ಡಾ. ಚಕ್ಕೆರೆ ಶಿವಶಂಕರ್
ಸೋಮನ ಕುಣಿತವು ಶಕ್ತಿ ಸಂಪ್ರದಾಯಕ್ಕೆ ಸೇರಿದ ಬಹು ರಂಜನೀಯವಾದ ಮುಖವಾಡದ ಕುಣಿತ. ಸಾಮಾನ್ಯವಾಗಿ ಸೋಮನ ಮುಖವಾಡಗಳನ್ನು ದೇವ ಬೂತಾಳೆ ಇಲ್ಲವೆ ರಕ್ತ ಬೂತಾಳೆ ಮರದಿಂದ ತಯಾರಿಸುತ್ತಾರೆ. ಹೀಗೆ ತಯಾರಿಸುವಾಗ ನಿರ್ದಿಷ್ಟ ಧಾರ್ಮಿಕ ವಿಧಿ ವಿಧಾನಗಳನ್ನು ಅನುಸರಿಸುತ್ತಾರೆ.
ಅಗಲವಾದ ಹಣೆ, ವಿಶಾಲವಾದ ಕಿವಿ ಕಣ್ಣುಗಳು, ದೊಡ್ಡ ಮೂಗು ಇರುವಂತೆ ಮುಖವಾಡವನ್ನು ಕೆತ್ತಿ ನಯಗೊಳಿಸುತ್ತಾರೆ. ಮನುಷ್ಯನ ತಲೆಬುರುಡೆಗಿಂತ ಸಾಕಷ್ಟು ದೊಡ್ಡದಿರುವ ಮುಖವಾಡದ ಹಿಂಭಾಗಕ್ಕೆ ಬಿದಿರಿನ ಬೆತ್ತವನ್ನು ಕಮಾನಿನ ಆಕೃತಿಯಲ್ಲಿ ಬಗ್ಗಿಸಿ `ಬಂಗ'ವನ್ನು ರಚಿಸುತ್ತಾರೆ. ಪ್ರಭಾವಳಿಯಂತೆ ಕಾಣಲು ಬಣ್ಣಬಣ್ಣದ ಬಟ್ಟೆಗಳಿಂದ ಅಲಂಕರಿಸುತ್ತಾರೆ. ಗ್ರಾಮದೇವತೆಗೆ ಹರಕೆಯಾಗಿ ಬಂದ ವಿವಿಧ ಬಣ್ಣಗಳ ಸೀರೆಗಳನ್ನು ಕಮಾನಿನ ಆಕೃತಿಯ ಪ್ರಭಾವಳಿಯಂತಿರುವ ಬಂಗದಿಂದ ಕೆಳಕ್ಕೆ ಇಳಿಬಿಡುತ್ತಾರೆ. ಸೋಮನ ಮುಖವಾಡದೊಳಗೆ ತಲೆಯನ್ನು ತೂರಿಸಿ ಹೊತ್ತು ಕುಣಿಯುವ ಕಲಾವಿದನಿಗೆ ಹೊರಗಿನ ಪರಿಸರ ಕಾಣಲು ಅನುಕೂಲವಾಗುವಂತೆ ಮುಖವಾಡದ ಮೂಗಿನ ಹೊಳ್ಳೆಗಳಿಗೂ ಹೊತ್ತು ಕುಣಿಯುವ ಕಲಾವಿದನ ಕಣ್ಣಿಗೂ ನೇರ ಹೊಂದಿಕೆಯಾಗುವಂಥ ದೃಷ್ಟಿಗೋಚರ ವ್ಯವಸ್ಥೆಯನ್ನು ಕಲ್ಪಿಸಿರುತ್ತಾರೆ. ಮುಖವಾಡದ ರೂಪಗಳು ಭಯ-ಭಕ್ತಿಗಳ ಪ್ರತೀಕವಾಗಿರುವಂತೆ ಕೆಂಪು, ಹಳದಿ, ಕಪ್ಪು ಬಣ್ಣಗಳನ್ನು ಬಳಿಯುತ್ತಾರೆ.
ಸೋಮಗಳನ್ನು ಗ್ರಾಮದೇವತೆಯ ಬಂಟರು, ಅಂಗರಕ್ಷಕರು ಎಂದು ಗ್ರಾಮೀಣ ಜನ ಸಮುದಾಯ ನಂಬಿದೆ. ಸಾಮಾನ್ಯವಾಗಿ ಒಂದು ಊರಿನ ಗ್ರಾಮದೇವತೆಗೆ ಎರಡು ಸೋಮಗಳಿರುತ್ತವೆ. ಒಂದು ಹಳದಿ ಸೋಮನಾದರೆ, ಮತ್ತೊಂದು ಕೆಂಪು ಸೋಮ. ಹಳದಿ ಬಣ್ಣದ ಸೋಮನನ್ನು ಕೆಂಚರಾಯ ಇಲ್ಲವೆ ಈರಣ್ಣನೆಂದು, ಕೆಂಪು ಸೋಮನನ್ನು ಭೂತರಾಯನೆಂದು ಕರೆಯುತ್ತಾರೆ. ಅಪರೂಪಕ್ಕೆ ಕಪ್ಪು ಬಣ್ಣದ ಸೋಮನೂ ಇರುವುದುಂಟು. ಸೋಮಗಳ ಬಣ್ಣಗಳೇ ಅವುಗಳ ಸ್ವರೂಪವನ್ನು ತಿಳಿಸಿಕೊಡುತ್ತವೆ. ಕೆಂಚರಾಯ ಸಾತ್ವಿಕ ಮೂರ್ತಿ. ಹಣೆಗೆ ನಾಮ ಇಲ್ಲವೆ ವಿಭೂತಿಯಷ್ಟೇ ಆತನ ತೊಡಿಗೆ. ಆದರೆ ಭೂತರಾಯ ರೌದ್ರ ಮೂರ್ತಿ. ಹಣೆಗೆ ನಾಮ, ಕೋರೆಹಲ್ಲು, ಉದ್ದನೆಯ ಕೊಂಕುಮೀಸೆ, ದಪ್ಪ ಕಣ್ಣು ಹಾಗೂ ಹುಬ್ಬುಗಳಿದ್ದು, ಗಲ್ಲದ ಮೇಲೆ ಚಿಕ್ಕ ಚುಕ್ಕಿ ಚಿತ್ತಾರಗಳಿರುತ್ತವೆ.
ಸೋಮಗಳನ್ನು ಹೊತ್ತು ಕುಣಿಯುವವರು ಸೊಂಟಕ್ಕೆ ಹರಕೆಯ ಸೀರೆಯುಟ್ಟು, ನೆತ್ತಿಗೂ ಹರಕೆಯ ಸೀರೆಯನ್ನೇ ಸಿಂಬಿ ಸುತ್ತಿಕೊಳ್ಳುತ್ತಾರೆ. ಕೊರಳಿಗೆ ದೇವರ ತಾಳಿ ಧರಿಸಿರುತ್ತಾರೆ. ಪ್ರಭಾವಳಿಗೆ ಇಳಿಬಿಟ್ಟ ವಿವಿಧ ಬಣ್ಣದ ಸೀರೆಗಳು ಸೋಮನನ್ನು ಹೊತ್ತವನ ಕಾಲುಗಳವರೆಗೆ ಎರಡೂ ಭುಜಗಳ ಒಕ್ಕಳಲ್ಲಿ ಇಳಿಬಿದ್ದಿರುತ್ತವೆ. ಕಾಲಿಗೆ ಗೆಜ್ಜೆ, ಕೈಗಳಿಗೆ ಬೆಳ್ಳಿ ಕಡಗ, ಒಂದು ಕೈಯಲ್ಲಿ ಬೆಳ್ಳಿ ಕಟ್ಟಿನ ನೀಳವಾದ ಬೆತ್ತವನ್ನು ಹಿಡಿದು ಕುಣಿಯುತ್ತಾರೆ. ಹರೆ, ದೋಣು, ತಮಟೆ, ನಗಾರಿ, ಮುಖವೀಣೆಗಳ ಗತ್ತು ಹಾಗೂ ಹೊಗಳಿಕೆ ಪದಗಳ ಹಿನ್ನೆಲೆಯಲ್ಲಿ ಹಳದಿ-ಕೆಂಪು ಸೋಮಗಳು ಗೆಜ್ಜೆ ಹಾಕುತ್ತಾ ಅಭಿನಯಪೂರ್ವಕವಾಗಿ ಕುಣಿಯಲಾರಂಭಿಸುತ್ತವೆ. ಸೋಮನ ಕುಣಿತದ ಶೈಲಿಯೇ ವಿಶಿಷ್ಟವಾದುದು. ಮುಖವಾಡಗಳ ನೋಟವು ರುದ್ರ ಗಂಭೀರ. ಪದಗತಿಗೆ ಅನುಗುಣವಾಗಿ ಕುಣಿಯುವ ಕುಣಿತವಂತೂ ಅತ್ಯಂತ ಆಕರ್ಷಕ.
ಸೋಮನ ಕುಣಿತವು ಮಂಡ್ಯ, ತುಮಕೂರು, ಹಾಸನ, ಮೈಸೂರು, ಬೆಂಗಳೂರು ಗ್ರಾಮಾಂತರ ಮತ್ತು ಚಿಕ್ಕಮಗಳೂರು ಜಿಲ್ಲೆಗಳಲ್ಲಿ ವಿಶೇಷವಾಗಿ ಕಂಡುಬರುತ್ತದೆ.
1 ಕಾಮೆಂಟ್:
ಮಾನ್ಯರೇ, ಇದೊಂದು ಜನಪದ ಕಲೆ ಈ ಕಲೆ ನೀವು ತಿಳಿಸಿರುವ ಜಿಲ್ಲೆಗಳಲ್ಲದೆ ತುಮಕೂರು ಜಿಲ್ಲೆಯಲ್ಲಿಯೂ ಕಂಡುಬರುತ್ತದೆ. ಬಹುತೇಕ ಈ ಕಲೆ ಊರ ಹಬ್ಬಗಳಲ್ಲಿ ನಂದಿಕೋಲಿನ ಕುಣಿತದ ಜೊತೆಗೆ ಸೋಮನ ಕುಣಿತವೂ ಇರುತ್ತದೆ. ಇದರೊಂದಿಗೆ ತಮಟೆ ವಾದನವೂ ವಿಶೇಷವಾಗಿರುತ್ತದೆ. ತುಮಕೂರು ಜಿಲ್ಲೆಗಳಲ್ಲಿ ಇದನ್ನು ಕರಿಯ-ಕೆಂಪ, ಕರಿಯಪ್ಪ-ಕೆಂಚಪ್ಪ ಎಂತಲೂ ಕರೆಯುತ್ತಾರೆ. ಮಕ್ಕಳಿಗೂ ಇದೇ ಹೆಸರನ್ನು ಇಡುತ್ತಾರೆ. ಆದರೆ ಈ ಕಲೆ ಈಗೀಗ ನಶಿಸುತ್ತಿದೆ ಎಂದೇ ಹೇಳಬೇಕು. ಯುವ ಪೀಳಿಗೆ ಆ ಕಲೆಯನ್ನು ಕಲಿಯುವ ಬಗ್ಗೆ ಉಳಿಸಿ ಬೆಳೆಸುವ ಬಗ್ಗೆ ಗಮನಹರಿಸುತ್ತಿಲ್ಲಾ. ಈಗಲೂ ವಯಸ್ಸಾದವರು ಗ್ರಾಮದೇವತೆ ಹಬ್ಬಗಳಲ್ಲಿ ಉಮ್ಮಸ್ಸಿನಿಂದ ಕುಣಿಯುತ್ತಾರೆ. ನಂತರ ಈ ಕಲೆ ಉಳಿಯುವಂತೆ ಕಾಣುವುದಿಲ್ಲ. ಬಹುತೇಕ ಗ್ರಾಮಗಳಲ್ಲಿ ಹಿಂದುಳಿದ ವರ್ಗದವರು ತಮಟೆ ಬಾರಿಸುತ್ತಿದ್ದರು. ಅವರೂ ಕೂಡ ಸೂಕ್ತ ಸಂಭಾವನೆ ಇಲ್ಲದೇ, ಜೀವನ ನಿರ್ವಹಣೆಗೆ ಮಾರ್ಗವಿಲ್ಲದೆ ಆ ಕೆಲಸವನ್ನು ಬಿಡುತ್ತಿದ್ದಾರೆ. ಈ ಬಗ್ಗೆ ಸರಕಾರ ಗಮನಹರಿಸಿ, ಸಂಬಂದಿಸಿದ ಇಲಾಖೆಯಿಂದ ಯುವಕರಿಗೆ ಆಸಕ್ತರಿಗೆ ಈ ಕಲೆಯನ್ನು ನುರಿತ ಕಲಾವಿದರಿಂದ ತರಬೇತಿ ನೀಡಿ, ಕಲೆ ಉಳಿಯುವಂತೆ ಮಾಡುವುದು ಸೂಕ್ತ.
ಕಾಮೆಂಟ್ ಪೋಸ್ಟ್ ಮಾಡಿ