ಮಂಗಳವಾರ, ಏಪ್ರಿಲ್ 23, 2013

ಡಾ.ರಾಜ್ ಮನಗೆದ್ದ ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಡೊಳ್ಳು ಕುಣಿತ




ಇ.ಎಚ್. ಬಸವರಾಜ್

ಕೃಪೆ: ವಿಜಯ ಕರ್ನಾಟಕ




























 ಆಡುಮುಟ್ಟದ ಸೊಪ್ಪಿಲ್ಲ, ಡಾ.ರಾಜ್‌ಕುಮಾರ್ ಮಾಡದ ಪಾತ್ರಗಳಿಲ್ಲ , ಕಲಯನ್ನು ದೇವರಂತೆ ಗೌರವಿಸಿದ ಏಕೈಕ ನಟ ಅವರು ಎನ್ನಬಹುದು. ಅದು ನಟನೆ ಇರಬಹುದು, ಗಾಯನವಿರಬಹುದು ಎಲ್ಲದಕ್ಕೂ ಅವರಿಗೆ ಎಲ್ಲಿಲ್ಲದ ಆಸಕ್ತಿ. ಸಂಗೀತದ ವಿಷಯಕ್ಕೆ ಬಂದರೇ ತಮ್ಮನ್ನು ತಾವು ಮರೆಯುತ್ತಿದ್ದರು. ಚಿತ್ರದಲ್ಲಿ ನಟನೆ ಎಷ್ಟು ಮುಖ್ಯವೋ ಹಾಗೇ ಸಂಗೀತಕ್ಕೂ ಅಷ್ಟೇ ಪ್ರಾಮುಖ್ಯತೆ ಕೊಡುತ್ತಿದ್ದರು. ನಮ್ಮ ನೆಲದ ದೇಶಿ ವಾದ್ಯಗಳ ಬಗ್ಗೆ ವ್ಯಾಮೋಹ ಹೊಂದಿದ್ದ ಅವರು, 1974ರಲ್ಲಿ ಬಿಡುಗಡೆಯಾದ 'ಬಂಗಾರದ ಪಂಜರ' ಚಿತ್ರದಲ್ಲಿ ಕುರುಬನಾಗಿ ಅಭಿನಯಿಸಿ ಸೈ ಎನಿಸಿಕೊಂಡಿದ್ದರು. ಆ ಚಿತ್ರದಲ್ಲಿ ಬರುವ ಬೀರ ದೇವರ ಹಾಡಿಗೆ ಡೊಳ್ಳು ಕುಣಿತ ಪೂರಕ ವಾಗಿತ್ತು. ಆ ಸಂದರ್ಭದಲ್ಲಿ ಶಿಕಾರಿಪುರ ತಾಲೂಕಿನಲ್ಲಿ ಡೊಳ್ಳು ಬಾರಿಸುವವರು ಸಾಕಷ್ಟು ಹೆಸರು ಮಾಡಿದ್ದರು.

ಡೊಳ್ಳಿನ ಆ ಹಾಡಿನಲ್ಲಿ ಅಭಿನಯಿಸಲು ಶಿಕಾರಿಪುರ ತಾಲೂಕಿನ ಡೊಳ್ಳು ಬಾರಿಸುವ ತಂಡವನ್ನು ಈ ಹಾಡಿನಲ್ಲಿ ಸಂಪೂರ್ಣವಾಗಿ ಬಳಸಿಕೊಳ್ಳಲಾಗಿತ್ತು. ಸ್ವತಃ ರಾಜ್‌ರವರು ಇಷ್ಟಪಟ್ಟು ಕರೆಸಿ ಅವರಿಂದ ಅಭ್ಯಾಸ ಮಾಡಿದ್ದರು. ಆ ಮಧುರ ನೆನಪನ್ನು ಆ ಚಿತ್ರದಲ್ಲಿ ನಟಿಸಿದ ಮಾರುತಿ ಯುವಕ ಡೊಳ್ಳಿನ ಸಂಘದ ರಾಮಚಂದ್ರಪ್ಪ, ಶೇಖರಪ್ಪ ಹಾಗೂ ಗ್ರಾಮದ ಹಿರಿಯರು ನೆನಪಿಸಿಕೊಳ್ಳುತ್ತಾರೆ.

1974ರ ಒಂದು ದಿನ ಸಂಜೆ ಶಿಕಾರಿಪುರ ತಾಲೂಕಿನ ಕಪ್ಪನಹಳ್ಳಿ ಗ್ರಾಮಕ್ಕೆ ಖ್ಯಾತ ಸಂಗೀತ ನಿರ್ದೇಶಕ ಜಿ.ಕೆ. ವೆಂಕಟೇಶ್ ಹಾಗೂ ರಾಜ್‌ಕುಮಾರ್ ಅವರ ಸಹೋದರ ವರದರಾಜ್ ಬರುತ್ತಾರೆ. ದೆಹಲಿಯಲ್ಲಿ ನಡೆದ ಡೊಳ್ಳಿನ ಕಾರ್ಯಕ್ರಮವನ್ನು ದೂರದರ್ಶನದಲ್ಲಿ ವೀಕ್ಷಿಸಿದ್ದ ವರದಣ್ಣ ಈ ತಂಡವನ್ನು ಸಿನಿಮಾದಲ್ಲಿ ಬಳಸಿಕೊಳ್ಳಲು ಕೇಳಿದಾಗ ಊರಿನವರಿಗೆ ಮಹಾದಾನಂದವಾಯಿತು. ನಂತರ ಪಿಂಚಲನಾಯ್ಡು ಎಂಬ ಓದು ಬರಹ ಗೊತ್ತಿರದ 24 ವಯಸ್ಸಿನ ವ್ಯಕ್ತಿ ಅಲ್ಲಿಯೇ ಪದ ಹಾಡಲು ಪ್ರಾರಂಭಿಸುತ್ತಾನೆ. ಅದನ್ನು ಜಿ.ಕೆ. ವೆಂಕಟೇಶ್‌ರವರು ಸ್ಥಳದಲ್ಲೇ ಧ್ವನಿಮುದ್ರಿಸಿ ಕೊಂಡು ಊರಿನ ಆತಿಥ್ಯ ಸ್ವೀಕರಿಸಿ ಹೊರಡುತ್ತಾರೆ. ಒಂದು ತಿಂಗಳ ನಂತರ ಪಿಂಚಲ ನಾಯ್ಡು ಅವರನ್ನು ಕರೆಸಿ ಮದ್ರಾಸ್‌ನ ಪ್ರಸಾದ್ ಸ್ಟುಡಿಯೋದಲ್ಲಿ ಮತ್ತೊಮ್ಮೆ ಆ ಹಾಡನ್ನು ಧ್ವನಿ ಮುದ್ರಿಸುತ್ತಾರೆ. ಇತ್ತೀಚೆಗಷ್ಟೆ ನಿಧನರಾದ ಖ್ಯಾತ ಗಾಯಕ ಪಿ.ಬಿ.ಶ್ರೀನಿವಾಸ್ ಅವರ ಧ್ವನಿಯಲ್ಲಿ ಆ ಹಾಡನ್ನು ಪುನರ್ ಧ್ವನಿ ಮುದ್ರಿಸ ಲಾಗುತ್ತದೆ. ಎರಡು ತಿಂಗಳ ನಂತರ ಕಪ್ಪನ ಹಳ್ಳಿಯ ಈ ಡೊಳ್ಳಿನ ಸಂಘದವರನ್ನು ಕರೆಸಿ ದೊಡ್ಡಬಳ್ಳಾ ಪುರದ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕರಿಯ ಕಂಬಳಿ ಗದ್ದುಗೆ ಮಾಡಿ ಹಾಡಿಗೆ ಚಿತ್ರೀಕರಿಸಿಕೊಳ್ಳುತ್ತಾರೆ.



    ಡಾ. ರಾಜ್‌ಕುಮಾರ್‌ರೊಂದಿಗೆ ಆರತಿ, ಅಶ್ವತ್, ಸಂಪತ್ ಸೇರಿದಂತೆ ಕಪ್ಪನಹಳ್ಳಿ ಬಸವಂತಪ್ಪ, ತಟ್ಯಪ್ಪ, ಅಗಸರ ನಿಂಗಪ್ಪ, ಚಿನ್ನಪ್ಪ, ಬೂದ್ಯಪ್ಪ, ಗದಿಗೆಪ್ಪ, ಹಳ್ಳಪ್ಪ, ಕೆಂಚಪ್ಪ, ಭರ್ಮಣ್ಣ, ಮಹಾದೇವಪ್ಪ, ರಾಮ ಚಂದ್ರಪ್ಪ ಮತ್ತು ಶೇಖರಪ್ಪ ಸೇರಿದಂತೆ 18 ಜನರ ತಂಡ 15 ದಿವಸಗಳ ಕಾಲ ಚಿತ್ರೀಕರಣದಲ್ಲಿ ಭಾಗವಹಿಸುತ್ತದೆ. ಅಂದು ಈ ತಂಡದ ಜತೆ ರಾಜ್‌ಕುಮಾರ್‌ರ ಸೌಜನ್ಯದ ಒಡನಾಟ ಹಾಗೂ ಡೊಳ್ಳು ಕಲಿಸಿದ ಅನುಭವವನ್ನು ಇಂದಿಗೂ ತಂಡದ ಸದಸ್ಯರು ಸ್ಮರಿಸಿ ಕೊಳ್ಳುತ್ತಾರೆ. ಬಂಗಾರದ ಪಂಜರ ಚಿತ್ರ ಬಿಡುಗಡೆಯಾದ ಸಂದರ್ಭ ಊರೂರಿಗೆ ಈ ಡೊಳ್ಳಿನ ತಂಡವನ್ನು ಕರೆಸಿ ಮೆರವಣಿಗೆ ಮಾಡಿದ್ದು ಇವರ ಮನಸ್ಸಿನಲ್ಲೇ ಹಸಿರಾಗಿ ಉಳಿದಿದೆ.

ಈಗ ಈ ತಂಡದ ಸದಸ್ಯರಿಗೆ 70ರ ಆಸುಪಾಸು, ಟಿ.ವಿ.ಯಲ್ಲಿ ಸಿನಿಮಾ ಬಂದಾಗ ಆ ಸವಿನೆನಪಿಗೆ ಜಾರಿ ಹೋಗುವ ಇವರು ಸಿಹಿ ನೆನಪನ್ನು ಮೆಲುಕು ಹಾಕುತ್ತಾರೆ. ಅಂದಹಾಗೆ ಬಂಗಾರದ ಪಂಜರ ಚಿತ್ರಕ್ಕೆ ಮಾರುತಿ ಡೊಳ್ಳಿನ ಸಂಘಕ್ಕೆ ಚಿತ್ರ ತಂಡದವರು ನೀಡಿದ ಸಂಭಾವನೆ ಎಷ್ಟೆಂದರೆ ಅಂದಿನ ಕಾಲಕ್ಕೆ ಮೂವತ್ತಾರು ಸಾವಿರ. ನಂತರ ಈ ತಂಡ ಹೊರ ರಾಜ್ಯಗಳಲ್ಲೂ ಕೂಡ ತಮ್ಮ ಡೊಳ್ಳಿನ ನಾದವನ್ನು ಉಣಬಡಿಸಿದೆ.

ಕಾಮೆಂಟ್‌ಗಳಿಲ್ಲ: