ಅನು: ಶಿವಸುಂದರ್
ನಿತ್ರಾಣಗೊಳಿಸುವ ಸಕ್ಕರೆಖಾಯಿಲೆ ಬಡಜನರಲ್ಲೂ ವೇಗವಾಗಿ ಹರಡುತ್ತಿದೆ
ಸಿರಿವಂತರನ್ನು ಮಾತ್ರ ಬಾಧಿಸುತ್ತಿದ್ದ ಸಕ್ಕರೆ ಖಾಯಿಲೆ ಈಗ ಭಾರತದ ಬಡಜನತೆಯ ಮೇಲೂ ದಾಳಿ ಇಟ್ಟಿದೆ. ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್-ಐಸಿಎಂಆರ್) ಯ ಇತ್ತೀಚಿನ ಪ್ರಮುಖ ಸಂಶೋಧನೆಯೊಂದು ಈ ಆತಂಕಕಾರಿ ಅಂಶವನ್ನು ಬೆಳಕಿಗೆ ತಂದಿದೆ. ಇತ್ತೀಚಿನ ಕೆಲ ವರ್ಷಗಳವರೆಗೆ ಡಯಾಬಿಟೀಸ್ ಮೆಲಿಶಸ್ (ಸಕ್ಕರೆ ಖಾಯಿಲೆ-ಮಧುಮೇಹ) ಎಂಬುದು ಸಮಾಜದಲ್ಲಿ ಆರ್ಥಿPವಾಗಿ ಮತ್ತು ಸಾಮಾಜಿಕವಾಗಿ ಮೇಲ್ಸ್ಥರದಲ್ಲಿರುವ ಜನರಿಗೆ ಅವರ ಜೀವನ ಶೈಲಿಯಿಂದ ಅಂಟಿಕೊಳ್ಳುವ ಖಾಯಿಲೆಯೆಂದು ಭಾವಿಸಲಾಗುತ್ತಿತ್ತು. ಏಷಿಯಾದ ಉದ್ದಗಲಕ್ಕೂ ಹರಡುತ್ತಿರುವ ಈ ಸಾಂಕ್ರಾಮಿಕವು ಸಾಮಾನ್ಯವಾಗಿ ಹೆಚ್ಚು ಕೊಬ್ಬು ಮತ್ತು ಸಕ್ಕರೆ ಅಂಶವುಳ್ಳ ಆಹಾರ ಸೇವಿಸುವವರನ್ನೂ, ಅತಿತೂಕದ ವ್ಯಕ್ತಿಗಳನ್ನೂ ಮತ್ತು ಸೋಂಬೇರಿಗಳನ್ನು ಗುರಿ ಮಾಡಿಕೊಂಡಿರುತ್ತದೆಂದು ಭಾವಿಸಿಕೊಳ್ಳಲಾಗಿತ್ತು. ಆದರೆ ಇತ್ತೀಚಿನ ವರದಿಗಳು ತಿಳಿಸುವಂತೆ ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿಶೀಲ ದೇಶಗಳೆರಡರಲ್ಲೂ ನಗರದ ಬಡವರು ಈ ರೋಗಕ್ಕೆ ಹೆಚ್ಚೆಚ್ಚು ತುತ್ತಾಗುತ್ತಿದ್ದಾರೆ. ಸಕ್ಕರೆ ಖಾಯಿಲೆಯ ರಾಜಧಾನಿ ಎಂದೇ ಹೆಸರು ಪಡೆದಿರುವ ಭಾರತವೂ ಸಹ ಅದೇ ದಾರಿ ಹಿಡಿಯುತ್ತಿದೆ. ಐಸಿಎಂಆರ್ ಮತ್ತು ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆಯು ಜಂಟಿಯಾಗಿ ನಡೆಸಿದ ಅತಿ ದೊಡ್ಡ ರಾಷ್ಟ್ರೀಯ ಅಧ್ಯಯನದಲ್ಲಿ ಕಂಡುಬಂದಿರುವ ಅಂಶವೆಂದರೆ ಆರ್ಥಿಕವಾಗಿ ಹೆಚ್ಚು ಅಭಿವೃದ್ಧಿ ಹೊಂದಿರುವ ರಾಜ್ಯಗಳ ನಗರದ ಮೇಲ್ಸ್ಥರದ ಜನಗಳಿಗಿಂತ ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಕೆಳಸ್ಥರದಲ್ಲಿರುವ ಜನರಲ್ಲೇ ಈ ಡಯಾಬಿಟೀಸ್ (ಸಕ್ಕರೆ ಖಾಯಿಲೆ) ಹೆಚ್ಚಿದೆ. ಆದರೆ ಎಲ್ಲಾ ರಾಜ್ಯಗಳ ಗ್ರಾಮೀಣ ಪ್ರದೇಶಗಳಲ್ಲಿ ಆರ್ಥಿಕವಾಗಿ ಮೇಲ್ಸ್ಥರದಲ್ಲಿರುವ ಜನರಲ್ಲೇ ಡಯಾಬಿಟೀಸ್ ಹೆಚ್ಚಾಗಿರುವುದು ಪತ್ತೆಯಾಗಿದೆ. ಹೀಗಾಗಿ ಈವರಗೆ ಈ ಕಾಯಿಲೆಗೆ ತುತ್ತಾಗದ ಅಥವಾ ಹೆಚ್ಚಾಗಿ ಬಲಿಯಾಗದ ನಗರದ ಬಡವರೂ ಮತ್ತು ಗ್ರಾಮೀಣ ಶ್ರೀಮಂತರೂ ಸಹ ಈಗ ಡಯಾಬಿಟೀಸ್ಗೆ ತುತ್ತಾಗುತ್ತಿದ್ದಾರೆ ಎಂಬುದನ್ನು ಈ ಅಧ್ಯಯನ ಸೂಚಿಸುತ್ತದೆ.
ಇದು ಕೇವಲ ಕಳವಳಕಾರಿ ಮಾತ್ರವಲ್ಲ, ಬದಲಿಗೆ ಒಂದು ಆತಂಕಕಾರಿಯಾದ ಬೆಳವಣಿಗೆಯಾಗಿದೆ. ಡಯಬಿಟೀಸ್ ಎಂಬುದು ಅತಿ ಹೆಚ್ಚು ವೈದ್ಯಕೀಯ ನಿಗಾ ಕೇಳುವ ಖಾಯಿಲೆಯಾಗಿದ್ದು ಸರಿಯಾಗಿ ಕಾಳಜಿ ತೆಗೆದುಕೊಳ್ಳದಿದ್ದರೆ ಹೃದಯ, ಕಿಡ್ನಿ ಮತ್ತು ಕಣ್ಣುಗಳಿಗೆ ಅಪಾಯವಾಗಬಹುದಲ್ಲದೆ ಗ್ಯಾಂಗ್ರೀನ್ ಆಗುವ ಸಾಧ್ಯತೆಗಳೂ ಹೆಚ್ಚು. ದೇಶದಲ್ಲಿ ಸಾರ್ವಜನಿಕ ಆರೋಗ್ಯ ಸೇವೆಯ ಪರಿಸ್ಥಿತಿಯನ್ನೂ ಮತ್ತು ದೇಶದ ಬಡಜನತೆ ಆರೋಗ್ಯ ಸೇವೆಯನ್ನು ದುಡ್ಡು ಕೊಟ್ಟೆ ಪಡೆಯಬೇಕಾಗಿರುವ ಪರಿಸ್ಥಿತಿಯನ್ನೂ ಗಮನದಲಿಟ್ಟುಕೊಂಡಾಗ ಈ ಅಧ್ಯಯನವು ಹೊರತಂದಿರುವ ಅಂಶಗಳನ್ನು ಒಂದು ವಿಪತ್ತಿನ ಸೂಚನೆಯೆಂದೇ ಅರ್ಥಮಾಡಿಕೊಳ್ಳಬೇಕಿದೆ. ಮತ್ತು ಕೂಡಲೇ ಕಾರ್ಯಪ್ರವೃತ್ತರಾಗಬೇಕಿದೆ. ಐಸಿಎಂಆರ್ ವರದಿಯ ಪ್ರಕಾರ ಎಲ್ಲಾ ೧೫ ರಾಜ್ಯಗಳಲ್ಲಿ ಡಯಾಬಿಟೀಸ್ ಖಾಯಿಲೆಯು ಸರಾಸರಿ ಶೇ.೭.೩ರಷ್ಟು ಕಂಡುಬಂದಿದ್ದರೆ ರಾಜ್ಯ ರಾಜ್ಯಗಳ ನಡುವೆ ಸಾಕಷ್ಟು ವ್ಯತ್ಯಾಸಗಳು ಕಂಡುಬಂದಿವೆ. ಉದಾಹರಣೆಗೆ ಇದು ಬಿಹಾರದಲ್ಲಿ ಶೇ. ೪.೩ರಷ್ಟಿದ್ದರೆ ಪಂಜಾಬಿನಲ್ಲಿ ಶೇ.೧೧ರಷ್ಟಿದೆ. ಈ ಅಧ್ಯಯನದ ಸ್ಯಾಂಪಲ್ ಗಾತ್ರ ಸುಮಾರು ೬೦,೦೦೦ ದಷ್ಟಿತ್ತು. ಈ ವರದಿಯು ಎಚ್ಚರಿಸುವಂತೆ ನಮ್ಮ ದೇಶದ ಶೇ.೭೦ರಷ್ಟು ಜನತೆ ಗ್ರಾಮೀಣ ಪ್ರದೇಶದಲ್ಲಿ ವಾಸಿಸುವುದರಿಂದ ಡಯಾಬಿಟೀಸ್ನ ಸರಾಸರಿ ಪ್ರಮಾಣದಲ್ಲಿ ಸಣ್ಣ ಏರಿಕೆಯಾದರೂ ಆರೋಗ್ಯ ಸೇವೆಯ ಸೌಲಭ್ಯವಿಲ್ಲದ ಬಹುದೊಡ್ಡ ಸಂಖ್ಯೆಯ ಜನರಿಗೆ ನಿರಂತರ ವೈದ್ಯಕೀಯ ಆರೈಕೆಯನ್ನು ಒದಗಿಸುವ ಜವಾಬ್ದಾರಿಯನ್ನು ಹೊರಿಸುತ್ತದೆ.
ಚಂಡಿಗಢ, ಮಹಾರಾಷ್ಟ್ರ ಮತ್ತು ತಮಿಳುನಾಡುವನ್ನು ಒಳಗೊಂಡಂತೆ ಏಳು ಸಂಪದ್ಭರಿತ ರಾಜ್ಯಗಳ ನಗರಗಳಲ್ಲಿ ಶ್ರೀಮಂತರಿಗಿಂತ ಸಮಾಜದ ಕೆಳಸ್ಥರದ ಜನರಲ್ಲಿ ಡಯಾಬಿಟೀಸ್ ಪ್ರಮಾಣ ಹೆಚ್ಚಿರುವುದು ಕಂಡುಬಂದಿದೆ. ಈ ರಾಜ್ಯಗಳ ನಗರ ಪ್ರದೇಶಗಳಲ್ಲಿ ಆರ್ಥಿಕವಾಗಿ ಸಂಪನ್ನರಾಗಿರುವ ಜನರಲ್ಲಿ ಡಯಾಬಿಟೀಸ್ ಬಗ್ಗೆ ಇರಬಹುದಾದ ಹೆಚ್ಚಿನ ಅರಿವು ಮತ್ತು ಅದನ್ನು ನಿಯಂತ್ರಿಸಲು ಬೇಕಾಗಿರುವಷ್ಟು ಹಣವನ್ನು ವ್ಯಯಿಸಬಹುದಾದ ಸಾಮರ್ಥ್ಯವೂ ಸಹ ಈ ವರದಿಯ ಇಂಗಿತಾರ್ಥವಾಗಿರಬಹುದು.
ಸಮಾಜದ ಕೆಳಸ್ಥರಗಳಲ್ಲಿರುವ ಜನತೆಗೂ ಎಟಕಬಹುದಾದ ಬೆಲೆಗಳಲ್ಲಿ ಹಾಳು ತಿಂಡಿಗಳು (ಜಂಕ್ ಫುಡ್) ದೊರಕುತ್ತಿರುವುದು ಸಹ ಅವರೂ ಹೆಚ್ಚಿನ ಕೊಬ್ಬಿನಾಂಶ ಇರುವ ಆಹಾರ ಸೇವಿಸುತ್ತಿರುವುದಕ್ಕೆ ಕಾರಣವಾಗಿರಬಹುದೆಂದು ಕೆಲವು ಪೌಷ್ಟಿಕಾಂಶ ತಜ್ನರು ಸೂಚಿಸುತ್ತಾರೆ. ಆದರೆ ನಾವು ಪರಿಗಣಿಸಬೇಕಾದ ಇತರ ಅಂಶಗಳು ಇವೆ. ನಗರಗಳಲ್ಲಿ ವಾಸಿಸುತ್ತಿರುವ ಬಡಜನತೆಗೆ ಉತ್ತಮ ಪೌಷ್ಟಿಕಾಂಶ ಸಮತೋಲನವಿರುವ ಆಹಾರವು ದೊರೆಯುತ್ತಿಲ್ಲ. ಆದ್ದರಿಂದ ಹಾಳು ತಿಂಡಿಗಳ ಸೇವನೆಯೆಂಬುದು ರುಚಿ ಅಥವಾ ಆಯ್ಕೆಯ ಪ್ರಶ್ನೆಯಾಗಿರದೆ ಅವರ ಕೊಳ್ಳುವ ಸಾಮರ್ಥ್ಯಕ್ಕೆ ಎಟುಕುವ ಪ್ರಶ್ನೆಯೂ ಆಗಿರುತ್ತದೆ. ಅದೇರೀತಿ, ನಗರವಾಸಿಗಳ ಹೆಚ್ಚಿನ ಮಟ್ಟದ ಆದಾಯ, ದೈಹಿಕ ಶ್ರಮವನ್ನು ಹೆಚ್ಚಾಗಿ ಕೇಳದ ಕೆಲಸಗಳು, ಮತ್ತು ಸುಲಭವಾಗಿ ಲಭ್ಯವಾಗುವ ಯಾಂತ್ರೀಕೃತ ಗೃಹೋಪಯೋಗಿ ಉಪಕರಣಗಳು ಮತ್ತು ಸಾರಿಗೆ ವ್ಯವಸ್ಥೆಗಳು ಸಹ ನಗರಪ್ರದೇಶದಲ್ಲಿ ಈ ಖಾಯಿಲೆಯ ಹೆಚ್ಚಳಕ್ಕೆ ಕಾರಣವಾಗಿರಬಹುದೆಂಬ ಕಡೆಗೂ ಈ ವರದಿಯು ಗಮನ ಸೆಳೆಯುತ್ತದೆ. ದೂರದೂರದಲ್ಲಿರುವ ತಮ್ಮ ಕೆಲಸದ ಸ್ಥಳಗಳಿಗೆ ಸಾರ್ವಜನಿಕ ಸಾರಿಗೆಂiನ್ನು ಬಳಸಲೇ ಬೇಕಾಗಿಬರುವುದು ನಗರದ ಬಹುಪಾಲು ಜನರಿಗೆ ಆಯ್ಕೆಯ ಪ್ರಶ್ನೆಯೇನಲ್ಲ. ಇದು ಸಹ ನಗರವಾಸಿಗಳಲ್ಲಿ ಒತ್ತಡವನ್ನು (ಸ್ಟ್ರೆಸ್) ಅನ್ನು ಹೆಚ್ಚಿಸುತ್ತದೆ. ಒತ್ತಡವೂ ಸಹ ಡಯಾಬಿಟೀಸ್ ಖಾಯಿಲೆ ಬರಲು ಒಂದು ಕಾರಣವಾಗಿದೆ.
ಇತರ ಜನಸಮುದಾಯಗಳಿಗೆ ಹೋಲಿಸಿದಲ್ಲಿ ದಕ್ಷಿಣ ಏಷಿಯಾ ಪ್ರದೇಶದಲ್ಲಿ ಟೈಪ್-೨ ಡಯಾಬಿಟೀಸ್ ಇನ್ನೂ ಚಿಕ್ಕ ವಯಸ್ಸಿನಲ್ಲೇ ಕಾಣಿಸಿಕೊಳ್ಳುತ್ತಿರುವುದು ಆರೋಗ್ಯ ಸೇವೆಗಳ ಮೇಲೆ ಹೆಚ್ಚಿನ ಒತ್ತಡವನ್ನು ಉಂಟುಮಾಡುತ್ತಿದೆ. ಈಗಾಗಲೇ ಸರ್ವವಿದಿತವಾದ ಮತ್ತೊಂದು ಸಂಗತಿಯನ್ನು ಈ ವರದಿಯು ಪುನರುಚ್ಚರಿಸುತ್ತದೆ. ಇತರ ಜನಾಂಗಗಳಿಗಿಂತ ಏಷಿಯಾದ ಭಾರತೀಯರು ಡಯಾಬಿಟೀಸ್ ಪೂರ್ವ ಅವಧಿಯನ್ನು ಬೇಗನೇ ಹಾದುಹೋಗಿಬಿಡುತ್ತಾರೆ. (ಪ್ರಿ-ಡಯಾಬಿಟಿಕ್ ಸ್ಟೇಜ್-ಡಯಾಬಿಟೀಸ್ ಪೂರ್ವ ಅವಧಿ-ಎಂದರೆ ರಕ್ತದಲ್ಲಿ ಗ್ಲುಕೋಸ್ ಪ್ರಮಾಣವು ಸಾಮಾನ್ಯಕ್ಕಿಂತ ಜಾಸ್ತಿ ಆಗಿರುವ ಆದರೆ ಇನ್ನೂ ಡಯಾಬಿಟೀಸ್ ಎಂದು ಘೊಷಿಸುವ ಮಟ್ಟಕ್ಕೆ ಹೆಚ್ಚದಿರುವ ಸ್ಥಿತಿ. ಈ ಹಂತದಲ್ಲೇ ಎಚ್ಚರಿಕೆಯನ್ನು ತೆಗೆದುಕೊಂಡಲ್ಲಿ ಡಯಬಿಟೀಸ್ ನಿಯಂತ್ರಣ ಇನ್ನೂ ಸುಲಭ- ಅನುವಾದಕನ ಟಿಪ್ಪಣಿ). ಇದರ ಜೊತೆಗೆ ಡಯಾಬಿಟೀಸ್ ತೀವ್ರಗತಿಯಲ್ಲಿ ಹೆಚ್ಚುತ್ತಿರುವ ಇತರ ದೇಶಗಳಲ್ಲಿ ಕಾಣಬರುತ್ತಿರುವಂತೆ ಭಾರತದಲ್ಲು ದೈಹಿಕ ಚಟುವಟಿಕೆಯ ಮೂಲಕ ಮನರಂಜನೆಯನ್ನು ಪಡೆಯುವ ಚಟುವಟಿಕೆಗಳು ಕಡಿಮೆಯಾಗುತ್ತಿವೆ. ಅದರಲ್ಲೂ ಹೆಂಗಸರಲ್ಲಿ-ಎಲ್ಲಾ ವರ್ಗದ ಹೆಂಗಸರಲ್ಲೂ-ಇದು ಇನ್ನೂ ಕಡಿಮೆ.
ಈ ಹಿಂದೆ ನಡೆಸಲಾದ ಸಣ್ಣಪುಟ್ಟ ಅಧ್ಯಯನಗಳು ಯಾವುದನ್ನು ಒಂದು ಅಂದಾಜಿನ ರೂಪದಲ್ಲಿ ಊಹಿಸಿದ್ದವೋ ಅವೇ ಅಂಶಗಳನ್ನು ಈ ವರದಿಯು ಅಂಕಿಅಂಶಗಳ ಮೂಲಕ ಸಾಬೀತುಪಡಿಸುತ್ತದೆ. ಉದಾಹರಣೆಗೆ ರಾಷ್ಟ್ರೀಯ ಕ್ಯಾನ್ಸರ್, ಡಯಾಬಿಟೀಸ್, ಹೃದಯ ಸಂಬಂಧೀ ಖಾಯಿಲೆಗಳ ಮತ್ತು ಲಕ್ವಾ ನಿಯಂತ್ರಣ ಕಾರ್ಯಕ್ರಮವೊಂದು ೨೦೧೦ರಿಂದಲೂ ಜಾರಿಯಲ್ಲಿದೆ. ಆದರೆ ಈ ಐಸಿಎಂಆರ್ ವರದಿಯು ಹಲವು ಅಲ್ಪಾವಧಿಯ ಮತ್ತು ದೀರ್ಘಾವಧಿಯ ಕಾರ್ಯಕ್ರಮಗಳನ್ನು ತ್ವರಿತಗತಿಯಲ್ಲಿ ಕೈಗೆತ್ತಿಕೊಳ್ಳಲು ಆಗ್ರಹಿಸುತ್ತದೆ. ಸರ್ಕಾರ, ಸರ್ಕಾರೇತರ ಸಂಘಟನೆಗಳು, ವೈದ್ಯಕೀಯ ಸಮುದಾಯ ಮತ್ತು ಡಯಾಬಿಟಿಸ್ ಬಾಧಿತರು ಒಟ್ಟು ಸೇರಿ ಈ ಯೋಜನೆಗಳಲ್ಲಿ ಸಮುದಾಯದ ಭಾಗವಹಿಸುವಿಕೆಯನ್ನು ಖಾತರಿಗೊಳಿಸಬೇಕಾಗಿದೆ. ಪೌಷ್ಟಿಕ ಆಹಾರ ಮತ್ತು ದೈಹಿಕ ಚಟುವಟಿಕೆಯಾಧಾರಿತ ಮನರಂಜನಾ ಚಟುವಟಿಕೆಗಳಿಗೆ ಸೌಲಭ್ಯಗಳನ್ನು ಒದಗಿಸುವುದನ್ನು ಮೊದಲುಗೊಂಡಂತೆ ಡಯಾಬಿಟೀಸ್ ಖಾಯಿಲೆಯ ಬಗ್ಗೆ ಅರಿವನ್ನು ಉಂಟು ಮಾಡಿಸಲು ವಿಸ್ತೃತ ಆಂದೊಲನವನ್ನೇ ಕೈಗೊಳ್ಳಬೇಕಿದೆ. ಇದು ದಿಡೀರ್ ಆಹಾರಗಳ ಬಗೆಗಿನ ಪ್ರಚಾರದಾಚೆಗೆ ಒಂದು ದೀರ್ಘಕಾಲದ ಯೋಜನೆಯನ್ನು ಕೇಳುತ್ತದೆ.
ಅಭಿವೃದ್ಧಿಶೀಲ ದೇಶಗಳಲ್ಲಿ ಸೋಂಕಿನಿಂದ ಬರುವ ಖಾಯಿಲೆಗಳ ನಿಯಂತ್ರಣದ ಮೇಲೆ ಹೆಚ್ಚಿನ ಗಮನವನ್ನು ಹರಿಸಲಾಗುತ್ತದೆ. ಆದರೆ ಸಾಂಕ್ರಾಮಿಕವಾಗಿ ಹರಡದ (ತಣ್ಣನೆಯ ಕೊಲೆಗಾರನೆಂದೇ ಸೂಕ್ತವಾಗಿ ಕರೆಯಲ್ಪಡುವ) ಡಯಾಬಿಟೀಸ್ ಂಥ ಖಾಯಿಲೆಗಳು ಗಾಬರಿ ಹುಟ್ಟಿಸುವ ಪ್ರಮಾಣದಲ್ಲಿ ಹೆಚ್ಚುತ್ತಿವೆ. ೧೯೨೧ರಲ್ಲಿ ಇನ್ಸುಲಿನ್ನ ಆವಿಷ್ಕಾರವಾಗುವ ಮುನ್ನ ಡಯಾಬಿಟೀಸ್ ಬಂತೆಂದರೆ ಮರಣದಂಡನೆ ಎಂದೇ ಅರ್ಥವಾಗಿತ್ತು. ಇತ್ತೀಚಿನ ಕೆಲ ದಶಕಗಳವರೆಗೆ ಶೇ.೫೦ರಷ್ಟು ಬದುಕುಳಿಯುವ ಅವಕಾಶಗಳಿವೆ ಎನ್ನುವಷ್ಟು ಮಟ್ಟಿಗೆ ಪರಿಸ್ಥಿತಿ ಸುಧಾರಿಸಿದೆ.
ಈ ೨೧ನೇ ಶತಮಾನದಲ್ಲಿ ಜನಸಂಖ್ಯೆಯ ಬಹುಸಂಖ್ಯಾತ ಜನರಿಗೆ ಅರೆಜೀವದ ಶಿಕ್ಷೆಯನ್ನು ವಿಧಿಸಬಾರದೆಂದರೆ ನಾವೆಲ್ಲರೂ ಒಟ್ಟಾಗಿ ಮತ್ತೂ ಕೂಡಲೇ ಸಕ್ರಿಯರಾಗಬೇಕಿದೆ.
ಕೃಪೆ: Economic and Political Weekly
June 17, 2017. Vol.52. No.24
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ