಇಂಥ ವೈಚಾರಿಕ ಚೌಕಟ್ಟುಗಳು ಈ ಸಮುದಾಯಕ್ಕೆ ಯಾಕೆ
ಅಪ್ಯಾಯಮಾನವಾಗಿ ಕಾಣುತ್ತವೆಯೆನ್ನುವುದನ್ನು ಕೇಳಿಕೊಳ್ಳಬೇಕು. ಬಾಲಗಂಗಾಧರ ಅವರ ವಾದಗಳು
ವೈಜ್ಞಾನಿಕವಲ್ಲ; ಅವು ಯಾವುದೇ ಚಾರಿತ್ರಿಕ ಸತ್ಯವನ್ನು ವಿವರಿಸುವುದಿಲ್ಲ. ಬದಲಾಗಿ ಕ್ರಿಶ್ಚಿಯನ್
ಥಿಯಾಲಜಿಯ ಬಗೆಗಿನ ಅಸಂಭಾವ್ಯವಾದ ಒಂದು meta-narrative ಮೂಲಕ ವಚನ, ಜಾತಿ, ಸೆಕ್ಯೂಲರಿಸಂ,
ಇವೆಲ್ಲವನ್ನೂ ನಾನು ಹೇಳಿದ ಸಮುದಾಯದ ಅಪೇಕ್ಷೆಗಳಿಗೆ ಒಗ್ಗುವಂತೆ ವಿವರಿಸುತ್ತವೆ. ಸದಾನಂದರು
ಹೇಳುತ್ತಿರುವುದು ಈ 'ಆಂತರ್ಯವನ್ನು' ಯಾರೂ ಪರೀಕ್ಷಿಸಬಾರದು ಅಂತ. ನಾನು ಹೇಳುತ್ತಿರುವುದು
ಬಾಲಗಂಗಾಧರ ಬಲಪಂಥೀಯ ಒಳಸಂಚಿನ ಆಯುಧವಾಗಿದ್ದಾರೆ ಎಂದಲ್ಲ, ಖಂಡಿತ ಅಲ್ಲ. ಅವರದ್ದೇ ಚೌಕಟ್ಟು
ಹಾಗೂ ನುಡಿಗಟ್ಟಿನಲ್ಲಿ ನಾನು ಹೇಳಿದ ಹಾಗೆ ನಮ್ಮ ಸಮಕಾಲೀನ ಬಲಪಂಥೀಯ ಅನಿವಾಸಿ ಭಾರತೀಯ ಸಮುದಾಯದ
ಬೌದ್ಧಿಕ ಅವಶ್ಯಕತೆಗಳನ್ನು ಅವರ ಚಿಂತನೆ ಪೂರೈಸಿಕೊಡುತ್ತದೆ. ಇದರಲ್ಲಿ ಮೋಸದ ಪ್ರಶ್ನೆಯೇ ಇಲ್ಲ.
ವಿಕಿಪೀಡಿಯಾದಲ್ಲಿ ಲಭ್ಯವಿರುವ ಮಾಹಿತಿಯಲ್ಲಿ ನಮೂದಿತವಾಗಿರುವಂತೆ ಅವರು ವಿಶ್ವ ಹಿಂದೂ
ಪರಿಷತ್ತಿನ ಅಂಗಸಂಸ್ಥೆಗಳಾದ Educators’ Society for Heritage of India(ESHI), Hindu
Students Council (HSC) – - ಇವುಗಳೊಂದಿಗೆ ವೇದಿಕೆ ಹಂಚಿಕೊಂಡಿರುವ ಬುದ್ಧಿಜೀವಿಯಾಗಿದ್ದಾರೆ.
Google ಮೂಲಕ ಯಾರಾದರೂ access ಮಾಡಬಹುದಾದಂತೆ ಅವರು India Rakshak, consortium of
websites ಎನ್ನುವ ತಾಣದಲ್ಲಿ ಅತ್ಯಂತ ಸೌಹಾರ್ದಯುತವಾಗಿ ಈ ಸಮುದಾಯದ ಸದಸ್ಯರೊಂದಿಗೆ ಚರ್ಚೆ
ಮಾಡಿದ್ದಾರೆ. ಈ ಸಮುದಾಯದ ಸದಸ್ಯರು ಬಾಲಗಂಗಾಧರರ ಪತ್ರಗಳನ್ನು ಅಂದರೆ ಸುದೀರ್ಘe-comments
ಗಳಿಗೆ ಮೆಚ್ಚುಗೆ ಸೂಚಿಸಿ ಆನಂತರ ಮುಸ್ಲಿಮರ ವಿರುದ್ಧ ತಮ್ಮ ಪೂರ್ವಗ್ರಹಗಳನ್ನು
ಕಾರಿಕೊಳ್ಳುತ್ತಾರೆ. ಶತಾವಧಾನಿ ಆರ್ ಗಣೇಶ್ ಅವರೊಂದಿಗೆ ನಡೆಸುವ ಸಂದರ್ಶನದಲ್ಲಿ (ಇದನ್ನು
internet ನಲ್ಲಿ ನೋಡಬಹುದು) ವಿಶ್ವಹಿಂದೂ ಪರಿಷತ್ ಹಾಗೂ ಇತರ ಬಲಪಂಥೀಯ ಸಂಸ್ಥೆಗಳ ನಾಯಕರುಗಳೀಗೆ
ನೀವೂ ನಿಮ್ಮದೇ ಆದ ಬುದ್ಧಿಜೀವಿಗಳನ್ನು ಹೊಂದಿರಬೇಕಲ್ಲವೇ ಎಂದು ಕೇಳಿದ್ದನ್ನು ಮತ್ತು ಅವರು ನಮಗೆ
ಬುದ್ಧಿಜೀವಿಗಳು ಅವಶ್ಯಕವಲ್ಲ ಎಂದಿದ್ದನ್ನು ಚರ್ಚಿಸುತ್ತಾರೆ. ಅಲ್ಲದೇ ಈ ಹಿಂದೆ ಪ್ರಸ್ತಾಪಿಸಿದ
ತಾಣದಲ್ಲಿ ಭಗವದ್ಗೀತೆಯ 'ಯದಾಯದಾನಿ' ಭಾಗವು ನೀಡಿದ ದಿವ್ಯ ಅನುಭವದ ಬಗ್ಗೆ ಭಾವುಕರಾಗಿ
ಬರೆಯುತ್ತಾರೆ. ಆದರೆ, ಕನ್ನಡ ಬುದ್ಧಿಜೀವಿಗಳ ಬಗ್ಗೆ, ಭಾರತೀಯ ಬುದ್ಧಿಜೀವಿಗಳ ಬಗ್ಗೆ ಅನಾಗರೀಕ
ಅಶಿಕ್ಷಿತರ ಹಾಗೆ ರೇಗಾಡುತ್ತಾರೆ. ಇರಲಿ. ಈ ವಿವರಗಳ ಉದ್ದೇಶವೆಂದರೆ ಅವರು ಬಲಪಂಥೀಯರೆಂದು
ಹೇಳುವುದಕ್ಕಲ್ಲ. ಆದರೆ ಅವರ ಚಿಂತನೆ ಹಾಗೂ ಬರಹಗಳೂ ಬಲಪಂಥೀಯ ಅನಿವಾಸಿ ಭಾರತೀಯ ಸಮುದಾಯದ
ಬೌದ್ಧಿಕ ಅವಶ್ಯಕತೆಗಳನ್ನು ಪೂರೈಸುತ್ತದೆ ಎನ್ನುವ ನನ್ನ ವಾದದ ಸಮರ್ಥನೆಗಾಗಿ ಇವುಗಳನ್ನು
ಕೊಟ್ಟಿದ್ದೇನೆ. ಇದರ ಬಗ್ಗೆ ಬಾಲಗಂಗಾಧರರಿಗೆ ಸ್ಪಷ್ಟತೆ ಇದೆ. ಸಂಕಷ್ಟವಿರುವುದು ಕನ್ನಡ
ಬುದ್ಧಿಜೀವಿಗಳ ನಡುವೆಯೇ ಸಂಬಳಪಡೆಯಬೇಕಾದ ಅವರ ಗಿಂಡಿಮಾಣಿಗಳಿಗೆ. ಇಂಥ ಒಂದು ಸಂಶೋಧನಾ ಯೋಜನೆ,
ಅದರ ಹಿಂದಿನ ವೈಚಾರಿಕತೆಯ ರಾಜಕೀಯದ ಬಗ್ಗೆ ನನಗೆ ಕಾಳಜಿಯಿದೆ. ಇಲ್ಲದಿದ್ದರೆ ಅವುಗಳ
ಅಪ್ರಬುದ್ಧತೆಯ ಬಗ್ಗೆ ಇಷ್ಟು ದೀರ್ಘವಾಗಿ ಬರೆಯುತ್ತಿರಲಿಲ್ಲ. ಬಾಲಗಂಗಾಧರರ ಒಟ್ಟು ಬರಹದ
ತಾತ್ವಿಕ ಸಮಸ್ಯೆಗಳ ಬಗ್ಗೆ ವಿವರವಾಗಿ ಬೇರೆಡೆ ಚರ್ಚಿಸುತ್ತೇನೆ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ